ಅಂದು ಶಂಕರನ ಮನೆಯಲ್ಲಿ ಅವರ ತಾತನ ಶ್ರಾದ್ಧಾಕಾರ್ಯವಿತ್ತು. ಅವರ ಮನೆಯಲ್ಲಿ ಶ್ರಾಧ್ಧ ಕಾರ್ಯವೆಂದರೆ ಅದೊಂದು ದೊಡ್ಡವರ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿತ್ತು. ಎಲ್ಲಾ ಸಂಬಂಧೀಕರು ಒಟ್ಟಿಗೆ ಅಗಲಿದ ಹಿರೀಕರ ನೆನೆಯುವ ನೆಪದಲ್ಲಿ ಒಂದುಗೂಡುವ ಸಮಾರಂಭವಾಗಿತ್ತು. ಹಿರಿಯರು, ಕಿರಿಯರು, ನೆಂಟರು ಇಷ್ಟರು ಮತ್ತು ಬಹಳ ಆತ್ಮೀಯರೂ ಸೇರಿದಂತೆ ಸುಮಾರು 60-70 ಜನರು ಬರುತ್ತಿದ್ದ ಕಾರಣ ಹೊತ್ತಿಗೆ ಮುಂಚೆಯೇ ಅಡುಗೆಯವರು ಮನೆಗೆ ಬಂದು ಬೆಳಗಿನಿಂದಲೇ ಮಡಿಯಲ್ಲಿ ಶ್ರಾದ್ಧ ಆಡುಗೆಯ ಸಿದ್ದತೆಯಲ್ಲಿದ್ದರು. ಮನೆಯಲ್ಲಿ ಎಲ್ಲಾ ಕಡೆಯಲ್ಲೂ ಮಡಿಯ ವಾತಾವರಣ. ಚಿಕ್ಕ ಮಕ್ಕಳಿಗಂತೂ ಮನೆಯ ಹಜಾರದಿಂದ ಒಳಗೆ ಹೋಗುಲು ನಿಶಿದ್ಧವಿದ್ದು, ಅವರ ಎಲ್ಲಾ ಬೇಡಿಕೆಗಳು ಅಲ್ಲೇ ಹಜಾರದಲ್ಲೇ ಈಡೇರುತ್ತಿದ್ದವು. ಅಲ್ಲಿಯೇ ಶಂಕರನ ಅತ್ತೆ ಮಕ್ಕಳಿಗೆ ಮತ್ತು ವಯಸ್ಸಾದವರಿಗೆ ತಿಂಡಿ ಕೊಟ್ಟರೆ ಉಳಿದವರಿಗೆ ಬಿಸಿ ಬಿಸಿ ಕಾಫಿ ಕೊಡುತ್ತಾ ಲೋಕಾಭಿರಾಮವಾಗಿ ಹರಟುತ್ತಿದ್ದರು.
ಗಂಟೆ ಸುಮಾರು 11 ಆಗುತ್ತಿದ್ದಂತೆಯೇ ಶ್ರಾದ್ಥ ಕರ್ಮಗಳನ್ನು ಮಾಡಿಸಲು ಪುರೋಹಿತರು ಮತ್ತು ಅವರ ಜೊತೆ ಇಬ್ಬರು ಬ್ರಾಹ್ಮಣರು ಬಂದು ಅವರಿಗೂ ಕಾಫಿಯ ಸೇವೆಯಾಗಿ ಎಲ್ಲರೂ ಮಡಿ ಉಟ್ಟುಕೊಂಡು ಗಂಟೆ ಸರಿಯಾಗಿ 12 ಬಾರಿಸುತ್ತಿದ್ದಂತೆಯೇ, ಮಧ್ಯಾಹ್ನ ಶುರುವಾಯಿತು. ಭಕ್ಷ ಎಲ್ಲಾ ಸಿದ್ದವಾಗಿದಯೇ? ನಾವು ಮಾಧ್ಯಾಹ್ನಿಕ ಶುರು ಮಾಡಬಹುದೇ ಎಂದು ಅಡುಗೆ ಭಟ್ಟರನ್ನು ಕುಳಿತಲ್ಲಿಂದಲೇ ಪುರೋಹಿತರು ವಿಚಾರಿಸಿದರು. ಅದಕ್ಕೆ ಅಡುಗೆ ಮನೆಯ ಒಳಗಿನಿಂದಲೇ ಭಟ್ಟರು, ಓಹೋ ಅಗತ್ಯವಾಗಿ ಶುರು ಮಾಡಿಕೊಳ್ಳಿ, ಅಡುಗೆ ಎಲ್ಲಾ ಮಾಡಿಯಾಗಿದೆ. ಭಕ್ಷವೂ ಸಿದ್ಧವಾಗಿದೆ. ನಿಮ್ಮ ಸಮಯಕ್ಕೆ ಸರಿಯಾಗಿ ಉಳಿದೆಲ್ಲವೂ ಬಿಸಿ ಬಿಸಿಯಾಗಿ ಸಿದ್ಧ ಮಾಡುತ್ತೇವೆ ಎಂದು ಪ್ರತ್ಯುತ್ತರಿಸಿದರು.
ಬನ್ರಯ್ಯಾ, ಶ್ರಾಧ್ಧ ಕರ್ಮಗಳನ್ನು ಶುರು ಮಾಡಿ ಬಿಡೋಣ. ಆಮೇಲೆ ಬಂದವರೆಲ್ಲಾ ಊಟಕ್ಕೆ ಹೊತ್ತಾಯಿತು. ಈ ಪುರೋಹಿತರು ಸರಿಯಿಲ್ಲ ಎಂದು ನನ್ನನ್ನೇ ಬೈದು ಕೊಳ್ಳುತ್ತಾರೆ ಎಂದು ಹಾಸ್ಯಮಯವಾಗಿಯೇ ಛೇಡಿಸುತ್ತಾ ಬಾಳೇ ಎಲೆಯಿಂದ ದೊನ್ನೆಗಳನ್ನು ಸಿದ್ಧಪಡಿಸಿ, ದರ್ಬೆಯಿಂದ ಅಗತ್ಯವಿದ್ದ ಪವಿತ್ರಗಳನ್ನೂ ಮತ್ತು ಕುರ್ಚವನ್ನೂ ಸಿದ್ಧ ಪಡಿಸಿಕೊಂಡು ಸಾಂಗೋಪಾಂಗವಾಗಿ ಶ್ರಾದ್ಧವನ್ನು ಆರಂಭಿಸಿದರು ಪುರೋಹಿತರು. ಅಗಲಿದ ಹೆತ್ತವರಿಗೆ ಗೌರವಾರ್ಪಣೆ ಸಲ್ಲಿಸಲು ಒಬ್ಬರು ನಡೆಸುವ ಕ್ರಿಯಾ ವಿಧಿಯೇ ಶ್ರಾದ್ಥ. ಹೆತ್ತವರ ಜೊತೆಗೆ ಅವರ ಪೂರ್ವಜರನ್ನೂ ನೆನೆಸಿಕೊಳ್ಳುತ್ತಾ , ಶ್ರಾದ್ಧಕ್ಕೆ ಬಂದ ಬ್ರಾಹ್ಮಣರಲ್ಲಿ ಅವರ ಪಿತೃಗಳನ್ನು ಆಹ್ವಾನಿಸಿ ಅವರಿಗೆ ಭಕ್ತಿ ರೂಪದಲ್ಲಿ ತಮ್ಮ ಹೃತ್ಪೂರ್ವಕ ಕೃತಜ್ಞತೆ ಹಾಗು ವಂದನೆಗಳನ್ನು ವ್ಯಕ್ತಪಡಿಸಿ ಅವರಿಗೆ ಸಕಲ ರೀತಿಯಾದ ಭಕ್ಷ ಭೋಜನವನ್ನು ಬಡಿಸಿ ಅಂತಿಮವಾಗಿ ಯಥಾಶಕ್ತಿ ದಕ್ಷಿಣೆಯನ್ನು ಕೊಡುವುದು ಶ್ರಾಧ್ಧದಲ್ಲಿ ನಡೆವ ಸಂಪ್ರದಾಯ. ಹಾಗಾಗಿ ಶ್ರಧ್ಧೆಯಿಂದ ಹಿರಿಯರನ್ನು ನೆನೆಸಿಕೊಳ್ಳುವುದೇ ಶ್ರಾಧ್ಧ ಎನಿಸಿಕೊಳ್ಳುತ್ತದೆ. ಶ್ರಾದ್ಧವೆಲ್ಲಾ ಮುಗಿದು ಬ್ರಾಹ್ಮಣರ ಊಟವಾಗಿ ಪಿಂಡ ಪ್ರಧಾನವಾಗಿ ಎಲ್ಲರೂ ನಮಸ್ಕಾರಕ್ಕೆ ಬನ್ನೀ ಎಂದಾಗ ಆಗಲೇ ಗಂಟೆ 2 ಆಗಿತ್ತು. ಬಂದವರೆಲ್ಲರೂ ಶಂಕರ ತಾತನವರ ಗುಣಗಾನ ಮಾಡುತ್ತಾ ಅವರಿಗೆ ಭಕ್ತಿಯಿಂದ ನಮಸ್ಕರಿಸಿ ಶಂಕರನ ಅತ್ತೆ ಪ್ರಸಾದ ರೂಪದಲ್ಲಿ ಕೊಡುತ್ತಿದ್ದ ವಡೆ, ಆಂಬಡೆ ಮತ್ತು ಸಜ್ಜಪ್ಪಾ ಸ್ವೀಕರಿಸಿದರು. ಅಯ್ಯೋ ಇಷ್ಟೊಂದು ಕೊಡಬೇಡಿ. ಈ ಪಾಟಿ ಪ್ರಸಾದ ತಿಂದರೆ ಆಮೇಲೇ ಊಟ ಏನು ಮಾಡುವುದು ಎಂದು ಬಂದವರಾರೋ ಎತ್ತಿದ ಆಕ್ಷೇಪಣೆಗೆ, ಅಯ್ಯೋ ಪರವಾಗಿಲ್ಲಾ ಊಟ ಬಡಿಸಲು ಇನ್ನು ಅರ್ಧಗಂಟೆ ಆಗುತ್ತದೆ. ಅಷ್ಟರಲ್ಲಿ ನೀವು ತಿಂದಿದ್ದೆಲ್ಲಾ ಕರಗಿ ಹೋಗಿರುತ್ತದೆ ತೆಗೆದುಕೊಳ್ಳಿ ಎಂದು ಇನ್ನೂ ಸ್ವಲ್ಪ ಪ್ರಸಾದ ಕೊಟ್ಟಾಗ, ಬೇಡಾ ಬೇಡಾ ಎಂದವರೇ, ಮೂರ್ನಾಲ್ಕು ವಡೆ ಆಂಬೊಡೆ ಮತ್ತು ಸಜ್ಜಪ್ಪ ತಿಂದದ್ದು ವಿಶೇಷವಾಗಿತ್ತು.
ಶ್ರಾಧ್ಧವೆಲ್ಲಾ ಸಾಂಗೋಪಾಂಗವಾಗಿ ಮುಗಿದು, ಬ್ರಾಹ್ಮಣರಿಗೆ ಕೊಡಬೇಕಾದ ದಕ್ಷಿಣೆ ಎಲ್ಲಾ ಕೊಟ್ಟು ಶಂಕರನ ತಂದೆ ಮತ್ತು ಚಿಕ್ಕಪ್ಪಂದಿರು ಪಿಂಡವನ್ನು ವಿಸರ್ಜಿಸಲು ಕೆರೆಯಕಡೆಗೆ ಹೋರಟಾಗ, ಮನೆಯ ಹೆಂಗಸರೆಲ್ಲಾ ಒಬ್ಬೊಬ್ಬರೇ, ತಾ ಮುಂದು ತಾ ಮುಂದು ಎಂದು ಕಸ ಗುಡಿಸಿ ಮೇಲೆ ಮೇಲೆ ಮನೆ ಒರೆಸಿ, ಚಾಪೆ ಹಾಕಿ ಎಲ್ಲರೂ ಊಟಕ್ಕೆ ಬನ್ನಿ ಎಂದು ಕರದೇ ಬಿಟ್ತರು. ಅದಾಗಲೇ ಎನ್ನಾಗಿ ಹಸಿದಿದ್ದ ಮಕ್ಕಳು ಮತ್ತು ವಯಸ್ಸಾದವರು ಗಬ್ಬಕ್ಕನೆ ಚಾಪೆಯ ಮೇಲೆ ಕುಳಿತು, ಎಲೆ ಹಾಕುವುದನ್ನೇ ಬಕ ಪಕ್ಷಿಯಂತೆ ಕಾಯತೊಡಗಿದರು. ಇದನ್ನು ಗಮನಿಸಿದ ಅಡುಗೆಯವರೂ ಕೂಡಲೇ ಎಲೆ ಬಡಿಸಿ ಲೋಟ ಇಟ್ಟು ನೀರು ಬಡಿಸಿ ಎಲೆ ಎಲ್ಲಾ ತೊಳಿದುಕೊಳ್ಳಿ, ಒಟ್ಟಿಗೇ ಎಲ್ಲರೂ ಒಂದೇ ಸಾರಿ ಕುಳಿತುಕೊಂಡು ಬಿಟ್ಟರೇ ನಮಗೂ ಬಡಿಸುವುದು ಸುಲಭವಾಗುತ್ತದೆ ಎಂದು ಹೇಳಿದರು. ಅವರು ಹೇಳುತ್ತಿರುವುದು ಸರಿ ಎಂದು ಖಾಲಿ ಇದ್ದ ಎಲೆಗಳಿಗೆ ಏ ನೀನು ಕೂತ್ಕೋ ಎಂದರೆ, ಇಲ್ಲಾಪ್ಪಾ ನಾನು ಎರಡನೇ ಪಂಕ್ತಿಯಲ್ಲಿ ಕೂತ್ಕೋತೀನಿ. ಅರ್ಜೆಂಟ್ ಇದ್ದವರು ಕೂತ್ಕೊಳ್ಳಿ ಎಂದು ಹೇಳುವರು ಕೆಲವರಾದರೇ, ಯಾರು ಏನಾದರೂ ತಿಳಿದುಕೊಳ್ಳಲಿ ಮಕ್ಕಳು ಸ್ಕೂಲಿನಿಂದ ಬರುವ ಸಮಯವಾಯ್ತು. ನಾನಂತೂ ಊಟಕ್ಕೆ ಕೂತ್ಕೋತೀನಪ್ಪಾ ಎನ್ನುವರು ಇನ್ನು ಕೆಲವರು. ಒಟ್ಟಿನಲ್ಲಿ ಹಾಕಿದ ಎಲೆ ಮುಂದೆ ಎಲ್ಲರೂ ಕುಳಿತು ಕೊಳ್ಳುವಷ್ಟರಲ್ಲಿಯೇ ಐದು ಹತ್ತು ನಿಮಿಷ ತಡವಾಗಿಯೇ ಹೊಯ್ತು. ಅಷ್ಟರಲ್ಲಿ ಪಿಂಡ ವಿಸರ್ಜನೆಗೆ ಹೋಗಿದ್ದವರೂ ಹಿಂದಿರುಗಿ ಕೈಕಾಲು ತೊಳೆದುಕೊಂಡು ಅವರಿಗೆಂದೇ ಮೀಸಲಾಗಿದ್ದ ಎಲೆಗಳ ಮುಂದೆ ಕುಳಿತುಕೊಂಡು ಭಟ್ರೇ ಎಲ್ಲರೂ ಬಂದಾಯ್ತು ಇನ್ನು ಬಡಿಸಿ ಎಂದರು.
ಎಲ್ಲರೂ ಎಲೆ ಮುಂದೆ ಕುಳಿತುಕೊಂಡರೂ ಎಷ್ಟು ಹೊತ್ತಾದರೂ ಬಡಿಸುವ ಲಕ್ಷಣಗಲೇ ಕಾಣಿಸುತ್ತಿಲ್ಲಾ. ಎಲ್ಲರ ಹೊಟ್ಟೆ ಕವ ಕವಾ ಎನ್ನುತ್ತಿದೆ ಆದರೆ ಎಲೆ ಹಾಕಿ ಹೋದ ಮೇಲೆ ಭಟ್ಟರೇ ನಾಪತ್ತೆಯಾಗಿದ್ದಾರೆ. ಅದೇ ಸಮಯದಲ್ಲಿ ಅಡುಗೆ ಮನೆಯ ಹಿಂದಿನ ಹಿತ್ತಲಿನಲ್ಲಿ ಎನೋ ಜೋರು ಜೋರಾದ ಮಾತು ಕತೆಯಾಗುತ್ತಿದ್ದ ಶಭ್ಧ ಕೇಳಿಬಂದು ಎನಪ್ಪಾ ಅದು ಎಂದು ಶಂಕರ ನೋಡಲು ಹೋದರೆ, ಅಡುಗೆ ಭಟ್ಟರು ಮತ್ತು ಬ್ರಾಹ್ಮಣಾರ್ಥಕ್ಕೆ ಬಂದಿದ್ದ ಬ್ರಾಹ್ಮಣರೊಬ್ಬರು ಒಂದು ಪಟಾ ಪಟಿ ಚೆಡ್ಡಿಯನ್ನು ಹಿಡಿದುಕೊಂಡು ಇದು ನನ್ನದು, ಇದು ನನ್ನದು ಎಂದು ಜಗಳವಾಡುತ್ತಿದ್ದಾರೆ. ಏನ್ರೀ ನೀವು? ಬೆಳಗ್ಗೆಯೇ ಅಡಿಗೆ ಕೆಲಸಕ್ಕೆ ಇಳಿಯುವ ಮುಂಚೆಯೇ ಈ ಚೆಡ್ಡಿಯನ್ನು ತೆಗೆದಿಟ್ಟು ಮಡಿಯುಟ್ಟು ಅಡಿಗೆ ಕೆಲಸಕ್ಕೆ ಇಳಿದಿದ್ದೀನಿ. ಈಗ ನೀವು ಬಂದು ಈ ಚೆಡ್ಡಿ ನನ್ನದು ಎಂದರೆ ಹೇಗೆ? ಎಂದು ಭಟ್ಟರು ಕೇಳಿದರೆ, ಅಯ್ಯೋ ಮಧ್ಯಾಹ್ನ ನಾನು ಬ್ರಾಹ್ಮಣಾರ್ಥಕಕ್ಕೆ ಕೂರುವ ಮೊದಲು ಇಲ್ಲೇ ನನ್ನ ಬಟ್ಟೆಗಲನ್ನೆಲ್ಲಾ ಬಿಚ್ಚಿ ಎತ್ತಿಟ್ಟು ಮಡಿ ಉಟ್ಟು ಕೊಂಡು ಶ್ರಾದ್ಧಕ್ಕೆ ಕುಳಿತಿದ್ದೆ. ಇದು ನನ್ನದೇ ಚೆಡ್ಡಿ. ಅಡುಗೆಯವರು ದ್ರಾಕ್ಷಿ, ಗೋಡಂಬಿ, ಎಣ್ಣೆ , ತುಪ್ಪಾ ಪಾಕೀಟುಗಳನ್ನು ಕದ್ದು ಕೊಂಡು ಹೋಗುತ್ತಾರೆ ಎಂದು ಕೇಳಿದ್ದೆ. ಆದರೆ ಇಲ್ಲಿ ನೋಡಿದರೆ ಚೆಡ್ಡಿಯನ್ನೇ ಕಳ್ತನ ಮಾಡುತ್ತಾರೆ ಎಂದು ತಿಳಿದಿರಲಿಲ್ಲ. ರಾಮ ರಾಮ ಎಂತಹ ಕಲಿಗಾಲ ಬಂತಪ್ಪಾ. ಒಳ ಚೆಡ್ಡಿಯನ್ನೂ ಬಿಡುವುದಿಲ್ಲವಲ್ಲಪ್ಪಾ ಎಂದು ತಮ್ಮ ಗೋಳನ್ನು ತೋಡಿಕೊಳ್ಳುತ್ತಿದ್ದಾರೆ ಆ ಬ್ರಾಹ್ಮಣರು. ಏನ್ರೀ ನೀವು ನನ್ನನ್ನೇ ಕಳ್ಳಾ ಅಂತಿದ್ದೀರಿ? ನಾನು ಎಷ್ಟು ವರ್ಷಗಳಿಂದ ಇವರ ಮನೆಗೆ ಅಡುಗೆಗೆ ಬರುತ್ತಿದ್ದೀನಿ. ಯಾವಾಗಲಾದರೂ ನನ್ನಿಂದಾ ಏನಾದರೂ ಕಳ್ತನಾ ಆಗಿದ್ಯಾ ಅಂತ ವಿಚಾರಿಸಿ. ಸುಮ್ಮನೆ ಬಾಯಿಗೆ ಬಂದ ಹಾಗೆ ಏನೇನೋ ಹರಟಬೇಡಿ. ದುಡ್ಡು ಕಾಸು ಅಂದ್ರೆ ಓಕೆ, ಅದೂ ನಿಮ್ಮ ಚೆಡ್ಡೀನ ಕಳ್ತನ ಮಾಡೋ ಅಷ್ಟು ದರಿದ್ರ ನನಗೆ ಬಂದಿಲ್ಲ. ದುಡಿದು ತಿನ್ನುತ್ತೇನೇ ಹೊರತು ಈ ರೀತಿ ಚಿಲ್ರೆ ಕೆಲಸ ಮಾಡೋದಿಲ್ಲಾ ಎಂದು ಭಟ್ಟರೂ ದಬಾಯಿಸುತ್ತಿದ್ದನ್ನು ನೋಡಿದ ಶಂಕರ. ರೀ.. ರೀ.. ಭಟ್ಟೇ, ಸ್ವಲ್ಪ ತಡೀರೀ.. ಅಲ್ಲಿ ಎಲ್ಲರೂ ಹೊಟ್ಟೆ ಹಸಿದು ಕೊಂಡು ಊಟಕ್ಕೆ ಕುಳಿತಿದ್ದಾರೆ ಮೊದಲು ಅವರಿಗೆ ಊಟ ಬಡಿಸಿ. ನಾನು ನಿಮ್ಮ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಸಮಾಧಾನ ಪಡಿಸಿ ಅವರನ್ನು ಅಡುಗೆ ಬಡಿಸಲು ಒಳಗೆ ಕಳುಹಿಸಿ ನಿಧಾನವಾಗಿ ಎಲ್ಲವನ್ನೂ ವಿಚಾರಿಸಿ ಸಮಸ್ಯೆ ಬಗೆಹರಿಸಿ ಒಳಗೆ ಬರುವಷ್ಟರಲ್ಲಿ ಅನ್ನಾ ತೊವ್ವೇ, ಅನ್ನಾ ಹುಳಿ, ಅನ್ನಾ ಸಾರು ಮುಗಿಸಿ, ಪಾಯಸದ ಜೊತೆ ವಡೆ ವಿಚಾರಣೆ ನಡೆಯುತ್ತಿತ್ತು.
ಇದೇನೋ ಶಂಕರ ಇದ್ದಕ್ಕಿದ್ದಂತೆಯೇ ಊಟ ಬಿಟ್ಟು ಎದ್ದು ಹೋದೆ. ನೀನು ಹೊದ ಸ್ವಲ್ಪ ಹೊತ್ತಿನಲ್ಲಿಯೇ ಬಡಿಸೋಕೆ ಶುರುಮಾಡಿದರು. ಶಂಕರ ಎಲ್ಲಿ ಎಂದರೆ ಬರ್ತಾನೆ ನೀವು ಊಟ ಮಾಡಿ ಅಂದ್ರೂ. ನೀನು ನೋಡಿದ್ರೇ ಈಗ ಬರ್ತಾ ಇದ್ಯಾ ಎಲ್ಲಿ ಹೋಗಿದ್ದೆ? ಅಂತಾ ಕೇಳಿದರು ಶಂಕರನ ಮಾವ. ಅಯ್ಯೋ ಬಿಡಿ ಮಾವ. ಅದೊಂದು ದೊಡ್ಡ ಕಥೆ. ನೀವು ಊಟ ಮಾಡಿ ಆಮೇಲೆ ನಿಧಾನವಾಗಿ ಹೇಳ್ತೀನಿ ಎಂದ ಶಂಕರ. ಏ, ಊಟ ಮಾಡ್ತಾ ಇರೋರು ನಾವು. ನೀನು ಹೇಗಿದ್ರೂ ಮುಂದಿನ ಪಂಕ್ತಿಲೇ ಊಟ ಮಾಡ್ಬೇಕು. ಹೇಗೂ ಸುಮ್ಮನೆ ಇದ್ಯಲ್ಲಾ ಹೇಳು ಕೇಳೋಣ ಎಂದು ಕಿಚಾಯಿಸಿದರು. ಸರಿ ನಿಮ್ಮಿಷ್ಟ ಎಂದು ಶಂಕರ ಅಡುಗೆಯವರು ಮತ್ತು ಬ್ರಾಹ್ಮಣರು ಪಟಾಪಟಿ ಚೆಡ್ಡಿಗೆ ಜಟಾಪಟಿಯ ವಿಷಯವನ್ನು ಸವಿರವಾಗಿ ತಿಳಿಸಿದ. ಅದು ಸರಿ ಸಮಸ್ಯೆ ಎಲ್ಲಿತ್ತು? ಮತ್ತು ಹೇಗೆ ಬಗೆ ಹರೀತೂ ಅಂತಾನೇ ಹೇಳ್ತಾನೇ ಇಲ್ವಲ್ಲಪ್ಪಾ ಎಂದು ಶಂಕರನ ಚಿಕ್ಕಪ್ಪ ತೆಗೆದರು ವರಾತ.
ಆದೇನೂ ಇಲ್ಲಾ ಚಿಕ್ಕಪ್ಪಾ. ಇಬ್ಬರೂ ಸರಿಯಾಗಿಯೇ ಹೇಳುತ್ತಿದ್ದರು ಎಂದ ಶಂಕರ. ಮತ್ತೇ? ಇಬ್ಬರೂ ಸರಿಯಾಗಿದ್ದರೆ ಚೆಡ್ಡಿ ಮಾತ್ರ ಒಂದೇ ಅದು ಹೇಗೆ ಸಾಧ್ಯ? ಎಂದು ಮತ್ತೆ ಪ್ರಶ್ನೆ ಹಾಕಿದರು. ಅದೇನಪ್ಪಾ ಆಯ್ತು ಎಂದರೆ, ಅಲ್ಲಿದ್ದ ಪಟಾಪಟಿ ಚೆಡ್ಡಿ ಶಾಸ್ತ್ರಿಗಳದ್ದು. ಅಡುಗೆಯವರು ಎತ್ತಿಟ್ಟಿದ್ದ ಚೆಡ್ದಿಯನ್ನು ನಮ್ಮ ಅಜ್ಜಿ ಗೊತ್ತಿಲ್ಲದೇ ಒಗೆಯುವುದಕ್ಕೆ ಹಾಕಿ ಬಿಟ್ಟಿದ್ದರು. ಅಲ್ಲಿಯವರೆಗೂ ಅಡುಗೆ ಮಾಡುವುದರಲ್ಲಿ ನಿರತಾಗಿದ್ದ ಭಟ್ಟರು ಆ ಕಡೆ ಗಮನ ಕೊಟ್ಟಿರಲಿಲ್ಲ. ಯಾವಾಗ ಅಡುಗೆ ಎಲ್ಲಾ ಮುಗಿಸಿ ಸ್ವಲ್ಪ ಬಿಡುವಾಗಿದ್ದಾಗ, ಶಾಸ್ತ್ರಿಗಳು ಮಡಿ ಬಟ್ಟೆ ತೆಗೆದು ಬೇರೆ ಬಟ್ಟೆ ಹಾಕಿಕೊಳ್ಳುವಾಗ ಅಡುಗೇ ಭಟ್ಟರೂ ತಮ್ಮ ಬಟ್ಟೆಗಳತ್ತ ಹರಿಸುತ್ತಾರೆ ತಮ್ಮ ಚಿತ್ತ. ಆಗ ಅವರ ಚೆಡ್ಡಿ ಕಾಣದಿದ್ದಾಗ ಅದೇ ರೀತಿಯ ಚೆಡ್ಡಿಯನ್ನು ಶಾಸ್ತ್ರಿಗಳು ಹಾಕಿಕೊಂಡಿದ್ದನ್ನು ನೋಡಿದ ಪರಿಣಾಮವಾಗಿಯೇ ಇಷ್ಟೊಂದು ಪಜೀತಿ ಮತ್ತು ಗಡಿ ಬಿಡಿ. ನಮ್ಮ ಅಜ್ಜೀ ಮಾಡಿದ ಕಿತಾಪತಿಗೆ ಭಟ್ಟರು ಮತ್ತು ಶಾಸ್ತ್ರಿಗಳು ಜಟಾಪಟಿ ಮಾಡಬೇಕಾಯ್ತು ಎಂದು ಹೇಳಿ ನಿಟ್ಟುಸಿರು ಬಿಟ್ಟ ಶಂಕರ. , ಅಲ್ಲಿಯವರೆಗೂ ತದೇಕ ಚಿತ್ತದಿಂದ ಶಂಕರನ ಕಥೆಯನ್ನೇ ಕೇಳುತ್ತಿದ್ದವರೆಲ್ಲಾರೂ ಜೋರಾಗಿ ಗಹ ಗಹಿಸಿ ಮಾಡುಕಿತ್ತು ಹೋಗುವಂತೆ ನಕ್ಕಿದ್ದೇ ನಕ್ಕಿದ್ದು. ನಿಧಾನವಾಗಿ ಏನೂ ನಡದೇ ಇಲ್ಲದಂತೆ ವಡೆ ಬಡಿಸುತ್ತಿದ್ದ ಭಟ್ಟರು ಎಲ್ಲರೂ ನಕ್ಕಿದ್ದನ್ನು ನೋಡಿ ಒಳಗೆ ಓಡಿ ಹೋದವರು ಅಮೇಲೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಮೊದಲನೇ ಪಂಕ್ತಿ ಊಟ ಮಾಡುವಾಗ ಎಲ್ಲರೂ ನಗಲು ಶುರು ಮಾಡಿದ್ದು ಎರಡನೇ ಪಂಕ್ತಿ ಮುಗಿದ ಮೇಲೂ ನಗುವಿನ ಮೆಲುಕು ಮುಂದುವರೆದಿತ್ತು. ಕೇವಲ ಅಡುಗೆ ಭಟ್ಟರನ್ನಲ್ಲದೇ ಪರೋಕ್ಷವಾಗಿ ಕಾರಣೀಭೂತರಾಗಿದ್ದ ಅಜ್ಜಿಯನ್ನೂ ಎಲ್ಲರೂ ಕಾಡದೇ ಬಿಡಲಿಲ್ಲ.
ಮುಂದಿನ ವರ್ಷ ಮತ್ತದೇ ಶ್ರಾದ್ಧದಲ್ಲಿ ಅದೇ ಅಡಿಗೆಯವರು ಬಂದಿದ್ದರು. ಮಧ್ಯಾಹ್ನ ಬಂದ ಪುರೋಹಿತರು ಅವರನ್ನು ನೋಡಿ, ಏನು ಭಟ್ಟರೇ ಆರಾಮೇ? ಈ ಬಾರಿ ನಿಮ್ಮ ಪಟಾ ಪಟಿ ಚೆಡ್ಡಿಗೆ ಸಮಸ್ಯೆ ಆಗಬಾರದೆಂದು ಈಗಿನ ಕಾಲದ ಸಣ್ಣ ವಯಸ್ಸಿನ ಬ್ರಾಹ್ಮಣರನ್ನು ಕರೆದು ಕೊಂಡು ಬಂದಿದ್ದೀನಿ. ಅವರು ನಿಮ್ಮ ರೀತಿ ಪಟಾ ಪಟಿ ಚೆಡ್ಡಿ ಹಾಕುವುದಿಲ್ಲ ಬಿಡಿ ಎಂದಾಗ ಮತ್ತೊಮ್ಮೆ ಎಲ್ಲರೂ ಅದೇ ಪ್ರಸಂಗವನ್ನು ನೆನೆದು ನಕ್ಕಿದೇ ನಕ್ಕಿದ್ದು.
ಹೀಗೆ ಜೀವನದಲ್ಲಿ ನಮ್ಮ ಸುತ್ತ ಮುತ್ತಲಿನಲ್ಲಿಯೇ ನಡೆಯುವ ಅನೇಕ ಸಣ್ಣ ಪುಟ್ಟ ಪ್ರಸಂಗಗಳೇ ತಿಳಿದೋ ತಿಳಿಯದೋ ಹಾಸ್ಯಮಯವಾಗಿ ಎಲ್ಲರಿಗೂ ನಗೆ ಬುಗ್ಗೆಯನ್ನು ಉಕ್ಕಿಸುತ್ತದೆ. ನಗುತ್ತಿರುವವರ ಆಯಸ್ಸು ಜಾಸ್ತಿ ಎಂದು ಎಲ್ಲೋ ಓದಿನ ನೆನಪು. ಹಾಗಾಗಿ ಸದಾ ನಗ್ತಾ ಇರೀ ಮತ್ತು ಎಲ್ಲರನ್ನೂ ನಗಿಸ್ತಾ ಇರಿ. ಜೀವನದಲ್ಲಿ ಹಾಸ್ಯ ಮಾಡ್ತಾ ಇರಬೇಕೇ ಹೊರತು, ನಾವೇ ಹಾಸ್ಯಾಸ್ಪದವಾಗಬಾರದು
ಏನಂತೀರೀ?
ಬಹಳ ಅದ್ಭುತವಾಗಿ ಬರೆದಿದ್ದೀರಿ. ಶ್ರಾದ್ಧ ಕಾರ್ಯದಲ್ಲೂ ಹಾಸ್ಯ… ಇದೆ ಅಲ್ಲವೇ ಜೀವನ!
ಕಷ್ಟದಲ್ಲೂ ಸುಖವನ್ನು ಹುಡುಕುವುದು ಅಥವಾ ಹಾಸ್ಯವನ್ನು ಕಾಣುವುದು…
LikeLike
ನಿರ್ಮಲ ಮನಸ್ಸಿದ್ದಲ್ಲಿ, ಎಲ್ಲಾ ಕಡೆಯಲ್ಲಿಯೂ ಹಾಸ್ಯವನ್ನು ಕಾಣಬಹುದು ಎನ್ನುವುದಕ್ಕೆ ಈ ಪ್ರಸಂಗವೇ ಸರಿಯಾದ ಉದಾಹರಣೆ.
LikeLike
ಸೊಗಸಾಗಿ ಬರೆದಿದ್ದೀರಿ. ಹಾಸ್ಯ ಎಲ್ಲೆಡೆ ಇದ್ದರೂ ನೋಡುವ, ಹುಡುಕುವ ಕಣ್ಣು ನಮ್ಮದಾಗಬೇಕು.
LikeLiked by 1 person
ಎಲ್ಲಾ ಮುಗಿದ ಮೇಲೆ ಮಡಿಕೋಲಿನಲ್ಲಿ ಭಟ್ರ ಚಡ್ಡಿ ಸಿಕ್ಕಿಸಿ say peace ಅಂದ್ರ ಶಂಕ್ರನ ಅಜ್ಜಿ ✌✌😃😃😂😂 ನಿಮ್ಮ ಶಂಕ್ರನ ಮನೆಯ ಶ್ರಾದ್ಧದ ಕಥೆ ಚೆನ್ನಾಗಿದೆ.
LikeLiked by 1 person
ಅಜ್ಜಿ ಹಾಗೆ ಮಾಡಿದ್ರೂ ಈ ಸಮಸ್ಯೆಯೇ ಇರುತ್ತಿರಲಿಲ್ಲ. ಅಜ್ಜಿ ಮುಗುಮ್ಮಾಗಿ ಏನೂ ಗೊತ್ತಿಲ್ಲದೇ ಇದ್ದದ್ದೇ ಈ ಪಾಟಾ ಪಟಿ, ಜಟಾಪಟಿಗೆ ಕಾರಣವಾಯಿತು
LikeLike
ಪಟಾ ಪಟಿ ಗೆ ಜಟಾಪಟಿ ನಡೆದ ಪ್ರಸಂಗ ವರ್ಣಿಸಿರುವ ಶ್ರೀ.ಶ್ರೀಕಂಠ ಬಳಕಂಚಿ ರವರೆ
ಇದನ್ನು ಓದಿ ಬಿದ್ದು ಬಿದ್ದು ನಕ್ಕಿದ್ದು. ಅಲ್ಲದೆ ಹೊಟ್ಟೆ ನೋವು ಸಹ ಬರುವಹಾಗೆ
ಕಲ್ಪಿಸಿ ಕೊಂಡು ಈ ಪ್ರಸಂಗವನ್ನು. ಮತ್ತಷ್ಟು ನಗುವ ಹಾಗೆ ಬರೆದಿರುವ ಶ್ರೀ. ಶ್ರೀಕಾಂತ ಬಾಳಕಂಚಿ ರವರಿಗೆ
ರಾಮಚಂದ್ರನ ಧನ್ಯವಾದಗಳು
LikeLiked by 1 person