ಎಂಭತ್ತರ ದಶಕ. ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದ ತುಮಕೂರು ಬಳಿಯ ಬೋರೇಗೌಡರ ಕುಟುಂಬಕ್ಕೆ ನಿಜಕ್ಕೂ ಬಹಳ ಆಘಾತವಾಗಿತ್ತು. ಸತತವಾಗಿ ಎರಡು ಮೂರು ವರ್ಷಗಳು ಸರಿಯಾಗಿ ಮಳೆಯಾಗದೆ ಅವರಿದ್ದ ಪ್ರದೇಶ ಬರಗಾಲಕ್ಕೆ ತುತ್ತಾಗಿತ್ತು. ಹೊತ್ತು ಹೊತ್ತಿಗೆ ಎರಡು ತುತ್ತು ಊಟ ಮಾಡಲೂ ಕಷ್ಟ ಪಡುವ ಸ್ಥಿತಿ ಬಂದೊದಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಕೆಟ್ಟು ಪಟ್ಟಣ ಸೇರು ಎನ್ನುವಂತೆ ತಮ್ಮ ಸಂಬಂಧೀಕರು ಬೆಂಗಳೂರಿನಲ್ಲಿದ್ದ ಕಾರಣ, ಅಲ್ಲಿ ಏನಾದರೂ ಕೂಲೀ ನಾಲಿ ಮಾಡಿ ಸ್ವಲ್ಪ ಸಂಪಾದಿಸಿಕೊಂಡು ಜೀವನ ಸಾಗಿಸುತ್ತಾ ಪರಿಸ್ಥಿತಿ ಸರಿಹೋದ ಮೇಲೆ ಪುನಃ ಊರಿಗೆ ಬಂದು ಬೇಸಾಯ ಮುಂದುವರಿಸಬಹುದು ಎಂದು ನಿರ್ಧರಿಸಿ ರೈಲನ್ನು ಹತ್ತಿ ಬೆಂಗಳೂರಿನ ಮಲ್ಲೇಶ್ವರದ ರೈಲ್ವೇ ಸ್ಟೇಷನ್ನಿನ ಪಕ್ಕದಲ್ಲೇ ಇದ್ದ ತನ್ನ ಸಂಬಂಧೀಕರ ಮನೆಗೆ ಬಂದರು ಬೋರೇಗೌಡರು. ಆವರ ಸಂಬಂಧೀಕರೇನೂ ಅಷ್ಟೇನು ಹೆಚ್ಚಿನ ಸ್ಥಿತಿವಂತರಾಗಿರಲಿಲ್ಲ, ಮನೆಯ ಯಜಮಾನ ಅಂದಿನ ಕಾಲದಲ್ಲಿ ಉಚ್ಚ್ರಾಯ ಸ್ಥಿತಿಯಲ್ಲಿ ಇದ್ದ ಕಿರ್ಲೋಸ್ಕರ್ ಕಂಪನಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದರು ಅವರ ಮನೆಯಲ್ಲಾಗಲೇ ಐದಾರು ಜನರಿದ್ದರು. ಅವರ ಜೊತೆ ಬೋರೇಗೌಡನೂ ಒಬ್ಬನಾದ. ಮಿಡ್ಲ್ ಸ್ಕೂಲ್ ವರೆಗೆ ಮಾತ್ರವೇ ಓದಿದ್ದರಿಂದ ಹೆಲ್ಪರ್ ಕೆಲಸ ಸಿಗುವ ವರೆಗೂ ಅಲ್ಲಿಲ್ಲಿ ಕೂಲಿ ಕೆಲಸ ಮಾಡುತ್ತಾ ಕೊನೆಗೆ ಅಲ್ಲೇ ರಾಮಣ್ಣ ಎಂಬುವರು ನಡೆಸುತ್ತಿದ್ದ ಹಾಲಿನ ಡೈರಿಯಲ್ಲಿ ಹಾಲು ಕರೆಯುವ ಕೆಲಸ ಮಾಡುವ ಕಾಯಕ್ಕೆ ಖಾಯಂ ಆಗಿ ಸೇರಿಕೊಂಡ. ಬೆಳಿಗ್ಗೆ ಹೊತ್ತಿಗೆ ಮುಂಚೆ ಮತ್ತು ಸಂಜೆ ಸೂರ್ಯಾಸ್ತವಾಗುವ ಮುಂಚೆ ಎರಡು ಬಾರಿ ಹಾಲನ್ನು ಕರೆಯುತ್ತಾ ಉಳಿದ ಸಮಯದಲ್ಲಿ ಅಲ್ಲಿಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿದ್ದ ಬೋರೇಗೌಡನಿಗೆ ಅದೊಂದು ದಿನ ಹಾಲಿನ ಡೈರಿ ರಾಮಣ್ಣನೊಂದಿಗೆ ಸಣ್ಣ ವೈಮನಸ್ಯವಾಯಿತು. ಸರಿ ಎಷ್ಟು ದಿನ ನಾನೂ ಇನ್ನೊಬ್ಬರ ಕೈಕೆಳಗೆ ಕೆಲಸಮಾಡುವುದು ಎಂದು ನಿರ್ಧರಿಸಿ ಊರಿಗೆ ಹೋಗಿ ತಮ್ಮ ಬಳಿ ಇದ್ದ ದೇಸೀ ಹಸು ಮತ್ತು ಕರು ಜೊತೆಗೆ ಆತನ ಮಡದಿ ಮತ್ತು ತಾಯಿಯನ್ನು ಕರೆದುಕೊಂಡು ಬಂದು ಅಲ್ಲಿಯೇ ತಮ್ಮ ಸಂಬಧೀಕರ ಮನೆಯ ಬಳಿಯೇ ಇದ್ದ ಸಣ್ಣ ಶೀಟ್ ಮನೆಯೊಂದನ್ನು ಬಾಡಿಗೆ ಪಡೆದು ಹಾಲಿನ ಡೈರಿ ರಾಮಣ್ಣನಿಗೆ ಸಡ್ಡು ಹೊಡೆಯಲು ನಿರ್ಧರಿಸಿದ.
ಬರದಿಂದ ಬೆಂಡಾಗಿದ್ದ ಊರಿನಲ್ಲಿ ಮೇವು ಸಿಗದೇ ಬಾಡಿ ಹೋಗಿದ್ದ ಹಸುವನ್ನು ಪಕ್ಕದ ಮಿಲ್ಕ್ ಕಾಲೋನಿ ಮತ್ತು ಅದರ ಪಕ್ಕದಲ್ಲೇ ಇದ್ದ ಕೆರೆಯ ಅಂಗಳದಲ್ಲಿ ಹುಲುಸಾಗಿ ಬೆಳೆದ್ದಿದ್ದ ಹುಲ್ಲುಗಾವಲಿನಲ್ಲಿ ಪ್ರತಿದಿನ ಮೇಯಿಸಿದ ತೊಡಗಿದ. ಒಳ್ಳೆಯ ಆಹಾರ ಸಿಕ್ಕ ಮೂರ್ನಾಲ್ಕು ವಾರಗಳಲ್ಲಿಯೇ ಹಸು ದಷ್ಟ ಪುಷ್ಟವಾಗ ತೊಡಗಿತು. ಹಾಲಿನ ಡೈರಿಗೆ ಬರುತ್ತಿದ್ದ ನಾಲ್ಕಾರು ಜನರು ಪರಿಚಯಸ್ಥರ ಮನೆಗೆ ಹೋಗಿ ನಿಮ್ಮ ಮನೆಯ ಮಂದೆಯೇ ಕರೆದ ಗಟ್ಟಿ ಹಾಲನ್ನು ತೆಗೆದುಕೊಳ್ಳಿ ಎಂದು ಪುಸಲಾಯಿಸಿ ಅವರಿಗೆ ಒಳ್ಳೆಯ ಕರೆದ ಹಾಲನ್ನೇ ಮಾರ ತೊಡಗಿದ. ಇದರ ಮಧ್ಯದಲ್ಲಿಯೇ ಬೋರೆಗೌಡರ ಪತ್ನಿ ಅಕ್ಕ ಪಕ್ಕದ ನಾಲ್ಕಾರು ಮನೆಗಳನ್ನು ಪರಿಚಯ ಮಾಡಿಕೊಂಡು ಅವರಿವರ ಮನೆಯ ಕಸೆ ಮುಸುರೆ ತಿಕ್ಕಿಕೊಂಡು ಅವರ ಮನೆಗಳ ಮುಂದೆ ಕಲಗಚ್ಚಿನ ಮಡಕೆಯೊಂದನ್ನು ಇಟ್ಟು ಪ್ರತಿದಿನ ಅವರ ಮನೆಯಲ್ಲಿನ ಅನ್ನ ಬಸಿದ ಗಂಜಿ,ಆಳುದುಳಿದಿದ್ದ ತಂಗಳು ಆಹಾರ ಮತ್ತು ತರಕಾರಿ ಸಿಪ್ಪೆಗಳನ್ನು ಅದರಲ್ಲಿ ಹಾಕಲು ಹೇಳಿ ನಿಗಧಿತ ಸಮಯದಲ್ಲಿ ಅದನ್ನು ಸಂಗ್ರಹಿಸಿ ಅದನ್ನು ತಮ್ಮ ಹಸುಕರುಗಳಿಗೆ ನೀಡತೊಡಗಿದ್ದಳು. ಮಗ ಮತ್ತು ಸೊಸೆ ಕಷ್ಟ ಪಡುತ್ತಿದ್ದರೆ ಇನ್ನು ತಾಯಿ ತಾನೆ ಅದೆಷ್ಟು ದಿನ ತಾನೇ ನೋಡಿಕೊಂಡು ಸುಮ್ಮನಿದ್ದಾಳೂ. ಆಕೆಯೂ ಕೂಡಾ, ತನ್ನ ಹಸುವಿನ ಸಗಣಿಯೊಂದಿಗೆ ಮೇಯಲು ಬರುತ್ತಿದ್ದ ಉಳಿದ ಹಸುಗಳ ಸಗಣಿಯನ್ನು ಜತನದಿಂದ ಸಂಗ್ರಹಿಸಿ, ಮನೆಯ ಪಕ್ಕದಲ್ಲಿಯೇ ಇದ್ದ ರೈಲ್ವೇ ಸ್ಟೇಷನ್ನಿನ ಕಾಂಪೌಂಡ್ ಗೋಡೆಗೆ ಬೆರಣಿ ತಟ್ಟಿ ಅದು ಒಣಗಿದ ನಂತರ ಅದನ್ನು ಜೋಪಾನವಾಗಿ ಸಂಗ್ರಹಿಸಿ ವಾರಕ್ಕೊಮ್ಮೆ ಅಲ್ಲಿಯೇ ಇದ್ದ ಸೌದೇ ಮಂಡಿಗೆ ಅಲ್ಪ ಸ್ವಲ್ಪ ಸಂಪಾದನೆ ಮಾಡುತ್ತಾ ತನ್ನ ಮಗನ ಕಷ್ಟದಲ್ಲಿ ಅಳಿಲು ಸೇವೆಯಂತೆ ದುಡಿಯತೊಡಗಿದಳು. ಒಟ್ಟಿನಲ್ಲಿ ಒಂದು ಹಸುವಿನಂದಲೇ ಇಡೀ ಮನೆಯ ಮಂದಿಯೆಲ್ಲಾ ತೃಪ್ತಿಯಾಗಿ ಕುಳಿತು ತಿನ್ನುವಷ್ಟರ ಮಟ್ಟಿಗೆ ಸಂಪಾದನೆಯಾಗಿದ್ದಲ್ಲದೆ, ಅಲ್ಪ ಸ್ವಲ್ಪ ಹಣವನ್ನೂ ಉಳಿಸತೊಡಗಿದರು.
ಒಂದೆರದು ವರ್ಷ ಕಳೆಯುವಷ್ಟರಲ್ಲಿ ಬೋರೇಗೌಡರ ಕುಟುಂಬ ಬೆಂಗಳೂರಿಗೆ ಒಗ್ಗಿಕೊಂಡಾಗಿತ್ತು. ಇನ್ನು ಊರಿಗೆ ಹಿಂದಿರಿಗಿ ಹೋಗಲು ಮನಸ್ಸಾಗದೆ, ಊರಿನಲ್ಲಿದ್ದಷ್ಟೂ ಜಮೀನನ್ನೂ ಮಾರಿ ಬಂದ ಹಣದಲ್ಲಿ ಅವನು ವಾಸವಾಗಿದ್ದ ಶೀಟ್ ಮನೆಯನ್ನೇ ಖರೀದಿಸಿ, ಉಳಿದಿದ್ದ ಹಣದಲ್ಲಿ ಮತ್ತೊಂದು ಸೀಮೇ ಹಸುವನ್ನು ಕೊಂಡುಕೊಂಡ. ಮನೆಯವರೆಲ್ಲರ ಪರಿಶ್ರಮದಿಂದ ನೋಡ ನೋಡುತ್ತಲೇ ಹಸುಗಳು ಒಂದರಿಂದ ಎರಡಾಗಿ, ಎರಡರಿಂದ ನಾಲ್ಕಾಗಿ, ನಾಲ್ಕಾರಿಂದ ಎಂಟಾಗಿ, ಹತ್ತು ಹದಿನೈದಾಗಿತ್ತು. ಹಸುಗಳು ಹೆಚ್ಚಾಗುತ್ತಿದ್ದಂತೆಯೇ ಅವನ ಸಂಸಾರವೂ ಹೆಚ್ಚಾಗಿ ಸುಖಃ ದಾಂಪತ್ಯದ ಫಲವಾಗಿ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಾದವು. ನಾವಂತೂ ಓದಲಿಲ್ಲ ಆದರೆ ನಮ್ಮ ಮಕ್ಕಳು ಓದಿ ವಿದ್ಯಾವಂತರಾಗ ಬೇಕು ಎಂದು ನಿರ್ಧರಿಸಿ ಮನೆಯ ಸಮೀಪದಲ್ಲೇ ಇದ್ದ ಆಂಗ್ಲ ಮಾಧ್ಯಮದ ಶಾಲೆಗೆ ಮಕ್ಕಳನ್ನು ಸೇರಿಸಿದರು ಬೋರೇಗೌಡರು. ಅಲ್ಲಿಯವರೆಗೂ ಮನೆಯಲ್ಲಿ ಯಮ್ಮೋ, ಯಪ್ಪಾ .. ಎಂಬ ಕನ್ನಡ ಕಲರವವಿದ್ದ ಮನೆ, ನಿಧಾನವಾಗಿ ಮಮ್ಮಿ, ದ್ಯಾಡಿ ಸಂಸ್ಕೃತಿಗೆ ಒಗ್ಗಿಹೋಗ ತೊಡಗಿತು. ಮಕ್ಕಳು ಮಮ್ಮೀ ಡ್ಯಾಡಿ ಎಂದು ಕರೆಯುತ್ತಿದ್ದರೆ, ಬೋರೇ ಗೌಡರಿಗೆ ಸ್ವರ್ಗಕ್ಕೆ ಮೂರೇ ಗೇಣು.
ಅತ್ತ ಹಸುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅದಕ್ಕೆ ಬೇಕಾಗುವ ಹುಲ್ಲು ಹಿಂಡಿ ಬೂಸಾ ಎಲ್ಲವನ್ನೂ ಯಶವಂತರಪುರದಿಂದ ಹೆಚ್ಚಿನ ಬೆಲೆಗೆ ತರಬೇಕಾಗುತ್ತಿತ್ತು. ಹೇಗೋ ನಮ್ಮ ಬಳಿಯೇ ಹತ್ತು ಹದಿನೈದು ಹಸುಗಳಿವೆ. ಅದಕ್ಕೆ ನೇರವಾಗಿ ಮಾರುಕಟ್ಟೆಯಿಂದಲೇ ಒಟ್ಟಾಗಿ ತಂದು ಬಿಟ್ಟರೆ ಹಣವೂ ಉಳಿತಾಯವಾಗುತ್ತದೆ ಎಂದು ನಿರ್ಧರಿಸಿ ಮಾರುಕಟ್ಟೆಯಿಂದ ಸಗಟಾಗಿ ತಂದು ತನ್ನ ಮನೆಯಲ್ಲಿ ಹೇರಿಕೊಂಡ. ಹಾಗೇ ಸುಮ್ಮನೆ ಇಟ್ಟುಕೊಳ್ಳುವುದೇಕೆ ಎಂದು ನಿರ್ಧರಿಸಿ ಅಲ್ಲೇ ಅಕ್ಕ ಪಕ್ಕದ ಹೈನುಗಾರರಿಗೂ ಅಲ್ಪ ಸ್ವಲ್ಪ ಲಾಭದೊಂದಿಗೆ ವ್ಯಾಪಾರ ಮಾಡತೊಡಗಿದ. ಯಶವಂತಪುರದ ಬೆಲೆಗೆ ಮನೆಯ ಮುಂದೆಯೇ ಸಿಗುತ್ತಿದ್ದಾಗ ಎಲ್ಲರೂ ಬೋರೇಗೌಡರ ಅಂಗಡಿಯಲ್ಲಿಯೇ ಹಿಂದಿ ಬೂಸ ಮತ್ತು ಹೈನುಗಾರಿಕೆಗೆ ಬೇಕಾದ ವಸ್ತುಗಳನ್ನು ಕೊಂಡು ಕೊಳ್ಳಲು ಶುರುವಾದಾಗಾ ದೊಡ್ಡ ಅಂಗಡಿಯನ್ನೇ ಮಾಡಿ ಗಲ್ಲಾ ಪೆಟ್ಟಿಗೆ ಮೆಲೇ ತಾವೇ ಕೂರ ತೊಡಗಿದರು ಬೋರೇಗೌಡರು. ಪ್ರತಿದಿನ ಮಾರುಕಟ್ಟೆಯಿಂದ ಸಾಮಾನು ತರಲು ಯಾರದ್ದೋ ವಾಹನ ಬಾಡಿಗೆಗೆ ತರುವ ಬದಲು ತಮ್ಮದೇ ಒಂದು ಟೆಂಪೋ ಇದ್ದರೆ ಹೇಗೆ ಎಂದು ನಿರ್ಧರಿಸಿ ಆರಂಭದಲ್ಲಿ ಸೆಕೆಂಟ್ ಹ್ಯಾಂಡ್ ಟಂಪೋ ಖರೀದಿಸಿ ನಂತರ ಅದರ ರಿಪೇರಿಗಳಿಗೆ ನೀರಿನಂತೆ ಹಣ ಖರ್ವಾದಾಗ ಹೊಸದೊಂದು ಟೆಂಪೋವನ್ನು ಖರೀದಿಸಿಯೇ ಬಿಟ್ಟರು ಬೋರೇಗೌಡರು.
ನೋಡ ನೋಡುತ್ತಿದ್ದಂತಯೇ, ತನ್ನ ಕಠಿಣ ಪರಿಶ್ರಮ ಮತ್ತು ಬುದ್ದಿವಂತಿಕೆಯಿಂದ ಕೂಲೀ ಮಾಡಲು ಬೆಂಗಳೂರಿಗೆ ಬಂದ ಬೋರೇಗೌಡ ಕೆಲವೇ ವರ್ಷಗಳಲ್ಲಿ ಯಶಸ್ವೀ ವ್ಯವಹಾರಸ್ಥರಾಗಿ ಏಕವಚನದ ಬೋರೇಗೌಡ ಈಗ ಬಹುವಚನದ ಬೋರೆಗೌಡರಾಗಿ ಬಿಟ್ಟಿದ್ದರು. ಹೆಚ್ಚಿನ ಹಣ ಕೈ ಸೇರುತ್ತಿದ್ದಂತೆಯೇ, ಅದನ್ನು ಒಂದು ಚೂರೂ ಪೋಲು ಮಾಡದೇ, ಬೇರೇ ಬೇರೇ ವ್ಯವಹಾರಕ್ಕೋ ಇಲ್ಲವೇ ಇತರರರಿಗೆ ಕೈ ಸಾಲ ಕೊಡುತ್ತಲೋ ಹಣ ತನ್ನಿಂದ ತಾನೇ ಬೆಳೆದುಕೊಂಡು ಹೋಗುವಂತಹ ಮಾರ್ಗವನ್ನು ಕಂಡು ಕೊಂಡಿದ್ದರು ಬೋರೇಗೌಡರು. ಹೀಗಾಗಿ, ಹೈನುಗಾರಿಕೆ ಜೊತೆ ಜೊತೆಯಲ್ಲೇ ಬೂಸಾ ಅಂಗಡಿ, ಫೈನಾನ್ಸ್, ಆಟೋ ಕನ್ಸಲ್ಟಿಂಗ್ ಇದರ ಜೊತೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಕೈಹಾಕಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹತ್ತಾರು ಸೈಟ್ ಮತ್ತು ಮನೆಗಳ ಒಡೆಯರಾದರು ಬೋರೇಗೌಡರು. ಹಣ ಹೆಚ್ಚುತ್ತಿದ್ದಂತೆಯೇ ಸಮಾಜದಲ್ಲಿ ಅವರಿಗೆ ಗೌರವವೂ ಹೆಚ್ಚಾಗಿ ಅವರ ಪ್ರದೇಶದಲ್ಲಿ ನಡೆಯುವ ಅಣ್ಣಮ್ಮ, ಗಣೇಶೋತ್ಸವ, ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಪ್ರಮುಖ ಪೋಷಕರಾದರು ಬೋರೇಗೌಡರು. ಆ ರೀತಿ ಉಪಕೃತರಾದ ಮೇಲೆ ಅದರ ಋಣ ಸಂದಾಯದ ಫಲವೋ ಎನ್ನುವಂತೆ ಆ ಸಭೆ ಸಮಾರಂಭಗಳಲ್ಲಿ ಕೊಡುಗೈ ದಾನಿ, ಕಲಿಯುಗದ ಕರ್ಣ, ಬಡವರ ಬಂಧು ಇನ್ನು ಮುಂತಾದ ಬಿರುದು ಬಾವಲಿಗಳು ಬೋರೇಗೌಡರ ಪಾಲಾದವು. ಅಲ್ಲಿಯವರಿಗೂ ಇವರು ಎಲ್ಲರಿಗೂ ಅಣ್ಣಾ ಅಕ್ಕಾ ಎನ್ನುತಿದ್ದರೆ, ಈಗ ಜನಾ ಇವರಿಗೇ ಅಣ್ಣಾ ಮತ್ತು ಅವರಿವರ ಮನೆಯಲ್ಲಿ ಮುಸುರೆ ತಿಕ್ಕುತ್ತಿದ್ದ ಅವರ ಮನೆಯವರು ಎಲ್ಲರಿಗೂ ಮೆಚ್ಚಿನ ಅಕ್ಕನಾಗಿ ಹೋಗಿದ್ದರು. ಹಣ ಎಷ್ಟೇ ಬಂದರೂ ಬೋರೇಗೌಡರ ವ್ಯಕ್ತಿತ್ವದಲ್ಲಿ ಸ್ವಲ್ಪವೂ ಬದಲಾಗಲೇ ಇಲ್ಲ. ಬಡತನದ ಕಷ್ಟದ ಅರಿವಿತ್ತು. ಕಷ್ಟ ಪಟ್ಟು ದುಡಿದು ಪೈಸೆ ಪೈಸೆ ಉಳಿಸಿದ ದುಡ್ಡಿನ ಮಹತ್ವ ಗೊತ್ತಿತ್ತು. ಹಾಗಾಗಿ ಹಲವಾರು ರೀತಿಯಲ್ಲಿ ದುಡಿಯುತ್ತಲೇ ಪೈಸೆ ಪೈಸೆ ಜೋಡಿಸುತ್ತಾ ಕೋಟ್ಯಾದೀಶ್ವರನಾಗಿ ಬಿಟ್ಟರು ಬೊರೇಗೌಡರು.
ಆಷ್ಟ್ರರಲ್ಲಾಗಲೇ ಹೆಣ್ಣು ಮಕ್ಕಳು ಮದುವೆಯ ವಯಸ್ಸಿಗೆ ಬಂದಿದ್ದರಿಂದ ಒಳ್ಳೊಳ್ಳೆಯ ಸಂಬಂಧಗಳನ್ನು ನೋಡಿ ಅಳಿಯನಿಗೆ ಕಾರು,ಬಂಗಲೆಗಳನ್ನು ವರದಕ್ಷಿಣೆಯ ರೂಪದಲ್ಲಿ ಕೊಟ್ಟು ಅದ್ದೂರಿಯಿಂದಲೇ ಮದುವೆ ಮಾಡಿಕೊಟ್ಟರು. ಅದೇ ಸಮಯಕ್ಕೆ ದೊಡ್ಡ ಮಗನೂ ಪದವಿ ಮುಗಿಸಿ ಮುಂದೆ ಓದಲು ಮನಸ್ಸು ಮಾಡದೇ ಬೆಂಗಳೂರು ಐಶಾರಾಮಿ ನಗರವಾಗಿ ಪರಿವರ್ತಿತಗೊಂಡು ಹೈನುಗಾರಿಕೆ ಸಂಪೂರ್ಣ ನೆಲಕಚ್ಚಿದ್ದರಿಂದ ಅಪ್ಪನ ರಿಯಲ್ ಎಸ್ಟೇಟ್ ವ್ಯವಹಾರ ನೋಡಿಕೊಂಡು ಲಕ್ಷಾಂತರ ರೂಪಾಯಿಗಳು ವ್ಯವಹಾರ ಮಾಡತೊಡಗಿದ. ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎನ್ನುವಂತೆ ಅಣ್ಣಾ ವ್ಯವಹಾರಕ್ಕೆ ಇಳಿದು ಕೈಯಲ್ಲಿ ಚೆನ್ನಾಗಿ ದುಡ್ಡು ಕಾಸು ಓಡಾಡುತ್ತಿದ್ದದ್ದನ್ನು ಗಮನಿಸಿದ ತಮ್ಮನಿಗೆ ಓದು ಎಲ್ಲಿ ಹತ್ತಬೇಕು? ಆತನೂ ಕೂಡ ತನ್ನ ಓದನ್ನು ಪಿಯೂಸಿಗೇ ನಿಲ್ಲಿಸಿ ತಾನೂ ಅಣ್ಣನ ಜೊತೆ ವ್ಯವಹಾರದಲ್ಲಿ ಓಡಾಡತೊಡಾಗಿದ. ರಿಯಲ್ ಎಸ್ಟೇಟ್ ಕೂಡಾ ಹಾಗೆ ಹೀಗೇ ಓಲಾಡುತ್ತಿದ್ದಾಗ, ಸಿನಿಮಾದವರಿಗೆ ಫೈನಾನ್ಸ್, ಆಟೋ ಕನ್ಸೆಲ್ಟಿಂಗ್ ಮತ್ತು ಮೀಟರ್ ಬಡ್ಡಿಯ ದಂದೆಗೆ ಇಳಿದು ಬಿಟ್ಟರು ಅಣ್ಣ ತಮ್ಮಂದಿರು.
ಬೋರೇಗೌಡ ದಂಪತಿಗಳು ತಮ್ಮ ಗಂಡು ಮಕ್ಕಳಿಬ್ಬರಿಗೂ ಒಳ್ಳೆಯ ಹೆಣ್ಣುಗಳನ್ನು ನೋಡಿ ಒಟ್ಟಿಗೇ ಒಂದೇ ಮಂಟಪದಲ್ಲಿ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಪೂರ್ಣಮಾಡಿಕೊಂಡರು. ಸೊಸೆಯಂದಿರು ಬಂದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಅದಾದನಂತರವೇ ಶುರುವಾಯಿತು ನೋಡಿ ಒಂದೊಂದೇ ವರಾತ. ಬೋರೇಗೌಡರ ಕುಟುಂಬದವರು ಪೈಸೆ ಪೈಸೆಗೆ ಲೆಕ್ಕಾಹಾಕಿ ಜೀವನಾವಶ್ಯಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರವೇ ಖರ್ಚು ಮಾಡುತ್ತಾ ಅನಗತ್ಯ ದುಂದು ವೆಚ್ಚ ಮಾಡದವರು. ಆದರೆ ಬಂದ ಸೊಸೆಯಂದಿರು ಆಧುನಿಕ ಯುಗದವರು. ಮಾಲ್, ಶಾಪಿಂಗ್ ಮಲ್ಟಿ ಪ್ಲೆಕ್ಸ್ ಸಿನಿಮಾ, ಸ್ಟಾರ್ ಹೋಟೆಲ್, ಕಾಫೀ ಕ್ಲಬ್ ಸಂಸ್ಕೃತಿಯವರು. ಕ್ರಮೇಣ ತಮ್ಮ ಗಂಡಂದಿರನ್ನು ತಮ್ಮದೇ ಸಂಸ್ಕೃತಿಗೆ ಪಳಗಿಸಿ ಬಿಟ್ಟು ಕೊಂಡು ಬಿಟ್ಟರು. ಹೊತ್ತಲ್ಲದ ಹೊತ್ತಿಗೆ ಮನೆಯಿಂದ ಹೋಗುವುದು, ಬರುವುದು. ಸದಾ ಮನೆಯಿಂದ ಹೊರಗಡೆಯೇ ಊಟ ತಿಂಡಿ ಇದೆಲ್ಲವೂ ಬೋರೇಗೌಡ ದಂಪತಿಗಳಿಗೆ ಕಿರಿಕಿರಿಯುಂಟು ಮಾಡುತ್ತಿತ್ತು. ಮದುವೆ ಹೊಸದರಲ್ಲಿ ಈಗ ಸರಿ ಹೋಗಬಹುದು ಆಗ ಸರಿ ಹೋಗ ಬಹುದು ಎಂದು ಕಾದಿದ್ದೇ ಹೊರತು ಮತ್ತೇನೂ ಬದಲಾಗಲೇ ಇಲ್ಲ ಕಷ್ಟ ಪಟ್ಟು ಸಾಕಿ ಸಲಹಿದ ಗಂಡು ಮಕ್ಕಳು ಹೆಂಡತಿಯರ ಗುಲಾಮರಾಗಿದ್ದನ್ನು ನೋಡಲು ಸಹಿಸಲಾಗದೇ ಮಕ್ಕಳಿಗೆ ಆಸ್ತಿಯನ್ನು ಹಂಚಿ ಆವರಿಗೇ ಜವಾಬ್ದಾರಿಯನ್ನು ಕೊಟ್ಟರೆ ಸುಧಾರಿಸಬಹುದೆಂದು ನಿರ್ಧರಿಸಿದ ಬೋರೇಗೌಡರು, ತಮ್ಮ ವಕೀಲರನ್ನು ಕರೆಸಿ ಮಕ್ಕಳಿಗೆ ಆಸ್ತಿಯನ್ನು ಹಂಚುವ ಪ್ರಕ್ರಿಯೆ ಶುರುಮಾಡಿದರು. ಆದರೆ ಇದು ಬೋರೇಗೌಡರ ಮನೆಯವರಿಗೆ ಹಿಡಸಲಿಲ್ಲ. ನಾವು ಜೀವಂತ ಇರುವವರೆಗೂ ಆಸ್ತಿ ಹಂಚಬೇಡಿ. ನಾವು ಸತ್ತ ನಂತರವೇ ನಮ್ಮ ಆಸ್ತಿ ಮಕ್ಕಳ ಪಾಲಿಗೆ ಹೋಗುವಂತಾಗಲೀ ಎಂದು ಎಷ್ಟೇ ಪರಿ ಪರಿಯಾಗಿ ಕೇಳಿಕೊಂಡರೂ, ಗಂಡು ಮಕ್ಕಳ ಮೇಲಿನ ಮಮಕಾರದಿಂದ, ಮಡದಿಯ ಮಾತನ್ನು ಧಿಕ್ಕರಿಸಿ, ಗಂಡು ಮಕ್ಕಳಿಗೆ ಆಸ್ತಿಯನ್ನು ಪಾಲು ಮಾಡಿಯೇ ಬಿಟ್ಟರು ಬೋರೇಗೌಡರು. ಚಿಕ್ಕ ಮಗ ಸ್ವಲ್ಪ ಕಡಿಮೆ ಓದಿದ್ದರಿಂದ ಮತ್ತು ವ್ಯವಹಾರದಲ್ಲಿ ಆಷ್ಟೇನೂ ಚುರುಕಾಗಿರದಿದ್ದ ಕಾರಣ ಅವನಿಗೆ ತುಸು ಹೆಚ್ಚಿನ ಪಾಲನ್ನು ನೀಡುತ್ತಿದ್ದೇನೆ ಎಂದು ಯೋಚಿಸಿದರು. ಹೇಗೋ ಒಡಹುಟ್ಟುದ ತಮ್ಮನೇ ತಾನೇ ಎಂದು ದೊಡ್ಡ ಮಗ ಆರಂಭದಲ್ಲಿ ಯಾವ ಕ್ಯಾತೆ ತೆಗೆಯದಿದ್ದರೂ ಹೆಂಡತಿಯ ಮಾತನ್ನು ಕೇಳಿಕೊಂಡು ಎರಡು ಮೂರು ದಿನಗಳಲ್ಲಿ ಮನೆಯಲ್ಲಿ ರಂಪ ರಾಮಾಯಣ ಮಾಡಿಯೇ ಬಿಟ್ಟ. ಬೋರೇಗೌಡರು ವಿಧ ವಿಧವಾಗಿ ಅವನಿಗೆ ಸಮಜಾಯಿಷಿ ಹೇಳಿದರೂ ಮಾತಿನ ಭರದಲ್ಲಿ ತಂದೆಯನ್ನೇ ಬೋ.. ಮಗನೇ, ಸೂ.. ಮಗನೇ, ಆಸ್ತಿಯಲ್ಲಿ ಸಮಪಾಲನ್ನು ಮಾಡಲು ನಿನಗೇನಾಗಿತ್ತು ಧಾಡಿ? ಎಂದು ಹೇಳುತ್ತಾ ಪರಿಸ್ಥಿತಿ ಕೈಮೀರಿ ಅಪ್ಪನ ಮೇಲೆ ಕೈ ಮಾಡಿಯೇ ಬಿಟ್ಟ. ಹೆತ್ತ ಮಗನೇ ಗಂಡನ ಮೇಲೇ ಆಸ್ತಿಗಾಗಿ ಈ ರೀತಿಯಾಗಿ ದಾಂಗುಡಿ ಮಾಡುತ್ತಾನೆ ಎಂಬುದನ್ನು ನಿರೀಕ್ಷಸದಿದ್ದ ಬೋರೇಗೌಡರ ಮಡದಿ ಆ ಕೂಡಲೇ ಕುಸಿದು ಬಿಟ್ಟರು. ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಸುಮಾರು ವರ್ಷಗಳ ಕಾಲ ಕಷ್ಟ ಸುಖಃ ಎಲ್ಲವನ್ನೂ ಹಂಚಿಕೊಂಡಿದ್ದ ಹೆಂಡತಿಯ ಅಗಲಿಕೆಯಿಂದ ಮೊದಲ ಬಾರಿಗೆ ಬೋರೇಗೌಡರು ಒಬ್ಬಂಟಿಗರಾಗಿ ಹೋದರು. ಹೆಂಡತಿಯ ಸಾವಿಗೆ ಮಕ್ಕಳೇ ಕಾರಣರಾದರಲ್ಲಾ ಎಂದು ಅವರೂ ಕೊರಗಿ ಕೊರಗೀ ಕೃಶರಾಗಿ ಹೋಗಿ ಖಾಯಿಲೆಗೆ ಬಿದ್ದರು. ಹೇಗೂ ನಿನಗೆ ಆಸ್ತಿಯಲ್ಲಿ ಹೆಚ್ಚಿನ ಪಾಲು ಸಿಕ್ಕಿದೆಯಲ್ಲಾ ನೀನೇ ಅಪ್ಪನನ್ನು ಆಸ್ಪತ್ರೆಗೆ ಸೇರಿಸು ಎಂದು ದೊಡ್ಡವ, ಯಾಕೇ? ನಿನಗೂ ಕೂಡಾ ಅವರು ತಂದೆಯಲ್ಲವೇ? ನೀನೇ ಏಕೆ ಆಸ್ಪತ್ರೆಗೆ ಸೇರಿಸಬಾರದು ಎಂದು ಚಿಕ್ಕವ, ಹೀಗೆ ಅಪ್ಪನಿಗೆ ಶುಶ್ರೂಷೆಯನ್ನು ಮಾಡಿಸಲು ಕಿತ್ತಾಡ ತೊಡಗಿದರು. ತಮ್ಮಂದಿರ ಈ ಕಿತ್ತಾಟ ನೋಡಲಾರದೇ ಹೆಣ್ಣು ಮಕ್ಕಳು ಅಪ್ಪನ ಋಣ ಈ ರೀತಿಯಲ್ಲಾದರೂ ತೀರಿಸ ಬಹುದಲ್ಲಾ ಎಂದು ಆಸ್ಪತ್ರೆಗೆ ಸೇರಿಸಿ ಸರಿಯಾದ ಚಿಕಿತ್ಸೆ ಕೊಡಿಸಿದರು. ದೈಹಿಕವಾಗಿ ಬೋರೇಗೌಡರು ಹುಷಾರಾದರೂ ಮಾನಸಿಕವಾಗಿ ಜರ್ಜರಿತರಾಗಿಯೇ ಹೋದರು. ಗಂಡು ಮಕ್ಕಳಿದ್ದರೂ ಹೆಣ್ಣು ಮಕ್ಕಳ ಮನೆಯಲ್ಲಿ ಕಡೆಯ ದಿನಗಳನ್ನು ಕಳೆಯಬೇಕಾಯಿತಲ್ಲಾ ಎಂದು ಕೊರಗುತ್ತಾಲೇ ಪ್ರಾಣ ಬಿಟ್ಟರು. ಸಾಯುವ ಸಮಯದಲ್ಲಿ ಗಂಡು ಮಕ್ಕಳು ನೋಡಿಕೊಳ್ಳಲಿಲ್ಲಾ ಎಂಬ ಕೆಟ್ಟ ಹೆಸರನ್ನು ನಮ್ಮ ಮೇಲೆ ಹೊರಿಸಿ ಹೋದರು ಎಂಬ ಕುಂಟು ನೆಪವೊಡ್ಡಿ ಗಂಡು ಮಕ್ಕಳಿಬ್ಬರೂ ಅಪ್ಪನ ಅಂತಿಮ ಸಂಸ್ಕಾರಕ್ಕೂ ಬರಲಿಲ್ಲ. ಅಳಿಯಂದಿರೂ ಗಂಡು ಮಕ್ಕಳು ಇದ್ದಾಗಲೂ ನಾವೇಕೆ ಅಂತಿಮ ವಿಧಿವಿಧಾನಗಳನ್ನು ಮಾಡಬೇಕು ಎಂದರೂ ಹೆಂಡತಿಯರ ಮಾತನ್ನು ಮೀರಲಾಗದೇ ಒಲ್ಲದ ಮನಸ್ಸಿನಿಂದಲೇ ಮಾವನವರನ್ನು ಮಣ್ಣು ಮಾಡಿದರು. ಗಂಡು ಮಕ್ಕಳು ಹುಟ್ಟಿದಾಗ ಅಬ್ಬಾ ಕುಟುಂಬಕ್ಕೆ ವಾರಸುದಾರ ಹುಟ್ಟಿದ. ಸಾಯುವ ಕಾಲದಲ್ಲಿ ಚಿಂತಿಸುವ ಹಾಗಿಲ್ಲ ತನ್ನ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಸ್ತಿಸಂಚಯನ ಮಾಡಿ ನಮಗೊಂದು ಮುಕ್ತಿ ಕರುಣಿಸುತ್ತಾನೆ ಎಂದು ಬಯಸುವವರೇ ಬಹಳಷ್ಟು ಮಂದಿ ಇರುವಾಗ. ಕೇವಲ ಆಸ್ತಿಗಾಗಿ ಅಪ್ಪನ ಆಂತಿಮ ಸಂಸ್ಕಾರಕ್ಕೂ ಬಾರದೇ ಅಸ್ತಿ ಸಂಚಯನವನ್ನೂ ಮಾಡದೇ ಹೋದ ಇಂತಹ ಗಂಡು ಮಕ್ಕಳು ಇದ್ದರೆಷ್ಟು ಬಿಟ್ಟರೆಷ್ಟು?
ಅದಕ್ಕೇ ಹಿರಿಯ ಸಾಹಿತಿಗಳಾದ ಶಿವರಾಮ ಕಾರಂತರು ಹೇಳಿದ್ದು. ದಯವಿಟ್ಟು ಮಕ್ಕಳಿಗೆ ಆಸ್ತಿ ಮಾಡಬೇಡಿ. ಅದರ ಬದಲು ಮಕ್ಕಳನ್ನೇ ಆಸ್ತಿ ಮಾಡಿ ಬಿಡಿ. ಅದನ್ನು ಮುಂದುವರಿಸಿ ಹೇಳಬೇಕೆಂದರೆ, ನಮ್ಮ ದೇಹದಲ್ಲಿ ಕಸುವಿರುವಾಗ ಕಷ್ಟ ಪಟ್ಟು ಬೆವರು ಸುರಿಸಿ ಸಂಪಾದನೆ ಮಾಡಿ ನಮಗೋಸ್ಕರ ಒಂದು ಚೂರು ಖರ್ಚು ಮಾಡದೇ ಮುಂದೆ ಮಕ್ಕಳಿಗಾಗುತ್ತದೇ ಎಂದು ಪೈಸೆ ಪೈಸೆ ಉಳಿತಾಯ ಮಾಡಿ ಅವರಿಗಾಗಿ ಆಸ್ತಿ ಮಾಡುವ ಬದಲು, ನಿಮ್ಮ ಸಂಪಾದನೆಯಲ್ಲಿಯೇ ನಮಗೋಸ್ಕರವಾಗಿಯೇ ಹಣವನ್ನು ವಿನಿಯೋಗಿಸಿಕೊಂಡು ಮಕ್ಕಳಿಗೆ ಒಳ್ಳೆಯ ವಿದ್ಯಾ ಬುದ್ಧಿ ಕೊಟ್ಟು ಅವರೇ ತಮ್ಮ ಸ್ವಸಾಮರ್ಥ್ಯದಲ್ಲಿ ಆಸ್ತಿ ಸಂಪಾದನೆ ಮಾಡುವಂತೆ ಮಾಡಿದರೆ ಚೆನ್ನ ಅಲ್ಲವೇ? ಹಾಗೂ ಹಣ ಮತ್ತು ಆಸ್ತಿ ಮಾಡಿಟ್ಟಿದ್ದರೆ ನಮ್ಮ ಆಗಲಿಕೆಯ ನಂತರ ನಮ್ಮನ್ನು ಯಾರು ಚೆನ್ನಾಗಿ ಕಡೆ ತನಕ ನೋಡಿಕೊಳ್ಳುತ್ತಾರೋ ಅವರಿಗೇ ಅದು ಸಂದಾಯವಾಗುತ್ತದೆ ಎಂಬ ವಿಲ್ ಮಾಡಿಸಿಕೊಳ್ಳಿ ಹಾಗೆ ಮಾಡಿದರಾಗಲೂ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳ ಬಹುದೇನೋ?
ಏನಂತೀರೀ?
ಯಾರಿಗೂ ಬೋರೇಗೌಡರ ಜೀವನದ ಅಂತಿಮಸ್ಥಿತಿ ಬರಬಾರದು. ಕಥೆ ಸೊಗಸಾಗಿದೆ. ದುಡಿಮೆಗೆ ತಕ್ಕಫಲ ಇದ್ದೇ ಇರುತ್ತದೆ ಎಂಬುದನ್ನು, ಹೇಗೆ ಬದುಕಬೇಕು ,ಹೇಗೆ ಬಾಳಬೇಕು ಎಂಬುದು ಚೆನ್ನಾಗಿ ವಿವರಿಸಿದ್ದೀರಿ
LikeLiked by 1 person
ಸೂಪರ್…
ಆಸ್ತಿ ಯಾಕೆ ಬೇಕು ಅನ್ನೋದಕ್ಕೆ ಹಲವು ಕಾರಣಗಳು ಇರುತ್ತದೆ… ಸಂಸ್ಕಾರಯುತವಾದ ವಿದ್ಯೆ ಎಲ್ಲಾ ಆಸ್ತಿಗಿಂತ ಮಿಗಿಲು.
LikeLiked by 1 person
ಸರಿಯಾಗಿ ಹೇಳಿದ್ರೀ
LikeLike