ಸಾರ್ಥಕ ಬದುಕು

ಒಂದು ಉದ್ದೇಶಿತ ಕೆಲಸಕ್ಕಾಗಿ ಬಂದು ಆ ಕೆಲಸವನ್ನು ಸಕಾಲಕ್ಕೆ ಸರಿಯಾಗಿ ಎಲ್ಲರೂ ಒಪ್ಪುವಂತೆ, ಇಲ್ಲವೇ ಹೊಗಳುವಂತೆ ಮಾಡಿ ಮುಗಿಸಿ ಹೋದಲ್ಲಿ ಅದುವೇ ಸಾರ್ಥಕತೆ ಎನಿಸುತ್ತದೆ. ಅಂತಹ ಒಂದು ಸಾರ್ಥಕ ಬದುಕನ್ನು ನಡೆಸಿದ ಒಂದು ಹಿರಿಯ ಜೀವದ ಬಗ್ಗೆ ನೆನಸಿಕೊಳ್ಳುವಂತಹ ಅನಿವಾರ್ಯ ಸಂದರ್ಭ ಬಂದೊದಗಿದ್ದು ನಿಜಕ್ಕೂ ದುಃಖ ಕರ.

ಎಪ್ಪತ್ತರ ದಶಕದಲ್ಲಿ ಕರ್ನಾಟಕ ಮತ್ತು ಆಂಧ್ರ ಗಡಿ ಭಾಗದ ಯಗುಕೋಟೆಯ ಜಮೀನ್ದಾರ್ ರಾಮಚಂದ್ರರವರ ದ್ವಿತೀಯ ಪುತ್ರಿ ಲಕ್ಷ್ಮೀ (ಆದಿ ಲಕ್ಷ್ಮೀ) ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಬಳಿಯ ತಿಪ್ಪೂರಿನ ಮೂಲದವರಾದ ಆದರೆ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕ ಪ್ರವೀಣ ಹನುಮಂತರಾವ್ ಅವರ ದ್ವಿತೀಯ ಪುತ್ರ ಪ್ರಭಾಕರ್(ರಾಜ) ಅವರ ವಿವಾಹ ಅಂದಿನ ಕಾಲಕ್ಕೇ ಬಹಳ ಅದ್ಧೂರಿಯಾಗಿ ನಡೆಯಲ್ಪಡುತ್ತದೆ. ಮಧು ಮಗಳು ಮತ್ತು ಮಧು ಮಗನ ಈಡು ಜೋಡಿ ತೇಟ್ ಪಾರ್ವತಮ್ಮ ಮತ್ತು ರಾಜಕುಮಾರಂತೆಯೇ ಎಂದರೆ ಅತಿಶಯೋಕ್ತಿ ಏನಲ್ಲ. ವಧು ಕೆನ್ನೆ ತುಂಬಾ ಅರಿಶಿನ, ಹಣೆಯ ಮೇಲೆ ಕಾಸಿನಗಲದ ಕುಂಕುಮ ಸಾಕ್ಷಾತ್ ಲಕ್ಷ್ಮಿ ದೇವಿಯ ಕಳೆಯೇ ಇರುವ ಹದಿನೆಂಟರ ಪ್ರಾಯೆ. ಇನ್ನು ಬೆಂಗಳೂರಿನ ಬಿಇಎಲ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಮಧುಮಗ, ರೂಪದಲ್ಲಿ ರಾಜಕುಮಾರನಂತೆಯೂ ಮತ್ತು ಹಾವಭಾವಗಳಲ್ಲಿ ವಿಷ್ಣುವರ್ಧನಂತಿದ್ದ ಸುರದ್ರೂಪಿ.

WhatsApp Image 2019-09-05 at 3.11.08 PM

ವಿಶಾಲವಾದ ತವರು ಮನೆಯಲ್ಲಿ ಅತೀ ಮುದ್ದಾಗಿ ಬೆಳೆದ ಹುಡುಗಿ ಮದುವೆಯಾಗಿ ಬೆಂಗಳೂರಿಗೆ ಪತಿಯ ಮನೆಗೆ ಬಂದರೆ ಪುಟ್ಟದಾದ ಮನೆ ಆದರೆ ಮನೆ ತುಂಬಾ ಜನ. ಅಂದೆಲ್ಲಾ ಮನೆ ಚಿಕ್ಕದಾಗಿದ್ದರೂ ಮನಸ್ಸು ದೊದ್ದಾದಾಗಿರುತ್ತಿದ್ದ ಕಾರಣ ಆಕೆಗೆ ಅದೊಂದು ಸಮಸ್ಯೆಯೇ ಆಗಲಿಲ್ಲ. ತನ್ನ ವಯಸ್ಸಿನ ಅಥವಾ ತನಗಿಂತ ಕೊಂಚ ಹಿರಿಯ/ ಕಿರಿಯ ವಯಸ್ಸಿನ ನಾದನಿಯರು ಮತ್ತು ಮೈದುನ ಜೊತೆಗೆ ಮಡಿವಂತ ಅತ್ತೆ ಸದಾ ಒಂದಲ್ಲಾ ಒಂದು ಅಡುಗೆ ಕೆಲಸದಲ್ಲಿ ನಿರತರಾಗಿದ್ದ ಮಾವ . ತಾಯಿಯ ಮನೆಯ ಭಾಷೆ ತೆಲುಗು, ಕಟ್ಟಿ ಕೊಂಡ ಮನೆಯ ಭಾಷೆ ಅಪ್ಪಟ ಕನ್ನಡ. ಭಾಷೆ, ಆಚಾರ, ವಿಚಾರ, ಅಡುಗೆ ಎಲ್ಲವೂ ಭಿನ್ನ. ಒಟ್ಟಿನಲ್ಲಿ ತೆಲುಗು ಮತ್ತು ಕನ್ನಡ ಸಂಸ್ಕೃತಿಯ ಸಮಾಗಮ ಎಂದರೂ ತಪ್ಪಾಗಲಾರದು. ಗಂಡನ ಮನೆಗೆ ಬಂದ ಕೆಲವೇ ದಿನಗಳಲ್ಲಿ ಅವರೊಂದಿಗೆ ಸರಾಗವಾಗಿ ಬೆರೆತು, ಮಾವನವರ ಕೆಲಸ ಕಾರ್ಯಗಳಲ್ಲಿಯೂ ಸಹಭಾಗಿಯಾಗಿ ಎಲ್ಲರ ಮನ ಗೆಲ್ಲುವುದರಲ್ಲಿ ಸಫಲರಾಗುವ ಜೊತೆ ಜೊತೆಯಲ್ಲಿಯೇ ಸುಖದಾಂಪತ್ಯದ ಕುರುಹಾಗಿ ಎರಡು ಮಕ್ಕಳ ತಾಯಿಯೂ ಆದರು. ಕೀರುತಿಗೊಬ್ಬ ಮಗ ನರಹರಿ (ಹರಿ), ಅಮ್ಮನ ಪ್ರತಿರೂಪವಾದರೆ, ಆರತಿಗೊಬ್ಬಳು ಮಗಳು ಚಿತ್ರಾ ( ಚಿತ್ತು ) ಅಪ್ಪನ ಅನುರೂಪ. ಇದರ ಮಧ್ಯೆ ನಾದಿನಿಯರ ಮದುವೆ ಮಾಡಿದ್ದಲ್ಲದೆ, ಮದುವೆ ಆದ ನಂತರವೂ ತಮ್ಮ ಪತಿಗೆ ಓದಲು ಪ್ರೋತ್ಸಾಹಿಸಿ ಅದರಲ್ಲೂ ಯಶಸ್ವಿಯಾದ ದಿಟ್ಟ ಮಹಿಳೆ. ಮನೆಯವರು ಕೊಟ್ಟ ದುಡ್ದಿನಲ್ಲಿ ಅಷ್ಟೋ ಇಷ್ಟೋ ಸಾಸಿವೆ ಡಬ್ಬಿಯಲ್ಲಿ ಉಳಿಸಿ, ಮನೆಯವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ಪತಿಯ ಕಾರ್ಖಾನೆಯ ಸಮೀಪವೇ ಸ್ವಂತದ್ದೊಂದು ಮನೆಯನ್ನು ಕಟ್ಟಿಸುವಲ್ಲಿ ಯಶಸ್ವಿಯಾದರು.

ವೈಭವೋಪೇತ ಮಲ್ಲೇಶ್ವರದಿಂದ ಸುಮಾರು ಹಳ್ಳಿಯ ರೂಪದಲ್ಲಿದ್ದ ಹೊಸ ಮನೆಗೆ ಬಂದಾಗ ಪಟ್ಟ ಪಾಡು ಅಷ್ಟಿಷ್ಟಲ್ಲ ಹಳೆಯ ಮನೆಯಲ್ಲಿ ನಲ್ಲಿ ತಿರಿಗಿಸಿದರೆ ನೀರು ಬರುತ್ತಿದ್ದರೆ, ಇಲ್ಲಿ ನಿತ್ಯ ಬಳಕೆಗೆ ಭಾವಿಯಿಂದ ನೀರು ಸೇದಬೇಕು. ಕುಡಿಯುವ ನೀರಿಗೆ ಮೈಲುಗಟ್ಟಲೆ ಸೊಂಟದಲ್ಲೊಂದು, ಕೈಯಲ್ಲೊಂದು ಬಿಂದಿಗೆ ಹಿಡಿದು ತರಬೇಕು. ನೀರಿಗೆ ಬಿದ್ದ ಮೇಲೆ ಚಳಿಯೇನು? ಗಾಳಿಯೇನು ಏನು ಎನ್ನುವಂತೆ ಎಲ್ಲವನ್ನೂ ಸಮರ್ಥವಾಗಿ ಎದುಸಿದರು ಆ ಧೈರ್ಯವಂತ ಮಹಿಳೆ. ಇಷ್ಟರಲ್ಲಿ ಮೈದುನನ ಮದುವೆಯಾಗಿ ಮನೆಗೆ ವಾರಗಿತ್ತಿಯ ಆಗಮನ. ವರಸೆಯಲ್ಲಿ ಓರುಗಿತ್ತಿಯಾದರೂ ಅಕೆಯನ್ನು ಸ್ವಂತ ತಂಗಿಯಂತೆಯೇ ನೋಡಿಕೊಂಡು ಅವರು ತಮ್ಮ ಕಾಲ ಮೇಲೆ ತಾವು ನಿಂತು ಕೊಂಡು ಅವರದ್ದೇ ಆದ ಒಂದು ಸ್ವಂತ ಸೂರನ್ನು ಕಟ್ಟಿಕೊಳ್ಳುವ ವರೆಗೆ ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿದ ಮಾಹಾಮಾತೆ.

WhatsApp Image 2019-09-05 at 3.10.37 PM

ಇಷ್ಟೆಲ್ಲಾ ಆಗುವವರೆಗೆ ವಯಸ್ಸಾದ ಅತ್ತೆ- ಮಾವ, ಜೊತೆಗೆ ಬೆಳೆದ ಮಕ್ಕಳು. ವಯೋ ಸಹಜ ಖಾಯಿಲೆಗೆ ತುತ್ತಾದ ಮಾವನವರಿಗೆ ಪಥ್ಯದ ಅಡುಗೆ, ಮನೆಯವರಿಗೆಲ್ಲ ರುಚಿ ರುಚಿಯಾದ ಮತ್ತೊಂದು ಅಡಿಗೆಯಾದರೆ, ಇನ್ನು ಮುದ್ದು ಮಗನಿಗೇ ಮತ್ತೊಂದು ರೀತಿಯ ಅವನು ಬಯಸಿದಂತಹದ್ದೇ ಅಡುಗೆ. ಇಷ್ಟೆಲ್ಲಾ ಮಾಡಿಕೊಟ್ಟರೂ ಒಂದು ಚೂರೂ ಆಯಾಸವಾಗಲೀ ಬೇಸರವಿಲ್ಲದ ಮಂದಹಾಸದ ಮುಖ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿತ್ತು. ವಯಸ್ಸಿಗೆ ಬಂದ ಮಗ ಇದ್ದಕ್ಕಿದ್ದಂತೆಯೇ ಮಧ್ವ ಸಂಪ್ರದಾಯಕ್ಕೆ ಮಾರು ಹೋಗಿ ವಿಪರೀತವಾದ ಮಡಿ ಹುಡಿ ಆಚಾರ ಪದ್ದತಿಗಳನ್ನು ಆಚರಿಸಲು ಶುರುಮಾಡಿದಾಗ, ಅಗ್ಗಿಷ್ಟಿಕೆಯಲ್ಲಿಯೇ ಅಡುಗೆ ಮಾಡಿಕೊಡಲು ಅಮ್ಮನಿಗೆ ದಂಬಾಲು ಬಿದ್ದಾಗಲೂ ಕೊಂಚವೂ ಬೇಸರಿಸದೇ ಸಂತೋಷದಿಂದಲೇ ಮಗನನ್ನು ಬೆಂಬಲಿಸಿದ ಅಪರೂಪದ ತಾಯಿ.

ಮಕ್ಕಳ ವಿದ್ಯಾಭ್ಯಾಸ ಮುಗಿಸಿ ಮದುವೆ ವಯಸ್ಸಿಗೆ ಬಂದಾಗ ಅವರಿಗೆ ಸೂಕ್ತ ವರ ಮತು ವಧುವನ್ನು ಹುಡುಕಿ ಅವರಿಗೆ ಮದುವೆ ಮಾಡಿಸಿ ಅತ್ತೆಯ ಪಟ್ಟಕ್ಕೆ ಭಡ್ತಿ ಹೊಂದಿ ಅಲ್ಲಿಂದ ಕೆಲವೇ ದಿನಗಳಲ್ಲಿ ಮುದ್ದಾದ ಮೂರು ಗಂಡು ಮಕ್ಕಳ ಪ್ರೀತಿಯ ಅಜ್ಜಿಯಾದವರು ಈಕೆ. ಸೊಸೆಯೇನೋ ಓಕೆ ಅದಳ ಜೊತೆಯಲ್ಲಿ ಅವಳ ತಾಯಿ ಏಕೆ? ಎನ್ನುವ ಇಂದಿನ ಕಾಲದಲ್ಲಿ, ತಮ್ಮದೇ ರೂಪವನ್ನು ಹೋಲುತ್ತಿದ್ದ ಆಕೆಯ ಸೊಸೆಯ ತಾಯಿಯನ್ನೂ ತಮ್ಮ ಸ್ವಂತ ತಂಗಿಯಂತೆ ನೋಡಿ ಕೊಂಡ ಕರುಣಾಮಯಿ. ಲಕ್ಷ್ಮೀ-ಪ್ರಭಾಕರ್, ಚಿತ್ರಾ-ಮಧು, ವಿದ್ಯಾ-ಹರಿ ಒಳ್ಳೆಯ ಕಪ್ಪು ಬಿಳುಪು ಜೋಡಿಯಾದರೂ ಅತ್ಯಂತ ವರ್ಣಮಯವಾದ ಸಂತಸ ಬದುಕನ್ನು ಕಟ್ಟಿಕೊಂಡವರು.

ಇನ್ನು ವಯಕ್ತಿಕವಾಗಿ ನಮ್ಮ ಮನೆಯವರಿಗೂ ಆವರ ಮನೆಯವರ ಸಂಬಂಧ ಸರಿ ಸುಮಾರು ಐವತ್ತು ವರ್ಷಕ್ಕೂ ಹೆಚ್ಚಿನದ್ದು, ಅರವತ್ತರ ದಶಕದಲ್ಲಿ ನಮ್ಮ ತಂದೆ ಮತ್ತು ಪ್ರಭಾಕರ್ ಅವರು ಒಟ್ಟಾಗಿ ಕೆಲಸಕ್ಕೆ ಸೇರಿ, ಗೆಳೆಯರಾದರೆ, ಆ ಸಂಬಂಧ ನಮ್ಮ ಚಿಕ್ಕಪ್ಪ ಮತ್ತು ಪ್ರಭಾಕರ್ ಅವರು ಒಟ್ಟಿಗೆ ಓದನ್ನು ಮುಂದುವರಿಸುವ ಮೂಲಕ ವೃಧ್ದಿಯಾಯಿತು. ಅದೇ ಸ್ನೇಹ ನನ್ನ ಮತ್ತು ಅವರ ಮಗ ಹರಿಯ ಮುಖಾಂತರ ಮತ್ತಷ್ಟೂ ಹೆಮ್ಮರವಾಯಿತು. ನಾನು ಮತ್ತು ಹರಿ ಇಂದಿಗೂ ರಾಮ ಲಕ್ಷಣರಂತೆಯೇ ಇದ್ದೇವೆ. ಚಿಕ್ಕವರಿದ್ದಾಗ ಹರಿಯ ಮನೆಯಲ್ಲಿ ಅವರಮ್ಮ ಮಾಡಿದ ಪ್ರತೀ ತಿಂಡಿ ತಿನಿಸುಗಳಲ್ಲಿ ನನ್ನದೂ ಒಂದು ಪಾಲಿದ್ದರೆ, ನಮ್ಮ ತಾಯಿ ಹರಿಗೆ ಇಷ್ಟ ಎಂದೇ ಮಾಡುತ್ತಿದ್ದ ಬೆಲ್ಲದನ್ನ ಮೆರೆಯಲು ಸಾಧ್ಯವೇ ಇಲ್ಲ. ಹರಿಯವರ ತಾಯಿ ಮಾಡುತ್ತಿದ್ದ ಚಕ್ಕುಲಿ, ಕೋಡುಬಳೆ, ಬಾಯಿಗೆ ಇಟ್ಟೊಡನೆಯೇ ಕರಗುವಂತಿದ್ದ ಕೊಬ್ಬರಿ ಮಿಠಾಯಿ ಸವಿದವನೇ ಬಲ್ಲ ಅದರ ರುಚಿ. ಎಲ್ಲದ್ದಕ್ಕಿಂತಲೂ ನನಗೆ ಅತ್ಯಂತ ಇಷ್ಟವಾಗುತ್ತಿದ್ದದ್ದು ಸಂಕ್ರಾಂತಿ ಹಬ್ಬಕ್ಕೆಂದು ಅವರು ಮಾಡುತ್ತಿದ್ದ ಸಕ್ಕರೆ ಅಚ್ಚು. ಅತ್ಯಂತ ಬೆಳ್ಳಗಿನ, ವಿವಿಧ ಆಕೃತಿಗಳ, ದೊಡ್ಡ ದೊಡ್ಡ ಸಕ್ಕರೆ ಅಚ್ಚುಗಳನ್ನು ನೋಡುವುದೇ ಒಂದು ಆನಂದ. ಚಿಕ್ಕಂದಿನಲ್ಲಿ ನನಗೆಂದೇ ಒಂದು ದೊಡ್ಡ ಸಕ್ಕರೆ ಅಚ್ಚೊಂದನ್ನು ಎತ್ತಿಟ್ಟು ಕೊಡುತ್ತಿದ್ದದ್ದು ಇಂದಿಗೂ ಹಚ್ಚ ಹಸುರಾಗಿಯೇ ಇದೆ.

ಪ್ರತೀ ಬಾರಿ ನಾನು ಅವರ ಮನೆಗೆ ಹೋದಾಗಲೆಲ್ಲಾ ಕೇವಲ ನನ್ನ ಮೇಲೆ ಮಾತ್ರವೇ ಅಕ್ಕರೆ ತೋರದೆ, ನನ್ನ ಮಡದಿ ಮತ್ತು ಮಕ್ಕಳ ಮೇಲೆಯೂ ಅಪಾರವಾದ ಮಮತೆ. ಅದರಲ್ಲೂ ನನ್ನ ಮಗಳೆಂದರೆ ಒಂದು ಗುಲಗಂಜಿ ತೂಕ ಹೆಚ್ಚಿನ ಪ್ರೀತಿ. ಬಾ ಸ್ರೀಕಂಟಾ.. ಒಬ್ಬನೇ ಬಂದ್ಯಾ? ಮಮತಾ ಎಲ್ಲಿ ? ಎಂದು ಕೇಳಿ, ನನ್ನ ಮಡದಿಯನ್ನು ನೋಡಿದ ತಕ್ಷಣ, ಬಾ ಮಮತಾ… ಸೃಷ್ಟಿ ಎಲ್ಲಿ? ಎಂದು ನನ್ನ ಮಗಳನ್ನು ಸದಾ ಕೇಳುತ್ತಿದ್ದರು. ನನ್ನ ಮಗಳು ಚಿಕ್ಕವಳಿದ್ದಾಗ ಯಾವ ಸಮಯದಲ್ಲೇ ಆಗಲಿ, ಎಷ್ಟು ಹೋತ್ತಿಗೇ ಆಗಲೀ ಅವರ ಮನೆಗೆ ಹೋದರೂ ನಮ್ಮ ಮಗಳಿಗೆ ಐಸ್ ಕ್ರೀಂ ತರಿಸಿ ಕೊಡದೇ ಮನೆಗೆ ಕಳುಹಿಸಿದ ನೆನಪೇ ಇಲ್ಲಾ.

ಸ್ವಲ್ಪ ದಿನಗಳ ಹಿಂದೆ ನಮ್ಮನ್ನು ನೋಡಲೆಂದು ನಮ್ಮ ಮನೆಗೆ ಬಂದು, ಕಾರಿನಿಂದ ಇಳಿಯಲಾಗದೇ, ಮನೆಯ ಮುಂದೆಯೇ ಕಾರಿನಲ್ಲಿಯೇ ಕುಳಿತುಕೊಂಡು ಅರ್ಧ ಮುಕ್ಕಾಲು ಗಂಟೆ ಮಾತನಾಡಿ ಕಾಫೀ ಕುಡಿದು ಕೊಂಡು ಮನೆಯ ಒಳಗೆ ಬಾರದೇ ಹೋದದ್ದು ಮತ್ತು ನನ್ನ ಒತ್ತು ಶ್ಯಾವಿಗೇ ಲೇಖನ ಓದಿ (https://wp.me/paLWvR-44) , ಚೆನ್ನಾಗಿ ಬರೆದಿದ್ದಿಯಾ, ನಮ್ಮ ಮನೆಯಲ್ಲಿ ಒಂದು ಸಾರಿ ಒತ್ತು ಶ್ಯಾವಿಗೆ ಮಾಡಿ ನಿಮ್ಮನ್ನೆಲ್ಲಾ ಕರೀತೀನಿ. ನನ್ನ ಕೈ ರುಚಿ ನೋಡಿ ಹೇಳು ಎಂದಿದ್ದರು.

ಸಣ್ಣ ವಯಸ್ಸಿನಲ್ಲಿಯೇ ತುಂಬು ಸಂಸಾರದ ಸೊಸೆಯಾಗಿ ಬಂದು ನಂತರ ತಾನೇ ಅತ್ತೆಯಾಗಿ ಭಡ್ತಿ ಹೊಂದಿದಾಗಲೂ ಒಮ್ಮೆಯೂ ತನ್ನ ಅತ್ತೆಯ ಬಗ್ಗೆಯಾಗಲೀ ಅಥವಾ ಸೊಸೆಯ ಬಗ್ಗೆಯಾಗಲೀ ಯಾರ ಬಳಿಯೂ ಒಂದು ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿಯೇ ಇಲ್ಲ. ಅವರ ಮನೆಯಲ್ಲಿ ಕುಟುಂಬದ ಹೊರತಾಗಿ ಸದಾ ಒಬ್ಬರಲ್ಲಾ ಒಬ್ಬರು ಇರಲೇ ಬೇಕು. ದೇವರಿಗೆ ಹೂವು ಇಡುವುದು ತಪ್ಪಬಹುದೇನೋ? ಅವರ ಮನೆಯಲ್ಲಿ ಅಥಿತಿಗಳ ಸತ್ಕಾರ ನಡೆಯದ ದಿನವೇ ಇಲ್ಲವೇನೋ? ವರ್ಷಕ್ಕೆ ಒಂದಲ್ಲಾ ಒಂದು ಶುಭ ಸಮಾರಂಭಗಳು, ಯಾವುದೂ ಇಲ್ಲದಿದ್ದರೆ ಹಬ್ಬ ಹರಿದಿನಗಳಂದು ಹೆಣ್ಣುಮಕ್ಕಳನ್ನು ಕರೆಯಿಸಿ ಹೂವಿಳ್ಯ ಮಾಡಿ ಮಡಿಲು ತುಂಬಿ ಕಳುಹಿಸುತ್ತಿದ್ದದ್ದು, ಅದೂ ಇಲ್ಲವೆಂದರೆ ಮೊಮ್ಮಕ್ಕಳ ಹುಟ್ಟು ಹಬ್ಬದ ನೆಪದಲ್ಲಿ ಬಾರೀ ಭೂರೀ ಭೋಜನ ಹಾಕಿಸುತ್ತಲೇ ಇರುತ್ತಿದ್ದರು. ಇದು ಯಾವುದೂ ಇಲ್ಲದಿದ್ದರೆ, ಸುಮ್ಮನೆ ಬಂಧು – ಮಿತ್ರರನ್ನು ಕರೆದು ಅಡುಗೆಯವರನ್ನು ಕರೆಸಿ ಬಿಸಿ ಬಿಸಿ ಒಬ್ಬಟ್ಟಿನ ಊಟವೋ ಇಲ್ಲವೇ ಬಿ‍ಸಿ ಮಸಾಲೆ ದೋಸೆ ಹೊಟ್ಟೆ ಬಿರಿಯುವಷ್ಟನ್ನು ತಿಂದು ಬಂದದ್ದನ್ನು ಮರೆಯುವಂತೆಯೇ ಇಲ್ಲ. ಇನ್ನು ನಾನು ಬ್ರಹ್ಮಚಾರಿಯಾಗಿದ್ದಷ್ಟೂ ದಿನ ಸುಬ್ಬರಾಯನ ಷಷ್ಠಿಯಂದು (https://enantheeri.com/2019/03/10/ಸುಭ್ರಹ್ಮಣ್ಯ-ಷಷ್ಠಿ-ಅವಾಂತರ/) ಅವರ ಮನೆಯ ಖಾಯಂ ಬ್ರಹ್ಮಚಾರಿ. ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ. ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ ಎಂಬ ಬಸವಣ್ಣನವರ ವಚನದಂತೆ ಕೇವಲ ಅವರ ಮನೆಯೇನು? ಅವರ ಬಂಧು ಮಿತ್ರರ ಮನೆಯಲ್ಲಿ ಅವರ ಮಗನನ್ನು ಬ್ರಹ್ಮಚಾರಿಗೆ ಕರೆದರೆ, ನನ್ನ ಮಗನ ಸ್ನೇಹಿತನೂ ಇದ್ದಾನೆ. ಅವನನ್ನೂ ಕರೆದು ಕೊಂಡು ಬರುತ್ತೀನಿ ಎಂದು ನನ್ನನ್ನೂ ತನ್ನ ಮಗನಂತೆಯೇ ಜತನದಿಂದ ಕರೆದುಕೊಂಡು ಹೋಗುತ್ತಿದ್ದ ಮಾಹಾ ಮಾತೆ. ಖಂಡಿತವಾಗಿಯೂ ಅವರ ಋಣ ಅನೇಕರಂತೆ ನನ್ನ ಮೇಲೆಯೂ ಇದ್ದು, ಆ ಋಣವನ್ನು ಯಾವ ರೀತಿಯಲ್ಲಿಯೂ ತೀರಿಸಲಾಗದ ಕಾರಣ, ನನ್ನ ಈ ಬರಹದ ಮೂಲಕ ಅವರಿಗೆ ಅರ್ಪಿಸುತ್ತಿದ್ದೇನೆ ನನ್ನ ಅಶ್ರುತರ್ಪಣ.

ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸಾಲು ಸಾಲಾಗಿ, ಅಕ್ಕ, ತಮ್ಮ, ತಾಯಿ ಮತ್ತು ತಂದೆಯವರನ್ನು ಕಳೆದುಕೊಂಡಾಗ ಬಹಳಷ್ಟು ನೊಂದಿದ್ದರು. ಅದಾದ ನಂತರ ವಯೋಸಹಜ ಖಾಯಿಲೆಗಳಿಂದ ಆಗ್ಗಾಗೆ ಆಸ್ಪತ್ರೆಯನ್ನು ಎಡ ತಾಕುತ್ತಿದ್ದರೂ ಕೆಲವೇ ದಿನಗಳಲ್ಲಿ ಚೇತರಿಸಿಕೊಂಡು ಮನೆಗೆ ಹಿಂದುರುಗಿ ಎಂದಿನಂತೆ ಮನೆಯಲ್ಲಿ ಪೂರ್ತಿ ಚಟುವಟಿಕೆಗಳಿಂದ ಇರುತ್ತಿದ್ದವರು, ಕಳೆದ ವಾರ ಶ್ವಾಸಕೋಶದ ಸೋಂಕಿನಿಂದ ಆಸ್ಪತ್ರೆಗೆ ಸೇರಿ ಇನ್ನೇನು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವಷ್ಟರಲ್ಲಿಯೇ ಕೋಮಾಗೆ ಜಾರಿ ಸೆಪ್ಟೆಂಬರ್ 2ರ ಮಧ್ಯರಾತ್ರಿ ಮತ್ತೆ ಮನೆಗೆ ಮರಳಿ ಬಾರದಿರುವ ಲೋಕಕ್ಕೇ ಹೇಳದೇ ಹೊರಟು ಹೋದದ್ದು ಅತ್ಯಂತ ದುಃಖಕರವಾದ ವಿಷಯ. ಅವರ ಅಕ್ಕ ಗೌರೀ ಹಬ್ಬದ ದಿನ ನಿಧರಾಗಿದ್ದರೆ, ಈಗ ತಂಗಿ ಯಾರಿಗೂ ತೊಂದರೆಯಾಗದಂತೆ, ಎಲ್ಲರ ಮನೆಯಲ್ಲಿಯೂ ಗಣೇಶನ ಹಬ್ಬ ಮುಗಿಸಿ ಮೂರ್ತಿಯನ್ನು ವಿಸರ್ಜಿಸಿದ ನಂತರವೇ, ತಡ ರಾತ್ರಿಯಲ್ಲಿ ದೇವರ ಪಾದ ಸೇರಿದ್ದಾರೆ. ಹೀಗೆ ಅಕ್ಕ-ತಂಗಿ ಜೊತೆ ಜೊತೆಯಲ್ಲಿಯೇ ನಿಧನರಾದರೇ, ಕಾಕತಾಳಿಯವೋ ಎನ್ನುವಂತೆ, ಅಮ್ಮಾ, ಕಡೆಯ ಮಗ ಮತ್ತು ಈಗ ಮಗಳು ಈ ಮೂವರೂ, 10ನೇ ನಂಬರಿನ ಚಿತಾಗಾರದಲ್ಲಿಯೇ ಅಂತ್ಯಸಂಸ್ಕಾರವಾಗಿದೆ. ಹೀಗೆ ಸಾವಿನಲ್ಲಿಯೂ, ಅಂತ್ಯ ಸಂಸ್ಕಾರದಲ್ಲಿಯೂ ಕುಟುಂಬದೊಡನೆಯೇ ಒಂದಾಗಿಯೇ ಹೋದ ಅಪರೂಪದ ಭಾವಜೀವಿ.

ಇದೇನು ಎಲ್ಲಾ ಹೆಣ್ಣು ಮಕ್ಕಳೂ ಮಾಡುವುದನ್ನೇ ಈಕೆಯೂ ಮಾಡಿದ್ದಾರೆ ಅದರಲ್ಲಿ ಏನು ವಿಶೇಷ ? ಎಂದರೆ, ಆಕೆಯು ಮಾಡಿದ ಇಷ್ಟೆಲ್ಲಾ ಸಾಧನೆಗಳು ಯಾವುದೂ ಸುಲಭ ಸಾಧ್ಯವಾಗಿರಲಿಲ್ಲ. ಎಲ್ಲವೂ ಮುಳ್ಳಿನ ಹಾಸಿಗೆಯಂತೆಯೇ ಇದ್ದವು. ಆದರೆ ಅದನ್ನೆಲ್ಲವನ್ನೂ ಧೈರ್ಯದಿಂದ ಎದುರಿಸಿದ ಧೈರ್ಯ ಲಕ್ಷ್ಮಿ ಆಕೆ. ಒಂದು ಕಡೆ ತವರು ಮನೆಯವರ ಕಷ್ಟ ಸುಖಗಳಲ್ಲಿ ಭಾಗಿಯಾದರೇ ಮತ್ತೊಂದು ಕಡೆ ಗಂಡನ ಮನೆಯ ಸಂಕಷ್ಟಗಳು. ಎರಡೂ ಮನೆಯವರನ್ನೂ ಸಮಾನ ರೀತಿಯಿಂದ ನೋಡುತ್ತಾ ಎರಡೂ ಮನೆಯ ಸಮಸ್ಯೆಗಳನ್ನು ತನ್ನದೇ ಸಮಸ್ಯೆ ಎಂದು ಪರಿಗಣಿಸಿ ಅದಕ್ಕೆಲ್ಲಾ ತನ್ನ ಕೈಯ್ಯಲ್ಲಾದ ಮಟ್ಟಿಗಿನ ಪರಿಹಾರವನ್ನು ಸೂಚಿಸಿ ಎಲ್ಲರನ್ನೂ ತನ್ನ ಪ್ರೀತಿಯ ಬಂಧನಗಳಲ್ಲಿ ಕಟ್ಟಿಹಾಕಿದಾಕೆ. ಒಂದು ಪೂರ್ವ ನಿರ್ಧಾರದಂತೆ ಭೂಮಿಗೆ ಬಂದು ತನ್ನ ಕಾಲ್ಗುಣ ಮತ್ತು ತನ್ನ ಆಚಾರ, ವಿಚಾರ ಮತ್ತು ನಡುವಳಿಕೆಯಂದ ಗಂಡನ ಮನೆಯನ್ನು ಬೆಳಗಿದ್ದಲ್ಲದೇ, ತನ್ನ ತವರು ಮನೆಗೂ ಕೀರ್ತಿ ತಂದಾಕೆ ಎಂದರೆ ಅತಿಶಯೋಕ್ತಿಯೇನಲ್ಲಾ. ಒಬ್ಬರ ಅಗಲಿಕೆ ಮತ್ತೊಬ್ಬರನ್ನು ಸದಾಕಾಲವೂ ಕಾಡುತ್ತಿರುತ್ತದೆ ಎಂದರೆ ಅದು ಆ ಅಗಲಿದವರು ಗಳಿಸಿದ ಪ್ರೀತಿ ವಿಶ್ವಾಸ ಎಂದರೆ ತಪ್ಪಾಗಲಾರದು. ಹೆಸರು ಲಕ್ಷ್ಮೀ ಎಂದಿದ್ದರೂ ಹಣದ ಹಿಂದೆ ಎಂದೂ ಬೀಳದೇ, ಎಲ್ಲರಿಗೂ ಸಹನಾ ಮಣಿಯಾಗಿ, ಅಜಾತಶತೃವಾಗಿ, ಅನ್ನಪೂರ್ಣೆಯಾಗಿ ಆನಂದದಿಂದ ತುಂಬು ಜೀವನ ನಡೆಸಿದಾಕೆ. ಆಕೆ ಆಸ್ತಿ ಅಂತಸ್ತನ್ನು ಗಳಿಸದೇ ಇರಬಹುದು ಆದರೆ ಆಕೆಯ ಅಂತಿಮ ದರ್ಶನಕ್ಕೆ ಕೇವಲ ಬಂಧು-ಮಿತ್ರರಲ್ಲದೇ ಅಪಾರ ಸಂಖ್ಯೆಯ ನನ್ನಂತಹ ನೆರೆಹೊರೆಯವರು ನೆರೆದಿದ್ದರು ಎಂದರೆ ಅದುವೇ ಆಕೆ ಜೀವನ ಪೂರ್ತಿ ಸಂಪಾದಿಸಿದ ಸ್ನೇಹ, ಪ್ರೀತಿ ಮತ್ತು ವಿಶ್ವಾಸ. ಈ ಸ್ನೇಹ ಪ್ರೀತಿ ವಿಶ್ವಾಸ ಆಕೆಯೊಂದಿಗೇ ಅಳಿಸಿ ಹೋಗದೇ ಅದು ಖಂಡಿತವಾಗಿಯೂ ಆವರ ಕುಟುಂಬವನ್ನು ಸದಾ ಕಾಲವೂ ಕಾಪಾಡುತ್ತಲೇ ಇರುತ್ತದೆ ಇದಕ್ಕೇ ಅಲ್ಲವೇ ಹೇಳುವುದು ಸಾರ್ಥಕ ಬದುಕು ಎಂದು.

ಏನಂತೀರೀ?

3 thoughts on “ಸಾರ್ಥಕ ಬದುಕು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s