ನಾನು ಅಪ್ಪನಾದ ಮಧುರ ಕ್ಷಣ

ಇಷ್ಟು ದಿವಸ ಮೇ ತಿಂಗಳು‌ ಬಂದಿತೆಂದರೆ ಅಂದೊಂದು‌ ರೀತಿಯ ಮಿಶ್ರ ಪ್ರತಿಕ್ರಿಯೆ. ಮೇ ತಿಂಗಳು ವಯಕ್ತಿಕ ಜೀವನದಲ್ಲಿ ಕೋಯಾಪಾಯ ಅರ್ಥಾತ್ ಕಳೆದುಕೊಂಡಿದ್ದು/ಸಿಕ್ಕಿದ ತಿಂಗಳು. ಸುಮಾರು 23 ವರ್ಷಗಳ ಇದೇ ಮೇ ತಿಂಗಳಿನಲ್ಲಿಯೇ  ಅಪ್ಪನಾಗಿ ಭಡ್ತಿ ಪಡೆದಿದ್ದರೆ, 13 ವರ್ಷಗಳ ಹಿಂದೆ ಇದೇ ಮೇ ತಿಂಗಳಾಂತ್ಯದಲ್ಲಿ ಅಮ್ಮನನ್ನ ಕಳೆದುಕೊಂಡು ಭೂಮಿಯನ್ನು ಕಳೆದುಕೊಂಡ ಅನುಭವ. ಅಪ್ಪನನ್ನು ಕಳೆದುಕೊಂಡರೆ ಆಕಾಶ ಕಳೆದುಕೊಂಡಂತೆ ಎಂದರೆ ಅಪ್ಪಾ ಅಮ್ಮನನ್ನು ಕಳೆದುಕೊಂಡರೆ ಅನಾಥವದಂತೆಯೇ ಸರಿ. ಅದರೆ ಈ ಬಾರಿಯ ಮೇ ತಿಂಗಳು ಸ್ವಲ್ಪ ಖುಷಿಯನ್ನು ಹೆಚ್ಚಿಸಿದ್ದು ಅಪ್ಪನಿಂದ ತಾತನಾಗಿ ಭಡ್ತಿಯನ್ನು ಪಡೆದ ತಿಂಗಳಾಗಿದ್ದು ಅದರ ರಸಾನುಭವ ಇದೋ ನಿಮಗಾಗಿ

ಮೇ ತಿಂಗಳಾಂತ್ಯದಲ್ಲಿ ತುಂಬು ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ತೋರಿಸಿ ಎಲ್ಲವೂ ಸರಿಯಾಗಿದೆ. ಇನ್ನು ಒಂದೆರಡು ವಾರಗಳಲ್ಲಿ ಪ್ರಸವವಾಗಬಹುದು ಎಂದಾಗ ಖುಷಿಯಿಂದ ಹೊಟ್ಟೇ ತುಂಬಾ ಚಾಟ್ಸ್ ತಿನ್ನಿಸಿ ನನ್ನಾಕೆಯನ್ನು ಅವಳ ತಾಯಿಯ ಮನೆಗೆ ಬಿಟ್ಟು ಬಂದಿದ್ದೆ. ಅಂದು ಮೇ 21, 2000ನೇ ಇಸವಿಯ ವೈಶಾಖ ಬಹುಳ ಚತುರ್ಥಿ. ಅರ್ಥಾತ್ ಸಂಕಷ್ಟಹರ ಚತುರ್ಥಿ. ಬೆಳ್ಳಂ ಬೆಳಿಗ್ಗೆಯೇ ನಮ್ಮ ತಂದೆ ತಾಯಿ, ಸೋದರ ಮಾವ ಮತ್ತು ಚಿಕ್ಕಂಮ್ಮಂದಿರು ಮೇಲುಕೋಟೆಗೆ ಹೋಗುವವರಿದ್ದರು. ಹಾಗಾಗಿ ಅವರು ಮಾಡಿಟ್ಟಿದ್ದ ಬಿಸಿ ಬಿಸಿ ಇಡ್ಲಿಯನ್ನು ಅದಾಗಲೇ ತವರು ಮನೆಗೆ ಚೊಚ್ಚಲ ಬಾಣಂತನಕ್ಕೆ ಹೋಗಿದ್ದ ಮಡದಿಗೆ ತೆಗೆದುಕೊಂಡು ಕೊಟ್ಟು ಆಕೆಯೊಂದಿಗೆ ಇಡ್ಲಿಯನ್ನು ಸವಿಯುತ್ತಿದ್ದಾಗ, ಇದ್ದಕ್ಕಿದ್ದಂತೆಯೇ,ನಮ್ಮಾಕಿ ರೀ.. ಯಾಕೋ ಹೊಟ್ಟೆ ಕಲ್ಲಾಗುತ್ತಿದೆ ಎಂದಾಗ, ಕೂಡಲೇ ವೈದ್ಯರಿಗೆ ಕರೆ ಮಾಡಿ ಅವರ ಸಲಹೆಯಂತೆ ಪರೀಕ್ಷೆ ಮಾಡಿಸಲು ಆಸ್ಪತ್ರೆಗೆ ಕರೆಕೊಂಡು ಹೋಗಲು ಸಿದ್ಧವಾಗಿ, ತುಂಬಿದ ಬಸುರಿಯನ್ನು ನನ್ನ ಬಜಾಜ್ ಸ್ಕೂಟರಿನಲ್ಲಿಯೇ ಕೂರಿಸಿಕೊಂಡು ಆಸ್ಪತ್ರೆಗೆ ಹೊಗುವ ಮಾರ್ಗದ ಮಧ್ಯದಲ್ಲಿಯೇ ಇದ್ದ ಗಣಪತಿ ದೇವಸ್ಥಾನಕ್ಕೆ ಹೋಗಿ ಸಂಕಷ್ಟಿಯಂದು ದೇವರಿಗೆ ನಮಸ್ಕರಿಸಿ ದೇವಸ್ಥಾನದಲ್ಲಿಯೇ ಸಿಕ್ಕ ನನ್ನಾಕಿಯ ಸಹೋದ್ಯೋಗಿಯವರನ್ನೂ ಮಾತನಾಡಿಸಿ ಆರಾಮವಾಗಿ ಮೂರನೇ ಮಡಡಿಯಲ್ಲಿದ್ದ ಆಸ್ಪತ್ರೆಗೆ ಮೆಟ್ಟಿಲು ಹತ್ತಿಸಿಕೊಂಡೇ ಕರೆದು ಕೊಂಡು ಹೋಗಿದ್ದೆ. ಸ್ವಲ್ಪ ಸಮಯದ ನಂತರ ವೈದ್ಯರು ಬಂದು ಪರೀಕ್ಷಿಸಿ ನೋಡಿ ಇದೇಲ್ಲಾ ಫಾಲ್ಸ್ ಪೇಯ್ನ್. ಕೆಲವರಿಗೆ ಹೀಗೆ ಆಗುವುದು ಸಹಜ. ಸಂಜೆವರೆಗೂ ಇಲ್ಲಿಯೇ ಇರಲಿ ಆಮೇಲೆ ನೋಡೋಣ ಎಂದರು. ಸರಿ ಎಂದು ನಮ್ಮ ಅತ್ತೆ ಮತ್ತು ನನ್ನ ತಂಗಿಯನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು, ಅತ್ತೆಯವರ ಬಳಿ ನನ್ನ ಮೊಬೈಲ್ ಕೊಟ್ಟು , ಏನಾದರೂ ಬೇಕಿದ್ದಲ್ಲಿ ಕರೆ ಮಾಡಿ ಎಂದು ಹೇಳಿ ನಾನೂ ಮತ್ತು ನಮ್ಮ ಮಾವನವರು ಮನೆಗೆ ಬಂದು ಮನೆಯಲ್ಲಿದ್ದ ಅಜ್ಜಿ ಮತ್ತು ನನ್ನ ತಂಗಿಯ ಮಗಳೊಂದಿಗೆ ಸೇರದಿದ್ದರೂ ಸ್ವಲ್ಪ ಊಟ ಮಾಡಿ ಆಟವಾಡುತ್ತಿದ್ದೆ. ಹಾಗೆಯೇ ದೇವಾಲಯಗಳಿಗೆ ನಮ್ಮ ಮಾವ ಮತ್ತು ಚಿಕ್ಕಮ್ಮಂದಿರ ಕುಟುಂಬಗಳೊಡನೆ ಹೋಗಿದ್ದ ತಂದೆ ತಾಯಿರಿಗೂ ಮಡದಿಯನ್ನು ಆಸ್ಪತ್ರೆಗೆ ಸೇರಿಸಿದ್ದ ವಿಷಯ ತಿಳಿಸಿದ್ದೆ.

ಸ್ವಲ್ಪ ಸಮಯದ ನಂತರ ಸಂಜೆ ಇದ್ದಕ್ಕಿದ್ದಂತೆಯೇ ನನ್ನ ಮನಸ್ಸಿಗೆ ಅದೇಕೋ ಏನೋ ಒಂದು ತರಹದ ಕಸಿವಿಸಿಯಾಗಿ ಕೂಡಲೇ ನನ್ನ ಮೊಬೈಲ್ಗೆ ಕರೆ ಮಾಡಿ, ಮಮತ ಹೇಗಿದ್ದಾಳೆ? ಎಂದು ನಮ್ಮ ಅತ್ತೆಯವರನ್ನು ಕೇಳುವಷ್ಟರಲ್ಲಿಯೇ, ನಮ್ಮ ಅತ್ತೆಯವರೂ ಅಯ್ಯೋ ಐದು ನಿಮಿಷಗಳ ಹಿಂದೆ ನಿಮಗೆ ಮಗಳು ಹುಟ್ಟಿದ್ದಾಳೆ. ಗಾಬರಿಯಲ್ಲಿ ನಿಮಗೆ ಕರೆ ಮಾಡುವುದನ್ನೇ ಮರೆತು ಬಿಟ್ಟೆವು ಎಂದಾಗ, ಒಂದು ಕಡೆ ಸಂತೋಷ ಮತ್ತೊಂದು ಕಡೆ ಅತ್ತೆಯವರ ಮೇಲೆ ತುಸು ಕೋಪ ಬಂದಿತಾದರೂ, ಸಾವರಿಸಿಕೊಂಡು ಕೂಡಲೇ ಆಸ್ಪತ್ರೆಗೆ ಹೋದಾಗ ನನ್ನ ತಂಗಿ ಮುದ್ದು ಮುದ್ದಾಗಿ, ಕೆಂಪಾಗಿದ್ದ ನಮ್ಮ ಮಗಳನ್ನು ಟವೆಲ್ನಲ್ಲಿ ಸುತ್ತಿ ನನ್ನ ಕೈಗಿತ್ತಾಗ ಮತ್ತು ಪ್ರಸವದಿಂದ ಬಳಲಿದ್ದ ಮಡದಿಯನ್ನೂ ನೋಡಿದಾಗ ನೆತ್ತಿಗೇರಿದ್ದ ಕೋಪವೆಲ್ಲವೂ ಜರ್ ಎಂದು ಇಳಿದು ಹೋಗಿತ್ತು. ಹೀಗೆ ಇನ್ನೂ ಚಿಕ್ಕ ವಯಸ್ಸಿನ ಹುಡುಗ ಎಂದು ಕೊಂಡಿದ್ದ ನನಗೆ ಜೀವನದಲ್ಲಿ ಮೊದಲ ಬಾರಿಗೆ ಅಪ್ಪನಾಗಿ ಭಡ್ತಿ ದೊರಕಿಯೇ ಬಿಟ್ಟಿತು

ಮಧ್ಯಾಹ್ನ ಆಸ್ಪತ್ರೆಯಿಂದ ನಾವು ಹೊರಡುವಾಗಲೂ ಚೆನ್ನಾಗಿಯೇ ಮಾತನಾಡಿಕೊಂಡು ಇದ್ದ ನನ್ನ ಮಡದಿ ನಾವು ಮನೆಗೆ ಹೋದ ಸ್ವಲ್ಪ ಹೊತ್ತಿನಲ್ಲಿಯೇ ಅವಳಿಗೆ ಹೆರಿಗೆಯ ನೋವು ಶುರುವಾಗಿದೆ. ಕೂಡಲೇ ಆಸ್ಪತ್ರೆಯಲ್ಲಿದ್ದ ಕಲಿಕೆಯ ಡಾಕ್ಟರ್ (ಆಕೆ ನನ್ನ ಗೆಳೆಯನ ತಂಗಿ) ವೈದ್ಯರಿಗೆ ಕರೆ ಮಾಡಿ ನನ್ನಾಕೆಯನ್ನು ಹೆರಿಗೆಯ ವಾರ್ಡಿಗೆ ಕರೆದುಕೊಂಡು ಹೋಗಿ ಹಿರಿಯ ವೈದ್ಯರು ಬರುವಷ್ಟರಲ್ಲಿಯೇ ನನ್ನ ಗೆಳೆಯನ ತಂಗಿಯೇ ನನ್ನ ಮಡದಿಗೆ ಸಹಜ ಪ್ರಸವವನ್ನು ಮಾಡಿಸಿದ್ದಳು.

ಕೂಡಲೇ Y2K babyಯಾಗಿ ಮನೆಗೆ ಬಂದ ಮಹಾಲಕ್ಷ್ಮಿಯ ವಿಷಯವನ್ನು ನಮ್ಮ ತಂದೆ ತಾಯಿಯರಿಗೆ ತಿಳಿಸುವ ಮನಸ್ಸಾದರೂ ಅವರು ಯಾವುದಾದರೂ ದೇವಾಲಯದಲ್ಲಿದ್ದರೆ ಪುರುಡಾಗುವುದೆಂಬ ಕಾರಣದಿಂದ ಗಟ್ಟಿ ಮನಸ್ಸು ಮಾಡಿ ಕೊಂಡು ತಿಳಿಸದೆ, ಅವರನ್ನು ಬಿಟ್ಟು ಉಳಿದೆಲ್ಲಾ ನೆಂಟರಿಷ್ಟರಿಗೂ ಮತ್ತು ನನ್ನ ನೆಚ್ಚಿನ ಸ್ನೇಹಿತರಿಗೂ ಕರೆ ಮಾಡಿ ನಾನು ಅಪ್ಪನಾದ ಹೆಮ್ಮೆಯ ವಿಷಯವನ್ನು ತಿಳಿಸಿದ್ದೆ. ಹಾಗೆ ವಿಷಯ ತಿಳಿದ ಸ್ವಲ್ಪಹೊತ್ತಿನಲ್ಲಿಯೇ ತಂಡೋಪ ತಂಡದಲ್ಲಿ ನಮ್ಮ ಮಗಳನ್ನು ನೋಡಲು ಬಂದವರನ್ನು ಕಂಡು ಕೂಡಲೇ ಹತ್ತಿರದ ಸ್ವೀಟ್ ಸ್ಟಾಲ್ನಿಂದ ಸಿಹಿ ತಂದು ಎಲ್ಲರಿಗೂ ಹಂಚಿದ ನೆನಪು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ರಾತ್ರಿ ಸುಮಾರು ಹತ್ತು ಗಂಟೆಗೆ ಮನೆಗೆ ಬಂದ ತಂದೆ ತಾಯಿ ವಿಷಯ ತಿಳಿದ ಕೂಡಲೇ ಅಷ್ಟು ಹೊತ್ತಿನಲ್ಲಿಯೇ ಆಸ್ಪತ್ರೆಗೆ ಬಂದು ತಮ್ಮ ಮೊಮ್ಮಗಳನ್ನು ಎತ್ತಿ ಮುದ್ದಾಡಿದ್ದ ಸಂಭ್ರಮದ ಕ್ಷಣ ಇನ್ನು ಕಣ್ಣ ಮುಂದೆಯೇ ಇದೆ.

WhatsApp Image 2023-05-21 at 11.55.31ಹನ್ನೆರಡನೆಯ ದಿನ ಎಲ್ಲಾ ಗುರು ಹಿರಿಯರ ಸಮ್ಮುಖದಲ್ಲಿ ಸೃಷ್ಟಿ ಎಂದು ನಾಮಕರಣ ಮಾಡಿಸಿಕೊಂಡ ಅಂದಿನ ನಮ್ಮ ಮನೆಯ ಪುಟ್ಟಗೌರಿಯೇ ಇಂದು ದೊಡ್ಡವಳಾಗಿ ನನ್ನನ್ನು ಆತ್ಮೀಯವಾಗಿ ತಿದ್ದುವ ಮತ್ತು ನನ್ನ ಎಲ್ಲಾ ಕಾರ್ಯಗಳನ್ನು ಸರಿಯಾಗಿ ವಿಮರ್ಶಿಸುವ ಆಪ್ತ ವಿಮರ್ಶಕಿ. ಅಪ್ಪ ನೀವು ತಪ್ಪು ತಪ್ಪಾಗಿ ಮಾತನಾಡುತ್ತಿದ್ದೀರಿ. ಅಪ್ಪಾ ಹಾಗೆ ಮಾತನಾಡಬಾರದಾಗಿತ್ತು. ಅಪ್ಪಾ ನೀವು ದಪ್ಪಗಾಗಿದ್ದೀರಿ, ಸ್ವಲ್ಪ ಸಣ್ಣಗಾಗಿ. ಅಪ್ಪಾ ನಿಮ್ಮ ಮೀಸೆ ಟ್ರಿಮ್ ಮಾಡಿ. ಫ್ರೆಂಚ್ ಗಡ್ಡ ನಿಮಗೆ ಚೆನ್ನಾಗಿ ಒಪ್ಪುತ್ತದೆ ಅದನ್ನೇ ಬಿಡಿ ಎಂದು ಹೀಗೆ ಹಾಗೆ ಹೇಳುತ್ತಾ ನನ್ನ ನಡಾವಳಿ, ನಾನು ಹಾಕುವ ಬಟ್ಟೆ, ನಾನು ತಿನ್ನುವ ಆಹಾರ ಎಲ್ಲದರ ಮೇಲೂ ಹದ್ದಿನ ರೀತಿಯಲ್ಲಿ ಕಣ್ಣಿಟ್ಟು ತನ್ನ ಅಪ್ಪನ್ನನ್ನು ಕಣ್ಣುಗಳ ರೆಪ್ಪೆಯಂತೆ ತನ್ನ ತಾಯಿಯೊಂದಿಗೆ ಜತನದಿಂದ ಕಾಯುತ್ತಿದ್ದಾಳೆ ನನ್ನ ಮಗಳು. ದೊಡ್ಡವಳಾಗುತ್ತಾ ಹೋದಂತೆಲ್ಲಾ, ಥೇಟ್ ತನ್ನ ಉಮಾ ಅಜ್ಜಿಯ ಅಜಮಾಸು ಎತ್ತರ ಮತ್ತು ಬಹತೇಕ ಅವರದ್ದೇ ಸ್ವಭಾವವೂ ರೂಢಿಯಾಗಿರುವುದರಿಂದ ಅಮ್ಮನನ್ನು ಕಳೆದು ಕೊಂಡಿದ್ದ ನನಗೆ ಮಗಳ ರೂಪದಲ್ಲಿಯೇ ಅಮ್ಮ ಮೈದಾಳಿದ್ದಾರೆ ಎಂದೇ ನನ್ನ ನಂಬಿಕೆಯಾಗಿದೆ. ಮೂರು ವರ್ಷಗಳ ನಂತರ ನನ್ನ ಮಗ ಸಾಗರ್ ಜನಿಸಿ (ಆ ರೋಚಕ ಅನುಭವವನ್ನು ಮುಂದೆ ಎಂದಾದರೂ ಹಂಚಿಕೊಳ್ಳುತ್ತೇನೆ) ನನ್ನ ತಂದೆ ತನದ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದನಾದರೂ ಮೊಟ್ಟ ಮೊದಲ ಬಾರಿಗೆ ತಂದೆಯಾದ ಕ್ಷಣ ಅದ್ಭುತ, ಅವರ್ಣನೀಯ ಮತ್ತು ಅನುಭವಿಸಿಯೇ ತೀರಬೇಕಾದ ಆನಂದವದು.

WhatsApp Image 2023-05-21 at 11.55.26ಹೀಗೆ 23 ವರ್ಷಗಳ ಹಿಂದೆ ಸೃಷ್ಟಿ, ಈ ಭೂಲೋಕದಲ್ಲಿ ಸೃಷ್ಟಿಸಿ, ಅವಳ ಸೃಷ್ಟಿಕರ್ತರಿಗೆ ಹೆಮ್ಮೆಯನ್ನು ತಂದ ದಿನವಾಗಿದ್ದರೆ,   ಮೊನ್ನೆ ಶುಕ್ರವಾರ ಮಗಳು ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ ಪದವಿಯ  ಐದೂ ವರ್ಷಗಳನ್ನೂ ಯಶಸ್ವಿಯಾಗಿ ಉನ್ನತ ದರ್ಜೆಯಲ್ಲಿಯೇ ಮುಗಿಸಿ ಅಧಿಕೃತವಾಗಿ Ar. Srushti B S ಆಗಿರುವುದು ನಿಜಕ್ಕೂ ನಮ್ಮ ಜೀವನದ ಸಾರ್ಥಕ ಕ್ಷಣಗಳು ಎನಿಸಿಕೊಳ್ಳುತ್ತವೆ. ಹೇಗೆ 5 ವರ್ಷಗಳ ಕಾಲ Doctor ಓದಿನ ನಂತರ Dr. ಎಂದು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳುತ್ತಾರೋ ಹಾಗೆಯೇ, 5 ವರ್ಷಗಳ ಕಾಲ Architecture ಓದಿ ಮುಗಿಸಿದವರು Ar. ಎಂದು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳಬಹುದಾಗಿದೆ ಅಂದು ನಾವು ಓದುವಾಗ ಬುದ್ಧಿ ಇದ್ದರೂ ವಿವಿಧ ಕಾರಣಗಳಿಂದಾಗಿ ಹೆಚ್ಚಿನ ವ್ಯಾಸಂಗ ಮಾಡದೇ ಹೋದರೂ, ಆ ಕೊರತೆಯನ್ನು ಮಕ್ಕಳು ತೀರಿಸಿದಾಗ, ನಾನು ಮತ್ತು ನನ್ನಾಕಿ We are the Architecture for an Architect ಎಂದು ಹೆಮ್ಮೆಯಿಂದ ಹೇಳಿಕೊಳ್ಳ ಬಹುದಾದಂತಹ ಆನಂದ ನಿಜಕ್ಕೂ ಅದ್ದುತ ಮತ್ತು ಅನುಭವಿಸಲೇ ಬೇಕಾದ ಸಂಗತಿ.  ಮುಂದೆ ನಮ್ಮ ಮಗಳು  ಸಾವಿರಾರು ವಿನೂತನ ಶೈಲಿಯ ಕಟ್ಟಡಗಳ ವಿನ್ಯಾಸದ ಸೃಷ್ಟಿಕರ್ತೆಯಾಗಲಿ ಎನ್ನುವುದೇ ನಮ್ಮೆಲ್ಲರ ಆಶಯವಾಗಿದೆ.

ಓದಿನ ಜೊತೆಗೆ ವಂಶಪಾರಂಪರ್ಯವಾಗಿ ಮತ್ತಾತನಿಂದ ಬಳುವಳಿಯಾಗಿ ಬಂದ ಸಂಗೀತ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಾ, ಕರ್ನಾಟಕ ಶಾಸ್ತ್ರೀಯ ಸಂಗೀತ, ವಯೊಲಿನ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆಗಳನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಸದ್ಯ ತನ್ನಕ್ಕ ವಿದುಷಿ ಸಿಂಧು ನಂದಕಿಶೋರ್ ಬಳಿಯಲ್ಲೇ ಭರತನಾಟ್ಯದಲ್ಲಿ ಸೀನಿಯರ್ ಮತ್ತು ಖ್ಯಾತ ಚಲನಚಿತ್ರ ಚಿತ್ರ ಸಂಗೀತ ನಿರ್ದೇಶಕ ರಘು ಧನ್ವಂತರಿ ಅವರ ಬಳಿ ಗಿಟಾರ್ ಮತ್ತು ಯುಕಿಲೇಲೇ ಆಭ್ಯಾಸ ಮಾಡುತ್ತಿದ್ದಾಳೆ. ಸಂಗೀತದ ಜೊತೆ ಮಂಡಲ ಆರ್ಟ್ಸ್ ಕಲೆಯಲ್ಲೂ ಪ್ರಾವೀಣ್ಯತೆಯನ್ನು ಪಡೆದಿರುವ ಸೃಷ್ಟಿ, ಅದಲ್ಲಿ ನೂರಾರು ಚಿತ್ರ ವಿಚಿತ್ರಗಳನ್ನು ಬಿಡಿಸುವುದ ಜೊತೆಗೆ ತನ್ನ ಕಲಾಪ್ರೌಢಿಮೆಯನ್ನು ಗುರುಗಳ ಸಮ್ಮುಖದಲ್ಲಿ ವಿವಿಧ ರಂಗಸ್ಥಳಗಳಲ್ಲಿ ಪ್ರದರ್ಶನದ ಮಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಮ್ಮ ಪುಟ್ಟಿ, ಸೃಷ್ಟಿಗೆ ಸಹೃದಯೀ ಹಿತೈಷಿಗಳಾದ ನಿಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಇರಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.

WhatsApp Image 2023-05-20 at 10.27.17ಇನ್ನು ಕಳೆದ ವಾರ ನಮ್ಮ ಕುಟಂಬದಲ್ಲಿ ಮತ್ತೊಂದು ವಿಶೇಷ ಅತಿಥಿ ಆಗಮನವಾಗಿದೆ. ನನ್ನ ಜೀವಿತಾವಧಿಯಲ್ಲಿ 106 ವರ್ಷಗಳ ಕಾಲ ಜೀವಿಸಿದ್ದ ಮತ್ತಜ್ಜಿ ನರಸಮ್ಮ, 98 ವರ್ಷಗಳ ಜೀವಿಸಿದ್ದ ಅಜ್ಜಿ ಚನ್ನಮ್ಮ, 65 ವರ್ಷಗಳ ಕಾಲವಿದ್ದ ಅಮ್ಮಾ ಉಮಾ, 50ರ ಆಸುಪಾಸಿನ ತಂಗಿ ಲಕ್ಷ್ಮೀ ಆನಂದ್, 28ರ ಪ್ರಾಯದ ಸೋದರ ಸೊಸೆ ಐಶ್ವರ್ಯ ಚೇತನ್ ಮೊನ್ನೇ ಮೇ  14ನೇ ತಾರೀಖು ಆರೋಗ್ಯವಂತ ಹೆಣ್ಣು ಮಗಳಿಗೆ ಜನ್ಮ ನೀಡುವ ಮೂಲಕ, ನನ್ನ ಜೀವಿತಾವಧಿಯಲ್ಲಿ 6 ತಲೆಮಾರುಗಳನ್ನು ನೋಡುವ ಸುವರ್ಣಾವಕಾಶವನ್ನು ಒದಗಿಸಿದ್ದಲ್ಲದೇ, ಅಧಿಕೃತವಾಗಿ ನನಗೆ ತಾತನಾಗಿ ಭಡ್ತಿಯನ್ನು ನೀಡಿದ್ದಾಳೆ. ಇನ್ನೂ ಕುತೂಹಲಕಾರಿ ವಿಷಯವೆಂದರೆ, ಅಮ್ಮಾ ಮಾರ್ಚ್ 8, ವಿಶ್ವ ಹೆಣ್ಣು ಮಕ್ಕಳ ದಿನದಂದು ಹುಟ್ಟಿದ್ದರೆ, ಮಗಳು ವಿಶ್ವ ಅಮ್ಮಂದಿರ ದಿನದಂದು ಹುಟ್ಟಿರುವುದು ಗಮನಾರ್ಹವಾಗಿದೆ. ಕಾಕತಾಳೀಯವೆಂದರೆ, ಈ ಅಮ್ಮಾ ಮತ್ತು ಮಗಳು ಇಬ್ಬರು ಸಹಾ ಹುಟ್ಟಿದ ಕೂಡಲೇ ನೇರವಾಗಿ ನಮ್ಮ ಕೈ ಸೇರದೇ, ಹೆಚ್ಚಿನ ಚಿಕಿತ್ಸೆಗಾಗಿ incubation ನಲ್ಲಿ ಇಟ್ಟಿದ್ದ ಕಾರಣ ಅಮ್ಮನನ್ನು ಎರಡು ದಿನಗಳಾದ ನಂತರ ನೋಡಿದರೆ, ಇನ್ನು ನಾನು ಕೆಲಸದ ನಿಮಿತ್ತ ಹೊರರಾಜ್ಯಕ್ಕೆ ಹೋದ ಪರಿಣಾಮ 5 ದಿನಗಳಾದ ನಂತರ ಖುದ್ದಾಗಿ ನೋಡುವ ಅವಕಾಶ ಸಿಕ್ಕಿದೆ.

ಕೇವಲ ಮಕ್ಕಳಿಗೆ ಜನ್ಮ ನೀಡಿ ತಂದೆ ತಾಯಿಯರಾಗುವುದು ಹೆಚ್ಚಲ್ಲ. ಮಕ್ಕಳಿಗೆ ಒಳ್ಳೆಯ ವಿದ್ಯೆಯ ಜೊತೆಗೆ ವಿನಯ, ವಿವೇಕ, ಸನ್ನಡತೆಯನ್ನು ಕಲಿಸಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಿ ನಾಡು, ನುಡಿ, ದೇಶ ಮತ್ತು ಧರ್ಮದ ಘನತೆ ಮತ್ತು ಗೌರವವನ್ನು ಎತ್ತಿಹಿಡಿಯುಂತೆ ಮಾಡಿದಾಗಲೇ ಜನ್ಮದಾತರಿಗೆ ಸಾರ್ಥಕತೆ ದೊರೆಯುತ್ತದೆ.

ಈ ಹಿಂದೆ ನನ್ನ ಲೇಖನದ ಕೆಳಗೆ  ಏನಂತೀರೀ? ಎಂದು ಮುಗಿಸಿಸುತ್ತಿದ್ದವನು ಕಳೆದ ಎರಡು ವರ್ಷಗಳಿಂದ ನಿಮ್ಮವನೇ ಉಮಾಸುತ ಎಂದು ಬರೆದುಕೊಳ್ಳುತ್ತಿದ್ದೆ. ಇತ್ತೀಚೆಗೆ ಗಮನಿಸಿದರೆ ಸೃಷ್ಟಿಕರ್ತ ಉಮಾಸುತ ಎಂದು ಬರೆಯುವುದನ್ನು ಕಂಡು ಹೀಗೇಕೆ ಪದೇ ಪದೇ ಬದಲಾವಣೆ? ಎಂದು ಅನೇಕರು ಕೇಳುತ್ತಿದ್ದರು. ಉಮಾ ಎನ್ನುವುದು ನನಗೆ ಜನ್ಮ ನೀಡಿದ ಪ್ರೀತಿಯ ಅಮ್ಮನ ಹೆಸರಾದರೆ, ಸೃಷ್ಟಿ ನನ್ನ ಅಮ್ಮನ ಅಪರಾವತಾರವೇ ಆಗಿರುವ ಮುದ್ದಿನ ಮಗಳ ಹೆಸರು. ಉಮಾ ನನಗೆ ಜನ್ಮದಾತೆ, ನಾನು ಸೃಷ್ಟಿಯ ಜನ್ಮದಾತನಾಗಿರುವ ಕಾರಣ, ಅವರಿಬ್ಬರೂ ನನ್ನ ಜೀವನದ ಅವಿಭಾಜ್ಯ ಅಂಗ. ಅವರಿಬ್ಬರನ್ನೂ ಸದಾಕಾಲವೂ ನೆನಪಿಸಿಕೊಳ್ಳುವ ಸಲುವಾಗಿಯೇ ಈ ಸೃಷ್ಟಿಕರ್ತ ಉಮಾಸುತ ಎಂಬುದನ್ನು ಬರೆಯಲು ಆರಂಭಿಸಿದ್ದೇನೆ. ಉಮಾಳ ಮಗನಾಗಿ ಉಮಾಸುತ ಎನ್ನುವುದು ಬಂದಿದ್ದರೆ, ಸೃಷ್ಟಿಕರ್ತ ಎನ್ನುವುದು, ಒಂದು ರೀತಿಯಲ್ಲಿ ಲೇಖನದ ಬರಹಗಾರ ಎಂಬರ್ಥವಾದರೆ, ಇನ್ನು ನಿಜ ಜೀವನದಲ್ಲಿ ಸೃಷ್ಟಿಯ ಜನ್ಮದಾತದಾತನಾಗಿ ಅರ್ಹನಾಗಿದ್ದೇನೆ ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.

ಏನಂತೀರೀ?
ಸೃಷ್ಟಿಕರ್ತ ಉಮಾಸುತ

11 thoughts on “ನಾನು ಅಪ್ಪನಾದ ಮಧುರ ಕ್ಷಣ

 1. Sristi has given a new dimension in your life! The bonding between both of you is very good. May God strengthen your bond further in a most cherished manner. The article is good.

  Like

 2. Aristotle has given a new dimension in your life. Both of you share a very good bond. May God Bless you & your family with his choicest Blessings. The article is good.

  Like

 3. ಅಪ್ಪನಾಗುವ ಆನಂದ ….ನಂತರ
  ಮಗು ಅಪ್ಪಾ ಎಂದು ಕರೆದಾಗ ಆಗುವ ಆನಂದ
  ವರ್ಣಿಸಲು ಪದಗಳು ಸಿಗದು …..

  Liked by 1 person

  1. ನಮ್ಮ ಮಗಳ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು

   ನಿಮ್ಮೆಲ್ಲರ ಶುಭಹಾರೈಕೆಗಳೇ ನಮಗೆ ಶ್ರೀರಕ್ಷೆ. 🙏🙏🙏🙏

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s