ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ, ತಿಥಿ, ನಕ್ಷತ್ರ, ಪುರಾಣಕಥೆ ಮತ್ತು ಆಚರಣಾ ವೈಶಿಷ್ಟ್ಯವಿದೆ. ಕೆಲವು ಹಬ್ಬಗಳು ನಿರ್ದಿಷ್ಟ ತಿಥಿಯಂದು ಬಂದರೆ, ಕೆಲವು ನಿರ್ದಿಷ್ಟ ನಕ್ಷತ್ರದಂದು ಆಚರಿಸಲ್ಪಡುತ್ತವೆ. ಆದರೆ ಶ್ರಾವಣ ಮಾಸದಲ್ಲಿ ನಾಗರ ಪಂಚಮಿಯ ನಂತರ, ಶ್ರಾವಣ ಪೌರ್ಣಮಿಗೂ ಮುನ್ನ ಬರುವ ಶುಕ್ರವಾರದಂದು ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬಕ್ಕೆ ತನ್ನದೇ ಆದ ವಿಶಿಷ್ಟ ಸ್ಥಾನವಿದೆ. ಶ್ರಾವಣ ಮಾಸವೆಂದರೆ ಹಬ್ಬಗಳ ಮಾಸ. ನಾಗರ ಪಂಚಮಿ, ಸಿರಿಯಾಳ ಷಷ್ಠಿ, ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ ಸೇರಿದಂತೆ ಅನೇಕ ಆಚರಣೆಗಳು ಈ ಪವಿತ್ರ ಮಾಸವನ್ನು ಮತ್ತಷ್ಟು ವಿಶೇಷವಾಗಿಸುತ್ತವೆ. “ವರಮಹಾಲಕ್ಷ್ಮಿ” ಎಂದರೆ ವರಗಳನ್ನು ಕರುಣಿಸುವ ಮಹಾಲಕ್ಷ್ಮಿ. ಸುಖ, ಸೌಭಾಗ್ಯ, ಸಂಪತ್ತು, ಆರೋಗ್ಯ, ಸಂತಾನ, ಧಾನ್ಯ, ವಿಜಯ ಮತ್ತು ನೆಮ್ಮದಿಯನ್ನು ಕರುಣಿಸುವ ದೇವತೆಯಾಗಿ ಮಹಾಲಕ್ಷ್ಮಿಯನ್ನು ಭಾರತೀಯ ಸಂಪ್ರದಾಯದಲ್ಲಿ ಆರಾಧಿಸಲಾಗುತ್ತದೆ.
ವಿದ್ಯೆಗೆ ಬ್ರಹ್ಮನ ಪತ್ನಿಯಾದ ಸರಸ್ವತಿ ಅಧಿದೇವತೆಯಾದರೆ, ಸಂಪತ್ತು ಮತ್ತು ಸೌಭಾಗ್ಯಕ್ಕೆ ಮಹಾವಿಷ್ಣುವಿನ ಪತ್ನಿಯಾದ ಮಹಾಲಕ್ಷ್ಮಿಯೇ ಅಧಿದೇವತೆ ಎಂಬ ನಂಬಿಕೆ ಇದೆ. ಆದ್ದರಿಂದಲೇ “ಲಕ್ಷ್ಮಿ ಒಲಿದರೆ ಬದುಕು ಹಸನಾಗುತ್ತದೆ” ಎಂಬ ಮಾತು ಜನಮಾನಸದಲ್ಲಿ ಗಾಢವಾಗಿ ಬೇರೂರಿದೆ. ಆದರೆ ಈ ಹಬ್ಬದ ನಿಜವಾದ ಸಂದೇಶ ಕೇವಲ ಹಣ-ಸಂಪತ್ತಿನ ಬಗ್ಗೆ ಅಲ್ಲ. ಮನೆಯಲ್ಲಿರುವ ಸಂತೋಷ, ಆರೋಗ್ಯ, ಸೌಹಾರ್ದ, ಪರಸ್ಪರ ಪ್ರೀತಿ ಮತ್ತು ಧಾರ್ಮಿಕ ನಂಬಿಕೆಯೂ ಕೂಡ ನಿಜವಾದ ಸಂಪತ್ತೇ ಎಂಬುದನ್ನು ವರಮಹಾಲಕ್ಷ್ಮಿ ಹಬ್ಬ ನೆನಪಿಸುತ್ತದೆ.
ಮಹಾಲಕ್ಷ್ಮಿಯ ಆವಿರ್ಭಾವ — ಸಮುದ್ರ ಮಂಥನದ ರೋಚಕ ಕಥೆ
ಮಹಾಲಕ್ಷ್ಮಿಯ ಆವಿರ್ಭಾವಕ್ಕೆ ಸಂಬಂಧಿಸಿದ ಪ್ರಸಿದ್ಧ ಕಥೆ ಕ್ಷೀರಸಾಗರ ಮಂಥನ. ದುರ್ವಾಸ ಮಹರ್ಷಿಗಳ ಶಾಪದಿಂದ ದೇವೇಂದ್ರನು ತನ್ನ ವೈಭವ ಮತ್ತು ರಾಜ್ಯವನ್ನು ಕಳೆದುಕೊಂಡಾಗ, ಸ್ವರ್ಗಲಕ್ಷ್ಮಿಯೂ ಸ್ವರ್ಗವನ್ನು ತೊರೆದಳು. ಪರಿಣಾಮವಾಗಿ ದೇವಲೋಕದಲ್ಲಿ ದಾರಿದ್ರ್ಯ ಮತ್ತು ಅಶಾಂತಿ ಆವರಿಸಿತು. ದೇವತೆಗಳು ಬ್ರಹ್ಮದೇವನ ನೇತೃತ್ವದಲ್ಲಿ ಮಹಾವಿಷ್ಣುವಿನ ಮೊರೆ ಹೋದರು. ಅಮೃತವನ್ನು ಪಡೆಯಲು ದೇವತೆಗಳು ಮತ್ತು ಅಸುರರು ಸೇರಿ ಕ್ಷೀರಸಾಗರವನ್ನು ಮಂಥನ ಮಾಡಲು ನಿರ್ಧರಿಸಿದರು. ಮಂದಾರ ಪರ್ವತವನ್ನು ಕಡೆಗೋಲಾಗಿ ಮತ್ತು ವಾಸುಕಿಯನ್ನು ಹಗ್ಗವಾಗಿ ಬಳಸಿಕೊಂಡು ನಡೆದ ಈ ಮಹಾ ಮಂಥನದಿಂದ ಅನೇಕ ಅದ್ಭುತ ವಸ್ತುಗಳು ಮತ್ತು ದೈವಿಕ ಶಕ್ತಿಗಳು ಹೊರಹೊಮ್ಮಿದವು. ಅವುಗಳಲ್ಲಿ ಮಹಾಲಕ್ಷ್ಮಿಯ ಆವಿರ್ಭಾವವೂ ಒಂದು. ಶ್ವೇತವರ್ಣದ ದಿವ್ಯ ರೂಪದಲ್ಲಿ, ಕಮಲದ ಮೇಲೆ ಆವಿರ್ಭವಿಸಿದ ಮಹಾಲಕ್ಷ್ಮಿಯನ್ನು ಕಂಡ ದೇವತೆಗಳು ಸ್ತುತಿಸಿದರು. ಅಂತಿಮವಾಗಿ ಮಹಾಲಕ್ಷ್ಮಿ ಮಹಾವಿಷ್ಣುವನ್ನು ವರಿಸಿಕೊಂಡಳು. ಆ ಕಾರಣದಿಂದಲೇ ಲಕ್ಷ್ಮಿಯನ್ನು “ಕ್ಷೀರಸಮುದ್ರಸಂಭವೆ”, “ಸಮುದ್ರರಾಜನ ಪುತ್ರಿ”, “ಕಮಲವಾಸಿನಿ” ಮುಂತಾದ ಹೆಸರುಗಳಿಂದಲೂ ಕರೆಯಲಾಗುತ್ತದೆ.
ಚಾರುಮತಿಯ ಭಕ್ತಿಗೆ ಒಲಿದ ವರಮಹಾಲಕ್ಷ್ಮಿ
ವರಮಹಾಲಕ್ಷ್ಮಿ ವ್ರತದ ಮಹತ್ವವನ್ನು ವಿವರಿಸುವ ಅತ್ಯಂತ ಜನಪ್ರಿಯ ಕಥೆ ಚಾರುಮತಿಯ ಕಥೆ. ಕುಂಡಿನ ಎಂಬ ಊರಿನಲ್ಲಿ ಚಾರುಮತಿ ಎಂಬ ಸತಿಶೀಲ ಮಹಿಳೆ ವಾಸಿಸುತ್ತಿದ್ದಳು. ಬಡತನವಿದ್ದರೂ ತನ್ನ ವಯೋವೃದ್ಧ ಅತ್ತೆ-ಮಾವಂದಿರನ್ನು ಅತ್ಯಂತ ಶ್ರದ್ಧೆ ಮತ್ತು ಪ್ರೀತಿಯಿಂದ ಸೇವಿಸುತ್ತಿದ್ದಳು. ಅವರ ಅನಾರೋಗ್ಯವನ್ನು ಕಂಡು ಚಾರುಮತಿಯ ಹೃದಯ ಕರಗುತ್ತಿತ್ತು. “ಅಮ್ಮಾ ಮಹಾಲಕ್ಷ್ಮಿ, ನನ್ನ ಅತ್ತೆ-ಮಾವಂದಿರ ನೋವನ್ನು ದೂರಮಾಡು” ಎಂದು ಆಕೆ ಪ್ರತಿದಿನ ಪ್ರಾರ್ಥಿಸುತ್ತಿದ್ದಳು. ಒಂದು ದಿನ ಮಹಾಲಕ್ಷ್ಮಿಯೇ ಚಾರುಮತಿಯ ಕನಸಿನಲ್ಲಿ ಪ್ರತ್ಯಕ್ಷಳಾಗಿ, ಶ್ರಾವಣ ಮಾಸದ ಪೌರ್ಣಮಿಗೂ ಮುನ್ನ ಬರುವ ಶುಕ್ರವಾರ ತನ್ನನ್ನು ಭಕ್ತಿಯಿಂದ ಪೂಜಿಸುವಂತೆ ತಿಳಿಸಿದಳು. ಚಾರುಮತಿ ತನ್ನ ಕನಸಿನ ವಿಷಯವನ್ನು ಬಂಧು-ಬಳಗದವರಿಗೆ ತಿಳಿಸಿದಳು. ಎಲ್ಲರೂ ಸೇರಿ ವರಮಹಾಲಕ್ಷ್ಮಿ ವ್ರತವನ್ನು ಭಕ್ತಿಯಿಂದ ಆಚರಿಸಿದರು. ಕಥೆಯ ಪ್ರಕಾರ, ಆಕೆಯ ಬಡತನ ನಿವಾರಣೆಯಾಯಿತು. ಅತ್ತೆ-ಮಾವಂದಿರ ಆರೋಗ್ಯವೂ ಸುಧಾರಿಸಿತು. ಕುಟುಂಬದಲ್ಲಿ ಸುಖ, ಸೌಭಾಗ್ಯ ಮತ್ತು ಸಮೃದ್ಧಿ ನೆಲೆಸಿತು. ಹೀಗಾಗಿ ಚಾರುಮತಿಯ ಕಥೆಯ ಮುಖ್ಯ ಸಂದೇಶ “ಭಕ್ತಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ; ಸೇವೆ ಮತ್ತು ನಿಸ್ವಾರ್ಥ ಮನಸ್ಸಿಗೆ ದೈವಾನುಗ್ರಹ ದೊರೆಯುತ್ತದೆ” ಎಂಬುದು.
ವರಮಹಾಲಕ್ಷ್ಮಿ ಪೂಜೆಯ ಸಿದ್ಧತೆ
ಹಬ್ಬದ ದಿನ ಮುಂಜಾನೆ ಮನೆಯವರು ಶುಚಿರ್ಭೂತರಾಗಿ ಮನೆ ಮತ್ತು ಪೂಜಾ ಸ್ಥಳವನ್ನು ಸ್ವಚ್ಛಗೊಳಿಸುತ್ತಾರೆ. ಸಂಪ್ರದಾಯದಂತೆ ರಂಗೋಲಿ ಹಾಕಿ, ಮಣೆ ಅಥವಾ ಪೀಠವನ್ನು ಸಿದ್ಧಪಡಿಸಲಾಗುತ್ತದೆ. ಅಕ್ಕಿಯ ಮೇಲೆ ಬೆಳ್ಳಿ, ತಾಮ್ರ ಅಥವಾ ಲಭ್ಯವಿರುವ ಕಲಶವನ್ನು ಸ್ಥಾಪಿಸಿ, ಅದರಲ್ಲಿ ಶುದ್ಧ ನೀರು ತುಂಬುತ್ತಾರೆ. ಕೆಲವು ಸಂಪ್ರದಾಯಗಳಲ್ಲಿ ಒಣದ್ರಾಕ್ಷಿ, ಗೋಡಂಬಿ, ಬಾದಾಮಿ, ಉತ್ತುತ್ತಿ, ಕಲ್ಲುಸಕ್ಕರೆ ಹಾಗೂ ಬೆಳ್ಳಿ ಅಥವಾ ಬಂಗಾರದ ನಾಣ್ಯಗಳನ್ನು ಕಲಶದಲ್ಲಿ ಇಡುತ್ತಾರೆ. ಶುಭತೆಯ ಸಂಕೇತವಾಗಿ ಅರಿಶಿನವನ್ನು ಹಾಕಿ, ಮೇಲೆ ಮಾವಿನ ಎಲೆಗಳನ್ನು ಇಟ್ಟು, ಅರಿಶಿನ-ಕುಂಕುಮದಿಂದ ಅಲಂಕರಿಸಿದ ತೆಂಗಿನಕಾಯಿಯನ್ನು ಸ್ಥಾಪಿಸಲಾಗುತ್ತದೆ. ಕಲಶದ ಮುಂದೆ ಮಹಾಲಕ್ಷ್ಮಿಯ ಬೆಳ್ಳಿ ವಿಗ್ರಹ ಅಥವಾ ಬೆಳ್ಳಿ ಮುಖವಾಡವನ್ನು ಇಡಲಾಗುತ್ತದೆ. ಅದು ಸಾಧ್ಯವಾಗದಿದ್ದರೆ ಅರಿಶಿನದಿಂದಲೇ ಲಕ್ಷ್ಮಿಯ ಪ್ರತಿರೂಪವನ್ನು ರೂಪಿಸುವ ಸಂಪ್ರದಾಯವೂ ಇದೆ.
ಬಿಳಿ ಸೀರೆ, ಕೆಂಪು ಅಂಚು ಮತ್ತು ಚಿನ್ನಾಭರಣ
ಸಮುದ್ರ ಮಂಥನದಿಂದ ಮಹಾಲಕ್ಷ್ಮಿ ಶ್ವೇತವರ್ಣದ ದಿವ್ಯ ರೂಪದಲ್ಲಿ ಆವಿರ್ಭವಿಸಿದಳು ಎಂಬ ಪೌರಾಣಿಕ ನಂಬಿಕೆಯ ಹಿನ್ನೆಲೆಯಲ್ಲಿ, ಕೆಲವು ಮನೆಗಳಲ್ಲಿ ಕೆಂಪು ಅಂಚಿನ ಬಿಳಿ ಸೀರೆಯಿಂದ ದೇವಿಯನ್ನು ಅಲಂಕರಿಸುವ ಪದ್ಧತಿ ಇದೆ. ಇದರ ಜೊತೆಗೆ ಹೂವಿನ ಹಾರಗಳು, ತೋಮಾಲೆಗಳು ಮತ್ತು ಮನೆಯಲ್ಲಿರುವ ಚಿನ್ನಾಭರಣಗಳಿಂದ ದೇವಿಯನ್ನು ಅಲಂಕರಿಸಲಾಗುತ್ತದೆ. ಇಲ್ಲಿ ಒಂದು ಸುಂದರವಾದ ಅರ್ಥವಿದೆ—ಲಕ್ಷ್ಮಿಗೆ ನಾವು ಚಿನ್ನ ಕೊಡುವುದಕ್ಕಿಂತ, ನಮ್ಮ ಮನಸ್ಸಿನ ಶುದ್ಧತೆ ಮತ್ತು ಮನೆಯ ಸೌಹಾರ್ದವೇ ದೊಡ್ಡ ಆಭರಣ.
ಪೂಜೆಯ ವಿಧಿವಿಧಾನ
ಮೊದಲು ನಂದಾದೀಪವನ್ನು ಬೆಳಗಿಸಿ, ಘಂಟಾನಾದದೊಂದಿಗೆ ಗಣಪತಿಯನ್ನು ಪೂಜಿಸಲಾಗುತ್ತದೆ. ನಂತರ ಮಹಾಲಕ್ಷ್ಮಿಯನ್ನು ಧ್ಯಾನಿಸಿ, ಆವಾಹನೆ, ಅರ್ಘ್ಯ, ಪಾದ್ಯ ಮುಂತಾದ ಉಪಚಾರಗಳನ್ನು ಸಲ್ಲಿಸಲಾಗುತ್ತದೆ. ಮಹಾಲಕ್ಷ್ಮಿಯ ವಿಗ್ರಹಕ್ಕೆ ಕೆಲವು ಸಂಪ್ರದಾಯಗಳಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯಿಂದ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ನಂತರ ಅರಿಶಿನ, ಕುಂಕುಮ, ಗಂಧ, ಹೂವುಗಳು ಮತ್ತು ವಿವಿಧ ಪತ್ರೆಗಳಿಂದ ದೇವಿಯನ್ನು ಅರ್ಚಿಸಲಾಗುತ್ತದೆ. ನೈವೇದ್ಯವಾಗಿ ಹಣ್ಣುಗಳು, ಒಬ್ಬಟ್ಟು, ಸಜ್ಜಪ್ಪ, ವಿವಿಧ ಬಗೆಯ ಉಂಡೆಗಳು ಹಾಗೂ ಮನೆಯ ಸಂಪ್ರದಾಯದ ವಿಶೇಷ ಅಡುಗೆಗಳನ್ನು ಅರ್ಪಿಸಲಾಗುತ್ತದೆ. ಅಂತಿಮವಾಗಿ ತುಪ್ಪದ ಬತ್ತಿಯಿಂದ ಮಹಾಮಂಗಳಾರತಿ ಮಾಡಿ, ಮಂತ್ರಪುಷ್ಪ ಸಮರ್ಪಿಸಲಾಗುತ್ತದೆ.
12 ಗಂಟುಗಳ ದೋರ — ಒಂದು ವಿಶೇಷ ಸಂಪ್ರದಾಯ
ವರಮಹಾಲಕ್ಷ್ಮಿ ವ್ರತದ ಅತ್ಯಂತ ವಿಶಿಷ್ಟ ಆಚರಣೆಗಳಲ್ಲಿ 12 ಗಂಟುಗಳ ದೋರವೂ ಒಂದು. ಸುಮಾರು ಎರಡು ಗೇಣಿನಷ್ಟು ಉದ್ದದ 12 ಹಸಿ ದಾರಗಳನ್ನು ತೆಗೆದುಕೊಂಡು, ಅವುಗಳಿಗೆ 12 ಗಂಟುಗಳನ್ನು ಹಾಕಿ, ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚುತ್ತಾರೆ. ನಂತರ ಸೇವಂತಿಗೆ ಹೂವನ್ನು ಕಟ್ಟಿ ದೇವಿಯ ಪಕ್ಕದಲ್ಲಿ ಇಟ್ಟು ಪೂಜಿಸುತ್ತಾರೆ. ಪೂಜೆ ಮುಗಿದ ನಂತರ ಮನೆಯ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಹಿರಿಯರಿಂದ ಆ ದೋರವನ್ನು ಕಂಕಣದಂತೆ ಬಲಗೈಗೆ ಕಟ್ಟಿಸಿಕೊಳ್ಳುತ್ತಾರೆ. ಕೆಲವು ಕುಟುಂಬಗಳಲ್ಲಿ ಈ ದೋರವನ್ನು ಮುಂದಿನ ಗೌರಿ ಹಬ್ಬದವರೆಗೆ ಸಂರಕ್ಷಿಸಿ, ನಂತರ ಗೌರಿ-ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ವಿಸರ್ಜಿಸುವ ಪದ್ಧತಿಯೂ ಇದೆ.
ವಾಯನದಾನ — ಹಬ್ಬದ ಸಾಮಾಜಿಕ ಸಂದೇಶ
ವರಮಹಾಲಕ್ಷ್ಮಿ ಪೂಜೆ ಕೇವಲ ಮನೆಯೊಳಗೆ ಮುಗಿಯುವುದಿಲ್ಲ. ನೆರೆಹೊರೆಯ ಮುತ್ತೈದೆಯರನ್ನು ಕರೆದು ಅರಿಶಿನ, ಕುಂಕುಮ, ತಾಂಬೂಲ, ದಕ್ಷಿಣೆ, ಬಳೆ, ರವಿಕೆ ಕಣ ಅಥವಾ ಸೀರೆ ಮುಂತಾದವುಗಳನ್ನು ನೀಡುವ ಪದ್ಧತಿ ಇದೆ. ಕೆಲವು ಮನೆಗಳಲ್ಲಿ ಅಕ್ಕಿ, ತೆಂಗಿನಕಾಯಿ ಮತ್ತು ಇತರ ಮಂಗಳದ್ರವ್ಯಗಳನ್ನೂ ಸೇರಿಸಿ ವಾಯನ ನೀಡುತ್ತಾರೆ. ಇದು ಕೇವಲ ಧಾರ್ಮಿಕ ವಿಧಿಯಲ್ಲ. “ನಾನು ಮಾತ್ರ ಸುಖವಾಗಿರಬೇಕು” ಎನ್ನುವುದಕ್ಕಿಂತ “ನಮ್ಮ ಸುತ್ತಲಿನ ಮಹಿಳೆಯರೂ ಸುಖ-ಸೌಭಾಗ್ಯದಿಂದಿರಲಿ” ಎಂಬ ಹಾರೈಕೆಯ ಸಾಮಾಜಿಕ ರೂಪವೇ ವಾಯನದಾನ.
ಪೂಜೆಯಲ್ಲಿ ಗಮನಿಸಬೇಕಾದ ಕೆಲವು ಸಂಗತಿಗಳು
- ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವಾಗ ಕೆಲವು ಕುಟುಂಬಗಳಲ್ಲಿ ವಿಶೇಷ ನಿಯಮಗಳನ್ನು ಪಾಲಿಸಲಾಗುತ್ತದೆ.
- ಪೂಜೆಗೆ ಕುಳಿತುಕೊಳ್ಳುವ ಮುತ್ತೈದೆ ರೇಷ್ಮೆ ಸೀರೆ ಧರಿಸುವುದು, ಕೂದಲನ್ನು ಬಿಚ್ಚಿಡದೆ ಜಡೆ ಹಾಕಿಕೊಳ್ಳುವುದು, ಹಣೆಯಲ್ಲಿ ಕುಂಕುಮ ಧರಿಸುವುದು ಮುಂತಾದವು ಸಂಪ್ರದಾಯದ ಭಾಗವಾಗಿವೆ.
- ಮನೆಯ ಬಾಗಿಲಿಗೆ ಮತ್ತು ಪೂಜಾ ಸ್ಥಳಕ್ಕೆ ಸಾಧ್ಯವಾದಷ್ಟು ನೈಸರ್ಗಿಕ ಮಾವಿನ ಎಲೆ, ಬಾಳೆ ಎಲೆ ಮತ್ತು ಬಾಳೆ ಕಂಬಗಳನ್ನೇ ಬಳಸುವುದು ಉತ್ತಮ. ಕೃತಕ ಪ್ಲಾಸ್ಟಿಕ್ ಅಲಂಕಾರಗಳಿಗಿಂತ ನೈಸರ್ಗಿಕ ವಸ್ತುಗಳು ಹಬ್ಬದ ಪರಿಸರ ಸ್ನೇಹಿ ಸ್ವರೂಪವನ್ನು ಉಳಿಸುತ್ತವೆ.
- ದಾನ ಮಾಡುವಾಗಲೂ ಉತ್ತಮ ಗುಣಮಟ್ಟದ ಅಕ್ಕಿ, ಬೇಳೆ, ತರಕಾರಿ ಮತ್ತು ಉಪಯುಕ್ತ ವಸ್ತುಗಳನ್ನು ನೀಡುವುದು ಮುಖ್ಯ. ಪುರೋಹಿತರಿಗೆ ನೀಡುವ ಪಂಚೆ-ಶಲ್ಯ ಅಥವಾ ಮುತ್ತೈದೆಯರಿಗೆ ನೀಡುವ ಸೀರೆ-ರವಿಕೆ ಕಣ ಧರಿಸಲು ಯೋಗ್ಯವಾಗಿರಬೇಕು ಎಂಬುದು ನಮ್ಮ ಹಿರಿಯರ ಆಶಯ.
- ಇಂದಿನ ಕಾಲದಲ್ಲಿ ಹಬ್ಬದ ಅರ್ಥ ಏನು?
ಇಂದು ವರಮಹಾಲಕ್ಷ್ಮಿ ಹಬ್ಬವು ದೊಡ್ಡ ಪ್ರಮಾಣದಲ್ಲಿ ಆಚರಿಸಲ್ಪಡುತ್ತಿದೆ. ಮನೆಮನೆಗಳಲ್ಲಿ ಸುಂದರ ಅಲಂಕಾರ, ಅದ್ದೂರಿ ಪೂಜೆ, ವಿವಿಧ ಬಗೆಯ ನೈವೇದ್ಯ ಮತ್ತು ಆಭರಣಗಳಿಂದ ದೇವಿಯ ಅಲಂಕಾರ ನಡೆಯುತ್ತಿದೆ. ಆದರೆ ಇಲ್ಲೊಂದು ವಿಚಾರವನ್ನು ನಾವು ಮರೆಯಬಾರದು.
ವರಮಹಾಲಕ್ಷ್ಮಿ ಎಂದರೆ ಕೇವಲ ಹಣದ ದೇವತೆ ಅಲ್ಲ.
- ಆರೋಗ್ಯವೂ ಸಂಪತ್ತು.
- ಸಂತೋಷವೂ ಸಂಪತ್ತು.
- ಉತ್ತಮ ಸಂಬಂಧಗಳೂ ಸಂಪತ್ತು.
- ಮನೆಯ ನೆಮ್ಮದಿಯೂ ಸಂಪತ್ತು.
- ಒಳ್ಳೆಯ ಮಕ್ಕಳೂ ಸಂಪತ್ತು.
- ಪರಸ್ಪರ ಗೌರವವೂ ಸಂಪತ್ತು.
ಹೀಗಿರುವಾಗ ದೇವರ ಮುಂದೆ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಪ್ರದರ್ಶಿಸುವುದಕ್ಕಿಂತ, ಒಂದು ಅಗತ್ಯವಿರುವ ಕುಟುಂಬಕ್ಕೆ ನೆರವಾಗುವುದು, ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಾಯ ಮಾಡುವುದು, ಹಸಿದವನಿಗೆ ಅನ್ನ ನೀಡುವುದು ಅಥವಾ ಅನಾರೋಗ್ಯದಲ್ಲಿರುವವರಿಗೆ ಔಷಧಿ ಕೊಡಿಸುವುದು—ಇವೆಲ್ಲವೂ ಮಹಾಲಕ್ಷ್ಮಿಯ ಆರಾಧನೆಯ ಅತ್ಯಂತ ಸುಂದರ ರೂಪಗಳಲ್ಲವೇ?
ಭಕ್ತಿ ಮುಖ್ಯವೇ? ಆಡಂಬರ ಮುಖ್ಯವೇ?
ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗಳಲ್ಲಿ ವರಮಹಾಲಕ್ಷ್ಮಿ ಪೂಜೆ ಭಕ್ತಿಗಿಂತ ಆಡಂಬರದ ಪ್ರದರ್ಶನವಾಗುತ್ತಿರುವುದು ವಿಷಾದಕರ. ಮನೆಯಲ್ಲಿರುವ ಎಲ್ಲಾ ಚಿನ್ನಾಭರಣಗಳನ್ನು ದೇವಿಯ ಮುಂದೆ ಪ್ರದರ್ಶಿಸುವುದು, ಹೊಸ ಹೊಸ ನೋಟುಗಳನ್ನು ರಾಶಿಯಾಗಿ ಇಡುವುದು ಅಥವಾ ಪೂಜೆಯನ್ನು ಸಾಮಾಜಿಕ ಪ್ರತಿಷ್ಠೆಯ ಪ್ರದರ್ಶನವನ್ನಾಗಿ ಮಾಡುವುದು ಹಬ್ಬದ ಮೂಲ ಉದ್ದೇಶವಲ್ಲ. ನಮ್ಮ ಪುರಾಣಗಳೇ ಇದಕ್ಕೆ ಉತ್ತರ ನೀಡುತ್ತವೆ.
ಕುಚೇಲನು ಶ್ರೀಕೃಷ್ಣನಿಗೆ ಕೊಟ್ಟದ್ದು ಒಂದು ಹಿಡಿ ಅವಲಕ್ಕಿ. ಆದರೆ ಕೃಷ್ಣನಿಗೆ ಅದರ ಹಿಂದೆ ಇದ್ದ ಸ್ನೇಹ ಮತ್ತು ಪ್ರೀತಿಯೇ ಮುಖ್ಯವಾಗಿತ್ತು. ಮತ್ತೊಂದು ಪ್ರಸಿದ್ಧ ಕಥೆಯಲ್ಲಿ ದ್ರೌಪದಿಯ ಒಂದು ಸಣ್ಣ ಅಗಸೆಯ ಎಲೆಯ ತುಂಡು ದೂರ್ವಾಸ ಮುನಿ ಮತ್ತು ಅವರ ಶಿಷ್ಯರ ಹಸಿವನ್ನು ನೀಗಿಸಿದ ಅದ್ಭುತ ಪ್ರಸಂಗವನ್ನು ನಾವು ಕಾಣುತ್ತೇವೆ. ಹೀಗಾಗಿ ದೇವರಿಗೆ ನಾವು ಎಷ್ಟು ಕೊಟ್ಟೆವು ಎಂಬುದಕ್ಕಿಂತ, ಯಾವ ಮನಸ್ಸಿನಿಂದ ಕೊಟ್ಟೆವು ಎಂಬುದೇ ಮುಖ್ಯ. ವರಮಹಾಲಕ್ಷ್ಮಿ ಹಬ್ಬದ ನಿಜವಾದ ಸಂಪತ್ತು ನಮ್ಮ ಮನೆಯ ಅಲಂಕಾರದಲ್ಲಿಲ್ಲ; ಅದು ನಮ್ಮ ಹೃದಯದಲ್ಲಿದೆ. ತಾಯಿಯಂತೆ ಕರುಣಿಸುವ ಲಕ್ಷ್ಮಿಯನ್ನು ಪೂಜಿಸುವಾಗ, ನಮ್ಮೊಳಗೂ ಸ್ವಲ್ಪ ಕರುಣೆ, ಸ್ವಲ್ಪ ದಾನಶೀಲತೆ, ಸ್ವಲ್ಪ ಪ್ರೀತಿ ಮತ್ತು ಸ್ವಲ್ಪ ಮಾನವೀಯತೆ ಬೆಳೆಯಲಿ.
ಅದೇ ನಿಜವಾದ ವರಮಹಾಲಕ್ಷ್ಮಿ ವ್ರತದ ಫಲ.
“ಮನೆಯಲ್ಲಿರುವ ಸಂಪತ್ತು ಹೆಚ್ಚಾಗಲಿ” ಎಂದು ಕೇಳುವ ಮೊದಲು,
“ನಮ್ಮ ಮನಸ್ಸಿನಲ್ಲಿರುವ ಒಳ್ಳೆಯತನ ಹೆಚ್ಚಾಗಲಿ” ಎಂದು ಕೇಳೋಣ.
ಆಗ ಲಕ್ಷ್ಮಿಯೂ ಸಂತೋಷಪಡುತ್ತಾಳೆ, ಸರಸ್ವತಿಯೂ ಸಂತೋಷಪಡುತ್ತಾಳೆ, ನಮ್ಮ ಬದುಕೂ ನಿಜವಾದ ಅರ್ಥದಲ್ಲಿ ಶ್ರೀಮಂತವಾಗುತ್ತದೆ.
ಏನಂತೀರೀ?
ನಿಮ್ಮವನೇ ಉಮಾಸುತ
॥ ಸರ್ವೇ ಜನಾಃ ಸುಖಿನೋ ಭವಂತು ॥

ಒಳ್ಳೆಯ ಮಾಹಿತಿಯುಕ್ತ ಲೇಖನ. ಅಭಿನಂದನೆಗಳು.