ಅನಂತ ಚತುರ್ದಶಿ ವ್ರತ

ಭಾದ್ರಪದ ಮಾಸದ ಶುಕ್ಲ ಪಕ್ಷದ ಹದಿನಾಲ್ಕನೇಯ ದಿನವಾದ ಚತುರ್ದಶಿಯನ್ನು ಅನಂತ ಚತುರ್ದಶಿ ಅಥವಾ ಅನಂತನ ಹಬ್ಬ ಎಂದು ಆಚರಿಸಲಾಗುತ್ತದೆ. ಮಹಾರಾಷ್ಟ್ರ ಮತ್ತು ಆಂಧ್ರಪದೇಶಗಳಲ್ಲಿ ಭಾದ್ರಪದ ಶುಕ್ಲ ಚೌತಿಯಂದು ಪ್ರತಿಷ್ಠಾಪಿಸಿದ ಶ್ರೀ ಗಣೇಶನ ಮೂರ್ತಿಯನ್ನು ಇದೇ ದಿನದಂದು ಸಂಭ್ರಮಾಚರಣೆಯಿಂದ ಬಹಳ ಅದ್ದೂರಿಯಾಗಿ ವಿಸರ್ಜಿಸುತ್ತಾರೆ. ಹಾಗಾಗಿ ಈ ದಿನವನ್ನು ಗಣೇಶ್ ವಿಸರ್ಜನ್ ದಿವಸ್ ಎಂದೂ ಕರೆಯುವ ರೂಡಿಯಲ್ಲಿದೆ.

ಈ ದಿನದಂದು ವಿಷ್ಣು ದೇವರು ಸಾವಿರ ಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ. ಈ ದಿನದಂದು ಶ್ರದ್ಧಾ ಭಕ್ತಿಯಿಂದ ಅನಂತ ಪದ್ಮನಾಭವನ್ನು ಭಜಿಸಿದರೆ, ದೇವರು ಅವರ ಇಷ್ಟಾರ್ಥಗಳನ್ನು ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಯನ್ನು ಕರುಣಿಸುತ್ತಾನೆ ಎಂಬ ನಂಬಿಕೆ ಇರುವ ಕಾರಣವಿರುವುದರಿಂದ ನಮ್ಮ ರಾಜ್ಯವೂ ಒಳಗೊಂಡಂತೆ ಆಂಧ್ರಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಹೆಚ್ಚಿನವರು ಆಚರಿಸುತ್ತಾರೆ. ಈ ಹಬ್ಬ ಸಂಕ್ರಾಂತಿ ಮತ್ತು ಯುಗಾದಿಯಂತೆ ಎಲ್ಲರ ಮನೆಗಳಲ್ಲೂ ಆಚರಿಸದೇ, ಕೇವಲ ಯಾರ ಮನೆಗಳಲ್ಲಿ ವ್ರತಾಚರಣೆಯನ್ನು ಹಿಡಿದಿರುತ್ತಾರೋ ಅಂತಹವರ ಮನೆಗಳಲ್ಲಿ ಮಾತ್ರವೇ ಆಚರಿಸಲಾಗುತ್ತದೆ. ಯಾರು ಬೇಕಾದರೂ ಈ ವ್ರತವನ್ನು ಹಿಡಿಯಬಹುದಾಗಿದೆ. ಆದರೆ ಒಮ್ಮೆ ವ್ರತಮಾಡಲು ಸಂಕಲ್ಪ ಮಾಡಿದಲ್ಲಿ ಕನಿಷ್ಟ ಪಕ್ಷ 14 ವರ್ಷಗಳಾದರೂ ಅದನ್ನು ಸತತವಾಗಿ ಬಿಡದೇ ಆಚರಿಸಬೇಕೆಂಬ ನಿಯಮವಿದೆ. ಯಾವುದಾರೂ ಅಸೌಖ್ಯವಾಗಲೀ ಅಥವಾ ಮುಟ್ಟುಚೆಟ್ಟಿನಿಂದ ಭಾದ್ರಪದ ಚರ್ತುದಶಿಯಂದು ಆಚರಿಸಲಾಗದವರು, ದಸರಾ ಹಬ್ಬದ ಸಮಯದಲ್ಲೂ ಆಚರಿಸಬಹುದಾಗಿದೆ.

ಈ ಅನಂತ ವ್ರತದ ಬಗ್ಗೆ ಅನೇಕ ಕಥೆಗಳು ನಮ್ಮ ಪುರಾಣದಲ್ಲಿ ಇದ್ದು ಅವುಗಳಲ್ಲಿ ಪ್ರಮುಖವಾದವು ಹೀಗಿವೆ.

ಕೃತಾಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿಗೆ ದೀಕ್ಷಾ ಎಂಬ ಮಡದಿ ಮತ್ತು ಸುಶೀಲ ಎಂಬ ಮಗಳಿದ್ದಳು. ಕೆಲ ಕಾಲದಲ್ಲಿ ಅನಾರೋಗ್ಯದ ಕಾರಣ ಪತ್ನಿ ದೀಕ್ಷ ವಿಧಿವಶವಾದಾಗ ಸುಮಂತ ಕರ್ಕಶ ಎಂಬುವಳನ್ನು ಮದುವೆಯಾಗುತ್ತಾನೆ. ಯಥಾ ಪ್ರಕಾರ ಮಲತಾಯಿ ಧೋರಣೆಯಿಂದ ತನ್ನ ಹೆಸರಿಗೆ ಅನ್ವರ್ಥದಂತೆ ಕರ್ಕಶ ತನ್ನ ಮಲ ಮಗಳಾದ ಸುಶೀಲೆಯನ್ನು ಪ್ರೀತಿಯಿಂದ ಕಾಣದೆ, ಅನೇಕ ಹಿಂಸೆ ಕೊಡುತ್ತಿರುತ್ತಾಳೆ. ತನ್ನ ಎರಡನೇ ಹೆಂಡತಿಯು ಮಗಳಿಗೆ ಕೊಡುವ ಕಾಟವನ್ನು ನೋಡಲಾರದೆ ಮಗಳನ್ನು ಕೌಂಡಿನ್ಯ ಎಂಬುವನೊಂದಿಗೆ ಮದುವೆ ಮಾಡಿಕೊಟ್ಟು ಆಕೆಯ ಗಂಡನ ಮನೆಗೆ ಕಳುಹಿಸಿಕೊಡುತ್ತಾನೆ.

ತವರು ಮನೆಯಿಂದ ಗಂಡನಮನೆಗೆ ಹೋಗುತ್ತಿದ್ದ ದಾರಿಯಲ್ಲಿ ಯುಮನಾ ನದಿ ತಟದಲ್ಲಿ ಕೆಲ ಮುತ್ತೈದೆಯರು ಪೂಜೆ ಮಾಡುತ್ತಿರುವುದನ್ನು ಕಂಡು ಆ ಪೂಜೆಯ ವಿವರಗಳು ಮತ್ತು ಫಲಗಳಿಂದ ಪ್ರೇರಿತಳಾಗಿ ತನಗೆ ಮಕ್ಕಳಾಗಲು ಮತ್ತು ತನ್ನ ಗಂಡನ ವೃತ್ತಿಯಲ್ಲಿ ಯಶಸ್ಸು ಕಾಣುವಂತಾಗಲು ಅನಂತ ವ್ರತವನ್ನು ಮಾಡಬೇಕೆಂದು ನಿರ್ಧರಿಸಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ. ಆಕೆಯ ವ್ರತದಿಂದ ಸಂತೃಪ್ತನಾದ ಪದ್ಮನಾಭ ಆ ದಂಪತಿಗಳಿಗೆ ಅವರ ಸಂಪತ್ತು ವೃದ್ಧಿಯಾಗಿ ಅವರ ಸಕಲ ಇಷ್ಟಾರ್ಥಗಳು ನೆರವೇರಲೆಂದು ಆಶೀರ್ವದಿಸುತ್ತಾನೆ. ಈ ರೀತಿಯ ವ್ರತಾಚರಣೆಗಳ ಬಗ್ಗೆ ಆಕೆಯ ಗಂಡನಾದ ಕೌಂಡಿನ್ಯನಿಗೆ ನಂಬಿಕೆ ಬಾರದೆ,ಆತ ವ್ರತದ ಅಂಗವಾಗಿ ತನ್ನ ಮಡದಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆ ಎಸೆಯುತ್ತಾನೆ. ಈ ಘಟನೆಯ ನಂತರ ಅವರ ಸಂಪತ್ತು ನಿಧಾನವಾಗಿ ನಶಿಸುತ್ತಾ ಹೋಗಿ ಕ್ರಮೇಣ ಅವರು ಕಡು ಬಡವರಾಗುತ್ತಾರೆ.

anant1ನಾನಾ ರೀತಿಯ ಕಷ್ಟ ನಷ್ಟಗಳನ್ನು ಅನುಭವಿಸಿದ ನಂತರ ಕೌಂಡಿನ್ಯನಿಗೆ ತನ್ನ ತಪ್ಪಿನ ಅರಿವಾಗಿ, ವಿಷ್ಣುವನ್ನು ಕುರಿತು ಅಖಂಡ ತಪಸ್ಸನ್ನು ಮಾಡಿ ಶ್ರೀ ಮಹಾವಿಷ್ಣುವನ್ನು ಪ್ರಸನ್ನಗೊಳಿಸಿಕೊಳ್ಳುತ್ತಾನೆ. . ಭಗವಾನ್ ವಿಷ್ಣು ಪರಮಾತ್ಮ ಕೌಂಡಿನ್ಯಗಿನೆ ದರ್ಶನವನ್ನಿತ್ತು, 14 ವರ್ಷಗಳ ಕಾಲ ಅನಂತ ಪದ್ಮನಾಭ ವ್ರತವನ್ನು ಆಚರಿಸಿದರೆ, ಕಳೆದು ಕೊಂಡ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡುತ್ತಾನೆ. ಅದರಂತೆ ದಂಪತಿಗಳು ಶ್ರಧ್ಧಾ ಭಕ್ತಿಯಿಂದ ಮುಂದಿನ 14 ವರ್ಷಗಳ ಕಾಲ ಪ್ರತಿವರ್ಷ ಅನಂತ ಪದ್ಮನಾಭ ವ್ರತ ಮಾಡಿ ಕಳೆದುಕೊಂಡಿದ್ದ ಎಲ್ಲಾ ಸಿರಿ ಸಂಪತ್ತುಗಳನ್ನು ಮರಳಿ ಪಡೆಯುತ್ತಾರೆ. ಹೀಗೆ ಅನಂತ ಪದ್ಮನಾಭ ವ್ರತ ಆಚರಣೆಗೆ ಬಂದಿತು ಎಂಬ ಪ್ರತೀತಿಯಿದೆ.

ಆದೇ ರೀತಿ ದ್ವಾಪರ ಯುಗದಲ್ಲಿ ಪಾಂಡವರು ಕೌರವರೊಂದಿಗೆ ಮೋಸದ ಜೂಜಿನಲ್ಲಿ ಸೋತು 14 ವರ್ಷಗಳ ಕಾಲ ವನವಾಸವನ್ನು ಮತ್ತು ಒಂದು ವರ್ಷ ಅಜ್ಞಾತವಾಸವನ್ನು ಅನುಭವಿಸಬೇಕಾಗುತ್ತದೆ. ಈ ಸಮಯದಲ್ಲಿ ಶ್ರೀ ಕೃಷ್ಣ ಪರಮಾತ್ಮನು ಪಾಂಡವರ ಕೈಯಿಂದ ಶ್ರೀ ಅನಂತ ವ್ರತವನ್ನು ಆಚರಿಸಿದ ಫಲವಾಗಿ ಅವರಿಗೆ ಮರಳಿ ರಾಜ್ಯ ಭಾಗ್ಯ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

anantha_vratha

ಅನಂತ ಚತುರ್ದಶಿ ವ್ರತಾಚರಣೆ ವಿಧಿ ವಿಧಾನಗಳು ಹೀಗಿವೆ:

anant3ಹಬ್ಬದ ದಿನದಂದು ಮನೆಯವರೆಲ್ಲರೂ ಹೊತ್ತಿಗೆ ಮಂಚೆಯೇ ಎದ್ದು ಶುಚಿರ್ಭೂತರಾಗಿ, ಹೆಂಗಳೆಯರು ಮನೆಯ ಅಂಗಳ ಮುಂಬಾಗಿಲು ಗುಡಿಸಿ ಸಾರಿಸಿ ದೊಡ್ಡ ದೊಡ್ಡ ರಂಗೋಲಿಯಿರಿಸಿ ಹೊಸಿಲಿಗೆ ಅರಿಶಿನ ಕುಂಕುಮವಿರಿಸಿ ಮನೆಯ ಮುಂದಿನ ತುಳಸಿ ಕಟ್ಟೆಗೆ ಗೆಜ್ಜೆವಸ್ತ್ರವಿಟ್ಟು ಪೂಜಿಸಿ ಅನಂತದೇವರ ಮಂಟಪ ಕಟ್ಟಿರುವ ಜಾಗದಲ್ಲಿ ರಂಗೋಲಿಹಾಕಿ ಮಣೆಹಾಕಿ ಅದರ ಮೇಲೆ ತಟ್ಟೆಯಲ್ಲಿ ಗೋಧಿ ಹರಡಿ ಅದರಮೇಲೆ ಎರಡು ಕಲಶ ಕೂಡಿಸುತ್ತಾರೆ. ಮೊದಲನೆಯದು ಅನಂತ ದೇವರ ಕಲಶವಾದರೆ ಮತ್ತೊಂದು ಯಮುನಾದೇವಿಯ ಕಲಶವಾಗಿರುತ್ತದೆ. ಮನೆಯ ಗಂಡಸರು, ಮನೆಯ ಹೆಬ್ಬಾಗಿಲಿಗೆ ಮಾವಿನ ತೋರಣ ಕಟ್ಟಿ, ದೇವರ ಮಂಟಪಕ್ಕೆ ಬಾಳೆಕಂದು ಕಟ್ಟಿ ಮಾವಿನ ತೋರಣ ಕಟ್ಟಿ ಪೂಜೆಗೆ ಸಿದ್ಧ ಪಡಿಸಿದರೆ, ಮನೆಯ ಹಿರಿಯರು ಮನೆಯ ಹತ್ತಿರದ ಬಾವಿ ಅಥವಾ ಕೆರೆಯಿಂದ ಮಡಿಯಲ್ಲಿ ನೀರನ್ನು ತಂದು. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಅದನ್ನು ಆ ಎರಡು ಕಲಶಗಳಿಗೆ ಹಾಕಿ ಅದರ ಮೇಲೆ ಹಾವಿನ ಹೆಡೆಯಂತೆ ಧರ್ಭೆಯಲ್ಲಿ ರಚಿಸಿಟ್ಟು ಅದರ ಮುಂದೆ ಸಾಲಿಗ್ರಾಮವನ್ನಿಟ್ಟು ಶೋಡಷೋಪಚಾರ ಪೂಜೆ ಮಾಡಿ 14 ಬಗೆಯ ಭಕ್ಷ್ಯಗಳಾದ ಅನ್ನ, ಪಾಯಸ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಆದಾದ ನಂತರ, ಅನಂತ ಪದ್ಮನಾಭನ ಕಥೆ ಓದಿ ಮಹಾಮಂಗಳಾರತಿ ಮಾಡಿ ಮನೆಯ ಎಲ್ಲಾ ಬಂಧು ಮಿತ್ರರೂ ಕೂಡಿ ಭಕ್ತಿಯಿಂದ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಭಗವಂತನನ್ನು ಕೋರಿಕೊಳ್ಳುತ್ತಾರೆ.

Anantana_Daraನಿರ್ವಿಘ್ನವಾಗಿ ಪೂಜೆಯು ಮುಗಿದ ನಂತರ ಮನೆಯ ಗಂಡಸರು ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಕೆಂಪು ಬಣ್ಣದ ದಾರ ಹಾಗೂ ಹೆಂಗಳೆಯರು ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದನ್ನು ಅನಂತನ ದಾರ ಅಥವಾ ನೋಂಬು ಎನ್ನುತ್ತಾರೆ. ಬೆಳಗಿನಿಂದ ಉಪವಾಸವಿದ್ದವರು ಎಲ್ಲರೂ ದೇವರ ನೈವೇದ್ಯವನ್ನು ಪ್ರಸಾದ ರೂಪದಲ್ಲಿ ಒಟ್ಟಿಗೆ ಕುಳಿತು ಭೋಜನ ಮಾಡುತ್ತಾರೆ.

ಕೆಲವರ ಮನೆಯವರ ಮನೆಯಲ್ಲಿ ಆದಿನ ರಾತ್ರಿಯಿಡೀ ಜಾಗರಣೆ ಮಾಡುತ್ತಾ ದೇವರ ಸ್ಮರಣೆ ಮಾಡಿ ಮಾರನೆಯ ದಿನ ಸ್ನಾನ ಸಂಧ್ಯಾವಂದನೆಯಾದ ನಂತರ ಆ ಕಳಸದ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುವ ಮೂಲಕ ಈ ಪೂಜೆ ಸಂಪೂರ್ಣವಾಗುತ್ತದೆ. ಈ ವ್ರತವನ್ನು ಆಚರಿಸುವವರ ಮನೆ ಅಥವಾ ದೇವಸ್ಥಾನಗಳಿಗೆ ಭೇಟಿ ಕೊಟ್ಟು ಆ ಕಳಸಗಳನ್ನು ಯಾರೇ ನೋಡಿದರೂ ಅವರ ಇಷ್ಟಾರ್ಥ ಗಳು ಫಲಿಸುತ್ತದೆ ಇನ್ನೂ ಕೆಲವರಿಗೆ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಈ ರೀತಿಯಾಗಿ ಪ್ರತೀ ಮನೆಗಳಲ್ಲಿ ತಮ್ಮ ಬಂಧು ಮಿತ್ರರ ಕೂಡಿ ಅನಂತ ಪದ್ಮನಾಭ ವ್ರತವನ್ನು ಆಚರಿಸಿದರೆ, ಮೈಸೂರು ಮತ್ತು ಕೊಡಗಿನ ನಿಖರವಾಗಿ ಮಧ್ಯದಲ್ಲಿರುವ ಹುಣಸೂರು ತಾಲ್ಲೂಕಿಗೆ ಸೇರಿರುವ ಚಿಲ್ಕುಂದ ಎಂಬ ಗ್ರಾಮದಲ್ಲಿ ಬಹಳ ಅದ್ದೂರಿಯಾಗಿ ಮತ್ತು ವಿಶೇಷವಾಗಿ ಆಚರಿಸುತ್ತಾರೆ. ಸರಿ ಸುಮಾರು 50-60 ರಷ್ಟು ಮನೆಗಳು ಇರುವ ಸಂಕೇತಿ (ಕನ್ನಡ ಮತ್ತು ತಮಿಳು ಮಿಶ್ತ್ರಿತ ಭಾಷೆಯನ್ನಾಡುವ ಬ್ರಾಹ್ಮಣರ ಉಪಸಮುದಾಯ) ಕುಟುಂಬಗಳು ಅತ್ಯಂತ ಬುದ್ಧಿವಂತಿಕೆ, ಪ್ರಜ್ಞಾವಂತಿಕೆ, ಸಂಗೀತ, ಗಮಕ, ಆಗಮ ಮತ್ತು ಆಚಾರ ವಿಚಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗಂತೂ ಪ್ರತೀ ಮನೆಯಲ್ಲೊಬ್ಬರು ಸಾಫ್ಟ್ವೇರ್ ಇಂಜೀನೀಯರ್ಗಳಾಗಿ ದೇಶ ವಿದೇಶಗಳಲ್ಲಿ ತಮ್ಮ ಊರಿನ ಹೆಸರನ್ನು ಪ್ರಖ್ಯಾತಿ ಗೊಳಿಸಿದ್ದಾರೆ. ಅತಿಥಿ ಸತ್ಕಾರಕ್ಕೆ ಅತ್ಯಂತ ಹೆಸರುವಾಸಿಯಾಗಿರುವ ಈ ಊರಿನಲ್ಲಿ ಅಪ್ಪಿ ತಪ್ಪಿ ನಮ್ಮ ಸಂಬಂಧೀಕರ ಮನೆಗೆ ಹೋಗುವ ಬದಲು ಅವರ ಅಕ್ಕ ಪಕ್ಕದ ಬೇರೋಬ್ಬರ ಮನೆಗೆ ಹೋದರೂ ಯಾವುದೇ ಬೇಸರವಿಲ್ಲದೇ, ಮಾಮ ಅತ್ತೇ ಎನ್ನುತ್ತಾ, ತಮ್ಮ ಮನೆಯ ಅತಿಥಿಗಳೇನೋ ಎನ್ನುವಂತೆ ಪ್ರೀತಿ ಪಾತ್ರವಾಗಿ ಸತ್ಕರಿಸಿ ಕಳುಹಿಸುವ ಮಂದಿ ಇಂದಿಗೂ ಆ ಊರಿನಲ್ಲಿ ಇದ್ದಾರೆ ಎನ್ನುವುದು ಆ ಊರಿನ ಹೆಗ್ಗಳಿಕೆ. ಅವರ ಅತಿಥಿ ಸತ್ಕಾರವನ್ನು ವರ್ಣಿಸುವುದಕ್ಕಿಂತ ಒಮ್ಮೆ ಅನುಭವಿಸಿದರೇ, ಅತ್ಯಂತ ಆನಂದ.

ಊರಿನಲ್ಲಿ ಎಲ್ಲರ ಮನೆಗಳಲ್ಲಿಯೂ ಈ ವ್ರತಾಚರಣೆ ಇರದೇ ಕೇವಲ 15-20 ಮನೆಗಳಲ್ಲಿ ಮಾತ್ರವೇ ಅನಂತ ಪದ್ಮನಾಭನ ವ್ರತವನ್ನು ಆಚರಿಸುವುದರಿಂದ ಉಳಿದವರೆಗೆ ಬೇಸರವಾಗದಿರಲೆಂದು. ಯಾರ ಯಾರ ಮನೆಗಳಲ್ಲಿ ವ್ರತಾಚರಣೆ ಇರುವುದಿಲ್ಲವೂ ಅಂತಹವರು ತಮ್ಮ ಅಕ್ಕ ಪಕ್ಕದ ವ್ರತಾಚರಣೆಯ ಮನೆಯಲ್ಲಿ ಪೂಜೆಯಲ್ಲಿ ಭಾಗಿಯಾಗಿ ಅನಂತ ಪದ್ಮನಾಭನ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಹೀಗೆ ಇಡೀ ಊರಿಗೆ ಊರೇ ಹಬ್ಬವನ್ನು ಬಹಳ ಶ್ರಧ್ಧಾ ಭಕ್ತಿಗಳಿಂದ ಆಚರಿಸಿ ಅನಂತ ಪದ್ಮನಾಭನ ಅನುಗ್ರಹಕ್ಕೆ ಪಾತ್ರರಾಗುವುದು ಈ ಊರಿನ ಭಾವೈಕ್ಯತೆಗೆ ಅನಾದಿ ಕಾಲದಿಂದಲೂ ಸಾಕ್ಷಿಯಾಗಿದೆ.

anantha_vratha2

ಪೂಜೆಯಾದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಭಕ್ಷ ಭೋಜನಗಳನ್ನು ತಯಾರಿಸಿ ಭಕ್ಷಿಸುತ್ತಿದ್ದದ್ದು ಅಲ್ಲಿ ನಡೆದುಕೊಂಡು ಬಂದಿದ್ದ ಸಂಪ್ರದಾಯ. ಆದರೆ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಸ್ವಲ್ಪ ಬದಲಾವಣೆ ತಂದು, ಪೂಜೆಯಾದ ನಂತರ, ಊರಿನ ಮಧ್ಯದಲ್ಲಿ ತಮ್ಮದೇ ಸಂಕೇತಿ ಬಂಧುಗಳೊಬ್ಬರು ದಾನವಾಗಿ ನೀಡಿರುವ ವಿಶಾಲವಾದ ಜಾಗದಲ್ಲಿರುವ ಈಶ್ವರ ದೇವಸ್ಥಾನ ಮತ್ತು ಅದರ ಪಕ್ಕದಲ್ಲೇ ಇರುವ ಛತ್ರದಲ್ಲಿ ಸಾಮೂಹಿಕವಾಗಿ ಭೂರೀ ಭೋಜನವನ್ನು ಏರ್ಪಡಿಸುವ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ತನ್ಮೂಲಕ ಇಡೀ ಊರಿನವರೆಲ್ಲರೂ ಒಟ್ಟಾಗಿ ಸಂತರ್ಪಣೆ ಊಟ ಮಾಡುವ ಸುಂದರ ಪರಿಕಲ್ಪನೆಯನ್ನು ರೂಢಿಗೆ ತಂದಿರುವುದು ಅನನ್ಯ ಮತ್ತು ಅನಕರಣೀಯವೂ ಹೌದು.

ಸಂಕೇತಿಗಳ ಮತ್ತೊಂದು ವಿಶೇಷವೇನೆಂದರೆ, ಅವರು ಬಾರೀ ಭೋಜನ ಪ್ರಿಯರು ಮತ್ತು ಬಹುತೇಕರೆಲ್ಲರೂ ನಳ ಮಹಾರಾಜರೇ, ಹಾಗಾಗಿ ಹೆಚ್ಚಿನ ಸಮಾರಂಭಗಳಲ್ಲಿ ಇಂದಿಗೂ ಊರಿನ ಗಂಡಸರೇ ಸೇರಿಕೊಂಡು ಸಂತರ್ಪಣೆ ಅಡುಗೆಯನ್ನು ಸಿದ್ಧ ಪಡಿಸುತ್ತಾರೆ ಮತ್ತು ಅವರೇ ಸೇರಿಕೊಂಡು ಎಲ್ಲರಿಗೂ ಹೊಟ್ಟೆ ಬಿರಿಯುವಷ್ಟು ಬಡಿಸುವುದರಲ್ಲಿಯೂ ಎತ್ತಿದ ಕೈ. ಊಟದ ಮಧ್ಯದಲ್ಲಿ ಮಾಡಿರುವ ಯಾವುದಾದರೂ ಸಿಹಿ ಪದಾರ್ಥಗಳಾದ ಲಾಡು, ಒಬ್ಬಟ್ಟು ಅದಾವುದೂ ಇಲ್ಲದಿದ್ದಲ್ಲಿ ಪಾಯಸವನ್ನು ತಿನ್ನುವ ಸ್ಪರ್ಧೆ ಏರ್ಪಟ್ಟಲ್ಲಿ, ಮಯಾಬಜಾರ್ ಚಿತ್ರದಲ್ಲಿ ವಿವಾಹ ಭೋಜನವಿದು ವಿಚಿತ್ರ ಭಕ್ಷಗಳಿರುವು ಎಂದು ಹಾಡುತ್ತಾ ತಿನ್ನುವ ಒಬ್ಬ ಭಕಾಸುರನನ್ನು ನೋಡಿದರೇ ಇಲ್ಲಿ ಅಂತಹಾ ಹತ್ತಾರು ಭಕಾಸುರರನ್ನು ಕಾಣಬಹುದಾಗಿದೆ. ಇಂತಹ ಘಟನೆಗಳನ್ನೇ ಆಧಾರವಾಗಿಟ್ಟು ಕೊಂಡು ಕೆಲವೊಮ್ಮೆ ಸಂಕೋಚವಿಲ್ಲದೇ ಕೇಳಿ ತಿನ್ನುವವರೇ ಸಂಕೇತಿಗಳು ಎಂದು ಹಾಸ್ಯಮಾಡುವುದೂ ಉಂಟು.

ಈ ರೀತಿಯಾಗಿ ಕೇವಲ ಹಬ್ಬ ಹರಿದಿನಗಳಿಗೇ ಈ ರೀತಿಯ ಬಂಧುತ್ವ ಮೀಸಲಾಗದೇ, ಪ್ರತೀ ಶನಿವಾರ ರಾಮನ ಗುಡಿಯಲ್ಲಿ ನಡೆಯುವ ಸಾಮೂಹಿಕ ಭಜನೆಯಲ್ಲಿ ಪ್ರತೀ ಮನೆಯಿಂದ ಕಡ್ಡಾಯವಾಗಿ ಭಾಗಿಯಾಗಲೇ ಬೇಕು ಮತ್ತು ವಾರಕ್ಕೆ ಒಬ್ಬರ ಮನೆಯಿಂದ ಪ್ರಸಾದ ವಿನಿಯೋಗವಾಗಬೇಕೆಂಬ ಅಲಿಖಿತ ನಿಯಮವನ್ನು ಮಾಡಿಕೊಂಡಿದ್ದಾರೆ. ಇರುವ 50-60 ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಈ ಸುಯೋಗವನ್ನು ಅತ್ಯಂತ ಪ್ರೀತಿಯಿಂದ ಬಳೆಸಿಕೊಳ್ಳುತ್ತಾ ಇಂದಿಗೂ ಸಾಮರಸ್ಯದಿಂದ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಅಭಿನಂದನೀಯ ಮತ್ತು ಶ್ಲಾಘನೀಯ. ಇಂತಹ ಸಾಮರಸ್ಯ ಗ್ರಾಮಗಳ ಸಂಖ್ಯೆ ನಮ್ಮ ದೇಶದಲ್ಲಿ ಅಗಣಿತವಾದಲ್ಲಿ ನಮ್ಮ ದೇಶ ರಾಮ ರಾಜ್ಯವಾಗುವುದರಲ್ಲಿ ಸಂದೇಹವೇ ಇಲ್ಲಾ.

ಏನಂತೀರೀ?
ನಿಮ್ಮವನೇ ಉಮಾಸುತ

2 thoughts on “ಅನಂತ ಚತುರ್ದಶಿ ವ್ರತ

  1. ಹಬ್ಬದ ಬಗ್ಗೆ ಅನೇಕ ವಿಷಯಗಳು ಮನದಟ್ಟಾಯಿತು. ವಿಷಯ ಸಂಗ್ರಹಣೆ ಮತ್ತು ಬರಹ ಚೆನ್ನಾಗಿದೆ.

    Liked by 1 person

  2. ತುಂಬಾ ವಿಷಯ ಮತ್ತು ಮುದ ನೀಡಿದ ಲೇಖನ.🙏
    ಸಂಕೇತಿ ಸಮುದಾಯದ ಬಗ್ಗೆ ಹೆಮ್ಮೆ ಯಾಯಿತು.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s