ವಿಶ್ವ ಸೈಕಲ್ ದಿನಾಚರಣೆ

WhatsApp Image 2020-06-02 at 9.23.50 PM

ನಮ್ಮ ಸಂಪ್ರದಾಯದಲ್ಲಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಒಂದಲ್ಲಾ ಒಂದು ಹಬ್ಬ ಹರಿದಿನಗಳೇ. ಅದನ್ನು ಸರಿಯಾಗಿ ತಿಳಿದು ಆಚರಿಸುತ್ತಾ ಬಂದರೇ ವರ್ಷವಿಡೀ ಸಂಭ್ರಮದಿಂದ ಸಂತೋಷವಾಗಿರಬಹುದು. ಅದೇ ರೀತಿಯಾಗಿ ಪಾಶ್ಚಿಮಾತ್ಯರೂ ಸಹಾ ವರ್ಷದ ಪ್ರತೀ ದಿನವನ್ನು ಒಬ್ಬೊಬ್ಬರಿಗೆ ಇಲ್ಲವೇ ಒಂದೊಂದಕ್ಕೆ ಮೀಸಲಿಟ್ಟು ಸಂಭ್ರಮದಿಂದ ಅದನ್ನು ಆಚರಿಸುತ್ತಾ ಬರುತ್ತಿದ್ದಾರೆ. ಅವರ ಅಂತಹ ಬಹುತೇಕ ದಿನಗಳನ್ನು ಅನುಸರಿಸಲು/ಆಚರಿಸಲು ನನ್ನ ಮನಸ್ಸು ಒಪ್ಪದಿದ್ದರೂ., 2018ರಲ್ಲಿ‌ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಜೂನ್ 3 ರಂದು, ವಿಶ್ವ ಸೈಕಲ್ ದಿನಾಚರಣೆಯನ್ನು ಆಚರಿಸುವುದಕ್ಕೆ ನಿರ್ಧರಿಸಿದ ಕಾರಣ ಅದನ್ನು ಮಾತ್ರ ಸಂತೋಷದಿಂದ ಆಚರಿಸಲು ಇಷ್ಟ ಪಡುತ್ತೇನೆ. ಹಾಗಾಗಿ ನಿಮ್ಮೆಲ್ಲರಿಗೂ ವಿಶ್ವ ಸೈಕಲ್ ದಿನಾಚರಣೆಯ ಶುಭಾಶಯಗಳು.

ಸೈಕಲ್ ಒಂದು ರೀತಿಯಾಗಿ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಚಿಕ್ಕ ವಯಸ್ಸಿನಿಂದ ಹಿಡಿದು ಎಲ್ಲಾ ವಯೋಮಾನದವರೆಗೂ ಬಳೆಸ ಬಹುದಾದಂಥ ಏಕೈಕ ಸಾಧನವಾಗಿದೆ. ಇಂತಹ ಸೈಕಲ್ಲನ್ನು 1817ರಲ್ಲಿ ಮೊತ್ತ ಮೊದಲಬಾರಿಗೆ ಜರ್ಮನಿಯ ಬ್ಯಾರೆಲ್ ಕಾರ್ಲವನ್ ಎಂಬುವರು ಕಂಡುಹಿಡಿದರು ಎನ್ನಲಾಗುತ್ತದೆ. ಅದಾದ ನಂತರ‌ ಬಗೆ ಬಗೆಯ ಸೈಕಲ್ಲುಗಳು ವಿಶ್ವಾದ್ಯಂತದ ಪ್ರಸಿದ್ಧವಾಗಿ ಜನಸಾಮಾನ್ಯ ಪ್ರಮುಖ ವಾಹನವಾಗಿ ಹೋದದ್ದು ಈಗ ಇತಿಹಾಸದವಾಗಿದೆ. ನಾವುಗಳು ಸಣ್ಣ ವಯಸ್ಸಿನವರಾಗಿದ್ದಾಗ ಸ್ವಂತ ಸೈಕಲ್ ಹೊಂದಿರುವುದೇ ಪ್ರತಿಷ್ಟೆಯ ಸಂಕೇತವಾಗಿತ್ತು. ಸಣ್ಣ ವಯಸ್ಸಿನಲ್ಲಿ ಮೂರು ಚಕ್ರದ ಸೈಕಲ್ ಮೂಲಕ ನನ್ನ ಮತ್ತು ಸೈಕಲ್ ನಡುವಿನ ಸಂಬಂಧ ಆರಂಭವಾಗಿ ಸುಮಾರು ನಾಲ್ಕನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಂದೆಯವರ ಸೈಕಲ್ಲನ್ನು ಕಲಿಯಲು ಪ್ರಾರಂಭಿಸಿದೆ. ನಾನು ಕುಳ್ಳಗಿದ್ದೆ. ಸೈಕಲ್ ಎತ್ತರವಾಗಿದ್ದ ಕಾರಣ, ಮೊದಲಿಗೆ ಒಳಪೆಟ್ಟಲು (ಕತ್ತರಿಯ) ಮುಖಾಂತರ ಸೈಕಲ್ ಕಲಿಯಲಾರಂಭಿಸಿದೆ. ನಾನು ಸೈಕಲ್ ಕಲಿಯುತ್ತಿದ್ದೇನೆ ಎಂದು ತಿಳಿದ ಕೂಡಲೇ ನನ್ನ ಸೋದರ ಮಾವ ತಾವು ಸೈಕಲ್ ಕಲಿಯುತ್ತಿದ್ದ ದಿನಗಳಲ್ಲಿ ಮಾಡಿಕೊಂಡ ಪೆಟ್ಟುಗಳನ್ನು ನೆನಪಿಸಿಕೊಂಡು ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿದ್ದರಿಂದ ನನಗೆ ಡೆಟಾಲ್, ಹತ್ತಿ , ಪ್ಲಾಸ್ಟರ್, ಬ್ಯಾಂಡೇಜ್ ಮತ್ತು ಕೆಲವು ಮುಲಾಮುಗಳನ್ನು ಕಳುಹಿಸಿ ಕೊಟ್ಟಿದ್ದರು.

ನನ್ನ ಪುಣ್ಯವೋ ಅಥವಾ ನನಗೆ ಸೈಕಲ್ ಕಲಿಸಿದ ನನ್ನ ಸ್ನೇಹಿತರಾದ ರವಿ ಮತ್ತು ಶಶಿ ಎಂಬ ಅಣ್ಣತಮ್ಮಂದಿರ ಎಚ್ಚರಿಕೆಯೋ ಏನೋ ಸೈಕಲ್ ಕಲಿಯುವಾಗ ಒಮ್ಮೆಯೂ ಬೀಳಲೇ ಇಲ್ಲ. ಹಾಗಾಗಿ ಮಾವ ಕಳುಹಿಸಿದ್ದ ಡೆಟಾಲ್ ಪ್ರತಿದಿನ ಮನೆ ಒರೆಸಲು ಬಳಕೆಯಾಯ್ತು. ಒಳ ಪೆಟ್ಟಲು, ನಂತರ ಬಾರ್, ಆನಂತರ ಸೀಟ್ ಆದಾದ ಮೇಲೆ ಕ್ಯಾರಿಯರ್ ಮೇಲೆ ಕುಳಿತು ಸೈಕಲ್ಲನ್ನು ಸರಾಗವಾಗಿ ಕೆಲವೇ ದಿನಗಳಲ್ಲಿ ಓಡಿಸತೋಡಗಿದೆ. ನಂತರ ಕೈ ಬಿಟ್ಟು ಸೈಕಲ್ ಓಡಿಸುವುದು, ಬಾರ್ ಮೇಲೆ ಒಬ್ಬರು ಮತ್ತು ಕ್ಯಾರಿಯರ್ ಮೇಲೆ ಮತ್ತೊಬ್ಬರನ್ನು ಕುಳ್ಳರಿಸಿಕೊಂಡು ದೂರ ದೂರದ ಪ್ರದೇಶಗಳಿಗೆ ಸೈಕಲ್ ಓಡಿಸುವಷ್ಟರಲ್ಲಿ ಏಳನೇ ತರಗತಿಗೆ ಬಂದಿದ್ದೆನಾದರೂ ನನಗೇ ಅಂತಾ ಒಂದು ಸೈಕಲ್ ಇರಲಿಲ್ಲ. ತಂದೆಯವರು ತಮ್ಮ ಕಛೇರಿಯನ್ನು ಮುಗಿಸಿಕೊಂಡು ಬಂದ ನಂತರ ಅವರಿಗೆ ಬೇರಾವುದೇ ಕೆಲಸವಿಲ್ಲದಿದ್ದಲ್ಲಿ ಮಾತ್ರ ನನಗೆ ಸೈಕಲ್ ಸಿಗುತ್ತಿತ್ತು. ಹಾಗಾಗಿ ನನಗೊಂದು ಸೈಕಲ್ ತೆಗೆಸಿಕೊಡಲು ಅಮ್ಮನನ್ನು ಪುಸಲಾಯಿಸ ತೊಡಗಿದೆ.

ಅಮ್ಮಾ, ನನ್ನ ಆಶಯವನ್ನು ನಮ್ಮ ತಂದೆಯವರ ಬಳಿ ತಿಳಿಸಿದಾಗ, ಸರಿ ಅಷ್ಟೇ ತಾನೆ ತೆಗೆಸಿಕೊಡೋಣ ಎಂದಾಗ, ನನಗೆ ಸ್ವರ್ಗಕ್ಕೆ ಮೂರೇ ಗೇಣು ದೂರ ಎನ್ನವ ಹಾಗಿತ್ತು. ಆದರೇ, ಹಾಗೆಯೇ ತಮ್ಮ ಮಾತನ್ನು ಮುಂದುವರಿಸಿದ ನಮ್ಮ ತಂದೆಯವರು, ನಾನು ಸೈಕಲ್ ಕೊಡಿಸಲು ಒಂದು ನಿಬಂಧನೆ ಇದೆ. ಹೇಗಿದ್ದರೂ ಅವನೀಗ ಏಳನೇ ತರಗತಿ. ಅಂತಿಮ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ 80 ಕ್ಕೂ ಅಧಿಕ ಅಂಕಗಳನ್ನು ಪಡೆಯ ಬೇಕು. ವಿಜ್ಞಾನ ಮತ್ತು ಗಣಿತದಲ್ಲಿ 90ಕ್ಕೂ ಅಧಿಕ ಅಂಕಗಳನ್ನು ತೆಗೆದುಕೊಂಡರೆ ಮಾತ್ರ ಎಂದಾಗ, ಒಂದು ಕ್ಷಣ ಮೌನವಾದರೂ ಆಗ ಹೇಗೂ ಓದಿನಲ್ಲಿ ಮುಂದಿದ್ದನಾದ್ದರಿಂದ ಅವರು ಹಾಕಿದ ಸವಾಲನ್ನು ಸ್ವೀಕರಿಸಿದ್ದೆ. ದೇವರ ದಯೆ ಮತ್ತು ನಮ್ಮ ಗುರುಗಳ ಆಶೀರ್ವಾದದಿಂದ ತಂದೆಯವರ ಸವಾಲನ್ನು ಮೆಟ್ಟಿ ನಿಂತಿದ್ದನ್ನು ಫಲಿತಾಂಶದ ದಿನ ಬಿಇಎಲ್ ಕಾರ್ಖಾನೆಯ ಸೆಕ್ಯುರಿಟಿ ಗೇಟ್ನಿಂದ ಕರೆ ಮಾಡಿ ತಿಳಿಸಿದ ಕೂಡಲೇ ಸಂತೋಷದಿಂದ ಅರ್ಧ ದಿನ ರಜೆ ಹಾಕಿ ಮನೆಗೆ ಬಂದು ಸಿಟಿ ಮಾರ್ಕೆಟ್ ಬಳಿಯ ಸಿಲ್ವರ್ ಜ್ಯೂಬಿಲೀ ಪಾರ್ಕಿನ ಬಳಿ ನೀಲಿ ಬಣ್ಣದ ಏ-ಒನ್ ಸೈಕಲ್ ಕೊಡಿಸಿದ್ದು ನನಗೆ ಚೆನ್ನಾಗಿ ನೆನಪಿದೆ. ಕೆಲವು ವರ್ಷಗಳು ನಾನು ಓಡಾಡಿಸಿದ ನಂತರ ನನ್ನ ತಂಗಿಗೆ ಆ ಸೈಕಲ್ ಓಡಾಡಿಸಿ, ಮಂದೆ ಅದೇ ಸೈಕಲ್ಲಿನಲ್ಲಿನಲ್ಲಿಯೇ ನನ್ನ ತಂಗಿಯ ಮಗನೂ ಸೈಕಲ್ ಕಲಿತ ಇತಿಹಾಸವಿದೆ.

ಆದರೆ ಇಂದು ಕಾಲ ಬದಲಾಗಿದೆ. ಇಂದಿನ ಮಕ್ಕಳು ಅಂತಹ ಸವಾಲುಗಳನ್ನು ಸ್ವೀಕರಿಸುವ ಮನೋಭಾವನೆಗಳನ್ನೇ ಕಳೆದು ಕೊಳ್ಳುತ್ತಿದ್ದಾರೆ. ಏಕೆಂದರೆ ಬಾಲ್ಯದಲ್ಲಿಯೇ ಚೆಂದನೆಯ ಸೈಕಲ್ಲುಗಳನ್ನು ನಾವೇ ಕೊಡಿಸಿ ಬಿಟ್ಟಿರುತ್ತೇವೆ ಹಾಗಾಗಿ ಅವರು ನಮ್ಮ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಮನಸ್ಸೇ ಮಾಡುವುದಿಲ್ಲ. ಆದರೆ ನನ್ನ ಮಗನ ವಿಷಯದಲ್ಲಿ ಹಾಗಾಗಲಿಲ್ಲ. ನನ್ನ ಮಗನಿಗೂ ಎಲ್ಲರಂತೆ ಅವನು ಐದೋ ಇಲ್ಲವೇ ಆರನೇ ತರಗತಿಯಲ್ಲಿರುವಾಗಲೇ ಸೈಕಲ್ ಕೊಡಿಸಿದ್ದನಾದರೂ ಅದು ಕೇವಲ ಮನೆಯ ಸುತ್ತ ಮುತ್ತ ಓಡಾಡುವುದಕ್ಕಷ್ಟೇ ಮೀಸಲಾಗಿತ್ತು. ಅದಕ್ಕೆ ಕಾರಣ ಇಂದಿನ ಟ್ರಾಫಿಕ್. ಇಂದಿನ ಟ್ರಾಫಿಕ್ನಿಲ್ಲಿ ಮಕ್ಕಳು ಬಿಡೀ, ನಾವುಗಳೇ ಸೈಕಲ್ ಓಡಿಸುವುದು ದುಸ್ಸಾಹಸವೇ ಸರಿ. ಮಗ ಹೈಸ್ಕೂಲ್ ಬಂದೊಡನೆಯೇ ಅವನ ಗೆಳೆಯರ ಬಳಿ ಗೇರ್ ಸೈಕಲ್ ಇದ್ದದ್ದನ್ನು ನೋಡಿ ಅಪ್ಪಾ ನನಗೂ ಅಂತಹದ್ದೇ ಗೇರ್ ಸೈಕಲ್ ತೆಗಿಸಿಕೊಡಿ ಎಂದು ದಂಬಾಲು ಬಿದ್ದ. ಅಂದು ನನ್ನ ತಂದೆಯವರು ಒಡ್ಡಿದ್ದ ಸವಾಲನ್ನೇ ನಾನಿಂದು ನನ್ನ ಮಗನಿಗೆ ಒಡ್ದಿದಾಗ, ಒಲ್ಲದ ಮನಸ್ಸಿನಿಂದಲೇ ಒಪ್ಪಿದ ಮಗ ಅಂತಿಮವಾಗಿ 10ನೇ ತರಗತಿಯ ಫಲಿತಾಂಶ ಬಂದಾಗ ನನ್ನಂತೆಯೇ ಮತ್ತು ನನ್ನನ್ನೂ ಮೀರಿಸಿದಂತೆ ಹೆಚ್ಚಿನ ಅಂಕಗಳನ್ನು ಗಳಿಸಿದ್ದರ ಪರಿಣಾಮವಾಗಿ 25000 ರೂಗಳ ನಗದು ಬಹುಮಾನದ ಜೊತೆಗೆ 15000ರೂಗಳ 21 ಗೇರ್ ಸೈಕಲ್ ಕೊಡಿಸಿದಾಗ ಅವನ ಆನಂದಕ್ಕೇ ಪಾರವೇ ಇರಲಿಲ್ಲ. ಅಲ್ಲಿಯವರೆಗೂ ಅವನು ಬಿಡುವಾಗಿದ್ದಾಗ ಮಾತ್ರವೇ ಅವನ ಸೈಕಲ್ಲನ್ನು ಓಡಿಸುತ್ತಿದ್ದ ನನಗೆ,ಅವನ ಹೊಸಾ ಸೈಕಲ್ ಬಂದ ಮೇಲೇ ಅವನ ಹಳೇ ಸೈಕಲ್ ನನ್ನ ಪಾಲಾಯಿತು. ಮಕ್ಕಳ ಸಂತೋಷಕ್ಕಾಗಿ ಇಂತಹ ಸಣ್ಣ ಪುಟ್ಟ ತ್ಯಾಗಗಳನ್ನು ಮಾಡುವುದು ತಂದೆ ತಾಯಿಯರ ಕರ್ತವ್ಯವೇ ಅಲ್ಲವೇ? ಈಗ ವಾರಂತ್ಯದಲ್ಲಿ ಅಪ್ಪಾ ಮತ್ತು ಮಗ ಒಟ್ಟೊಟ್ಟಿಗೆ ದೂರ ದೂರದ ಸೈಕಲ್ ಪ್ರಯಾಣ ಮಾಡುವುದನ್ನು ವರ್ಣಿಸುವುದಕ್ಕಿಂತ ಅನುಭವಿಸಿದರೇ ಚೆಂದ.

ಮತ್ತೊಂದು ಸಂತೋಷದ ವಿಚಾರವೆಂದರೆ ನನ್ನ ಮಗ ಪ್ರತೀ ದಿನ ತನ್ನ ಕಾಲೇಜಿಗೆ ಸೈಕಲ್ಲಿನ ಮೂಲಕವೇ ಹೋಗಿ ಬರುವ ಮೂಲಕ ಸಣ್ಣಗಾಗಿದ್ದಲ್ಲದೇ, ದೈಹಿಕವಾಗಿ ಸಧೃಡನಾಗಿದ್ದಾನಲ್ಲದೇ, ತನ್ನ ಸೈಕಲ್ಲಿನ ಸಣ್ಣ ಪುಟ್ಟ ರಿಪೇರಿ ಕೆಲಗಳನ್ನು ತಾನೇ ಮಾಡಿಕೊಳ್ಳುವಷ್ಟು ಮುಂದುವರೆದಿದ್ದಾನೆ.

ಇದು ನಮ್ಮ ಸೈಕಲ್ ವೃತ್ತಾಂತವಾದರೇ, ಇನ್ನು ಸೈಕಲ್ ತುಳಿಯುವುದರಿಂದ ನಮಗಾಗುವ ಪ್ರಯೋಜನಗಳತ್ತ ಹರಿಸೋಣ ನಮ್ಮ ಚಿತ್ತ.

  • ಇದು ಪರಿಸರ ಸ್ನೇಹಿ ಸಾಧನ : ಹೆಚ್ಚಿನ ನಗರ ಪ್ರದೇಶಗಳಲ್ಲಿ ಮರಗಿಡಗಳು ನಾಶವಾಗಿ ಕಾಂಕ್ರೀಟ್ ಕಾಡಾಗಿ ಮತ್ತು ಪೆಟ್ರೋಲ್ ಬಳಕೆಯ ವಾಹನಗಳಿಂದಾಗಿ ವಾತಾವರಣ ಕಲುಷಿತಗೊಂಡಿದೆ. ತಾಜಾ ಗಾಳಿಯನ್ನು ಉಸಿರಾಡುವುದು ಕಷ್ಟಕರವಾಗಿರುವ ಪರಿಸ್ಥಿತಿಯಲ್ಲಿ, ಸೈಕ್ಲಿಂಗ್ ಇದಕ್ಕೆಲ್ಲಾ ಪರಿಹಾರವಾಗಿದೆ. ಸೈಕ್ಲಿಂಗ್ ಮಾಡಲು ಇಂಧನದ ಅಗತ್ಯವಿಲ್ಲ, ಚಾರ್ಜ್ ಮಾಡಬೇಕಿಲ್ಲ ಮತ್ತು ಪರಿಸರಕ್ಕೆ ಹಾನಿಯೂ ಆಗದು. ಸೈಕಲ್ ತುಳಿಯಲು ನಮ್ಮಲ್ಲಿ ಕಸುವಿರಬೇಕಷ್ಟೇ. ಸೈಕಲ್ ತುಳಿದಷ್ಟೂ ನಾವು ದಷ್ಟ ಪುಷ್ಟವಾ ಹಾಗಾಗಿ ನಮ್ಮ ನಮ್ಮೆಲ್ಲಾ ಪ್ರಯಾಣಗಳಿಗೆ ಸೈಕಲ್ ಉಪಯೋಗಿಸುವ ಮೂಲಕ, ಪರಿಸರವನ್ನು ಕಾಪಾಡಲು ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸಬಹುದಾಗಿದೆ.
  • ಉತ್ತಮ ಆರೋಗ್ಯಕ್ಕೆ ಸೈಕ್ಲಿಂಗ್ ಅತ್ಯದ್ಭುತ ಸಾಧನ : ಸೈಕ್ಲಿಂಗ್ ಹೃದಯಕ್ಕೆ ಅತ್ಯುತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ನಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಗಂಡಸರಿಗೆ ಹರ್ನಿಯಾ ಬರುವುದನ್ನು ತಡೆಗಟ್ಟುತ್ತದೆ ಎಂಬುದು ಸಾಬೀತಾಗಿದೆ.
  • ತೂಕ ಕಳೆದು ಕೊಳ್ಳಲು ಸೈಕ್ಲಿಂಗ್ ಅತ್ಯುತ್ತಮವಾದ ವ್ಯಾಯಾಮ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೆಚ್ಚಿನ ಖರ್ಚಿಲ್ಲದೆ, ಪರಿಸರ ಪ್ರೇಮಿಯಾಗಿ ಪ್ರಯಾಣಿಸ ಬಹುದಲ್ಲದೆ, ಜೊತೆ ಜೊತೆಗೆ ಅನಾಯಾಸವಾಗಿ ದೇಹದ ತೂಕವನ್ನೂ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಅದರ ಜೊತೆಗೆ ಕಾಲುಗಳ ಸ್ನಾಯುಗಳನ್ನು ಬಲಪಡಿಸುವುದಲ್ಲದೆ, ತೊಡೆಗಳ ಸಣ್ಣದಾಗಿ ಮಾಡುತ್ತದೆ.
  • ಸೈಕ್ಲಿಂಗ್ ನಮ್ಮ ಹಣವನ್ನಲ್ಲದೆ ದೇಶದ ಹಣವನ್ನೂ ಉಳಿಸುತ್ತದೆ: ಸೈಕ್ಲಿಂಗ್ ಮಾಡುವುದರಿಂದ, ಯಾವುದೇ ರೀತಿಯ ಖರ್ಚಿಲ್ಲದೆ ಮತ್ತು ಯಾವುದೇ ರೀತಿಯ ಇಂಧನಗಳ ಗೋಜಿಲ್ಲದೆ ಸುಲಭ ದರದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಸಬಹುದು. ಇಂಧನ ಬಳಸದಿರುವ ಕಾರಣ ದೇಶಕ್ಕೆ ತೈಲದ ಆಮಧೀಕರಣ ಮತ್ತು ವಿದೇಶಿ ವಿನಿಮಯದ ಹಣವನ್ನು ಉಳಿಸಬಹುದು.
  • ಸಮಯದ ಉಳಿತಾಯ: ಕಿರಿದಾದ ರಸ್ತೆಗಳಲ್ಲಿ ಮತ್ತು ಟ್ರಾಫಿಕ್ ಜಾಮ್ಗಳಲ್ಲಿ ಸಿಕ್ಕಿಕೊಂಡಾಗ ಇತರೇ ವಾಹನಗಳು ಓಡಾಡಲು ಆಗದಿರುವ ಸಂದರ್ಭದಲ್ಲಿ ಸುಲಭವಾಗಿ ನಮ್ಮ ಸೈಕಲ್ ಮೂಲಕ ಪ್ರಯಾಣಿಸಬಹುದಾಗಿದೆ.

ಚಿಕ್ಕವರಿದ್ದಾಗ ಸೈಕಲ್ ತುಳಿಯಲು ಬೇಸರಿಸಿಕೊಂಡು ಬೈಕ್, ಕಾರ್ಗಳನ್ನು ಬಳಸಿ ದೇಹವನ್ನು ಬೆಳೆಸಿಕೊಳ್ಳುವ ನಾವುಗಳು ನಂತರ ಅದೇ ದೇಹವನ್ನು ಕರಗಿಸಿಕೊಳ್ಳಲು ಮತ್ತದೇ ಸೈಕಲ್ಗಳಿಗೆ ಮೊರೆ ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಸೈಕಲ್ ತುಳಿಯುವುದರಿಂದ ಇಷ್ಟೆಲ್ಲಾ ಪ್ರಯೋಜನವಿರುವ ಕಾರಣ, ಕೇವಲ ಸೈಕಲ್ ತುಳಿಯುವುದನ್ನು ಕೇವಲ ವಿಶ್ವ ಸೈಕಲ್ ದಿನಾಚರಣೆಯಂದು ಮಾತ್ರವೇ ಮೀಸಲಿಡದೆ, ವರ್ಷವಿಡೀ ಸೈಕಲ್ಲನ್ನು ಬಳಸಿ ನಮ್ಮ ದೇಹ ಮತ್ತು ದೇಶ ಎರಡನ್ನೂ ಕಾಪಾಡಿಕೊಳ್ಳೋಣ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ವಿಶ್ವ ಸೈಕಲ್ ದಿನಾಚರಣೆ

  1. ಉತ್ತಮ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಶೀರ್ಷಿಕೆ ನೋಡಿ ನಿಮ್ಮ ತಂದೆಯವರ ಸೈಕಲ್ ಸೀಟು ನಾನು ಕಲಿಯುವ ಬರದಲ್ಲಿ ಹರಿದು ಹಾಕಿದ ಪ್ರಸಂಗ ಇರಬಹುದು ಎಂದು ಹುಡುಕಿದೆ. ಒಂದು ರೂಪಾಯಿ ಕೊಟ್ಟು ಒಂದು ಘಂಟೆಯ ಬಾಡಿಗೆಗೆ ಸೈಕಲ್ ತುಳಿದ ಕ್ಷಣಗಳು ಅವಿಸ್ಮರಣೀಯ. ಸೈಕಲ್ ಹಿಂದಿರುಗಿಸುವಾಗ ಮತ್ತೊಂದು ರೌಂಡು ಕೇಳುವುದು ಆತ ಸಣ್ಣಗೆ ನಕ್ಕು ತಲೆಯಾಡಿಸಿದರೆ ಸ್ವರ್ಗಕ್ಕೆ ಮೂರೇ ಗೇಣು…ಈಗ ನೆನೆದರೆ ಸೋಜಿಗ…

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s