ವಿಶ್ವ ಪರಿಸರ ದಿನ

ಭೂಮಿ,ಸೌರಮಂಡಲದಲ್ಲಿ 5ನೇ ದೊಡ್ಡ ಗ್ರಹ. ಇಡೀ ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ. ಅದಕ್ಕಾಗಿಯೇ ಕವಿಯೊಬ್ಬರು ಎಲ್ಲರಿಗೊಂದೇ ಭೂತಲವೆಂದೆ ಎಲ್ಲರಿಗೂ ಭಗವಂತನೇ ತಂದೆ ಎಂದು ಹೇಳಿದ್ದಾರೆ. ಹಾಗಾಗಿ ಈ ಭೂಮಿ ನಮಗೆ ಆಶ್ರಯದಾತೆಯಲ್ಲದೇ ನಮ್ಮ ತಾಯಿಯೂ ಹೌದು. ಅದಕ್ಕಾಗಿಯೇ ನಮ್ಮ ಸನಾತನ ಧರ್ಮದಲ್ಲಿ ಭೂಮಿಗೆ ತಾಯಿಯ ಸ್ವರೂಪ ನೀಡಿ ಭೂಮಿತಾಯಿ ಎಂದೇ ಸಂಭೋಧಿಸುತ್ತೇವೆ. ಆದರೆ ಮನುಷ್ಯನ ದುರಸೆಯಿಂದಾಗಿ ಅದೇ ಭೂಮಿ ತಾಯಿ ಒಡಲನ್ನು ಅಗೆದು, ಬಗೆದು ರತ್ನಗರ್ಭ ವಸುಂಧರೆಯಲ್ಲಿ ಆಡಗಿದ್ದ ಖನಿಜ ಸಂಪತ್ತುಗಳನ್ನು ಬರಿದು ಮಾಡಿದ್ದಲ್ಲದೇ ಸಹಸ್ರಾರು ವರ್ಷಗಳಿಂದ ಆಕೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ಅಂತರ್ಜಲಕ್ಕೂ ಕೊಳವೇ ಭಾವಿಗಳನ್ನು ಕೊರೆದು ಒಂದು ರೀತಿಯಲ್ಲಿ ಆಕೆಯ ಮೇಲೆ ಅತ್ಯಾಚಾರವನ್ನು ಮಾಡಿದ್ದೇವೆ ಎಂದರೂ ತಪ್ಪಾಗಲಾರದು.

ಸಂತ ಕಬೀರರ ಒಂದು ದೋಹದಲ್ಲಿರುವಂತೆ

ವೃಕ್ಷಕ್ಕಲ್ಲ ವೃಕ್ಷದ ಫಲವು ನದಿಯ ನೀರು ನದಿಗಲ್ಲ |
ಸಂತನ ಬದುಕು ಸಂತನಿಗಲ್ಲ ಅದು ಲೋಕದ ಹಿತಕೆ – ಕಬೀರಾ ||
ಅಂದರೆ ಗಿಡ ಮರಗಳು ಹಣ್ಣು ಬಿಡುವುದು, ನದಿ ಹರಿಯುವುದೂ ಪರರ ಉಪಯೋಗಕ್ಕಾಗಿಯೇ ಹೊರತು ಅವರ ಸ್ವಾರ್ಥಕ್ಕಲ್ಲ. ಅದೇ ರೀತಿ ಋಷಿಮುನಿಗಳು ಮತ್ತು ಮಹಾ ಸಂತರು ಲೋಕದ ಹಿತಕ್ಕೋಸ್ಕರ ಬದುಕುತ್ತಾರೆಯೇ ಹೊರತು ಸ್ವಂತಕ್ಕಲ್ಲ.

ಆದರೆ ಸ್ವಾರ್ಥಿ ಮಾನವ, ಪ್ರಕೃತಿ ಮಾತೆ ನೀಡುತ್ತಿದ್ದದ್ದೆಲ್ಲವನ್ನೂ ದುರ್ಬಳಕೆ ಮಾಡಿಕೊಂಡ ಪರಿಣಾಮವಾಗಿ ಸದ್ಯದ ಪರಿಸ್ಥಿತಿಯಲ್ಲಿ ಪರಿಸರದಿಂದ ನಮಗೆ ಉಚಿತವಾಗಿ ಸಿಗುತ್ತಿದ್ದ ನೀರು, ಗಾಳಿ, ಮತ್ತು ಬೆಳಕುಗಳು ದುರ್ಲಭವಾಗುತ್ತಿದೆ. ಉಚಿತವಾಗಿ ಸಿಗುತ್ತಿದ್ದ ನೀರು ಇಂದು ಬಹಳಷ್ಟು ದುಬಾರಿಯಾಗಿ ಹೋಗುತ್ತಿದೆ. ಇನ್ನೂ ವಿಪರೀತ ನಗರೀಕರಣದಿಂದ ಕಾಡುಗಳನ್ನು ಕಡಿದು ಕಾಂಕ್ರೀಟ್ ಕಾಡುಗಳನ್ನು ನಿರ್ಮಿಸುತ್ತಿರುವ ಪರಿಣಾಮವಾಗಿ ದುರಾದೃಷ್ಟವಶಾತ್ ಗಾಳಿಯನ್ನೂ ಕಲುಶಿತಗೊಳಿಸಿದ್ದೇವೆ. ಶುಧ್ಧ ನೀರು ಮತ್ತು ಗಾಳಿ ಸಿಗುವುದೇ ಇಂದು ದುರ್ಲಭವಾಗಿದೆ. ಉದ್ಯಾನ ನಗರಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರಿನಲ್ಲೂ ಗಿಡಮರಗಳು ಕಾಣೆಯಾಗಿ ಗಗನಚುಂಬಿ ಕಟ್ಟಡಗಳೇ ಹೆಚ್ಚಾಗಿವೆ. ಚೀನ ದೇಶದ ರಾಜಧಾನಿ ಬೀಜಿಂಗ್ ಪ್ರದೇಶದಲ್ಲಿ ಶುಧ್ಧಗಾಳಿಯನ್ನೂ ಜನಾ ಕೊಂಡು ಕೊಳ್ಳುವ ಪರಿಸ್ಥಿತಿ ಈಗಾಗಲೇ ಬಂದಿದ್ದರೆ, ನಮ್ಮ ದೇಶದ ರಾಜಧಾನಿ ದೆಹಲಿಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರದೇ, ಆಮ್ಲಜನಕವನ್ನು ಖರೀದಿಸಿ ಉಸಿರಾಡುವಂತಹ ಸನ್ನಿವೇಶಗಳು ಅತೀ ಶೀಘ್ರದಲ್ಲಿ ಬರುವ ಎಲ್ಲಾ ಲಕ್ಷಣಗಳೂ ಸ್ವಷ್ಟವಾಗಿ ಗೋಚರಿಸುತ್ತಿದೆ.

env2

ಭಗವಂತನಿಂದ ಸೃಷ್ಟಿಯಾದ ಈ ವಿಶ್ವವನ್ನು ನಮ್ಮ ಪೂರ್ವಜರು ಎಚ್ಚರಿಕೆಯಿಂದ ಸದ್ಬಳಕೆ ಮಾಡಿಕೊಂಡು ಅದನ್ನು ಅವರಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬೆಳಸಿ ನಮಗೂ ಉಳಿಸಿಹೋಗಿದ್ದಾರೆ. ಆದರೆ ಈಗ ನಾವುಗಳು ಅವುಗಳನ್ನು ಬೆಳೆಸುವುದಿರಲಿ ಅದನ್ನು‌ ಸಂಪೂರ್ಣವಾಗಿ ಖಾಲಿ‌ಮಾಡದೇ, ಅಲ್ಪ ಸ್ವಲ್ಪವಾದರೂ ನಮ್ಮ ಮುಂದಿನ ಪೀಳಿಗೆಯವರಿಗೆ ಉಳಿಸಿ ಹೋಗಬೇಕಾದ .ಗುರುತರವಾದ ಜವಾಬ್ಢಾರಿ ನಮ್ಮ ಮೇಲೆ ಇದೆ. ಇಂತಹ ಜವಾಬ್ಧಾರಿಯನ್ನು ನೆನಪಿಸುವ ಸಲುವಾಗಿಯೇ ವಿಶ್ವಾದ್ಯಂತ ಜೂನ್ 5 ರಂದು, ವಿಶ್ವ ಪರಿಸರದ ದಿನವನ್ನಾಗಿ ಅಚರಿಸುತ್ತಾರೆ. ಹಾಗಾಗಿ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು. ಈ ಪರಿಸರವನ್ನು ಉಳಿಸಿ ಬೆಳೆಸುವ ಸಲುವಾಗಿ ಈ ವಿಶ್ವ ಪರಿಸರ ದಿನದಂದು ನಾವೆಲ್ಲರೂ ಒಂದಾಗಿ ಈ ಕೆಳಕಂಡಂತೆ ಸಂಕಲ್ಪ ಮಾಡೋಣ ಮತ್ತು ಅದನ್ನು ಕಾರ್ಯರೂಪಕ್ಕೆ ತರಲು ಕಾಯಾ ವಾಚಾ ಮನಸಾ ಪ್ರಯತ್ನಿಸೋಣ.

 • ನಮ್ಮ ಮನೆಯ ಸುತ್ತ ಮುತ್ತ ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳಸಿ ನಮಗೆ ಬೇಕಾಗುವಷ್ಟು ಗಾಳಿಯನ್ನು ನಾವೇ ಸಂಪಾದಿಸಿ ಕೊಳ್ಳೋಣ.
 • ಮನೆ ಕಟ್ಟುವಾಗ ಇಡೀ ಜಾಗದಲ್ಲಿ ಕಟ್ಟಡ ಕಟ್ಡದೆ, ಸಾಕಷ್ಟು ಗಾಳಿ ಬೆಳಕು ನೈಸರ್ಗಿಕವಾಗಿಯೇ ಮನೆಯೊಳಗೆ ಬರುವಂತೆ ನೋಡಿ ಕೊಳ್ಳೋಣ.
 • ಮನೆಯ ಮುಂದೆ ಕನಿಷ್ಠ ದಿನನಿತ್ಯದ ಪೂಜೆಗಾಗುವಷ್ಟು ಹೂವಿನಗಿಡಗಳು ಮತ್ತು ಮನೆ ಔಷಧೀಯ ಗಿಡಗಳು ಅದರಲ್ಲೂ ತುಳಸೀ ಗಿಡ ಹಾಕುವಷ್ಟಾದರೂ ಜಾಗ ಮೀಸಲಿಡೋಣ. ಅದು ಸಾದ್ಯವಾಗದಿದ್ದಲ್ಲಿ ಕನಿಷ್ಟ ಪಕ್ಷ ತಾರಸೀ ತೋಟವನ್ನಾದರೂ ಮಾಡೋಣ.
 • ಗಿಡ ಮರ ಮತ್ತು ಪರಿಸರದ ಕಾಳಜಿಯನ್ನು ನಮ್ಮ ಮಕ್ಕಳಿಗೆ ತಿಳಿಸಿ ನಮ್ಮ ಸುತ್ತ ಮುತ್ತಲಿನ ಶಾಲೆಗಳಲ್ಲಿ ಮಕ್ಕಳ ಸಹಾಯದಿಂದ ಬೀಜದುಂಡೆಗಳನ್ನು ತಯಾರಿಸಿ ಮಳೆಗಾಲದ ಮುಂಚೆ ಕೆರೆ ಕಟ್ಟೆಗಳ ಸುತ್ತ ಮುತ್ತ ಬೀಜದುಂಡೆಯನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಧ್ಯವಾದಷ್ಟು ಗಿಡ ಮರಗಳನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡೋಣ.
 • ಬಿಸಿನೀರಿನ ಸ್ನಾನಕ್ಕೆ ಮತ್ತು ಮನೆಯ ದೀಪಗಳಿಗೆ ವಿದ್ಯುತ್ ಬಳಕೆ ಮಾಡದೇ ಸೌರಶಕ್ತಿಯನ್ನು ಯಥೇಚ್ಛವಾಗಿ ಬಳಸಿಕೊಳ್ಳೋಣ.
 • ಅಡುಗೆಮನೆಯಲ್ಲಿ ಉರುವಲಿಗೆ ಕಟ್ಟಿಕೆಯ ಬದಲಿಗೆ ಪರ್ಯಾಯ ಇಂಧನವನ್ನು ಬಳಸುವುದರ ಮೂಲಕ ವಾಯುಮಾಲಿನ್ಯ ತಡೆಗಟ್ಟೋಣ.
 • ದಿನ ಬಳಕೆಗೆ ಅಗತ್ಯವಿದ್ದಷ್ಟು ನೀರನ್ನು ಮಾತ್ರವೇ ಬಳಸೋಣ. ನಮ್ಮೆಲ್ಲರ ಮನೆಗಳಲ್ಲೂ ಮಳೆ ಕೊಯ್ಲು ಪದ್ದತಿಯನ್ನು ಅಳವಡಿಸಿ ಕೊಂಡು ನಮ್ಮ ಮನೆಯ ಛಾವಣಿಯ ಮೇಲೆ ಬೀಳುವ ಪ್ರತಿಯೊಂದು ಬಿಂದು ಮಳೆ ಹನಿಯನ್ನೂ ಸದ್ಬಳಕೆ ಮಾಡಿಕೊಳ್ಳೋಣ.
 • ನಮ್ಮ ಮನೆಯಂಗಳದಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಳೆ ನೀರು ಇಂಗು ಗಂಡಿಗಳನ್ನು ನಿರ್ಮಿಸಿ ಮಳೆ ನೀರು ಪೋಲಾಗಿ ಚರಂಡಿ ಮೋರಿ ಸೇರದಂತೆ ನಮ್ಮಲ್ಲಿಯೇ ಇಂಗಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸೋಣ ಮತ್ತು ಸಾಧ್ಯವಾದಷ್ಟೂ ಭಾವಿ, ಕೊಳವೇ ಭಾವಿ ಮತ್ತು ನದಿ ನೀರಿನ ಅವಲಂಬನೆಯನ್ನು ಕಡಿಮೆ ಮಾಡೋಣ.
 • ಹತ್ತಿರದ ಪ್ರದೇಶಗಳಿಗೆ ವಾಹನಗಳ ಬದಲಾಗಿ ನಡಿಗೆಯಲ್ಲೋ ಅಥವಾ ಸೈಕಲ್ಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವೂ ವೃಧ್ಧಿಸುತ್ತದೆ ಮತ್ತು ವಾಹನಗಳು ಸೂಸುವ ಹೊಗೆಯಿಂದಾಗಿ ಅನಗತ್ಯವಾದ ವಾಯುಮಾಲಿನ್ಯವನ್ನು ತಡೆಗಟ್ಟಿದಂತಾಗುತ್ತದೆ.
  ರಾಸಾಯನಿಕ ಕೃಷಿ ಪದ್ದತಿಯ ಬದಲು ನಮ್ಮ ಪೂರ್ವಜರ ಹಾಗೆ ಸಾವಯವ ಕೃಷಿಯನ್ನು ಜನಪ್ರಿಯಗೊಳಿಸುತ್ತಾ ಗೋಮಯ ಮತ್ತು ಗೋಮೂತ್ರದ ಸದ್ಬಳಕೆಯಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸೋಣ.
 • ಮನೆಗಳಲ್ಲಿ ಬಳೆಸುವ ತರಕಾರಿ ಮತ್ತು ಹಣ್ಣುಗಳ ಸಿಪ್ಪೆಯನ್ನು ಸುಮ್ಮನೆ ಹೊರಗೆ ಬೀಸಾಡದೆ, ನಮ್ಮ ಮನೆಯ ಕೈತೋಟದಲ್ಲಿಯೇ ಕಾಂಪೋಸ್ಟ್ ಗೊಬ್ಬರ ತಯಾರಿಕೊಳ್ಳೋಣ ಇಲ್ಲವೇ ಅದೇ ತರಕಾರಿ, ಹಣ್ಣುಗಳ ಸಿಪ್ಪೆಗಳು ಮತ್ತು ಮನೆಯಲ್ಲಿ ಅಳಿದು, ಉಳಿದು ಹೋದ ಆಹಾರ ಪದಾರ್ಥಗಳಿಂದ ನೈಸರ್ಗಿಕ ಅನಿಲವನ್ನು ತಯಾರಿಸಿ ಮನೆಗೆ ಇಂಧನವನ್ನಾಗಿ ಬಳೆಸಿಕೊಳ್ಳಲು ಪ್ರಯತ್ನಿಸೋಣ.
 • ನಮ್ಮ ಸುತ್ತ ಮುತ್ತಲಿನ ಒಣಗಿದ ಗಿಡ ಮರಗಳಿಗಾಗಲೀ ಅಥವಾ ಮನೆಯ ತ್ರಾಜ್ಯವಸ್ತುಗಳನ್ನು ಬೆಂಕಿಯಿಂದ ನಾಶ ಪಡಿಸದಿರುವ ಮೂಲಕ ವಾಯುಮಾಲಿನ್ಯವನ್ನು ತಡೆಗಟ್ಟೋಣ ಮತ್ತು ಮಣ್ಣಿನಲ್ಲಿ ಜೈವಿಕವಾಗಿ ಕರಗದಂತಹ ಯಾವುದೇ ವಸ್ತುವನ್ನು ನಾವು ದಿನಬಳಕೆಯಲ್ಲಿ ಉಪಯೋಗಿಸದೇ, ಅದರಲ್ಲೂ ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ ಅದಷ್ಟೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸೋಣ.

ಮೇಲೆ ಸೂಚಿಸಿದಂತಹ ಎಲ್ಲಾ ಸಲಹೆಗಳು ಕೇವಲ ವಿಶ್ವ ಪರಿಸರ ದಿನಕ್ಕೆ ಮಾತ್ರವೇ ಸೀಮಿತವಾಗದೆ ಅದನ್ನು ನಮ್ಮ ದೈನಂದಿನ ಜೀವನದ ಶೈಲಿಯನ್ನಾಗಿ ಮಾಡಿಕೊಳ್ಳುವುದರ ಮೂಲಕ ನಮ್ಮ ಪೂರ್ವಜರು ನಮಗೆ ಉಳಿಸಿಹೋದ ಪರಿಸರ ಸಂಪತ್ತನ್ನು ನಾವೇ ಖಾಲಿ ಮಾಡದೆ, ನಮ್ಮ ಮುಂದಿನ ಪೀಳಿಗೆಗೂ ಉಳಿಸೋಣ ಮತ್ತು ಬೆಳೆಸೋಣ. ಪರಿಸರದ ನಾಶ ಪಡಿಸುವುದು ಎಂದರೆ ಅದು ವಿಶ್ವದ ನಾಶ ಎಂಬ ಅಂಶ ಮನದಲ್ಲಿಟ್ಟು ಕೊಳ್ಳೋಣ.

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s