ಜನ್ಮ ರಹಸ್ಯ

ಅದು 1970ನೇ ಇಸವಿ ಅಕ್ಟೋಬರ್ ಮಾಸದ ಮೊದಲ ವಾರ. ಆಗ ತಾನೇ ಬಾದ್ರಪದ ಹಬ್ಬಗಳು ಕಳೆದು ಪಕ್ಷಮಾಸವೂ ಮುಗಿದು ಆಶ್ವಿಯಜಮಾಸ ಶುರುವಾಗುತ್ತಿತ್ತು. ನವರಾತ್ರಿಯ ಹಬ್ಬಕ್ಕೆ ಮನೆಯಲ್ಲಿ ಗೊಂಬೆಗಳನ್ನು ಕೂರಿಸಲು ಸಕಲ ಸಿದ್ಧತೆಗಳು ನಡೆಯುತ್ತಿತ್ತು. ಚೊಚ್ಚಲು ಬಾಣಂತನಕ್ಕೆ ಬಂದಿದ್ದ ಹಿರಿಯ ಮಗಳು ಆದರೆ ಇದ್ದಕ್ಕಿದ್ದಂತೆಯೆ ಹೊಟ್ಟೆ ನೋವು ಎಂದು ಹೇಳಿದಾಗ, ತಾಯಿ ಗರ್ಭಿಣಿ ಹೆಂಗಸರಿಗೆ ಈ ರೀತಿಯ ನೋವುಗಳೆಲ್ಲಾ ಸಹಜ ಎಂದು ಬಿಸಿ ನೀರು ಮತ್ತು ಮನೆಯ ಮದ್ದನ್ನು ನೀಡಿದರೂ ನೋವು ಕಡಿಮೆಯಾಗದಿದ್ದಾಗ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿದರು. ಅಷ್ಟು ತಡರಾತ್ರಿಯಲ್ಲಿ ಹೇಗೆ ಕರೆದುಕೊಂಡು ಹೋಗುವುದು. ಮನೆಯ ಹಿರಿಯರೂ ಸಹಾ ಆರೋಗ್ಯ ಸರಿಯಿಲ್ಲದೇ ಚಿಕಿತ್ಸೆಯಲ್ಲಿದ್ದಾರೆ. ಇನ್ನು ಬೆಳೆದು ನಿಂತ ಹೆಣ್ಣು ಮಕ್ಕಳಿದ್ದಾರೆ.

ಅಷ್ಟು ಹೊತ್ತಿನಲ್ಲಿ ಅಕ್ಕ ಪಕ್ಕದವರಿಗೆ ತೊಂದರೆ ಕೊಡಬಾರದೆಂದು ನಿರ್ಧರಿಸಿ ಇದ್ದ ಒಬ್ಬನೇ ಒಬ್ಬ ಮಗನನ್ನು ಎಬ್ಬಿಸಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡು ಆಷ್ಟರಲ್ಲಿ ನಾನು ಬಟ್ಟೆ ಬರೆ ಮತ್ತು ಅಗತ್ಯ ವಸ್ತುಗಳನ್ನು ತೆಗೆದಿಟ್ಟು ಕೊಳ್ಳುತ್ತೇನೆ ಎಂದು ಸೂಚಿಸಿದರು. ಅಮ್ಮ ಹೇಳಿದ್ದೇ ವೇದವಾಕ್ಯ ಎಂದು ನಂಬಿದ್ದ ಮಗ ಕೂಡಲೇ ಮನೆಯ ಪಕ್ಕದಲ್ಲಿದ್ದ ಪೋಲೀಸ್ ಸ್ಟೇಷನ್ನಿಗೆ ಧಾವಿಸಿದ. ಈ ರೀತಿಯ ಪರಿಸ್ಥಿತಿ ಎಂದಾದರೂ ಬರಬಹುದೆಂಬ ಕಾರಣದಿಂದಾಗಿಯೇ ಚೆನ್ನಾಗಿಯೇ ಪರಿಚಯವಿದ್ದ ಪೋಲಿಸರಿಗೆ ಅಗತ್ಯ ಬಿದ್ದಾಗ ನಿಮ್ಮ ವಾಹನದ ಅವಶ್ಯತೆ ಆಗಬಹುದೆಂದು ತಿಳಿಸಿದ್ದ ಕಾರಣ ಮತ್ತು ಗರ್ಭಿಣಿ ಹೆಂಗಸಿನ ಪರಿಸ್ಥಿತಿ ಅರಿವಿದ್ದ ಪೋಲೀಸರೂ ಸಹಾ ಮಾನವೀಯತೆಯಿಂದ ಕೂಡಲೇ ತಮ್ಮ ಜೀಪ್ ಕಳುಹಿಸಿ ಕೊಟ್ಟು ತುಂಬು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿ ಸ್ವಲ್ಪ ಹೊತ್ತಿನ ನಂತರ ತಾಯಿ ಮಗಳೂ ಆಸ್ಪತ್ರೆಯಲ್ಲಿಯೇ ಉಳಿದು ಕೊಂಡರೆ ಮಗ ಅದೇ ಪೋಲೀಸ್ ವಾಹನದಲ್ಲಿ ಮನೆಗೆ ಹಿಂದಿರುಗಿದ.

ಮಾರನೇಯ ದಿನ ಬೆಳಿಗ್ಗೆ ಮನೆಯವರೆಲ್ಲರೂ ಎದ್ದಾಗ, ಅಮ್ಮ ಮತ್ತು ಹಿರಿಯ ಮಗಳು ಮನೆಯಲ್ಲಿ ಕಾಣಿಸಲಿಲ್ಲದ ಕಾರಣ ಎಲ್ಲರಿಗೂ ಆತಂಕ. ಅದೇ ಸಮಯಕ್ಕೆ ಮನೆಯ ಮಗ ನಿದ್ದೆಯಿಂದ ಎದ್ದು ಹಿಂದಿನ ರಾತ್ರಿ ನಡೆದದ್ದೆಲ್ಲವನೂ ತಿಳಿಸಿ, ಬಿಸಿ ಬಿಸಿ ಕಾಫೀ ಮತ್ತು ತಿಂಡಿಯನ್ನು ಮಾಡಿ ಕೊಡಲು ಎರಡನೇ ತಂಗಿಗೆ ತಿಳಿಸಿದ. ಅಣ್ಣನ ಕೋರಿಕೆಯನ್ನು ಕೆಲವೇ ಕೆಲವು ನಿಮಿಷಗಳಲ್ಲಿ ಪೂರೈಸುವ ಹೊತ್ತಿಗೆ, ತಂದೆ ಮತ್ತು ಮಗ ಸ್ನಾನ ಸಂಧ್ಯಾವಂದನೆಗಳನ್ನು ಮುಗಿಸಿ ಥರ್ಮಾಸ್ ಫ್ಲಾಸ್ಕಿನಲ್ಲಿ ಹಾಕಿಕೊಟ್ಟ ಕಾಫಿ ಮತ್ತು ತಿಂಡಿಯ ಡಭ್ಬಿಯನ್ನು ತೆಗೆದುಕೊಂಡು ಇಬ್ಬರೂ ಒಂದೇ ಸೈಕಲ್ಲೇರಿ ಮನೆಯಿಂದ ನಾಲ್ಕೈದು ಕಿಮಿ ದೂರದಲ್ಲಿದ್ದ ಆಸ್ಪತ್ರೆಗೆ ತಲುಪುವಷ್ಟರಲ್ಲಿ, ಪ್ರಸವ ನೋವಿನಿಂದ ಇಡೀ ರಾತ್ರಿ ನರಳಿ ಗರ್ಭಿಣಿಗೆ ಆಗತಾನೇ ನಿದ್ದೆ ಹತ್ತಿತ್ತು. ಸರಿ ಗರ್ಭಿಣಿಯನ್ನು ಎಚ್ಚರಿಸುವುದು ಬೇಡ ಎಂದು ನಿರ್ಧರಿಸಿ ಆಸ್ಪತ್ರೆಯ ವೈದ್ಯರನ್ನು ಕಾಣಲು ಹೋದಾಗ, ಅ ಕ್ಷಣದಲ್ಲಿ ಕೇವಲ ಕರ್ತವ್ಯ ನಿರತ ವೈದ್ಯರಿದ್ದು ಹಿರಿಯ ವೈದ್ಯರು ಸುಮಾರು ಒಂಭತ್ತು ಗಂಟೆ ಹೊತ್ತಿಗೆ ರೋಗಿಗಳ ತಪಾಸಣೆಗೆ ಬರುತ್ತಾರೆ ಎಂದು ತಿಳಿದ ಕೂಡಲೇ ಮಗನನ್ನು ಆತನ ಕಛೇರಿಗೆ ಹೋಗಲು ತಿಳಿಸಿ ತಾವೂ ಸಹಾ ಆ ಆಸ್ಪತ್ರೆಯ ಹತ್ತಿರದಲ್ಲೇ ಇದ್ದ ತಮ್ಮ ಕಛೇರಿಗೆ ಹೋಗಿ ಕೆಲಸ ಆರಂಭಿಸಿ ಸರಿಯಾಗಿ ಒಂಬತ್ತರ ಹೊತ್ತಿಗೆ ಹಿರಿಯ ವೈದ್ಯರನ್ನು ಕಾಣಲು ಆಸ್ಪತ್ರೆಗೆ ಬಂದರು. ಆವರನ್ನು ನೋಡಿದ ಕೂಡಲೇ ಆ ವೈದ್ಯರು ಎದ್ದು ನಿಂತು ತಮ್ಮ ಗೌರವವನ್ನು ಸೂಚಿಸಿ, ಸಾರ್ ಈಗ ತಾನೇ ನಿಮ್ಮ ಮಗಳನ್ನೇ ಪರೀಕ್ಷಿಸಿ ಬಂದೆ. ಈಗ ತಾನೇ ಹೆರಿಗೆ ನೋವು ಶುರುವಾಗಿದೆ. ನೋಡೋಣ ಇನ್ನು ಎರಡು ಮೂರು ದಿನಗಳ ಒಳಗೆ ಹೆರಿಗೆಯಾಗ ಬಹುದು. ಸುಮ್ಮನೆ ಮನೆಗೆ ಕರೆದು ಕೊಂಡು ಹೋಗಿ ಪುನಃ ಪುನಃ ಕರೆದು ಕೊಂಡು ಬರುವುದು ಕಷ್ಟದ ಕೆಲಸವಾದ್ದರಿಂದ ಇಲ್ಲಿಯೇ ಇದ್ದು ಪ್ರಸವ ಆದ ನಂತರ ತಾಯಿ ಮಗವಿನ ಆರೋಗ್ಯ ಸ್ಥಿತಿ ನೋಡಿದ ನಂತರ ಒಟ್ಟಿಗೆಮನೆಗೆ ಕರೆದುಕೊಂಡು ಹೋಗುವಿರಂತೆ. ಈಗ ಏನೂ ಗಾಬರಿಯಾಗುವ ಅವಶ್ಯಕತೆ ಇಲ್ಲ ಎಂದು ಸಮಾಧಾನ ಪಡಿಸಿದರು. ಇಡೀ ಕೋಲಾರದ ಚಿನ್ನದ ಗಣಿಯ ಅಷ್ಟೂ ಕಛೇರಿಗಳ ಪ್ರಮುಖ ನಿರ್ವಾಹಕರಾಗಿದ್ದ (ಅಡ್ಮಿನ್) ಶ್ರೀಯುತರ ಅಧಿಕಾರ ವ್ಯಾಪ್ತಿಯಲ್ಲಿ ಈ ಆಸ್ಪತ್ರೆಯೂ ಸೇರಿತ್ತು. ಹಾಗಾಗಿ ವೈದ್ಯರು ತುಸು ಹೆಚ್ಚಿನ ಕಾಳಜಿ ವಹಿಸುತ್ತಿದ್ದರು.

ಇನ್ನು ಮಡಿಗೆಂದು ಮನೆಗೆ ಬಂದ ತಾಯಿಯವರಿಗೆ ಒಂದು ಕಡೆ ಮಗಳ ಪ್ರಸವದ ಬೇನೆಯಾದರೆ, ಗೊಂಬೇ ಹಬ್ಬಕ್ಕೆಂದು ವಾರದಿಂದಲೇ ತಯಾರಿ ನಡೆಸಿ ಅಂದಿನಿಂದಲೇ ಶುರುವಾಗಿದ್ದ ನವರಾತ್ರಿಗೆ ಬೊಂಬೆ ಕೂರಿಸುವುದೋ ಬೇಡವೋ ಎಂಬ ಜಿಜ್ಞಾಸೆ ಮೂಡಿತಾದರೂ, ಸುಖಾ ಸುಮ್ಮನೆ ಹಬ್ಬವನ್ನು ನಿಲ್ಲಿಸಬಾರದೆಂದು ನಿರ್ಧರಿಸಿ ಶಾಸ್ತ್ರಕ್ಕೆಂದು ದೇವರ ಮನೆಯಲ್ಲಿ ಕೇವಲ ಪಟ್ಟದ ಗೊಂಬೆಗಳನ್ನು ಇರಿಸಿ ಲಗುಬಗೆಯಿಂದ ಪೂಜೆ ಮಾಡಿ ಮನೆಯವರಿಗೆಲ್ಲಾ ಅಡುಗೆ ಮಾಡಿಟ್ಟು ಮಧ್ಯಾಹ್ನದ ಊಟವನ್ನು ತೆಗೆದುಕೊಂಡು ಪುನಃ ಆಸ್ಪತ್ರೆಗೆ ಹೊರಟರು. ಈ ರೀತಿಯ ಪ್ರಕ್ರಿಯೆ ಮುಂದಿನ ಮೂರು ದಿನಗಳು ನಡೆಯಿತು. ಮಗಳಿಗೆ ಬಿಟ್ಟು ಬಿಟ್ಟೂ ನೋವು ಬರುತ್ತಿತ್ತಾದರೂ ನಿಜವಾದ ಹೆರಿಗೆಯ ನೋವು ಬರುತ್ತಿರಲಿಲ್ಲ. ಅತ್ತ ಬೆಂಗಳೂರಿನ ಪ್ರತಿಷ್ಠಿತ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಡನಿಗೆ ಇದಾವುದರ ಅರಿವೇ ಇರಲಿಲ್ಲ. ಮಡದಿಯನ್ನು ಬಾಣಂತನಕ್ಕೆ ತವರಿಗೆ ಕಳುಹಿಸಿಕೊಟ್ಟ ಮೇಲೆ ಪ್ರತೀ ಶನಿವಾರ ಸಂಜೆ ಬೆಂಗಳೂರಿನಿಂದ ಹೊರಟು ತಡರಾತ್ರಿಯ ಹೊತ್ತಿಗೆ ಮಾವನ ಮನೆ ತಲುಪಿ, ಪುನಃ ಭಾನುವಾರ ಸಂಜೆಯೋ ಇಲ್ಲವೇ ಸೋಮವಾರ ಬೆಳಗಿನ ಜಾವವೇ ಬೆಂಗಳೂರಿಗೆ ಹಿಂದಿರುಗುತ್ತಿದ್ದದ್ದು ಪ್ರತೀವಾರದ ದಿನಚರಿಯಾಗಿತ್ತು. ಆದರೆ ಶುಕ್ರವಾರ ಮಧ್ಯಾಹ್ನವೇ Wife admitted to hospital start immediately ಎಂಬ ಟಿಲಿಗ್ರಾಂ ಕಛೇರಿಗೇ ಬಂದ ಕಾರಣ, ಅದನ್ನು ತನ್ನ ಮೇಲಧಿಕಾರಿಗೆ ತೋರಿಸಿ ರಜೆ ಪಡೆದು ಮನೆಯವರ ಕ್ಷೇಮವನ್ನು ವಿಚಾರಿಸಲು ಮಾವನ ಊರು ತಲುಪಿದಾಗ ಸ್ವಲ್ಪ ಸಂಜೆಯ ಹೊತ್ತಾಗಿತ್ತು. ಬಸ್ಸಿನಿಂದ ಇಳಿದು ನೇರವಾಗಿ ಮನೆಗೆ ಹೋಗದೇ, ಅಸ್ಪತ್ರೆಗೆ ಹೋದಾಗ ಪತಿಯನ್ನು ನೋಡಿ ಕೊಂಚ ಸಂತೋಷ ಪಟ್ಟಳಾದರೂ, ಹೆರಿಗೆ ನೋವಿನ ಭರದಲ್ಲಿ ಆ ಸಂತೋಷ ಹೆಚ್ಚು ಹೊತ್ತು ಉಳಿಯಲಿಲ್ಲ. ಇದೇ ಪರಿಸ್ಥಿತಿ ಮುಂದಿನ ಎರಡು ದಿನಗಳವರೆಗೂ ಮುಂದುವರೆದು ಕೊನೆಗೆ ಸೋಮವಾರ ಬೆಳಿಗ್ಗೆ ಇನ್ನು ತಡ ಮಾಡಿದರೆ ತಾಯಿ ಮಗುವಿನ ಆರೋಗ್ಯಕ್ಕೆ ಅಪಾಯಕಾರಿ ಎಂದು ತಿಳಿಸಿ ಅಂದಿನ ಕಾಲಕ್ಕೇ ಬಹಳ ಬಹಳ ವಿರಳವಾಗಿದ್ದ ಸಿಝೇರಿಯನ್ ಮಾಡಲು ನಿರ್ಧರಿದರು. ಸಾಧಾರಣವಾಗಿ ಒಂಭತ್ತು ತಿಂಗಳು ಕಳೆದು ಒಂದು ವಾರಕ್ಕೋ ಇಲ್ಲವೇ ಎರಡನೇ ವಾರಕ್ಕೋ ಪ್ರಸವವಾಗುವ ಸಂದರ್ಭಗಳೇ ಹೆಚ್ಚಾಗಿರುವಾಗ ಬರೋಬರೀ ಹತ್ತು ತಿಂಗಳಾದರೂ ಪ್ರಸವವೇ ಆಗಿರದೆ, ಒಂದು ರೀತಿಯ ಗಜಪ್ರಸವದ ಮಾದರಿಯಾಗಿತ್ತು.

ತಾಯಿ ಮತ್ತು ಮಗು ಗಂಭೀರ ಸ್ಥಿತಿಯನ್ನು ತಲುಪಿದ್ದಾರೆ, ಸಹಜ ಹೆರಿಗೆ ಆಗದ ಕಾರಣ, ಆಪರೇಷನ್ ಮಾಡ ಬೇಕಂತೇ ಎಂಬ ವಿಷಯ ಇಡೀ ಮನೆಯವರಿಗೆಲ್ಲಾ ಆತಂಕವನ್ನು ಉಂಟು ಮಾಡಿತ್ತು. ಮನೆಯ ಯಜಮಾನರು ತಮ್ಮ ಅಧಿಕಾರದ ಪ್ರಭಾವ ಬಳಸಿ ಕೋಲಾರದಿಂದ ಹಿರಿಯ ಮತ್ತು ಸಿಝರಿಯೆನ್ ನಲ್ಲಿ ಪಳಗಿರುವ ಪ್ರಸೂತಿ ತಜ್ಣೆಯನ್ನು ಕರೆಸಲು ವ್ಯವಸ್ಥೆ ಮಾಡಿದ್ದರು. ಬೆಳ್ಳಿಗ್ಗೆಯೇ ಬರಬೇಕಾಗಿದ್ದವರು ಸುಮಾರು ಮಧ್ಯಾಹ್ನದ ಸಮಯಕ್ಕೆ ಬಂದು ಗರ್ಭಿಣಿಯನ್ನು ಕೂಲಂಕುಶವಾಗಿ ಪರೀಕ್ಷೀಸಿ ಈಗಾಗಲೇ ಹತ್ತು ತಿಂಗಳು ಪೂರ್ಣವಾಗಿ ಹೊಟ್ಟೆಯಲ್ಲಿ ಮಗು ಚೆನ್ನಾಗಿ ಬೆಳೆದಿರುವ ಕಾರಣ ಸಹಜವಾಗಿ ಪ್ರಸವ ಆಗುವುದು ಕಷ್ಟವಾಗುತ್ತಿದೆ. ಸ್ವಲ್ಪ ಶ್ರಮ ವಹಿಸಿ ಎಚ್ಚರಿಕೆಯಿಂದ ಈ ಕೂಡಲೇ ಸಿಝೇರಿಯನ್ ಮಾಡಿದಲ್ಲಿ ತಾಯಿ ಮತ್ತು ಮಗು ಇಬ್ಬರನ್ನೂ ಕಾಪಾಡಬಹುದು ಎಂದು ತಿಳಿಸಿ ಆಪರೇಷನ್ ಮಾಡಲು ಅಗತ್ಯವಿದ್ದ ಸಹಿಗಳನ್ನೆಲ್ಲಾ ಪತಿರಾಯರ ಹತ್ತಿರ ಮಾಡಿಸಿಕೊಂಡು ಸುಮಾರು ಒಂದು ಗಂಟೆಗೆ ಆಪರೇಷನ್ ಶುರು ಮಾಡಿದರೂ ಗಂಟೆ ಮೂರಾದರೂ ಒಳಗಿನಿಂದ ಮಗು ಅಳುವಿನ ಶಭ್ದ ಕೇಳಿಸುತ್ತಲೇ ಇಲ್ಲ. ಆವಾಗ, ಈವಾಗ ಒಮ್ಮೆ ದಾದಿಯರು ಹೊರಗೆ ಬಂದು ಏನೇನೋ ತೆಗೆದುಕೊಂಡು ಹೋಗುತ್ತಿದ್ದರಾದರೂ ಒಳಗೆ ಏನಾಗುತ್ತಿದೆ ಎಂಬುದನ್ನು ತಿಳಿಸದೇ ಇದ್ದದ್ದರಿಂದ ಆಸ್ಪತ್ರೆಯಲ್ಲಿ ಕಾಯುತ್ತಿದ್ದ ಮನೆಯವರಿಗೆಲ್ಲರಿಗೂ ಅತಂಕದ ಛಾಯೆ ಮೂಡಿತ್ತು. ಸುಮಾರು ಮೂರುವರೆಯ ಹೊತ್ತಿಗೆ ಹೊರಗೆ ಬಂದ ಹಿರಿಯ ವೈದ್ಯೆ ಗರ್ಭಿಣಿಯ ತಂದೆ ಮತ್ತು ಗಂಡನನ್ನು ಕರೆಸಿ ಕೊಂಡು ನೋಡಿ ಆಪರೇಷನ್ ಮಾಡುವುವುದು ಸುಲಭ ಆದರೆ ಅದರೆ ಮುಂದೆ ಅದರ ಪರಿಣಾಮ ಕೆಲವು ಬಾರಿ ಚೆನ್ನಾಗಿ ಇರದ ಕಾರಣ, ನಾವು ಇಂಗ್ಝೆಕ್ಷನ್ ಕೊಟ್ಟು ಕೃತಕ ಹೆರಿಗೆ ನೋವು ಬರಿಸಲು ಇದುವರೆಗೂ ಪ್ರಯತ್ನ ಪಟ್ಟೆವು. ಸುಮ್ಮನೆ ನೋವು ಬರುತ್ತಿದೆಯಾದರೂ ಪ್ರಸವ ಆಗುತ್ತಿಲ್ಲವಾದ್ದರಿಂದ ಸ್ವಲ್ಪ ರಿಸ್ಕ್ ತೆಗೆದುಕೊಂಡು ಈಗ ಆಪರೇಷನ್ ಮಾಡುತ್ತಿದ್ದೇವೆ. ನಾವು ನಮ್ಮ ಪ್ರಯತ್ನವನ್ನಂತೂ ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಮುಂದಿನದ್ದನ್ನು ಆ ಭಗವಂತನ ಮೇಲೆ ಭಾರ ಹಾಕೋಣ. ನಮ್ಮ ಮೇಲೆ ಭರವಸೆ ಇಡಿ ಎಂದು ಸಮಾಧಾನ ಪಡಿಸಿ ಒಳಗೆ ಹೋದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಅಲ್ಲಿಂದ ಹೊರೆಗೆ ಬಂದ ಪರಿಚಯದ ದಾದಿಯನ್ನು ಕೇಳಿದಾಗ, ಪರಿಸ್ಥಿತಿ ಸ್ವಲ್ಪ ಗಂಭೀರವಾಗಿದೆ. ಮಗು ಹೆಡ್ ಫಿಕ್ಸ್ ಆಗದ ಕಾರಣ ಸಹಜವಾದ ಹೆರಿಗೆಯಾಗುತ್ತಿಲ್ಲ. ಈಗಾಗಲೇ ಹತ್ತು ತಿಂಗಳಾದ ಪರಿಣಾಮ ಮಗು ತುಂಬಾನೇ ಬೆಳೆದು ಬಿಟ್ಟಿರುವ ಕಾರಣ, ಆಪರೇಷನ್ ಕೂಡ ಸ್ವಲ್ಪ ಕಷ್ಟ ಅದಕ್ಕೇ ಡಾಕ್ಟರ್ ಸ್ವಲ್ಪ ಹಿಂದೂ ಮುಂದೂ ನೋಡುತ್ತಿದ್ದಾರೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಾಯಿ ಇಲ್ಲವೇ ಮಗುವನ್ನು ಕಳೆದು ಕೊಳ್ಳುವ ಅಪಾಯ ಇದೆ ಎಂದು ವೈದ್ಯರುಗಳು ಮಾತನಾಡಿಕೊಳ್ಳುತ್ತಿದ್ದಾರೆಂದು ತಿಳಿಸಿ, ದಯವಿಟ್ಟು ಇದನ್ನು ನಾನು ಹೇಳಿದೆ ಎಂದು ಯಾರಲ್ಲೂ ಹೇಳಬೇಡಿ. ಆಮೇಲೆ ನನಗೆ ತೊಂದರೆಯಾಗುತ್ತದೆ ಎಂದು ಒಂದೇ ಉಸಿರಿನಲ್ಲಿ ದಾದಿ ಹೇಳಿದ್ದನ್ನು ಕೇಳಿದ ಮನೆಯವರಿಗೆಲ್ಲರಿಗೂ ಮತ್ತೊಮ್ಮೆ ಇನ್ನು ಆತಂಕ ಮೂಡಿಸಿತು.

Screenshot 2019-10-03 at 5.33.21 AM.png

ಅಲ್ಲಿಯವರೆಗೂ ಸುಮ್ಮನಿದ್ದ ಪತಿರಾಯರು ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದದ್ದನ್ನು ಕಂಡು ಈ ವಿಚಾರವನ್ನು ಊರಿನಲ್ಲಿರುವ ತನ್ನ ತಂದೇ ತಾಯಿಯವರಿಗೆ ತಿಳಿಸಲು ಅಲ್ಲೇ ಹತ್ತಿರವಿದ್ದ ಪೋಸ್ಟ್ ಆಫೀಸಿಗೆ ಹೋಗಿ ಕಾರ್ಡ್ ಒಂದನ್ನು ಕೊಂಡು ಮಡದಿಯನ್ನು ಹೆರಿಗೆಗಾಗಿ ಐದಾರು ದಿನಗಳ ಹಿಂದೆ ಆಸ್ಪತ್ರೆಗೆ ಸೇರಿಸಿ ಈಗ ಪರಿಸ್ಥಿತಿ ಗಂಭಿರ ಸ್ಥಿತಿಗೆ ತಲುಪಿರುವುದನ್ನು ಬಹಳ ದುಃಖದಿಂದಲೇ ವಿವರಿಸಿ ದಯವಿಟ್ಟು ಮನೆ ದೇವರು ಮತ್ತು ಗ್ರಾಮದೇವತೆಗೆ ಸುಖಃ ಪ್ರಸವವಾಗುವಂತೆ ಕೋರಿಕೊಳ್ಳಲು ಬರೆದು ಪೋಸ್ಟ್ ಮಾಡಿ ಭಗವಂತನ ಸ್ಮರಣೆ ಮಾಡುತ್ತಲೇ ಪುನಃ ಲಗುಬಗನೇ ಆಸ್ಪತ್ರೆಗೆ ಹಿಂದಿರುಗುತ್ತಾನೆ. ಊರಿನಲ್ಲಿ ಅದೇ ಸಮಯಕ್ಕೇ ಅವರ ದೊಡ್ದ ತಾತನವರ ಶ್ರಾಧ್ಧ ನಡೆಯುತ್ತಿರುತ್ತದೆ ಎಂಬ ವಿಷಯವೂ ಅವರಿಗೆ ಅರಿವಿರಲಿಲ್ಲ. ವಿಧಿಯಾಟ ನೋಡಿ, ಅತ್ತ ಊರಿನಲ್ಲಿ ಹಿರಿಯರ ಶ್ರಾದ್ಧ ಕಾರ್ಯ ಇಲ್ಲಿ ಅದೇ ಕುಟುಂಬದ ಸೊಸೆಯ ಜೀವನ್ಮರಣ ಸ್ಥಿತಿಯಲ್ಲಿ ಪ್ರಸವದ ವೇದನೆ ಪಡುತ್ತಿದ್ದಾಳೆ.

ಅಂತೂ ಇಂತೂ ವೈದ್ಯರ ಸತತ ಪರಿಶ್ರಮದ ಫಲವೋ, ಆವರ ಮನೆಯ ಹಿರಿಯರ ಆಶೀರ್ವಾದವೋ ಇಲ್ಲವೇ, ಭಗವಂತನ ಅನುಗ್ರಹವೋ ಎನೋ? ಸಂಜೆ ಸುಮಾರು 5:30ಕ್ಕೆ ಒಳಗಿನಿಂದ ಮಗು ಅಳುವ ಶಬ್ಧ ಕೇಳುತ್ತಿದ್ದಂತೆಯೇ ಹೊರಗೆ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಎಲ್ಲರ ಮುಖದಲ್ಲೂ ಸಂತಸದ ವಾತಾವರಣ. ಅಬ್ಬಾ ದೇವರು ಕಣ್ಣು ಬಿಟ್ಟು ಬಿಟ್ಟ ಎಂದು ಎಲ್ಲರೂ ತಮ್ಮ ಮನಸ್ಸಿನಲ್ಲಿಯೇ ಆ ಭಗವಂತನನ್ನು ಪ್ರಾರ್ಥಿಸಿದರು. ಹೆರಿಗೆಯೇನೋ ಆಯಿತು. ಹುಟ್ಟಿರುವ ಮಗು ಗಂಡೋ ಹೆಣ್ಣೊ? ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡ ತೊಡಗುತ್ತದೆ. ಹತ್ತು ತಿಂಗಳು ತುಂಬಿದ ನಂತರ ಹುಟ್ಟಿದ್ದಾದ್ದರಿಂದ ಗಂಡು ಮಗುವೇ ಆಗಿರ ಬಹುದು ಎಂದು ಆಕೆಯ ತಾಯಿ ಹೇಳಿದರೆ, ಇಲ್ಲಾ ಇತ್ತೀಚೆಗೆ ತುಂಬಾನೇ ಸೊರಗಿ ಹೋಗಿದ್ದಳು ಹಾಗಾಗಿ ಹೆಣ್ಣು ಮಗುವಾಗಿರ ಬಹುದು ಎಂದು ಆಕೆಯ ಪತಿರಾಯರ ವಾದ. ಅತ್ತೆ ಮಾವನ ಜಟಾಪಟಿಯನ್ನು ನೋಡುತ್ತಿದ್ದ ಅಳಿಯ ಮಗು ಆದ ಸಂತೋಷದಲ್ಲೇ, ಮಗು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ ನಮಗೆ ತೊಂದರೆ ಇಲ್ಲ, ಕಣ್ಣು ಮೂಗು, ಬಾಯಿ, ಕಿವಿ ಹೀಗೆ ಎಲ್ಲಾ ಅಂಗಾಗಗಳೂ ಸರಿಯಾಗಿದ್ದು. ತಾಯಿ ಮಗು ಆರೋಗ್ಯವಾಗಿದ್ದರೆ ಸಾಕು ಎನ್ನುತ್ತಾರೆ. ಆಷ್ಟರೊಳಗೆ ಒಳಗಿನಿಂದ ಬಂದ ವೈದ್ಯರು, Congratulations Mr. Rao. ನೀವು ತಾತ ಆಗಿದ್ದೀರಿ. ನಿಮ್ಮ ಮಗಳು ಮುದ್ದಾದ ಮತ್ತು ಆಷ್ಟೇ ಗುಂಡು ಗುಂಡಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗು ಹೊಟ್ಟೆಯಲ್ಲಿ ತುಂಬಾನೇ ಬೆಳೆದಿದ್ದ ಕಾರಣ ತುಸು ಹೆರಿಗೆ ತುಸು ಪ್ರಯಾಸವಾಯಿತು. ಮಾಡುವ ಭರದಲ್ಲಿ ಮಗುವಿನ ಹಣೆಗೆ ಕತ್ತರಿ ತಾಕಿದ ಪರಿಣಾಮ ಸ್ವಲ್ಪ ಗಾಯವಾಗಿದೆ ಮತ್ತು ಅದಕ್ಕೆ ನಾವು ಚಿಕಿತ್ಸೆ ಮಾಡಿದ್ದೇವೆ. ಗಾಭರೀ ಪಡುವ ಅಗತ್ಯವಿಲ್ಲ. ಒಂದೈದು ನಿಮಿಷ ತಡೆಯಿರಿ. ಮಗುವಿಗೆ ಸ್ನಾನ ಮಾಡಿಸಿ ಶುಚಿಮಾಡಿ ನಿಮಗೆ ತೋರಿಸುತ್ತಾರೆ ಎಂದು ಹೇಳುತ್ತಿದ್ದಂತೆಯೇ, ದಾದಿ ತನ್ನ ಎರಡೂ ಕೈಗಳು ತುಂಬುವಷ್ಟು ದಪ್ಪವಾಗಿದ್ದ ಮಗುವನ್ನು ಬೆಳ್ಳಗಿನ ವಸ್ತ್ರದಲ್ಲಿ ಬೆಚ್ಚಗೆ ಸುತ್ತಿ ಅಜ್ಜಿಯ ಕೈಗಿತ್ತಳು. ಸಂಜೆಯ ಸೂರ್ಯನ ಪ್ರಕಾಶ ಆ ಬೆಳ್ಳಗಿನ ವಸ್ತ್ರದ ಮೇಲೆ ಬಿದ್ದು ಮೊದಲೇ ಹಾಲಿನಂತೆ ಬೆಳ್ಳಗಿದ್ದ ಮಗುವಿನ ಮೇಲೆ ಪ್ರತಿಫಲನವಾಗಿ ಮಗುವಿನ ಸುತ್ತ ಪ್ರಭಾವಳಿಯೇ ಬಿದ್ದಿತ್ತು ಎಂದು ಅಲ್ಲಿ ನೋಡಿದವರ ಅಂಬೋಣ. ಎಲರೂ ಮಗುವನ್ನು ಅಪ್ಪಿ ಮುದ್ದಾಡುವಷ್ಟರಲ್ಲಿ ವೈದ್ಯರು ತಾಯಿಗೆ ಉಳಿದ ಚಿಕಿತ್ಸೆಯನ್ನು ಮುಗಿಸಿ ಅವರನ್ನು ನೋಡಲು ಅನುಮತಿ ಮಾಡಿ ಕೊಟ್ಟರು. ಅಜ್ಜಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿ, ನಾನೂ ಆರು ಗಂಡು ಮತ್ತು ಐದು ಹೆಣ್ಣು ಮಕ್ಕಳನ್ನು ಹೆತ್ತಿದ್ದೀನಪ್ಪಾ ಆದರೆ ಈ ರೀತಿಯ ಕಷ್ಟ ಪಡಲೇ ಇಲ್ಲಪ್ಪಾ. ಅದಕ್ಕೇ ಹೇಳೋದು ಬಸುರಿಯಲ್ಲಿ ಚೆನ್ನಾಗಿ ತಿಂದುಂಡು ಶಕ್ತಿ ಭರಿಸಿಕೊಂಡು ಎಲ್ಲಾ ತರಹದ ಕೆಲಸಗಳನ್ನು ಮಾಡ್ತಾ ಇದ್ರೇ ಮಗು ಸುಲಭವಾಗಿ ಆಗುತ್ತದೆ ಎಂದು ತಮ್ಮ ಅನುಭವ ಹೇಳಿಕೊಂಡ್ರು. ಸಾಕು ಸಾಕು. ಇದೇಲ್ಲಾ ಈಗ ಬೇಕಾ? ಮೊದಲು ಮನೆಗೆ ಹೋಗಿ ಸ್ನಾನ ಮಾಡಿ ದೇವರಿಗೆ ತುಪ್ಪದ ದೀಪ ಹಚ್ಚು ಎಂದು ಮಡದಿಯನ್ನು ಪ್ರೀತಿಯಂದಲೇ ಗದುರಿಸಿ, ಅಳಿಯಂದಿರೇ, ಎರಡು ವರ್ಷದ ಹಿಂದೆ ಕೋಲಾರದ ಅಪ್ಪಟ ಪುಟವಿಟ್ಟ ಚಿನ್ನದಂತಹ ನಮ್ಮ ಮಗಳನ್ನು ನಿಮಗೆ ಧಾರೆ ಎರೆದು ಕೊಟ್ಟಿದ್ದೆವು. ಈಗ ಅದೇ ಚಿನ್ನ, ತನಗಿಂತಲೂ ಹೊಳೆಯುವಂತಹ ಮಾಣಿಕ್ಯವನ್ನು ನಿಮ್ಮ ವಂಶೋದ್ಧಾರಕನನ್ನಾಗಿ ಹೊತ್ತು ಹೆತ್ತು ಕೊಟ್ಟಿದ್ದಾಳೆ. ಸಂತೋಷವೇ? ಎಂದು ಕೇಳಿದಾಗ, ಪತಿರಾಯ ಬಾಯಿಯಿಂದ ಮಾತೇ ಹೊರಡದೇ, ಅವರಿಗೇ ಅರಿವಿಲ್ಲದಂತೆ ಕಣ್ಣಿನಿಂದ ಆನಂದ ಬಾಷ್ಪ ಉಕ್ಕಿ ಹರಿಯಿತು. ಇಬ್ಬರು ಒಬ್ಬರನ್ನೊಬ್ಬರು ತಬ್ಬಿಕೊಂಡು ಕ್ಷಣ ಕಾಲ ಗದ್ಗತಿರಾದರು. ಮಾವ, ಅಳಿಯನ ಅಪ್ಪುಗೆಯ ಆಲಿಂಗನವನ್ನು ನೋಡಿ ಆಕೆಯೂ ಪ್ರಸವದ ನೋವಿನ ನಡುವೆಯೂ ಮುಗಳ್ನಕ್ಕಳು.

ಅಯ್ಯೋ ರಾಮ!! ಒಂದು ಅಚಾತುರ್ಯ ನಡೆದು ಹೋಗಿದೆಯಲ್ಲಪ್ಪಾ!! ಈಗೇನು ಮಾಡೋದು ? ಎನ್ನುತ್ತಾ ತನ್ನ ತಲೆ ಮೇಲೆ ಕೈ ಇಟ್ಟುಕೊಂಡ ಅಳಿಯನ್ನು ನೋಡಿದ ಮಾವನವರಿಗೆ ಇದೇನಪ್ಪಾ ಹೊಸಾ ಸಮಸ್ಯೇ? ಅಷ್ಟೆಲ್ಲಾ ಕಷ್ಟ ಪಟ್ಟು ಈಗ ಖುಷಿ ಪಡುತ್ತಿರುವಾಗ ಇದೇನಪ್ಪಾ ಹೊಸಾ ವರಸೇ ಎಂದು ಆಶ್ಚರ್ಯ ಚಕಿತರಾಗಿ ಅಳಿಯನ ಕಡೇ ನೋಡಿ ಏನಾಯ್ತು ಅಳಿಯಂದಿರೇ? ಅಂದಾಗ ಮಧ್ಯಾಹ್ನ ನಮ್ಮ ತಂದೆ ತಾಯಿಯವರಿಗೆ ಪರಿಸ್ಥಿತಿ ಕೈ ಮೀರಿ ಹೋಗಿದೆ ಎಂದು ತಿಳಿಸಿ ದೇವರಿಗೆ ಪ್ರಾರ್ಥಿಸಲು ತಿಳಿಸಿ ಪತ್ರ ಬರೆದಿದ್ದೆ. ಈಗ ಮತ್ತೊಂದು ಪ್ರತ್ರ ಬರೆಯಬೇಕು. ಎರಡೂ ಒಟ್ಟೊಟ್ಟಿಗೆ ತಲುಪಿದರೆ ಅವರಿಗೂ ಗೊಂದಲ ಮೂಡಿಸ ಬಹುದು ಎಂದು ತಿಳಿಸಿ ಒಂದು ನಿಮಿಷ ಇರಿ ಪಕ್ಕದ ಪೋಸ್ಟ್ ಆಫೀಸಿಗೆ ಹೋಗಿ ಮಗು ಹುಟ್ಟಿದ ವಿಷಯ ತಿಳಿಸಿ ಹೊಸಾ ಪತ್ರ ಬರೆದು ಸಾಧ್ಯವಾದರೇ ಹಳೆಯ ಪತ್ರವನ್ನು ಹಿಂದಿರುಗಿ ಪಡೆಯುತ್ತೇನೆ ಎಂದು ತಿಳಿಸಿ ಪೋಸ್ಟ್ ಆಫೀಸಿನ ಕಡೆಗೆ ಓಡಿದರು. ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವಂತೆ ಅವರು ಬರೆದ ಪತ್ರ ಅದಾಗಲೇ ಅಂಚೆಯಣ್ಣನ ಚೀಲ ಸೇರಿ ಅಲ್ಲಿಂದ ಪ್ರಧಾನ ಕಛೇರಿಯ ಕಡೆಗೆ ತಲುಪುವ ಮಾರ್ಗದಲ್ಲಿತ್ತು. ಕೂಡಲೇ ಭಾವ, ಬಾಮೈದ ಇಬ್ಬರು ಸೈಕಲ್ಲನ್ನೇರಿ ಪ್ರಧಾನ ಅಂಚೆ ಕಛೇರಿಗೆ ಹೋಗಿ ನಡೆದದ್ದೆಲ್ಲವನ್ನೂ ಚುಟುಕಾಗಿ ತಿಳಿಸಿ ಹಳೆಯ ಪತ್ರದ ಬದಲಾಗಿ ಈ ಹೊಸಾ ಪತ್ರವನ್ನು ಕಳುಹಿಸಿ ಕೊಡಬೇಕೆಂದು ಕೋರಿ ಕೊಂಡರು. ನಿಯಮವಳಿಯ ಪ್ರಕಾರ ಹಾಗೆ ಮಾಡಲು ಬರುವುದಿಲ್ಲವಾದರೂ ಮಾನವೀಯತೆ ದೃಷ್ತಿಯಿಂದ ಅನಗತ್ಯ ಗೊಂದಲ ಸೃಷ್ತಿಯಾಗಬಾರದೆಂದು ಮೊದಲ ಮತ್ತು ಎರಡನೆಯ ಪತ್ರವನ್ನು ಪಕ್ಕ ಪಕ್ಕದಲ್ಲಿಟ್ಟು ಕೈಬರಹ ಸಾಮ್ಯವನ್ನು ನೋಡಿ ಖಚಿತ ಪಡಿಸಿಕೊಂಡು ಹಳೆಯ ಪತ್ರ ಹಿಂದಿರುಗಿಸಿ ಹೊಸ ಪತ್ರವನ್ನು ರವಾನಿದ್ದರು ಅಂಚೆಯವರು.

ಆದಾದಾ ಎರಡು ಮೂರು ದಿನಗಳಲ್ಲಿಯೇ ಆ ಪತ್ರ ದೂರದ ಊರಿಗೆ ತಲುಪಿ ತಮ್ಮ ವಂಶೋದ್ಧಾರಕ ಜನಿಸಿರುವ ವಿಷಯ ತಿಳಿದು, ಆ ಕೂಡಲೇ ಮಗ, ಸೊಸೆ ಮತ್ತು ಮೂಮ್ಮಗನನ್ನು ನೋಡಲು ಆತುರಾತುರವಾಗಿ ತಾತ ಅಜ್ಜಿ ಕೆಜಿಎಫ್ ಗೆ ಬಂದೇ ಬಿಟ್ಟರು. ಮೊಮ್ಮಗನನ್ನು ಕೈಯಲ್ಲಿ ಕೊಟ್ಟ ತಕ್ಷಣ ಮಗುವಿನ ತೊಡೆಗೆ ಕೈಹಾಗಿ ಮತ್ತೊಮ್ಮೆ ಮಗು ಗಂಡಾ , ಹೆಣ್ಣಾ ಎಂದು ಖಚಿತ ಪಡಿಸಿಕೊಂಡ ತಾತ (ತಂದೆಯ ತಂದೆ ತಾತ). ಭೇಷ್! ಭೇಷ್! ರಾಜಕುಮಾರನಂತಿದ್ದಾನೆ. ಅಗಲವಾದ ಹಣೆ, ಕಣ್ಣು ಮೂಗು ಎಲ್ಲಾ ನೋಡಿದ್ರೇ ಥೇಟ್ ನಮ್ಮ ಮನೆಯ ಕಡೆಯವರ ಹಾಗೇ ಇದೆ ಎಂದದ್ದನು ಕೇಳಿಸಿ ಕೊಂಡ ಅಜ್ಜ (ಅಮ್ಮನ ಜನಕ ಅಜ್ಜ). ಇಲ್ಲಾ ಬಿಡಿ ಮಗು ಥೇಟ್ ನಮ್ಮ ಮಗಳು ತರಹಾನೇ ಬೆಳ್ಳಗೆ ಮುದ್ದು ಮುದ್ದಾಗಿದ್ದಾನೆ ಎಂದು ತಮ್ಮ ವಾದವನ್ನೂ ಮಂಡಿಸಿದ್ದರು.

ಹೀಗೆ ಇಂದಿಗೆ ಸರಿಯಾಗಿ 52 ವರ್ಷಗಳ ಹಿಂದೆ ಅತ್ಯಂತ ಪ್ರಯಾಸಕರವಾಗಿ ಮತ್ತು ಅಷ್ಟೇ ರೋಚಕವಾಗಿ ಸಾಧಾರಣ ನಾಮ ಸಂವತ್ಸರದ, ಆಶ್ವಯುಜ ಶುದ್ಧ ಪಂಚಮಿ, ಸೋಮವಾರ 05.10.1970ರ ಸಂಜೆಯಂದು ಈ ಪ್ರಪಂಚಕ್ಕೆ ಕಾಲಿಟ್ಟ ಮಗು ಯಾರಿರಬಹುದು? ಎಂದು ತಿಳಿಯುವ ಕುತೂಹಲ ನಿಮಗೆ ಎಷ್ಟು ಇದೆಯೋ ಅಷ್ಟೇ ಸಂಭ್ರಮ ಮತ್ತು ಸಂತೋಷದಿಂದ ತಿಳಿಸಲು ಬಯಸುವುದೇನೆಂದರೇ, ಆ ರೀತಿಯಾಗಿ ಅಮ್ಮ,ಅಜ್ಜಿ,ಅಜ್ಜ, ಅಪ್ಪಾ, ಮಾವ ಮತ್ತು ಚಿಕ್ಕಂಮ್ಮಂದಿರಿಗೆ ಆರಂಭದಲ್ಲಿ ಆತಂಕ ಮೂಡಿಸಿ, ಅಂತಿಮವಾಗಿ ಆನಂದ ನೀಡಿದ ಆ ಮಗುವೇ, ಇಷ್ಟು ಹೊತ್ತು ತನ್ನ ಜನ್ಮ ರಹಸ್ಯವನ್ನು ನಿಮ್ಮ ಮುಂದೆ ಬಿಚ್ಚಿಟ್ಟಿದ್ದಾನೆ.

ಹೌದು. ನಿಜ. ನಿಮ್ಮ ಉಹೇ ಸರಿ. ಶರನ್ನವರಾತ್ರಿಯ ಪಂಚಮಿ ದಿನದಂದು ಹಾಸನ ಮೂಲದ ಬಾಳಗಂಚಿ ಗ್ರಾಮ ಮತ್ತು ಕೋಲಾರದ ಚಿನ್ನ ಗಣಿ ಪ್ರದೇಶಗಳ ಸಮಾಗಮದ ಫಲವೇ ಈ ನಿಮ್ಮ ಉಮಾಸುತ, ಶಿವನ ಪ್ರತಿರೂಪವೇ ಆದ ಬಾಳಗಂಚಿ ಶಿವಮೂರ್ತಿ ಶ್ರೀಕಂಠ. ಆರ್ಥಾತ್, ನಿಮ್ಮೆಲ್ಲರ ಪ್ರೀತಿಯ ಶ್ರೀಕಂಠ ಬಾಳಗಂಚಿ, ಇನ್ನೂ ಹಲವರಿಗೆ ಕಂಠೀ, ಕೆಲವರಿಗೆ ಕಂಠಾ, ಮತ್ತೊಬ್ಬರಿಗೆ ಶ್ರೀಕ್ಸ್, ಹೆಂಗಳೆಯರಿಗೆ ಶ್ರೀ, ಕನ್ನಡ ಬಾರದಿರುವವರಿಗೆ ಶ್ರೀಕಾಂತಾ.

anna_amma

52 ವರ್ಷಗಳ ಹಿಂದೆ ನನ್ನ ಜನ್ಮಕ್ಕೆ ಕಾರಣೀಭೂರತಾದ ನಮ್ಮ ತಾಯಿ ಉಮಾ ಮತ್ತು ನಮ್ಮ ತಂದೆ ಶಿವಮೂರ್ತಿ ಮತ್ತವರ ಜನ್ಮದಾತರಾದ, ಅಜ್ಜ ಬೆಳ್ಳೂರು ರಾಜಾರಾವ್,ಅಜ್ಜಿ ವಿಶಾಲಾಕ್ಷಿ, ತಾತ ಬಾಳಗಂಚಿ ಗಮಕಿ ನಂಜುಂಡಯ್ಯ ಮತ್ತು ಅಜ್ಜಿ ಚೆನ್ನಮ್ಮ (ಲಕ್ಷ್ಮೀ) ಅವರುಗಳಿಗೆ ನನ್ನ ಹೃದಯಾಂತರಾಳದಿಂದ ಕೋಟಿ ಕೋಟಿ ಪ್ರಣಾಮಗಳು.

family.jpeg

ಇಂದು ಅವರುಗಳು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕಲಿಸಿಕೊಟ್ಟ ಸಂಸ್ಕಾರ, ಸಂಪ್ರದಾಯ, ಅಚಾರ ಮತ್ತು ವಿಚಾರಗಳಿಗೆ ಎಳ್ಳಷ್ಟೂ ಚ್ಯುತಿ ಬಾರದಂತೆ ನಡೆದು ಕೊಂಡು ಹೋಗುವ ಪ್ರಯತ್ನದಲ್ಲಿದ್ದೇನೆ. ಆ ಪ್ರಯತ್ನದಲ್ಲಿ ಸ್ವಲ್ಪವಾದರೂ ಆಚೀಚೆಯಾದರೂ ಅದನ್ನು ಸರಿ ಪಡಿಸಲು ನನ್ನ ಮಡದಿ ಮಂಜುಳಾ (ಮಮತ) ಹೆಸರಿಗೆ ಅನ್ವರ್ಥವಾಗಿ ಮಮತಾಮಯಿಯಾಗಿ ತಿದ್ದಿ ತೀಡುತ್ತಾಳೆ. ಇನ್ನು ಕ್ಷಣ ಮಾತ್ರದ ಸಿಟ್ತು ಸೆಡವು ಮತ್ತದೇ ಕ್ಷಣದಲ್ಲಿ ಪ್ರೀತಿಯ ಅಮೃತವನ್ನು ಉಣಿಸುತ್ತಿದ್ದ ನಮ್ಮಮ್ಮನ ಪ್ರತಿರೂಪವಾಗಿ ಹೆಜ್ಜೆ ಹೆಜ್ಜೆಗೂ ಏ ಅಪ್ಪ ಕಳ್ಳಾ, ತಪ್ಪು ಮಾಡ್ಬಾರ್ದು ಎಂದು ಎಚ್ಚರಿಸುವ ಮಗಳು ಸೃಷ್ಟಿ ಒಂದಡೆಯಾದರೇ, ಮತ್ತೊಂದೆಡೆ, ತಾತನ ಹಾವ, ಭಾವ, ಅವರದೇ ರೀತಿಯಲ್ಲಿ ಗುಣಾಕಾರ, ಭಾಗಾಕಾರ ಹಾಕುತ್ತಾ, ಲೆಕ್ಕಾಚಾರದಲ್ಲಿ ನಮ್ಮಪ್ಪನ ತದ್ರೂಪಾದ ಮಗ ಸಾಗರ, ನನ್ನ ಪ್ರತೀ ಕೆಲಸ ಕಾರ್ಯಗಳಲ್ಲಿ ಕೈ ಹಿಡಿದು ಮುನ್ನಡೆಸುವಷ್ಟರ ಮಟ್ಟಿಗೆ ಬೆಳೆದು ಬಿಟ್ಟಿದ್ದಾನೆ.

ಅಮ್ಮಾ ಮತ್ತು ಅಪ್ಪನನ್ನು ಕಳೆದುಕೊಂಡಾಗ ಆಸರೆಯಾದವರೇ, ಹೆಣ್ಣು ಕೊಟ್ಟ ಅತ್ತೇ ಮತ್ತು ಮಾವ. ಅಮ್ಮನಂತೆಯೇ, ಅಳಿಯನಿಗೆ ಅಚ್ಚುಮೆಚ್ಚಿನ ಅಡುಗೆಗಳ ಮೂಲಕ ಅಕ್ಕರೆ ತೋರಿಸುತ್ತಿರುವ ಅತ್ತೆ (ಗಾಯತ್ರಿ) , ಅಪ್ಪನಂತೆಯೇ ದಿನಕ್ಕೆ ಕನಿಷ್ಟ ಪಕ್ಷ ಮೂರ್ನಾಲ್ಕು ಬಾರಿಯಾದರೂ ಕರೆ ಮಾಡಿ ಸಾಧ್ಯವಾದರೆ ಒಂದು ಕ್ಷಣ ಮನೆಗೇ ಬಂದು ಹೋಗುತ್ತಾ ನನ್ನನ್ನು ಮುನ್ನಡೆಸುತ್ತಿರುವ ಮಾವನವರು (ಜಿ. ಎಂ. ರಾಜು).

gmr.jpeg

ಇವರೆಲ್ಲರ ಹೊರತಾಗಿ, ಸ್ನೇಹಮಯೀ ಸಹೋದರಿಯರು, ಬಾಂಧವ್ಯ ಬೆಳೆಸಿದ ಬಾವಂದಿರು, ಅಕ್ಕರೆಯ ಅಳಿಯ, ಸುಂದರಿಯರಾದ ಸೊಸೆಯಂದಿರು, ನನ್ನ ಪ್ರತೀ ಕೆಲಸ ಕಾರ್ಯಗಳಿಗೂ ಭೇಷ್! ಭೇಷ್! ಎಂದು ಬೆನ್ನು ತಟ್ಟುತ್ತಾ ಬೆಳೆಸುತ್ತಿರುವ ಬಂಧು-ಬಾಂಧವರು ಒಂದೆಡೆಯಾದರೇ, ನನ್ನೆಲ್ಲಾ ಪ್ರಯತ್ನಗಳೂ ಫಲಕಾರಿಯಾಗುವಂತೆ ಲಾಲಿಸಿ, ಪಾಲಿಸಿ ಪೋಷಿಸುತ್ತಿರುವ ನನ್ನೆಲ್ಲಾ ಸಹೃದಯೀ ಗೆಳೆಯರು ಮತ್ತು ಗೆಳತಿಯರನ್ನು ಪಡೆದಿರುವ ನಾನೇ ಪ್ರಪಂಚದಲ್ಲಿಯೇ ಅತ್ಯಂತ ಭಾಗ್ಯಶಾಲಿ.

birthday.jpeg

ಇಂದಿನ ಕಾಲದಲ್ಲಿ 50 ಸಂವತ್ಸರಗಳನ್ನು ಯಶಸ್ವಿಯಾಗಿ ಮುಗಿಸುವುದೇ ಒಂದು ರೀತಿಯ ಮಹತ್ತರ ಘಟ್ಟ ಎಂದರೂ ತಪ್ಪಾಗದು. ಅಂತಹ ಮಹತ್ತರವಾದ 53ನೇ ವರ್ಷಕ್ಕೆ ಕಾಲಿಡುತ್ತಿರುವ ನನಗೆ ನಿಮ್ಮೆಲ್ಲರ ಸ್ನೇಹ ಮತ್ತು ಸಹಕಾರಗಳ ಜೊತೆ ಕಿರಿಯರ ಮತ್ತು ಸಮಕಾಲೀನರ ಶುಭಹಾರೈಕೆಗಳು ಮತ್ತು ಹಿರಿಯರ ಮಾರ್ಗದರ್ಶನದ ಜೊತೆಗೆ ಆಶೀರ್ವಾದಗಳು ಸದಾಕಾಲವೂ ಎಂದಿನಂತೆಯೇ ಅಥವಾ ಅದಕ್ಕಿಂತಲು ಸ್ವಲ್ಛ ಹೆಚ್ಚಾಗಿಯೇ ಇರಲಿ ಎಂದು ಆಶೀಸುತ್ತೇನೆ.

ಏನಂತೀರೀ?

ನಿಮ್ಮವನೇ ಉಮಾಸುತ

17 thoughts on “ಜನ್ಮ ರಹಸ್ಯ

 1. ನಿಮ್ಮದೇ ಜನನದ ಕಥೆ ಇರಬಹುದೆಂದು ಊಹಿಸಿದ್ದು ಸರಿಯಾಗಿದೆ.. ತುಂಬಾ ಚೆನ್ನಾಗಿ ಬರೆದಿದ್ದೀರಾ… 50 ನೆ ಹುಟ್ಟುಹಬ್ಬದ ಶುಭಾಶಯಗಳು… May godess ಚಾಮುಂಡೇಶ್ವರಿ blessings… be always with you.

  Liked by 1 person

 2. ಹುಟ್ಟು ಹಬ್ಬದ ಶುಭಾಶಯಗಳು ಶ್ರೀಕಂಠ ಜೀ. ರೋಚಕವಾಗಿ ತಮ್ಮ ಜನನದ ಕಥೆ ವಿವರಿಸಿದ್ದೀರೀ . ಒಂದಷ್ಟುಕ್ಷಣ ಏನಾಗುವುದೋ ಏನಾಗುವುದೋ ಎಂಬ ಆತಂಕ ಅನುಭವಿಸಿ ಕಡೆಗೆ ಸುಖಾಂತ್ಯಗೊಂಡದ್ದು ಸಂತಸದಾಯಕವಾಯ್ತು. ತಾಯಿ ಚಾಮುಂಡಿ ಸಕಲಸೌಭಾಗ್ಯಗಳಕೊಟ್ಟು ಕಾಪಾಡಲಿ.

  Liked by 1 person

 3. ಹುಟ್ಟು ಹಬ್ಬದ ಶುಭಾಶಯಗಳು ಕಂಠಿ ಸರ್…ನಮ್ಮ್ ಜಿಲ್ಲೆ ನಮ್ಮ್ ಹೆಮ್ಮೆ .
  ಓದುವಾಗ ನಿಮ್ಮದೇ ಇರಬಹುದೆಂಬ ಊಹೆ ಸುಳ್ಳಾಗಲಿಲ್ಲ.
  ನಿಮ್ಮಕೆಲಸಕ್ಕೆ ನಿಮಗೆ ಸದಾ ತಾಯಿ ದುರ್ಗೆ ಯ ಆಶೀರ್ವಾದ ಇರಲಿ

  Like

 4. ಶ್ರೀಕಂಠನಿಗೆ ಹುಟ್ಟು ಹಬ್ಬದ ಶುಭಾಶಯಗಳು, ಈ ಘಟನೆಯಾದ ಸರಿಯಾಗಿ ೫ ಸಂವತ್ಸರಗಳ ನಂತರ ಅಂದರೆ “ರಾಕ್ಷಸನಾಮ” ಸಂವತ್ಸರದಲ್ಲಿ ಭಾದ್ರಪದ ಶುದ್ಧ ಬಿದಿಗೆಯಂದು ಇದೇ ಕೋಲಾರ ಜಿಲ್ಲೆಯ (ಈಗ ಚಿಕ್ಕಬಳ್ಳಾಪುರ) ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ಜನನವಾಯಿತು. (೦೭-೦೯-೧೯೭೫). ಬಹುಶಃ ನಮ್ಮ ಸ್ನೇಹ ಈ ರೀತಿಯ ಹಲವು ಸಾಮ್ಯತೆಗಳಿಂದ ಗಟ್ಟಿಯಾಗಿದೆ ಎಂದು ನನ್ನ ಭಾವನೆ. ಅತಿ ಹೆಚ್ಚು ಸ್ನೇಹ, ಪ್ರೀತಿ ಸಾಗರದಲ್ಲಿ ಮಿಂದಿರುವ ನಿನಗೆ ಈ ಸುಖಬಾಧೆ ಆನುಗಾಲವಿರಲಿ ಎಂದು ಹಾರೈಸುತ್ತೇನೆ.

  Liked by 1 person

 5. ಲೇಖನ ತುಂಬಾ ಚೆನ್ನಾಗಿದೆ. ಜನುಮ ದಿನದ ಶುಭಾಶಯಗಳು, ದೇವರು ಆಯಸ್ಸು, ಆರೋಗ್ಯ ನೆಮ್ಮದಿಯನ್ನು ಕರುಣಿಸಲಿ.

  Liked by 1 person

 6. ಕಾರಣಾಂತರಗಳಿಂದ ನಿಮ್ಮ ಬರಹ ಇಂದು ಓದಿದೆ ತುಂಬಾ ಸೊಗಸಾಗಿ ಮುಂದೆನಾಗುವುದೋ ಎಂಬ ಆತಂಕ ಇತ್ತು ಕೊನೆಗೆ ನಗುಬಂತು ಚೆನ್ನಾಗಿತ್ತು.
  ನಿಮಗೆ 50 ನೇ ವರ್ಷದ ಹಾರ್ಧಿಕ ಶುಭಾಶಯಗಳು ವಿಳಂಬಕ್ಕೆ ಕ್ಷಮೆಯಿರಲಿ.

  Liked by 1 person

 7. ಜನುಮದಿನದ ಹಾರ್ದಿಕ ಶುಭಾಶಯಗಳು💐💐💐 ಭಗವಂತನ ಅನುಗ್ರಹ ಸದಾ ನಿಮ್ಮ ಹಾಗು ಮನೆಯವರ ಮೇಲಿರಲಿ.

  Liked by 1 person

 8. ಮೊದಲಿಗೆ ನಿಮಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್. ನಿಮ್ಮ ಜನ್ಮ ರಹಸ್ಯ ವನ್ನು ತುಂಬಾ ಕಾತುರದಿಂದ ಮುಂದೇನಾಗುವುದೋ ಎಂದು ಓದಿದೆ ಕೊನೆಗೆ ಸುಖವಾಗಿ ಸಾಗಿದ್ದು ನೋಡಿ ಮನಸ್ಸಿಗೆ ಸಮಾಧಾನವಾಯಿತು. ಅದು ನಿಮ್ಮದೇ ಎಂದು ತಿಳಿದು ಎಷ್ಟು ಚನ್ನಾಗಿ ಬರೆದಿದ್ದಾರೆ ಎಂದು ಅನಿಸಿತು. 👌👌👌👌

  Liked by 1 person

 9. ಮೊದಲಿಗೆ ಹುಟ್ಟು ಹಬ್ಬದ ಶುಭಾಶಯಗಳು. ಲೇಖನ ಈಗ ತಾನೆ ಓದಿದೆ. ತುಂಬಾ ಸೊಗಸಾಗಿ ನಿಮ್ಮ ಜನ್ಮ ವೃ ತ್ತ ತಿಳಿಸಿ ನಮಗೂ ಒಂದು ರೀತಿಯ ಕುತೂಹಲ ಹುಟ್ಟಿಸಿ, ಸಂಪೂರ್ಣವಾಗಿ ಓದಿದ ಮೇಲೆ ಸುಖಾಂತ್ಯವಾದಾಗ ಸಂತೋಷವಾಯಿತು.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s