ಹರಕೆ

ತಮ್ಮ ನಾನಾ ರೀತಿಯ ಇಚ್ಚೆಗಳನ್ನು ಈಡೇರಿಸಲು ಭಗವಂತನ ಬಳಿ ಬೇಡಿಕೊಳ್ಳುವ ಸಮಯದಲ್ಲಿ ಭಕ್ತಿಯಿಂದ ಭಗವಂತನಿಗೆ ಏನದರೊಂದು ಕಾಣಿಕೆಯನ್ನು ಸಮರ್ಪಿಸುತ್ತೇನೆಂದು ಕೇಳಿಕೊಳ್ಳುವುದು ನಮ್ಮಲ್ಲಿರುವ ವಾಡಿಕೆ. ಆ ರೀತಿಯಾಗಿ ಕೇಳಿಕೊಳ್ಳುವ ಪದ್ದತಿಯನ್ನೇ ಹರಕೆ ಎನ್ನುತ್ತಾರೆ. ಒಂದು ಪಕ್ಷ ಅವರ ಆಭಿಪ್ಸೆಗಳು ಅವರ ಇಚ್ಚೆಯ ಅನುಗುಣವಾಗಿ ಈಡೇರಿದ ಸಮಯದಲ್ಲಿ ತಾವು ಕಟ್ಟಿಕೊಂಡ ಹರಕೆಯನ್ನು ಭಕ್ತಿಯಿಂದ ಭಗವಂತನಿಗೆ ಸಮರ್ಪಿಸಿ ಧನ್ಯತಾಭಾವನೆಯನ್ನು ಪಡೆಯುತ್ತಾರೆ. ಈ ರೀತಿಯಾಗಿ ಹರಕೆ ಹೊತ್ತ ಸಮಯದಲ್ಲಾದ ಮೋಜಿನ ಸಂಗತಿಯೇ ಇಂದಿನ ಕಥಾವಸ್ತು.

ಶ್ಯಾಮರಾಯರು ಅಂದಿನ ಕಾಲಕ್ಕೇ ಎಸ್. ಎಸ್.ಎಲ್.ಸಿ ಫಸ್ಟ್ ಕ್ಲಾಸಿನಲ್ಲಿ ಮುಗಿಸಿ ಮನೆಯ ಕಷ್ಟವನ್ನು ನೋಡಲಾರದೇ, ಓದನ್ನು ಮುಂದುವರಿಸಲಾಗದೇ ಯಾವುದಾರೂ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿರುವಾಗಲೇ ಅವರಿಗೆ ದೂರದ ಕೇಂದ್ರ ಸರ್ಕಾರದ ಕೆಲಸ ಸಿಗುತ್ತದೆ. ಅಯ್ಯೋ ಕಣ್ಣ ಮುಂದೆ ಇದ್ದು ಯಾವುದದರೂ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದರೂ ಸಾಕು ಅಷ್ಟು ದೂರ ಹೋಗುವುದೇಕೆ ಎಂದು ಮನೆಯವರೆಲ್ಲರೂ ಹೇಳಿದರೂ, ಸಿಕ್ಕ ಕೆಲಸವನ್ನು ಬಿಡುವುದು ಬೇಡ. ಅಲ್ಲೇ ಸ್ವಲ್ಪ ವರ್ಷಗಳು ಕೆಲಸ ಮಾಡಿ ಅದಾದ ನಂತರ ಇಲ್ಲಿಗೇ ವರ್ಗಾವಣೆ ಮಾಡಿಸಿಕೊಳ್ಳೋಣ ಎಂದು ಮನೆಯವರಿಗಲ್ಲರಿಗೂ ಸಮಾಧಾನ ಪಡಿಸಿ ದೂರದ ದೆಹಲಿಗೆ ಪ್ರಯಾಣಿಸಿಯೇ ಬಿಟ್ಟರು ಶ್ಯಾಮರಾಯರು.

ಆರಂಭದ ಸ್ವಲ್ಪ ದಿನಗಳು ಭಾಷೆ ಮತ್ತು ಆಚಾರ ವಿಚಾರಗಳಬಗ್ಗೆ ಸ್ವಲ್ಪ ಕಷ್ಟ ಅನುಭರಿಸಿದರೂ ಕೆಲ ಸಮಯದಲ್ಲೇ ಸಂಪೂರ್ಣವಾಗಿಯೇ ಉತ್ತರ ಭಾರತೀಯರೇ ಆಗಿಹೋಗಿ ಮದುವೆಯೂ ಆಗಿ ಹೋಯಿತು. ಮದುವೆಯಾಗಿ ಸುಮಾರು ಮೂರ್ನಾಲ್ಕು ವರ್ಷಗಳಾದರೂ ಅವರಿಗೆ ಮಕ್ಕಳಾಗದ ಕಾರಣ ಮನೆಯವರೆಲ್ಲರೂ ಚಿಂತಿತರಾಗಿದ್ದರು. ಶ್ಯಾಮರಾಯರ ತಂದೆ ತಾಯಿಯರಂತೂ ನಾವು ಕಣ್ಣು ಮುಚ್ಚುವ ಹೊತ್ತಿಗೆ ಮೊಮ್ಮಕ್ಕಳನ್ನು ಆಡಿಸುವ ಭಾಗ್ಯ ನಮಗಿಲ್ಲವಾಯಿತೇ ಎಂದು ಒಂದು ರೀತಿಯಾಗಿ ಮನಸ್ಸಿಗೆ ತಾಗುವಂತೆಯೇ ಬಾಯಿ ಬಿಟ್ಟು ಮೂರ್ನಾಲ್ಕು ಬರಿ ಮಗ ಸೊಸೆಯವರ ಬಳಿ ಹೇಳಿಕೊಂಡಿದ್ದೂ ಉಂಟು. ಹೇಗೂ ಆಗಲೀ ಮನೆ ದೇವರಿಗೆ ಒಂದು ಹರಕೆ ಮಾಡಿಕೋ ಶ್ರೀಘ್ರವಾಗಿ ಮಕ್ಕಳಾಗುತ್ತದೆ ಎಂದು ಸಲಹೆಯನ್ನೂ ಇತ್ತರು. ಆದರೆ ದೇವರನ್ನು ಅಷ್ಟಾಗಿ ನಂಬದ ಶ್ಯಾಮರಾಯರು, ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೇ? ಎಂದು ತಿರಸ್ಕರ ಭಾವದಿಂದ ನೋಡಿ ಪತಿ ಪತ್ನಿಯರು ವೈದ್ಯರ ಬಳಿ ಹೋಗಿ ತಮ್ಮ ಅಳಲನ್ನು ತೋಡಿಕೊಂಡರು. ವೈದ್ಯರು ಅವರಿಬ್ಬರನ್ನೂ ಸಂಪೂರ್ಣವಾಗಿ ಪರೀಕ್ಷಿಸಿ ನೀವಿಬ್ಬರೂ ಆರೋಗ್ಯವಾಗಿದ್ದೀರಿ ನಿಮ್ಮಲ್ಲಿ ಮಕ್ಕಳಾಗದಿರುವುದಕ್ಕೇ ಯಾವುದೇ ಸಮಸ್ಯೆಗಳಿಲ್ಲ ಎಂದು ಕೆಲ ಔಷಧಿಗಳನ್ನು ಬರೆದು ಕೊಟ್ಟರು. ಇಷ್ಟಾದರೂ ಮನೆಯವರ ಒತ್ತಡಕ್ಕೆ ಮಣಿದು ತಮಗೆ ಮಕ್ಕಳಾದರೇ ತಮ್ಮ ಮನೆದೇವರು ತಿರುಪತಿ ತಿಮ್ಮಪ್ಪನಿಗೆ ಚಿನ್ನದ ಉಂಗುರ ಮಾಡಿಸಿ ಹಾಕಿಸುತ್ತೀನೆಂದು ಹರಕೆ ಮಾಡಿಕೊಂಡರು. ದೇವರ ದಯೆಯೋ ಅಥವಾ ವೈದ್ಯರ ಚಿಕಿತ್ಸೆಯ ಫಲವೋ ಎನ್ನುವಂತೆ ವರ್ಷದೊಳಗೇ ಅವರಿಗೆ ಮುದ್ದಾದ ಗಂಡು ಮಗುವಿನ ಜನನವಾಗಿ ಎಲ್ಲರೂ ಖುಷಿ ಪಟ್ಟರು. ನದಿ ದಾಟಿದ ಮೇಲೆ ಅಂಬಿಗನ ನಂಟೇಕೆ ಎನ್ನುವಂತೆ ಮಕ್ಕಳಾದ ಮೇಲೆ ತಾವು ಹೊತ್ತಿದ್ದ ಹರಕೆಯನ್ನು ಸಂಪೂರ್ಣವಾಗಿ ಮರತೇ ಬಿಟ್ಟರು ಶ್ಯಾಮರಾಯರು.

ಕೆಲ ವರ್ಷಗಳ ನಂತರ ಕನಸಿನಲ್ಲಿ ಪುಟ್ಟ ಮಗುವಿನ ರೂಪದಲ್ಲಿ ಭಗವಂತ ಬಂದು ನಿನ್ನ ಇಚ್ಚೆಯಂತೆ ನಿನಗೆ ಮಕ್ಕಳನ್ನು ಕರುಣಿಸಿದರೂ ನನ್ನ ಹರಕೆಯನ್ನು ತೀರಿಸಿಲ್ಲ ಎಂದು ನೆನಪಿಸಿದಂತಾಯಿತು. ಬೆಳಗಿನ ಜಾವದಲ್ಲಿ ಕಂಡ ಕನಸನ್ನು ತನ್ನ ಮಡದಿ ಮತ್ತು ತಾಯಿಯ ಬಳಿ ಹೇಳಿಕೊಂಡಾಗಾ, ಅಯ್ಯೋ ರಾಮ ರಾಮ ಅಪಚಾರವಾಯಿತು. ಈ ಕೂಡಲೇ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಅವನಿಗೆ ಕಾಣಿಕೆ ಒಪ್ಪಿಸೋಣ ಎಂದರು. ಆದರೆ ಶ್ಯಾಮರಾಯರು ದೇವರನ್ನು ಅಷ್ಟಾಗಿ ನಂಬುತ್ತಿರಲಿಲ್ಲವಾದ್ದರಿಂದ ನಮಗೆ ದೇವರ ದಯೆಯಿಮ್ದ ಮಕ್ಕಳಾಗಲಿಲ್ಲ. ವೈದ್ಯರ ಔಷಧಿಯ ಪರಿಣಾಮವಾಗಿ ಮಕ್ಕಳಾಯಿತು ಎಂದು ಎಷ್ಟೇ ವಾದಿಸಿದರೂ ಸತಿಯ ಅಪ್ಪಣೆಯ ಮುಂದೆ ಪತಿಯ ಆಟವೇನೂ ನಡೆಯದೇ ಕಾಣಿಕೆಯನ್ನು ತೀರಿಸಲೇ ಬೇಕೆಂದು ನಿರ್ಧರಿಸಲಾಯಿತು. ದೂರದ ದೆಹಲಿಯಿಂದ ತಿರುಪತಿಗೆ ಬಂದು ಹೋಗಲು ಸಾವಿರಾರು ರೂಪಾಯಿಗಳಾಗುವ ಕಾರಣ, ಭಗವಂತ ಸರ್ವಾಂತರಿ. ಎಲ್ಲಿಂದ ಬೇಕಾದರೂ ಸಮರ್ಪಿಸಿದರೂ ಅವನಿಗೆ ಸಲ್ಲಬೇಕಾದದ್ದು ಸಲ್ಲುತ್ತದೆ ಏಂಬ ತಮ್ಮ ವಿತಂಡ ವಾದ ಮಂಡಿಸಿ ಅಲ್ಲಿಯೇ ಹತ್ತಿರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹರಕೆ ಹೊತ್ತಿದ್ದಂತೆ ಚಿನ್ನದ ಉಂಗುರ ಸಮರ್ಪಿಸದೇ ಸ್ವಲ್ಪ ದುಡ್ಡನ್ನು ಹುಂಡಿಗೆ ಹಾಕಿ ತಮ್ಮ ಹರಕೆ ತೀರಿತೆಂದು ಭಾವಿಸಿ ಮನೆಗೆ ಹಿಂದಿರುಗಿದರು.

ಆದರೆ ಅದೇ ರಾತ್ರಿ ಮತ್ತೊಮ್ಮೆ ಭಗವಂತ ಅವರ ಸ್ವಪ್ನದಲ್ಲಿ ಬಂದು ನೀನು ಸಂಪೂರ್ಣವಾಗಿ ಕಾಣಿಕೆ ಸಲ್ಲಿಸಿಲ್ಲವೆಂದು ಜ್ಞಾಪಿಸಿದಂತಾಯಿತು. ಇದರಿಂದ ಸ್ವಲ್ಪ ಮುಜುಗೊರಗೊಂಡ ರಾಯರು, ಉಂಗುರಕ್ಕೆ ಎಷ್ಟು ದುಡ್ಡಾಗುತ್ತದೋ ಅಷ್ಟು ದುಡ್ಡನ್ನು ಕಾಣಿಕೆಯಾಗಿ ಎತ್ತಿಟ್ಟು ಅದನ್ನು ಮುಂದೆಂದಾದರೂ ತಿರುಪತಿಗೆ ಹೋದಾಗ ಅರ್ಪಿಸಿದರಾಯಿತು ಎಂದು ತೀರ್ಮಾನಿಸಿದರು. ಅದಾದ ಕೆಲ ವರ್ಷಗಳ ನಂತರ ತಿರುಪತಿಗೆ ಕುಟುಂಬ ಸಮೇತ ಹೋಗುವಾಗ ಆವರ ಮಡದಿ, ಹೇಗೋ ನಮ್ಮ ಬಳಿ ಹಣವಿದೆ ಸುಮ್ಮನೆ ಎಂದೋ ಎತ್ತಿಟ್ಟಿದ್ದ ಹಣವನ್ನು ಕಾಣಿಕೆಯನ್ನಾಗಿ ಸಮರ್ಪಿಸುವ ಬದಲು ಚಿನ್ನದ ಉಂಗುರವನ್ನೇ ಕೊಡೋಣ ಎಂದರು. ಹೂಂ.. ಚಿನ್ನ್ದ ಬೆಲೆ ಗನಗಕ್ಕೇರಿದೆ. ಈಗ ಉಂಗುರ ಮಾಡಿಸಲು ಸಾಧ್ಯವಿಲ್ಲ. ಹೇಗೋ ಅಂದಿನ ದಿನಕ್ಕೆ ಚಿನ್ನದ ಉಂಗುರಕ್ಕೆ ಸರಿಸಮಾನವಾದ ಹಣವನ್ನೇ ಗಂಟು ಕಟ್ಟಿ ಎತ್ತಿಟ್ಟಾಗಿದೆ ಅದನ್ನೇ ಕೊಟ್ಟರಾಯಿತು ಎಂದು ಮಡದಿಯ ಮೇಲೆ ಗದುರಿದರು. ಇನ್ನು ಹೆಚ್ಚು ಮಾತನಾಡಿದರೆ, ದೇವರ ಸನ್ನಿಧಾನಕ್ಕೆ ಹೋಗುವುದನ್ನೇ ರದ್ದು ಮಾಡಬಹುದೆಂಬ ಕಾರಣದಿಂದ ಸುಮ್ಮನಾದರು ಅವರ ಪತ್ನಿ.

timmappa3

ಅವರು ನಿರ್ಧರಿಸಿದ ದಿನದಂದು ದೂರದ ದೆಹಲಿಯಿಂದ ಬೆಂಗಳೂರಿಗೆ ಬಂದು ಅಲ್ಲಿ ತಮ್ಮ ಪೋಷಕರನ್ನೂ ಕರೆದುಕೊಂಡು ಎಲ್ಲರೂ ಒಟ್ಟಿಗೆ ತಿರುಪತಿಯನ್ನು ತಲುಪಿದರು. ವಾರಾಂತ್ಯವಾದ್ದರಿಂದ ಎಂದಿಗಿಂತಲೂ ಅಧಿಕ ಜನ ಅಲ್ಲಿ ಸೇರಿದ್ದರು. ಸರತಿಯ ಸಾಲಿನಲ್ಲಿ ನೂಗು ನುಗ್ಗಾಟಗಳ ಮಧ್ಯದಲ್ಲಿಯೂ ಹಾಗೂ ಹೀಗೂ ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಅಲ್ಲಿ ನೇತು ಹಾಕಿದ್ದ ದೊಡ್ಡದಾದ ಹಳದೀ ಬಣ್ಣದ ಜೋಳಿಗೆ ರೂಪದ ಹುಂಡಿಗೆ ಜೋಪಾನವಾಗಿ ಎತ್ತಿಟ್ಟಿದ್ದ ಕಾಣಿಕೆಯನ್ನು ಹಾಗಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಯಾರೂ ತಳ್ಳಿದಂತಾಗಿ ಆಯತಪ್ಪಿ ಬೀಳುವಂತಾದರೂ ಶ್ಯಾಮರಾಯರು ಕೂಡಲೇ ಆ ಜೋಳಿಗೆಯನ್ನು ಹಿಡಿದು ಕೊಳ್ಳುವ ಪ್ರಯತ್ನದಲ್ಲಿರ ಬೇಕಾದಾಗ ಅವರಿಗೇ ತಿಳಿಯದಂತೆ ಆಚಾನಕ್ಕಾಗಿ ತಮ್ಮ ಕೈಯಲ್ಲಿದ್ದ ಕಾಣಿಕೆಯನ್ನು ಹುಂಡಿಗೆ ಹಾಕಿಯೇ ಬಿಟ್ಟರು. ಅದರ ಜೊತೆ ಜೊತೆಯಲ್ಲಿಯೇ ಅವರ ಕೈ ಬೆರಳಿನಲ್ಲಿದ್ದ ಉಂಗುರವೂ ಕಳಚಿ ಹುಂಡಿಯೊಳಗೆ ಬಿದ್ದು ಹೋಯಿತು. ಅಯ್ಯೋ ನನ್ನ ಉಂಗುರ, ಉಂಗುರ ಎಂದು ಜೋರಾಗಿ ಕೂಗಿಕೊಂಡರೂ ಅಲ್ಲಿ ಯಾರೂ ಅವರ ನೆರವಿಗೆ ಬರುವ ಪರಿಸ್ಥಿತಿಯಲ್ಲಿರಲಿಲ್ಲ. ಸ್ಮಶಾನಕ್ಕೆ ಹೋದ ಹೆಣ, ತಿರುಪತಿಯ ಹುಂಡಿಯಲ್ಲಿ ಹಾಕಿದ ಹಣ ಎರಡೂ ಎಂದಿಗೂ ಹಿಂದಿರಿಗಿ ಬಾರದೂ ಎನ್ನುವಂತೆ ತಿರುಪತಿ ತಿಮ್ಮಪ್ಪನಿಗೆ ಹಣದ ಜೊತೆ ಹರಕೆ ಹೊತ್ತಿ ಕೊಂಡಿದ್ದಂತೆ ಚಿನ್ನದ ಉಂಗುರವೂ ಸಮರ್ಪಣೆಯಾಗಿ ಹೋಯಿತು. ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಆ ಕ್ಷಣದಲ್ಲಿ ರಾಯರ ಮುಖ ಇಂಗು ತಿಂದ ಮಂಗನಂತಾಗಿತ್ತು. ಇದನ್ನು ನೋಡುತ್ತಿದ್ದ ರಾಯರ ಕುಟುಂಬದ ಸದಸ್ಯರಿಗೆ ಅಬ್ಬಾ ಈ ರೀತಿಯಲ್ಲಾದರೂ ಅವರ ಹರಕೆ ಸಂಪೂರ್ಣವಾಗಿ ತೀರಿತಲ್ಲಾ ಎಂದು ಮನಸ್ಸಿನಲ್ಲಿಯೇ ಮಂಡಿಗೆ ತಿಂದಷ್ಟು ಸಂತೋಷವಾಯಿತಾದರೂ ಅದನ್ನು ಹೊರಗೆ ತೋರಿಸಿಕೊಂಡರೆ ಎಲ್ಲಿ ರಾಯರಿಗೆ ಬೇಸರವಾಗುತ್ತದೋ ಎಂದು ತಿಳಿಸಿ ಛೇ.. ಛೇ.. ಹೀಗೆ ಆಗಬಾರದಿತ್ತು ಎಂದು ಲೊಚಲೊಚಗುಟ್ಟುತ್ತಾ ರಾಯರನ್ನು ಸಮಾಧಾನ ಪಡಿಸುವಷ್ಟರಲ್ಲಿ ಸುಸ್ತಾಗಿ ಬಿಟ್ಟರು.

timmmapp2

ಈ ರೀತಿಯಾಗಿ ಭಗವಂತನನ್ನೇ ಬೇಸ್ತುಗೊಳಿಸಲು ಹೋಗಿ ಶ್ಯಾಮರಾಯರು ಖುದ್ದಾಗಿ ತಾವೇ ಬೇಸ್ತು ಬಿದ್ದು, ತಿರುಪತಿ ತಿಮ್ಮಪ್ಪನ ಮೂರು ನಾಮವನ್ನು ಜೋರಾಗಿಯೇ ತಮ್ಮ ಹಣೆಗೆ ಹಾಕಿಸಿಕೊಂಡು ಸರಿಯಾದ ಹರಕೆಯ ಕುರಿಯಾಗಿ ಬಿಟ್ಟರು. ದುಡ್ಡಿಗೆ ದುಡ್ಡೂ ಹೋಯಿತು ಅದರೊಂದಿಗೆ ಮದುವೆಯಲ್ಲಿ ಮಾವನವರು ಕೊಡಿಸಿದ್ದ ಉಂಗುರವೂ ಭಗವಂತನ ಪಾಲಾಗಿತ್ತು. ಅದಕ್ಕೇ ಹೇಳುವುದು. ಯಾವುದನ್ನು ನಮ್ಮಕೈಯಲ್ಲಿ ಮಾಡಲು ಸಾಧ್ಯವೋ ಆದನ್ನೇ ಆಡಬೇಕು ಮತ್ತು ಯಾವುದನ್ನು ಆಡುತ್ತೇವೆಯೋ ಅದನ್ನೇ ಕಾರ್ಯ ಸಾಧುವನ್ನಾಗಿ ಮಾಡಬೇಕು.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

3 thoughts on “ಹರಕೆ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s