ಪುರೋಹಿತರ ಪರದಾಟ

ಬಹಳ ದಿನಗಳ ತರುವಾಯು ಮಕ್ಕಳು ಮನೆಯಲ್ಲಿ ಅಮ್ಮಾ ಮಾಡುವ ರುಚಿ ರುಚಿಯ ಅಡುಗೆಯ ಹೊರತಾಗಿಯೂ ಹೊರಗಡೆ ಊಟ ಮಾಡುವ ಆಸೆ ವ್ಯಕ್ತ ಪಡಿಸಿದ ಕಾರಣ ಕಳೆದ ವಾರಾಂತ್ಯದಲ್ಲಿ ಮಡದಿ, ಮಗಳು ಮತ್ತು ಮಗನೊಂದಿಗೆ ರಾತ್ರಿ ಊಟಕ್ಕೆಂದು ಸ್ವಲ್ಪ ದೂರದ ಹೊಸಾ ಹೋಟೆಲ್ ಒಂದಕ್ಕೆ ಹೋದೆವು. ಭಾನುವಾರವಾದ್ದರಿಂದ ಹೋಟೇಲ್ ಬಹುತೇಕ ಭರ್ತಿಯಾಗಿತ್ತು ಸ್ವಲ್ಪ ಮಬ್ಬಾಗಿಯೂ ಇತ್ತು. ಹಾಗಾಗಿ ಖಾಲಿ ಇರುವ ಜಾಗವನ್ನು ಹುಡುಕುತ್ತಿದ್ದಾಗ, ಒಬ್ಬರನ್ನು ನೋಡಿದ ತಕ್ಷಣ, ಎಲ್ಲೋ ನೋಡಿದ ನೆನಪು ಆದರೆ ಸರಿಯಾಗಿ ಸ್ಮೃತಿಗೆ ಬರುತ್ತಿರಲಿಲ್ಲ. ಅವರೂ ಕೂಡಾ ನಮ್ಮನ್ನು ನೋಡಿದ ಕೂಡಲೇ ಪರಿಚಯದ ದೇಶಾವರಿ ನಗೆ ಬೀರಿ ನಂತರ ಏನೋ ಅಪರಾಧೀ ಭಾವನೆಯಂತೆ ತಲೆ ತಗ್ಗಿಸಿ ತಮ್ಮ ಕುಟುಂಬದೊಡನೆ ಊಟ ಮಾಡತೊಡಗಿದರು. ಸರಿ ನಮಗೇಕೆ ಇನ್ನೊಬ್ಬರ ಉಸಾಬರಿ ಎಂದು ಸುಮ್ಮನೆ ಖಾಲಿ ಇದ್ದ ಜಾಗದಲ್ಲಿ ಕುಳಿತು ಕೊಂಡು ಊಟಕ್ಕೆ ಕುಳಿತರೂ, ಕೆಟ್ಟ ಕುತೂಹಲದಿಂದ ನನ್ನ ಮಗನಿಗೆ ಅವರನ್ನು ತೋರಿಸಿ, ಅವರನ್ನು ಎಲ್ಲೋ ನೋಡಿದ್ದೀವಿ ಆದರೆ ಅವರ ನೆನಪಾಗುತ್ತಿಲ್ಲ, ನೀನೇನಾದರೂ ನೋಡಿದ್ದಿಯಾ ಅಂತ ಕೇಳಿದೆ. ಹಾಗೆ ಕೇಳಿದ ತಕ್ಷಣ ಅವರನ್ನೇ ದಿಟ್ಟಿಸಿ ನೋಡಿದ ನನ್ನ ಮಡದಿ ಮತ್ತು ಮಗಾ, ಓ ಅವ್ರಾ, ಮೊನ್ನೆ ನಿಮ್ಮಮ್ಮನ ತಿಥಿಯಂದು ಮುತ್ತೈದೆ – ಬ್ರಾಹ್ಮಣಾರ್ತಕ್ಕೆ ಗಂಡ ಹೆಂಡತಿ ಬಂದಿದ್ರಲ್ಲಾ ಅವರೇ ಇವರು ಎಂದು ನೆನಪಿಸಿದಳು. ಓಹೋ ಸರಿ ಸರಿ. ನಮ್ಮಂತೆಯೇ ಅವರೂ ಕುಟುಂಬ ಸಮೇತ ಊಟಕ್ಕೆ ಬಂದಿದ್ದಾರೆ ಎಂದು ಹೇಳುತ್ತಾ ಊಟ ಮುಗಿಸಿ ಅಲ್ಲಿಯೇ ಮಗಳ ಅಭೀಪ್ಸೆಯಂತೆ ಪಕ್ಕದಲ್ಲಿಯೇ ಇದ್ದ ನ್ಯಾಚುರಲ್ಸ್ ಐಸ್ ಕ್ರೀಂ ತಿನ್ನಲು ಬಂದರೆ ಅಲ್ಲಿಯೂ ಅವರೇ ಸಿಗಬೇಕೆ?

ನನ್ನನ್ನು ನೋಡಿದ ಕೂಡಲೇ ಸಾರ್ ಚೆನ್ನಾಗಿದ್ದೀರಾ? ಏನು ಅಷ್ಟು ದೂರದಿಂದ ಇಲ್ಲಿಯವರೆಗೆ ಬಂದಿದ್ದೀರಿ? ಎಂದು ನಾವು ಕೇಳುವುದಕ್ಕೆ ಮುಂಚೆಯೇ ನಮ್ಮನ್ನೇ ಅವರೇ ಕೇಳೀ ಬಿಟ್ಟರು. ಅದಕ್ಕೇ ನಾನು, ಏನು ಇಲ್ಲ ಸುಮ್ಮನೆ ಮಕ್ಕಳು ಹೊರಗಡೆ ಊಟ ಮಾಡಲು ಇಷ್ಟ ಪಟ್ಟರು. ಹೇಗೋ ಮನೆಯ ಬಳಿ ಇರುವ ಎಲ್ಲಾ ಹೋಟೆಲ್ಗಳಿಗೂ ಈಗಾಗಲೇ ಹೋಗಿದ್ದರಿಂದ ಬದಲಾವಣೆ ಇರಲಿ ಎಂದು ಇಷ್ಟು ದೂರ ಬಂದಿದ್ವೀ ಅಂದೆ. ನಾವು ಅಷ್ಟೇ ಸಾರ್. ಇವತ್ತು ನಮ್ಮ ಮಗಳ ಹುಟ್ಟು ಹಬ್ಬ. ಅದಕ್ಕೇ ಇಷ್ಟು ದೂರ ಬಂದ್ವೀ ಅಂದ್ರು. ಓಹೋ ಹೌದಾ!! ತುಂಬ ಸಂತೋಷ ಎಂದು ಹೇಳಿ ಐಸ್ ಕ್ರೀಂ ತಿನ್ನುತ್ತಿದ್ದ ಅವರ ಮಗಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ಬೇಡ ಬೇಡ ಎಂದರೂ 200 ರೂಗಳನ್ನು ಕೈಗಿತ್ತು ಏನಾದರೂ ತೆಗೆದುಕೊ ಎಂದು ಹೇಳಿದೆ. ಹೇ!! ಇದೆಲ್ಲಾ ಯಾಕೆ ಸಾರ್. ನಿಮ್ಮಂತಹವರ ಆಶೀರ್ವಾದವೇ ಸಾಕು ಅಂತ ಹೇಳುತ್ತಲೇ ಮಗಳ ಕೈಯಿಂದ 200 ರೂಗಳನ್ನು ತೆಗೆದುಕೊಂಡು ಸದ್ದಿಲ್ಲದೆ ತಮ್ಮ ಶರ್ಟಿನ ಜೋಬಿಗೆ ಇಳಿಸಿಕೊಂಡರು ಆ ಪುರೋಹಿತರು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲಾ ಎಂದು ಆ ಪುಟ್ಟ ಹುಡುಗಿ ಮತ್ತು ಅವಳ ತಾಯಿ ಒಂದು ಕ್ಷಣ ಕಕ್ಕಾಬಿಕ್ಕಿಯಾದರೂ ಅದನ್ನು ಹೆಚ್ಚಾಗಿ ತೋರಿಸಿಕೊಳ್ಳದೇ ಸಾವರಿಸಿಕೊಂಡು ಸುಮ್ಮನಾದರು. ಅಷ್ಟರೊಳಗೆ ನಮ್ಮ ಮಕ್ಕಳು ಅವರಿಗೆ ಬೇಕಾದ ಐಸ್ ಕ್ರೀಂ ಆರ್ಡರ್ ಮಾಡಿದ್ದರಿಂದ ನೀವು ಆರಾಮಾಗಿ ಐಸ್ ಕ್ರೀಂ ತಿನ್ನಿ ಅಂತ ಹೇಳಿ ಅವರಿಂದ ಜಾರಿಕೊಳ್ಳುವ ಭರದಲ್ಲಿ ಇರುವಾಗ, ಸಾರ್ ನಾವುಗಳು ಹೊರಗಡೆ ಹೋಟೆಲ್ನಲ್ಲಿ ಊಟ ಮಾಡಿದ್ದರಿಂದ ನಿಮಗೇನು ಅಭ್ಯಂತರ ಇಲ್ಲ ತಾನೇ. ದಯವಿಟ್ಟು ಈ ವಿಷಯ ನಿಮ್ಮ ಮನೆಗೆ ಬರುವ ಶಾಸ್ತ್ರಿಗಳಿಗೆ ಹೇಳಬೇಡಿ ಸಾರ್. ಆಮೇಲೆ ನಮ್ಮನ್ನು ಅವರು ಬ್ರಾಹ್ಮಣಾರ್ಥಕ್ಕೆ ಕರೆಯುವುದೇ ಇಲ್ಲ ಎಂದು ಕೇಳಿಕೊಂಡರು. ಅದಕ್ಕೆ ನಾನು ಅರೇ.. ಹೊರಗಡೆ ಊಟ ಮಾಡುವುದು ಬಿಡುವುದು ನಿಮ್ಮ ವಯಕ್ತಿಕ ವಿಚಾರ. ಭಯಪಡಬೇಡಿ ನಾನು ಅವರಿಗೆ ಹೇಳುವುದಿಲ್ಲ ಎಂದು ತಿಳಿಸಿ ಮಕ್ಕಳೊಡನೆ ಐಸ್ ಕ್ರೀಂ ತಿಂದು ಮನೆಗೆ ಬರುತ್ತಿದ್ದಾಗ ಇದೇ ರೀತಿಯ ಮತ್ತೊಂದು ಹಾಸ್ಯಮಯ ಪ್ರಸಂಗ ನನಗೆ ಜ್ಞಾಪಕಕ್ಕೆ ಬಂದಿತು.

ನಮ್ಮ ತಂದೆಯವರ ಅಣ್ಣ ಹೆಸರಾಂತ ಜ್ಯೋತಿಷಿಗಳು ಮತ್ತು ಬಹು ದೊಡ್ಡ ಪುರೋಹಿತರೂ ಹೌದು.. ಸುತ್ತ ಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಅವರದ್ದೇ ಪ್ರಾಧಾನ್ಯತೆ. ಪೌರೋಹಿತ್ಯದ ಜೊತೆಗೆ ಜ್ಯೋತಿಷ್ಯ, ಶುಭ ಸಮಾರಂಭಗಳಿಗೆ ಲಗ್ನ ಕಟ್ಟಿಕೊಡುತ್ತಿದ್ದರಿಂದ ಸದಾ ಕಾಲವು ಅವರ ಮನೆಯಲ್ಲಿ ಜನ ಗಿಜಿ ಗಿಜಿ ಗುಟ್ಟುತ್ತಲೇ ಇರುತ್ತಿದ್ದರು. ನಮ್ಮ ಮನೆಯಲ್ಲಿ ಯಾವುದೇ ಹೊಸಾ ವಾಹನಗಳನ್ನು ಖರೀದಿಸಿದಲ್ಲಿ ಅದನ್ನು ಮೊದಲಿಗೆ ನಮ್ಮ ದೊಡ್ಡಪ್ಪನವರಿಗೆ ತೋರಿಸಿ ನಂತರ ಅವರ ಊರಿನಲ್ಲಿರುವ ಹೊನ್ನಾದೇವಿ ಗುಡಿಯಲ್ಲಿ ಪೂಜೆ ಮಾಡಿಸಿ ಕೊಂಡು ಬರುವ ಸಂಪ್ರದಾಯ ರೂಢಿಯಲ್ಲಿದೆ. ಹಾಗಾಗಿ ನಾನು ಹೊಸಾ ಕಾರ್ ತೆಗೆದುಕೊಂಡಾಗ ಸಂಸಾರ ಸಮೇತರಾಗಿ ನಮ್ಮ ದೊಡ್ದಪ್ಪನವರ ಊರಿಗೆ ಹೋಗಿ ದೊಡ್ಡಪ್ಪ ಮತ್ತು ದೊಡ್ಡಮ್ಮನವರಿಗೆ ಕಾರ್ ತೋರಿಸಿ ಅವರ ಆಶೀರ್ವಾದ ಪಡೆದುಕೊಂಡು ಅವರನ್ನೂ ಕರೆದುಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಕೊಂಡು ಬಂದೆವು. ಅದಾಗಲೇ ಸಂಜೆ ಹೊತ್ತಾಗಿದ್ದರಿಂದ ಕತ್ತಲಲ್ಲಿ ಹೋಗುವುದು ಬೇಡ. ಆ ದಿನ ಇಲ್ಲೇ ಇದ್ದು ಮಾರನೆಯ ದಿನ ಸ್ನಾನ ಸಂಧ್ಯಾವಂದನೆ ಮುಗಿಸಿ ತಿಂಡಿ ತಿಂದು ಕೊಂಡು ಹೋಗಲು ಒತ್ತಾಯ ಪಡಿಸಿದರು. ಹೇಗೂ ಹಿರಿಯರು ಅಷ್ಟೊಂದು ಒತ್ತಾಯಿಸುತ್ತಿದ್ದಾರೆ ಅವರ ಮನಸ್ಸನ್ನು ಬೇಸರ ಪಡಿಸುವುದು ಬೇಡ ಎಂದುಕೊಂಡು ಆ ದಿನ ಅಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದೆವು.

ಹೆಂಗಸರೆಲ್ಲಾ ಮನೆಯೊಳಗೆ ರಾತ್ರಿಯ ಅಡುಗೆಗೆ ಸಿದ್ಧ ಮಾಡಿಕೊಳ್ಳುತ್ತಿದ್ದರೆ, ನಮ್ಮ ತಂದೆ, ದೊಡ್ಡಪ್ಪ, ಮತ್ತು ನಾನು ಹೊರಗಡೆ ಜಗುಲಿಯ ಮೇಲೆ ಕುಳಿತು ಲೋಕಾಭಿರಾಮವಾಗಿ ಹರಟುತ್ತಿದ್ದಾಗ, ನಮ್ಮ ದೊಡ್ಡಪ್ಪನವರು ಇದ್ದಕ್ಕಿಂದ್ದಂತೆಯೇ ಜಗ್ಗನೆ ಎದ್ದು ಎಲ್ಲೀ ಮಗು ನೀನು ಹೇಗೆ ಕಾರ್ ಓಡಿಸ್ತಿಯಾ ಅಂತಾ ನೋಡ್ಬೇಕು. ಬಾ ಹಾಗೆ ಹೋಗಿ ಬರೋಣ ಅಂತಾ ಅಂದ್ರು. ಅದಕ್ಕೇ ಅರೇ ದೊಡ್ಡಪ್ಪಾ, ಸ್ವಲ್ಪ ಹೊತ್ತಿಗೆ ಮುಂಚೇನೇ ದೇವಸ್ಥಾನಕ್ಕೆ ಹೋಗಿ ಬಂದ್ವಲ್ಲಾ ಅಂತಾ ಹೇಳಿದ್ದಕ್ಕೇ, ಅದು ತುಂಬಾ ಹತ್ತಿರವಾಯ್ತು. ಸ್ವಲ್ಪ ದೂರ ಹೋಗೋಣ ಬಾ ಎಂದು ಕರೆದರು. ಸರಿ ಎಂದು ನಾನು ಹೊರಟಾಗ ನೀನು ಒಬ್ಬನೇ ಇಲ್ಲಿ ಕುಳಿತು ಏನು ಮಾಡ್ತೀಯಾ? ನೀನೂ ನಮ್ಮ ಜೊತೆ ಬಾ ಎಂದು ನಮ್ಮ ತಂದೆಯವರನ್ನೂ ಕರೆದು ಕೊಂಡು ಮೂವರೂ ಕಾರಿನಲ್ಲಿ ಕುಳಿತು ಕೊಂಡು ಸುಮಾರು ಹದಿನೈದು ಇಪ್ಪತ್ತು ಕಿಮೀ ದೂರದ ಪಟ್ಟಣಕ್ಕೆ ಬಂದೆವು. ಪಟ್ಟಣ ಬಂದ ತಕ್ಷಣ ಸೀದಾ ಒಂದು ಹೋಟೆಲ್ ಒಂದಕ್ಕೆ ಕರೆದು ಕೊಂಡು ಹೋಗಲು ಹೇಳಿದರು. ಸಂಜೆ ಆಗಿದ್ದ ಕಾರಣ ಕಾಫೀ ಕುಡಿಯಬೇಕೇನೋ ಎಂದು ಹೋಟೇಲ್ ಮುಂದೆ ನಿಲ್ಲಿಸಿ ಎಲ್ಲರೂ ಹೋಟೇಲ್ ಒಳಗಡೆ ಹೋದ ಕೂಡಲೇ ನಮ್ಮ ದೊಡ್ಡಪ್ಪನವರು ಮೂರು ಮಸಾಲೆ ದೋಸೆ, ಮೂರು ಜಾಮೂನು ಒಂದು ಪ್ಲೇಟ್ ಬಜ್ಜಿ/ಪಕೋಡ ಆರ್ಡರ್ ಮಾಡಿದರು. ಇದೇನು ದೊಡ್ಡಪ್ಪಾ, ಮನೆಯಲ್ಲಿ ದೊಡ್ಡಮ್ಮ ಏನೋ ಔತಣವನ್ನು ಮಾಡಲು ಹೊರಟಿದ್ದಾರೆ. ನೀವು ನೋಡಿದ್ರೇ ಇಷ್ಟೊಂದು ಆರ್ಡರ್ ಮಾಡ್ತಾ ಇದ್ದೀರಿ. ಇಷ್ಟೆಲ್ಲಾ ತಿಂದ ಮೇಲೇ ರಾತ್ರಿ ಊಟದ ಸಮಯದಲ್ಲಿ ಏನು ತಿನ್ನೋದು ಎಂದು ಕೇಳಿದೆ. ಆಹಾ ಹಾ!! ನೋಡು ನೋಡು ದೊಡ್ಡಮ್ಮನ ಪರ ಹೇಗೆ ವಹಿಸಿಕೊಂಡು ಮಾತಾಡ್ತಾನೆ. ನಿಮ್ಮ ದೊಡ್ದಮ್ಮ ಇಷ್ಟು ರುಚಿರುಚಿಯಾಗಿ ಎಲ್ಲಿ ಮಾಡ್ತಾಳೆ? ಅಂತಾ ಮತ್ತೊಂದು ಪ್ಲೇಟ್ ಮಸಾಲೆ ದೋಸೆ ಜಾಮೂನು ಆರ್ಡರ್ ಮಾಡಿದ್ರು. ಜೊತೆಗೆ ಕಾಫೀ ಕೂಡಾ ತರಲು ಹೇಳಿದರು. ಸರಿಯಾಗಿ ಡಬ್ಬಲ್ ದೋಸೆ ಮತ್ತು ಜಾಮೂನು ಸವಿದಿದ್ದರು ನಮ್ಮ ದೊಡ್ಡಪ್ಪ.

ನಾನೂ ಕುತೂಹಲದಿಂದ ಅದು ಸರಿ ದೊಡ್ದಪ್ಪಾ ಇದನ್ನು ತಿನ್ನೋದಿಕ್ಕೆ ಇಷ್ಟೊಂದು ದೂರ ಬರಬೇಕಾ? ಅಲ್ಲೇ ನಿಮ್ಮ ಊರಿನ ಹತ್ತಿರದ ಹೋಟೆಲ್ನಲ್ಲೇ ತಿನ್ನಬಹುದಿತ್ತಲ್ವಾ ಅಂತಾ ಕೇಳಿದ್ದಕ್ಕೆ, ಕುಳಿತಲ್ಲಿಂದಲೇ ಮೇಲೆದ್ದು, ಛೇ ಛೇ ಛೇ!! ಎಲ್ಲಾದರೂ ಉಂಟಾ ಮಗೂ.. ಊರ ಹತ್ತಿರ ಇರೋ ಹೋಟೇಲ್ನನಲ್ಲಿ ನಾವು ತಿನ್ನೋದಾ…. ಅಂದ್ರು. ಯಾಕೆ ದೊಡ್ದಪ್ಪಾ ಅಲ್ಲಿ ಚೆನ್ನಾಗಿರೊಲ್ವಾ? ಅಂತಾ ಕೇಳಿದ್ದಕ್ಕೆ. ನೋಡು ಮಗೂ ಸುತ್ತ ಮುತ್ತಲಿನ ಹದಿನಾರು ಹಳ್ಳಿಗಳಲ್ಲಿ ಶುಭ ಮತ್ತು ಅಶುಭ, ಮದುವೆ ಮುಂಜಿ, ನಾಮಕರಣ ಯಾವುಕ್ಕೇ ಆಗಲೀ ನನ್ನನ್ನೇ ಪೌರೋಹಿತ್ಯಕ್ಕೆ ಕರೀತಾರೆ. ನಾನೇನಾದ್ರು ಅಲ್ಲಿ ಹೋಟೆಲ್ನಲ್ಲಿ ತಿನ್ನೋದನ್ನು ನೋಡಿ ಬಿಟ್ಟರೆ, ಅರೇ ಇದೇನಿದು ಐನೋರೇ, ನೀವು ಕೂಡಾ ಹೋಟೆಲ್ನಲ್ಲಿ ನಮ್ಮ ತರಹ ತಿಂತಿದ್ದೀರಾ ಅಂತ ಹೇಳಿ ಮುಂದೆ ಯಾವುದಕ್ಕೂ ಕರೆಯುವುದಿಲ್ಲ. ಅದಕ್ಕೇ ನಿನ್ನನ್ನು ಇಷ್ಟು ದೂರ ಕರೆದು ಕೊಂಡು ಬಂದೇ. ಪೆಟ್ರೋಲ್ ದುಡ್ಡು ಎಷ್ಟು ಆಯ್ತು ಅಂತಾ ಹೇಳು ನಾನೇ ಕೊಟ್ಬಿಡ್ತೀನಿ ಅಂದ್ರು. ನಮ್ಮ ದೊಡ್ಡಪ್ಪನ ಪರದಾಟ ನೋಡಿ ನಾನೂ ನಮ್ಮ ತಂದೆಯವರು ಮುಸಿ ಮುಸಿ ನಗುತ್ತಾ ನಾನೇ ಹೊಟೇಲ್ ಬಿಲ್ ಚುಕ್ತ ಮಾಡಿ ಮನೆಗೆ ಬಂದೆವು.

dose1

ರಾತ್ರಿ ಮನೆಯ ಎಲ್ಲಾ ಹೆಂಗಸರೂ ಸೇರಿ ಭೂರೀ ಭೋಜನದ ವ್ಯವಸ್ಥೆ ಮಾಡಿದ್ದರು. ಆದಾಗಲೇ ಗಡದ್ದಾಗಿ ತಿಂದಿದ್ದ ನಮಗೆ ಹೊಟ್ಟೆಯ ಹಸಿವೇ ಇರಲಿಲ್ಲ . ನಮ್ಮ ದೊಡ್ಡಪ್ಪಾ ಮಾತ್ರ, ಕೇಳಿ ಕೇಳಿ ಇನ್ನೂ ನಾಲ್ಕು ಹೀರೇಕಾಯಿ ಬಜ್ಜಿಯನ್ನು ಹೆಚ್ಚಿಗೆ ಹಾಕಿಸಿಕೊಂಡು ಜೊತೆಗೆ ಎರಡ್ಮೂರು ಲೋಟ ಗಸಗಸೆ ಪಾಯಸ ಕುಡಿದು. ಆಹಾ ಏನು ಚೆನ್ನಾಗಿ ಮಾಡಿದ್ದೀಯಾ ಎಂದು ನಮ್ಮ ದೊಡ್ಡಮ್ಮನನ್ನು ಹೊಗಳುತ್ತಿದ್ದಾಗ, ಹತ್ತಾರು ಊರಿಗೆ ಪುರೋಹಿತರಾಗಿದ್ದರೇನು? ಮನೆಯಲ್ಲಿ ಹೆಂಡತಿಗೆ ಗುಲಾಮರೇ ಎಂದು ಮನಸ್ಸಿನಲ್ಲಿಯೇ ನೆನೆದು ಕೊಂಡು ನಾನೂ ಮತ್ತು ನಮ್ಮ ತಂದೆಯವರು ಸುಮ್ಮನಾದೆವು. ನಾನು ಮತ್ತು ನಮ್ಮ ತಂದೆಯವರು ಊಟದ ಸಮಯದಲ್ಲಿ ಕೋಳಿ ಕೆದಕಿದಂತೆ ಕದಕುತ್ತಾ ತುತ್ತಿಗೆ ಮುತ್ತಿಡುತ್ತಾ ಕಾಟಾಚಾರಕ್ಕೆ ತಿಂದಿದ್ದನ್ನು ಗಮನಿಸಿದ ನಮ್ಮಮ್ಮ ಮತ್ತು ನಮ್ಮಾಕಿ ಏನು ಸಾಹೇಬ್ರೇ, ಯಾಕೇ ಊಟ ಸೇರಲಿಲ್ವೇ? ಎಂದು ಕುಹಕದಲ್ಲಿ ಕೇಳಿದಾಗ, ಗತಿ ಇಲ್ಲದೇ ಸಂಜೆ ದೋಸೆ, ಜಾಮೂನು ಬೋಂಡ ತಿಂದದ್ದನ್ನು ನಾವಿಬ್ಬರೂ ಒಪ್ಪಿಕೊಂಡೆವು. ಊರಿಗೆ ಅರಸನಾದರೂ ಹೆಂಡತಿಯ ಮುಂದೆ ಪ್ರತಿಯೊಬ್ಬ ಗಂಡಸರೂ ನಮ್ಮ ದೊಡ್ಡಪ್ಪನ ಹಾಗೇ, ಅಮ್ಮಾವ್ರ ಗಂಡಂದಿರೇ ಅಲ್ವೇ!!

ಇದೆಲ್ಲಾ ಗೊತ್ತಿದ್ದೇ ಏನೋ ನಮ್ಮ ಹಿರಿಯರು ಊಟ ತನ್ನಿಷ್ಟ ನೋಟ ಪರ ಇಷ್ಟ ಅಂತಾ ಗಾದೇನೇ ಮಾಡಿ ಬಿಟ್ಟಿದ್ದಾರೆ. ಶುಚಿ ರುಚಿಯಾಗಿ ಆರೋಗ್ಯಕರವಾಗಿ ಇರುವ ಕಡೆ ತಿ‌ನ್ನೋದು ತಪ್ಪಲ್ಲಾ ಅಲ್ವೇ? ಬೇರೆ ಯಾರನ್ನೋ ಮೆಚ್ಚಿಸಲು ಹೋಗಿ ನಮ್ಮ ಊಟಕ್ಕೇ ಕಲ್ಲು ಹಾಕಿ ಕೊಳ್ಳಬಾರದು. ಮಡಿ ಮೈಲಿಗೆ ಏನಿದ್ರೂ ಮನೆಯಲ್ಲಿ ಮತ್ತು ಮನಸ್ಸಿನಲ್ಲಿ ಇರಬೇಕು. ಮಾಡುವ ಕೆಲಸವನ್ನು ಶ್ರಧ್ಧಾ ಭಕ್ತಿಯಿಂದ ಮಾಡಬೇಕೇ ಹೊರತೂ ಬೇರೆಯವರು ಏನು ಅನ್ಕೋತಾರೋ ಅಂತಾ ಕದ್ದು ಮುಚ್ಚಿ ಕೆಲ್ಸ ಮಾಡಿ ಸಿಕ್ಕಿ ಹಾಕಿಕೊಂಡು ಈ ರೀತಿಯಲ್ಲಿ ಮುಜುಗರ ಪಡೋ ಬದಲು, ಹಂಗಿನ ಅರಮನೆಗಿಂತ ಗಂಜಿಯ ಗುಡಿಸಲೇ ಲೇಸು ಅಂತಾ ಇರೋದೇ ಒಳ್ಳೇದಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

8 thoughts on “ಪುರೋಹಿತರ ಪರದಾಟ

  1. good for light reading. Have you also practiced gamaka like your father and grand father ? (I was your father’s class fellow at Holenarasipur during early fifties.).

    Liked by 1 person

    1. ನಮ್ಮ ತಂದೆಯವರ ಸಹಪಾಠಿಗಳು ಎಂದು ತಿಳಿದು ತುಂಬಾನೇ ಸಂತೋಷವಾಯಿತು. ಹಿತ್ತಲ ಗಿಡ‌ ಮದ್ದಲ್ಲ ಎನ್ನುವಂತೆ ನಮ್ಮ ತಂದೆಯವರು ಇದ್ದಾಗ ಗಮಕ ಕಲಿಯಲು ಪ್ರಯತ್ನಿಸಲಿಲ್ಲ. ಈಗಲೂ ಅದಕ್ಕೆ ಪಶ್ಚಾತ್ತಾಪವಿದೆ. ಆದರೆ ನಮ್ಮ ತಾತ ಮತ್ತು ತಂದೆಯವರ ಆಶೀರ್ವಾದದಿಂದ ಬರಹ ಕೈ ಹಿಡಿದಿದೆ. ದಯವಿಟ್ಟು ನಿಮ್ಮ ಫೋನ್ ನಂ.ಕೊಡಿ. ನಿಮ್ಮೊಂದಿಗೆ ಮಾತನಾಡುವ ಹಂಬಲವಿದೆ

      Like

  2. ಇದು ಹಾಸ್ಯ ಬರಹವಾದರೂ ಆತ್ಮವಂಚನೆ ಮಾಡಿಕೊಂಡು ಬದುಕುತ್ತಿರುವ ಕೆಲವರಿಗೆ ಸತ್ಯದರ್ಶನವೂ ಹೌದು. ಹಿಂದೆ ನಿನ್ನ “ಅಲ್ಲಾಭಕ್ಷ್ ರೀ ಸರ” ಲೇಖನಕ್ಕೆ ಪ್ರತಿಕ್ರಿಯೆ ನೀಡುತ್ತಾ ವಿಶ್ವಾಮಿತ್ರರು ತಮ್ಮ ಸ್ವಧರ್ಮ ಪಾಲಿಸಿದ ಬಗ್ಗೆ ಹೇಳಿದ್ದೆ. ಇಂದು ಭಾರದ್ವಾಜ ಮುನಿಗಳ ಪುತ್ರ ದ್ರೋಣರ ಬಗ್ಗೆ ಹೇಳಲು ಬಯಸುತ್ತೇನೆ. ವೈದಿಕ ಸಂಪ್ರದಾಯದ ಅತಿ ಉಚ್ಛ ಶಿಲೋಂಚ ವೃತ್ತಿಯಿಂದ ಬದುಕುತ್ತಿದ್ದ ದ್ರೋಣ-ಕೃಪಿ ದಂಪತಿಗಳು ತಮ್ಮ ಪುತ್ರ ಅಶ್ವತ್ಥಾಮನಿಗೆ ಒಂದು ಲೋಟ ಹಾಲು ಕೊಡಲಾಗದ ಸ್ಥಿತಿಯಲ್ಲಿದ್ದರು. ತಮ್ಮ ವೃತ್ತಿ ಧರ್ಮದ ನಿಯಮದಂತೆ ಯಾರಿಂದಲೂ ದಾನ ಪಡೆಯದೆ, ಭಿಕ್ಷೆ ( ವೈದಿಕ ವೃತ್ತಿಯೇ) ಬೇಡದೆ ಜೀವನ ಸಾಗಿಸುತ್ತಿದ್ದರು. ಮಾತೃ ಹೃದಯಿ ಕೃಪಿ ಪತಿಯಲ್ಲಿ ಅಳಲನ್ನು ತೋಡುತ್ತಾ ಮಗನಿಗೆ ಹಾಲನ್ನು ಕೊಡುವ ವಾಂಛೆಯಿಂದ ಹಸುವೊಂದು ಬೇಕೆಂದು ಕೇಳುತ್ತಾಳೆ. ದ್ರೋಣರು ಪರಿಪರಿಯಾಗಿ ಸಂತೈಸಿದರೂ ಆಕೆ ತನ್ನ ಹಠವನ್ನು ಬಿಡುವುದಿಲ್ಲ. ಕೃಪಿ ಗೋವನ್ನು ಪಡೆಯುವ ದಾರಿಯನ್ನೂ ತೋರುತ್ತಾಳೆ. ಪಾಂಚಾಲದ ರಾಜ ದೃಪದ ನಿಮ್ಮ ಸಹಪಾಠಿ ಬಾಲ್ಯ ಸ್ನೇಹಿತನೆಂದು ಮತ್ತು ಅವರೀರ್ವರ ಗೆಳತನದ ಬಾಂಧವ್ಯದಲ್ಲಿ ದೃಪದ ತನ್ನ ಅರ್ಧ ರಾಜ್ಯವನ್ನು ದ್ರೋಣರಿಗೆ ಕೊಟ್ಟು ಇಬ್ಬರೂ ಒಟ್ಟಿಗೇ ಬಾಳುವ ಆಸೆಯನ್ನು ವ್ಯಕ್ತಪಡಿಸಿದ್ದನ್ನು ನೆನಪಿಸುತ್ತಾಳೆ. ಅರ್ಧ ರಾಜ್ಯವಲ್ಲದಿದ್ದರೂ ಒಂದು ಹಸುವನ್ನು ಸ್ನೇಹದ ಸಂಕೇತವಾಗಿ ನಿಮಗೆ ಕೊಡಲು ಆತ ಖಂಡಿತಾ ಒಪ್ಪುತ್ತಾನೆ ಎಂದು ಪುಸಲಾಯಿಸುತ್ತಾಳೆ. ಪುತ್ರ ವ್ಯಾಮೋಹ ಮತ್ತು ಪತ್ನಿಯ ಆಗ್ರಹದಿಂದ ದ್ರೋಣರು ತಮ್ಮ ಸ್ವಧರ್ಮ ಬಿಟ್ಟು ದೃಪದನ ಆಸ್ಥಾನಕ್ಕೆ ಹೋಗುತ್ತಾರೆ. ಅಧಿಕಾರ ಮದದಿಂದ ಬದಲಾಗಿದ್ದ ದೃಪದ ದ್ರೋಣರನ್ನು ಅಪಮಾನಿಸಿ ಹೊರಗಟ್ಟುತ್ತಾನೆ. ಸ್ವಧರ್ಮ ವಿಚಲಿತರಾದ ದ್ರೋಣರು ಪ್ರತೀಕಾರ ಭಾವದಿಂದ ಕುರುವಂಶದ ರಾಜಕುಮಾರರಿಗೆ ಗುರುಗಳಾಗಿ ಶಸ್ತ್ರವಿದ್ಯೆ ಕಲಿಸಿ ಗುರುದಕ್ಷಿಣೆಯಾಗಿ ದೃಪದನನ್ನು ಬಂಧಿಸಿ ತರಲು ಹೇಳುತ್ತಾರೆ. ಧೃತರಾಷ್ಟ್ರನ ಪುತ್ರರು ಪ್ರಯತ್ನಿಸಿ ವಿಫಲರಾಗಿ ಅವರೇ ಬಂಧಿಗಳಾಗುತ್ತಾರೆ. ನಂತರ ಪಾಂಡವರು ತಮ್ಮ ಶೌರ್ಯ ಸಾಹಸದಿಂದ ದೃಪದನನ್ನು ಸೋಲಿಸಿ ಬಂಧಿಯನ್ನಾಗಿಸಿ ಗುರುಗಳಿಗೊಪ್ಪಿಸುತ್ತಾರೆ. ದ್ರೋಣರು ದ್ವೇಷ ತೋರದೆ ತಮ್ಮ ಸ್ನೇಹ ನೆನೆದು ಅರ್ಧ ರಾಜ್ಯವನ್ನು ದೃಪದನಿಗೆ ಹಿಂದಿರುಗಿ‌ಸಿ ಉಳಿದರ್ಧ ರಾಜ್ಯಕ್ಕೆ ತಮ್ಮ ಪುತ್ರ ಅಶ್ವತ್ಥಾಮನನ್ನು ರಾಜನಾಗಿ ಮಾಡುತ್ತಾರೆ. ದುರ್ಯೋಧನ ಗುರುಕುಲ ವಾಸದಲ್ಲಿದ್ದಾಗ ಅಶ್ವತ್ಥಾಮನಿಗೆ ಹತ್ತಿರವಾಗಿ ತನ್ನ ಅರಮನೆಗೆ ಆಹ್ವಾನಿಸಿ ಒಂದು ಲೋಟ ಉತ್ತಮವಾದ ಹಾಲನ್ನು ನೀಡುತ್ತಾನೆ. ಆತ ಅಧರ್ಮಿಯೆಂದು ತಿಳಿದಿದ್ದರೂ ಹಾಲಿಗೆ ದೋಷವಿರದು ಎಂದು ಸ್ವೀಕರಿಸುತ್ತಾರೆ. ಹೀಗೆ ದುರ್ಯೋಧನನ ಸ್ನೇಹಕ್ಕೆ ಕಟ್ಟು ಬಿದ್ದು ಅಶ್ವತ್ಥಾಮರು ಸಂಪೂರ್ಣವಾಗಿ ದುರ್ಯೋಧನನ ಸಮರ್ಥಕರಾಗುತ್ತಾರೆ. ಪುತ್ರ ವ್ಯಾಮೋಹ ಹಾಗು ರಾಜಾಶ್ರಯದ ಹಂಗಿನಿಂದ ದುರ್ಯೋಧನನ ಧ್ವಜದಡಿ ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸುತ್ತಾರೆ. ಹೆಜ್ಜೆ ಹೆಜ್ಜೆಗೂ ದುರ್ಯೋಧನ ಅವರನ್ನು ಪಾಂಡವರ ಪಕ್ಷಪಾತಿಯೆಂದು ಅವರ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಅನುಮಾನಿಸುತ್ತಾನೆ. ಪರಮಾತ್ಮನ ಸಂಕಲ್ಪದಂತೆ ಶಸ್ತ್ರ ತ್ಯಾಗ ಮಾಡಿ ಮರಣವನ್ನಪ್ಪುತ್ತಾರೆ. ಕೇವಲ ಒಂದು ಲೋಟ ಹಾಲಿಗೆ ಪತ್ನಿ ಹಾಗೂ ಪುತ್ರರ ಅನುರೋಧದಿಂದ ತಮ್ಮ ನೇಮ ಸಡಿಲಿಸಿ ರಾಗದ್ವೇಷಕ್ಕೊಳಗಾದ ಸಚ್ಛಾಸ್ತ್ರ ಪಾರಂಗತ ಭಾರದ್ವಾಜ ಪುತ್ರ ದ್ರೋಣರ ಸ್ಥಿತಿಯೇ ಹೀಗಾದಾಗ ಇನ್ನು ಈ ಕಲಿಯುಗದಲ್ಲಿ “ಜ್ಯಾತಾ”ಬ್ರಾಹ್ಮಣರು ತಮ್ಮ ಅಪಸವ್ಯ ಕಾಮನೆಗಳ ಪೂರೈಸಲು ಪಡುವ ಪರಿಪಾಟಲು ನೋಡೆ ದಾಸರು “ನಗೆಯು ಬರುತಿದೆ ಎನಗೆ ನಗೆಯು ಬರುತಿದೆ …ಜಗದೊಳಗಿರುವ ಮನುಜರೆಲ್ಲ ಹಗರಣವ ಮಾಡುವುದ ಕಂಡು” ಎಂದು ಹಾಡಿದ್ದಾರೆ.

    Liked by 1 person

    1. 👌👌👌ಮೂಗಿಗಿಂತ ಮೂಗಿನ ನತ್ತಿನ ಭಾರವೇ ಹೆಚ್ಚಾದಂತೆ ನನ್ನ ಲೇಖನಕ್ಕಿಂತ ನಿನ್ನೀ ಬರಹವೇ ಅದ್ಭುತವಾಗಿದೆ. ಮತ್ತೊಮ್ಮೆ, ಮಗದೊಮ್ಮೆ ಕೇಳಿಕೊಳ್ಳುತ್ತೇನೆ. ದಯವಿಟ್ಟು ನೀನು‌ ಸಹಾ ನಿನಗೆ ತಿಳಿದಿರುವುದನ್ನು ನಾಲ್ಕು ಜನರಿಗೆ ಹಂಚಿಕೊಳ್ಳಲು ಪ್ರಯತ್ನಿಸು

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s