ಭಾರತೀಯ ಯೋಗ ಮತ್ತು ಜೀವನ ಪದ್ದತಿ

ವಿದ್ಯಾರಣ್ಯಪುರ ಮಂಥನದ ಒಂಬತ್ತನೇ ಕಾರ್ಯಕ್ರಮ ನಿಗಧಿತವಾಗಿದ್ದಂತೆ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಕುರಿತಾದ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ಹೆಚ್. ಪಿ. ಕುಂಟೋಜಿ (ನಿವೃತ್ತ ಕನ್ನಡ ಪ್ರಾಧ್ಯಾಪಕರು ಮತ್ತು ಪ್ರಸ್ತುತ ಯೋಗ ಶಿಕ್ಷಕರು) ಅವರ ಅಮೃತ ಹಸ್ತದಿಂದ ಜೊತೆಗೆ ಕಾರ್ಯಕ್ರಮಕ್ಕೆ ಬಂದಿದ್ದ ಕೆಲ ಮಾತೆಯವರೊಂದಿಗೆ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಯುತ ಕುಂಟೋಜಿಯವರು ಇಂದಿನ ವಿಷಯವಾಗಿದ್ದ ಭಾರತೀಯ ಯೋಗ ಮತ್ತು ಜೀವನ ಪದ್ದತಿ ಎರಡು ವೈರುಧ್ಯ ಎಂದೇ ಆರಂಭಿಸಿದರು. ಸದ್ಯದ ಪರಿಸ್ಥಿತಿಯಲ್ಲಿ ಬಹುತೇಕ ಭಾರತೀಯರು, ಭಾರತೀಯ ಜೀವನ ಶೈಲಿಯನ್ನು ಸಂಪೂರ್ಣವಾಗಿ ಮರೆತು ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ನಿಜಕ್ಕೂ ಖೇದಕರ. ಕಾಮ, ಕ್ರೋದ, ಲೋಭ,ಮೋಹ ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ಮೀರಿ ಬರಲು ಸಾಧ್ಯವಾಗದೇ ಜಂಜಾಟದಲ್ಲಿ ಮುಳುಗಿದ್ದೇವೆ. ಭಗವದ್ಗೀತೆಯ ಆರನೇ ಅಧ್ಯಾಯದ ಒಂದು ಶ್ಲೋಕದಲ್ಲಿ ಯೋಗದ ಕುರಿತಾಗಿ ಹೇಳಿರುವುದನ್ನು ಉಲ್ಲೇಖಿಸಿತ್ತಾ, ನಮಗೆ ಎಷ್ಟು ಬೇಕೋ ಅಷ್ಟೇ ಆಹಾರ ಸೇವಿಸ ಬೇಕು. ನಮಗೆ ಎಷ್ಟು ಬೇಕೋ ಅಷ್ಟೇ ದುಡಿಯಬೇಕು ಮತ್ತು ಅಷ್ಟನ್ನೇ ಅನುಭವಿಸಬೇಕು. ಹಾಗಾದಾಗಲೇ ಆವನು ಯೋಗಿ ಅನಿಸಿಕೊಳ್ಳುವುದು. ಶಂಕರಾಚಾರ್ಯರ ಭಜಗೋವಿಂದಂ ಆಭ್ಯಸಿದರೂ ಕೂಡಾ ಇದೇ ಅನುಭವವಾಗುತ್ತದೆ. ಯೋಗ ಎನ್ನುವುದು ನಮ್ಮ ಪ್ರಕೃತಿಯಲ್ಲಿ ನಮ್ಮ ಸುತ್ತಮುತ್ತಲಿರುವ, ಪ್ರಾಣಿ, ಪಶು ಪಕ್ಷೀ, ಕ್ರಿಮಿ ಕೀಟಗಳ ಹಾವ ಭಾವ ಮತ್ತು ಭಂಗಿಗಳ ಪ್ರತಿರೂಪವಾಗಿದೆ.

ಆದರೆ ನಾವಿಂದು life is enjoyment ಎಂದು ಭಾವಿಸಿ ನಮ್ಮ ದೇಹದ ಬಗ್ಗೆ ಯೋಚನೆಯೇ ಮಾಡದೇ ಇರುವುದರಿಂದ ನಮ್ಮ ದೇಹದಲ್ಲಿ ಕ್ರಿಮಿ ಕೀಟಗಳಿಂದ ತುಂಬಿಹೋಗಿದೆ. ನಮ್ಮ ದೇಹದಲ್ಲಿ ಉಸಿರು ಇರುವವರೆಗೂ ನಾವು ಮನುಷ್ಯರು. ಒಮ್ಮೆ ಉಸಿರು ನಿಂತು ಹೋದಲ್ಲಿ ನಮ್ಮನ್ನು ಶವ ಎನ್ನುತ್ತಾರೆ ಹಾಗಾಗಿ ಉಸಿರಾಡುವ ಸ್ಥಿತಿಯಲ್ಲಿರುವಾಗಲೇ ಆ ದೇಹ, ದೇಶದ ಅಭಿವೃಧ್ಧಿಗೆ ಉಪಯೋಗಿಸಿದ್ದರೆ ಏನೂ ಪ್ರಯೋಜನವಾಗದು.

ಶರೀರದ ರಚನೆಯ ಬಗ್ಗೆ ಉಪನಿಷತ್ತಿನಲ್ಲಿ ಚೆನ್ನಾಗಿ ಹೇಳಿದ್ದಾರೆ. ನಾವು ತಾಯಿಯ ಗರ್ಭದಲ್ಲಿರುವಾಗಲೇ ಸಕಲ ಯೋಗಾಸನಗಳನ್ನು ಕಲಿತಿರುತ್ತೇವೆ. ಅಮ್ಮನ ಕರುಳುಬಳ್ಳಿಯಲ್ಲಿ ಸುತ್ತಿಕೊಂಡಿರುವಾಗಲೇ ಅಷ್ಟಾಂಗ ಯೋಗಗಳನ್ನು ಮಾಡಿರುತ್ತೇವೆ. ನಮ್ಮ ದೇಹದಲ್ಲಿ ಒಟ್ಟು 206 ಮೂಳೆಗಳಿರುತ್ತವೆ. ಕಪಾದಲ್ಲಿ 8, ಮುಖದಲ್ಲಿ 14, ಎದೆ ಗೂಡಿನಲ್ಲಿ 24, ತೋಳು 64, ತೊಡೆ 64 ಇತರೆ ಕಡೆಯಲ್ಲಿ 26 ಈ ರೀತಿಯಾಗಿ ಅಸ್ತಿ ಪಂಜರಗಳಿಂದ ಸುಂದರವಾಗಿ ರೂಪುಗೊಂಡಿದೆ. ನಮ್ಮ ದೇಹ ವಾತ, ಪಿತ್ತ, ಕಫದಿಂದ ಆವೃತ್ತವಾಗಿದೆ. ಅದನ್ನು ಸ್ಥಿಮಿತವಾಗಿಟ್ಟು ಕೊಳ್ಳಲು ಯೋಗ ಬಹಳ ಸಹಕಾರಿಯಾಗಿದೆ. ಯೋಗ ಗರಡಿಮನೆಯಂತೆ ಕೇವಲ ದೇಹದಾಡ್ಯ ಬೆಳೆಸದೇ, ಮನಸ್ಸು ಮತ್ತು ದೇಹ ಎರಡನ್ನೂ ದಂಡಿಸುತ್ತದೆ. ಹಾಗಾಗಿ ಇತರೇ ವ್ಯಾಯಾಮದಿಂದ ಮೂವತ್ತು ನಲವತ್ತು ವರ್ಷಗಳು ನೆಮ್ಮದಿಯಾಗಿದ್ದರೆ, ಯೋಗ ಸಾಯವರೆಗೂ ನೆಮ್ಮದಿಯಾಗಿಡುತ್ತದೆ. ಹಾಗಾಗಿ ಮೊದಲು ನಾವು ನಮ್ಮನ್ನು ಮತ್ತು ನಮ್ಮ ದೇಹವನ್ನು ಪ್ರೀತಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ನಮ್ಮ ದೇಹದಲ್ಲಿ 80ರಷ್ಟು ನೀರಿದ್ದರೆ 10ರಷ್ಟು ಗಾಳಿ ಮತ್ತು 10ರಷ್ಟು ಆಹಾರ ಇರಬೇಕು. ಆದರೆ ನಮ್ಮ ಇಂದಿನ ಜೀವನ ಶೈಲಿಯಲ್ಲಿ 90ರಷ್ಟು ಆಹಾರ ಮತ್ತು ಉಳಿದ 10ರಷ್ಟರಲ್ಲಿ ಗಾಳಿ ಮತ್ತು ನೀರು ತುಂಬಿ ಕೊಂಡಿರುವುದರಿಂದ ನಾವಿಂದು ಸ್ಧೂಲ ಕಾಯರಾಗಿದ್ದೇವೆ. ಕೈಕಾಲುಗಳು ಸಣ್ಣಗಿದ್ದು ಹೊಟ್ಟೆ ದಪ್ಪಗಾಗಿ ದಡೂತಿ ದೇಹದವರಾಗಿ ಬಿಟ್ಟಿದ್ದೇವೆ. ಹಾಗಾಗಿ ಕೇವಲ ಬಾಹ್ಯರೀತಿಯಲ್ಲಿ ಸುಂದರವಾಗಿದ್ದರೆ ಸಾಲದು. ಆಂತರಿಕವಾಗಿ ಸುಖಃದಿಂದ ಸುಂದರವಾಗಿಟ್ಟಿದ್ದಲ್ಲಿ ಮಾತ್ರವೇ ಆರೋಗ್ಯಕರವಾಗಿರುತ್ತದೆ. ಬೆಳಗಿನಿಂದ ಮಧ್ಯಾಹ್ನ 3ರ ವರೆಗೆ ದೇಹ ಬಿಸಿಯಾಗಿಟ್ಟು ಕೊಂಡರೆ ಸಂಜೆ 3ರ ನಂತರ ತಣ್ಣಗಿಟ್ಟು ಕೊಳ್ಳಬೇಕು. ಹಾಗೆ ದೇಹ ಇರಬೇಕಾಗಿದ್ದಲ್ಲಿ ನಮ್ಮ ಪಂಚೇಂದ್ರಿಯಗಳನ್ನು ನಿಗ್ರಹವಾಗಿಟ್ಟು ಕೊಳ್ಳಬೇಕು. ಹಾಗೆ ಇಂದ್ರೀಯಗಳನ್ನು ನಿಗ್ರಹದಲ್ಲಿಟ್ಟುಕೊಂಡಿರಲು ಯೋಗ ಬಹಳ ಉಪಕಾರಿಯಾಗಿದೆ. ಇದನ್ನೇ ನಮ್ಮ ಋಷಿ ಮುನಿಗಳು ಕಠಿಣ ಪರಿಶ್ರಮದಿಂದ ತಪ್ಪಸ್ಸಿನ ಮೂಲಕ ಸಾಧಿಸಿಕೊಂಡಿದ್ದರು. ಅವರು ಬಹಳಷ್ಟು ಸಮಯ ಮನೆಯ ಹೊರಗೇ ಇರುತ್ತಿದ್ದರು ಮತ್ತು ದೇಹವನ್ನು ದಂಡಿಸುತ್ತಿದ್ದರು. ಜೀವಿಸಲು ಅಗತ್ಯವಿದ್ದಷ್ಟೇ ಸೇವಿಸುತ್ತಿದ್ದರು ಹೊರತು, ಸೇವಿಸುವುದಕ್ಕೇ ಜೀವಿಸುತ್ತಿರಲಿಲ್ಲ. ಆದರೆ ನಾವಿಂದು ದೇಹ ದಂಡನೆ ಕಡಿಮೆಗೊಳಿಸಿ ಹೆಚ್ಚು ಹೆಚ್ಚು ಆಹಾರ ಸೇವಿಸುತ್ತಿರುವುದರಿಂದ ನಮ್ಮ ದೇಹ ಅನಾರೋಗ್ಯದ ಗೂಡಾಗಿದೆ. ಸಾಧ್ಯವಾದಷ್ಟೂ ಯೋಗಿಗಳಂತಾಗಲು ಪ್ರಯತ್ನಿಸ ಬೇಕು. ಸಾಧ್ಯವಾದಷ್ಟೂ ಮನಸ್ಸು ಮತ್ತು ದೇಹ ಒಂದೇ ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳುವುದು ಅತ್ಯಾವಶ್ಯಕ. ಆದರೆ ನಾವಿಂದು ದೇಹ ಒಂದೆಡೆ ಇದ್ದರೆ ಮನಸ್ಸು ಮರ್ಕಟದಂತೆ ಮತ್ತೇನನ್ನೋ ಯೋಚಿಸುತ್ತಿರುತ್ತದೆ. ಹಾಗೆ ಮನಸ್ಸು ಮತ್ತು ದೇಹ ಏಕರೂಪದಲ್ಲಿ ಸದಾಕಾಲವೂ ಜಾಗೃತವಾಗಿರಲು ಯೋಗ ಬಹಳ ಪರಿಣಾಮಕಾರಿಯಾಗಿದೆ. ಕೇವಲ ಪುಸ್ತಕ ಓದಿಯೋ ಅಥವಾ ಯಾರನ್ನೋ ನೋಡಿಯೋ ಅಥವಾ ವೀಡಿಯೋ ನೋಡಿ ಆಸನಗಳನ್ನು ಮಾಡಿ ನಾವು ಯೋಗಿಗಳಾದೆವು ಎಂದೆಣಿಸಿದರೆ ಅದು ಕೇವಲ ಭ್ರಮೆಯಾಗುತ್ತದೆ. ಅಂತರಂಗ ಶುಧ್ದಿಯಾಗಿದ್ದಲ್ಲಿ ಮಾತ್ರವೇ ಬಹಿರಂಗ ಶುಧ್ಧಿ. ಹಾಗಾದಲ್ಲಿ ಮಾತ್ರವೇ ಯೋಗದ ಸಿಧ್ಧಿಯಾಗುತ್ತದೆ.

ನಮ್ಮ ದೇವಾನು ದೇವತೆಗಳನ್ನು ಸರಿಯಾಗಿ ಗಮನಿಸಿದಲ್ಲಿ ನಮಗೆ ಕಂಡು ಬರುವ ಅಂಶವೆಂದರೆ ಆ ದೇವಾನು ದೇವತೆಗಳು ಸಾಧಾರಣ ಸ್ಥಿತಿಯಲ್ಲಿ ನಿಂತಿರದೇ ಯಾವುದಾದರೊಂದು ಯೋಗಾಸನದ ಸ್ಥಿತಿಯಲ್ಲಿಯೇ ಕಾಣಸಿಗುತ್ತಾರೆ. ಆದರೆ ನಾವು ಅಂಧ ಪಾಶ್ಚಾತ್ಯೀಕರಣದಿಂದಾಗಿ ನಮ್ಮ ದೇವರನ್ನು ಅನುಕರಿಸದೇ ಮತ್ತಾವುದನ್ನೋ ಅನುಸರಿಸುತ್ತಾ ಅಧೋಗತಿಯತ್ತ ಸಾಗಿ ಆಲಸಿಗಳಾಗಿ ಹೋಗುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ. ನಮ್ಮ ದೇಶ, ನಮ್ಮ ಧರ್ಮ, ನಮ್ಮ ಹೆತ್ತ ತಂದೆ ತಾಯಿಯರನ್ನು ಪ್ರೀತಿಸದೆ ಆದರಿಸದೇ, ಗೌರವಿಸದೇ, ಮತ್ತಾವುದೋ ಪಾಶ್ವಾತ್ಯ ಸಂಸ್ಕಾರ, ಸಂಸ್ಕೃತಿಯನ್ನು ಆದರಿಸುತ್ತ ಕಾಲ ಕಳೆಯುತ್ತಿರುವುದು ನಿಜಕ್ಕೂ ದುಖಃಕರ. ನಮ್ಮ ಮನಸ್ಥಿತಿಯನ್ನು ಸರಿಯಾಗಿಟ್ಟು ಕೊಂಡು ನಿಯಮಿತವಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಾ , ಸುಳ್ಳು , ಮೋಸ ಮಾಡದೆ, ದುರಾಸೆ ಪಡದೆ ನಮ್ಮಲ್ಲಿ ಎಷ್ಟಿದೆಯೋ ಅಷ್ಟರಲ್ಲಿಯೇ ಜೀವನ ಮಾಡುವ ಶೈಲಿಯನ್ನು ಅನುಸರಿಸಿಕೊಳ್ಳಬೇಕು.
ಪರೋಪಕಾರಾಯ ಇದಂ ಶರೀರಂ ಎನ್ನುವಂತೆ ನಮ್ಮಲ್ಲಿ ಅರ್ಪಣಾಭಾವವನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರವೇ ದೇಹ ಮತ್ತು ಮನಸ್ಸು ಆಂತರಿಕವಾಗಿ ಶುದ್ಧವಾಗಿ ಆಂತರಂಗ ಮತ್ತು ಯಾವುದೇ ಖಾಯಿಲೆ ಕಸಾಲೆಗಳಿಲ್ಲದೆ ಬಹಿರಂಗವಾಗಿಯೂ ಶುದ್ಧತೆಯನ್ನು ಪಡೆದುಕೊಳ್ಳುತ್ತೇವೆ.

ಇನ್ನು ಸರಿಯಾದ ಉಸಿರಾಟದ ಕ್ರಮವನ್ನು ಸೂಚಿಸುವುದೇ ಪ್ರಣಾಯಾಮ. ಯಾರು ಸರಿಯಾಗಿ ಉಸಿರಾಟ ಮಾಡುತ್ತಾರೋ ಅಂತಹವರು ಯಾವ ರೋಗವಿಲ್ಲದೇ ದೀರ್ಘಾಯಸ್ಸನ್ನು ಪಡೆಯುತ್ತಾರೆ. ಹಾಗಾಗಿ ಉತ್ತಮ ಜೀವನ ಶೈಲಿಯ ಜೊತೆಗೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನಕ್ಕೆ ಒತ್ತು ಕೊಡಬೇಕು. ಧ್ಯಾನ ಎಂದರೆ ಕೇವಲ ಕಣ್ಣು ಮುಚ್ಚಿ ಕೂರುವುದಲ್ಲ. ಮನಸ್ಸನ್ನು ನಿಯಂತ್ರಿಸಿಕೊಂಡು ಏಕಾಗ್ರ ಚಿತ್ತದಲ್ಲಿ ಸಮಾಧಿ ಸ್ಥಿತಿಗೆ ತಲುಪುವುದು ಎಂದರ್ಥ. ಇದರ ಜೊತೆ ಜೊತೆಗೆ ದೇಹಕ್ಕೆ ಸರಿಯಾದ ವಿಶ್ರಾಂತಿಯೂ ಅತ್ಯಗತ್ಯ. ನಮ್ಮ ಭಾರತೀಯ ಯೋಗ ಮತ್ತು ನಮ್ಮ ಭಾರತೀಯ ಜೀವನ ಶೈಲಿಯೆಂದರೆ, ನಮ್ಮ ಮನಸ್ಸು, ಮನೋಸ್ಥಿತಿ ಮತ್ತು ದೇಹಗಳನ್ನು ಏಕಾಗ್ರಚಿತ್ತದಲ್ಲಿರಿಕೊಂಡು ನೆಮ್ಮದಿಯ ದೀರ್ಘಕಾಲ ಜೀವಿಸುವ ಪದ್ದತಿ ಅದನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳೋಣ. ಎಂದು ಹೇಳಿ ತಮ್ಮ ಕಾರ್ಯಕ್ರಮವನ್ನು ಮುಗಿಸಿದರು.

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸುಂದರವಾಗಿ ನಿರೂಪಣೆ ಮಾಡಿದರೆ, ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಎಲ್ಲರ ಒಕ್ಕೊರಲಿನ ವಂದೇಮಾತರಂ ನೊಂದಿಗೆ ಯಶಸ್ವಿಯಾಗಿ ಅಂತ್ಯಗೊಂಡಿತು.

ಮುಂದಿನ ತಿಂಗಳು ಮತ್ತೊಂದು ವಿಷಯದೊಂದಿಗೆ ಮತ್ತಷ್ಟೂ ರೋಚಕವಾದ ಕಾರ್ಯಕ್ರಮದೊಂದಿಗೆ ನಿಮ್ಮನ್ನು ಭೇಟಿಯಾಗೋಣ. ಅಲ್ಲಿಯವರೆಗೂ ಭಾರತೀಯ ಯೋಗ ಮತ್ತು ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮುಂದುವರಿಸೋಣ.

ಏನಂತೀರೀ?

WhatsApp Image 2019-05-20 at 12.02.52 AM

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s