ಕುಂದಾಪುರದಿಂದ ಸುಮಾರು 35 ಕಿ.ಮೀ. ಸಿದ್ದಾಪುರದಿಂದ 6 ಕಿ.ಮೀ, ಕೊಲ್ಲೂರಿನಿಂದ ಸುಮಾರು 40 ಕಿ.ಮೀ. ಗಳಷ್ಟು ದೂರದಲ್ಲಿರುವ ಕಮಲಶಿಲೆಯಲ್ಲಿ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯವಿದೆ. ಈ ದೇವಸ್ಥಾನವು ಕುಬ್ಜಾ ನದಿ ಹಾಗೂ ನಾಗತೀರ್ಥಗಳ ನದಿಗಳ ಸಂಗಮ ಕ್ಷೇತ್ರವಾಗಿದೆ. ಇಲ್ಲಿ ದುರ್ಗಾದೇವಿ ಲಿಂಗ ರೂಪಿಯಾಗಿ ನೆಲೆಸಿದ್ದಾಳೆ. ಲಿಂಗದಲ್ಲಿ ಮೂರು ಸ್ವರ್ಣರೇಖೆಗಳಿದ್ದು ಮಹಾಲಕ್ಷ್ಮೀ, ಮಹಾಕಾಳಿ ಹಾಗೂ ಮಹಾಸರಸ್ವತಿ ಐಕ್ಯವಾಗಿದ್ದಾರೆ ಎಂಬ ಪ್ರತೀತಿಯಿದೆ. ದೇವಾಲಯದ ಸುತ್ತಲೂ ಹೊರಪೌಳಿಯಲ್ಲಿ ಈಶ್ವರ, ಗಣಪತಿ, ಸುಬ್ರಹ್ಮಣ್ಯ, ಹೊಸಮ್ಮ, ಕ್ಷೇತ್ರಪಾಲ, ರಕ್ತೇಶ್ವರಿ, ಹುಲಿದೇವಿ ಮುಂತಾದ ಪರಿವಾರ ದೇವರುಗಳು ನೆಲೆಸಿದ್ದಾರೆ.
ಇಲ್ಲಿಯ ವಿಶೇಷತೆ ಏನೆಂದರೆ, ಲಿಂಗರೂಪಿ ದುರ್ಗಾಪರಮೇಶ್ವರಿಗೆ ಪ್ರತೀ ದಿನವೂ ಪಷ್ಪಾರ್ಚನೆ ಮಾಡುತ್ತಾರೆ. ದೇವಳದ ಪಕ್ಕದಲ್ಲಿಯೇ ಮಳೆಗಾಲದಲ್ಲಿ ಮಾತ್ರವೇ ಉಕ್ಕಿ ಹರಿಯುವ ಕುಬ್ಜಾ ನದಿ, ಪ್ರತಿ ವರ್ಷ ಶ್ರಾವಣದಲ್ಲಿ ಉಕ್ಕಿ ಹರಿದು ದೇವಿಯ ಗುಡಿ ಪ್ರವೇಶಿಸಿ ತಾಯಿಯ ಪಾದ ಮುಟ್ಟಿ ಅಭಿಷೇಕ ಮಾಡಿ ಲಿಂಗದ ಮೇಲಿನ ಪುಷ್ಪವನ್ನು ಮಾತ್ರವೇ ತೆಗೆದುಕೊಂಡು ಹೋಗುತ್ತದೆ ಎಂಬುದು ಈ ಕ್ಷೇತ್ರದ ಸ್ಥಳಪುರಾಣ.
ಈ ಅದ್ಭುತ ಕ್ಷಣಗಳನ್ನು ಈ ವೀಡಿಯೋ ಮೂಲಕ ಕಣ್ತುಂಬ ನೋಡಿ ಆನಂದಿಸಿ.
ಈ ರೀತಿಯಾಗಿ ಕುಬ್ಜಾ ನದಿ ದೇವಾಲಯವನ್ನು ಪ್ರವೇಶಿಸಲು ಇಂದು ಇತಿಹಾಸವಿದೆ.
ಸ್ಕಂಧ ಪುರಾಣದ ಸಹ್ಯಾದ್ರಿ ಕಾಂಡದ ಪ್ರಕಾರ ಕೈಲಾಸ ಪರ್ವತದಲ್ಲಿ ಪಿಂಗಳೆ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಕೈಲಾಸದಲ್ಲಿ ಶಿವ ಪಾರ್ವತಿಯ ಮುಂದೆ ಆಕೆ ಕೊಬ್ಬಿನಿಂದ ನರ್ತಿಸಲು ಹಿಂಜರಿದಾಗ ದೇವಿಯು ನಿನ್ನನು ನೋಡಿ ಎಲ್ಲರು ಅಸಹ್ಯ ಪಡುವಂತೆ ಕುಬ್ಜೆಯಾಗು. ನಿನ್ನ ಮೈ ಬೆನ್ನು ಎಲ್ಲವೂ ಅಂಕುಡೊಂಕು ಆಗಲಿ ಎಂದು ಶಾಪ ಕೊಡುತ್ತಾಳೆ. ಆ ಕ್ಷಣವೇ ಆ ಅಪ್ಸರೆಗೆ ತನ್ನ ತಪ್ಪಿನ ಅರಿವಾಗಿ ದೇವೀಯ ಮುಂದೆ ಕ್ಷಮೆ ಯಾಚಿಸುತ್ತಾ ,ಅಮ್ಮ ಈ ನಿನ್ನ ಮಗಳ ಮೇಲೇಕೆ ಇಷ್ಟೊಂದು ನಿಷ್ಕರುಣಿಯಾದೆ. ದಯವಿಟ್ಟು ನನ್ನ ದುರಹಂಕಾರವನ್ನು ಮನ್ನಿಸಿ ಶಾಪ ವಿಮೋಚನೆ ಮಾಡು ಎಂದು ಕಣ್ಣೀರು ಇಡುತ್ತಾಳೆ. ಆವಳು ಮಾಡಿದ ತಪ್ಪಿಗಾಗಿ ಪ್ರಾಯಶ್ವಿತ್ತವನ್ನು ಕೋರಿದ್ದನ್ನು ಮನ್ನಿಸಿದ ಪಾರ್ವತೀ ದೇವಿ ತನ್ನ ಶಾಪಕ್ಕೆ ವಿಮೋಚನೆಯ ದಾರಿಯನ್ನು ನೀಡುತ್ತಳೆ. ಮುಂದೆ ದುಷ್ಟರಾದ ಖರಾಸುರ ಮತ್ತು ರಟ್ಟಾಸುರ ರನ್ನು ಸಂಹಾರ ಮಾಡಲು ನಾನು ಬ್ರಾಹ್ಮಿ ದುರ್ಗಾಪರಮೇಶ್ವರಿಯಾಗಿ ಅವತರಿಸುತ್ತೇನೆ ಸಂಹಾರದ ನಂತರ ಉದ್ಭವ ಲಿಂಗ ರೂಪಿಯಲ್ಲಿ ಅವತರಿಸುತ್ತೇನೆ ಅಲ್ಲಿಯವರಿಗೂ ನೀನು ನಾನು ಹೇಳುವ ರೈಕ್ವ ಋಷಿಯ ಬಳಿ ನನ್ನ ಧ್ಯಾನದಲ್ಲಿ ಇರು. ಕಾಲ ಸಂದರ್ಭ ಬಂದಾಗ ನನ್ನ ಅವತಾರ ಆದಾಗ ನೀನು ನನ್ನ ಬಳಿ ಕುಬ್ಜ ನದಿಯಾಗಿ ಬಂದು ನನ್ನ ಸ್ಪರ್ಶ ಮಾಡಿ ಮೈತೊಳೆದು ಹೋಗಬೇಕು ಎಂದು ಆದೇಶ ನೀಡುತ್ತಾಳೆ.
ಅದೇ ರೀತಿ ಈಗಲೂ ಸಹ ಪ್ರತೀ ಶ್ರಾವಣದಲ್ಲಿ ಕುಬ್ಜಾ ನದಿ ಉಕ್ಕಿ ಹರಿದು ಗುಡಿ ಪ್ರವೇಶಿಸಿ ತಾಯಿ ದುರ್ಗೆಯ ಪದತಲಕ್ಕೆ ಪ್ರಣಾಮಗಳನ್ನು ಅರ್ಪಿಸಿ ಆಕೆಯ ಮುಡಿಯಲ್ಲಿರುವ ಪುಷ್ವವನ್ನು ಪ್ರಸಾದ ರೂಪದಲ್ಲಿ ತೆಗೆದುಕೊಂಡು ಹೋಗುತ್ತಾಳೆ.
ದುರ್ಗಾದೇವಿಯ ದೇವಲಯವನ್ನು ದರ್ಶನ ಮಾಡಿದರವರು ಅಲ್ಲೇ ಸ್ವಲ್ಪ ದೂರದಲ್ಲೇ ಇರುವ ಆದಿ ಗುಹಾಲಯಕ್ಕೆ ಭೇಟಿ ನೀಡುವುದು ವಾಡಿಕೆ. ಇದು ನಾಗದೇವತೆಗಳ ಸ್ಥಳ. ಈ ಆದಿ ಗುಹಾಲಯದ ನಾಗದೇವತೆಗಳಿಗೆ ಸ್ಥಳೀಯ ಬಳೆಗಾರರು ಪ್ರತಿನಿತ್ಯ ಬಂದು ಪೂಜೆ ಮಾಡುತ್ತಾರೆ. ಅಲ್ಲಿಂದ ಸ್ವಲ್ಪ ಮುಂದೆ ಸಾಗೋ ಕಿರಿದಾದ ಹಾದಿ ನೇರವಾಗಿ ಕಾಶಿಗೆ ಹೋಗುತ್ತದೆ ಎಂಬ ನಂಬಿಕೆಯಿದೆ. ಈ ನಾಗದೇವತೆಗಳ ಮೇಲಿನ ಗುಹೆಯಲ್ಲಿ ಸಾವಿರಾರು ಬಾವಲಿಗಳು ನೇತಾಡುತ್ತಿದ್ದರೂ, ಭಕ್ತಾದಿಗಳ ಸದ್ದು ಗದ್ದಲಕ್ಕಾಗಲೀ, ಬ್ಯಾಟರಿ ಬೆಳಕಿಗಾಗಲಿ ಸ್ವಲ್ಪವೂ ವಿಚಲಿತವಾಗದೇ ತಮ್ಮ ಪಾಡಿಗೆ ತಾವಿದ್ದು ಭಕಾದಿಗಳು ನೆಮ್ಮದಿಯಿಂದ ನಾಗದೇವತೆಗಳನ್ನು ದರ್ಶನ ಮಾಡಿಕೊಂಡು ಹೋಗಲು ಅನುವು ಮಾಡಿ ಕೊಡುತ್ತವೆ.
ಇಲ್ಲಿಂದ ಸ್ವಲ್ಪ ಮುಂದೆ ಸಾಗಿದರೆ ಬಲಭಾಗದಲ್ಲಿ ಕಾಣುವ ಸಣ್ಣ ಪೊಟರೆಯಂತಹ ಅರ್ಧ ಶಂಕುವಿನಾಕಾರಾದ ಸುರುಳಿಗಳಿರೋ ಆ ಜಾಗದಲ್ಲಿ ಸಾಗರದ ಬಳಿಯ ವರದಹಳ್ಳಿಯ ಶ್ರೀ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದರು ಎಂದು ಸ್ಥಳೀಯರು ತಿಳಿಸುತ್ತಾರೆ.
ಸುಂದರ ಪ್ರಕೃತಿಯ ಮಡಿಲ್ಲಿರುವ ಈ ದೇವಸ್ಥಾನ, ಆದಾರಾತಿಥ್ಯಕ್ಕೂ ಹೆಸರಾಗಿದೆ. ಪ್ರಸಿದ್ಧ ಶ್ರೀ ದುರ್ಗಾಂಬ ಟ್ರಾವೆಲ್ಸ್ ನ ಮಾಲೀಕರ ಕುಟುಂಬವೇ ಈ ದೇವಾಲಯದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ದೇವಸ್ಥಾನದ ಅರ್ಚಕರೂ ಬಹಳ ಶ್ರದ್ಧಾ ಭಕ್ತಿಯಿಂದ ಭಕ್ತಾದಿಗಳಿಗೆ ಪೂಜಾ ಕೈಂಕರ್ಯಗಳನ್ನು ನೆರೆವೇರಿಸಿಕೊಡುತ್ತಾರೆ. ಮುಂಚಿತವಾಗಿಯೇ ಕರೆ ಮಾಡಿ ತಿಳಿಸಿದಲ್ಲಿ ಒಂದೆರಡು ದಿನಗಳ ಕಾಲ ಈ ಕ್ಷೇತ್ರದಲ್ಲಿಯೇ ಉಳಿದುಕೊಳ್ಳುವ ಹಾಗೆ ಕೆಲವು ಕೊಠಡಿಗಳ ವ್ಯವಸ್ಥೆಯೂ ಇಲ್ಲಿದೆ. ಪ್ರತೀ ದಿನ ನೂರಾರು ಭಕ್ತಾದಿಗಳಿಗೆ ಎರಡು ಹೊತ್ತಿನ ದಾಸೋಹದ ಜೊತೆಗೆ ಸುತ್ತ ಮುತ್ತಲಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಹಸಿವನ್ನೂ ನೀಗಿಸುತ್ತಿರುವ ಈ ಕ್ಷೇತ್ರಕ್ಕೆ ಅಗತ್ಯವಾಗಿ ಸಮಯ ಮಾಡಿಕೊಂಡು ಕುಟುಂಬದ ಸಮೇತ ಹೋಗಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗೋಣ.
ಏನಂತೀರೀ?