ಎಲ್ಲಾ ಹಬ್ಬಗಳ ಆಚರಣೆಯ ಸಂದರ್ಭದಲ್ಲಿಯೂ ಇಂದು ವಿಶ್ವಾದ್ಯಂತ, ದೇಶಾದ್ಯಂತ, ನಾಡಿನಾದ್ಯಂತ ….. ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ದೃಶ್ಯ ಮತ್ತು ಮುದ್ರಣ ಮಾದ್ಯಮದಲ್ಲಿ ಕೇಳುವುದು ಮತ್ತು ಓದುವುದು ನಮಗೆಲ್ಲಾ ತಿಳಿದ ವಿಷಯವೇ ಸರಿ. ಹಾಗಾದರೆ ಆ ಸಡಗರ ಮತ್ತು ಸಂಭ್ರಮ ಎಂದರೆ ಏನು? ಅದು ಹೇಗೆ ಇರುತ್ತದೆ ಎಂಬುದನ್ನು ಆಲೋಚಿಸುತ್ತಿರುವಾಗಲೇ ಮೂಡಿದ ಲೇಖವವೇ ಇದು.
ಹಬ್ಬಗಳ ವಿಷಯಕ್ಕೆ ಬಂದಾಗ, ಸಡಗರ ಮತ್ತು ಸಂಭ್ರಮ ಎರಡೂ ಜೋಡಿ ಪದಗಳು. ಸಡಗರ ಹಬ್ಬದ ಹಿಂದಿನ ಪ್ರಕ್ರಿಯೆಗಳಾದರೆ, ಸಂಭ್ರಮ ಹಬ್ಬ ಮತ್ತು ಹಬ್ಬಾ ನಂತರದ ಸಮಯವಾಗಿರುತ್ತದೆ ಮತ್ತು ಈ ಪ್ರಕ್ರಿಯೆಗಳು ವ್ಯಕ್ತಿಯಿಂದ ವ್ಯಕ್ತಿಗಳಿಗೆ ಬೇರೆ ಬೇರೆರೀತಿಯಾಗಿರುತ್ತದೆ ಉದಾಹರಣೆಗೆ ಗೌರೀ ಗಣೇಶನ ಹಬ್ಬವನ್ನೇ ತೆಗೆದುಕೊಳ್ಳೋಣ. ಹಬ್ಬಕ್ಕೆ ಎರಡು ಮೂರು ತಿಂಗಳ ಹಿಂದೆಯೇ ಮಣ್ಣಿನ ಮೂರ್ತಿಗಳನ್ನು ಮಾಡುವವರಿಗೆ ಸಡಗರ. ಆತ, ಕೆರೆ ಇಲ್ಲವೇ ನದೀ ಪಾತ್ರಗಳಿಂದ ಮಣ್ಣನ್ನು ತಂದು ಅದನ್ನು ಹದಮಾಡಿ ತನ್ನ ಕಲ್ಪನೆಗೆ ತಕ್ಕಂತೆ ಮೂರ್ತಿಗಳನ್ನು ಮಾಡಿ ಅವುಗಳನ್ನು ಒಪ್ಪವಾಗಿ ಜೋಡಿಸಿ ಅವುಗಳು ಒಣಗಿದ ಮೇಲೆ, ಅವುಗಳಿಗೆ ಆಕರ್ಷಣೀಯವಾಗಿ ಬಣ್ಣ ಬಳಿದು, ಎಲ್ಲದಕ್ಕಿಂತ ಹೆಚ್ಚಾಗಿ ಕಣ್ಣುಗಳನ್ನು ಮೂಡಿಸುವುದೇ ಕಲಾವಿದನ ಪ್ರತಿಭೆಗೆ ಹಿಡಿದ ಕನ್ನದಿ ಮೂರ್ತಿ ಎಷ್ಟೇ ಚೆನ್ನಾಗಿದ್ದರೂ ಕಣ್ಣುಗಳನ್ನು ವಿಕಾರವಾಗಿ ಮೂಡಿಸಿದಲ್ಲಿ ಮೂರ್ತಿಯ ಮೂರ್ತರೂಪವೇ ಬದಲಾಗುತ್ತದೆ. ಹಾಗಾಗಿ ಆ ಕಲಾವಿದನಿಗೆ ಮೂರ್ತಿಗಳಿಗೆ ಸರಿಯಾದ ಮೂರ್ತರೂಪವನ್ನು ಕೊಡುವುದೇ ದೊಡ್ಡ ಸಡಗರ. ಇನ್ನು ತಯಾರಾದ ಮೂರ್ತಿಗಳನ್ನು ಭಕ್ತಾದಿಗಳು ಬಂದು ಅವನು ಮಾಡಿದ ಎಲ್ಲಾ ಮೂರ್ತಿಗಳನ್ನು ಕೊಂಡೊಯ್ದು ಅವನ ಪರಿಶ್ರಮಕ್ಕೆ ತಕ್ಕಷ್ಟು ಅಥವಾ ಅದಕ್ಕಿಂತ ಅಧಿಕ ಹಣ ಸಿಕ್ಕಿದಲ್ಲಿ ಅದುವೇ ಅವನಿಗೆ ಸಂಭ್ರಮ.
ಹೀಗೆ ಹಬ್ಬಗಳು ಬಂದಿತೆಂದರೆ ಹಬ್ಬ ಆಚರಿಸುವವರಿಗೆ ಸಡಗರವಾದರೇ, ಆಹಾರ ಪದಾರ್ಥಗಳನ್ನು , ತರಕಾರಿ, ಹಣ್ಣುಗಳನ್ನು , ಹೂವುಗಳ್ಳನ್ನು ಬೆಳೆಯುವ ರೈತರಿಗೆ , ಅದನ್ನು ಕೊಂಡು ತಂದು ವ್ಯಾಪಾರ ಮಾಡುವ ವ್ಯಾಪಾರಿಗಳಿಗೆ, ಸಾರ್ವಜನಿಕವಾಗಿ ಹಬ್ಬಗಳು ಮಾಡಲು ಚೆಂದಾ ಎತ್ತುವ ಹುಡುಗರಿಗೆ, ಮೈದಾನಗಳಲ್ಲಿ ಪೆಂಡಾಲ್ ಮತ್ತು ದೀಪಾಲಂಕಾರ ಮಾಡುವ ಶಾಮೀಯಾನದವರಿಗೆ, ವಿವಿಧ ಸಾಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸಿಕೊಡುವ ಸಂಗೀತಗಾರರಿಗೆ, ನೃತ್ಯಕಲೆಯವರಿಗೆ, ವಾದ್ಯಗೋಷ್ಠಿಯವರಿಗೆ, ಮೆರವಣಿಗೆಯಲ್ಲಿ ಭಾಗವಹಿಸುವ ಬಾಜಾಭಜಂತ್ರಿಯವರಿಗೆ, ಡೊಳ್ಳು ಕುಣಿತದವರಿಗೆ, ವೀಸಗಾಸೆಯವರಿಗೆ, ಕೀಲುಕುದುರೆ, ದೈತ್ಯದ ಬೊಂಬೆ ಕುಣಿಯುವವರಿಗೆ, ನೇಕಾರರಿಗೆ, ಬಟ್ಟೇ ವ್ಯಾಪಾರಿಗಳಿಗೆ, ಸೌಂದರ್ಯವರ್ಧಕ ತಯಾರಕರಿಗೆ, ಬಳೆ ಮಾರುವವರಿಗೆ ಹೀಗೆ ಎಲ್ಲರಿಗೂ ಸಂಭ್ರಮವೋ ಸಂಭ್ರಮ. ಹೀಗೆ ಒಬ್ಬರಿಗೊಬ್ಬರ ಸುಖಃ ಸಂತೋಷವನ್ನು ಹಂಚಿಕೊಳ್ಳಲೆಂದೇ, ನಮ್ಮ ಪೂರ್ವಜರು ಹಬ್ಬ ಹರಿದಿನಗಳ ಆಚರಣೆಗೆ ತಂದರು ಎನಿಸುತ್ತದೆ. ಹಬ್ಬ ಮಾಡುವವರು ಕಷ್ಟ ಪಟ್ಟು ಬೆವರು ಸುರಿಸಿದ ಹಣವನ್ನು ಹಬ್ಬದ ನೆಪದಲ್ಲಿ ಖರ್ಚುಮಾಡಿದಲ್ಲಿ. ಆ ಖರ್ಚು ಮತ್ತೊಬ್ಬರ ಆದಾಯವಾಗಿ, ಅದು ಒಬ್ಬರಿಂದ ಮತ್ತೊಬ್ಬರ ಕೈ ಬದಲಾಗುತ್ತಾ ಅಂತಿಮವಾಗಿ ದೇವರ ಹೆಸರಿನಲ್ಲಿ, ಸಂಪ್ರದಾಯದ ರೂಪದಲ್ಲಿ ಈ ರೀತಿಯ ಆಚರಣೆಗಳಿಂದ ಎಲ್ಲರೂ ಸುಖಃ ಮತ್ತು ಸಂತೋಷದಿಂದ, ಸಡಗರ – ಸಂಭ್ರಮದಿಂದ ಹರ್ಷೋಲ್ಲಾಸದಿಂದ ಇರಲು ಈ ರೀತಿಯ ಹಬ್ಬಗಳು ಆಚರಣೆಯಲ್ಲಿವೆ.
ಇತ್ತೀಚೆಗೆ ದೇಶಾದ್ಯಂತ ಆರ್ಥಿಕ ಕುಸಿತದ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಿದ್ದರೆ. ಕೆಲವರಂತೂ ಹೀಗೆಯೇ ಮುಂದುವರಿದರೆ ಇನ್ನು ಕೆಲವೇ ದಿನಗಳಲ್ಲಿ ದೇಶ ದೀವಾಳಿಯಾಗುವ ಹಂತಕ್ಕೆ ತಲುಪುತ್ತದೆ ಎಂದು ಎಚ್ಚರಿಸುವ ನೆಪದಲ್ಲಿ ಜನರಿಗೆ ಭಯವನ್ನು ಉಂಟು ಮಾಡುತಿದ್ದಾರೆ. ಅವರು ಅಧಿಕಾರಿಯಾಗಿದ್ದಾಗ ಮತ್ತು ಅವರು ಆಳ್ವಿಕೆ ನಡೆಸುತ್ತಿದ್ದಾಗ, ದೇಶ ಇದಕ್ಕಿಂತಲೂ ಅಧಃ ಪತನ ಕಂಡು ದೇಶದ ಚಿನ್ನವನ್ನು ಕದ್ದು ಮುಚ್ಚಿ ಸದ್ದಿಲ್ಲದೆ ಪರದೇಶದಲ್ಲಿ ಅಡವಿಟ್ಟು ನಂತರ ಬೇರೆಯವರು ಆಳ್ವಿಕೆಗೆ ಬಂದಾಗ ಅದನ್ನು ಬಿಡಿಸಿಕೊಂಡು ಬಂದಿದ್ದದ್ದು ಜಾಣ ಮರೆವಿನಂತಾಗಿದೆ. ಪ್ರತಿಯೊಬ್ಬರೂ ತಮಗೆ ಸಮಸ್ಯೆಗಳು ಬಂದಾಗ, ಏನೂ ಅರಿವಿಲ್ಲದ ಮುಗ್ಧರಂತೆ ನಟಿಸುತ್ತಾರೆ. ಆದರೆ, ಅದೇ ಸಮಸ್ಯೆಗಳಿಗಳಿಗೆ ಇತರರು ಬಲಿಯಾದಾಗ, ತಾವೇ ಅಧ್ಬುತ ಪರಮ ಜ್ಞಾನಿಯಂತೆ ವರ್ತಿಸುತ್ತಾ, ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ಅವರನ್ನು ಭಯಭೀತರನ್ನಾಗಿ ಮಾಡುವುದು ನಿಜಕ್ಕೂ ಅಸಹ್ಯಕರ.
ಇಂದು ದೇಶದ ಆರ್ಥಿಕ ಅಭದ್ರತೆ ಎಂದು ಗಾಭರಿ ಹುಟ್ಟಿಸುತ್ತಿರುವವರೇ, ಅಧಿಕಾರ ಹೋದ ತಕ್ಷಣವೇ ವಿದೇಶಕ್ಕೆ ಬ್ಯುಸಿನೆಸ್ ಕ್ಲಾಸ್ ವಿಮಾನದಲ್ಲೇ ಪ್ರಯಾಣ ಮಾಡುತ್ತಾ , ಐಶಾರಾಮಿ ಕಾರುಗಳಲ್ಲಿ ಓಡಾಡುತ್ತಾ, ಪಂಚತಾರಾ ವಾಸ್ತವ್ಯ ಹೂಡಿ, ಕ್ಯಾಸಿನೋದಲ್ಲಿ ಜೂಜಾಡಾತ್ತಾ ಮೋಜು ಮಸ್ತಿ ಮಾಡುತ್ತಾ ಜನರಿಗೆ ಮಾತ್ರ ಆತಂಕ ಹುಟ್ಟಿಸುತ್ತಿರುವುದು ನಿಜಕ್ಕೂ ಖಂಡನೀಯ, ಇಂತಹವರ ಮನೆಯ ಮದುವೆ ಮುಂಜಿ, ನಾಮಕರಣಗಳು ಇನ್ನೂ ಐಶಾರಾಮಿಯಾಗಿಯೇ ನಡೆಸುತ್ತಿದ್ದಾರೆ ಮತ್ತು ಅವರ ವಾರಾಂತ್ಯದ ಪಾರ್ಟಿಗಳಲ್ಲಿ ಮತ್ತು ಮೋಜು ಮಸ್ತಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲವೆಂದಲ್ಲಿ ಅರ್ಥಿಕ ಅಭ್ರದ್ರತೆ ಎಲ್ಲಿಂದ ಬಂತು?.
1990ರ ಆಸುಪಾಸಿನಲ್ಲಿ ಜಾಗತೀಕರಣಕ್ಕೆ ನಮ್ಮನ್ನು ನಾವು ತೆರೆದುಕೊಂಡಂತೆಲ್ಲಾ, ವಿದೇಶೀ ಬಂಡವಾಳಗಳು ನಮ್ಮಲ್ಲಿ ಅಧಿಕೃತವಾಗಿಯೇ ಹರಿದು ಬರತೊಡಗಿದವು. ಅದರ ಜೊತೆ ಜೊತೆಯಲ್ಲಿಯೇ ಮಾಹಿತಿ ತಂತ್ರಜ್ಞಾನದ ಕ್ರಾಂತಿ ನಮ್ಮ ದೇಶಕ್ಕೆ ವರದಾನವಾಗಿ, ಇಲ್ಲಿನ ಬಹುತೇಕ ಯುವಕ ಯುವತಿಯರಿಗೆ ದಂಡಿಯಾಗಿ ಕೆಲಸ ಸಿಕ್ಕಿ, ತಮ್ಮ ಜೀವಮಾನದಲ್ಲಿ ಊಹಿಸಿಯೋ ನೋಡಲಾರದಷ್ಟು ಹಣ ಗಳಿಸತೊಡಗಿದರೋ ಅಂದಿನಿಂದ ಕೊಳ್ಳುಬಾಕ ಸಂಸ್ಕೃತಿ ನಮ್ಮಲ್ಲಿ ಹೆಚ್ಚಾಗ ತೊಡಗಿತು. ಕೈಯಲ್ಲಿ ಹೇಗೋ ಹೇರಳವಾಗಿ ದುಡ್ಡಿದೆ ಅವಶ್ಕತೆ ಇದೆಯೋ ಇಲ್ಲವೋ ನೀರಿನಂತೆ ದುಡ್ಡನ್ನು ಪೋಲು ಮಾಡುವ ಮಂದಿ ಒಂದಷ್ಟಾದರೆ, ಹಾಗೆ ಗಳಿಸಿದ ಹಣವನ್ನು ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿ ಆಸ್ತಿ ಪಾಸ್ತಿಗಳನ್ನು ಮಾಡಿಕೊಂಡವರು ಮತ್ತೊಂದಿಷ್ಟು ಮಂದಿ. ಅಲ್ಲಿಯವರೆಗೂ 30-40 ಸಾವಿರದ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದರಲ್ಲಿಯೇ ಸುಖಃ ಕಾಣುತ್ತಿದ್ದವರು, ಸಣ್ಣ ಪುಟ್ಟ ಹೋಟೆಲ್, ಮನೆಯ ಬಳಿಯ ಸಿನಿಮಾ ಮಂದಿರಗಳಿಗೆ ಹೋಗುತ್ತಿದ್ದವರು, ಇದ್ದಕ್ಕಿದ್ದಂತೆಯೇ ಲಕ್ಷಾಂತರ ಬೆಲೆ ಬಾಳುವ ದ್ವಿಚಕ್ರ ವಾಹನಗಳು, ಕೋಟ್ಯಾಂತರ ಬೆಲೆ ಬಾಳುವ ಐಶಾರಾಮಿ ಕಾರ್ ಗಳು, ನಗರದ ಹೊರವಲಯಗಳಲ್ಲಿ ತಲೆ ಎತ್ತಿದ ಐಶಾರಾಮಿ ಮಾಲ್ ಗಳಲ್ಲಿ ಶಾಪಿಂಗ್, ಮಲ್ಟೀ ಪ್ಲೆಕ್ಸ್ನಲ್ಲಿ ಸಿನಿಮಾ, ಹತ್ತು ರೂಪಾಯಿ ಕೊಟ್ಟು ಬಿಸಿ ಬಿಸಿ ಕಾಫೀ ಟೀ ಕುಡಿಯಲು ಹಿಂದು ಮುಂದು ನೋಡುತ್ತಿದ್ದವರೆಲ್ಲಾ ಇದ್ದಕ್ಕಿದ್ದಂತೆಯೇ, ನೂರಾರು ರೂಗಳು ತೆತ್ತು ತರತರಾವರಿಯ ತಣ್ಣಗಿನ ಕಾಫೀ ಕುಡಿಯಲು ಶುರು ಮಾಡಿಕೊಂಡರೋ ಅಲ್ಲಿಂದಲೇ ದೇಶದಲ್ಲಿ ಒಂದು ರೀತಿ ಅಸಮಾನತೆ, ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗ ತೊಡಗಿತು.
ಯಾವಾಗ ಒಮ್ಮಿಂದೊಮ್ಮೆಲೆ, ಈ ರೀತಿಯ ಕೊಳ್ಳುಬಾಕರು ದೇಶದಲ್ಲಿ ಹುಟ್ಟುಕೊಂಡರೋ, ಆಗ ಸಂತೆಗೆ ತಕ್ಕಂತೆ ಬಂತೆ ಎನ್ನುವಂತೆ ಇವರ ರಿಯಲ್ ಎಸ್ಟೇಟ್, ವಾಹನಗಳ ಅಗತ್ಯಕ್ಕೆ ತಕ್ಕಂತೆ ನೂರಾರು ಕಂಪನಿಗಳು ನಾಯಿ ಕೊಡೆಯಂತೆ ಹುಟ್ಟುಕೊಂಡವು. ಕಾಲ ಚಕ್ತ್ರ ಉರುಳಿದಂತೆಲ್ಲಾ, ಹೇಗೆ ಗಡಿಯಾರದ ಮುಳ್ಳು, ಒಮ್ಮೆ ಮೇಲಕ್ಕೆ ಹೋದದ್ದು ಕೆಲವು ಸಮಯದ ನಂತರ ಕೆಳಕ್ಕೆ ಬರುತ್ತದೆಯೋ ಹಾಗೆಯೇ, ಆಗ ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದ ರಿಯಲ್ ಎಸ್ಟೇಟ್, ವಾಹನಗಳ ತಯಾರಿಕಾ ಕಂಪನಿಗಳ ಆದಾಯ ಸ್ವಲ್ಪ ಕಡಿಮೆಯಾಗ ತೊಡಗಿದೆ. ಬಹುತೇಕ ನಗರ ವಾಸಿಗಳ ಬಳಿ ಒಂದಕ್ಕಿಂತ ಹೆಚ್ಚಿನ ವಾಹನಗಳು ಮತ್ತು ಸೈಟು/ಮನೆಗಳು ಇರುವ ಕಾರಣ ಮತ್ತು ಜಾಗತೀಕ ಮಾರುಕಟ್ಟೆಯಲ್ಲಿ ಬಂಡವಾಳ ಹೂಡುವವರು ತಮ್ಮ ಹೂಡಿಕೆಯನ್ನು ಬೇರೆ ದಿಕ್ಕಿನತ್ತ ತಿರುಗಿಸಿದ ಪರಿಣಾಮ ಇಡೀ ವಿಶ್ವದಲ್ಲಿ ಆದಂತೆಯೇ ನಮ್ಮ ದೇಶದಲ್ಲೂ ಸ್ವಲ್ಪ ಆರ್ಥಿಕ ಪರಿಸ್ಥಿತಿ ಏರು ಪೇರಾಗಿರುವುದಕ್ಕೆ ಇಷ್ಟೋಂದು ಗಾಭರಿಯಾಗುವುದು ಅನಾವಶ್ಯಕ.
ಇಂದಿಗೂ ನಮ್ಮಲ್ಲಿ ಹತ್ತು ರೂಪಾಯಿ ದುಡಿದು ಮನೆಗೆ ಹೆಂಗಸರ ಕೈಗೆ ಕೊಟ್ಟಲ್ಲಿ ಆಕೆ ಕೇವಲ ಐದಾರು ರೂಪಾಯಿಗಳನ್ನು ಖರ್ಚುಮಾಡಿ ಉಳಿದ ನಾಲ್ಕೈದು ರೂಪಾಯಿಗಳನ್ನು ತನ್ನ ಸಾಸಿವೇ ಡಬ್ಬಿಯಲ್ಲಿ ಉಳಿತಾಯ ಮಾಡಿ, ಕುಟುಂಬಕ್ಕೆ ಕಷ್ಟ ಬಂದಾಗ ಅದನ್ನು ಉಪಯೋಗಿಸುತ್ತಾಳೆ. ನಮ್ಮ ಪೂರ್ವಜರು ಹಾಸಿಗೆ ಇದ್ದಷ್ಟು ಮಾತ್ರವೇ ಕಾಲು ಚಾಚಬೇಕು ಎಂಬುದನ್ನು ಹೇಳಿ ಕೊಟ್ಟಿದ್ದಾರೆ ಮತ್ತು ಅನಾವಶ್ಯಕ ಖರ್ಚು ಮಾಡಬಾರದು ಮತ್ತು ಪರರ ಕಷ್ಟದಲ್ಲಿ ಸಹಾಯ ಮಾಡು ಎಂದು ಸಾರಿ ಸಾರಿ ಹೇಳಿಕೊಟ್ಟಿದ್ದಾರೆ. ಬಾದ್ರಪದ ಚೌತಿಯಂದು ಚಂದ್ರನ ನೋಡಿದರೆ ವಿನಾಕಾರಣ ಅಪವಾದಕ್ಕೆ ಈಡಾಗುತ್ತೀರೀ ಎಂದು ಎಷ್ಟೇ ಎಚ್ಚರಿಸಿದರೂ, ನಮ್ಮವರು ನೋಡ ಬಾರದು, ನೋಡ ಬಾರದು ಎಂದೇ ಕದ್ದು ಮುಚ್ಚಿ ನೋಡಿ ಅಪವಾದಕ್ಕೆ ಈಡಾಗುವಂತೆ, ಪಾಶ್ಚಾತ್ಯರ ಆಂಧಾನುಕರಣೆಯ ಪಲವಾಗಿ ಅನಾವಶ್ಯಕ ಕೊಳ್ಳು ಬಾಕತನ ಮತ್ತು ದುಂದು ವೆಚ್ಚದ ಪರಿಣಾಮವಾಗಿ ಈ ರೀತಿಯ ಕೃತಕ ಆರ್ಥಿಕ ಅಭದ್ರತೆಯನ್ನು ತಂದು ಕೊಂಡಿದ್ದೇವೆ ಎಂದರೆ ತಪ್ಪಾಗಲಾರದು. ನಾನು ಯಾವುದೇ ಅಂಕಿ ಅಂಶ ತಜ್ಞನಲ್ಲಾ ಅಥವಾ ಜ್ಯೋತಿಯಿಯಂತೂ ಅಲ್ಲವೇ ಅಲ್ಲಾ. ಆದರೆ ನಮ್ಮ ಪೂರ್ವಜರ ನಂಬಿಕೆ, ಆಚಾರ ವಿಚಾರಗಳ ಬಗ್ಗೆ ಸಂಪ್ರೂರ್ಣ ಭರವಸೆ ಇಟ್ಟು ಕೊಂಡವನು. ಹಾಗಾಗಿ ಇನ್ನು ಕೆಲವೇ ಕೆಲವು ತಿಂಗಳೊಳಗೆ ಭಾರತದ ಆರ್ಥಿಕ ಪರಿಸ್ಥಿತಿ ಮತ್ತೊಮ್ಮೆ ಪುಟಿದೆದ್ದು, ನಮ್ಮ ಪ್ರಧಾನಿಗಳು ಮತ್ತು ವಿತ್ತಮಂತ್ರಿಗಳ ಆಶಯದಂತೆ ನಮ್ಮ ದೇಶ ಐದು ಟ್ರಿಲಿಯನ್ ಆರ್ಥಿಕತೆಯತ್ತ ಧಾಪುಗಾಲು ಹಾಕಲಿದೆ ಎನ್ನುವುದು ನನ್ನ ವಯಕ್ತಿಯ ಆಶಯ. ಮುಂದೆ ಬರುವ ಸಂಕಷ್ಟಹರ, ವಿಘ್ನವಿನಾಶಕ, ವಿನಾಯಕ ಚೌತಿ ಹಬ್ಬವನ್ನು ಶ್ರಧ್ಧಾ ಭಕ್ತಿಯಿಂದ ಆಚರಿಸೋಣ. ಇಡೀ ಪ್ರಪಂಚಕ್ಕೆ ಆವರಿಸಿರುವ ಮಹಾಮಾರಿ ಸಂಪೂರ್ಣವಾಗಿ ತೊಲಗಿಸಲು ಪ್ರಾರ್ಥಿಸೋಣ. ಅದಕ್ಕೆ ಪ್ರತಿಯಾಗಿ ಆ ಗಣೇಶ ಖಂಡಿತವಾಗಿಯೂ ನಮ್ಮೆಲ್ಲಾ ಸಂಕಷ್ಟಗಳನ್ನೂ ಅತೀ ಶೀಘ್ರದಲ್ಲಿಯೇ ಪರಿಹರಿಸುತ್ತಾನೆ ಎಂಬ ನಂಬಿಕೆ ನಮ್ಮದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಹೇಳಿರುವಂತೆ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ…. ಅಂದರೆ ನಮ್ಮ ಕೆಲಸ ನಾವು ಮಾಡೋಣ. ಫಲಾ ಫಲಗಳನ್ನು ಆ ಭಗವಂತನ ಮೇಲೆ ಬಿಡೋಣ.
ನಂಬಿ ಕೆಟ್ಟವರಿಲ್ಲವೋ ತಮ್ಮಯ್ಯ ನೀ ಕೇಳೂ, ನಂಬಿ ಕೆಟ್ಟವರಿಲ್ಲವೋ
ನಂಬಿ ಕೆಟ್ಟವರಿಲ್ಲವೋ ಮಣ್ಣನ್ನು ಎಂದೆಂದೂ, ನಂಬಿ ಕೆಟ್ಟವರಿಲ್ಲವೋ ಎನ್ನುವ ಚಿ. ಉದಯಶಂಕರರ ಹಾಡಿನಂತೆ ದೇಶವನ್ನು ನಂಬಿ ಕೆಟ್ಟವರು ಯಾರೂ ಇಲ್ಲಾ ಮತ್ತು ಕೆಡುವುದು ಇಲ್ಲಾ.
ಏನಂತೀರೀ?
ನಿಮ್ಮವನೇ ಉಮಾಸುತ