ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

ನಮ್ಮ ಸ್ನೇಹಿತರ ವಾಟ್ಯಾಪ್ ಗುಂಪಿನಲ್ಲಿ ಪ್ರತಿನಿತ್ಯ ವಿವಿಧ ದೇವಾಲಯಗಳ ಮತ್ತು ದೇವರುಗಳ ಚಿತ್ರಗಳನ್ನು ಹಂಚಿಕೊಳ್ಳುವ ಸಂಪ್ರದಾಯ ಬಹಳ ದಿನಗಳಿಂದ ಜಾರಿಯಲ್ಲಿದೆ. ಅದರಂತೆ ನಾನು ಹೋದ ಬಂದ ಕಡೆಯೆಲ್ಲಾ ನೋಡುವ ದೇವರ ಚಿತ್ರಗಳನ್ನು ಜತನದಿಂದ ಸಂಗ್ರಹಿಸಿ ಒಂದೊಂದೇ ಫೋಟೋಗಳನ್ನು ಅದರ ಜೊತೆಗೆ ಸಾಧ್ಯವಾದ ಮಟ್ಟಿಗೆ ಆ ದೇವರುಗಳ ಮಹಾತ್ಮೆ ಅಥವಾ ಆ ಕ್ಷೇತ್ರದ ವಿಶೇಷತೆ ಅಥವಾ ಹೆಗ್ಗಳಿಕೆಯನ್ನು ತಿಳಿಸುವ ಪ್ರಯತ್ನ ಮಾಡುತ್ತಿರುತ್ತೇನೆ. ಅದೇ ರೀತಿಯಾಗಿ ನನಗೆ ನನ್ನ ಸ್ನೇಹಿತ ಜಗದೀಶ ಪ್ರತೀ ದಿನವೂ ಉಡುಪಿಯ ಕೃಷ್ಣಮಠದ ಫೋಟೋಗಳನ್ನು ಕಳುಹಿಸುತ್ತಿದ್ದ. ಎಲ್ಲದರಲ್ಲೂ ಅದೇ ರಾಶಿ ರಾಶಿ ತುಳಸಿಯ ಅಲಂಕಾರ ಮತ್ತು ಸ್ವಾಮಿಗಳಿಂದ ಮಂಗಳಾರತಿ. ಅರೇ ಇದೇನಿದು ದಿನವೂ ಇದೇ ಫೋಟೋಗಳನ್ನೇ ಕಳುಹಿಸುತ್ತಿದ್ದಾನಲ್ಲಾ ಎಂಬ ಕುತೂಹಲ ಆದರೆ ಅದನ್ನು ಕೇಳಿದರೆ ಅವನೆಲ್ಲಿ ಬೇಜಾರು ಮಾಡಿಕೊಳ್ಳುತ್ತಾನೆಯೋ ಎಂದು ಸುಮ್ಮನಾಗಿದ್ದೆ. ಆದರೆ ನೆನ್ನೆ ನನ್ನ ಮತ್ತೊಬ್ಬ ಪ್ರಾಣ ಸ್ನೇಹಿತ ಹರಿ ಕಳುಹಿಸಿದ ಈ ಲೇಖನ ನನ್ನ ಕುತೂಹಲವನ್ನು ತಣಿಸಿತು. ಹಾಗಾಗಿ ಅದನ್ನು ನಿಮ್ಮೆಲ್ಲರ ಬಳಿ ಹಂಚಿಕೊಳ್ಳುತ್ತಿದ್ದೇನೆ.

ಪ್ರತಿದಿನ ನಡೆಯುವ ಉಡುಪಿಯ ಕೃಷ್ಣನ ಲಕ್ಷ ತುಳಸಿ ಅರ್ಚನೆಯನ್ನು ನೋಡುವುದೇ ಚಂದ. ಇಷ್ಟೊಂದು ತುಳಸಿ ಎಲ್ಲಿಂದ ಬರುತ್ತದೆ? ಯಾರು ತಂದು ಕೊಡುತ್ತಾರೆ? ಪೂಜೆ ಎಲ್ಲ ಮುಗಿದ ಮೇಲೆ ಈ ತುಳಸಿಯನ್ನು ಏನು ಮಾಡುತ್ತಾರೆ? ಹೀಗೊಂದಷ್ಟು ರಾಶಿ, ರಾಶಿ ಪ್ರಶ್ನೆಗಳು ಜೊತೆಯಾಗದೇ ಇರದು…

ಉಡುಪಿಯ ಕೃಷ್ಣ ಮಠಕ್ಕೆ ಹೋದರೆ ಬೆಳ್ಳಂಬೆಳಗ್ಗೆಯೇ ವಿಶೇಷ ಲಕ್ಷ ತುಳಸಿ ಅರ್ಚನೆ ನೋಡಬಹುದು. ಪ್ರತಿದಿನ ತಪ್ಪದೇ ಅರ್ಚನೆ ನಡೆಯುತ್ತದೆ. ವೈಭವೋಪೇತ ಪೂಜೆ ಪುನಸ್ಕಾರದ ನಂತರ- ಇಷ್ಟೊಂದು ತುಳಸಿ ಎಲ್ಲಿಂದ ಬರುತ್ತದೆ? ಯಾರು ತಂದು ಕೊಡುತ್ತಾರೆ? ಪೂಜೆ ಎಲ್ಲ ಮುಗಿದ ಮೇಲೆ ಈ ತುಳಸಿಯನ್ನು ಏನು ಮಾಡುತ್ತಾರೆ? ಹೀಗೊಂದಷ್ಟು ರಾಶಿ ಕೌತುಕಗಳು ಎದ್ದೇಳದೇ ಇರದು.

ಹೌದು, ಭಕ್ತಿಯ ಪರಕಾಷ್ಠೆಯಲ್ಲಿ ಮುಳುಗಿ, ವಿಷ್ಣು ಸಹಸ್ರನಾಮ ಪಠಿಸುತ್ತಲೇ ಪ್ರತಿ ತುಳಸಿ ಗಿಡದಿಂದ ಇಳಿಯುವುದು. ಅದಕ್ಕಾಗಿಯೇ ಭಕ್ತರ ದಂಡು ಇದೆ. ಇದರ ಹಿಂದೆ ದೊಡ್ಡ ಕಥೆಯೇ ಇದೆ.

ಹಂತ ಒಂದು
ಉಡುಪಿ ನಗರದ ನಾಲ್ಕು ಕಡೆ ಅಮೆರಿಕದ ಒಂಭತ್ತು ಪೇಟೆಂಟ್‌ಗಳನ್ನು, ಒಂದು ಜಾಗತಿಕ ಪೇಟೆಂಟ್‌ ಪಡೆದು ಮಲ್ಟಿ ನ್ಯಾಷನಲ್‌ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ ಪೆಜತ್ತಾಯ ವಿವಿಧ ಹೆಸರುಗಳ ತುಳಸಿವನಗಳನ್ನು ನಿರ್ವಹಿಸುತ್ತಿದ್ದಾರೆ. ಮುಂಬೈನ ಜ್ಯೋತಿಷಿ ಗುರುರಾಜ ಉಪಾಧ್ಯಾಯರು ಉಡುಪಿಯಲ್ಲಿ ನೆಲೆ ನಿಂತು ಪಡುಬೆಳ್ಳೆಯಲ್ಲಿ ಬೆಳೆಸಿರುವ ತುಳಸಿ ವನ, ಶ್ರೀ ಅದಮಾರು ಕಿರಿಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶೀರೂರಿನ ಪೂರ್ವಾಶ್ರಮದ ಮನೆಯಲ್ಲಿ ಬೆಳೆಸುತ್ತಿರುವ ತುಳಸಿ, ಬಲಾಯಿಪಾದೆಯಲ್ಲಿ ಪುಂಡರೀಕಾಕ್ಷ ಭಟ್‌ ಅವರ ತುಳಸಿವನ, ಕೋಟೇಶ್ವರದ ಹಂಗಳೂರು ಬಡಾಕೆರೆ ರಾಮಚಂದ್ರ ವರ್ಣರು ವೇಣುಗೋಪಾಲಕೃಷ್ಣ ಸೇವಾ ಸಂಘದ ಆಶ್ರಯದಲ್ಲಿ ನಡೆಸುತ್ತಿರುವ ತುಳಸಿ ವನ, ಹೀಗೆ ವಿವಿಧೆಡೆಗಳಿಂದ ನಿತ್ಯ ತುಳಸಿ ಕುಡಿಗಳು ಮಠಕ್ಕೆ ಹರಿದುಬರುತ್ತವೆ. ರಾಮಚಂದ್ರ ವರ್ಣರಿಂದ ನಿತ್ಯ ಒಂದು ಲಕ್ಷ ಕುಡಿ ಬರುತ್ತಿದೆ. ಉಪ್ಪಳ ಕೊಂಡೆವೂರು ಸ್ವಾಮೀಜಿಯವರು ಬಸ್‌ ಮೂಲಕ ನಿತ್ಯ ತುಳಸಿ ಕುಡಿಗಳನ್ನು ಕಳುಹಿಸಿದರೆ, ಕಟೀಲಿನ ಹರಿನಾರಾಯಣ ಆಸ್ರಣ್ಣ, ವಾಸುದೇವ ಆಸ್ರಣ್ಣರು ವಾರಕ್ಕೊಮ್ಮೆ ಕಳುಹಿಸುತ್ತಾರೆ. ಕಾಸರಗೋಡು ತಾಲೂಕು ವರ್ಕಾಡಿಯ ಶ್ರೀವಿಷ್ಣುಮೂರ್ತಿ ದೇವಸ್ಥಾನದ ರಾಘವೇಂದ್ರ ಭಟ್‌, ಪ್ರತಿ ದ್ವಾದಶಿಗೆ ತುಳಸಿ ದಳಗಳನ್ನು ಸಮರ್ಪಿಸುತ್ತಾರೆ. ಪೆರಂಪಳ್ಳಿಯ ಸಾಯಿರಾಧಾ ಪ್ಯಾರಡೈಸ್‌ ವಠಾರ ಮನೋಹರ ಶೆಟ್ಟಿಯವರ ಜಾಗದಲ್ಲಿ ತುಳಸಿ ಬೆಳೆಸಲಾಗುತ್ತಿದೆ. ಇದಲ್ಲದೆ ಅಲ್ಪಸ್ವಲ್ಪ ತುಳಸಿ ಕುಡಿಗಳನ್ನು ತಂದುಕೊಡುವವರು ಪ್ರತ್ಯೇಕ. ಇವರಲ್ಲಿ ಬಹುತೇಕರು ವಿಷ್ಣುಸಹಸ್ರನಾಮವನ್ನು ಪಠಿಸುತ್ತ ಕುಡಿಗಳನ್ನು ಕೀಳುವಂತಹ ಶಿಸ್ತನ್ನು ಬೆಳೆಸಿಕೊಂಡಿದ್ದಾರೆ.

ಹಂತ ಎರಡು
ಹೀಗೆ ಬಂದ ತುಳಸಿ ಕುಡಿಗಳನ್ನು ನಿತ್ಯವೂ ಶ್ರೀಕೃಷ್ಣಮಠದಲ್ಲಿ ಸರಿಪಡಿಸಲು ಮೂರ್‍ನಾಲ್ಕು ಸಿಬ್ಬಂದಿಗಳಿದ್ದಾರೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು ಮಹಾಪೂಜೆಗೆ ಕುಳಿತರೆ 60 ಜನ ವೈದಿಕರು ಎರಡು ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾರೆ. ಈ ಸಾವಿರ ನಾಮದ ಸಂಖ್ಯೆ ಲಕ್ಷ ದಾಟುತ್ತದೆ. ಈ ಅವಧಿಯಲ್ಲಿ ತುಳಸಿದಳಗಳನ್ನು ಸ್ವಾಮೀಜಿಯವರು ಶ್ರೀಕೃಷ್ಣನಿಗೆ ಅರ್ಚನೆ ಮಾಡುತ್ತಾರೆ. ಈ ತೆರನಾಗಿ ಅರ್ಚನೆಗೊಂಡ ತುಳಸಿಯಲ್ಲಿ ಒಂದಿಷ್ಟು ಅಂಶ ಪ್ರಸಾದ ರೂಪದಲ್ಲಿ ಭಕ್ತರಿಗೆ ವಿತರಣೆಯಾಗುತ್ತದೆ. “ಆರಂಭದಲ್ಲಿ ಸಾರ್ವಜನಿಕರ ಸಹಭಾಗಿತ್ವ ಕಡಿಮೆ ಇತ್ತು. ಈಗ ನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ಸುಮಾರು 150 ಭಕ್ತರು ಮನೆಗಳಿಂದಲೋ, ಬೇರೆ ಮನೆಗಳಿಂದಲೋ ತುಳಸಿ ಕುಡಿಗಳನ್ನು ತಂದುಕೊಡುತ್ತಿದ್ದಾರೆ. ಇದೊಂದು ರೀತಿಯಲ್ಲಿ ಜನಜಾಗೃತಿಯಾಗಿದೆ. ಜನರ ಸ್ಪಂದನೆಯಿಂದ ಇದು ಯಶಸ್ವಿಯಾಗಿ ನಡೆಯುತ್ತಿದೆ ಎನ್ನುತ್ತಾರೆ ಉಡುಪಿಯ ಶ್ರೀಕೃಷ್ಣಮಠ ಪರ್ಯಾಯ ಶ್ರೀಪಲಿಮಾರು ಮಠದ ಆಡಳಿತಾಧಿಕಾರಿ ಪ್ರಹ್ಲಾದ ರಾವ್‌.

ಹಂತ ಮೂರು
ಧರ್ಮಸ್ಥಳದ ಡಾ| ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದಂತೆ ಅರ್ಚನೆಗೊಂಡ ತುಳಸಿಕುಡಿಗಳು ಉದ್ಯಾವರ ಕುತ್ಪಾಡಿಯಲ್ಲಿರುವ ಧರ್ಮಸ್ಥಳ ಆಯುರ್ವೇದ ಕಾಲೇಜಿನ ಫಾರ್ಮಸಿ ಕಾಲೇಜಿಗೆ ಸೇರುತ್ತಿದೆ. ಇಲ್ಲಿನ ಔಷಧಿ ತಯಾರಿಸಲು ಇದೇ ತುಳಸಿ ಕುಡಿಗಳನ್ನು ಬಳಸುವುದು. ಈ ಫಾರ್ಮಸಿ ಕಾಲೇಜಿನಲ್ಲಿ ಏನೇನೆಲ್ಲ ಇದೆ ಗೊತ್ತಾ?

ಫಾರ್ಮಸಿ ವಿಭಾಗದಲ್ಲಿ ಇತರ ಕಚ್ಚಾ ಸಾಮಗ್ರಿಗಳ ಸಂಸ್ಕರಣೆಯೂ ಸೇರಿದಂತೆ ಇತ್ತೀಚಿಗೆ 1.5 ಕೋಟಿ.ರೂ. ವೆಚ್ಚದಲ್ಲಿ ಅತ್ಯಾಧುನಿಕ ಯಂತ್ರೋಕರಣಗಳನ್ನು ಸ್ಥಾಪಿಸಲಾಗಿದೆ. ಕಶಾಯವನ್ನು 35 ಅಡಿಯಿಂದ ಕೆಳಗೆ ಸ್ಪ್ರೆ ಮಾಡಿ ಬರುವಾಗ ಒಣಗಿ ಪೌಡರ್‌ ಆಗುವ ಸ್ಪ್ರೆ ಡ್ರೈಯರ್‌ ಕೂಡ ಇಲ್ಲಿದೆ. ಅಲ್ಲದೆ ಗಿಡಮೂಲಿಕೆಗಳ ಸಣ್ತೀವನ್ನು ಪಡೆಯುವ ಹರ್ಬ್ ಎಕ್ಸಾಕ್ಟರ್‌, ವ್ಯಾಕ್ಯೂಮ್‌ ಕಾನ್‌ಸೆಂಟ್ರೇಟರ್‌, ತೈಲ ಸಂಸ್ಕರಣ ಪಾತ್ರೆ, ಸ್ಪ್ರೆ ವಿದ್‌ ಸ್ಟೀಮ್‌ ಬಾಯ್ಲರ್‌ ಇತ್ಯಾದಿ ಯಂತ್ರಗಳನ್ನು ಅಳವಡಿಸಲಾಗಿದೆ. “ಸುಮಾರು 20 ಕೆ.ಜಿ. ತುಳಸಿ ಕುಡಿಗಳನ್ನು ಹಾಕಿದರೆ, ಅದು ಒಣಗಿದಾಗ ಸಿಗುವುದು 2-3 ಕೆ.ಜಿ. ಮಾತ್ರ. ಇದರಿಂದ ಬೇರೆ ಬೇರೆ ಸಂಸ್ಕರಣ ಪ್ರಕ್ರಿಯೆಗಳನ್ನು ನಡೆಸಿ ಔಷಧಿಗಳನ್ನು ತಯಾರಿಸಲಾಗುತ್ತಿದೆ’ ಎನ್ನುತ್ತಾರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಫಾರ್ಮಸಿ ಪ್ರಧಾನ ವ್ಯವಸ್ಥಾಪಕ ಡಾ|ಮುರಳೀಧರ ಬಲ್ಲಾಳ್‌. ಹೀಗೆ, ತೋಟದಿಂದ ಬಂದ ತುಳಸಿ ದೇವರ ಪೂಜೆಯಲ್ಲಿ ಭಾಗಿಯಾಗಿ, ನಂತರ ಆಯುರ್ವೇದ ಔಷಧವಾಗುತ್ತದೆ.

ಸರ್ವರೋಗಗಳಿಗೂ ತುಳಸಿಯೇ ಔಷಧ
ತೋಟ, ಗದ್ದೆಯ ಅಂಚಿನಲ್ಲಿ ಸಹಜವಾಗಿ ಕದಿರು ಬಿದ್ದು ಹುಟ್ಟಿ ಬೆಳೆಯುವ ತುಳಸಿಗೂ, ಪೋಷಿಸಿ ಬೆಳೆಸುವ ತುಳಸಿಗೂ ಗುಣಧರ್ಮದಲ್ಲಿ ವ್ಯತ್ಯಾಸವಿರುತ್ತದೆ. ಗಿಡಮೂಲಿಕೆಗಳು ಸಹಜವಾಗಿ ಬೆಳೆದಾಗ ಗುಣದಲ್ಲಿ ಬಲಿಷ್ಠವಾಗಿರುತ್ತವೆ. ಜೀವನಶೈಲಿ ಬದಲಾವಣೆಯಿಂದ ಬರುವ ದೀರ್ಘ‌ಕಾಲೀನ ಕಾಯಿಲೆ (ಮಧುಮೇಹ ಇತ್ಯಾದಿ), ಮೆಟಬೊಲಿಕ್‌ ಸಿಂಡ್ರೋಮ್‌, ಮಾನಸಿಕ ಒತ್ತಡ ಸಂಬಂಧಿತ ಕಾಯಿಲೆಗಳಿಗೆ ತುಳಸಿಯಿಂದ ಮಾಡಿದ ಔಷಧಿಗಳನ್ನು ಬಳಸುತ್ತಾರೆ. ಈ ಮೂರು ಬಗೆಯ ಗುಂಪುಗಳಲ್ಲಿ ಶೀತದಿಂದ ಹಿಡಿದು ಕ್ಯಾನ್ಸರ್‌ವರೆಗೆ ಎಲ್ಲ ವಿಧದ ಕಾಯಿಲೆಯೂ ಬರುತ್ತದೆ. ತುಳಸಿಯನ್ನು ಪೂರ್ತಿಯಾಗಿಯೂ, ಮಿಶ್ರಣವಾಗಿಯೂ ಬಳಸುತ್ತಾರೆ. ಮುಖ್ಯವಾಗಿ ಮಾತ್ರೆ, ಕ್ಯಾಪುಲ್‌, ಕಾಫ್ ಸಿರಪ್‌, ಮೂಗಿಗೆ ಹಾಕುವ ಅಣು ತೈಲದ ತಯಾರಿಕೆಯಲ್ಲಿ ಬಳಸುತ್ತಾರೆ.

ಪರಮಾತ್ಮ ಏನಿದು ನಿನ್ನ ಲೀಲೆ? ನಿನ್ನ ಸೇವೆಗೆ ಸಮರ್ಪಿತವಾದ ಸರ್ವರೋಗ ನಿವಾರಕ ತುಳಸೀ ದಳಗಳನ್ನು ಈ ರೀತಿಯಾಗಿ ಸದುಪಯೋಗ ಪಡಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡು ಕಸದಿಂದ ರಸವನ್ನು ತಯಾರಿಸುತ್ತಿರುವ ಆ ಎಲ್ಲ ಮಹನೀಯರಿಗೂ ನಮ್ಮ ಭಕ್ತಿಪೂರ್ವಕ ನಮನಗಳನ್ನು ತಿಳಿಸುವುದರ ಮೂಲಕ ನಮ್ಮ ಧನ್ಯತಾಭಾವವನ್ನು ಅರ್ಪಿಸೋಣ.

ಈ ತುಳಸೀ ಅರ್ಚನೆಯನ್ನು ಈ ವೀಡಿಯೋ ಮುಖಾಂತರ ಕಣ್ತುಂಬಿ ಕೊಳ್ಳಬಹುದಾಗಿದೆ.

ಏನಂತೀರೀ?

ಈ ಲೇಖನ ಬರೆದ ಅನಾಮಿಕ ಲೇಖಕರಿಗೂ ಅದನ್ನು ಕಳುಹಿಸಿದ ನನ್ನ ಸ್ನೇಹಿತ ಹರಿ ಮತ್ತು ನನಗೆ ಫೋಟೋಗಳನ್ನು ಕಳುಹಿಸಿದ ಗೆಳೆಯ ಜಗದೀಶನಿಗೆ ಲಕ್ಷ ಲಕ್ಷ ನಮನಗಳು.

One thought on “ಉಡುಪಿಯ ಶ್ರೀ ಕೃಷ್ಣನ ಲಕ್ಷ ತುಳಸಿ ಅರ್ಚನೆ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s