ಶ್ರೀ ರಾಘವೇಂದ್ರ ಸ್ವಾಮಿಗಳು

ಸುಮಾರು ಏಳನೇ ಮತ್ತು ಎಂಟನೇ ಶತಮಾನದಲ್ಲಿ ಬೌಧ್ಧ ಮತ್ತು ಜೈನಧರ್ಮಗಳು ಉಚ್ಫ್ರಾಯ ಸ್ಥಿತಿ ತಲುಪಿ, ನಮ್ಮ ಅನೇಕ ಹಿಂದೂಧರ್ಮೀಯರು ಜೈನ ಧರ್ಮಕ್ಕೆ ಮತಾಂತರ ಹೊಂದುತ್ತಿದ್ದ ಕಾಲದಲ್ಲಿ ಸನಾತನ ಧರ್ಮದ ಮಹತ್ವ , ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿದವರು ಶ್ರೀ ಶಂಕರಾಚಾರ್ಯರು, ಶ್ರೀ ರಾಮಾನುಜಾಚಾರ್ಯರು ಮತ್ತು ನಮ್ಮ ಕರ್ನಾಟಕದವರೇ ಆದ ಶ್ರೀ ಮಧ್ವಾಚಾರ್ಯರು. ಅಂದಿನಿಂದ ಇಂದಿನವರೆಗೂ ನಮ್ಮ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಆಚಾರ ಪದ್ದತಿಗಳು ಇನ್ನೂ ರೂಢಿಯಲ್ಲಿದೇ ಎಂದರೆ ಅದಕ್ಕೆ ಮೂಲ ಕಾರಣೀಕರ್ತರು ಈ ಮೂರೂ ಆಚಾರ ತ್ರಯರು ಎಂದರೆ ತಪ್ಪಾಗಲಾರದು. ನಮ್ಮ ಕರ್ನಾಟಕದ ಹೆಮ್ಮೆಯ ವಿಚಾರವೆಂದರೆ ಈ ಮೂರೂ ಅಚಾರ ತ್ರಯರ ಮೂಲ ಶಕ್ತಿ ಪೀಠಗಳು ಕರ್ನಾಟಕದಲ್ಲಿಯೇ ಇವೆ. ಈ ಅಚಾರ ತ್ರಯರ ನಂತರ ಅವರ ಕಾರ್ಯಗಳನ್ನು ಯಶಸ್ವಿಯಾಗಿ ಹಲವಾರು ಗುರುಗಳು ಮುಂದುವರಿಸಿ ಕೊಂಡು ಹೋದವರಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳು ಅಗ್ರಗಣ್ಯರು ಎಂದರೆ ಅತಿಶಯೋಕ್ತಿಯೇನಲ್ಲ.

ಕನ್ನಡದಲ್ಲಿ ಉಪಲಬ್ಧವಿರುವ ಗ್ರಂಥಗಳ ಪೈಕಿ ಅತ್ಯಂತ ಹಳೆಯದಾದ ಕವಿರಾಜಮಾರ್ಗದಲ್ಲಿಯೇ ಹೇಳಿರುವಂತೆ ಕಾವೇರಿಯಿಂ.. ಗೋದಾವರಿಯ ವರೆಗೆ ಇದ್ದ ಕನ್ನಡನಾಡಿನಲ್ಲಿ ವಿಶಾಲವಾಗಿ ಹರಡಿದ್ದ ಕನ್ನಡಿಗರ ಪೈಕಿ ಇಂದಿನ ತಮಿಳುನಾಡಿನ ಭುವನಗಿರಿಯ ತಿಮ್ಮಣ್ಣ ಭಟ್ಟ ಮತ್ತು ಗೋಪಿಕಾಂಬ ಎಂಬ ದಂಪತಿಗಳಿಗೆ ಕ್ರಿ.ಶ.1595ರಲ್ಲಿ ಎರಡನೇಯ ಮಗುವಿನ ಜನನವಾಯಿತು. ಆ ಪುಟ್ಟ ಕಂದನಿಗೆ ವೆಂಕಣ್ಣಭಟ್ಟ (ವೆಂಕಟನಾಥ, ವೆಂಕಟಾಚಾರ್ಯ ಎಂದೂ ಸಂಬೋಧಿಸುತ್ತಾರೆ) ಎಂದು ನಾಮಕರಣ ಮಾಡಿದರು. ಬಾಲ್ಯದಿಂದಲೂ ಅತ್ಯಂತ ಬುದ್ಧಿವಂತ ಹುಡುಗನಾಗಿದ್ದ ವೆಂಕಣ್ಣ ಭಟ್ಟರು, ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಕಾರಣ ತಮ್ಮ ಬಾಲ್ಯದ ವಿದ್ಯಾಭ್ಯಾಸ ಮಧುರೈನಲ್ಲಿ ತಮ್ಮ ಸೋದರಮಾವ ಲಕ್ಷ್ಮಿ ನರಸಿಂಹಾಚಾರ್ಯರ ಮನೆಯಲ್ಲಿ ನಡೆದು ಪ್ರೌಢಾವಸ್ಥೆಯಲ್ಲಿ ಶ್ರೀ ಸರಸ್ವತಿ ಎಂಬ ಕನ್ಯೆಯೊಂದಿಗೆ ಜೊತೆ ವಿವಾಹವಾಯಿತು. ವಿವಾಹಾನಂತರ ಕುಂಭಕೋಣದಲ್ಲಿ ಶ್ರೀ ಸುಧೀಂದ್ರ ತೀರ್ಥರಲ್ಲಿ ದ್ವೈತ ವೇದಾಂತ ವ್ಯಾಸಂಗ ಮಾಡುತ್ತಾ ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಖಾಂಡ ಪಾಂಡಿತ್ಯ ಗಳಿಸಿದರು. ಜೊತೆ ಜೊತೆಗೆ ಅಲ್ಲಿಯೇ ಮಕ್ಕಳಿಗೆ ಸಂಸ್ಕೃತ ಮತ್ತು ವೇದಗಳನ್ನು ಕಲಿಸುತ್ತಿದ್ದರು ಮತ್ತು ಯಾರಿಂದಲೂ ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಎಲ್ಲರಿಗೂ ವಿದ್ಯಾದಾನ ಮಾಡುತ್ತಿದ್ದರು. ಹಾಗಾಗಿ ಅವರ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿರದೇ ಎಲ್ಲರಿಗೂ ತಿಂಗಳಿಗೆ ಎರಡು ದಿನ ಏಕಾದಶಿಯಾದರೇ, ಇವರ ಮನೆಯಲ್ಲಿ ಕನಿಷ್ಠ ಪಕ್ಷ ವಾರದಲ್ಲಿ ಎರಡು ಬಾರಿಯಾದರೂ ಏಕಾದಶಿ. ಅವರು ತಮ್ಮ ಹೆಂಡತಿ ಮಕ್ಕಳೊಂದಿಗೆ ಉಪವಾಸ ಇರಲೇ ಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎಂದೂ ಸಹಾ ತಾವು ನಂಬಿದ ಶ್ರೀ ಮೂಲರಾಮನ ಮೇಲಿನ ನಂಬಿಕೆ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ.

ವೆಂಕಣ್ಣಭಟ್ಟರ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯನ್ನು ಹುಡುಕುತ್ತಿರುವಾಗ, ಸಾಕ್ಷಾತ್ ಪರಮಾತ್ಮನೇ ಅವರ ಕನಸಿನಲ್ಲಿ ಬಂದು ಅಂಗೈಯಲ್ಲಿ ಬೆಣ್ಣೆ ಇಟ್ಟು ಕೊಂಡು ತುಪ್ಪಕ್ಕೇಕೆ ಹುಡುಕುತ್ತೀಯಾ? ನಿನ್ನ ಪರಮ ಶಿಷ್ಯ ವೆಂಕಟನಾಥನನ್ನೇ ಉತ್ತರಾಧಿಕಾರಿಯನ್ನಾಗಿ ಮಾಡು ಎಂದು ಸೂಚಿಸಿದರು. ಗುರುಗಳಿಂದ ಈ ವಿಷಯವನ್ನು ತಿಳಿದು ತಮ್ಮ ಸಂಸಾರದ ಹೊಣೆಯನ್ನು ಅರಿತು ಮೊದಲು ತಿರಸ್ಕರಿಸಿದರಾದರೂ ನಂತರ ಸಾಕ್ಷಾತ್ ಸರಸ್ವತೀ ದೇವಿಯೇ ಸ್ವಪ್ನದಲ್ಲಿ ಬಂದು ಸನ್ಯಾಸಾಶ್ರಮ ಸ್ವೀಕರಿಸಲು ಹೇಳಿದಾಗ, ನನ್ನ ಪ್ರತಿಯೊಂದು ಕೃತಿಯೂ ವೇದದ ಸಾರವಾಗಿರುವ ಹಾಗೆ ಬರೆಯಲು ಪ್ರೇರಣೆ ಇತ್ತಲ್ಲಿ ಮಾತ್ರವೇ ನಿನ್ನ ಆಜ್ಞೆಯನ್ನು ಪಾಲಿಸುವುದಾಗಿ ಎಂದು ಹೇಳಿದಾಗ, ಅದಕ್ಕೆ ಸಂತೋಷದಿಂದ ಸರಸ್ವತೀ ದೇವಿ ಆಶೀರ್ವಾದ ಮಾಡಿದ ನಂತರವೇ, ವೆಂಕಟನಾಥರು ಫಾಲ್ಗುಣ ಶುದ್ಧ ಬಿದಿಗೆಯಂದು ತಂಜಾವೂರಿನಲ್ಲಿ ತನ್ನ ಗುರುಗಳಾದ ಶ್ರೀ ಸುಧೀಂದ್ರ ತೀರ್ಥರ ಸಮ್ಮುಖದಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ಪ್ರಸಿದ್ಧರಾದರು.

ರಾಘವೇಂದ್ರ ಸ್ವಾಮಿಗಳ ಆಶ್ರಮದಲ್ಲಿ ಅವರ ಆಶ್ರಯದಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿ ಮಧ್ವ ಮತದ ಸಾರವನ್ನು ಜಗತ್ತಿಗೆ ಸಾರುವ ಕೈಕಂರ್ಯವನ್ನು ಮುಂದುವರಿಸಿದರು. ಸ್ವಾಮಿಗಳು ತಮ್ಮ ಮಧ್ವ ಮತದ ದೇಶಾದ್ಯಂತ ಪ್ರಚಾರ ಮಾಡುತ್ತಾ ಊರೂರಿನಲ್ಲಿ ಪಾಠ ಪ್ರಚಚನ ಮಾಡುತ್ತಾ , ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನುವಾದರು. ಇದರ ಜೊತೆಯಲ್ಲಿ ನೂರಾರು ಕೃತಿಗಳನ್ನು ರಚನೆ ಮಾಡಿದರು. ಸಂಸ್ಕೃತದಲ್ಲಿ ‘ಪರಿಮಳ , ನ್ಯಾಯಮುಕ್ತಾವಳಿ , ತತ್ವಮಂಜಿರಿ, ಸೂತ್ರಭಾಷ್ಯ, ಭಾರದೀಪ, ಬ್ರಹ್ಮಸೂತ್ರಭಾಷ್ಯ ತತ್ತ್ವ ಪ್ರಕಾಶಿಕಾ ಭಾವದೀಪ, ತತ್ತ್ವೋದ್ದೀಪಟೀಕಾ, ಪ್ರಮಾಣ ಪದ್ಧತಿ ಟಿಪ್ಪಣಿ, ತರ್ಕತಾಂಡವ ಟಿಪ್ಪಣಿ, ತಾತ್ಪರ್ಯ ನಿರ್ಣಯ ಮುಂತಾದ ಅಮೂಲ್ಯ ಕೃತಿಗಳ ಜೊತೆಗೆ ಮಹಾಭಾರತ ಕೃತಿಗಳಿಗೆ ಅರ್ಥ ವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ. ಗುರುರಾಯರು ಕನ್ನಡದಲ್ಲಿಯೂ ಅದರಲ್ಲಿ ಪ್ರಮುಖವಾಗಿ ಇಂದು ಇಂದು ಎನಗೆ ಗೋವಿಂದ ನಿನ್ನಯ ಪಾದಾರ ವಿಂದವ ತೋರೋ ಮುಕುಂದನೇ… ಮುಂತಾದ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮುಂದೆ ಅದು ಕನ್ನಡ ಚಲನಚಿತ್ರದಲ್ಲಿಯೂ ಅತ್ಯಂತ ಜನಪ್ರಿಯ ಭಕ್ತಿಗೀತೆಯಾಗಿದೆ. ರಾಯರು ಕೇವಲ ಯತಿಗಳಷ್ಟೇ ಅಲ್ಲದೇ, ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರಾಗಿ ಅತ್ಯುತ್ತಮವಾದ ವೈಣೀಕರಾಗಿದ್ದರು. ಒಂದು ರೀತಿ ವೀಣಾವಾದನ ಅವರಿಗೆ ತಮ್ಮ ಹಿರಿಯರಿಂದ ಬಂದ ಬಳುವಳಿ ಎಂದೇ ಹೇಳ ಬೇಕು. ರಾಯರ ತಂದೆ, ತಿಮ್ಮಣ್ಣ ಭಟ್ಟರ ತಾತನ ಹೆಸರು ಕೃಷ್ಣ ಭಟ್ಟ. ಕೃಷ್ಣ ಭಟ್ಟರು ವೀಣೆಯಲ್ಲಿ ಖ್ಯಾತ ಪಂಡಿತರು ಮತ್ತು ವಿಜಯನಗರದ ಕೃಷ್ಣದೇವರಾಯನಿಗೇ ವೀಣೆ ಕಲಿಸಿದ ಗುರುಗಳಾಗಿದ್ದವರು.

ಗುರು ರಾಯರಿಗೆ ತಿಳಿದೋ ತಿಳಿಯದೋ ಹಲವಾರು ಅಧ್ಭುತ ಪವಾಡಗಳಿಗೆ ಕಾರಣೀಭೂತರಾಗಿದ್ದಾರೆ. ಅಂತಹ ಕೆಲವೊಂದು ಪ್ರಸಂಗಗಳು ಹೀಗಿವೆ.

ಜಗನ್ನಾಥ ದಾಸರು ತಮ್ಮ ದಾಸದೀಕ್ಷೆ ಪೂರ್ವದಲ್ಲಿ ವಿಜಯದಾಸರ ಬಗ್ಗೆ ಅನಾದರದಿಂದ ಅವರ ಬದರಿ ಸಮಾರಾಧನೆ ಆಹ್ವಾನವನ್ನು ಒಪ್ಪಿಕೊಳ್ಳಲು ಇಷ್ಟವಿಲ್ಲದೆ ಉದರಶೂಲವೆಂದು ಆಹ್ವಾನಿಸಲು ಬಂದ ಗೋಪಾಲ ದಾಸರಿಗೆ ಸುಳ್ಳು ಹೇಳಿ ಸಮಾರಾಧನೆಗೆ ಬರಲು ನಿರಾಕರಿಸುತ್ತಾರೆ. ಗಣಪತಿ ಅಂಶರಾದ ಗೋಪಾಲ ದಾಸರಿಗೆ ನಿಜ ತಿಳಿದು ಉದರಶೂಲೆಯೇ ಹಾಗೇ ಆಗಲಿ ಎಂದು ಶಪಿಸಿ ಹೋಗುತ್ತಾರೆ. ಶಾಪದಿಂದ ಪೀಡಿತರಾದ ಶ್ರೀನಿವಾಸಾಚಾರ್ಯರು (ಪೂರ್ವ ನಾಮ) ಘಟಿಕಾಚಲಕ್ಕೆ ಹೋಗಿ 48 ದಿನಗಳ ಕಾಲ ಪ್ರಾಣದೇವರ ಸೇವೆ ಮಾಡುತ್ತಾರೆ. ಅಲ್ಲಿ ಮಂತ್ರಾಲಯಕ್ಕೆ ಹೋಗಲು ಸೂಚನೆಯಾಗುತ್ತದೆ. ಮಂತ್ರಾಲಯಕ್ಕೆ ಬಂದು ಭಕ್ತಿಯಿಂದ ಗುರು ರಾಯರ ಸೇವೆಯನ್ನು ಮಾಡುತ್ತಾರೆ. ಸುಪ್ರೀತರಾದ ರಾಯರು ಕನಸಿನಲ್ಲಿ ಬಂದು ಫಲಮಂತ್ರಾಕ್ಷತೆ ನೀಡಿ ವಿಜಯದಾಸರ ಬಳಿ ಹೋಗಲು ತಿಳಿಸಿ ಶುಭವಾಗಲಿ ಎಂದು ಆನುಗ್ರಹಿಸುತ್ತಾರೆ. ನಿದ್ದೆಯಿಂದ ಎಚ್ಚರವಾಗಲು ಅವರು ಅಂಗೈಯಲ್ಲಿ ಮಂತ್ರಾಕ್ಷತೆಯನ್ನು ನೋಡಿ ಪುಳಕಿತರಾಗಿ ವಿಜಯದಾಸರ ಮನೆಗೆ ಬರಲು ಇವರ ಆಗಮನಕ್ಕೇ ಕಾಯುತ್ತಿದ್ದ ದಾಸರು ಗುರುರಾಯರ ಅನುಗ್ರಹವಾಯಿತೆ ಮಂತ್ರಾಕ್ಷತೆ ತಾ ಎಂದು ಕೈ ತೋರುತ್ತಾರೆ. ಆಶ್ಚರ್ಯಚಕಿತರಾದ ಆಚಾರ್ಯರು ಫಲಮಂತ್ರಾಕ್ಷತೆ ನೀಡುತ್ತಾರೆ. ವಿಜಯದಾಸರು ಅದನ್ನು ಗೋಪಾಲ ದಾಸರಿಗೆ ಕೊಟ್ಟು ಅದರಲ್ಲಿ ಅರ್ಧದಷ್ಟು ಶ್ರೀನಿವಾಸಾಚಾರ್ಯರಿಗೆ ಕೊಡಲು ರಾಯರ ಆದೇಶದಂತೆ ತಮ್ಮ ಪಾಲಿನ 40 ವರ್ಷ ಆಯಸ್ಸು ದಾನ ಮಾಡಲು ಸೂಚಿಸುತ್ತಾರೆ. ಈರೀತಿ ಶಾಪ ನೀಡಿದವರಿಂದಲೇ ಅನುಗ್ರಹಕ್ಕೆ ಪಾತ್ರರಾದ ಶ್ರೀನಿವಾಸಾಚಾರ್ಯರು ಜಗನ್ನಾಥ ವಿಠಲ ಎಂಬ ಅಂಕಿತದಿಂದ ಜಗನ್ನಾಥ ದಾಸರು ಎಂದು ಖ್ಯಾತರಾಗಿ ಹರಿಕಥಾಮೃತಸಾರಾದಿ ಕೃತಿಗಳನ್ನು ರಚಿಸಿ 40 ವರ್ಷಗಳ ಕಾಲ ಹರಿದಾಸ ಸಾಹಿತ್ಯದಿಂದ ಸೇವೆ ಸಲ್ಲಿಸಿ ಪರಮಾತ್ಮನ ಕೃಪೆಗೆ ಪಾತ್ರರಾಗುತ್ತಾರೆ.

ಅದೇ ರೀತಿ ಧರ್ಮ ಪ್ರವಾಸದಲ್ಲಿ ರಾಯರು ಉಳಿದುಕೊಂಡಿದ್ದ ಒಬ್ಬರ ಮನೆಯಲ್ಲಿ ಸಂತರ್ಪಣೆಗೆಂದು ಮಾಡಿಟ್ಟಿದ್ದ ಮಾವಿನ ಹಣ್ಣಿನ ಸೀಕರಣೆಯ ಕೊಳಗದಲ್ಲಿ ಆ ಮನೆಯ ಪುಟ್ಟ ಮಗುವೊಂದು ಬಿದ್ದು ಪ್ರಾಣವನ್ನು ಕಳೆದುಕೊಂಡು ಮನೆಯವರೆಲ್ಲಾ ದುಃಖತಪ್ತರಾಗಿದ್ದನ್ನು ನೋಡಿದ ರಾಯರು ಮಗುವಿನ ಶವ ಮುಂದೆ ನಿಂತು ತಮ್ಮ ತಪಶ್ಯಕ್ತಿಯಿಂದ ಮಗುವಿನ ಮೇಲೆ ಕೈಯಾಡಿಸಿ ಮಗು ಏಳಪ್ಪಾ ಎಂದ ಕೂಡಲೇ, ನಿದ್ದೆಯಿಂದ ಎದ್ದಂತೆ ಮಗು ಎದ್ದಿದ್ದನ್ನು ನೋಡಿ ಅಲ್ಲಿದ್ದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟಿದ್ದರು.

ಇದೇ ಪವಾಡವನ್ನು ಆಡಿಕೊಳ್ಳಲು ಹೋದ ಅವರ ವಿರೋಧಿಯೊಬ್ಬರು ಬದುಕಿದ್ದವರೊಬ್ಬರನ್ನು ಸುಮ್ಮನೆ ಮಲಗಿಸಿ ಅವರ ಮೇಲೊಂದು ಹೊದಿಕೆ ಹೊದ್ದಿಸಿ ರಾಯರ ಬಳಿ ಬಂದು ಅವರನ್ನು ಬದುಕಿಸಿ ಕೊಡಲು ಬೇಡಿಕೊಳ್ಳುತ್ತಾರೆ. ರಾಯರು ತಮ್ಮ ದಿವ್ಯ ದೃಷ್ಟಿಯಿಂದ ಗಮನಿಸಿ, ಇಲ್ಲಾ ಅವರ ಆಯಸ್ಸು ಮುಗಿದು ಹೋಗಿದೆ. ಆಯಸ್ಸು ಮುಗಿದವರನ್ನು ಬದುಕಿಸಲು ಸಾಧ್ಯವಿಲ್ಲ ಎಂದು ರಾಯರು ಖಡಾ ಖಂಡಿತವಾಗಿ ಹೇಳಿದಾಗ, ಗಹಗಹಿಸಿ ನಕ್ಕ ಅವರ ವಿರೋಧಿಗಳು ಸತ್ತಿದ್ದರೆ ತಾನೇ ನೀವು ಬದುಕಿಸುವುದು ಎಂದು ಮೇಲು ಹೊದಿಕೆಯನ್ನು ತೆಗೆದು ನೋಡಿದರೆ ಅವರು ನಿಜವಾಗಿಯೂ ಮೃತಪಟ್ಟಿದ್ದರು.

ಶಾಪಾನುಗ್ರಹ ಶಕ್ತಾನ್ಯೋ ರಾಘವೇಂದ್ರಾನ್ಯ ವಿದ್ಯತೆ. ಅಪ್ಪಣ್ಣಚಾರ್ಯ ವಿರಚಿತ ರಾಯರ ಸ್ತೋತ್ರದಲ್ಲಿರುವ ಸಾಲುಗಳಿವು. ಮೇಲ್ನೋಟಕ್ಕೆ ರಾಯರು ಕೇವಲ ಅನುಗ್ರಹವಷ್ಟೇ ಅಲ್ಲ ಶಾಪ ಕೊಡಲೂ ಶಕ್ಯರು ಎಂದು ಅರ್ಥವಾಗುತ್ತದೆ. ಆದರೆ ಒಳಾರ್ಥದಲ್ಲಿ ರಾಯರು ಶಾಪವನ್ನೂ (ಬೇರೆಯವರು ನೀಡಿದ) ಅನುಗ್ರಹವಾಗಿ ಪರಿವರ್ತಿಸುವ ಶಕ್ತಿಯುಳ್ಳ ಮಹಿಮರು ಎಂದೇ ತಿಳಿಯ ಬೇಕು.

ಒಮ್ಮೆ ರಾಯರು ಇಂದಿನ ಆಂಧ್ರ ಪ್ರದೇಶದ ಆದೋನಿಯ ಬಳಿಯಲ್ಲಿ ವಾಸ್ತವ್ಯ ಹೂಡಿದ್ದಾಗ ಅಲ್ಲಿನ ನವಾಬ ಸಿದ್ಧೀ ಮಸೂದ ಖಾನನು, ಈ ಗುರುಗಳ ಮಹಿಮೆ ಎಂತಹದ್ದು ಎಂದು ಪರೀಕ್ಷಿಸಲು, ಶ್ರೀಗಳು ಮೂಲರಾಮನ ಪೂಜೆ ಮಾಡಿ ನೈವೇದ್ಯ ಮಾಡುತ್ತಿರುವ ಸಮಯದಲ್ಲಿ ನವಾಬನು ಒಂದು ಬಟ್ಟೆ ಹೊದಿಸಿದ ತಟ್ಟೆಯನ್ನು ಸೇವಕನಿಂದ ತರಿಸಿ ಶ್ರೀಗಳ ಮುಂದೆ ಇಟ್ಟನು. ಆ ತಟ್ಟೆಯೊಳಗೆ ಮಾಂಸದ ತುಂಡುಗಳಿದ್ದವು. ಆದರೆ ಗುರುಗಳಿಗೆ ಮಾತ್ರ ನವಾಬನು ಮಾಡಿದ ಕುತಂತ್ರ ತಿಳಿದು, ಕೂಡಲೇ ಶ್ರೀ ಮೂಲರಾಮನಿಗೆ ಪ್ರಾರ್ಥನೆ ಮಾಡಿ ಕಮಂಡಲದಲ್ಲಿನ ತೀರ್ಥವನ್ನು ಬಟ್ಟೆ ಹೊದಿಸಿದ ತಟ್ಟೆಯ ಮೇಲೆ ಪ್ರೋಕ್ಷಿಸಿ ಬಟ್ಟೆಯನ್ನು ತೆಗೆಯಿರಿ ಎಂದು ನವಾಬನಿಗೆ ಹೇಳಿದರು. ನವಾಬನು ಬಟ್ಟೆ ತೆಗೆದು ನೋಡಿದಾಗ, ತಟ್ಟೆಯಲ್ಲಿ ಮಾಂಸದ ತುಂಡುಗಳ ಬದಲು ಅತ್ಯಂತ ಉತ್ತಮ ಗುಣಮಟ್ಟದ ಹಣ್ಣುಗಳು ಮತ್ತು ಗುಲಾಬಿ ಹೂಗಳು ಕಂಡು ನವಾಬನು ಆಶ್ಚರ್ಯಚಕಿತನಾದನು.

ಶ್ರೀಗಳ ಈ ಪವಾಡಕ್ಕೆ ಮನಸೋತು ಅವರಿಗೆ ಕಾಣಿಕೆಯನ್ನು ಅರ್ಪಿಸಿಸಲು ಸಿದ್ಧನಾದಾಗ ಶ್ರೀಗಳು ನಮ್ಮಂತಹ ಸನ್ಯಾಸಿಗಳಿಗೇಕೆ ಜಹಗೀರು ಎಂದು ನಯವಾಗಿ ತಿರಸ್ಕರಿಸಿದರು. ನವಾಬನು ಬಹಳವಾಗಿ ಒತ್ತಾಯಮಾಡಿದಾಗ ತುಂಗಭದ್ರಾ ನದಿಯ ತೀರದಲ್ಲಿರುವ ಹಿಂದೆ ಶ್ರೀ ಪ್ರಹ್ಲಾದರಾಯರು ಯಜ್ಞ ಮಾಡಿ ಪಾವನಗೊಳಿಸಿದ ಪವಿತ್ರ ಸ್ಥಳವಾದ ಮಂಚಾಲೆ ಎಂಬ ಗ್ರಾಮವನ್ನು ಕೊಡಲು ಕೇಳಿ ಕೊಂಡರು. ನವಾಬನು ಈಗಾಗಲೇ ಆ ಗ್ರಾಮವನ್ನು ಮತ್ತೊಬರಿಗೆ ಕೊಟ್ಟಿದ್ದರೂ ಅವರಿಂದ ಮರಳಿ ಪಡೆದು ಶ್ರೀ ರಾಘವೇಂದ್ರ ಸ್ವಾಮಿಗಳಿಗೆ ದಾನವಾಗಿ ಕೊಟ್ಟನು.

ಮುಂದೆ ರಾಯರು ವೃಂದಾವನವನ್ನು ಪ್ರವೇಶಿಸುವ ಸಮಯವು ಸಮೀಪಿಸಿದಾಗ ತಮ್ಮ ಶಿಷ್ಯರನ್ನು ಕರೆದು ಮಂಚಾಲೆಯ ಹತ್ತಿದಲ್ಲೇ ಇರುವ ಮಾಧವರದ ಸಮೀಪದಲ್ಲಿ ಇರುವ ಕಲ್ಲಿನಿಂದ ವೃಂದಾವನ ಮಾಡಿಸಲು ಕೋರಿದರು. ಇಲ್ಲೇ ಇಷ್ಟೋಂದು ಕಲ್ಲುಗಳು ಇರುವಾಗ ಅಲ್ಲಿಂದೇಕೆ ತರಬೇಕು ಎಂದು ಅವರ ಶಿಷ್ಯ ವೆಂಕಣ್ಣನವರು ಕೇಳಿದಾಗ, ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಅರಣ್ಯ ಸಂಚಾರ ಮಾಡುತ್ತಾ ಏಳು ಘಳಿಗೆಗಳ ಕಾಲ ಆ ಶಿಲೆಯ ಮೇಲೆ ಕುಳಿತಿದ್ದರು. ಹಾಗಾಗಿ ಶ್ರೀರಾಮನ ಪಾದಸ್ಪರ್ಶದಿಂದ ಆ ಶಿಲೆ ಬಹಳ ಪ್ರಭಾವದ್ದಾಗಿದೆ. ಮುಂದೆ ನಾನು ಆ ವೃಂದಾವನದಲ್ಲಿ ಸುಮಾರು 700ಕಾಲ ಜೀವಂತವಾಗಿರುತ್ತೇನೆ. ಅಷ್ಟು ವರ್ಷ ತಾಳಿ ಕೊಂಡು ಪೂಜೆ ಮಾಡಿಸಿಕೊಳ್ಳಲು ಆ ಶಿಲೆಯಿಂದಲೇ ವೃಂದಾವನವನ್ನು ನಿರ್ಮಿಸಲು ಹೇಳಿದೆನು ಎಂಬುದಾಗಿ ಶ್ರೀಗಳು ತಿಳಿಸುತ್ತಾರೆ.

ಶ್ರೀಗಳವರ ಆಜ್ಞೆಯ ಮೇರೆಗೆ ವೆಂಕಣ್ಣನವರು ವೃಂದಾವನವನ್ನು ನಿರ್ಮಿಸಿದ ನಂತರ, ಶ್ರೀರಾಘವೇಂದ್ರ ಗುರುಗಳು ಶ್ರೀ ವಿರೋಧಿ ಕೃತ್ಸಂವತ್ಸರ ಶ್ರಾವಣ ಬಹುಳ ಬಿದಿಗೆಯ ಗುರುವಾರದಂದು ವೃಂದಾವನವನ್ನು ಸಶರೀರಿಗಳಾಗಿ ಪ್ರವೇಶಿಸಿದರು. ವೃಂದಾವನ ಪ್ರವೇಶ ಮಹೋತ್ಸವ ಬಹಳ ವೈಭವದಿಂದ ಜರುಗಿತು. ವೃಂದಾವನವನ್ನು ನಿರ್ಮಿಸಿದ ನಂತರ ಉಳಿದ ಶಿಲೆಯಿಂದ ಶ್ರೀ ಪ್ರಾಣದೇವರ ವಿಗ್ರಹವನ್ನು ನಿರ್ಮಿಸಿ ಅದನ್ನು ರಾಯರ ವೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಿ, ಇಂದಿಗೂ ಆ ಪ್ರಾಣ ದೇವರಿಗೆ ಮತ್ತು ಶ್ರೀ ಗುರು ರಾಘವೇಂದ್ರಗೆ ಪ್ರತಿನಿತ್ಯ ವೇದೋಕ್ತರೀತಿಯಲ್ಲಿ ಪೂಜೆ ಪುನಸ್ಕಾರಗಳು ನಿರಂತವಾಗಿ ನಡೆಯುತ್ತಿವೆ.

ಗುರುರಾಯರು ಸಶರೀರಿಗಳಾಗಿ ಬೃಂದಾವನಸ್ಥರಾದ ದಿನವನ್ನು ಭಕ್ತರು, ಗುರುರಾಯರ ಆರಾಧನೆ ಎಂದು ಕರೆಯುತ್ತಾ , ಪ್ರತೀ ವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ, ಶ್ರಾವಣ ಕೃಷ್ಣ ಪಕ್ಷ ತದಿಗೆಯವರೆಗೂ ಮೂರು ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ಎಂದು ಆಚರಿಸಲಾಗುತ್ತದೆ. ಈ ಮೂರೂ ದಿನಗಳಂದು, ದೇಶಾದ್ಯಂತ ಇರುವ ಸಾವಿರಾರು ರಾಯರ ಮಠದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಗುರುರಾಘವೇಂದ್ರರ ವೈಭವ, ರಾಯರ ಚರಿತ್ರೆಯ ಪಠಣ, ರಾಯರ ಪವಾಡಗಳ ಪ್ರವಚನ ನಡೆಯುತ್ತದೆ. ಜೊತೆಗೆ ಬಂದ ಎಲ್ಲಾ ಭಕ್ತಾದಿಗಳಿಗೂ ಯಥೇಚ್ಚವಾಗಿ ಪ್ರಸಾದ ವಿನಿಯೋಗ ಮಾಡಲಾಗುತ್ತದೆ.

ಶ್ರೀ ಗುರು ರಾಘವೇಂದ್ರರು ಕೇವಲ ತಮ್ಮ ಮತದವರಿಗೆ ಮಾತ್ರವೇ ಸೀಮಿತರಾಗದೇ ಸಕಲ ಹಿಂದೂಗಳೂ ಭಕ್ತಿಭಾವದಿಂದ ಪೂಜಿಸುವ ಗುರುಗಳಾಗಿದ್ದಾರೆ ಎಂದರೆ ತಪ್ಪಾಗಲಾರದು. ಕನ್ನಡ ಚಲನಚಿತ್ರದ ಅನಭಿಷಕ್ತ ದೊರೆ ನಟಸಾರ್ವಭೌಮ ರಾಜಕುಮಾರ್ ಮತ್ತು ಹೆಸರಾಂತ ಹಾಸ್ಯ ಕಲಾವಿದ ನವರಸ ನಾಯಕ ಜಗ್ಗೇಶ್ ಮತ್ತು ಕರ್ನಾಟಕ ರಾಜ್ಯದ‌ ಮಾಜಿ ಮುಖ್ಯಮಂತ್ರಿಗಳಾಗಿದ್ದ ಶ್ರೀ ಯಡೆಯೂರಪ್ಪನವರೂ ಸಹಾ ರಾಯರ ಪರಮ ಭಕ್ತರಗಳಾಗಿದ್ದಾರೆ. ರಾಯರ ಮೇಲಿನ ಅವರ ಭಕ್ತಿಯ ಪರಾಕಾಷ್ಠೆಯ ಪರಿಣಾಮವಾಗಿಯೇ ಅವರೆಲ್ಲರೂ ತಮ್ಮ ಮಕ್ಕಳಿಗೆ ರಾಯರ ಹೆಸರನ್ನೇ ಇಟ್ಟಿದ್ದಾರೆ. ಸ್ಟೈಲ್ ಕಿಂಗ್ ರಜನೀಕಾಂತ್ ಅವರಂತೂ ರಾಯರ ಹೆಸರಿನಲ್ಲಿ ಚೆನ್ನೈನಲ್ಲಿ ಕಲ್ಯಾಣ ಮಂಟಪವನ್ನೇ ಕಟ್ಟಿಸಿ ಅದನ್ನು ಲೋಕ ಕಲ್ಯಾಣಕ್ಕಾಗಿಯೇ ಮೀಸಲಾಗಿಟ್ಟಿದ್ದಾರೆ.

ಚಿ. ಉದಯಶಂಕರ್ ಅವರು ರಚಿಸಿ ರಾಜಕುಮಾರರು ಹಾಡಿರುವ ವಾರ ಬಂತಮ್ಮಾ ಗುರುವಾರ ಬಂತಮ್ಮಾ! ರಾಯರ ನೆನೆಯಮ್ಮಾ ಗುರುರಾಯರ ನನೆಯಮ್ಮಾ! ಕ್ಲೇಶ ಕಳೆದು ಸಂಕಷ್ಟ ಕಳೆದು ಸದ್ಗತಿಯ ಕೊಡುವನಮ್ಮಾ! ಹಾಡಂತೂ ಅತ್ಯಂತ ಜನಪ್ರಿಯವಾದ ಭಕ್ತಿಯಾಗಿದೆ. ಇನ್ನು ರಾಯರ ಮಂತ್ರಾಲಯದಲ್ಲಿ ವೃಂದಾವನಸ್ಥರಾಗಿರಬಹುದು ಆದರೆ ಅಲ್ಲಿಂದ ಮೂಲ ಮೃತ್ತಿಕೆಯನ್ನು ತಂದು ದೇಶಾದ್ಯಂತ ಸಾವಿರಾರು ರಾಯರ ಮಠದ ಮೂಲಕ ಭಕ್ತರ ಮಧ್ಯದಲ್ಲಿಯೇ ನೆಲೆಸಿ, ಪ್ರತಿನಿತ್ಯವೂ ಅನೇಕ ಧಾರ್ಮಿಕ ಕಾರ್ಯಕ್ರಮಗಳ ಶ್ರಧ್ಧಾ ಕೇಂದ್ರವಾಗಿದೆ. ಮದುವೆ, ಮುಂಜಿ, ನಾಮಕರಣ, ಹುಟ್ಟಿದ ಹಬ್ಬ , ಅಷ್ಟೇಕೆ, ಹಿರಿಯರ ಶ್ರಾದ್ಧಾ ಕಾರ್ಯಗಳನ್ನೂ ಸಹಾ ಅತ್ಯಂತ ಶ್ರದ್ದೆಯಿಂದ ಈ ರಾಯರ ಮಠಗಳಲ್ಲಿ ಅತ್ಯಂತ ನಡೆಸುವಂತಾಗಿ ಭಕ್ತರಿಗೆ ಸನಾತನ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಆಚಾರ ಪದ್ದತಿಗಳು ಇನ್ನೂ ರೂಢಿಯಲ್ಲಿಟ್ಟಿದೇ ಎಂದೇ ಹೇಳಬಹುದು.

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೆ|| ಎಂಬ ಮಂತ್ರವನ್ನು ಗುರು ರಾಘವೇಂದ್ರರನ್ನು ನೆನೆಸಿ ಕೊಳ್ಳುತ್ತಾ ಜಪಿಸುತ್ತಾ, ಎಂತಹ ಸಂಕಟಗಳು ಬಂದರೂ ಸರಿ ಶ್ರೀ ಗುರು ರಾಯರು ನಮ್ಮನ್ನು ಕಾಪಾಡಿಯೇ ತೀರುತ್ತಾರೆ ಎಂದು ನಮ್ಮೆಲ್ಲರ ಆಶಯ.

ಏನಂತೀರೀ?

ನನ್ನ ಈ ಲೇಖನಕ್ಕಾಗಿ ಬಹಳಷ್ಟು ಮಾಹಿತಿಗಳನ್ನು ಒದಗಿಸಿದ ನನ್ನ ಪ್ರಾಣ ಸ್ನೇಹಿತ ಶ್ರೀ ನರಹರಿ ಪ್ರಭಾಕರ್ ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು. 🙏🙏🙏

rag2

12 thoughts on “ಶ್ರೀ ರಾಘವೇಂದ್ರ ಸ್ವಾಮಿಗಳು

 1. ನಾಡು ಕಂಡ ಶ್ರೇಷ್ಠ ಸನ್ಯಾಸಿ, ಸಾಮಾನ್ಯ ಜನರಿಗೆ ಭಕ್ತಿಮಾರ್ಗ ಪರಿಚಯಿಸಿದ ಯತಿ, ನೊಂದವರ ಕಲ್ಪವೃಕ್ಷ ಶ್ರೀ ಗುರು ರಾಘವೇಂದ್ರರನ್ನು ಸಮಗ್ರವಾಗಿ, ಅಂತೆಯೇ ಸಂಕ್ಷಿಪ್ತವಾಗಿ ಪರಿಚಯಿಸಿದ್ದೀರಿ. ಲೇಖನ ಪ್ರಭಾವಿಯೂ, ಸಂದರ್ಭೋಚಿತವೂ ಆಗಿದೆ.

  ಸರ್ವಸಾಮನ್ಯ ಜನರಿಂದ ಹಿಡಿದು ಜನಮಾನಸದಲ್ಲಿ ಹೆಸರು ಮಾಡಿದವರೂ ಅವರ ಭಕ್ತರಾಗಿರುವುದು, ಅವರಲ್ಲಿ ಶರಣಾಗಿರುವುದೂ ಗಮನಾರ್ಹ ವಿಷಯವೇ.
  ಆದರೆ “ಈ ಘಟಾನುಗಟಿಗಳನ್ನು ಭಕ್ತರನ್ನಾಗಿ ಪಡೆದಿರುವುದು ಸ್ವಾಮಿಗಳ ಮಹತ್ವ” ಎಂಬ ವಿಚಾರಧಾರೆ ಯಾಕೋ ಅಷ್ಟು ಹಿಡಿಸಲಿಲ್ಲ. ಅವರ್ಯಾರೂ ಸ್ವಾಮಿಗಳ ಮಹತ್ತನ್ನು ಹೆಚ್ಚಿಸಬಲ್ಲ ಸಾಧಕರಲ್ಲ ಎಂಬುದು ನನ್ನ ಭಾವನೆ.

  Like

 2. ಚಿಕ್ಕ, ಚೊಕ್ಕ ಮತ್ತು ಸುಂದರ ಬರಹ.

  ಗುರು ರಾಯರ ಜೀವನದ ಸಂಕ್ಷಿಪ್ತ ಮಾಹಿತಿಗೆ ಧನ್ಯವಾದಗಳು ಸರ್.

  Like

 3. “ಶ್ರೀ ರಾಘವೇಂದ್ರ ಗುರುವೇ ನಮೋ ಅತ್ಯಂತ ದಯಾಳುವೆ”
  ಈ ಲೇಖನಕ್ಕೆ ನನ್ನ ಪ್ರತಿಕ್ರಿಯೆ ನೀಡಲು ಕೊಂಚ ತಡವಾಗಿದ್ದಕ್ಕೆ ಕ್ಷಮೆಯಿರಲಿ. ರಾಯರ ಮಹಿಮೆ, ಕರುಣೆ ಹಾಗು ಅವರ ಆರಾಧನೆಯ ಕುರಿತು ಬಹಳ ಚೆನ್ನಾಗಿ ಲೇಖನ ಮೂಡಿ ಬಂದಿದೆ.
  ನನ್ನ ಅಲ್ಪಮತಿಯಿಂದ ನೀಡಿದ ಸಣ್ಣ ಮಾಹಿತಿಯನ್ನು ಲೇಖನದಲ್ಲಿ ಸ್ಮರಿಸಿರುವುದು ತಮ್ಮ ದೊಡ್ಡತನ ಹಾಗೂ ನಾನು ಸದಾ ಆಭಾರಿ.

  ರಾಯರು ತಮ್ಮ ವಿದ್ವತ್ಪೂರ್ಣ ಕೃತಿಗಳಿಂದ ಮಾಧ್ವ ಸಮಾಜವನ್ನು ಶ್ರೀಮಂತಗೊಳಿಸಿದ್ದಾರೆ. ರಾಯರು ತಮ್ಮ ಪ್ರಾತ:ಸಂಕಲ್ಪ ಗದ್ಯದಲ್ಲಿ “ಕರಿಷ್ಯೆ ಕಾರಯಿಷ್ಯೇ ” ಎಂದು ತಾವು ತಮ್ಮ ಸಾಧನೆ ಮಾಡುವುದಲ್ಲದೆ ತಮ್ಮನ್ನು ನಂಬಿದ “ದೇಹ ಸಂಬಂಧಿಗಳು, ವಿದ್ಯಾ ಸಂಬಂಧಿಗಳು ಹಾಗೂ ಅಶೇಷ ಜನರಿಂದಲೂ” ಸಾಧನೆ ಮಾಡಿಸುತ್ತೇನೆ ಎಂದು ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇಂತಹ ಗುರುಗಳನ್ನು ಪಡೆದ ನಾವೇ ಧನ್ಯರು.

  Liked by 1 person

  1. ಯಾವುದೇ ವಿಚಾರವನ್ನು ಮತ್ತೊಬ್ಬರ ಮುಂದೆ ಮಂಡಿಸುವ ಮೊದಲು ಆ ವಿಷಯದಲ್ಲಿ ಆಳವಾಗಿ ಅಧ್ಯಯನ ಮಾಡಿರುವವರ ಬಳಿ ವಿಚಾರ ವಿನಿಮಯ ಮಾಡಿ ಸರಿಯಾದ ಮಾಹಿತಿಯನ್ನು ಸಂಗ್ರಹಿಸುವುದು ಸತ್ಸಂಪ್ರದಾಯ. ಮತ್ತು ಹಾಗೆ ಆಪತ್ಕಾಲದಲ್ಲಿ ನೆರವಾದವರನ್ನು ಸದಾಕಾಲ ನೆನೆಸಿಕೊಳ್ಳುವುದು ನಮ್ಮ ಸಂಸ್ಕಾರವೂ ಹೌದು.

   ರಾಯರ ಕೃಪಾಶೀರ್ವಾದದಿಂದ ನಮ್ಮಿಬ್ಬರ ಈ ಅನುಬಂಧ ಚಿರಕಾಲವಿರಲಿ

   Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s