ಕನ್ನಡ ಚಲನಚಿತ್ರ ಕಂಡ ಅಪ್ರತಿಮ, ಪ್ರಬುದ್ಧ ಮತ್ತು ಸ್ವಾಭಿಮಾನಿ ನಟ. ತನ್ನ ಶರೀರ ಮತ್ತು ಶಾರೀರಗಳಿಂದಲೇ ಎದುರಿಗಿರುವವರ ಎದೆಯನ್ನು ಝಲ್ ಎಂದು ನಡುಗಿಸುತ್ತಿವರು ಎಂದರೆ ತಪ್ಪಾಗಲಾರದು. ಹೆಸರಿನಲ್ಲಿಯೇ ವಜ್ರವಿದ್ದರೂ ಅವರ ಮನಸ್ಸು ಮಾತ್ರಾ ವಜ್ರದಂತೆ ಎಂದೂ ಕಠಿಣವಾಗಿರದೇ ಬೆಣ್ಣೆಯಂತಹ ಮೃದು ಸ್ವಭಾವದವರು. ತೆರೆಮೇಲೆ ಮಾತ್ರ ಕಠಿಣ ಹೃದಯ ಉಳ್ಳ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದ ವಜ್ರಮುನಿಯವರು, ನಿಜ ಜೀವನದಲ್ಲಿ ತಾವು ಎಷ್ಟೇ ಕಷ್ಟದಲ್ಲಿದ್ದರೂ ಪರರ ಕಷ್ಟವನ್ನಾಲಿಸಿ ಸಹಾಯ ಮಾಡುತ್ತಿದ್ದಂತಹ ಸಹೃದಯಿ ನಟ. ಬೆಂಗಳೂರಿನ ಲಾಲ್ ಬಾಗ್ ಸಿದ್ದಾಪುರ ಮತ್ತು ಮಾವಳ್ಳಿಯ ಸುತ್ತಮುತ್ತಲಿನ ಪ್ರದೇಶದ ಅತ್ಯಂತ ಸಿರಿವಂತ ರಾಜಕೀಯ ಹಿನ್ನಲೆಯುಳ್ಳ ಕುಟುಂಬದಲ್ಲಿ ಬೆಳೆದು ಬಂದವರು. ತಂದೆ ಆಗಬಯಸಿದ್ದು ಇಂಜೀನಿಯರ್ ಆದರೆ ಮಗನಿಗೆ ಅದೇಕೋ ವಿದ್ಯೆಯ ಕಡೆ ಅಷ್ಟೊಂದು ಒಲವು ಮೂಡಲೇ ಇಲ್ಲ. ಅಲ್ಲೇ ಸುತ್ತ ಮುತ್ತಲಿನ ರವೀಂದ್ರ ಕಲಾಕ್ಷೇತ್ರ, ಸಂಸ ರಂಗಮಂದಿರ, ಪುರಭವನದಲ್ಲಿ ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳು ನಡೆಯುತ್ತಲಿತ್ತು. ಹಾಗಾಗಿ ವಜ್ರಮುನಿಯವರಿಗೆ ಶಾಲಾ ಕಾಲೇಜಿಗಿಂತ ರಂಗಭೂಮಿಯತ್ತಲೇ ತಮ್ಮ ಗಮನ ಹರಿಸಿದರು. ನೋಡಲು ಸುರದ್ರೂಪಿ, ಅಜಾನುಬಾಹು, ಕಂಚಿನ ಕಂಠ, ಕೆಂಪಗೆ ರಕ್ತ ಕಾರುತ್ತಿದ್ದ ಕಣ್ಣುಗಳು. ನಟನಾಗುವುದಕ್ಕೆ ಇಷ್ಟೆಲ್ಲ ಅರ್ಹತೆ ಇದ್ದಮೇಲೆ ತಡಮಾಡದೇ ರಂಗಭೂಮಿಯಲ್ಲಿ ಪೌರಾಣಿಕ ನಾಟಕಗಳನ್ನು ಮಾಡಲು ಶುರು ಹಚ್ಚಿಕೊಂಡು ಹತ್ತಾರು ನಾಟಕಗಳನ್ನು ಮಾಡಿದರೂ ಕಣಗಾಲ ಪ್ರಭಾಕರ ಶಾಸ್ತ್ರೀಗಳ ಪ್ರಚಂಡ ರಾವಣದ ದಶಕಂಠ ರಾವಣನ ಪಾತ್ರ ಅವರನ್ನು ಕೈ ಹಿಡಿಯಿತು. ಅವರು ರಂಗಭೂಮಿಗೆ ಬಂದಾಕ್ಷಣವೇ ಜನ ಅವರ ಪಾತ್ರಕ್ಕೆ ಹುಚ್ಚೆದ್ದು ಕುಣಿಯಲಾರಂಭಿಸಿದರು. ಚಪ್ಪಾಳೆಗಳ ಸುರಿ ಮಳೆ. ಒನ್ಸ್ ಮೋರ್ ಒನ್ಸ್ ಮೋರ್ ಎನ್ನುವ ಕೂಗಾಟ.
ನಾಟಕಗಳಲ್ಲಿ ಆ ಪಾಟಿಯಾಗಿ ಪ್ರಸಿದ್ಧಿಯಾದ ಮೇಲೆ ಚಲನಚಿತ್ರರಂಗದಲ್ಲಿ ಒಂದು ಕೈ ನೋಡೇ ಬಿಡೋಣ ಎಂದು ನಿರ್ಧರಿಸಿ ನಟನಾಗಿ ಬರುವುದಕ್ಕೆ ಮೊದಲು ಸಿನಿಮಾಟೋಗ್ರಫಿಯಲ್ಲಿ ಡಿಪ್ಲೊಮಾ ಪಡೆದು ಚಿತ್ರರಂಗಕ್ಕೆ ಪ್ರವೇಶಿಸುವ ಯತ್ನವನ್ನು ಮಾಡಿದರು. 1967ರಲ್ಲಿ ಪುಟ್ಟಣ್ಣ ಕಣಗಾಲ್ ಅವರ ಸಾವಿರ ಮೆಟ್ಟಿಲು ಚಿತ್ರದ ಮೂಲಕ ನಟರಾದರೂ ಆ ಚಿತ್ರ ಬಿಡುಗಡೆಯಾಗದ ಕಾರಣ ಮತ್ತೆ ಪುಟ್ಟಣ್ಣನವರೇ ನಿರ್ದೇಶಿಸಿದ ಮಲ್ಲಮ್ಮನ ಪವಾಡ ಚಿತ್ರದ ಮೂಲಕ ಮೊತ್ತ ಮೊದಲಬಾರಿಗೆ ತಮ್ಮ ಅಭಿನಯದ ಛಾಪನ್ನು ತೆರೆಯ ಮೇಲೆ ಮೂಡಿಸಿದರು. ವಾಸ್ತವವಾಗಿ ಚಿತ್ರರಂಗದಲ್ಲಿ ನಾಯಕ ನಟರಾಗಲು ಬಯಸಿದರಾದರೂ ಜನ ಅವರನ್ನು ಖಳನಾಯಕನ್ನನ್ನಾಗಿಯೇ ನೋಡಲು ಬಯಸಿದ್ದರಿಂದ ವಿಧಿ ಇಲ್ಲದೇ ಒಲ್ಲದ ಮನಸ್ಸಿನಿಂದಲೇ ಖಳನಾಯಕನ ಪಾತ್ರಗಳನ್ನು ಒಪ್ಪಿಕೊಳ್ಳಲು ಆರಂಭಿಸಿದರಾದರೂ, ಮುಂದೆ ಸಾಲುಸಾಲಾಗಿ ಬಂದ ಸಂಪತ್ತಿಗೆ ಸವಾಲ್ ಗೆಜ್ಜೆಪೂಜೆ , ನಾಗರಹಾವು , ಉಪಾಸನೆ, ಮಯೂರ , ಬಹದ್ದೂರ್ ಗಂಡು , ಭರ್ಜರಿ ಭೇಟೆ, ಪ್ರೇಮದ ಕಾಣಿಕೆ , ಬಂಗಾರದ ಮನುಷ್ಯ , ಗಿರಿಕನ್ಯೆ , ಶಂಕರ್ ಗುರು ಚಿತ್ರಗಳ್ಳಲ್ಲಿನ ಅವರ ಖಳನಟನೆಗೆ ಜನಾ ಯಾವಾಗ ಮೆಚ್ಚಿಕೊಂಡರೋ, ಅಲ್ಲಿಂದ ಹೃದಯಪೂರ್ವಕವಾಗಿ ಖಳನಾಯಕನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಾ. ನಾಯಕ ನಟರ ಸಾಮರ್ಥ್ಯಕ್ಕೆ ತಕ್ಕಂತೆಯೇ ನಟಿಸಲಾರಂಭಿಸಿದರು. ಬಹುಶಃ ನನಗೆ ತಿಳಿದಂತೆ ಭಕ್ತ ಕುಂಬಾರ ಚಿತ್ರದಲ್ಲಿ ಮಾತ್ರವೇ ಅವರನ್ನು ಸೌಮ್ಯ ಪಾತ್ರದಲ್ಲಿ ನೋಡಿದ ನೆನಪು.
ವಜ್ರಮುನಿಯವರ ನಟನೆಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದ ವರನಟ ರಾಜಕುಮಾರರು, ಅವರ ಬಹುತೇಕ ಚಿತ್ರಗಳಲ್ಲಿ ವಜ್ರಮುನಿಯವರನ್ನೇ ಖಾಯಂ ಖಳನಾಯಕರನ್ನಾಗಿ ಆಯ್ಕೆಮಾಡಿಕೊಳ್ಳುತ್ತಿದ್ದರು. ವಜ್ರಮುನಿಯವರು ಒಂದು ರೀತಿ ವಜ್ರೇಶ್ವರೀ ಕಂಬೈನ್ಸ್ ಚಿತ್ರಗಳಲ್ಲಿ ನಿಲಯದ ಕಲಾವಿದರಾಗಿದ್ದರು ಎಂದರೂ ತಪ್ಪಾಗಲಾರದು. ಬಹುತೇಕರಿಗೆ ತಿಳಿಯದಿರದ ಮತ್ತೊಂದು ವಿಷಯವೇನೆಂದರೆ, ವಜ್ರಮುನಿಯವರು ಡಾ.ರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಅದ ಕಾರಣವೇ ಅವರಿಬ್ಬರೂ ನಟಿಸಿದ ಹಲವಾರು ಚಿತ್ರಗಳು ಪ್ಫೇಕ್ಷಕರ ಮನಸೂರೆ ಗೊಂಡಿತ್ತು. ಒಮ್ಮೆ ರಾಜ್ ಮತ್ತು ವಜ್ರಮುನಿಯವರು ಸಾಹಸ ದೃಶ್ಯವೊಂದರಲ್ಲಿ ನಟಿಸುವಾಗ ಅಕಸ್ಮಾತ್ ವಜ್ರಮುನಿಯವರ ಹೊಡೆತ ರಾಜ್ ಕುಮಾರ ವರಿಗೆ ತಗಲಿ ರಾಜ್ ಅವರಿಗೆ ಸ್ವಲ್ಪ ಪೆಟ್ಟಾದಾಗ ರಾಜ್ ಅವರಿಗಿಂತ ವಜ್ರಮುನಿಯವರೇ ಬಹಳವಾಗಿ ನೊಂದು ಕೊಂಡಿದ್ದರಂತೆ. ಅದನ್ನು ತಿಳಿದ ರಾಜ್ ಅವರು ಅಯ್ಯೋ ಗೌಡ್ರೇ.. ಇದೆಲ್ಲಾ ನಟಿಸುವಾಗ ಸಹಜ ಪ್ರಕ್ರಿಯೆಗಳು. ನೀವೇನು ಬೇಜಾರು ಮಾಡಿಕೊಳ್ಳಬೇಡಿ ಎಂದು ಸಮಾಧಾನ ಪಡಿಸಿದ್ದರಂತೆ.
ತಮ್ಮ ರೋಷಾವೇಶ, ಗಹಗಹಿಸಿ ಅಟ್ಟಹಾಸದ ನಗು, ತೀಕ್ಷ್ಣ ನೋಟ, ಕಂಚಿನ ಕಂಠ ಸಹಜವಾದ ನಟನೆ, ಪಾತ್ರಕ್ಕೆ ಮತ್ತು ಸನ್ನಿವೇಷಕ್ಕೆ ತಕ್ಕಂತ್ತಿದ್ದ ಸಂಭಾಷಣೆಯ ಏರಿಳಿತ, ಆಂಗಿಕ ಅಭಿನಯದ ಮೂಲಕ ನಟ ಭೈರವ, ನಟ ಭಯಂಕರ ಎಂಬ ಬಿರುದುಗಳನ್ನು ಅಭಿಮಾನಿಗಳಿಂದ ಪ್ರೇಮಪೂರ್ವಕವಾಗಿ ಪಡೆದಿದ್ದರು. ಅದೇ ರೀತಿ ಬೆತ್ತಲೆ ಸೇವೆ ಚಿತ್ರದ ತಮ್ಮ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದರೂ ಅವರಿಗೆ ನಿಜವಾಗಿಯೂ ಸಲ್ಲಬೇಕಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಲಭಿಸಲೇ ಇಲ್ಲ ಎನ್ನುವುದು ನಿಜಕ್ಕೂ ವಿಷಾಧನೀಯ ಸಂಗತಿ.
ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ವಜ್ರಮುನಿಯವರು ಕೆಲವು ಚಿತ್ರಗಳನ್ನು ನಿರ್ಮಿಸಿಯೂ ಇದ್ದಾರೆ. ತಾಯಿಗಿಂತ ದೇವರಿಲ್ಲ, ಬ್ರಹ್ಮಾಸ್ತ್ರ, ರಣಭೇರಿ ಹಾಗೂ ಗಂಡಭೇರುಂಡ ಮುಂತಾದ ಚಿತ್ರಗಳನ್ನು ನಿರ್ಮಿಸಿದರೂ ಅದರಲ್ಲಿ ಗಳಿಸಿದ್ದಕ್ಕಿಂತ ಕಳೆದು ಕೊಂಡದ್ದೇ ಹೆಚ್ಚು. ಚಿತ್ರರಂಗದ ಜೊತೆ ಜೊತೆಗೂ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದರಲ್ಲೂ ಕೆಲವು ಕೋ-ಆಪರೇಟೇವ್ ಬ್ಯಾಂಕ್ಗಳಲ್ಲಿ ಡೈರಕ್ಟರ್ ಕೂಡಾ ಆಗಿದ್ದರು ಮತ್ತು ತಮ್ಮ ವಂಶಪಾರಂಪರ್ಯವಾಗಿ ಬಂದಿದ್ದ ರಾಜಕೀಯದಲ್ಲೂ ತಮ್ಮ ಅದೃಷ್ಟವನ್ನು ಪರೀಕ್ಷಿಸಲು ಹೋಗಿ ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ರಾಷ್ಟ್ರೀಯ ಪಕ್ಷವೊಂದರ ಆಭ್ಯರ್ಥಿಯಾಗಿ ಸ್ಪರ್ಧಿಸಿದ್ದರೂ, ಜನ ಅವರನ್ನು ಖಳನಾಯಕನ ಪಾತ್ರಕ್ಕಷ್ಟೇ ಸೀಮಿತವಾಗಿಸಿ, ಜನ ನಾಯಕನನ್ನಾಗಿ ಅವರನ್ನು ನೋಡದೇ ಹೋದದ್ದು ಅವರಿಗೆ ಬಹಳವಾಗಿ ಕಾಡಿತ್ತು.
ವಯಸ್ಸು ಅರವತ್ತರ ಆಸು ಪಾಸಿನಲ್ಲಿತ್ತು. ಹೊತ್ತು ಗೊತ್ತಿಲ್ಲದ ದುಡಿತ ಜೊತೆಗೊಂದಿಷ್ಟು ಕುಡಿತದ ಪರಿಣಾಮವಾಗಿ ಮಧುಮೇಹದ ಖಾಯಿಲೆಗೆ ತುತ್ತಾಗಿ ನಂತರ ಅದು ಕಿಡ್ನಿ ಸಮಸ್ಯೆಯಾಗಿ ಪರಿವರ್ತಿತವಾಗಿತ್ತು. ವಾರಕ್ಕೆ ಎರಡು ಮೂರು ಸಲಾ ಡಯಲಿಸಿಸ್ ಕ್ರಿಯೆಗೆ ಒಳಗಾಗಿದ್ದ ಕಾರಣ ದೇಹ ಹೈರಾಣಾಗಿ ಹೋದರೂ, ಎಷ್ಟೇ ಆರ್ಥಿಕ ಸಮಸ್ಯೆಗಳು ಎದುರಾದರೂ, ಯಾರ ಮನೆಯ ಬಾಗಿಲಿಗೂ ಎಡತಾಕಲಿಲ್ಲ ಮತ್ತು ಎಷ್ಟೇ ರಾಜಕೀಯ ಸಂಪರ್ಕಗಳಿದ್ದರೂ ಯಾವುದೇ ಸರ್ಕಾರೀ ಸೌಲಭ್ಯಗಳನ್ನಾಗಲೀ, ಸವಲತ್ತುಗಳನ್ನಾಗಲೀ ಪಡೆಯಲು ಹೋಗಲಿಲ್ಲ ಎನ್ನುವುದು ಗಮನಿಸಬೇಕಾದ ಪ್ರಮುಖವಾದ ಅಂಶ. ಬಹು ದಿನಗಳ ಅನಾರೋಗ್ಯದ ಪರಿಣಾಮವಾಗಿ 2006ರ ಜನವರಿ 5 ರಂದು ವಜ್ರಮುನಿಯವರು ನಮ್ಮನ್ನಗಲಿದರು. ಅನೇಕ ನಟರುಗಳು ಸ್ವಲ್ಪ ಜನಪ್ರಿಯರಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ, ತಮ್ಶ ಹತ್ತಿರದ ಸಂಬಂಧಿಗಳನ್ನೋ ಇಲ್ಲವೇ ತಮ್ಮ ಮಕ್ಕಳನ್ನೋ ಚಿತ್ರರಂಗಕ್ಕೆ ತಂದು ಪ್ರೇಕ್ಷಕರನ್ನು ಅವರ ಮೇಲೆ ತುರುಕಲು ಪ್ರಯತ್ನಿಸಿದರೆ ವಜ್ರಮುನಿಯವರಾಗಲೀ ಅವರ ಮಕ್ಕಳಾಗಲೀ ಅದಕ್ಕೆ ತದ್ವಿರುದ್ಧ. ವಜ್ರಮುನಿಯವರು ಇದ್ದ ಸಮಯದಲ್ಲಾಗಲೀ ಅಥವಾ ಅವರು ಕಾಲವಾದ ನಂತರವೂ ಗಾಂಧೀನಗರದ ಆಸು ಪಾಸಿನಲ್ಲಿ ಆವರ ಕುಟುಂಬಸ್ಥರು ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಆತ್ಯಂತ ಸ್ವಾಭಿಮಾನಿಗಳಾಗಿ ತಮ್ಮ ವ್ಯವಹಾರಗಳಲ್ಲಿ ಮಗ್ನರಾಗಿದದ್ದಾರೆ. ಅಂದಿನಿಂದ ಇಂದಿನವರೆಗೂ ವಜ್ರಮುನಿಯವರ ವಿರುದ್ಧ ಯಾರೇ ಆಗಲೀ, ಯಾವುದೇ ಒಂದು ಕೆಟ್ಟ ಮಾತುಗಳನ್ನು ಆಡುತ್ತಿಲ್ಲ ಮತ್ತು ಎಲ್ಲರೂ ಅವರನ್ನು ಮನಸಾರೆ ಹೊಗಳುತ್ತಾರೆ ಎಂದರೆ ಜನ ವಜ್ರಮುನಿಯವರನ್ನು ಇನ್ನೂ ಎಷ್ಟು ಇಷ್ಟ ಪಡುತ್ತಾರೆ ಎಂದು ತಿಳಿಯುತ್ತದೆ.
ಮೊನ್ನೆ ಮುನಿರತ್ನಂ ಕುರುಕ್ಷೇತ್ರ ಚಿತ್ರ ಟಿವಿಯಲ್ಲಿ ಬರುತ್ತಿದ್ದಾಗ ಅಕಾರ ಮತ್ತು ಹಕಾರದ ನಡುವಿನ ವೆತ್ಯಾಸ ಗೊತ್ತಿರದ, ಸಂಭಾಷಣೆಗೂ ಅವರ ಆಂಗೀಕ ಅಭಿನಯಕ್ಕೂ ಸಂಬಂಧವೇ ಇರದ, ಕನ್ನಡ ಭಾಷೆಯ ಮೇಲೆ ಸ್ವಲ್ಪವೂ ಹಿಡಿತವಿರದ ಅಪಾತ್ರರನ್ನೆಲ್ಲಾ ಪೌರಾಣಿಕ ಪಾತ್ರದಲ್ಲಿ ನೋಡುತ್ತಿದ್ದಾಗ ಖಂಡಿತವಾಗಿಯೂ ವಜ್ರಮುನಿಯವರ ನೆನಪು ಬಹಳವಾಗಿ ಕಾಡಿತು. ಅಂದಿಗೂ ಇಂದಿಗೂ ಕಂಚಿನ ಕಂಠದ ವಜ್ರಮುನಿಯವರ ಸ್ಥಾನವನ್ನು ತುಂಬ ಬಲ್ಲ ಮತ್ತೊಬ್ಬ ಕಲಾವಿದ ಇನ್ನೂ ನಮ್ಮ ಕನ್ನಡ ಚಿತ್ರರಂಗಕ್ಕೆ ಸಿಗದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ. ಸೂರ್ಯನಿಗೆ ಸೂರ್ಯನೇ ಸಾಟಿ ಎನ್ನುವಂತೆ ಖಳನಾಯಕರ ನಟನೆಯಲ್ಲಿ ವಜ್ರಮುನಿಯವರಿಗೆ ವಜ್ರಮುನಿಯವರೇ ಸಾಟಿ. ಅದಕ್ಕೇ ಅವರಿಗೆ ಅಭಿಮಾನಿಗಳು ಈ ಪಾಟಿ.
ಏನಂತೀರೀ?
ನಿಮ್ಮವನೇ ಉಮಾಸುತ
ಈಗಷ್ಟೇ ವಜ್ರಮುನಿ ಅವರನ್ನ ನೆನಸಿಕೊಂಡೇ ಕಾರಣ ಕುರುಕ್ಷೇತ್ರ ಸಿನಿಮನೆ
ಊಟ ಮಾಡ್ತಾ ತೆಲುಗಿನ ಅನ್ನಮ್ಮಯ ಚಿತ್ರ ನೋಡ್ತಿದ್ವಿ ಪಟ್ ಅಂತ ಯಜಮಾನರು ಕುರುಕ್ಷೇತ್ರ ಪುರಾಣ ತೆಗೆದ್ರು ಸಿಟ್ಟು ಬಂತು ಬೈದೆ ಅನ್ಯಾಯ ವಾಗಿ 1000 ಹೋಯಿತಲ್ಲ ಅಂತ ಅವರು ಅಂದ್ರು ಹೂ ಕಣೆ ಪ್ರವಾಹ ಪೀಡಿತ ಜನರಿಗೆ ಇದನ್ನು ಕೊಟ್ಟಿದ್ರೆ ಆಗುತ್ತಿತ್ತು ಅಂತ ಯಾಕೆಂದ್ರೆ ಬರಲ್ಲ ಅಂದ್ರು ಕರ್ಕೊಂಡ್ ಹೋಗಿದ್ರು .ಬಂದ ಮೇಲೆ ಬೈದಿದ್ದೆ ಅಕ್ಷರ ಲೋಪ ,ಕಥೆ ಸಾರಾಂಶ ಕೆಟ್ಟದಾಗಿದೇ, ಬಳಸಿರುವ ಪದ ಗಳು ಹೆಣ್ಣಿನ ಮೇಲೆ ಕೆಟ್ಟ ಭಾವನೆಯ ಅಂಶಗಳನ್ನು ಸೇರಿಸಿ ದ್ದಾರೆ ಅಂತ.
ಆಗ ನೆನಪಾಗಿದ್ದೆ ಶ್ರೀ ಕೊಲ್ಲೂರು ಮೂಕಾಂಬಿಕೆ ವಜ್ರಮುನಿ ಭವ್ಯ ಅಭಿನಯಾದ ಚಿತ್ರ.ಚಿಕ್ಕ ಹುಡುಗಿ ಅಪ್ಪ ಅಮ್ಮ ಹಾಸನ ದಲ್ಲಿ ಈ ಸಿನಿಮಾ ತೋರಿಸಿದ ನೆನಪು .ಸದಾ ಕಾಡುವ ವಜ್ರಮುನಿ ಅಭಿನಯ ಅಂದ್ರೆ ಮಾತು ಬರದೆ ಮೂಕ ಸುರ ನಾಗಿ ಕಿರುಚುವುದು .ಅಬ್ಬಾ ಅದೆಂತಹ ಛಾಪು ,ಇವತ್ತಿಗೂ tv ಯಲ್ಲಿ ಬಂದ್ರೆ ಮತ್ತೆ ಮತ್ತೆ ನೋಡುತ್ತೇನೆ .ನಿಮ್ಮ ಲೇಖನ ಅಭಿನಂದನೆ ಗೆ ಅರ್ಹ ವಾದದ್ಧು .ತುಂಬಾ ಚೆನ್ನಾಗಿ ಬರೆದಿದ್ದೀರಿ ಅನಂತ ಧನ್ಯವಾದಗಳು ನಿಮಗೆ ನನ್ನ ಪ್ರಿಯ ನಟನ ಬಗ್ಗೆ ಬರೆದದ್ದು ಸಂತಸವಾಯಿತು.
LikeLiked by 1 person
ಧನ್ಯೋಸ್ಮಿ 🙏🙏
ಸೊಗಸಾಗಿ ಬರೆದಿದ್ದೀರಿ.
LikeLike