ಬಹುಷಃ ಎಪ್ಪತ್ತು ಮತ್ತು ಎಂಭತ್ತು ದಶಕದಲ್ಲಿ ಬಾಲ್ಯಾವಸ್ಥೆಯನ್ನು ಕಳೆದವರಿಗೆ ಪೆಪ್ಪರ್ಮೆಂಟ್ ಎಂಬ ಹೆಸರನ್ನು ಕೇಳಿದ ಕೂಡಲೇ ಖಂಡಿತವಾಗಿಯೂ ಬಾಯಯಲ್ಲಿ ನೀರು ಬಂದೇ ಬರುತ್ತದೆ ಎಂಬ ನಂಬಿಕೆ ನನ್ನದು. ಏಕೆಂದರೆ ಅಂದೆಲ್ಲಾ ನಮಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತಿದ್ದ ತಿಂಡಿಯೇ ಅದು. ಕಡಿಮೆ ಹಣ ಜಾಸ್ತಿ ಹೊತ್ತು ಮಜ ಕೊಡುತ್ತಿದ್ದದ್ದೇ ಪೆಪ್ಪರ್ಮೆಂಟ್. ನಾವು ಮಾಡಿದ ಅತ್ಯುತ್ತಮ ಕೆಲಸಗಳಿಗೆ ಪ್ರೋತ್ಸಾಹಕರವಾಗಿ ಬಹುಮಾನವಾಗಿ ಸಿಗುತ್ತಿದ್ದದ್ದೇ ಪೆಪ್ಪರ್ಮೆಂಟ್. ಯಾರಾದರೂ ಚಿಕ್ಕ ಮಕ್ಕಳಿರುವ ಮನೆಗೆ ಬಂದರೆ, ಹೂವು ಹಣ್ಣುಗಳ ಜೊತೆ ಮಕ್ಕಳಿಗೆಂದೇ ಪೆಪ್ಪರ್ಮೆಂಟ್ ತಂದೇ ತರುತ್ತಿದ್ದರು. ಆ ಚಿಕ್ಕ ಸಿಹಿ ಗುಳಿಗೆಗಳು ನಿಜಕ್ಕೂ ನಮ್ಮ ನಾಲಿಗೆ ಮತ್ತು ಮನಸ್ಸನ್ನು ಸಂತೋಷ ಪಡಿಸುತ್ತಿತ್ತು ಎಂದರೆ ಅತಿಶಯೋಕ್ತಿಯೇನಲ್ಲ.
ಆ ಪೆಪ್ಪರ್ಮೆಂಟ್ನಲ್ಲೂ ನಾನಾ ರೀತಿಯಲ್ಲಿ ಸಿಗುತ್ತಿದ್ದವು. ನಿಂಬೇಹುಳಿ ಪೆಪ್ಪರ್ಮೆಂಟ್, ಶುಂಠಿ ಪೆಪ್ಪರ್ಮೆಂಟ್ ಅದು ಬಿಟ್ಟರೆ ಐದು ಪೈಸೆ ನಂತರ್ ಹತ್ತು ಕಡೆಗೆ ಇಪ್ಪತೈದು ಪೈಸೆಯ ಹಸಿರು ಬಣ್ಣದ ಕವರ್ ಸುತ್ತಿದ ಪ್ಯಾರೀಸ್ ಚಾಕ್ಲೇಟ್. ಬಣ್ಣ ಬಣ್ಣದ ಮೈ ಕೈ ಸೋರಿಸಿಕೊಂಡು ತಿನ್ನುತ್ತಿದ್ದ ಲಾಲೀ ಪಪ್, ಎಷ್ಟೇ ಕಷ್ಟ ಪಟ್ಟರೂ ನಮ್ಮ ಹಲ್ಲು ಮುರಿಯಬೇಕೇ ಹೊರತು ತುಂಡಾಗದ ಕಮ್ಮರ್ ಖಟ್, ಮೊದಲಿಗೆ ಐವತ್ತು ಪೈಸಾ, ನಂತರ ಒಂದು ರೂಪಾಯಿ ಕಡೆಗೇ ಐದು ರೂಪಾಯಿಗಳ ತನಕವೂ ಮಾರಾಟವಾದ ಪಾರ್ಲೇ ಪಾಪಿನ್ಸ್ ತಂದು ಕೊಟ್ಟರಂತೂ ನಮ್ಮ ಆನಂದಕ್ಕೆ ಪಾರವೇ ಇರುತ್ತಿರಲಿಲ್ಲ. ಸುಮ್ಮನೆ ಒಂದು ಸಾರಿ ಬಾಯಿ ಹಾಕಿ ಕೊಂಡರೆ ಸಾಕು ಸುಮಾರು ಐದು ಹತ್ತು ನಿಮಿಷಗಳವರೆಗೂ ಬಾಯಿ ಸಿಹಿ ಸಿಹಿ ಮಾಡುತ್ತಾ ಕರಗಿ ಹೋಗುವುದೇ ಗೊತ್ತಾಗುತ್ತಿರಲಿಲ್ಲ. ಅಕಸ್ಮಾತ್ ಇಬ್ಬರಿರುವ ಮನೆಯಲ್ಲಿ ಒಂದೇ ಒಂದು ಪೆಪ್ಪರ್ಮೆಂಟ್ ಕೊಟ್ಟರೆ, ಅದನ್ನು ಅರ್ಧಮಾಡಲು ನೇರವಾಗಿ ಬಾಯಿಗೆ ಹಾಕಿ ಎಂಜಲು ಮಾಡದೆ, ಒಂದು ಟವೆಲ್ ಇಲ್ಲವೇ ನಾವುಗಳೇ ಹಾಕಿಕೊಂಡಿದ್ದ ವಸ್ತ್ರಗಳ ಮಧ್ಯೆ ಆದನ್ನು ಇಟ್ಟು ದವಡೆ ಹಲ್ಲಿನಿಂದ ಕಟುಂ ಎಂದು ತುಂಡರಿಸಿ ಕಾಗೆ ಎಂಜಲು ಮಾಡಿ ಕೊಟ್ಟಿದ್ದೇನೆ. ಇದಕ್ಕೆ ದೋಷವಿಲ್ಲ ಅಂತ ಸಮಜಾಯಿಷಿ ಕೊಡುತ್ತಿದ್ದದ್ದು ನೆನಪಿಗೆ ಬರುತ್ತದೆ.

ದಸರಾ ಹಬ್ಬದ ಗೊಂಬೇ ಬಾಗಣ ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದಲ್ಲಿ ಪೆಪ್ಪರ್ಮೆಂಟ್ ಒಂದು ಸುಲಭವಾದ ಮತ್ತು ಮಕ್ಕಳ ಅಚ್ಚುಮೆಚ್ಚಿನ ಗೊಂಬೇ ಬಾಗಣವಾಗಿರುತ್ತಿತ್ತು. ದಸರಾ ಮತ್ತು ಪೆಪ್ಪರ್ಮೆಂಟ್ ಅಂದಾಗ ಒಂದು ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ ಬೇಕು. ಸುಮಾರು ವರ್ಷಗಳ ಹಿಂದೆ ದಸರಾ ಹಬ್ಬದ ಸಮಯದಲ್ಲಿ ನಮ್ಮ ಮನೆಗೆ ನಮ್ಮ ಅತ್ತೆಯ ಮಕ್ಕಳು ಬಂದಿದ್ದರು. ಸರಿ ಸುಮಾರು ನನ್ನದೇ ವಯಸ್ಸಿನ ಅವರ ಕೊನೆಯ ಮಗಳೂ ಬಂದಿದ್ದಳು. ಹಾಗೆ ಬಂದವರಿಗೆಲ್ಲರಿಗೂ ತಿನ್ನಲು ನಮ್ಮ ತಾಯಿ ಇದೇ ಪೆಪ್ಪರ್ಮೆಂಟನ್ನು ಕೊಟ್ಟರು. ಹಾಗೆ ಕೊಟ್ಟೊಡನೆಯೇ ಎಲ್ಲರೂ ಗಬಕ್ ಎಂದು ಬಾಯಿಗೆ ಹಾಕಿಕೊಂಡು ಚೀಪುತ್ತಾ ಆಗ್ಗಿಂದ್ದಾಗ್ಗೆ ಬಾಯಿಂದ ಕೈಗೆ ಹಾಕಿಕೊಂಡು ಯಾರದ್ದು ಎಷ್ಟು ಕರಗಿದೆ? ಯಾರ ಪೆಪ್ಪರ್ಮೆಂಟ್ ಇನ್ನೂ ಕರಗಿಲ್ಲ ಎಂದು ನೋಡಿಕೊಳ್ಳುತ್ತಾ ಆಟವಾಡುತ್ತಿದ್ದಾಗಲೇ, ಇದ್ದಕ್ಕಿದ್ದಂತೆಯೇ ನಮ್ಮ ಅತ್ತೆಯ ಕಡೆಯ ಮಗಳು ಒಮ್ಮೆಲೆ ಜೋರಾಗಿ ಉಸಿರಾಡುತ್ತಾ ಕಣ್ಣುಗಳನ್ನು ತೇಲಿಸುತ್ತಾ ಒದ್ದಾಡ ತೊಡಗಿದಾಗ, ಗಾಭರಿಯಾಗಿ ನಮ್ಮ ಅಪ್ಪಾ ಅಮ್ಮಂದಿರನ್ನು ಜೋರಾಗಿ ಕರೆದೆವು. ಎಲ್ಲರೂ ಒಕ್ಕೊರಲಿನಿಂದ ಜೋರಾಗಿ ಚೀರಾಡಿದ್ದನ್ನು ಕೇಳಿದ ನಮ್ಮ ತಂದೆ ಬಂದು ನಮ್ಮ ಅತ್ತೆಯ ಮಗಳನ್ನು ನೋಡಿದೊಡನೇ ಒಂದು ಕ್ಷಣ ದಂಗಾಗಿ ಅವರಿಗೂ ಏನಾಗುತ್ತಿದೆ ಎಂದೇ ಗೊತ್ತಾಗಲಿಲ್ಲ. ಅದೇ ಸಮಯಕ್ಕೆ ನಾವುಗಳೆಲ್ಲರೂ ಪೆಪ್ಪರ್ಮೆಂಟ್ ತಿನ್ನುತ್ತಿದ್ದನ್ನು ಗಮನಿಸಿದ ನಮ್ಮ ತಂದೆಯವರು ಕೂಡಲೇ ನಮ್ಮ ಅತ್ತೆಯ ಮಗಳನ್ನು ಎತ್ತಿ ಹಿಡಿದು ತಲೆ ಕೆಳಗಿ ಮಾಡಿ ಬೆನ್ನ ಮೇಲೆ ಮೆದುವಾಗಿ ಗುದ್ದಿದೊಡನೆ ಅವಳ ಗಂಟಲೊಳಗೆ ಸಿಕ್ಕಿಹಾಕಿಕೊಂಡಿದ್ದ ಪೆಪ್ಪರ್ಮೆಂಟ್ ಅವಳ ಬಾಯಿಯಿಂದ ಹೊರಗೆ ಬಿತ್ತು. ಕೂಡಲೇ ಕಿಟಾರ್ ಎಂದು ಕಿರುಚಿದಾಗ, ಸದ್ಯ ಬದುಕಿತು ಬಡ ಜೀವ ಎಂದು ಎಲ್ಲರಿಗೂ ಅನ್ನಿಸಿದರೆ, ಆಕೆ ಮಾತ್ರಾ, ಕೂಡಲೇ, ಆ ನನ್ನ ಪೆಪ್ಪರ್ಮೆಂಟ್ ಅಂತ ಕೆಳಗಿ ಬಿದ್ದಿದ್ದ ಪಪ್ಪರ್ಮೆಂಟನ್ನು ತೆಗೆದು ಬಾಯಿಗೆ ಹಾಕಿಕೊಳ್ಳಲು ಹೋಗಿದ್ದು ಅದನ್ನು ನೋಡಿ ನಮ್ಮ ತಂದೆ ಅವಳನ್ನು ಸಮಾಧಾನ ಪಡಿಸಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ. ಇಂದು ನಮ್ಮ ಅತ್ತೆಯ ಮಗಳಿಗೆ ಮದುವೆಯಾಗಿ, ಮದುವೆಯ ವಯಸ್ಸಿನ ಮಕ್ಕಳಿದ್ದರೂ ಪ್ರತೀ ಬಾರೀ ಆಕೆಯನ್ನು ಭೇಟಿಯಾದಾಗಲೂ, ಏನಮ್ಮಾ ಪೆಪ್ಪರ್ಮೆಂಟ್ ಕೊಡಿಸಲಾ ಅಂತಾ ಗೋಳು ಹೊಯ್ದುಕೊಳ್ಳುವುದನ್ನು ಮಾತ್ರ ಬಿಟ್ಟಿಲ್ಲ.
ನಮ್ಮ ಊರಿನ ರಥೋತ್ಸವ ರಾತ್ರಿ ಇಡೀ ನಡೆಯುತ್ತದೆ ಮತ್ತು ಅಲ್ಲಿ ಸಾವಿರಾರು ಜನ ಸೇರುತ್ತಾರೆ. ಸುಮಾರು ಇಪ್ಪತ್ತು ಇಪ್ಪತೈದು ವರ್ಷಗಳ ಹಿಂದೆ ನಮ್ಮ ಚಿಕ್ಕಪ್ಪ ರಾತ್ರಿ ದೇವರ ಉತ್ಸವಕ್ಕೆ ಬಂದವರಿಗೆಲ್ಲರಿಗೂ ಪಪ್ಪಮ್ಮೆಂಟ್ ಹಂಚುವ ಅಭ್ಯಾಸ ಆರಂಭಿಸಿದರು. ಹದಿನಾಲ್ಕು ವರ್ಷಗಳ ಹಿಂದೆಯೇ ನಮ್ಮ ಚಿಕ್ಕಪ್ಪನವರು ತೀರಿಕೊಂಡರೂ ನಮ್ಮ ತಂದೆ ಅದನ್ನು ಮುಂದುವರಿಸಿಕೊಂಡು ಹೋಗಿ ಈಗ ಎರಡು ವರ್ಷಗಳ ಹಿಂದೆ ನಮ್ಮ ತಂದೆಯವರ ಮರಣಾನಂತರ ಅದು ನಮ್ಮ ಮನೆಯ ಸಂಪ್ರದಾಯವೇನೋ ಎನ್ನುವಂತೆ ನಾವುಗಳು ಅದನ್ನು ಸಂತೋಷದಿಂದ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಈಗ ಸರಿಯಾದ ನಿಂಬೇ ಹುಳಿ ಪೆಪ್ಪರ್ಮೆಂಟ್ ಸಿಗದ ಕಾರಣ ಪೆಪ್ಪರ್ಮೆಂಟ್ ಬದಲಾಗಿ ಮ್ಯಾಂಗೋ ಬೈಟ್ ಇಲ್ಲವೇ ಕಚ್ಚಾ ಮ್ಯಾಂಗೋ ಹಂಚುತ್ತಿದ್ದೇವೆ. ನಮ್ಮೂರಿನ ಹಬ್ಬಕ್ಕೆ ಒಂದು ವಾರಕ್ಕೆ ಮುಂಚೆಯೇ ನಮ್ಮ ತಂದೆಯವರು ಮಗೂ, ಇಲ್ಲೆಲ್ಲಾ ನಿಂಬೇಹುಳಿ ಪೆಪ್ಪರ್ಮೆಂಟ್ ಸಿಗೋದಿಲ್ಲ ಸಿಕ್ಕರೂ ನಮಗೆ ಬೇಕಾದಷ್ಟು ಸಿಗುವುದಿಲ್ಲ. ಹಾಗಾಗಿ ಬಾರೋ ಒಂದು ಅರ್ಧಗಂಟೆ ಯಶವಂತಪುರಕ್ಕೆ ಹೋಗಿ ಪೆಪ್ಪರ್ಮೆಂಟ್ ತೆಗೆದುಕೊಂಡು ಬರೋಣ ಎಂದು ನನ್ನನ್ನು ಕಾಡಿ ಬೇಡಿ ಕರೆದು ಕೊಂಡು ಹೋಗಿ ಪಪ್ಪರ್ಮೆಂಟ್ ಖರೀದಿಸಿ ತಂದು ಅದನ್ನು ಜೋಪಾನವಾಗಿ ಊರಿಗೆ ತೆಗೆದು ಕೊಂಡು ಹೋಗುವ ಚೀಲದಲ್ಲಿ ಹಾಕಿ ರಥೋತ್ಸವದ ದಿನ ತಾವೇ ಖುದ್ದಾಗಿ ಎಲ್ಲರಿಗೂ ಲೋ, ತಗೋಳ್ರೋ ಅಂತಾ ಪ್ರತಿಯೊಬ್ಬರಿಗೂ ಕೊಡುತ್ತಿದ್ದದ್ದು ನೆನಪಿಸಿಕೊಂಡರೆ ಕಣ್ಣಂಚಿನಲ್ಲಿ ನೀರೂರುತ್ತದೆ. ಊರಿನ ಚಿಕ್ಕ ಮಕ್ಕಳಿಗೆಲ್ಲಾ ನಮ್ಮ ತಂದೆ ಪೆಪ್ಪರ್ಮೆಂಟ್ ಐಯ್ಯನೋರೇ ಎಂದು ಪ್ರಖ್ಯಾತಿಯಾಗಿದ್ದರು. ಮನೆಯಲ್ಲಿ ಹಬ್ಬದ ಊಟ ಮಾಡಿ ಬಂದಿದ್ದರೂ, ಆ ಬಾಲ ವೃದ್ಧರಾಗಿ ಸ್ವಾಮೀ… ನನಗೊಂದು ಕೊಡೀ.. ಅಂದರೆ, ರೀ… ನನ್ಗೆಲ್ಲಾ ಒಂದ್ ಸಾಕಾಗಕ್ಕಿಲ್ಲ.. ಎಳ್ಡು ಕೊಡೀ ಎಂದು ಇಂದಿಗೂ ದಬಾಯಿಸಿ ಕೇಳಿ ತೆಗೆದುಕೊಳ್ಳುವುದು ಜನರಿಗೆ ಪಪ್ಪರ್ಮೆಂಟಿನ ಮೇಲಿರುವ ಮಮತೆಯನ್ನು ಎತ್ತಿ ತೋರಿಸುತ್ತದೆ.
ಈಗೆಲ್ಲಾ ಕಾಲ ಬದಲಾಗಿದೆ. ಈಗಿನ ಮಕ್ಕಳು ಸಣ್ನ ಸಣ್ಣ ಚಾಕ್ಲೇಟ್ಗಳನ್ನು ತಿನ್ನುವುದಿರಲೀ, ಮುಟ್ಟಿ ನೋಡುವುದೂ ಇಲ್ಲಾ ಕಣ್ಣೆತ್ತಿಯೂ ನೋಡುವುದಿಲ್ಲ. ಅವರಿಗೆಲ್ಲಾ ದೊಡ್ಡ ದೊಡ್ಡ ಕೋಕೋ ಭರಿತ ಡೈರಿಮಿಲ್ಕ್, ಪರ್ಕ್, ಕಿಟ್ ಕ್ಯಾಟ್, ಮಿಲ್ಕೀ ಬಾರ್, ತರ ತರಹ ಬಣ್ಣದ ರುಚಿ ರುಚಿಯಾದ ವೇಫರ್ಸಗಳನ್ನೇ ಇಷ್ಟ ಪಡುತ್ತಾರೆ. ಈ ಚಾಕ್ಲೆಟ್ ಕಂಪನಿಗಳೂ ಸಹಾ ಆಕರ್ಷಣಿಯವಾದ ಜಾಹೀರಾತಿನ ಮೂಲಕ ಆಬಾಲ ವೃದ್ಧರ ಮನಸ್ಸನ್ನು ಸೆಳೆಯುತ್ತಾ ಜನ ಮರಳೋ ಜಾತ್ರೆ ಮರುಳೋ ಎಂದು ಎಲ್ಲರೂ ಮುಗಿಬಿದ್ದು ದುಬಾರಿ ಚಾಕ್ಲೆಟ್ಗಳನ್ನು ತಿನ್ನುತ್ತಿರುವುದು ಸೋಜಿಗವೇ ಸರಿ. ಹಿಂದಿನ ಕಾಲದ ಯುವಕ/ಯುವತಿಯರ ಗೆಳೆತನ ಗುಲಾಬಿ ಹೂವಿನಲ್ಲಿ ಆರಂಭವಾಗಿ, ಮಲ್ಲಿಗೆ ಹೂವಿನಲ್ಲಿ ಅರಳಿ, ಸುಗಂಧರಾಜ ಹೂವಿನ ಹಾರ ಹಾಕಿಕೊಂಡು ವಿವಾಹ ಬಂಧನದಲ್ಲಿ ಗಟ್ಟಿಯಾಗುತ್ತಿದ್ದರೆ, ಇಂದಿನ ಕಾಲದ ಗೆಳೆತನ ಹೂವಿನ ಬದಲಾಗಿ ದುಬಾರಿ ಚಾಕ್ಲೇಟ್ಗಳಿಂದ ಆರಂಭವಾಗಿ ಚಾಕ್ಲೆಟ್ ತಿಂದು ಮುಗಿಸುವುರೊಳಗೇ ಅಂತ್ಯವಾಗುತ್ತಿರುವುದು ವಿಪರ್ಯಾಸವೇ ಸರಿ. ಈಗ ಎಷ್ಟೇ ಕಾಲ ಬದಲಾಗಿ ದೊಡ್ಡ ದೊಡ್ಡ ಚಾಕ್ಲೇಟ್ಗಳೂ ಬಂದ್ದಿದ್ದರೂ ಅವುಗಳೆಲ್ಲಾ ಕ್ಷಣಿಕ ಎಂಬಂತೆ ಆಗಿಅಂದು ನಾವುಗಳು ಹತ್ತಿಪ್ಪತ್ತು ಪೈಸೆಗಳಲ್ಲಿಯೇ ಹತ್ತಾರು ನಿಮಿಷಗಳ ತನಕ ಚೀಪುತ್ತಿದ್ದ ಪೆಪ್ಪರ್ಮೆಂಟ್ಟುಗಳೇ ಮಹಾನ್ ಎನ್ನಿಸುತ್ತದೆ.
ಏನಂತೀರೀ?
ನೀವು ಸಿಕ್ಕಾಗ ನಿಂಬೆಹುಳಿ ಪೆಪ್ಪರಮೆಂಟು ಕೊಡ್ತೇನೆ, ಹಾಗೇ ಕುವೆಂಪುರವರ ಕವಿತೆ ದೇವರ ಪೆಪ್ಪರಮೆಂಟೇನಮ್ಮ ಗಗನದಿ ಅಲೆವ ಚಂದಿರನು… ಕವನ ನೆನಪಾಯಿತು.
LikeLike
ನಿಂಬೇಹುಳಿ ಪೆಪ್ಪರ್ಮೆಂಟಿಗಾಗಿ ಕಾಯುತ್ತಿರುತ್ತೇನೆ
LikeLike
ಹೌದು. ನಿಂಬೆ ಹುಳಿ ಪೆಪ್ಪರ್ ಮಿಂಟ್ ನೆನಪೇ ಇಂದಿಗೂ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. Good article.
LikeLike
ವ್ಹಾವ್ ಚೆನ್ನಾಗಿ ಮೂಡಿಬಂದಿದೆ ಲೇಖನ. ನನ್ನ ತಾತ ಅವರು ಹೇಳಿದ ಕೆಲಸ ಮಾಡಿದಾಗ ಕೊಡುತ್ತಿದ್ದ ಬಹುಮಾನ ೫ ಪೈಸೆ ( ಆಗಿನ್ನೂ ಚಲಾವಣೆಯಲ್ಲಿತ್ತು) ಅದಕ್ಕೆ ೫ ಸಣ್ಣ ಪಪ್ಪೆರಮೆಂಟ್ ತಗೊಂಡು ತಿನ್ನುತ್ತಾ ಸಂಭ್ರಮಿಸಿದ ಕ್ಷಣಗಳು ಅವಿಸ್ಮರಣೀಯ. ಬೇಸಿಗೆ ರಜೆಯಲ್ಲಿ ಎಲ್ಲಾ ಮೊಮ್ಮಕ್ಕಳು (೨೧) ಸೇರುತ್ತಿದ್ದೆವು ಮತ್ತು ಆ ೫ ಪೈಸೆ ಪಡೆಯಲು ಪೈಪೋಟಿ ನಡೆಯುತ್ತಿತ್ತು. ಬಸ್ಸಿನಲ್ಲಿ ಪಯಣಿಸಿದಾಗ ವಾಂತಿಯಾಗುತ್ತಿದ್ದ ನನಗೆ ಪಾಪಿನ್ಸ್ ಪೆಪ್ಪರ್ ಮಿಂಟೇ ಔಷಧಿ. ಹಿಮಾಲಯ ಗೋಲಿಗಳು, ಪಾನ್ ಚಾಕೊಲೇಟ್ , ಮಿಂಟಿ, ಗುಲ್ಕನ್ ಚಾಕೊಲೇಟ್ ನನ್ನ ನೆಚ್ಚಿನವು.
LikeLike
ಪೆಪ್ಪರ್ ಮಿಂಟ್ ನುಂಗಿದ ಘಟನೆ ಹೆಚ್ಚು ಕಡಿಮೆ ಮರೆತೇ ಹೋಗಿತ್ತು ನನಗೆ, 😂 thank you for sharing such an awesome memory…infact it was a kind of rebirth for me.. ಶಿವಮೂರ್ತಿ ಮಾವನವರ ಸಮಯಪ್ರಜ್ಞೆ ಇಂದ ನಾನು ಅವತ್ತು ಬದುಕಿದೆ ಅನಿಸುತ್ತೆ..🙏
LikeLike
ಪೆಪ್ಪರ್ ಮಿಂಟ್ ನುಂಗಿದ ಘಟನೆ ಹೆಚ್ಚು ಕಡಿಮೆ ಮರೆತೇ ಹೋಗಿತ್ತು ನನಗೆ, 😂 thank you for sharing such an awesome memory…infact it was a kind of rebirth for me.. ಶಿವಮೂರ್ತಿ ಮಾವನವರ ಸಮಯಪ್ರಜ್ಞೆ ಇಂದು ನಾನು ಅವತ್ತು ಬದುಕಿದೆ ಅನಿಸುತ್ತೆ..🙏
LikeLike