ವಿದ್ಯಾರಣ್ಯಪುರ ಮಂಥನದ ಹನ್ನೊಂದನೆಯ ಆವೃತ್ತಿ ನಿಗಧಿಯಾಗಿದ್ದಂತೆ, ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳು ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀ ಶ್ರೀಕಂಠ ಬಾಳಗಂಚಿ (ಹವ್ಯಾಸಿ ಬರಹಗಾರರು, https://enantheeri.com) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಹಿಂದೂ ಧರ್ಮವನ್ನು ಸನಾತನ ಧರ್ಮ ಎಂದೂ ಕರೆಯುತ್ತಾರೆ.’ಸನಾತನ’ಎಂದರೆ ಎಂದೂ ಅಳಿಯದ,ಚಿರಂತನ,ನಿರಂತರವಾದ ಎಂದರ್ಥ. ಹಿಂದೂಧರ್ಮಕ್ಕೆ ಬೇರೆ ಧರ್ಮಗಳಿಗಿರುವಂತೆ ಸಂಸ್ಥಾಪಕರಿಲ್ಲದಿರುವುದು ವೈಶಿಷ್ಟ್ಯದ ಸಂಗತಿ. ಹಿಂದೂ ಧರ್ಮವು ಸದ್ಯ ಅಸ್ತಿತ್ವದಲ್ಲಿರುವ ಧರ್ಮಗಳಲ್ಲಿಯೇ ಅತ್ಯಂತ ಪ್ರಾಚೀನವಾದವಾಗಿದೆ. ವಿಶ್ವದ ಮೂರನೇ ಅತಿ ದೊಡ್ಡ ಧರ್ಮ ಇದು ಎಂದು ಪರಿಗಣಿಸಲ್ಪಡುತ್ತಿದೆ.
ಹಿಂದೂ ಎನ್ನುವುದು ಇತರ ಧರ್ಮಗಳಾದ ಮುಸ್ಲಿಂ,ಬೌದ್ಧ,ಜೈನ ಇತ್ಯಾದಿಗಳಂತೆ ಯಾವುದೇ ವ್ಯಕ್ತಿಯ ಅಥವಾ ಧಾರ್ಮಿಕ ಸಂಪ್ರದಾಯದವನ್ನು ಆಧರಿಸಿದ ಹೆಸರಾಗಿರದೆ,ಒಂದು ಸಮುದಾಯದ ಹೆಸರಾಗಿದೆ.ಸಿಂಧೂ ನದಿ ಬಯಲಿನಲ್ಲಿ ವಾಸಿಸುವ ಜನಸಮುದಾಯಕ್ಕೆ ಸಿಂಧೂ ಎಂದು,ಅದು ಕ್ರಮೇಣ ಭಾಷಾ ಸ್ಥಿತ್ಯಂತರಗಳಿಂದಾಗಿ ಹಿಂದೂವಾಗಿದೆ.
ಯಾವುದೇ ಒಂದು ಧರ್ಮ ಅಥವಾ ಪಂಗಡ ಬೆಳೆಯುವುದು ಒಂದು ನದೀ ಪಾತ್ರದ ಸುತ್ತ ಮುತ್ತಲೇ. ಅದೇ ರೀತಿ ಊರುಗಳಲ್ಲಿಯೂ ಹಿಂದಿನ ಕಾಲದಲ್ಲಿ ಒಂದು ಕೆರೆ ಕಟ್ಟೆ ಭಾವಿಗಳನ್ನು ಗಿರಕಿ ಹೊಡೆಯುತ್ತಲೇ ಊರು ಬೆಳೆಯುತ್ತಿತ್ತು ಮತ್ತು ಅಲ್ಲಿನ ಹವಾಮಾನದ ಅನುಗುಣವಾಗಿ ಅಲ್ಲಿನ ಆಚಾರ ವಿಛಾರ ಪದ್ದತಿಗಳು ರೂಢಿಯಲ್ಲಿ ಬಂದವು
ಇಂದಿನ ವಿಷಯ ನೋಡಲು ಅತ್ಯಂತ ಸರಳವಾಗಿ ಕಂಡರೂ ಅದನ್ನು ಅರಿವು ಮಾಡಿಕೊಳ್ಳಲು ಒಳಹೊಕ್ಕಂತೆಲ್ಲಾ ಅಗಾಧವಾದ ಆಲದ ಮರದಂತಿದೆ. ಹಾಗಾಗಿ ಅದನ್ನು ಸರಳವಾಗಿ ಒಂದು ದಿನದ ಆರಂಭದಿಂದ ಹಿಡಿದು, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಊಟ ಮಾಡಿ ಮಲಗುವ ವರೆಗಿನ ಆಚಾರ ಪದ್ದತಿಗಳು ಅಂದು ಹೇಗಿದ್ದವು ಮತ್ತು ಇಂದು ಹೇಗಿದೆ ಎಂಬುದನ್ನು ಒಮ್ಮೆ ಮೆಲಕು ಹಾಕೋಣ.
ಒಂದು ದಿನದಲ್ಲಿ ನಡೆತ್ತಿದ್ದ ಪ್ರತಿಯೊಂದು ಪ್ರಕ್ರಿಯೆಗಳು ಮತ್ತು ಅದರ ಮಹತ್ವವೇನು ಅದರ ಹಿಂದೆ ಇರಬಹುದಾದ ವೈಜ್ಞಾನಿಕ ಕಾರಣಗಳು ಏನಿರಬಹುದು ಎಂದು ತಿಳಿಯೋಣ.
ಸೂರ್ಯ ಬದುಕಿನ ಚೇತನ. ಸೂರ್ಯನ ಬೆಳೆಕಿನಿಂದಲೇ ಜಗ ಬೆಳಗುವುದು ಮತ್ತು ಸಕಲ ಜೀವರಾಶಿಗಳಿಗೆ ಶಕ್ತಿ ಒದುಗುವುದು
ಅಂತಹ ಸೂರ್ಯ ಮೂಡಣದಲ್ಲಿ ಉದಯವಾಗುವ ಹೊತ್ತಿಗೆ ಮೆನೆಯಲ್ಲಿ ಮೊದಲು ಏಳುವವಳೇ ಆ ಮನೆಯ ಒಡತಿ ಮಹಾ ತಾಯಿ.
ನಮ್ಮಲ್ಲಿ ಹೆಣ್ಣುಮಕ್ಕಳಿಗೆ ಅತ್ಯಂತ ಗೌರವ ಮತ್ತು ಎತ್ತರದ ಸ್ಥಾನಮಾನವನ್ನು ನೀಡಿದ್ದೇವೆ. ಇಂದು ಲೋಕವೆಲ್ಲಾ ಮಹಿಳಾ ಸಬಲೀಕರಣ, ಮಹಿಳೆಯರು ಮತ್ತು ಪುರುಷರು ಸರಿಸಮಾನರು ಎಂದು ವಾದ ಮಾಡುತ್ತಲೇ ಇದ್ದರೇ ನಾವು ಅಂದಿನ ಕಾಲದಲ್ಲಿಯೇ ಆಕೆಯನ್ನು ಶಕ್ತಿ ದೇವತೇ ಎಂದೇ ಸಂಭೋದಿಸಿದ್ದೇವೆ. ಪ್ರತಿಯೊಂದು ಬಾರಿ ದುಷ್ಟ ಶಿಕ್ಷಣವಾಗಬೇಕಾದರೂ ನಾವು ದೇವಿಯನ್ನೇ ಅವಲಿಂಭಿಸಿದ್ದೇವೆ. ಉದಾ: ರಾಕ್ಷಸ ಮಹಿಷನನ್ನು ಸಂಹರಿಸಲು ತಾಯಿ ದುರ್ಗೆ ಮಹಿಷಾಸುರ ಮರ್ಧಿನಿಯ ರೂಪ ತಾಳಿದಳು.
ಯತ್ರ ನಾರ್ಯಂತು ಪೂಜ್ಯಂತೇ ರಮ್ಯಂತೇ ತತ್ರ ದೇವತಃ ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಪ್ರಸನ್ನರಾಗಿರುತ್ತಾರೆ.
ಅದೇ ರೀತಿ ಯತ್ರ ನಾರ್ಯಂತು ಪೀಡಂತೆ, ದೂಷಂತೆ ತತ್ರ ವಿನಾಶಃ ಸ್ತ್ರೀಯನ್ನು ದೂಷಣೆ ಮಾಡಿದ್ದಲ್ಲಿ ಸಮಾಜದ ನಾಶ ಕಾಣಬಹುದು ಎಂದು ಎಚ್ಚರಿಸಿದ್ದಾರೆ ನಮ್ಮ ಹಿರಿಯರು. ಇಡೀ ರಾಮಾಯಣ ಮತ್ತು ಮಹಾಭಾರತದ ಯುದ್ಧ ನಡೆದದ್ದೇ ಸ್ರೀಯನ್ನು ದೂಷಣೆ ಮಾಡಿರುವುದಕ್ಕೆ . ಇಡೀ ರಾಮಾಯಣ ಕಾರಣವಾಗಿದ್ದೇ ಸೀತಾಪರಣ ಅದೇ ರೀತಿ ಮಹಾಭಾರತದ ಕುರುಕ್ಷೇತ್ರ ನಡೆದದ್ದೇ ದ್ರೌಪತಿಯ ವಸ್ತ್ರಾಭರಣದ ಸೇಡನ್ನು ತೀರಿಸಿಕೊಳ್ಳಲು ಎಂಬುದು ಗಮನಾರ್ಯವಾಗಿದೆ
ಅಂದೆಲ್ಲಾ ಮನೆಯ ಗಂಡಸರು ಹೊರಗೆ ದುಡಿದು ಸಂಪತ್ತನ್ನು ಗಳಿಸಿದ್ದರೆ, ಹೆಂಗಸರು ಮನೆಯಲ್ಲಿಯೇ ಕುಳಿತುಕೊಂಡು ಅವರಿಗಿಂತಲೂ ಹೆಚ್ಚಾಗಿಯೇ ದುಡಿಯುತ್ತಿದ್ದಳು ಮತ್ತು ಆ ಮನೆಯ ಸಂಪತ್ತಿನ ಸಂಪೂರ್ಣ ನಿರ್ವಹಣೆ ಮನೆಯ ಹಿರಿಯ ಹೆಂಗಸಿನ ಕೈಯಲ್ಲಿಯೇ ಇರುತ್ತಿತ್ತು . ನಾವೆಲ್ಲಾ ಗಮನಿಸಿರಬಹುದು ಮನೆಯ ತಿಜೋರಿಯ ಕೀಲಿಗಳು ಹೆಂಗಸರ ಸೆರಗಿನಲ್ಲಿಯೇ ಭದ್ರವಾಗಿರುತ್ತಿದ್ದವು. ಅದು ತಲಾತಲಾಂತರದಿಂದ ಅತ್ತೆಯಿಂದ ಸೊಸೆಗೆ ಹಸ್ತಾಂತರವಾಗುತ್ತಿತ್ತೇ ವಿನಃ ಅದರ ಮಧ್ಯೆ ಪುರುಷರ ಪಾತ್ರವೆಲ್ಲಾ ಗೌಣವಾಗಿರುತ್ತಿತ್ತು.
ಅಂತಹ ತಾಯಿ ಸೂರ್ಯ ಉದಯಿಸುವ ಮೊದಲೇ ಎದ್ದು ಬಲ ಪಕ್ಕಕ್ಕೆ ಹೊರಳಿ ಎದ್ದು ಎರಡೂ ಕೈಗಳನ್ನೂ ಉಜ್ಜಿ ನೋಡಿ ಕೊಂಡು ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರ ದರ್ಶನಂ ಎಂದು ಸಕಲ ದೇವಿಯರನ್ನು ಪ್ರಾರ್ಥನೆ ಮಾಡಿಕೊಂಡೇ ಏಳುತ್ತಾಳೆ.
ಆದರೆ ಇಂದು ಬಹುತೇಕರು ಮಲಗುವ ಮುನ್ನ ಹಾಸಿಗೆಯ ಪಕ್ಕದಲ್ಲೇ ಮೊಬೈಲ್ ಚಾರ್ಜ್ ಹಾಕಿಟ್ಟು ಎದ್ದ ಕೂಡಲೇ ದೇವರನ್ನು ನೆನೆಯುವುದೋ ಇಲ್ಲವೇ ನೋಡುವುದಿರಲಿ, ಫೇಸ್ ಬುಕ್ ಮತ್ತು ವ್ಯಾಟ್ಸಾಪ್ ಇಲ್ಲವೇ ಇನ್ಸ್ತಾಗ್ರಾಮ್ ನೋಡಿಯೇ ಏಳುತ್ತಿರುವುದು ನಿಜಕ್ಕೂ ದುಃಖಕರ
ನಮಗೆಲ್ಲಾ ತಿಳಿದಿರುವಂತೆ ನಮ್ಮ ಹೃದಯ ಎಡಭಾಗದಲ್ಲಿರುತ್ತದೆ ಮತ್ತು ಮಲಗಿರುವ ಸಮಯದಲ್ಲಿ ಇಡೀ ದೇಹ ಸುಮಾರು ಏಳೆಂಟು ಗಂಟೆ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಒಮ್ಮೆಲ್ಲೆ ಎಡಭಾಗದಲ್ಲಿ ಎದ್ದರೆ ಅನಗತ್ಯವಾಗಿ ಹೃದಯದ ಮೇಲೆ ಭಾರ ಹಾಕಬಾರದು ಮತ್ತು ಅದರಿಂದ ಹೃದಯಕ್ಕೆ ಧಕ್ಕೆಯಾಗವಾದೆನ್ನುವ ಕಾರಣ ಬಲ ಭಾಗದಲ್ಲಿ ಎದ್ದು ಎರಡೂ ಕೈಗಳನ್ನು ಪರಸ್ಪರ ಉಜ್ಜಿ ಶಾಖವನ್ನು ಉತ್ಪತ್ತಿಸಿ ಅದನ್ನು ಮುಖ ಮತ್ತು ಎರಡೂ ಕಿವಿಗಳ ಮೇಲೆ ಒತ್ತಿಕೊಂಡು ಕೆಲಸ ಆರಂಭಿಸುತ್ತೇವೆ
ಬೆಳಗಿನ ಶೌಚ ಕಾರ್ಯಕ್ರಮಗಳನ್ನು ಮುಗಿಸಿ ಕೂಡಲೇ ಬರುವುದೇ ಮನೆಯ ಮುಂಬಾಗದ ಸ್ವಚ್ಚತೆಗಾಗಿ. ಸಾಧಾರಣವಾಗಿ ಮನೆ ಹೇಗಿಟ್ಟುಕೊಂಡಿದ್ದಾರೆ ಎಂದು ಯಾರಾದರೂ ವಿಚಾರಿಸಿದರೆ, ಮನೆ ಒಳ್ಳೇ ಕನ್ನಡಿ ಇಟ್ಟು ಕೊಂಡ ಹಾಗೆ ಇಟ್ಟು ಕೊಂಡಿದ್ದಾರೆ ಎನ್ನುವುದು ವಾಡಿಕೆ. ಕನ್ನಡಿ ನಮ್ಮ ಪ್ರತಿಬಿಂಬವನ್ನು ಸೂಚಿಸುತ್ತದೆ, ನಾವು ಹೇಗಿರುತ್ತೇವೆಯೋ ಅದನ್ನು ಯಥಾವತ್ತಾಗಿ ತೋರಿಸುವುದೇ ಕನ್ನಡಿ ಅದರಲ್ಲಿ ಯಾವ ಮುಚ್ಚುಮರೆ ಇರುವುದಿಲ್ಲ ಹಾಗಾಗಿ ಕನ್ನಡಿ ಮುಂದೆ ಹೋದೊಡನೆಯೇ ಎಲ್ಲರೂ ತಮ್ಮ ಮುಖವನ್ನು ಆದಷ್ಟು ತಿದ್ದಿ ತೀಡಿ ಕೊಳ್ಳುತ್ತೇವೆ ಅಂತೆಯೇ ಮನೆಯನ್ನೂ ಸಹಾ ಚೆನ್ನಾಗಿ ಗುಡಿಸಿ ಯಾವುದೇ ಕಸಕಡ್ಡಿಗಳು ಇಲ್ಲದಂತೆ ತೆಗೆದು ಅದಕ್ಕೆ ಸಗಣಿಯಿಂದ ಸಾರಿಸುತ್ತಿದ್ದರು. ಗೋಮೂತ್ರ ಮತ್ತು ಗೋಮಯ ಒಂದು ರೀತಿಯ ಕೀಟನಾಶಕಗಳು ಹಾಗಾಗಿ ಮನೆಗೆ ಯಾವುದೇ ಕೀಟನಾಶಕಗಳು ಬಾರದಂತೆ ನೈಸರ್ಗಿಕವಾಗಿಯೇ ತಡೆಯುತ್ತಿದ್ದೆವು.
ತಮಾಷಿಗಾಗಿ ಹೇಳಬೇಕೆಂದರೆ ಮುಸಲ್ಮಾನರ ಮನೆಯ ಮುಂಭಾಗ ಮತ್ತು ಹಿಂದೂಗಳ ಮನೆಯ ಹಿಂಭಾಗ ನೋಡುವುದಕ್ಕೆ ಹೋಗಬಾರದಂತೆ. ಏಕೆಂದರೆ ಎರಡೂ ಪರಮ ಗಲೀಜಿನ ಸ್ಥಳ ವಾಗಿರುತ್ತದೆ ಎನ್ನುವುದು ಕೆಲವರ ಅಂಬೋಣ.
ಇನ್ನು ರಂಗೋಲಿ. ಅದನ್ನು ರಂಗ ನೀ ಒಲಿ ಎಂದೂ ಅರ್ಥೈಸುತ್ತಾರೆ. ಇದು ಮಹಿಳೆಯರ ಸೃಜನಶೀಲತೆಯನ್ನು ಎತ್ತಿ ತೋರಿಸುವ ಸಾಧನವೇ ಹೌದು. ನಾವೆಲ್ಲರೂ ಸುಮ್ಮನೆ ಹೋಗುವಾಗ ಯಾರ ಮನೆಯ ಮುಂದಾದರೂ ರಂಗೋಲಿ ಚೆನ್ನಾಗಿದ್ದಾಗ ವಾಹ್!! ಎಷ್ಟು ಚೆನ್ನಾಗಿ ರಂಗೋಲಿ ಹಾಕಿದ್ದಾರೆ ಎಂದು ಪ್ರಶಂಸಿಸುತ್ತೇವೆ. ಅಂದರೆ ಅದು ಆ ಮನೆಯಲ್ಲಿರುವ ಹೆಂಗಸು ಅತ್ಯಂತ ಸೃಜನ ಶೀಲೆ ಮತ್ತು ಕಲಾವಂತಿಕೆ ತಿಳಿಯುತ್ತಿತ್ತು. ಹಾಗೆ ಮನೆಯ ಸುತ್ತಲೂ ಸಾರಣೆ ಸಾರಿಸುವುದು ಎಂದರೆ ಬಣ್ಣ ಬಣ್ಣದರೀತಿಯಲ್ಲಿ ಅಲಂಕಾರ ಮತ್ತು ಆಕೃತಿಗಳನ್ನು ಬಿಡಿಸಿ ತಮ್ಮ ಕಲಾ ಪ್ರೌಢಿಮೆಯನ್ನು ಎತ್ತಿ ತೋರಿಸುತ್ತಿದ್ದರು.
ಇನ್ನು ಇಂದಿನ ರೀತಿಯಾಗಿ ರಂಗೋಲಿ ಮಣ್ಣನ್ನು ಬಳೆಸದೇ, ಅಂದು ರಂಗೋಲಿಗೆ ಬಳೆಸುತ್ತಿದ್ದದ್ದು ಅಕ್ಕಿಯ ಹಿಟ್ಟು. ಈ ಅಕ್ಕೀ ಹಿಟ್ಟು ಪಕ್ಷಿಗಳು ಮತ್ತು ಕ್ರಿಮಿಕೀಟಗಳಿಗೆ ಆಹಾರವಾಗುತ್ತಿದ್ದಲ್ಲದೇ, ಅವುಗಳು ಅದನ್ನು ಅಲ್ಲಿಯೇ ತಿಂದು ಮನೆಯ ಒಳಗೆ ಪ್ರವೇಶಿಸುತ್ತಿರಲಿಲ್ಲ.
ಹಾಗೆ ರಂಗೋಲಿ ಇಟ್ಟು ಮನೆಯೊಳಗೆ ಪ್ರವೇಶಿಸಲು ಮುಂಬಾಗಿಲ ಹೊಸ್ತಿಲನ್ನು ತಲೆ ಬಾಗಿಸಿ ಕೊಂಡು ದಾಟಬೇಕಿತ್ತು. ಅಂದೆಲ್ಲಾ ಬಾಗಿಲ ಎತ್ತರವನ್ನು ಕೇವಲ ಐದು ಅಡಿಗಳಷ್ಟು ಇದ್ದು ಮನೆಗೆ ಬರುವವರೆಲ್ಲರೂ ತಗ್ಗೀ ಬಗ್ಗೀ ಬರಬೇಕು ಎಂಬುದಾಗಿತ್ತು. ಅದೇ ರೀತಿ ಬಾಗಿಲಿಗೆ ಮಾವಿನ ಸೊಪ್ಪಿನ ತೋರಣವನ್ನು ಕಟ್ಟಿರಲಾಗುತ್ತಿತ್ತು. ಮರಗಳ ಹಸಿರು ಎಲೆಗಳು ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಇಂಗಾಲದ ಡೈಆಕ್ಸೈಡನ್ನು ಹೀರಿಕೊಂಡು ಅದರ ಬದಲಿಗೆ ಶುಧ್ಧವಾದ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಶುಭ-ಸಮಾರಂಭಗಳಲ್ಲಿ ಅತಿ ಹೆಚ್ಚಿನ ಜನರು ಒಂದೆಡೆ ಸೇರಿದಾಗ, ಜನದಟ್ಟಣೆಯಿಂದ ಆಮ್ಲಜನಕದ ಕೊರತೆ ಉಂಟಾಗಬಹುದು ಹಾಗಾಗಿ ಅಂತಹ ಆಮ್ಲಜನಕದ ಕೊರತೆಯನ್ನು ನೀಗಿಸಲು ಸಮಾರಂಭದ ಮಂಟಪದ ಸುತ್ತಮುತ್ತಲೂ ತೋರಣ ಕಟ್ಟುವ ಸಂಪ್ರದಾಯವಿದೆ. ಅದರಲ್ಲೂ ಮಾವಿನ ಎಲೆಯನ್ನೇ ತೋರಣವನ್ನಾಗಿ ಏಕೆ ಕಟ್ಟುತ್ತಾರೆಂದರೆ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಯು ಅತ್ಯಂತ ಹೆಚ್ಚು ಕಾಲ ಹಚ್ಚ ಹಸಿರಾಗಿರುತ್ತದೆ ಮತ್ತು ಮರದಿಂದ ಕಿತ್ತು ತಂದ ಬಹಳ ಕಾಲಗಳ ನಂತರವೂ ದ್ಯುತಿಸಂಶ್ಲೇಷಣ ಕ್ರಿಯೆಯ ಮೂಲಕ ಆಮ್ಲಜನಕವವನ್ನು ಉತ್ಪತ್ತಿ ಮಾಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಉಳಿದೆಲ್ಲಾ ಎಲೆಗಳಿಗಿಂತ ಮಾವಿನ ಎಲೆಗಳನ್ನೇ ತೋರಣಕ್ಕಾಗಿ ಬಳೆಸುತ್ತೇವೆ.
ಇನ್ನು ಮನೆಯ ಮುಂಬಾಗಿಲು ಮತ್ತು ದೇವರ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟುವುದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಮೂಡಿ ಎಲ್ಲರ ಮನಸ್ಸು ಉತ್ಸಾಹ ಮತ್ತು ಆಹ್ಲಾದಕರವಾಗಿಡಲು ಸಹಾಯ ಮಾಡುತ್ತದೆ. ಅದೆ ರೀತಿ ಮನೆಯನ್ನು ಪ್ರವೇಶಿಸುತಿದ್ದಂತೆಯೇ ಹಚ್ಚ ಹಸಿರ ತೋರಣ ಕಣ್ಣಿಗೆ ತಂಪನ್ನು ನೀಡುತ್ತದೆ ಮತ್ತು ಮನೆಯ ವಾತವಾರಣ ಶುಭ್ರವಾಗಿಗಿದ್ದು ಆ ವ್ಯಕ್ತಿಯ ಮನಸ್ಸು ತಾಜಾತನವಾಗಿ ಮತ್ತು ಧನಾತ್ಮಕವಾಗಿ ಯೋಚಿಸಲು ಸಹಕಾರಿಯಾಗಿರುತ್ತದೆ.
ಹಾಗೆಯೇ ಮನೆಯ ಬಾಗಿಲಿಗೆ ಮಾವಿನ ತಳಿರು ತೋರಣದ ಜೊತೆಗೆ ಬೇವಿನ ಸೊಪ್ಪಿನ ಎಲೆ ಅಥವಾ ಟೊಂಗೆಗಳನ್ನು ಸಿಕ್ಕಿಸುವುದರಿಂದ, ಮಾವು ಮತ್ತು ಬೇವಿನ ಎಲೆಯಲ್ಲಿ ಔಷಧೀಯ ಗುಣಗಳು ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ, ಮನೆಯ ದ್ವಾರದ ಮೂಲಕ ಪ್ರವೇಶಿಸುವ ಗಾಳಿಯೊಂದಿಗೆ ಮನೆಯೊಳಗೆಲ್ಲಾ ಹರಡಿ ಆರೋಗ್ಯ ದೃಷ್ಟಿಯಿಂದ ಮನೆಯಲ್ಲಿ ಉತ್ತಮ ವಾತಾವರಣ ಮೂಡಿಸುತ್ತದೆ.
ಮಾವಿನ ತೋರಣದ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ, ಮನೆಯೊಳಗೆ ಪ್ರವೇಶಿಸುವ ಸಣ್ಣ ಸಣ್ಣ ಕ್ರಿಮಿ ಕೀಟಗಳನ್ನು ಆಕರ್ಷಿಸಿ ಅವುಗಳನ್ನು ತೋರಣದ ತುದಿಯಲ್ಲಿಯೇ ಇರುವಂತೆ ಮಾಡಿ, ಅವುಗಳು ಮನೆಯೊಳಗೆ ಪ್ರವೇಶಿಸದಂತೆ ಬಾಗಿಲಿನ ಹೊರಗೇ ತಡೆಗಟ್ಟುತ್ತವೆ.
ಇನ್ನು ಹೆಂಗಸರು ಈ ರೀತಿಯಾಗಿ ಮನೆ ಶುದ್ಧೀಕರಣ ಮಾಡುತ್ತಿದ್ದರೆ, ಮನೆಯ ಗಂಡಸರು ತಮ್ಮ ಪ್ರಾಥರ್ವಿಧಿ ಮುಗಿಸಿ ಕೊಟ್ಟಿಗೆಗೆ ಹೋಗಿ ಸಗಣಿಯನ್ನು ಬಾಚಿ ಅಲ್ಲೇ ಪಕ್ಕದಲ್ಲಿಯೇ ಇರುತ್ತಿದ್ದ ತಿಪ್ಪೆಗೆ ಹಾಕಿ ಅದು ಮುಂದೇ ಗೊಬ್ಬರವಾಗುತ್ತದೆ. ಹೆಗಲಿನ ಮೇಲೆ ನೇಗಿಲು ಹೊತ್ತಿಕೊಂಡು ಕೃಷಿ ಪರಿಕರಗಳನ್ನೂ ತೆಗೆದುಕೊಂಡು ಎತ್ತುಗಳನ್ನು ಹೊಡೆದುಕೊಂಡು ತಮ್ಮ ಕೃಷಿ ಭೂಮಿಗೆ ಕೆಲಸ ಮಾಡಲು ಹೋಗುತ್ತಾರೆ. ಸೂರ್ಯನ ಝಳ ಹೆಚ್ಚಾಗುವ ಮುಂಚೆ ಬೆವರು ಸುರಿಯುವಷ್ಟು ದುಡಿಯುತ್ತಾರೆ. ಹಾಗಾಗಿ ಅವರೆಲ್ಲರೂ ಗಟ್ಟಿ ಮುಟ್ಟಾಗಿರುತ್ತಿದ್ದರು ಮತ್ತು ದೀರ್ಘಕಾಲ ಬಾಳಿ ಬಳುಕುತ್ತಿದ್ದರು. ಆದರೆ ಈಗ ಅದೇ ಜನಾ ಜಿಮ್ ಎಂದು ಒಂದೆರಡು ಗಂಟೆ ಬೆವರು ಸುರಿಸುತ್ತಾರೆ ಅದರಿಂದ ದೇಹ ದಣಿವಾಗಬಹುದೇ ಹೊರತು ಇನ್ನೇನು ಪ್ರಯೋಜನವಾಗದು.
ಹೆಂಗಸರು ಹಸನಾಗಿ ಹಾಲು ಕರೆದು ನಂತರ ಸ್ನಾನ ಮಾಡಿ ಮನೆಯ ದೇವರಿಗೆ ಮತ್ತು ಮನೆಯ ಮುಂದಿನ ತುಳಸೀ ಕಟ್ಟೆಗೆ ಪೂಜೆ ಮಾಡಿ ಅಡುಗೆ ಕಾರ್ಯದಲ್ಲಿ ಮಗ್ನರಾದರೆ, ಮನೆಯ ಇತರೇ ಹೆಣ್ಣು ಮಕ್ಕಳು ಅಂದಿನ ಅಡುಗೆ ಕೆಲಸಕ್ಕೆ ಬೇಕಾದ ತರಕಾರಿಗಳನ್ನು ತಮ್ಮ ಮನೆಯ ಹಿತ್ತಲಿನಿಂದಲೇ ತಂದು ಬಳಸುತ್ತಿದ್ದರು ಆ ಹಿತ್ತಲು ಎಂತಹದ್ದು ಎಂದರೆ ಮನೆಯಲ್ಲಿ ಸ್ನಾನ ಮಾಡಿದ ನೀರು ಪಾತ್ರೆ ತೋಳೆದ ನೀರು ಸುಮ್ಮನೆ ಪೋಲಾಗದೇ ನೇರವಾಗಿ ಮನೆಯ ಹಿಂದಿನ ತೋಟದಲ್ಲಿದ್ದ ಹೂವು ಹಣ್ಣುಗಳು ಮತ್ತು ತರಕಾರಿ ಗಿಡಗಳಿಗೆ ನೀರು ಉಣಿಸುತ್ತಿತ್ತು. ಇಂದು ನಾವೆಲ್ಲಾ ನೀರು ಪೋಲು ಮಾಡಬೇಡಿ. ನೀರನ್ನು ಸದ್ಬಳಕೆ ಮಾಡಿ ಎಂದು ಬೊಬ್ಬೆ ಹೊಡೆಯುತ್ತಿದ್ದರೆ ನಮ್ಮ ಪೂರ್ವಜರು ಅದನ್ನಾಗಲೇ ಮಾಡಿ ತೋರಿಸಿಯೇ ಬಿಟ್ಟಿದ್ದರು.
ನನಗೇ ತಿಳಿದ ಮಟ್ಟಿಗೆ ಬಹಳ ಇತ್ತೀಚಿನ ದಿನಗಳ ವರೆಗೂ ಬಾಳೇ ದಿಂಡು, ಬಾಳೇ ಹೂ, ಸೀಮೇ ಬದನೇ ಕಾಯಿ, ಕುಂಬಳಕಾಯಿ, ಕರಿಬೇವಿನ ಸೊಪ್ಪು, ವಿಳ್ಳೇದೆಲೆ, ಪರಂಗೀ ಹಣ್ಣುಗಳನ್ನು ನಾವು ಕೊಂಡು ತಿಂದ ನೆನಪೇ ಇಲ್ಲಾ. ಒಂದೋ ನಮ್ಮ ಮನೆಯ ಹಿತ್ತಲಿನಲ್ಲಿಯೇ ಬೆಳೆಯುತ್ತಿತ್ತು ಇಲ್ಲವೇ ಬೆಳೆದವರು ಯಾರೋ ಮಹಾನುಭಾವರು ಕೊಡುತ್ತಿದ್ದರು.
ಮನೆಯ ಉಳಿದ ಹಂಗಸರೂ ಶುಚಿವಂತರಾಗಿ ಮನೆಯ ಮುಂದಿನ ಭಾವಿಯಿಂದಲೂ ಇಲ್ಲವೇ ಊರ ಹೊರಗಿನ ಸಿಹಿ ನೀರಿನ ಭಾವಿಯಿಂದ ತಲೆ ಮೇಲೆ ಎರಡು, ಸೊಂಟದಲ್ಲಿ ಒಂದು ಮತ್ತೊಂದು ಕೈಯಲ್ಲಿ ಒಂದು ಬಿಂದಿಗೆ ಇಲ್ಲವೇ ಕೊಡದ ತುಂಬಾ ನೀರು ತುಂಬಿ ಕೊಂಡು ತರುತ್ತಿದ್ದರು. . ಮನೆಯಲ್ಲಿ ಅಡುಗೆಗೆ ಬಳೆಸಿದ ನಂತರ ಉಳಿದ ಹುಣಸೇ ಹಣ್ಣಿನ ಗಷ್ಟಿನಿಂದ ಚೆನ್ನಾಗಿ ತಿಕ್ಕಿ ತಿಕ್ಕಿ ತೊಳೆದ ತಾಮ್ರದ ಇಲ್ಲವೇ ಹಿತ್ತಾಳೆ ಬಿಂದಿಗಳು ಫಳ ಫಳನೆ ಹೊಳೆಯುತ್ತಿದ್ದವು. ಹಾಗಾಗಿ ಅಂದಿನ ಬಹುತೇಕ ಹೆಣ್ಣು ಮಕ್ಕಳು ಸಣ್ಣಗೆ ತಳುಕು ಬಳುಕುವ ಹಾಗೆ ಯಾವುದೇ ಆರೋಗ್ಯದ ಸಮಸ್ಯೆ ಇಲ್ಲದೇ ಬದುಕುತ್ತಿದ್ದರು. ಮಲೆನಾಡ ಹೆಣ್ಣ ಮೈ ಬಣ್ಣ. ಬಲು ಚೆನ್ನಾ ಆ ನಡು ಸಣ್ಣ ನಾ ಮನಸೋತೆನೆ ಚಿನ್ನ. ಎನ್ನುವ ಜನಪ್ರಿಯ ಗೀತೆಯೇ ಇದೆ.
ಇಷ್ಟೆಲ್ಲಾ ಆಗುವ ಹೊತ್ತಿಗೆ ಸುಮಾರು ಏಳೆಂಟು ಗಂಟೆ ಆ ಹೊತ್ತಿಗೆ ಮಕ್ಕಳನ್ನು ಎಬ್ಬಿಸಿ ಅವರ ಪ್ರಾಥರ್ವಿಧಿ ಮುಗಿಸಿ ಸ್ನಾನ ಮಾಡಿಸುತ್ತಿದ್ದರು. ಹಾಗೆ ಸ್ನಾನ ಮಾಡುವಾಗ ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತೀ | ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ಎಂದು ಹೇಳಿಯೇ ಸ್ನಾನ ಮಾಡಿಸುತ್ತಲೇ, ಭಾರತದ ಅಷ್ಟೂ ನದಿಗಳ ಪರಿಚಯ ಆ ಮಗುವಿಗೆ ಬಾಲ್ಯದಲ್ಲೇ ಆಗುತ್ತಿದ್ದಲ್ಲದ್ದೇ ಅವುಗಳ ಮಹತ್ವ ಆ ಮಗುವಿಗೆ ತಿಳಿದಿರುತ್ತಿತ್ತು. ಕುತೂಹಲದಿಂದ ಆ ನದಿಗಳ ಪಾತ್ರ ಮತ್ತು ಭೂಗೋಳದ ಪರಿಚಯ ಸುಲಭವಾಗಿ ಅಲ್ಲಿಂದಲೇ ಆಗಿ ಹೋಗುತ್ತಿತ್ತು
ಮಕ್ಕಳಿಗೆಲ್ಲಾ ಸಾಲಾಗಿ ಕುಳಿತು ತಿಂಡಿ ಬಡಿಸಲಾಗುತ್ತಿತ್ತು. ಹಾಗೆ ಸಾಲಾಗಿ ಒಟ್ಟಿಗೆ ಊಟ ತಿಂಡಿ ಬಡಿಸುವಾಗ ಮಕ್ಕಳಿಗೆ ಸಹಪಂಕ್ತಿ ಭೋಜನದ ಕಲ್ಪನೆ ಜೊತೆಗೆ ಹಂಚಿ ತಿನ್ನುವ ಅಭ್ಯಾಸವಾಗುತ್ತಿತ್ತು. ಓಂ ಸಹನಾವವತು| ಸಹನೌ ಭುನಕ್ತು| ಸಹ ವೀರ್ಯಂ ಕರವಾವಹೈ| ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವ ಹೈ| ಓಂ ಶಾಂತಿಃ ಶಾಂತಿಃ ಶಾಂತಿಃ|| ಜೊತೆಗೆ ಅನ್ನಪೂರ್ಣೇ ಸದಾ ಪೂರ್ಣೇ, ಶಂಕರ ಪ್ರಾಣ ವಲ್ಲಭೇ. ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ. ಭಿಕ್ಷಾಂ ದೇಹಿ ಚ ಪಾರ್ವತಿ.” ಮಂತ್ರವನ್ನು ಎಲ್ಲರೂ ಒಟ್ಟಿಗೆ ಹೇಳಿಯೇ ಎದುರಿಗೆ ಪಾತ್ರೆಯಲ್ಲಿರುವ ಆಹಾರವನ್ನು ಎಲ್ಲರೂ ಸಮಾನಾಗಿ ಖುಷಿ ಖುಷಿಯಿಂದ ಹಂಚಿಕೊಂಡು ತಿನ್ನುವುದನ್ನು ನೋಡುವುದೇ ಆನಂದ. ಇನ್ನು ಮಕ್ಕಳು ತುಂಬಾ ಇದ್ದರೆ ಎಲ್ಲರನ್ನೂ ಒಟ್ಟಿಗೆ ಕಲೆ ಹಾಕಿ ಕೈ ತುತ್ತು ಕೊಟ್ಟು ತಿನ್ನಿಸುತ್ತಿದ್ದರು. ಹಾಗೆ ಕೈ ತುತ್ತು ತಿನ್ನಿಸುವಾಗ ತಾಯಿಯ ಮಮತೆಯ ಜೊತೆಗೆ ಮಕ್ಕಳ ನಡುವೆ ಆರೋಗ್ಯಕರ ಪೈಪೋಟಿ ಬೆಳೆದು ಮಕ್ಕಳು ಒಂದೆರಡು ತುತ್ತು ಹೆಚ್ಚಾಗಿಯೇ ತಿನ್ನುತ್ತಿದ್ದರು.
ಆದಾದ ನಂತರ ಮಾಡಿದ ಅಡುಗೆಯನ್ನು ಬುತ್ತಿ ತೆಗೆದುಕೊಂಡು ಹೊಲ ಗದ್ದೆಗಳಿಗೆ ಹೋಗಿ ಅಲ್ಲಿ ದುಡಿದು ದಣಿವಾಗಿರುತ್ತಿದ್ದ ಮನೆಯ ಗಂಡಸರಿಗೆ ಊಟ ಬಡಿಸಿ ಅವರದ್ದಾದನಂತರ ತಾವೂ ಊಟ ಮಾಡಿ ಜೊತೆಗೆ ಕಷ್ಟ ಸುಖದ ವಿಚಾರ ವಿನಿಮಯಗಳನ್ನು ಮಾಡಿ ಮನಗೆ ಬಂದು ಸ್ವಲ್ಪ ವಿಶ್ರಾಂತಿ ಪಡೆದು ಮಾರನೆಯ ದಿನಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಒರಳಿನಲ್ಲಿ ಭತ್ತ ಕುಟ್ಟಿ ಸಿದ್ದ ಪಡಿಸಿಕೊಳ್ಳುತ್ತಿದ್ದರು. ಇಲ್ಲವೇ ಅಕ್ಕಿ, ರಾಗಿ ಮತ್ತು ಗೋದಿಯನ್ನು ಬೀಸುವ ಕಲ್ಲಿನಲ್ಲಿ ಬೀಸಿ ಹಿಟ್ಟು ಮಾಡುತ್ತಿದ್ದರು. ಹೀಗೆ ಕುಟ್ಟುವುದರಿಂದ ಮತ್ತು ಬೀಸುವುದರಿಂದ ಮಹಿಳೆಯರ ಆರೋಗ್ಯ ಚೆನ್ನಾಗಿದ್ದು ಯಾರೂ ಕೂಡಾ ಬೆನ್ನು ಅಥವಾ ಸೊಂಟ ಅಥವಾ ಹರ್ನಿಯಾ ತೊಂದರೆಯಿಂದ ಬಳಲುತ್ತಿರಲಿಲ್ಲ,
ಆದರೆ ಇಂದು ಒರಳು ಕಲ್ಲು ಮತ್ತು ಬೀಸೋ ಕಲ್ಲು ಮದುವೆ ಮುಂಜಿಗಳಿಗೆ ಶಾಸ್ತ್ರಕ್ಕೆ ಯಾರಮನೆಯಿಂದಲೂ ಎರವಲು ಪಡೆದುಕೊಂಡು ಶಾಸ್ತ್ರ ಮುಗಿಸಿದ ನಂತರ ಹಿಂದಿರುಗಿಸುವ ಶಾಸ್ತ್ರಕಷ್ಟೇ ಸೀಮಿತವಾಗಿದೆ. ಇಂದು ಎಲ್ಲದ್ದಕೂ ಮಿಕ್ಸಿ ಗ್ರೈಂಡರ್ ಬಳಕೆ ಹೆಚ್ಚಾಗಿದೆ, ನಿಜಕ್ಕೂ ಹೇಳ್ತೀನಿ ನಮ್ಮ ಊರಿನ ಮನೆಯಲ್ಲಿರುವ ಒರಳು ಕಲ್ಲಿನಲ್ಲಿ ರುಬ್ಬಿದ ಕಾಯಿ ಚೆಟ್ನಿಯ ರುಚಿಯೇ ಬೇರೆ ಮತ್ತು ಅದೂ ಎರಡು ದಿನ ಇಟ್ಟರೂ ಕೆಡುತ್ತಿರಲಿಲ್ಲ ಆದರೆ ಇಂದಿನ ಮಿಕ್ಸಿ ಯಲ್ಲಿ ರುಬ್ಬಿದ ಚೆಟ್ನಿ ಬಿಸಿಯಾಗಿ ಹೋಗಿ ಮಧ್ಯಾಹ್ನ ಇಲ್ಲವೇ ಸಂಜೆ ಹೊತ್ತಿಗೇ ಹಳಸಿ ಹೋಗುತ್ತದೆ. ಕಾರಣ ಮಿಕ್ಸಿಯಲ್ಲಿ ಕಾಯಿ ನುರಿಯುವುದಿಲ್ಲ ಅದು ತುಂಡರಿಸಲ್ಪಡುವುದರಿಂದ ಅಲ್ಲಿ ಶಾಖ ಉತ್ಪತ್ತಿಯಾಗಿ ಅದು ಬಹಳ ಬೇಗ ಕೆಡುತ್ತದೆ.
ಈಗಿನ ಕಾಲದಂತೆ ಅಂದು ಶಾಲಾ ಕಾಲೇಜುಗಳು ಇರುತ್ತಿರಲಿಲ್ಲ, ಆಗೆಲ್ಲಾ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿಸುವ ಪದ್ದತಿ ಇತ್ತು. ಮಕ್ಕಳಿಗೆ ಉಪನಯನ ಮಾಡಿ ಗುರುಕುಲಕ್ಕೆ ಬಿಟ್ಟು ಬರುತ್ತಿದ್ದರು. ಅಲ್ಲಿ ಮಕ್ಕಳು ಬೆಳಿಗ್ಗೆ ಮದುಕರ ವೃತ್ತಿ (ಭಿಕ್ಷಾಟನೆ) ಮಾಡಿ ಕೊಂಡು ಆ ದಿವಸಕ್ಕೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಬೇಡಿ ತಂದು ಅದರಲ್ಲಿ ಅಡುಗೆ ಮಾಡಿ ತಿಂದು ಮಿಕ್ಕ ಸಮಯವನ್ನು ವಿದ್ಯಾಭ್ಯಾಸಕ್ಕೆ ಮಿಸಲಿಡುತ್ತಿದ್ದರು. ಕೇವಲ ಶೈಕ್ಷಣಿಕ ವಿದ್ಯೆಯಲ್ಲದೆ ಪ್ರಾಯೋಗಿಕಕ್ಕೆ ಹೆಚ್ಚಿನ ಆಸ್ಥೆ ಕೊಡಲಾಗುತ್ತಿತ್ತು
ಇನ್ನು ಶೈಕ್ಷಣಿಕವಾಗಿ ಶ್ಲೋಕಗಳು ಮತ್ತು ಶುಭಾಷಿತಗಳ ಮೂಲಕ ನೆನಪಿನ ಶಕ್ತಿ ಅದರೆ ಹೊತೆ ಮಗ್ಗಿ ಉರುಹೊಡೆಯುವುದರಿಂದ ತಟ್ಟನೆ ಗುಣಾಕಾರ ಮತ್ತು ಭಾಗಾಕಾರಗಳನ್ನು ಮಾಡುತ್ತಿದ್ದರು ಆದರೆ ಇಂದಿನ ಮಕ್ಕಳಿಗೆ ಕ್ಯಾಲುಕ್ಲೇಟರ್ ಇಲ್ಲದೇ 2+2 ಕೂಡಲೂ ಕಳೆಯಲೂ ಬಾರದಿರುವುದು ನಿಜಕ್ಕೂ ದುಃಖಕರ.
ಆದರೆ ಇಂದು ಎರಡು ಮೂರು ಮೊಬೈಲ್ ನಂ. ನೆನೆಪಿನಲ್ಲಿ ಇಟ್ಟು ಕೊಳ್ಳುವುದಕ್ಕೆ ತಿಣುಕಾಡುತ್ತಿದ್ದೇವೆ. ಲ್ಯಾಂಡ್ ಲೈನ್ ಇದ್ದಾಗಲೇ, ನೂರಾರು ನಂಬರ್ಗಳನ್ನು ನೆನಪಿನಲ್ಲಿ ಇಟ್ಟು ಕೊಳ್ಳುತ್ತಿದ್ದ ನಮಗೆ ಮೊಬೈಲ್ ಬಂದ ಮೇಲೇ ಎಲ್ಲವನ್ನೂ ಮರೆಯುವಂತಾಗಿದೆ.
ಅಂದು ಅಮರ ಕೋಶ ಕಲಿಸಿಕೊಡುವುದರ ಮೂಲಕ ಮಕ್ಕಳಿಗೆ ನನಪಿನ ಶಕ್ತಿಯನ್ನು ಹೆಚ್ಚಿಸುತ್ತಿದ್ದಲ್ಲದೇ ಪ್ರತಿಯೊಂದು ಪದಕ್ಕೂ ಸಮಾನಾಂತರ ಪದರ ಅರ್ಥ ತಿಳಿಯುತ್ತಿತ್ತು ಉದಾ: ಉಮಾಕಾತ್ಯಾಯಿನೀ ಗೌರಿ ಕಾಳೀ …. ಶ್ರೀಕಂಠ ಶ್ಯಿತಿಕಂಠ ಕಪಾಲಬೃತ್..
ಅಮರಕೋಶದ ವನೌಷಧಾ ವರ್ಗದಲ್ಲಿ ಇಲ್ಲದ ಔಷಧೀಯೇ ಇಲ್ಲ ಅದರಂತೆ ಅಮರಕೋಶದಲ್ಲಿ ಇಲ್ಲದಿರುವ ಹೆಸರುಗಳೇ ಇಲ್ಲ ಎನ್ನಬಹುದು.
ಜ್ಯೋತಿಷ್ಯ ಶಾಸ್ತ್ರ : ಖಗೋಳ ಶಾಸ್ತ್ರಕ್ಕೆ ಭಾರತೀಯರ ಕೊಡುಗೆ ಅಪಾರ, ಆರ್ಯಭಟ, ಭಾಸ್ಕರಾಚಾರ್ಯ ಮಂತಾದವರು ಬಹಳ ಖ್ಯಾತ ನಾಮವರು. ಇಲ್ಲಿ ಕುಳಿತಲ್ಲಿಂದಲೇ ಕರಾರುವಾಕ್ಕಾಗಿ ಸೂರ್ಯ ಚಂದ್ರರ ಚಲನವಲನಗಳನ್ನು ಸರಿಯಾದ ಲೆಕ್ಕಾಚಾರದಿಂದ ಕರಾರುವಾಕ್ಕಾಗಿ ಗ್ರಹಣಗಳ ಮಾಹಿತಿ ಮತ್ತು ಮಳೆ ಬೆಳೆ, ವಿನಾಶ ಮತ್ತು ವಿಪತ್ತುಗಳನ್ನು ಹೇಳುತ್ತಿದ್ದರು ಮತ್ತು ಅದನ್ನು ಎಲ್ಲರಿಗೂ ತಿಳಿಯಲೆಂದೇ ಪಂಚಾಗಗಳನ್ನು ಬರೆಯುತ್ತಿದ್ದರು.
ಕಾಲಕ್ಕೆ ನಮ್ಮಷ್ಟು ಬೆಲೆ ಕೊಟ್ಟವರು ಇನ್ನಾರು ಇಲ್ಲ. ರಾಹುಕಾಲಾ, ಗುಳಿಕಾಲ, ಯಮಗಂಡ ಕಾಲ ಎಂದು ಪ್ರತೀ ದಿನವೂ ವಿಭಜಿಸಿ ಪುಣ್ಯ ಕೆಲಸಗಳು ಮತ್ತು ಅಪರ ಕರ್ಮಗಳನ್ನು ಸರಿಯಾದ ಸಮಯಕ್ಕೆ ಮಾಡುವ ಪದ್ದತಿ ನಮ್ಮಲ್ಲಿದೆ. ಅದಕ್ಕಾಗಿಯೇ ಸರಿಯಾಗಿ ಮಹೂರ್ತದ ಸಮಯ ನಿಗಧಿ ಪಡಿಸುತ್ತಾರೆ. ಆದರೆ ನಾವು IST- Indian standard time ಬದಲು Indian stretchable time ಎಂದು ಸುಮ್ಮನೆ ನಮ್ಮನ್ನೇ ನಾವು ಅಪಹಾಸ್ಯ ಮಾಡಿಕೊಳ್ಳುತ್ತಾ ಕಾಲ ಕಳೆಯುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.
ನಮ್ಮಲ್ಲಿ ಮಕ್ಕಳಿಗೆ ಹೆಸರು ಇಡುವುದರ ಹಿಂದೆಯೂ ಅನೇಕ ಕಾರಣಗಳಿವೆ.
ಸುಮ್ಮನೆ, ಟಿಟ್ಟು, ಬಿಟ್ಟು, ಮೋನಿ ಸೋನಿ ಅಂತಾ ಕಾಟಾಚಾರದ ಹೆಸರುಗಳಿರದೆ, ರಾಮ ಕೃಷ್ಣಾ, ಗೋವಿಂದಾ ಶ್ರೀಹರಿ ವಾಸುದೇವ. ಶಿವ, ಸುಂದರ, ಲಕ್ಷ್ಮೀ ಸರಸ್ವತಿ, ಕಮಲ, ವಿಮಲ ಶಾರದೆ ಮುಂತಾಗಿ ತಮ್ಮ ಮನೆ ದೇವರ ಹೆಸರುಗಳನ್ನೇ ತಮ್ಮ ಮಕ್ಕಳಿಗೆ ಹೆಸರಿಡುತ್ತಿದ್ದರು. ಈ ಮೂಲಕ ಮಕ್ಕಳನ್ನು ಕರೆಯುವುದರ ಮೂಲಕವಾದರೂ ಅ ಸದಾ ದೇವರನ್ನು ನೆನೆಯುವಂತಾಗುತ್ತಿತ್ತು.
ಇನ್ನು ಸಂಜೆ ಹೊತ್ತಿಗೆ ಮಕ್ಕಳೆಲ್ಲರೂ ಮನೆಗೆ ಬಂದೊಡನೆಯೇ ಕೈಕಾಲು ಮುಖ ತೊಳೆದುಕೊಂಡು ಸ್ವಲ ಲಘು ಉಪಹಾರ ತಿಂದು ದೈಹಿಕ ಪರಿಶ್ರಮದ ಆಟಗಳನ್ನು ಆಡುತ್ತಿದ್ದರು
ಇನ್ನು ಮಕ್ಕಳ ಆಡುತ್ತಿದ್ದ ಆಟಗಳ ಬಗ್ಗೆ ಗಮನ ಹರಿಸಿದರೆ
- ಗೋಲಿ ಬುಗುರಿ ಏಕಾಗ್ರತೆ ಮತ್ತು ಗುರಿಯನ್ನು ಕಲಿಸುತ್ತಿತ್ತು.
- ಕಬ್ಬಡ್ಡಿ ಖೋಖೋ . ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತಿದ್ದವು.
- ಮರಕೋತಿ ಮತ್ತು ಈಜು – ಧೈರ್ಯವನ್ನು ಹೆಚ್ಚಿಸುವುದರೊಂದಿಗೆ ಜೀವ ರಕ್ಷಕ ಕಲೆಯೂ ಆಗಿರುತ್ತಿತ್ತು.
- ಕುಂಟೇಬಿಲ್ಲೆ – ಹೆಣ್ಣು ಮಕ್ಕಳಿಗೆ ಅದಕ್ಕಿಂತ ಉತ್ತಮ ಆರೋಗ್ಯಕರ ವ್ಯಾಯಾಮ ಇನ್ನೊಂದಿಲ್ಲ,
- ಚೌಕಾಬಾರ ಮತ್ತು ಅಳುಗುಳಿ ಮನೆ -> ಲೆಕ್ಕಾಚಾರ
- ಚೆದುರಂಗ – ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಕ್ಕಳನ್ನು ಹಿಂದೆ ಬೈಯುವಾಗಲೂ ಅಯ್ಯೋ ಕೊದಂಡರಾಮ, ನೀನೊಳ್ಳೆ ಹನುಮಂತ ಕಣೋ. ಬಾಲ ವಿಲ್ಲದ ಅಂಜನೇಯ ಎನ್ನುತ್ತಿದ್ದರೇ ಹೊರತು ಈಗಿನ ರೀತಿಯಾಗಿ ಕೆಟ್ಟ ಭಾಷಾ ಪ್ರಯೋಗವನ್ನು ಖಂಡಿತವಾಗಿಯೂ ಮಾಡುತ್ತಲೇ ಇರುತ್ತಿರಲಿಲ್ಲ
ಇನ್ನು ಮಕ್ಕಳಿಗೆ ಮನೋರಂಜನೆ ಎಂದರೆ ಹರಿಕಥೆ, ಪೌರಾಣಿಕ ನಾಟಕಗಳು ಯಕ್ಷಗಾನ ಇಲ್ಲವೇ ಅಂತ್ಯಾಕ್ಷರಿ. ಅಂತ್ಯಾಕ್ಷರಿ ಆಟ ಮಕ್ಕಳಲ್ಲಿ ಸಂಗೀತ ಮತ್ತು ಸಾಹಿತ್ಯಗಳಲ್ಲಿ ಹೆಚ್ಚಿನ ಆಸಕ್ತಿ ಹೆಚ್ಚಿಸುತ್ತಿತ್ತು.
ಆದರೆ ಇಂದು ಮಕ್ಕಳು ದೈಹಿಕವಾಗಿ ಪರಿಶ್ರಮ ಪಡುತ್ತಲೇ ಇಲ್ಲ ಸದಾಕಾಲ ಟಿವಿಯಲ್ಲಿ ಕಾರ್ಟೂನ್ ಇಲ್ಲವೇ ಮೊಬೈಲ್ ಗೇಮ್ಸ್ ಇದರಿಂದ ಕಣ್ಣುಗಳಿಗೆ ಹಾನಿ ಮತ್ತು ಮನಸ್ಸಿಗೆ ಛೇದವನ್ನು ಉಂಟು ಮಾಡುತ್ತಿವೆ.
ಗಂಡಸರುಗಳು ಅರಳೀ ಕಟ್ಟೆಯ ಕೆಳಗೆ ಕುಳಿತು ಲೋಕಾಭಿರಾಮವಾಗಿ ಆಗು ಹೋಗುಗಳನ್ನ್ನು ಹರಟುತ್ತಿದ್ದರು ಇಲ್ಲಿಯೇ ಹಳ್ಳಿಯ ಬಹಳಷ್ತು ಸಮಸ್ಯೆಗಳು ಪರಿಹಾರವಾಗಿ ಹೊಗುತ್ತಿತ್ತು. ಅರಳೀ ಮರವೂ ಕೂಡಾ ಹೆಚ್ಚಾಗಿ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಹೆಮ್ಮರವಾಗಿದ್ದರಿಂದ ಅರಳೀ ಕಟ್ಟೆಯ ಮೇಲೇ ಎಲ್ಲರೂ ಕುಳಿತುಕೊಳ್ಳುತ್ತಿದ್ದರು.
ಇನ್ನು ಸೂರ್ಯ ಮುಳುಗುತ್ತಿದ್ದಂತೆಯೇ ಮನೆಯವರೆಲ್ಲರೂ ಸೇರಿ ಕೈ ಕಾಲು ಮುಖ ತೊಳೆದುಕೊಂಡು ಹಣೆಗೆ ವಿಭೂತಿ ಇಲ್ಲವೇ ಕುಂಕುಮ ಧರಿಸಿ ದೇವರ ಕೋಣೆಯ ಕುಳಿತು ಭಕ್ತಿಯಿಂದ ಕೆಲಕಾಲ ದೇವರ ಭಜನೆ ಮಾಡುತ್ತಿದ್ದರು, ಹೀಗೆ ಭಜನೆ ಮಾಡುತ್ತಿದ್ದರಿಂದ ಹೆಂಗಸರು ಮತ್ತು ಮಕ್ಕಳಿಗೆ ತನ್ನಿಂದ ತಾನೇ ಸಂಗೀತದ ಪರಿಚಯವಾಗಿ ಹೋಗುತ್ತಿತ್ತು. ಮಕ್ಕಳಿಗೆ ಶೃತಿ ಲಯ ಮತ್ತು ತಾಳದ ಜ್ಞಾನ ಬಂದು ಬಿಡುತ್ತಿತ್ತು. ಜೊತೆಗೆ ಹಾರ್ಮೋನಿಯಂ ಮತ್ತು ತಬಲ ಇಲ್ಲವೇ ಮೃದಂಗ ವಾದನ ಕಲಿತುಕೊಳ್ಳುತ್ತಿದ್ದರು, ಇತ್ತೀಚೆಗೆ ಹೆಸರಾಂತ ಸಂಗೀತ ನಿರ್ದೇಶಕ ರವೀ ಬಸ್ರೂರ್ ಅವರ ಸಂದರ್ಶನ ಕೇಳುತ್ತಿದ್ದಾಗ ಅವರಿಗೆ ಸಂಗೀತಾಸಕ್ತಿ ಬಂದದ್ದೇ ಈ ರೀತಿಯ ಸಾಮೂಹಿಕ ಭಜನೆಗಳಿಂದ ಎಂದು ತಿಳಿದು ನಮ್ಮ ಪೂರ್ವಜರ ಪರಿಕಲ್ಪನೆ ನಮಗೆ ಅರ್ಥವಾಯಿತು
ಇನ್ನು ಏಳೂವರೆ ಎಂಟಕ್ಕೆಲ್ಲಾ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಊಟ ಮಾಡಿ ನಂತರ ಮಕ್ಕಳಿಗೆ ರಾಮಾಯಣ ಇಲ್ಲವೇ ಮಹಾಭಾರತ, ಭಾಗವತದ ಕುರಿತಾದ ಕತೆಗಳನ್ನು ಹೇಳುತ್ತಾ ಮಲಗಿಸುವ ಹೊತ್ತಿಗೆ ಗಂಟೆ ಹತ್ತಾಗಿರುತ್ತಿತ್ತು. ಅಲ್ಲಿಗೆ ಊಟ ಮಾಡಿ ಎರಡು ಗಂಟೆಯಾಗಿ ಸ್ವಲ್ಪ ಅರಗಿರುತ್ತಿತ್ತು ಮತ್ತು ನೆಮ್ಮದಿಯಾಗಿ ನಿದ್ದೆ ಬರುತ್ತಿತ್ತು
ಈ ರೀತಿಯಾಗಿ ನಮ್ಮ ಪ್ರತಿಯೊಂದು ಆಚರಣೆಯ ಹಿಂದೆಯೂ ವೈಜ್ಞಾನಿಕವಾದ ವಿಶೇಷ ಕಾರಣಗಳು ಇದ್ದೇ ಇರುತ್ತಿತ್ತು ಎಂದು ಸಮಯಾಭಾವದಿಂದಾಗಿ ಕಾರ್ಯಕ್ರಮವನ್ನು ಅಲ್ಲಿಗೇ ಮುಗಿಸಿ ಮುಂದೆ ಎಂದಾದರೂ ಸಮಯ ಸಿಕ್ಕಲ್ಲಿ ಅಂದು ಇದರ ಭಾಗ ಎರಡರಲ್ಲಿ ನಾವು ಸಂಭ್ರಮದಿಂದ ಆಚರಿಸುವ ಹಬ್ಬಗಳು ಮತ್ತು ಅವುಗಳ ವಿಶೇಷತೆಯ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಎಂದಿನಂತೆ ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿ, ಅವರೇ ವಂದಾನಾರ್ಪಣೆಯನ್ನೂ ಮಾಡಿದ್ದು ವಿಶೇಷವಾಗಿತ್ತು. ಶ್ರೀಮತಿ ಸುಧಾ ಸೋಮೇಶ್ ಅವರ ಜೊತೆಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಸುರಿಯುತ್ತಿದ್ದ ಮಳೆಯ ನಡುವೆಯೂ ಅನಿವಾರ್ಯ ಕಾರಣದಿಂದ ಕಾರ್ಯಕ್ರಮ ಅರ್ಧ ಗಂಟೆ ತಡವಾಗಿ ಆರಂಭವಾದರೂ ಉತ್ತಮ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇಂದಿನ ಕಾರ್ಯಕ್ರಮ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿದ್ದು ಅದು ಕೇವಲ ವಕ್ತಾರರು ಮಾತನಾಡುವುದನ್ನು ಸಭಿಕರು ಆಲಿಸುವ ಬದಲು ಆವರಿಬ್ಬರ ನಡುವೆ ನೇರ ನೇರ ವಿಚಾರ ವಿನಿಮಯದ ಮೂಲಕ ಸಾಕಷ್ಟು ವಿಚಾರ ವಿನಿಮಯದ ಜೊತೆಗೆ ಅವರ ಅನುಭವಗಳನ್ನು ಹಂಚಿಕೊಂಡಿದ್ದು ಅತ್ಯಂತ ಮಹತ್ವವಾಗಿತ್ತು.
ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ನಾವುಗಳು ನಮ್ಮ ತಂದೆ ತಾಯಿರಿಂದ ಕಲಿತ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮೆಲುಕು ಹಾಕುತ್ತಾ , ಸಾಧ್ಯವಾದಷ್ಟೂ ಅದನ್ನು ನಮ್ಮ ಮಕ್ಕಳಿಗೆ ತಿಳಿಸಿಕೊಡುವತ್ತ ಹರಿಸೋಣ ನಮ್ಮ ಚಿತ್ತ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಹಾಗಾಗಿ ಅವರಿಗೆ ನಮ್ಮ ಸನಾತನ ಧರ್ಮದ ಸಂಸ್ಕಾರ ಮತ್ತು ಆಚರಣಾ ಪದ್ದತಿಗಳ ಪರಿಚಯ ಮಾಡಿಕೊಡುವ ಮೂಲಕ ನಮ್ಮ ಸಂಪ್ರದಾಯಗಳನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ಕಲಿಸುವ ಮತ್ತು ಉಳಿಸುವ ಜವಾಬ್ಧಾರಿ ನಮ್ಮದೇ ಆಗಿದೆ.
ಇಡೀ ಕಾರ್ಯಕ್ರಮವನ್ನು ಈ ಲಿಂಕ್ ಕ್ಲಿಕ್ ಮಾಡುವುದರ ಮೂಲಕ ಕೇಳಿ ನಿಮ್ಮ ಅಭಿಪ್ರಾಯ ತಿಳಿಸಿ
ಏನಂತೀರೀ?