ಬ್ಲಾಕ್ ಟೈಗರ್

ಲೇಖಕರು : ಶ್ರೀ ನಿರಂಜನ್ ಹವ್ಯಾಸಿ ಬರಹಗಾರರು

BT2ದೇಶದ ರಕ್ಷಣೆಗೆ ಸಂಬಂಧ ಪಟ್ಟ ವಿಷಯದಲ್ಲಿ ಗೂಢಾಚಾರಿಗಳ ಪಾತ್ರ ಬಹಳ ಪ್ರಮುಖವಾಗಿರುತ್ತದೆ.   ಅವರು ದೇಶಕ್ಕಾಗಿ ತಮ್ಮ ಜೀವನದ ಹಂಗನ್ನೇ ತೊರೆದು ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ ಶತೃ ರಾಷ್ಟ್ರಗಳಲ್ಲಿ  ಕೆಲಸ ನಿರ್ವಹಿಸುತ್ತಾ ಕಾಲ ಕಾಲಕ್ಕೆ ಶತೃ ದೇಶದ ಗೌಪ್ಯ ಮಾಹಿತಿಗಳನ್ನು ತಮ್ಮ ಮಾತೃದೇಶಕ್ಕೆ ಕಳುಹಿಸಿಕೊಡುತ್ತಾ ಶತೃಗಳ ಆಕ್ರಮಣದಿಂದ ದೇಶವನ್ನು ರಕ್ಷಿಸುವ ಮಹತ್ಕಾರ್ಯದಲ್ಲಿ ಭಾಗಿಗಳಾಗಿರುತ್ತಾರೆ. ಅಂತಹ ಒಬ್ಬ ಧೀರ ಯೋಧ ಗೂಢಾಚಾರಿ ಆಗಿದ್ದ  ದಿ. ಶ್ರೀ ರವೀಂದ್ರ ಕೌಶಿಕ್ ಅವರ ಕುರಿತಾಗಿ ನನಗೆ ತಿಳಿದಷ್ಟು ಮಟ್ಟಿಗೆ ವಿವರಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದೇನೆ.

Ravindra2

ಶ್ರೀ ರವೀಂದ್ರ ಕೌಶಿಕ್ ರವರು 11 ಏಪ್ರಿಲ್ 1952 ರಲ್ಲಿ  ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಜನಿಸಿದರು. ತಂದೆ ವಾಯುಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ತಾಯಿ ಅಮಲಾದೇವಿ ಅಪ್ಪಟ ಗೃಹಿಣಿಯಾಗಿದ್ದರು. ಸುಂದರ  ಸ್ಫುರದ್ರೂಪಿ ಮತ್ತು ಧೃಢಕಾಯ ಶರೀರದ  ತರುಣನಾಗಿದ್ದ ರವೀಂದ್ರ ಕೌಶಿಕರು, ಚಿಕ್ಕಂದಿನಿಂದಲೂ ನಾಟಕ, ನೃತ್ಯ ಮತ್ತು ರಂಗ ಭೂಮಿಯ ಚಟುವಟಿಕೆಗಳಲ್ಲಿ  ಆಸಕ್ತರಾಗಿ, ಒಬ್ಬ ಉತ್ತಮ ನಾಟಕಗಾರನೂ ಮತ್ತು   ರಂಗಕರ್ಮಿಯೂ ಆಗಿದ್ದರು. 1973 ರಲ್ಲಿ ಲಕ್ನೋದಲ್ಲಿ ನಡೆದ ರಾಷ್ಟೀಯ ಮಟ್ಟದ ನಾಟಕರಂಗದಲ್ಲಿ ಇವರ ಪಾತ್ರವನ್ನೂ ಮತ್ತು ಪಾತ್ರದಲ್ಲಿನ  ಅವರ ತಲ್ಲೀನತೆಯನ್ನೂ ಕಂಡು ಸಂತೋಷಗೊಂಡ “ರಾ” ಬೇಹುಗಾರಿಕಾ ಸಂಸ್ಧೆಯ ಕೆಲವು ಹಿರಿಯ ಅಧಿಕಾರಿಗಳು ರವೀಂದ್ರ ಕೌಶಿಕ್ ರವರಿಗೆ ತಮ್ಮ ಮೆಚ್ಚುಗೆಯನ್ನು ಮತ್ತು ಅಭಿನಂದನೆಗಳನ್ನೂ ತಿಳಿಸಿ, ಭಾರತೀಯ ಬೇಹುಗಾರಿಕಾ ಸಂಸ್ಥೆ “ರಾ” ನಲ್ಲಿ ಕಾರ್ಯ ನಿರ್ವಹಿಸಲು ಕೆಲಸದ ಆಹ್ವಾನವನ್ನೂ ನೀಡಿದ್ದರು. ರಾ ( RAW, ರೀಸರ್ಚ್ ಅನಾಲಿಸಿಸ್ ಅಂಡ್ ವಿಂಗ್) ಭಾರತದ ಬೇಹುಗಾರಿಕಾ ಸಂಸ್ಥೆಯಾಗಿದ್ದು ಇತರೆ ದೇಶಗಳಿಂದ ಭಾರತಕ್ಕೆ ಬಂದೆರಗ ಬಹುದಾದ ಅಪಾಯದ ಮುನ್ಸೂಚನೆಯನ್ನು ಭಾರತದ ರಕ್ಷಣಾ ಸಚಿವಾಲಯಕ್ಕೆ ಒದಗಿಸುತ್ತದೆ. ಹುಟ್ಟಿನಿಂದಲೂ ದೇಶಕ್ಕಾಗಿ ಏನನ್ನಾದರು ಮಾಡುವ ಹಂಬಲ   ಇದ್ದ ಕಾರಣ  23 ವರ್ಷದ ತರುಣ ಕೌಶಿಕರು ಇಂತಹ ಸುವರ್ಣಾವಕಾಶವನ್ನು ಮರು ಮಾತಿಲ್ಲದೆ ಸ್ವೀಕರಿಸಿದ್ದರು.

“ರಾ”  ಸಂಸ್ಥೆಗೆ ಸೇರಿದ ಅವರಿಗೆ ಮೊದಲ  2 ವರ್ಷಗಳ ಕಾಲ ದೆಹಲಿಯಲ್ಲಿ ಕಠಿಣ ತರಬೇತಿ ನೀಡಲಾಯಿತು. ಆ ತರಬೇತಿಯಲ್ಲಿ ಅವರಿಗೆ ಉರ್ದುವನ್ನು ಕಲಿಸಲಾಯಿತು, ಮುಸ್ಲಿಮರ ಧಾರ್ಮಿಕ ವಿಧಿವಿಧಾನಗಳನ್ನು ಹೇಳಿಕೊಡಲಾಯಿತು, ಮುಸ್ಲಿಮರಂತೆ ಸುನ್ನತಿ ಮಾಡಲಾಯಿತು. ತದನಂತರ ಪಾಕಿಸ್ತಾನದ ಭೌಗೋಳಿಕ, ಆಂತರಿಕ, ರೀತಿ ರಿವಾಜು ನಡೆ-ನುಡಿಗಳನ್ನು ಕಲಿಸಿಕೊಡಲಾಯಿತು.  ಪಾಕಿಸ್ತಾನದ ನಾಗರೀಕನಂತೆ ತೋರುವ ಎಲ್ಲಾ ದಾಖಲೆ ಪತ್ರಗಳನ್ನೂ ಅವರಿಗೆ ಒದಗಿಸಲಾಯಿತು. ರವೀಂದ್ರ ಕೌಶಿಕರಿಗೆ ಚಿಕ್ಕಂದಿನಿಂದಲೂ ಪಂಜಾಬಿ ಭಾಷೆಯ ಮೇಲೆ ಒಳ್ಳೆಯ ಹಿಡಿತವಿದ್ದು ಪಂಜಾಬಿ ಭಾಷೆಯನ್ನು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದ ಕಾರಣ, ಪಾಕಿಸ್ತಾನದ ಕೆಲವು ಪ್ರಾಂತ್ಯಗಳಲ್ಲೂ ಪಂಜಾಬಿ ಭಾಷೆಯು  ಚಲಾವಣೆಯಲ್ಲಿದ್ದರಿಂದ ಅವರಿಗೆ ಅದು ಅನುಕೂಲವಾಯಿತು.

1975 ರಲ್ಲಿ ಅವರು ನಬಿ ಅಹಮದ್ ಶೌಕಿರ್ ಎಂಬ ಹೊಸ ಹೆಸರಿನೊಂದಿಗೆ ಪಾಕಿಸ್ತಾನ ಪ್ರವೇಶಿಸಿದರು. ಪಾಕಿಸ್ತಾನದ ಕರಾಚಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪೂರೈಸಿದರು. ನಂತರ ಪಾಕಿಸ್ತಾನದ ಸೇನೆಯಲ್ಲಿ ಕ್ಲರ್ಕ್ ಹುದ್ದೆಯನ್ನು ಗಳಿಸಿ, ಸೇನೆಯ ಅಕೌಂಟ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದರು. ಪಾಕಿಸ್ತಾನದ ಮಿಲಿಟರಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದವರ ಮಗಳಾದ ಅಮಾನತ್ ಎಂಬ ಕನ್ಯೆಯೊಂದಿಗೆ ವಿವಾಹವೂ ಕೂಡ ನಡೆಯಿತು. ಮದುವೆಯಾದ  ನಂತರ ಒಮ್ಮೆ ರಹಸ್ಯವಾಗಿ ಭಾರತದಲ್ಲಿನ ತಮ್ಮ ಮನೆಗೂ ರಹಸ್ಯವಾಗಿ ಬಂದು ಹೋಗಿದ್ದರು. ಹಾಗೆ ಭಾರತಕ್ಕೆ ಬಂದಿದ್ದಾಗ, ತಮ್ಮ ಮನೆಯವರೊಂದಿಗೆ ತಾನು ದುಬೈನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದರೇ ಹೊರತು, ಅವರೊಬ್ಬ  ಗೂಢಾಚಾರನೆಂದು ಅವರ ಮನೆಯವರಿಗಾಗಲೀ ಅಥವಾ ಅವರ ಧರ್ಮ ಪತ್ನಿಗಾಗಲೀ ತಿಳಿದೇ ಇರಲಿಲ್ಲ.  ರವೀಂದ್ರ ಮತ್ತು ಅಮಾನತ್ ಅವರ ಸುಂದರ ದಾಂಪತ್ಯದ ಕುರುಹಾಗಿ  ಒಂದು ಮುದ್ದಾದ ಗಂಡು ಮಗುವೂ ಕೂಡ ಜನಿಸಿತ್ತು.

Bt3ರವೀಂದ್ರರು ತಮ್ಮ ಕರ್ತವ್ಯ ನಿಷ್ಠೆಯಿಂದಾಗಿ ಬಹಳ ಬೇಗನೆ  ಪಾಕಿಸ್ತಾನದ ಸೇನೆಯಲ್ಲಿ ಬಡ್ತಿ ಪಡೆಯುತ್ತಾ  ಮೇಜರ್  ಹುದ್ದೆಯವರೆಗೂ ಏರಿದ್ದರು. 1979 ರಿಂದ 1983 ರವರೆಗೆ ಪಾಕಿಸ್ತಾನಿ ಸೇನೆಯ ಅತ್ಯಂತ ರಹಸ್ಯಮಯ ಮತ್ತು ನಮ್ಮ ಸೇನೆಗೆ ಉಪಯುಕ್ತವಾದ ಮಾಹಿತಿಗಳನ್ನು ಒದಗಿಸಿದ್ದರು. ಒಂದು ಲೆಕ್ಕಾಚಾರದ ಪ್ರಕಾರ ತಮ್ಮ ರಹಸ್ಯ ಮಾಹಿತಿಗಳಿಂದ ಅವರು ಸರಿ ಸುಮಾರು 20,000 ಭಾರತೀಯ ಯೋಧರ ಜೀವ ರಕ್ಷಿಸಿದ್ದರು ಎನ್ನುವ ಮಾತಿದೆ. ಅವರ ಈ ಅಭೂತಪೂರ್ವ ಯಶಸ್ಸಿಗಾಗಿ ರಾ ಸಂಸ್ಥೆ  ಅವರಿಗೆ  ಬ್ಲಾಕ್ ಟೈಗರ್  ಎಂಬ ಬಿರುದನ್ನೂ  ನೀಡಿ ಗೌರವಿಸಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಲಿದೆ ಎಂದು ಭಾವಿಸಿದರೆ ಆ ವಿಧಿಯ ಆಟವೇ ಬೇರೆ ಇರುತ್ತದೆ ಎಂಬಂತೆ 1983 ರಲ್ಲಿ  ರಾ ಸಂಸ್ಥೆ  ತಮ್ಮ ಮತ್ತೊಬ್ಬ ಬೇಹುಗಾರ ಇನ್ಯಾತ್ ಮಸಿಹ್ ನನ್ನು  ರವೀಂದ್ರ ಕೌಶಿಕ್ ಅವರನ್ನು ಭೇಟಿ ಮಾಡಲು ಪಾಕಿಸ್ತಾನಕ್ಕೆ ಕಳುಹಿಸಿತ್ತು.  ದುರಾದೃಷ್ಟವಶಾತ್ ಆತ ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆ “ಐ ಎಸ್ ಐ”ಗೆ ಸೆರೆಸಿಕ್ಕಿ, ದೀರ್ಘ ವಿಚಾರಣೆಯ ನಂತರ ಆತ ರವೀಂದ್ರ ಕೌಶಿಕರ ಅಸಲಿ ವಿಷಯವನ್ನು ಬಾಯಿಬಿಟ್ಟನು. ಆ ಸ್ಪೋಟಕ ವಿಷಯ, ಇಡೀ ಪಾಕಿಸ್ತಾನದ ಸೇನೆಯನ್ನೇ ದಂಗು ಬಡಿಸಿತ್ತು.  ಆ ಕೂಡಲೇ ರವೀಂದ್ರರು ಭಾರತಕ್ಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಭಾರತ ಸರ್ಕಾರದ ನೆರವನ್ನು ಕೋರಿದರಾದರೂ, ದುರದೃಷ್ಟವಾಶಾತ್ ಅಂದಿನ ಭಾರತ ಸರ್ಕಾರ ಅವರಿಗೆ ಯಾವುದೇ ರೀತಿಯ ಸಹಾಯ ಹಸ್ತ ಚಾಚಲಿಲ್ಲ ಎನ್ನುವುದು ದುರ್ವಿಧಿ. ಆ ಸಮಯದಲ್ಲಿ ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರ ರಾಜತಾಂತ್ರಿಕ ನಿಲುವಿನಿಂದಾಗಿ,   ಭಾರತ ದೇಶ, ಪಾಕೀಸ್ಥಾನದಲ್ಲಿ ಯಾವುದೇ ಗೂಢಾಚಾರನನ್ನೂ ನೇಮಿಸಿಲ್ಲ ಮತ್ತು ರವೀಂದ್ರ ಕೌಶಿಕ್ ಅವರಿಗೂ  ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಘೋಷಿಸಿ ಬಿಟ್ಟರು ಮತ್ತು ರಾ ಸಂಸ್ಥೆಯಲ್ಲಿದ್ದ ಅವರ ಎಲ್ಲಾ ದಾಖಲಾತಿಗಳನ್ನು  ನಾಶಪಡಿಸುವಂತೆ ಗುಪ್ತವಾಗಿ ಆದೇಶಿಸಿದ್ದರು.

ಅವರನ್ನು ಪಾಕೀಸ್ಥಾನದಿಂದ ಬಿಡಿಸಿಕೊಂಡು ಹೋಗಲು ಭಾರತ ಸರ್ಕಾರದಿಂದ ಯಾವುದೇ ನೆರವು ದೊರೆಯದೇ ಅಂತಿಮವಾಗಿ ರವೀಂದ್ರರು ಪಾಕಿಸ್ತಾನಿ ಸೇನೆಯಿಂದ ಸೆರೆಹಿಡಿಯಲ್ಪಟ್ಟು ಎರಡು ವರ್ಷಗಳ ಕಾಲ ಹಿಂಸಾದಾಯಕ ವಿಚಾರಣೆಯ ನಂತರ ಅವರನ್ನು ಸಿಯಾಲ್ಕೋಟ್ ಜೈಲಿಗೆ ಸ್ಥಳಾಂತರಿಸಲಾಯಿತು. ಕೋಟ್ ಲಕ್ಪತ್, ಮುಲ್ತಾನ್ ಸೆಂಟ್ರಲ್ ಜೈಲ್ ಹೀಗೆ ಹಲವಾರು ಜೈಲುಗಳಲ್ಲಿ ಕಾಲ ಕಳೆಯಲ್ಪಟ್ಟರು. ಈ ಸಂದರ್ಭದಲ್ಲಿ ಅವರಿಗೆ  ನಾನಾ ರೀತಿಯ ಹಿಂಸೆಯೊಂದಿಗೆ, ಹಲವಾರು ಆಮಿಷಗಳನ್ನು ಒಡ್ಡಲಾಯಿತಾದರೂ ಆವರಿಂದ ಭಾರತದ ಕುರಿತಾದ  ಯಾವುದೇ ರಹಸ್ಯ ಮಾಹಿತಿಗಳನ್ನು  ಪಡೆಯಲು ಸಾಧ್ಯವಾಗದ ಕಾರಣ 1985ರಲ್ಲಿ   ರವೀಂದ್ರ ಕೌಶಿಕ್ ಅವರಿಗೆ ಪಾಕೀಸ್ಥಾನದ ನ್ಯಾಯಾಲಯ ಮರಣದಂಡನೆಯನ್ನು ವಿಧಿಸಲಾಯಿತಾದರೂ, ತದನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು.

ಅವರು ಜೈಲಿನಲ್ಲಿದ್ದಾಗ  ಅವರ  ಪತ್ನಿ ಅಮಾನತ್ ಮತ್ತು ಮಗು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದರಾದರೂ, ಜೈಲಿನ ಸಿಬ್ಬಂದ್ದಿ ಅವರ  ಭೇಟಿಗೆ ಅನುಮತಿ ನಿರಾಕರಿಸಿದರು. ಆದಾದ ನಂತರದ ಬೆಳವಣಿಗೆಯಲ್ಲಿ ಅವರ ಪತ್ನಿ ಮತ್ತು ಮಗುವು ಮುಂದೆಂದೂ ಸಾರ್ವಜನಿಕವಾಗಿ ಎಲ್ಲೂ ಕಾಣಲೇ ಇಲ್ಲ  ಎನ್ನುವುದು ವಿಪರ್ಯಾಸ.

ದೇಶ ಭಕ್ತ ರವೀಂದ್ರರು ಪಾಕಿಸ್ತಾನದ ಜೈಲಿನಲ್ಲಿದ್ದುಕೊಂಡೇ ಭಾರತದಲ್ಲಿನ ತನ್ನ ಕುಟುಂಬಕ್ಕೆ ಅತ್ಯಂತ ರಹಸ್ಯವಾಗಿ ಹಲವಾರು ಪತ್ರಗಳನ್ನು ಬರೆದು  ಅದರಲ್ಲಿ ತಮ್ಮ ಮೇಲಾಗುತ್ತಿರುವ  ದೈಹಿಕ  ಮತ್ತು ಮಾನಸಿಕ  ಹಿಂಸೆಗಳನ್ನು ಉಲ್ಲೇಖಿಸಿದ್ದರು. ಸತತ ಹಿಂಸೆ, ಹಲ್ಲೆ ಮತ್ತು 16-17 ವರ್ಷಗಳ ಸುದಿರ್ಘ ಕಾಲದ  ಜೈಲು ಸೆರೆವಾಸದಿಂದ ಅಸ್ತಮಾ , ಟಿಬಿ ಮುಂತಾದ ರೋಗಗಳಿಗೆ ತುತ್ತಾದರು. ಅವರು ಬರೆದ ಪತ್ರ ಒಂದರಲ್ಲಿ ಭಾರತದಂತಹ ಒಂದು ದೊಡ್ಡ ದೇಶಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಂಡವನಿಗೆ ಸಿಗುವುದು ಇಂಥಾ ಸ್ಥಿತಿಯೇ? ಎಂದು ಉಲ್ಲೇಖಿಸಿದರೆ. ಮತ್ತೊಂದರಲ್ಲಿ ನಾನು ಒಂದು ವೇಳೆ ಅಮೇರಿಕಾ ದೇಶದ ಬೇಹುಗಾರನಾಗಿದ್ದರೆ ನನ್ನನ್ನು ಕೇವಲ ಮೂರೇ ದಿನಗಳಲ್ಲಿ ಬಿಡಿಸಿಕೊಂಡು ಹೋಗುತ್ತಿದ್ದರು ಎಂದೂ ದುಖಃದಿಂದ ಹೇಳಿಕೊಂಡಿದ್ದಾರೆ.

ಜಾತಸ್ಯ ಮರಣಂ ಧೃವಂ. ಅಂದರೆ, ಹುಟ್ಟಿದವರು ಒಂದಲ್ಲಾ ಒಮ್ಮೆ ಸಾಯಲೇ ಬೇಕು ಎಂಬ ಜಗದ ನಿಯಮದಂತೆ ಕೊನೆಗೆ 26 ಜುಲೈ 1999 ರಂದು ಕ್ಷಯ ಮತ್ತು ಹೃದ್ರೋಗ ಸಮಸೈಯಿಂದ ಶ್ರೀ ರವೀಂದ್ರ ಕೌಶಿಕರು ದೇಹ ತ್ಯಾಗ ಮಾಡಿದರು. ಅವರ ಶವವನ್ನು  ಅಂದಿನ ಭಾರತ ಸರ್ಕಾರವೂ ಕೂಡಾ ಸ್ವೀಕರಿಸಲು  ನಿರಾಕರಿಸಿದ ಕಾರಣ ವಿಧಿ ಇಲ್ಲದೇ ಅವರ ಶವವನ್ನು ಪಾಕೀಸ್ಥಾನದ ಜೈಲಿನ ಹಿಂಭಾಗದಲ್ಲೇ ಬೇ-ವಾರೀಸ್ ಹೆಣ ಎಂದು  ಹೂಳಲಾಯಿತು.

ಸ್ನೇಹಿತರೇ ಇಂಥಾ ಅದೆಷ್ಟೋ ಮಂದಿ ಯೋಧರ ಕಾಣದ ಕೈಗಳ  ತ್ಯಾಗ ಮತ್ತು ಬಲಿದಾನದಿಂದಲೇ ನಾವಿಂದು   ಸುರಕ್ಷಿತವಾಗಿಯೂ, ಸಂತೋಷದಿಂದಲೂ, ನೆಮ್ಮದಿಯಿಂದಲೂ ನಮ್ಮ ಕುಟುಂಬದ ಜೊತೆ ಜೀವನ ನಡೆಸುತ್ತಿದ್ದೇವೆ. ದೇಶದ ಹಿತಕ್ಕಾಗಿ ಮತ್ತು ಪ್ರಜೆಗಳ ಸುಖಃಕ್ಕಾಗಿ ತಮ್ಮನ್ನೇ ಸಮರ್ಪಿಸಿಕೊಂಡ ಇಂತಹ ನಿಜವಾದ ವೀರ ದೇಶಭಕ್ತರಿಗೆ  ಸಲ್ಲಲೇ ಬೇಕಾದ ಅಂತಿಮ ನಮನಗಳನ್ನೂ  ಅರ್ಪಿಸಲಾರದಷ್ಟು ಹೀನವಾಯಿತೇ ನಮ್ಮ ದೇಶ ಮತ್ತು ನಮ್ಮನ್ನಾಳುವ ಸರ್ಕಾರ? ಇದೇನಾ ನಮ್ಮದೇಶದ ಸಭ್ಯತೆ ಇದೇನಾ ನಮ್ಮ ಸನಾತನ ಧರ್ಮದ  ಸಂಸ್ಕೃತಿ?  ಛೇ !!  ಇಂತಹ ಹೀನ ಸ್ಥಿತಿ ನಮ್ಮ ಶತೃವಿಗೂ ಬಾರದಿರಲಿ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s