ಉಪಾಕರ್ಮ ಎಂಬ ಸಂಸ್ಕಾರ ಮತ್ತು ನಿಯಮ

ಉಪನಯನ ಮತ್ತು ಜನಿವಾರ ಕೇವಲ ಒಂದು ಪವಿತ್ರ ದಾರವಲ್ಲ. ಜೀವನಶೈಲಿಯ ಸಂಕೇತ.

ಹಿಂದಿನ ಕಾಲದಲ್ಲಿ ಇಂದಿನ ರೀತಿಯಲ್ಲಿ ಜಾತಿ ಪದ್ದತಿಗಳು ಇಲ್ಲದೇ ಬ್ರಾಹ್ಮಣ, ಕ್ಷತ್ರೀಯ, ವೈಶ್ಯ ಮತ್ತು ಶೂದ್ರ ಎಂದು ನಾಲ್ಕು ವರ್ಣಾಶ್ರಮ ಪದ್ದತಿ ಜಾರಿಯಲ್ಲಿತ್ತು. ಈ ವರ್ಣಾಶ್ರಮಗಳು ಹುಟ್ಟಿನಿಂದ ಬಾರದೇ ಅವರವರ ಪಾಲಿಸುವ ವೃತ್ತಿಯಿಂದ ನಿರ್ಧರಿಸಲ್ಪಡುತ್ತಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಕ್ಕೆ ಮಕ್ಕಳನ್ನು ಕಳುಹಿಸುವ ಮುಂಚೆ ಉತ್ತಮವಾದ ಸಂಸ್ಕಾರ ಮತ್ತು ಮನಸ್ಸಿನ ಕೊಳೆಗಳನ್ನು ಕಳೆದು ಪರಬ್ರಹ್ಮಪ್ರಾಪ್ತಿಗಾಗಿ, ಮತ್ತು ತನ್ಮೂಲಕ ಸತ್ಪುರುಷರಾಗುವುದಕ್ಕಾಗಿ ಉಪನಯನವನ್ನು ಮಾಡುತ್ತಿದ್ದರು.

ಬ್ರಹ್ಮೋಪದೇಶ

ಸಾಮಾನ್ಯವಾಗಿ ಆರರಿಂದ ಎಂಟು ವಯಸ್ಸಿನ ಒಳಗಿನ ಗಂಡು ಮಕ್ಕಳಿಗೆ ಉಪನಯನ ಮಾಡುವುದು ನಡೆದು ಬಂದಿರುವ ಸಂಪ್ರದಾಯ. ಹುಟ್ಟಿನಿಂದ ಅಲ್ಲಿಯವರೆಗೂ ತಾಯಿಯ ಮಡಿಲಲ್ಲೇ ಬೆಳೆದ ಗಂಡು ಮಕ್ಕಳು ಅಂದಿನ ಕಾಲದಲ್ಲಿ ಕೆಲವೊಂದು ಬಾರೀ ಇನ್ನೂ ತಾಯಿಯ ಹಾಲನ್ನೇ ಕುಡಿಯುತ್ತಿದ್ದ ಮಕ್ಕಳಿಗೆ ಕಡೆಯದಾಗಿ ಮಾತೃ ಭೋಜನ ಮಾಡಿಸಿ ಬ್ರಹ್ಮೋಪದೇಶ ಮಾಡಿಸುತ್ತಿದ್ದರು. ಈ ರೀತಿಯಾಗಿ ಬ್ರಹ್ಮೋಪದೇಶ ಮಾಡಿದ ನಂತರವೇ ಅವರಿಗೆ ಎರಡನೇ ಜನ್ಮ ಪ್ರಾಪ್ತಿಯಾದಂತೆ ಎಂದು ದ್ವಿಜ ಎಂದೂ ಕರೆಯುತ್ತಿದ್ದರು.

ಉಪನಯನ ಹಿಂದೂ ಧರ್ಮದ ಪ್ರಮುಖ ಸಂಸ್ಕಾರಗಳಲ್ಲಿ ಒಂದಾಗಿದ್ದು, ಬಾಲಕನನ್ನು ವಿದ್ಯಾಭ್ಯಾಸ, ಶಿಸ್ತು ಮತ್ತು ಆಧ್ಯಾತ್ಮಿಕ ಜೀವನದತ್ತ ಕರೆದೊಯ್ಯುವ ಪವಿತ್ರ ಸಂಸ್ಕಾರವೆಂದು ಪರಿಗಣಿಸಲಾಗಿದೆ. ‘ಉಪನಯನ’ ಎಂಬ ಪದಕ್ಕೆ “ಹತ್ತಿರಕ್ಕೆ ತರುವುದು” ಎಂಬ ಅರ್ಥವಿದ್ದು, ಗುರು ಮತ್ತು ಜ್ಞಾನದ ಸಾನ್ನಿಧ್ಯಕ್ಕೆ ವ್ಯಕ್ತಿಯನ್ನು ಕರೆದೊಯ್ಯುವ ಸಂಕೇತವೆಂದು ವ್ಯಾಖ್ಯಾನಿಸಲಾಗುತ್ತದೆ. ಉಪನಯನ ಸಂಸ್ಕಾರದ ಸಂದರ್ಭದಲ್ಲಿ  ಮಕ್ಕಳಿಗೆ ಆಚಾರ್ಯ ಮುಖೇನ ಶಾಸ್ತ್ರೋಕ್ತವಾಗಿ ತಂದೆಯಿಂದ ಗಾಯತ್ರೀ ಮಂತ್ರದ ಉಪದೇಶವಾಗಿ ಸ್ವಸಾಮರ್ಥ್ಯ, ಪಾಂಡಿತ್ಯ ಮತ್ತು ಸಮೃದ್ಧಿಯ ಸಂಕೇತವಾದ ಮೂರು ಎಳೆಗಳ ಬ್ರಹ್ಮ ಗಂಟು ಉಳ್ಳ ಜನಿವಾರವನ್ನು ಧಾರಣೆ ಮಾಡಿಸುತ್ತಾರೆ. ಆ ಮೂರು ಎಳೆಗಳು, ಸ್ವಸಾಮರ್ಥ್ಯದ ದೇವಿ (ಪಾರ್ವತಿ), ಪಾಂಡಿತ್ಯದ ದೇವಿ (ಸರಸ್ವತಿ) ಮತ್ತು ಸಮೃದ್ದಿ ಅಥವಾ ಧನ ದೇವಿ (ಲಕ್ಷ್ಮಿ) ಈ ಮೂರೂ ದೇವಿಯರ ಆಶೀರ್ವಾದ ಸುಖಜೀವನ ನಡೆಸಲು ಇರಲೇ ಬೇಕಾದ ಕಾರಣ ಸದಾ ಕಾಲವೂ ಮೂರು ಎಳೆಗಳ ಜನಿವಾರವನ್ನು ಧರಿಸಿರುವುದು ಅವಶ್ಯಕವಾಗಿತ್ತು.

ಪ್ರಾಚೀನ ಕಾಲದಲ್ಲಿ ಉಪನಯನದ ನಂತರವೇ ಬಾಲಕನನ್ನು ಗುರುಕುಲಕ್ಕೆ ಕಳುಹಿಸಿ ವೇದ, ಶಾಸ್ತ್ರ ಮತ್ತು ವಿವಿಧ ವಿದ್ಯೆಗಳನ್ನು ಕಲಿಸಲಾಗುತ್ತಿತ್ತು. ಸಾಂಪ್ರದಾಯಿಕವಾಗಿ ಈ ಸಂಸ್ಕಾರವು ಬ್ರಹ್ಮಚರ್ಯ, ಜ್ಞಾನಾರ್ಜನೆ, ಆತ್ಮನಿಯಂತ್ರಣ, ಕರ್ತವ್ಯಪ್ರಜ್ಞೆ ಮತ್ತು ಸನ್ಮಾರ್ಗದ ಜೀವನಕ್ಕೆ ಬದ್ಧತೆಯನ್ನು ಸೂಚಿಸುತ್ತದೆ. ಯಜ್ಞೋಪವೀತದ ಮೂರು ಎಳೆಗಳು ಜವಾಬ್ದಾರಿ, ಜ್ಞಾನ ಮತ್ತು ಶಿಸ್ತಿನಂತಹ ವಿವಿಧ ಮೌಲ್ಯಗಳ ಸಂಕೇತಗಳಾಗಿಯೂ ಪರಿಗಣಿಸಲ್ಪಡುತ್ತವೆ. ಹೀಗಾಗಿ, ಉಪನಯನವೆಂದರೆ ಕೇವಲ ಜನಿವಾರ ಧರಿಸುವ ಆಚರಣೆಯಲ್ಲ; ಬಾಲ್ಯದಿಂದ ಜ್ಞಾನ, ಶಿಸ್ತು ಮತ್ತು ಜವಾಬ್ದಾರಿಯುತ ಜೀವನದತ್ತ ಸಾಗುವ ಒಂದು ಸಾಂಸ್ಕೃತಿಕ ಹಾಗೂ ಧಾರ್ಮಿಕ ಪಯಣ

ಸಾಧಾರವಾಗಿ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯ ವರ್ಣಾಶ್ರಮ ಪಾಲಿಸುವವರು ತಮ್ಮ ಗಂಡು ಮಕ್ಕಳಿಗೆ ಬಾಲ್ಯಾವಸ್ಥೆಯಲ್ಲಿಯೇ ಈ ರೀತಿಯಲ್ಲಿ ಬ್ರಹ್ಮೋಪದೇಶ ಮಾಡಿಸಿ ಗುರು ಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿ ಕೊಡುತ್ತಿದ್ದರು. ಗುರುಕುಲದಲ್ಲಿ ಆ ವಿದ್ಯಾರ್ಥಿಗಳು ಗಾಯತ್ರಿಯ ಔಪಾಸನೆಯೊಂದಿಗೆ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಾ ತಮ್ಮ ಸ್ವಸಾಮಥ್ಯದ ಅನುಗುಣವಾಗಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಉಪಾಕರ್ಮ, ಹಳೆಯ ಜನಿವಾರಕ್ಕೆ ವಿದಾಯ, ಹೊಸದಕ್ಕೆ ಸ್ವಾಗತ

ಸಾಧಾರಣವಾಗಿ ಎಲ್ಲಾ ವಸ್ತುಗಳಿಗೆ ಒಂದು ನಿರ್ಧಿಷ್ಟ ಅವಧಿಯಿರುತ್ತದೆ. ಆ ಅವಧಿ ಮುಗಿದಂತೆಲ್ಲಾ ಅದನ್ನು ಬದಲಿಸುವುದು ಜಗದ ನಿಯಮ. ಹಾಗಾಗಿ ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಗಳನ್ನು ಹೊಸದರೊಂದಿಗೆ ಬದಲಾಯಿಸುತ್ತಿರುತ್ತೇವೆ. ಅಂತಯೇ ಈ ಜನಿವಾರವನ್ನೂ ಮೈಲಿಗೆ, ಪುರುಡು ಮತ್ತು ಸೂತಕಗಳ ಹೊರತಾಗಿ ವರ್ಷಕ್ಕೊಮ್ಮೆ ಬದಲಿಸುವ ಸಂಪ್ರದಾಯವಿದೆ. ಹಾಗೆ ಜನಿವಾರವನ್ನು ಬದಲಾಯಿಸುವ ದಿನವನ್ನು ಉಪಾಕರ್ಮ ಎನ್ನುತ್ತಾರೆ. ಉಪಾಕರ್ಮ ಪದದ ಅರ್ಥ “ಹೊಸ ಆರಂಭ”. ಸಮಯದೊಂದಿಗೆ ಹಳೆಯದಾದ ಯಾವುದನ್ನಾದರೂ ಬದಲಾಯಿಸಬೇಕು ಅಥವಾ ನವೀಕರಿಸಬೇಕು ಇಲ್ಲವೇ ಪುನಃ ಶಕ್ತಿಯುತಗೊಳಿಸಬೇಕು ಎಂದರ್ಥ. ಉಪಾಕರ್ಮವನ್ನು ವರ್ಷಕ್ಕೆ ಒಂದು ಬಾರಿ ಶ್ರಾವಣ ಮಾಸದ ಶುಕ್ಲ ಪಕ್ಷದ ಶ್ರವಣ ನಕ್ಷತ್ರದ ದಿನದಂದು ಋಗ್ವೇದಿಗಳು ಮತ್ತು ಹುಣ್ಣಿಮೆಯ ದಿನ ಯಜುರ್ವೇದಿಗಳು ಆಚರಿಸುತ್ತಾರೆ. ಹಾಗಾಗಿ ಈ ದಿನವನ್ನು ನೂಲು ಹುಣ್ಣಿಮೆ ಎಂದೂ ಕರಾವಳಿಯ ಕಡೆ ಕರೆಯುವುದುಂಟು. ಅಂದು ಉಪನಯನವಾದವರು ಶಾಸ್ತ್ರೋಕ್ತವಾಗಿ ತಮ್ಮ ಜನಿವಾರವನ್ನು ಗೌತಮಾದಿ ಸಪ್ತ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ನೀಡುವುದರ ಮೂಲಕ ಬದಲಾಯಿಸುತ್ತಾರೆ.

ಹಿಂದೆಲ್ಲಾ ಕುಲಪುರೋಹಿತರೇ ಮನೆಗಳಿಗೇ ಆಗಮಿಸಿ ನಡೆಸುತ್ತಿದ್ದ ಉಪಾಕರ್ಮ ಇಂದು ಸಮಯಾಭಾವದಿಂದ ದೇವಸ್ಥಾನಗಳಲ್ಲಿಯೋ ಇಲ್ಲವೇ ಕೆಲವು ಸಂಘ ಸಂಸ್ಥೆಗಳ ಮುಖಾಂತರವೋ ಇಲ್ಲವೇ ಹಿರಿಯ ಪುರೋಹಿತರ ಮನೆಗಳಲ್ಲಿ ಸಾಮೂಹಿಕವಾಗಿ ಆಚರಿಸಲ್ಪಡುತ್ತದೆ. ಹಾಗೆ ಸಾಮೂಹಿಕವಾಗಿ ಆಚರಿಸಲ್ಪಡುವ ಕಡೆ , ಮೊದಲು ವಿಘ್ನವಿನಾಶಕ ಗಣೇಶನ ಪೂಜೆ ಮಾಡಿ ನಂತರ ಸಪ್ತ ಋಷಿಗಳ ಮಂಡಲಗಳನ್ನು ಮಾಡಿ ಅಲ್ಲಿ ನವ ಋಷಿಗಳ ಆಹ್ವಾಹನೆ ಮಾಡಿ ಅವರಿಗೆ ಶ್ರಧ್ಧಾ ಭಕ್ತಿಯಿಂದ ಶೋಡಶೋಪಚಾರ ಪೂಜೆ ಮಾಡಿದ ನಂತರ ತಂದಿದ್ದ ಜನಿವಾರಗಳಿಗೆ ಪೂಜೆ ಮಾಡಿ ಆಚಾರ್ಯರಿಗೂ ಮತ್ತು ಅಲ್ಲಿರುವ ಹಿರಿಯರಿಗೂ ಯಥಾ ಶಕ್ತಿ ದಕ್ಷಿಣೆಯೊಂದಿಗೆ ಜನಿವಾರವನ್ನು ದಾನ ಮಾಡಿ, ಅಕ್ಕಿಯ ಹಿಟ್ಟಿನ ಗುಳಿಗೆಯನ್ನು ಹಲ್ಲಿಗೆ ತಾಕದಂತೆ ಸ್ವೀಕರಿಸಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಸಂಕಲ್ಪ ಮಾಡಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಜನಿವಾರದ 3 ದಾರಗಳು ಪ್ರತಿನಿಧಿಸುತ್ತವೆ ಎಂದೂ ನಂಬಿಕೆ ಇದೆ ) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ – ದಾರಣಮಂತ್ರ ಹೇಳಿ ಧರಿಸಲಾಗುವುದು.

upa1

ಯಜ್ಞೋಪವೀತ ಧಾರಣ ಮಂತ್ರ

ಯಜ್ಞೋಪವೀತದ ಧಾರಣೆ ಗಾಯತ್ರಿ ಮಂತ್ರದಿಂದಾಗುತ್ತದೆ ಗಾಯತ್ರಿ ಮಂತ್ರ ಹಾಗೂ ಯಜ್ಞೋಪವೀತದ ಸಮ್ಮಿಲನವೇ ದ್ವಿಜತ್ವ. ಯಜ್ಞೋಪವೀತದಲ್ಲಿ ಮೂರು ಎಳೆಗಳಿರುತ್ತವೆ. ಹಾಗೇ ಗಾಯತ್ರಿ ಮಂತ್ರದಲ್ಲೂ ಸಹ ಮೂರು ಚರಣಗಳಿವೆ. “ತತ್ಸವಿತುರ್ವರೇಣ್ಯಮ್” ಮೊದಲ ಚರಣ. “ಭರ್ಗೋ ದೇವಸ್ಯ ಧೀಮಹೀ” ಎರಡನೇ ಚರಣ”. “ಧಿಯೋ ಯೋನಃ ಪ್ರಚೋದಯಾತ್” ಮೂರನೇ ಚರಣ.

ಯಜ್ಞೋಪವೀತಂ ಪರಮಂಪವಿತ್ರಂ | ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |ಯಜ್ಞೋಪವೀತಂ ಬಲಮಸ್ತು ತೇಜಃ||

ಈ ಶ್ಲೋಕದ ಅರ್ಥ ಹೀಗಿದೆ: ಯಜ್ಞೋಪವೀತ ಪರಮ ಪವಿತ್ರವಾದದ್ದು, ಪ್ರಜಾಪತಿಗಿಂತಲೂ ಮೊದಲೇ ಉತ್ಪನ್ನಗೊಂಡಿದ್ದು, ಆಯುಷ್ಯವನ್ನು ಹೆಚ್ಚಿಸುವಂತದ್ದು, ಮನುಷ್ಯನನ್ನು ಶುಭ್ರ ಮಾಡುವಂತದ್ದು, ಯಜ್ಞೋಪವೀತ ನಮ್ಮ ಬಲ ಹಾಗೂ ತೇಜಸ್ಸನ್ನು ಹೆಚ್ಚಿಸುವಂತದ್ದು.

ಜನಿವಾರದ ಪ್ರಮುಖ ನಿಯಮಗಳು

ಜನಿವಾರ ಧರಿಸುವುದು ಕೇವಲ ದಾರವನ್ನು ಹಾಕಿಕೊಳ್ಳುವುದಲ್ಲ.  ಅದಕ್ಕೆ ಕೆಲವು ಆಚರಣಾತ್ಮಕ ನಿಯಮಗಳೂ ಇವೆ.

  •  ಮಲಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ಜನಿವಾರವನ್ನು ಬಲ ಕಿವಿಯ ಮೇಲಿರಿಸುವ ಪದ್ಧತಿ ಇದೆ. ನಂತರ ಕೈ-ಕಾಲುಗಳನ್ನು ತೊಳೆದು ಅದನ್ನು ಪುನಃ ಸರಿಯಾಗಿ ಧರಿಸಬೇಕು.
  •  ಜನಿವಾರದ ಒಂದು ಎಳೆ ತುಂಡಾದರೂ ಅದನ್ನು ಬದಲಾಯಿಸಬೇಕು.
  •  ಹಳೆಯದಾದ ಅಥವಾ ಕೊಳಕಾದ ಜನಿವಾರವನ್ನು ತೆಗೆದು ಹೊಸದನ್ನು ಧರಿಸಬೇಕು.
  •  ಜನನ ಅಥವಾ ಮರಣಕ್ಕೆ ಸಂಬಂಧಿಸಿದ ಸೂತಕದ ನಂತರ ಜನಿವಾರ ಬದಲಾಯಿಸುವ ಸಂಪ್ರದಾಯವಿದೆ.
  • ಮನಬಂದಂತೆ ಜನಿವಾರವನ್ನು ತೆಗೆದುಹಾಕಬಾರದು.  ಧಾರ್ಮಿಕ ಶಿಸ್ತಿನ ಭಾಗವಾಗಿ ಅದನ್ನು ಗೌರವದಿಂದ ಕಾಪಾಡಬೇಕು.

ಈ ನಿಯಮಗಳ ಹಿಂದಿರುವ ಮೂಲ ಉದ್ದೇಶ ಶುಚಿತ್ವ, ಶಿಸ್ತು ಮತ್ತು ಸದಾ ಜಾಗೃತ ಜೀವನ ನಡೆಸುವ ಮನೋಭಾವವನ್ನು ಬೆಳೆಸುವುದು ಎಂಬ ಸಾಂಪ್ರದಾಯಿಕ ವಿವರಣೆಯಿದೆ.

ಜನಿವಾರದ ‘ವೈಜ್ಞಾನಿಕ ಮಹತ್ವ’ — ನಂಬಿಕೆ ಮತ್ತು ವಾಸ್ತವದ ನಡುವೆ

ಜನಿವಾರಕ್ಕೆ ಸಂಬಂಧಿಸಿದಂತೆ ಹಲವು ವೈಜ್ಞಾನಿಕ ವಿವರಣೆಗಳು ಜನಪ್ರಿಯವಾಗಿವೆ. ಉದಾಹರಣೆಗೆ, ಬಲ ಕಿವಿಯ ಭಾಗದಲ್ಲಿರುವ ನರಗಳು ದೇಹದ ಕೆಲವು ಅಂಗಗಳೊಂದಿಗೆ ಸಂಬಂಧ ಹೊಂದಿದ್ದು, ಜನಿವಾರವನ್ನು ಕಿವಿಯ ಮೇಲೆ ಇಡುವುದರಿಂದ ಜೀರ್ಣಕ್ರಿಯೆ ಅಥವಾ ಉದರ ಸಂಬಂಧಿ ಸಮಸ್ಯೆಗಳಿಗೆ ಸಹಾಯವಾಗುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ಜನಿವಾರ ಧರಿಸುವುದರಿಂದ ದೇಹದ ಸೂರ್ಯನಾಡಿ ಜಾಗೃತವಾಗುತ್ತದೆ, ಭಯ ಮತ್ತು ಕೆಟ್ಟ ಕನಸುಗಳು ದೂರವಾಗುತ್ತವೆ, ಆಲಸ್ಯ ಕಡಿಮೆಯಾಗುತ್ತದೆ ಎಂಬ ನಂಬಿಕೆಗಳೂ ಇವೆ.  ಜನಿವಾರ ಧಾರಣೆ ಮಾಡಿದ ವ್ಯಕ್ತಿಯಲ್ಲಿ ಶಿಸ್ತು, ಸ್ವನಿಯಂತ್ರಣ, ಶುಚಿತ್ವ ಮತ್ತು ಕರ್ತವ್ಯಪ್ರಜ್ಞೆ ಬೆಳೆಸುವ ಸಾಂಸ್ಕೃತಿಕ ಉದ್ದೇಶ ಹೊಂದಿವೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯ ಎಂಬ ಅರಿಷಡ್ವರ್ಗಗಳನ್ನು ನಿಯಂತ್ರಿಸಬೇಕು ಎಂಬ ಸಂದೇಶವೂ ಇದರೊಂದಿಗೆ ಜೋಡಿಸಲಾಗಿದೆ.

ಯಾರು ಎಷ್ಟು ಎಳೆ ಜನಿವಾರ ಧರಿಸ ಬೇಕು?

ಈ ಮಂತ್ರೋಚ್ಛಾರ ಮಾಡಿದ ನಂತರ ಜನಿವಾರವನ್ನು ಧಾರಣೆ ಮಾಡಿ ಯಥಾ ಶಕ್ತಿ 32, 64, 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.

  • ಬ್ರಹ್ಮಚಾರಿಗಳು ಮೂರೆಳೆಯ ಒಂದು ಜನಿವಾರವನ್ನು ಮಾತ್ರಾ ಧರಿಸಿದರೆ,
  • ಗೃಹಸ್ಥರು / ವಿವಾಹಿತರು ಮೂರೆಳೆಯ ಎರಡನೇ ಜನಿವಾರವನ್ನು ಧಾರಣೆ ಮಾಡುತ್ತಾರೆ. ಮೊದಲನೇ ಜನಿವಾರ ತನ್ನದಾದರೆ ಮತ್ತೊಂದು ತನ್ನ ಪತ್ನಿಯ ಪರವಾಗಿ ಧರಿಸುತ್ತಾರೆ. ಅಕಸ್ಮಾತ್ ಎರಡನೇ ಮದುವೆ ಯಾದವರು ಮೂರನೇ ಜನಿವಾರವನ್ನೂ ಧರಿಸುತ್ತಾರೆ.
  • ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ, ದೇವರಿಗೆ ಅಥವಾ ಹಿರಿಯರಿಗೆ ನಮಸ್ಕರಿಸುವಾಗ ಹೆಗಲ ಮೇಲೆ ಉತ್ತರೀಯ(ಶಲ್ಯ) ಇರಲೇ ಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ. ಹಾಗಾಗಿ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬಾರದಂತೆ ಉತ್ತರೀಯದ ಬದಲಾಗಿ ಮತ್ತೊಂದು ಹೆಚ್ಚಿನ ಅಂದರೆ ಮೂರನೇ ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ.
  • ಇನ್ನೂ ಕೆಲವು ಗೃಹಸ್ಥರು ನಾಲ್ಕು ಜನಿವಾರ ಧರಿಸುವುದೂ ಉಂಟು. ಅಕಸ್ಮಾತ್ ಕಾರಾಣಾಂತರಗಳಿಂದ ಜನಿವಾರ ಕಿತ್ತು ಹೋದಲ್ಲಿ, ಅದನ್ನು ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಕಿತ್ತು ಹೋದರೂ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ. ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ಹಾಗಾಗಿ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕನೇ ಜನಿವಾರವನ್ನು ಹಾಕಿಕೊಳ್ಳುವರು.
  • ಇತ್ತೀಚೆಗೆ ಅನಾರೋಗ್ಯದ ನಿಮಿತ್ತ ನೆಲದ ಮೇಲೆ ಕುಳಿತು ಊಟ ಮಾಡಲಾಗದೇ ಟೇಬಲ್ ಮೇಲೆ ಕುಳಿತು ಊಟ ಮಾಡುವುದು ಸಹಜವಾಗಿದೆ. ಈ ಲೋಪದ ಪರಿಹಾರಾರ್ಥವಾಗಿ ಕೆಲವು ಶ್ರೋತ್ರೀಯರು ಐದನೇ ಜನಿವಾರವನ್ನು ಧರಿಸುವುದು ರೂಢಿಯಲ್ಲಿದೆ.

ಹಾಗೆ ಜನಿವಾರ ಬದಲಾಯಿಸಿದ ನಂತರ ತಂದೆ ಇಲ್ಲದವರು ತಮ್ಮ ಪಿತೃಗಳಿಗೆ ತರ್ಪಣ ನೀಡಿದ ನಂತರ ಸಪ್ತ ಋಷಿ ಮಂಡಲಗಳಿಗೆ ಸತ್ವದ ಹಿಟ್ಟಿನ ನೈವೇದ್ಯ ಮಾಡಿ, ಮಹಾ ಮಂಗಳಾರತಿ ಮಾಡುವ ಮೂಲಕ ಉಪಾಕರ್ಮ ವಿಧಿ ವಿಧಾನಗಳು ಸಂಪೂರ್ಣಗೊಳ್ಳುತ್ತದೆ.

ಹಳೆಯ ಜನಿವಾರವನ್ನು ಮಾರನೇಯ ದಿನ ಸಂಧ್ಯಾವಂದನೆ ಮಾಡಿದ ನಂತರ ಸೊಂಟದ ಕೆಳಗಿನ ಮೂಲಕ ತೆಗೆದು ಅದನ್ನು ಛಿನ್ನ ಮಾಡಿ (ಒಂದೆಳೆಯನ್ನು ಕತ್ತರಿಸಿ) ಕೆರೆ/ನದಿಯ ನೀರಿಗೋ ಇಲ್ಲವೇ ಯಾರೂ ತುಳಿಯದ ಜಾಗದಲ್ಲಿ ವಿಸರ್ಜಿಸುತ್ತಾರೆ.

ಉಪಾಕರ್ಮದ ವಿಶೇಷ ಪ್ರಸಾದ — ಸತ್ವದ ಹಿಟ್ಟು

ಉಪಾಕರ್ಮದ ದಿನ ಮಾತ್ರವೇ ಸಿದ್ಧ ಪಡಿಸುವ ವಿಶೇಷವಾದ ಪ್ರಸಾದವೇ ಸತ್ವದ ಹಿಟ್ಟು. ಪೂಜೆಗೆ ಬಂದವರೆಲ್ಲರೂ ತಂದಿದ್ದ ಬಗೆ ಬಗೆಯ ಹಣ್ಣುಗಳನ್ನು ಸಣ್ಣಗೆ ಹೆಚ್ಚಿ, ಅಕ್ಕಿ ಹಿಟ್ಟು, ಬೆಲ್ಲ, ಜೇನುತುಪ್ಪಾ, ಹಾಲು, ಮೊಸರು, ತುಪ್ಪಾ ಮತ್ತು ಎಳ್ಳನ್ನು ಜೊತೆಗೆ ಕಾಯಿ ತುರಿ ಸೇರಿಸಿ ಹದವಾಗಿ ಬೆರೆಸಿದರೆ ಸತ್ವದ ಹಿಟ್ಟು ಸಿದ್ಧವಾಗುತ್ತದೆ. ಎಲ್ಲಾ ಪರಿಕರಗಳು ಹಸಿ ಪದಾರ್ಥಗಳಾಗಿದ್ದರೂ ತಿನ್ನಲು ಬಹಳ ರುಚಿಯಾಗಿತ್ತದೆ. ಸಾಧಾರಣವಾಗಿ ಬಂದವರೆಲ್ಲರೂ ಯಥಾ ಶಕ್ತಿ ತಾವು ತಂದ ಡಬ್ಬಿಗಳಲ್ಲಿ ಈ ಪ್ರಸಾದವನ್ನು ತುಂಬಿ ಕೊಂಡು ಮನೆಗೆ ಹೋಗಿ ತಮ್ಮ ಕುಟುಂಬದೊಡನೆ ಉಪಾಕರ್ಮದ ಪ್ರದಾದವಾಗಿ ಸ್ವೀಕರಿಸುವ ಪದ್ದತಿ ಇದೆ.

ಹೀಗೆ ಉಪಾಕರ್ಮ ಮುಗಿಸಿಕೊಂಡು ಮನೆಯೊಳಗೆ ನೇರವಾಗಿ ನುಗ್ಗುವಂತಿಲ್ಲ. ಉಪಾಕರ್ಮದ ನಂತರ ಮನೆಗ ಮುಂಬಾಗಿಲಿನ ಹೊಸಿಲಿನಲ್ಲಿ ನಿಂತರೆ ಒಳಗಿನಿಂದ ಹಿರಿಯ ಮುತ್ತೈದೆಯರು ಇಲ್ಲವೇ ಚಿಕ್ಕ ಹೆಣ್ಣು ಮಕ್ಕಳು ನೂತನ ಜನಿವಾರಧಾರಿಗಳಿಗೆ ಆರತಿ ಬೆಳಗಿ ಒಳಗೆ ಬರಮಾಡಿಕೊಳ್ಳುತ್ತಾರೆ. ನಂತರ ಜನಿವಾರ ಧಾರಿಗಳೆಲ್ಲರೂ ಆರತಿ ಬೆಳಗಿದವರಿಗೆ ಯಥಾ ಶಕ್ತಿ ಕಾಣಿಕೆಯನ್ನು ನೀಡುವ ಸಂಪ್ರದಾಯ ಕೆಲವರ ಮನೆಯಲ್ಲಿ ರೂಢಿಯಲ್ಲಿದೆ. ಅಂದಿನ ಉಪಹಾರಕ್ಕೆ ಜನಿವಾರದ ಸಂಕೇತವಾಗಿ ಉದ್ದುದ್ದನೆಯ ಒತ್ತು ಶ್ಯಾವಿಗೆಯನ್ನು ಮಾಡುವ ರೂಢಿ ಹಲವರ ಮನೆಯಲ್ಲಿದೆ.

ಸಮಯಾಭಾವದಿಂದಲೋ ಇಲ್ಲವೇ ನಾನಾ ಕಾರಣಗಳಿಂದ ಈ ರೀತಿಯಾಗಿ ಶಾಸ್ತ್ರೋಕ್ತವಾಗಿ ಉಪಾಕರ್ಮದ ನಿಯಮಿತ ವಿಧಿ ವಿಧಾನಗಳ ಮುಖಾಂತರ ಜನಿವಾರ ಬದಲಿಸಿಕೊಳ್ಳಲು ಆಗದಿದ್ದವರು ಮನೆಯಲ್ಲಿಯೇ ಬೆಳಿಗ್ಗೆ ಸಂಧ್ಯಾವಂಧನೆ ಮಾಡಿ ಜನಿವಾರಗಳಿಗೆ ಅರಿಶಿನ ಹಚ್ಚಿ ಕುಂಕುಮದ ಮೂಲಕ ಪೂಜೆ ಮಾಡಿ ಯಜ್ಞೋಪವೀತ ಧಾರಣೆಯ ಮಂತ್ರ ಪಠಿಸುತ್ತಾ ನೂತನ ಜನಿವಾರ ಧರಿಸಿ ಯಥಾ ಶಕ್ತಿ ಗಾಯತ್ರೀ ಮಂತ್ರ ಜಪಿಸಿ ಮಾರನೆಯ ದಿನ ಸಂಧ್ಯಾವಂದನೆ ಮಾಡಿದ ನಂತರ ಹಳೆಯ ಜನಿವಾರವನ್ನು ವಿಸರ್ಜಿಸ ಬೇಕು.

up2

ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ

ಜನಿವಾರ ಕೇವಲ ಬ್ರಾಹ್ಮಣ, ವೈಶ್ಯ ಮತ್ತು ಕ್ಷತ್ರಿಯರಿಗೇ ಮಾತ್ರವೇ ಮೀಸಲಾಗಿಲ್ಲದೇ, ಪ್ರತಿಯೊಬ್ಬ ಹಿಂದುವೂ ಜನಿವಾರವನ್ನು ಧರಿಸ ಬಹುದಾಗಿದೆ . ಅದಕ್ಕೆ ನಮ್ಮ ಶಾಸ್ತ್ರ ಸಂಪ್ರದಾಯಗಳಲ್ಲಿ ಯಾವುದೇ ಅಡೆತಡೆಗಳಿಲ್ಲ. ಆದರೆ ಜನಿವಾರವನ್ನು ಧರಿಸಿದ ಮೇಲೆ ಅದರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕಾಗುತ್ತದೆ. ಆಗಲೇ ಯಜ್ಞೋಪವೀತ ಧಾರಣೆಯ ಉದ್ದೇಶ ಸಫಲವಾಗುತ್ತದೆ. ಹಾಗೆ ಸರಿಯಾಗಿ ನಿಯಮಗಳನ್ನು ಪಾಲಿಸದ ವ್ಯಕ್ತಿಯ ಯಜ್ಞೋಪವೀತ ಕೇವಲ ನೂಲಿನ ಎಳೆಯಾಗಿ ಹೋಗಿ ಯಜ್ಞೋಪವೀತ ಫಲ ಆತನಿಗೆ ಲಭಿಸುವುದಿಲ್ಲ.

ಜನಿವಾರದ ಕಥೆಯಲ್ಲಿ ಶಿಶುನಾಳ ಶರೀಫರ ವಿಶೇಷ ಪ್ರಸಂಗ

ಜನಿವಾರವು ಒಂದು ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ಸೀಮಿತವೇ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಶುನಾಳ ಶರೀಫರ ಪ್ರಸಂಗ ಅತ್ಯಂತ ಆಸಕ್ತಿದಾಯಕ.  ಪರಮ ಜ್ಞಾನಿಗಳೆಂದು ಪ್ರಖ್ಯಾತರಾಗಿದ್ದ ಗೋವಿಂದ ಭಟ್ಟರು ಮುಸ್ಲಿಂ ಬಾಲಕ ಶರೀಫರಿಗೆ ಜನಿವಾರ ಧಾರಣೆ ಮಾಡಿಸಿ ಮಂತ್ರೋಪದೇಶ ನೀಡಿದರು ಎಂಬ ಪ್ರಸಿದ್ಧ ಐತಿಹ್ಯವಿದೆ. ಮುಂದೆ ಸಂತ ಶಿಶುನಾಳ ಶರೀಫರಾದ ಅವರು ಇದೇ ಅನುಭವವನ್ನು ಆಧರಿಸಿ “ಷರೀಫರು ಹಾಕಿದ ಜನಿವಾರವಾ, ಸದ್ಗುರುನಾಥ ಹಾಕಿದ ಜನಿವಾರವಾ” ಎಂಬ ಅರ್ಥಪೂರ್ಣ ಹಾಡನ್ನು ರಚಿಸಿದರು. ಈ ಹಾಡು ಮುಂದೆ ದಿವಂಗತ ಸಿ. ಅಶ್ವಥ್ಅವರ ಕಂಠದಲ್ಲಿ ಜನಪ್ರಿಯವಾಯಿತು. ಈ ಪ್ರಸಂಗ ಜನಿವಾರದ ಚರ್ಚೆಯನ್ನು ಧರ್ಮದ ಗಡಿಗಳಾಚೆಗೂ ಕೊಂಡೊಯ್ಯುವ ಒಂದು ಸಾಂಸ್ಕೃತಿಕ ಉದಾಹರಣೆಯಾಗಿದೆ.

ಇಂದಿನ ಕಾಲದಲ್ಲಿ ಹೇಳೋದು ಶಾಸ್ತ್ರ. ತಿನ್ನೋದು ಬದನೇ ಕಾಯಿ ಎಂಬಂತೆ ಹೆಸರಿಗಷ್ಟೇ ಯಜ್ಞೋಪವೀತ ಧಾರಣೆ ಮಾಡಿ ಯಾವುದೇ ಆಚಾರ ವಿಚಾರಗಳನ್ನು ಪಾಲಿಸದವರೇ ಹೆಚ್ಚಾಗಿರುವಾಗ ಈ ಉಪಾಕರ್ಮ ಎನ್ನುವುದು ಒಂದು ರೀತಿಯ ಕಂದಾಚಾರವಾಗಿ ಮಾರ್ಪಾಡಾಗಿ ಹೋಗಿರುವುದು ವಿಷಾಧನೀಯವೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

33 thoughts on “ಉಪಾಕರ್ಮ ಎಂಬ ಸಂಸ್ಕಾರ ಮತ್ತು ನಿಯಮ”

  1. Amazingly and intricately written.Honestly I didn’t know 99% of it.Thanks for posting such a well researched article.I want everyone to read and understand the customs we are supposed to follow.

  2. ತುಂಬಾ ಚೆನ್ನಾಗಿ ಸಾಮಾನ್ಯರಿಗೂ ಅರ್ಥವಾಗುವಂತೆ ಅರ್ಥವತ್ತಾಗಿ ಈ ಉಪಾಕರ್ಮ ಧ್ಯೇಯ, ವಿಧಿ ನಿಯಮಗಳನ್ನು ವಿವರಿಸಿದ್ದೀರಿ. ಧನ್ಯವಾದಗಳು.

  3. ತುಂಬಾ ಚೆನ್ನಾಗಿದೆ, ಅನೇಕ ಹೊಸ ಮಾಹಿತಿಯನ್ನು ನೀಡಿದ್ದಕ್ಕೆ ಧನ್ಯವಾದಗಳು. ಕೆಲವರು ಪಂಕ್ತಿ ದೋಷ ಪರಿ‌ಹಾರಾರ್ಥಕ್ಕಾಗಿ ಐದನೇಯ ಯಜ್ಞೋಪವೀತ ಧರಿಸುತ್ತಾರೆ. ಈಗ ಎಲ್ಲೆಡೆ ಯಂತ್ರದಿಂದ ತಯಾರಾದ ಯಜ್ಞೋಪವೀತ ದೊರೆಯುತ್ತದೆ. ಹಿಂದೆ ತಕ್ಕಲಿಯಲ್ಲಿ ಮಾಡಿದ ಅಥವಾ ಕೈಯಿಂದಲೇ ಹೊಸೆದ ಜನಿವಾರ ಸಿಗುತ್ತಿತ್ತು. ತಂತು ದೇವತೆಗಳ ಆವಾಹನೆಯಾದ ಸಂಸ್ಕಾರಗೊಂಡ ಜನಿವಾರ ಸಿಗುವುದು ಈ ದಿನಗಳಲ್ಲಿಅಪರೂಪವೇ ಸರಿ.

  4. ಸೃಷ್ಟಿ, ಸ್ಥಿತಿ, ಲಯ… ಗಳು ತ್ರಿಗುಣಗಳು. ತ್ರಿಗುಣ ಸಾಧನೆಯೇ ಜನಿವಾರ ಧಾರಣೆ -ಆಚರಣೆಯ- ಸಿದ್ಧಾಂತ ಈ ಮೂರೂ ತತ್ವಗಳನ್ನು ತಿಳಿಸುವದೇ ಗಾಯತ್ರಿ ಮಂತ್ರ.
    ಸವಿತು: ಅಂದರೆ ಅಹಂ ಒಳಗೊಂಡ ಆತ್ಮ.ಸೂರ್ಯತತ್ವ. ಪ್ರತಿಯೊಂದು ಜೀವಿಯಲ್ಲಿರುವದು.

    ಸವಿತುರ್ವರೇಣ್ಯ … ನರ.
    ನರನವರೆಗೆ ಅವತೀರ್ಣಗೊಂಡ ಪ್ರಜ್ಞೆಯೇ ನಾರಾಯಣ.
    ವ್ಯಕ್ತಿಭಾವ ಲಯವಾಗಿ ತತ್ವಭಾವ ಅಳವಡುವದೇ ನರನಿಂದ ನಾರಾಯಣ ಪಯಣ.
    ಉತ್ತಮ ಲೇಖನ
    ಧನ್ಯವಾದಗಳು

  5. Very informative. Need such information at this point of time to youngsters. Now a days, even elders do not know / hesitate to practice / teach to their children. Samskara cannot be learner by only reading. It is the rituals which we teach and practice in our daily lives.
    Expecting more articles like this.

    1. ಧನ್ಯೋಸ್ಮಿ. ನನ್ನ ಬ್ಯಾಗ್ನಲ್ಲಿ ಬಹುತೇಕ ಎಲ್ಲಾ ಹಬ್ಬಗಳ ಆಚರಣೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಬರೆದಿದ್ದೇನೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ

  6. Confusion about when to remove old hanikarak. Some books say same day.this article says next day. Please clarify.

    1. ಸಾಧಾರಣವಾಗಿ ನಿತ್ಯ ಸಂಧ್ಯಾವಂದನೆ ಮಾಡುವವರು ಮಾರನೇಯ ದಿನ ಪ್ತಾತರ್ ಸಂಧ್ಯಾವಂದನೆ ಮುಗಿಸಿದ ನಂತರ ಹಳೇಯ ಜನಿವಾರ ವಿಸರ್ಜಸುತ್ತಾರೆ. ನಿತ್ಯ ಸಂಧ್ಯಾವಂದನೆ ಮಾಡವವರು ಅಂದೇ ವಿಸರ್ಜನೆ ಮಾಡುತ್ತಾರೆ

  7. ಬಹಳ ಉಪಯುಕ್ತವಾದ ಮಾಹಿತಿಗಾಗಿ ಧನ್ಯವಾದಗಳು ಮಾನ್ಯರೇ.

  8. ಬಹಳ ಉಪಯುಕ್ತವಾದ ಮಾಹಿತಿಗಾಗಿ ಧನ್ಯವಾದಗಳು ಮಾನ್ಯರೇ.

  9. ಉಪಾಕರ್ಮದ ಉದ್ದೇಶ, ಅರ್ಥ,ಮಹತ್ವ, ಮಂತ್ರಗಳ ಅರ್ಥ ಉಪಯೋಗ ಇವುಗಳನ್ನು ತುಂಬಾ ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ನೀವು ಯಾವುದೇ ವಿಚಾರವನ್ನು ತಿಳಿಸಿದರೂ ತುಂಬಾ ವಿವರವಾಗಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸುವುದು ನಿಮ್ಮ ವೈಶಿಷ್ಟ್ಯ . ಹೃತ್ಪೂರ್ವಕ ವಂದನೆಗಳು.

  10. ಉತ್ತಮ ವಿವರಣೆಗಳಿಂದ ನೂಲುಹುಣ್ಣಿಮೆ ಮತ್ತು ಯಜ್ಞೋಪವೀತದ ಮಹತ್ವ ತಿಳಿಸಿದ್ದೀರಿ. ವಿವರವಾದ ಮಾಹಿತಿಗೆ ಧನ್ಯವಾದಗಳು..

Leave a Reply