ಕೆಲ ವರ್ಷಗಳ ಹಿಂದೆ ತೆರೆಕಂಡು ಬಾರೀ ಸದ್ದು ಮಾಡುತ್ತಾ, ಅಭೂತಪೂರ್ವವಾಗಿ ಜಗತ್ತಿನಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ನೂರುಕೋಟಿಗೂ ಅಧಿಕ ಹಣ ಸಂಗ್ರಹಿಸಿದ ಚಿತ್ರ ಪೈಲ್ವಾನ್. ಈ ಚಿತ್ರಕ್ಕೆಂದೇ ನಟ ಸುದೀಪ್ ಒಂದು ವರ್ಷಕ್ಕೂ ಹೆಚ್ಚಿನ ಕಾಲ ದೇಹವನ್ನು ಹುರಿಗೊಳಿಸಿ ಚಿತ್ರದಲ್ಲಿ ನಿಜವಾಗಿಯೂ ಪೈಲ್ವಾನ್ ರೀತಿಯಲ್ಲೇ ಮಲ್ಲಯುದ್ಧ ಮಾಡಿರುವುದು ತೆರೆಯ ಮೇಲೆ ಎದ್ದು ಕಾಣುತ್ತಿದೆ. ಈ ರೀತಿಯಾಗಿ ಅಪ್ಪಟ ದೇಸೀ ಕಲೆ ಮಲ್ಲ ಯುದ್ದವನ್ನು ಪರದೆಯ ಮೇಲೆ ನೋಡಿ ಸಂತೋಷಪಡುವ ನಾವು ಇದೇ ಕುಸ್ತಿ ಪಂದ್ಯಾವಳಿಗಳು ಪ್ರತೀ ವರ್ಷವೂ ನಮ್ಮ ಮೈಸೂರಿನ ಜಗತ್ಪ್ರಸಿದ್ಧ ದಸರಾ ಉತ್ಸವದಲ್ಲಿ ನಡೆಯುತ್ತದೆ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲದಿರುವುದು ನಿಜಕ್ಕೂ ಶೋಚನೀಯವಾದ ವಿಷಯವಾಗಿದೆ.
ನಮ್ಮ ಸಂಸ್ಕೃತಿಯ ಪ್ರಕಾರದ 64 ವಿದ್ಯೆಗಳಲ್ಲಿ ಮಲ್ಲ ಯುದ್ಧವೂ ಒಂದು ನಮ್ಮ ಅನೇಕ ಪುರಾಣ ಕಥೆಗಳಲ್ಲಿ ಮಲ್ಲಯುದ್ದದ ಪ್ರಸಂಗಗಳಿವೆ. ರಾಮಾಯಣದಲ್ಲಿ ಹನುಮಂತ, ವಾಲಿ, ಸುಗ್ರೀವ ಅತ್ಯುತ್ತಮ ಕುಸ್ತಿಪಟುಗಳಾಗಿದ್ದರೆ, ಅದೇ ರೀತಿ ಮಹಾಭಾರತದಲ್ಲಿ ಭೀಮ ದುರ್ಯೋಧನ , ಜರಾಸಂಧರು ಮಹಾನ್ ಕುಸ್ತಿಪಟುಗಳಾಗಿದ್ದರು ಎಂದು ಹೇಳುತ್ತವೆ. ಭೀಮ ಮತ್ತು ಜರಾಸಂಧರ ಅಂತಿಮವಾದ ಕುಸ್ತಿ ಪಂದ್ಯ ನಿಜಕ್ಕೂ ರೋಚಕವಾಗಿದೆ. ದೇಶದ ಎಲ್ಲಾ ಕುಸ್ತಿಪಟುಗಳಿಗೂ ವಾಯುಪುತ್ರ ಆಂಜನೇಯ ಆರಾಧ್ಯದೈವವಾಗಿದ್ದು ಜೈ ಭಜರಂಗ ಬಲಿ ಎನ್ನುವುದು ಅವರ ಘೋಷವಾಕ್ಯವಾಗಿದೆ.
ಇನ್ನು ಮಲ್ಲ ಯುದ್ಧಕ್ಕೂ ಮತ್ತು ನಮ್ಮ ಮೈಸೂರು ಸಂಸ್ಥಾನಕ್ಕೂ ಒಂದು ರೀತಿಯ ಅವಿನಾವಭಾವ ಸಂಬಧ. 1638–1659ರ ವರೆಗೆ ಶ್ರೀ ನರಸ ರಾಜ ಒಡೆಯರ್ ಅವರು ಮೈಸೂರಿನ ಮಹಾರಾಜರಾಗಿದ್ದವರು. ಶ್ರೀ ನರಸ ರಾಜ ಒಡೆಯರ್ ಎನ್ನುವುದಕ್ಕಿಂತಲೂ ರಣಧೀರ ಕಂಠೀರವ ಎಂದೇ ಜನಪ್ರಿಯವಾಗಿದ್ದವರು. ಸ್ವತಃ ಅಜಾನುಬಾಹು, ಧೈರ್ಯ, ಶೌರ್ಯವಂತರಾಗಿದ್ದರು ಅತ್ಯುತ್ತಮ ಜಟ್ಟಿಯಾಗಿದ್ದರು ಅದೊಮ್ಮೆ ತಮಿಳುನಾಡಿನ ತಿರುಚನಾಪಳ್ಳಿಯ ಜಟ್ಟಿಯೊಬ್ಬರು ಸುತ್ತಮುತ್ತಲಿನ ಎಲ್ಲಾ ಜೆಟ್ಟಿಗಳನ್ನೂ ಮೆಟ್ಟಿ ಜಗಜ್ಜಟ್ಟಿ ಎಂದು ವಿಖ್ಯಾತವಾಗಿ ಆ ಊರಿನ ಹೆಬ್ಬಾಗಿಲಿನಲ್ಲಿ ಅವರ ಚೆಲ್ಲವನ್ನು ಕಟ್ಟಿ ಪ್ರತಿಯೊಬ್ಬರೂ ಅದರ ಕೆಳಗೇ ಓಡಾಡುವಂತೆ ದರ್ಪದಿಂದ ಮೆರೆಯುತ್ತಿದ್ದರು. ಅಕಸ್ಮಾತ್ ಯಾರಾದರೂ ಅದರ ಅಡಿಯಲ್ಲಿ ಹೋಗಲು ಬಯಸದಿದ್ದರೆ, ಅವರು ಆ ಜೆಟ್ಟಿಯ ವಿರುದ್ಧ ಹೋರಾಟ ಮಾಡಬೇಕಿತ್ತು. ಈ ವಿಷಯ ನಮ್ಮ ರಣಧೀರ ಕಂಠೀರವರಿಗೆ ಕಿವಿಗೆ ತಲುಪಿ ಅವರು ಮಾರುವೇಷದಲ್ಲಿ ಅಲ್ಲಿಗೆ ಹೋಗಿ, ಅಲ್ಲಿ ಕಟ್ಟಿದ್ದ ಚೆಲ್ಲವನ್ನು ಕಿತ್ತೊಗೆದು ಆ ಜೆಟ್ಟಿಯೊಂದಿಗೆ ಸೆಣಸಾಡಿ, ಅವನನ್ನು ಅನಾಯಾಸವಾಗಿ ಸೋಲಿಸಿ ಬಂದಿದ್ದರು. ತನ್ನನ್ನು ಈ ಪರಿಯಾಗಿ ಸೋಲಿಸಿದ ವ್ಯಕ್ತಿ ಯಾರು? ಎಂದು ತಿಳಿಯಲು ರಹಸ್ಯವಾಗಿ ತನ್ನ ಗೂಢಾಚಾರರನ್ನು ಕಳುಹಿಸಿ, ತನ್ನನ್ನು ಸೋಲಿಸಿದವರು ಸಾಧಾರಣ ವ್ಯಕ್ತಿಯಾಗಿರದೇ, ಮೈಸೂರಿನ ಒಡೆಯರು ಎಂದು ತಿಳಿದು ಅವರನ್ನು ಮೋಸದಿಂದ ಸಾಯಿಸಲು ಅಂದಿನ ಕಾಲಕ್ಕೇ ದೊಡ್ಡಮ್ಮಣ್ಣಿ ಎಂಬ ಹೆಣ್ಣು ಮಗಳನ್ನು ಮುಂದಿಟ್ಟುಕೊಂಡು (honey trap) ಬಂದಿದ್ದ ಸುಮಾರು 26ಕ್ಕೂ ಅಧಿಕ ಜಟ್ಟಿಗಳನ್ನು ತಮ್ಮ ವಿಜಯನಾರಸಿಂಹ ಎಂಬ ಬಾಕುವಿನಿಂದ ಇರಿದು ಕೊಂದು ಆ ದೊಡ್ಡಮ್ಮಣ್ಣಿಯವರನ್ನು ವಿದ್ಯುಕ್ತವಾಗಿ ಮದುವೆಯಾಗುತ್ತಾರೆ. ರಣಧೀರ ಕಂಠೀರವ ಅವರು ಕೇವಲ ಕುಸ್ತಿಪಟು ಅಷ್ಟೇ ಅಲ್ಲದೇ ವಜ್ರಮುಷ್ಥಿಯಲ್ಲಿ ಪರಿಣತರಾಗಿದ್ದರು.
ವಜ್ರಮುಷ್ಠಿ ಎಂದರೆ ಅದು ಸಾಥಾರಣ ಜಟ್ಟಿ ಕಾಳಗದ ರೀತಿಯ ಕುಸ್ತಿಯಲ್ಲ, ಅದೊಂದು ಉಗ್ರರೂಪದ ಸಮರ ಕಲೆ. ಸಾಧಾರಣವಾಗಿ ಎಲ್ಲಾ ಕುಸ್ತಿಪಟುಗಳು ಬರಿಗೈನಲ್ಲಿ ಕಾಳಗ ಮಾಡಿದರೆ ವಜ್ರಮುಷ್ಠಿಯ ಕಾದಾಳುಗಳು ತಮ್ಮ ಕೈಗಳಲ್ಲಿ ವಜ್ರನಖ ಎಂಬ ಆಯುಧವನ್ನು ತಮ್ಮ ಕೈಗಳಿಗೆ ಕಟ್ಟಿಕೊಂಡು ಸೆಣೆಸಾಡುತ್ತಾರೆ. ಸಾಧಾರಣವಾಗಿ ಎಮ್ಮೆ ಕೊಂಬು, ಆನೆಯ ದಂತ ಇಲ್ಲವೇ ಗಂಡು ಜಿಂಕೆ ಸಾರಂಗದ ಕೊಂಬಿನಲ್ಲಿ ಮುಷ್ಥಿಯ ನಾಲ್ಕೂ ಬೆರಳುಗಳಿಗೆ ತಾಗುವಂತೆ ಇರುವ ಮತ್ತು ತುದಿಯಲ್ಲಿ ಉಗುರಿನಂತೆ ಮೊನಚಾಗಿ ಇರುವಂತಹ ನಖ ಎಂಬ ಆಯುಧವಾಗಿರುತ್ತದೆ. ಈಗ ಅದೇ ನಖವನ್ನು ಹಿತ್ತಾಳೆ ಅಥವಾ ಪಂಚಲೋಹದಿಂದ ತಯಾರಿಸುತ್ತಾರೆ. ಜಟ್ಟಿಗಳು ಶಿಖೆ (ಸಣ್ಣ ಜುಟ್ಟು)ಯ ಹೊರತಾಗಿ ನುಣ್ಣೆಗೆ ತಲೆ ಬೋಳಿಸಿಕೊಂಡು , ಹಣೆಗೆ ತಿಲಕವಿಟ್ಟು ಕೊಂಡು ಹನುಮಾನ್ ಚಡ್ಡಿ ಧರಿಸಿ ಮೈಹುರಿಗಟ್ಟಿದ ಹುರಿಯಾಳುಗಳು ಕೆಮ್ಮಣಿನ ಮಟ್ಟಿಯಲ್ಲಿ ಕಾಳಗಕ್ಕಿಳಿಯುತ್ತಾರೆ. ‘ನಖ’ಮುಷ್ಠಿಯ ಏಟು ಎದುರಾಳಿಯ ನೆತ್ತಿ ಸೀಳಿ ನೆತ್ತರು ತರಿಸಬೇಕು. ಹಿಂದೆಲ್ಲ ಒಬ್ಬ ನೆಲ ಕಚ್ಚುವವರೆಗೂ ಕಾಳಗ ಮುಂದುವರಿದು, ಕಾಳಗದಲ್ಲಿ ಅಜೇಯನಾಗಿ ಗೆದ್ದ ಬಲಿಷ್ಠ ವ್ಯಕ್ತಿಯೇ ರಾಜನ ಅಂಗರಕ್ಷಕನಾಗುತ್ತಿದ್ದರು. ಆದರೆ ಇಂದು ಬೆರಳುಗಳನ್ನು ಉಕ್ಕಿನ ಕವಚದಲ್ಲಿ ಸುತ್ತುವರಿದುಕೊಂಡ ಜಟ್ಟಿಗಳು ತಮ್ಮ ಮುಷ್ಟಿಯಿಂದ ಎದುರಾಳಿಯ ಹಣೆಗೆ ಹೊಡೆಯಬೇಕಿದೆ. . ಎದುರಾಳಿಯ ರಕ್ತವನ್ನು ಸೆಳೆಯುವ ಮೊದಲ ಜೆಟ್ಟಿಯನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಹಾಗಾಗಿ ಇಬ್ಬರೂ ಜಟ್ಟಿಗಳು ಬಲು ಎಚ್ಚರಿಕೆಯಿಂದ ಪರಸ್ಪರ ಕಾದಾಡುತ್ತಾ ಸಮಯ ಸಿಕ್ಕಾಗ ಆಕ್ರಮಣ ಮಾಡುವ ಈ ಅದ್ಭುತ ಕಲೆಯನ್ನು ಓದಿ ತಿಳಿಯುವುದಕ್ಕಿಂತ ನೋಡಿ ನಲಿಯುವುದೇ ರೋಚಕ. ಅಂದು ರಣಧೀರ ಕಂಠೀರವರಿಂದ ಆರಂಭಗೊಂಡ ಈ ಪದ್ದತಿ ನಂತರ ಬಂದ ಎಲ್ಲಾ ರಾಜರ ರಾಜಾಶ್ರಯಲ್ಲಿ ನೂರಾರು ಜಟ್ಟಿಗಳು ಇದ್ದು ಅವರು ರಾಜರಿಗೆ ಅಂಗರಕ್ಷರಾಗುತ್ತಿದ್ದರು. ಇಂದು ಅದು ಕೇವಲ ಸಾಂಕೇತಿವಾಗಿ ಆಚರಿಸುವಷ್ಟರ ಮಟ್ಟಿಗೆ ಬಂದು ತಲುಪಿದೆ
ಅಂದಿನಿಂದ ಆರಂಭವಾದ ಈ ಕಲೆ ಇಂದಿಗೂ ಸಹಾ ಮೈಸೂರಿನ ದಸರಾ ಸಮಯದಲ್ಲಿ ಮಹಾರಾಜರ ಖಾಸಗೀ ದರ್ಬಾರಿನಲ್ಲಿ ರಾಜರ ವಂಶಸ್ಥರು ಮತ್ತು ಅಪಾರ ಸಂಖ್ಯೆಯಲ್ಲಿ ನೆರೆವ ಸಾರ್ವಜನಿಕರ ಸಮ್ಮುಖದಲ್ಲಿ ಮೈಸೂರು ಅರಮನೆ ಕರಿಕಲ್ಲು ತೊಟ್ಟಿಯ ಕೆಂಪು ಮಣ್ಣಿನ ಅಖಾಡದಲ್ಲಿ ವಜ್ರಮುಷ್ಠಿ ಕಾಳಗ ನಡೆಸುವ ಸಂಪ್ರದಾಯ ಮುಂದುವರೆದು ಬಂದಿದೆ. ವಿಜಯದಶಮಿಯ ಬೆಳಿಗ್ಗೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಮಹಾರಾಜರು ವಿವಿಧ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು, ಪೂಜಾ ಕಾರ್ಯಗಳು ಸಂಪೂರ್ಣ ಗೊಂಡು ಕಾಳಗಕ್ಕೆ ಸೂಚನೆ ನೀಡುತ್ತಿದ್ದಂತೆ ಈ ರೀತಿಯಾಗಿ ಕಾದಾಡಲು ಇಚ್ಚಿಸುವ ಜೆಟ್ಟಿಗಳು ಸುಮಾರು ಒಂದು ಸುಮಾರು ಒಂದು ತಿಂಗಳಿನವರೆಗೂ ಮಾಂಸಾಹಾರ ಸೇವಿಸದೆ ತಾಲೀಮು ಮಾಡುತ್ತಾ ತಾಯಿ ಚಾಮುಂಡಿಗೆ ನೇಮ, ನಿಷ್ಠೆಯಿಂದ ಇರುತ್ತಾರೆ. ನವರಾತ್ರಿಯ ಒಂಬತ್ತು ದಿನಗಳ ಕಾಲ ಬಾರೀ ಮಡಿಯಲ್ಲಿದ್ದು ಹಲವು ರೀತಿಯ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ವ್ರತಾಚರಣೆಯನ್ನೂ ಮಾಡುತ್ತಾರೆ. . ಸಾಧಾರಣವಾಗಿ ಚಾಮರಾಜ ನಗರ, ಬೆಂಗಳೂರು, ಮೈಸೂರಿನ ಸುತ್ತಮುತ್ತಲಿನಿಂದ ಸುಮಾರು 50 ಕ್ಕೂ ಹೆಚ್ಚಿನ ಜೆಟ್ಟಿಗಳು ಈ ಕಾಳಗದಲ್ಲಿ ಭಾಗವಹಿಸುತ್ತಾರೆ . ಶ್ರೀ ಚಾಮುಂಡೇಶ್ವರಿ ಹಾಗೂ ರಾಜಮನೆತನದವರ ಸ್ಮರಣೆಯೊಂದಿಗೆ ಈ ಕಾಳಗ ನಡೆಯಲಿದ್ದು, ಜೆಟ್ಟಿಗಳ ಮೇಲೆ ದೈವಾನುಗ್ರಹವಿರುತ್ತದೆ ಎಂಬ ವಿಶೇಷ ನಂಬಿಕೆಯೂ ಎಲ್ಲರಲ್ಲಿದೆ. ಈ ಕಾಳಗವು ಸೋಲು ಗೆಲುವಿನ ಪಂದ್ಯವಾಗಿರದೆ, ನಾಡನ್ನು ಆಳುವವರಿಗಾಗಿ ರಕ್ತ ಸಮರ್ಪಣೆ ಮಾಡಿ ಗೌರವ ಸಲ್ಲಿಸುವ ವಿಶೇಷ ಆಚರಣೆಯಾಗಿದೆ. ಪಂದ್ಯದಲ್ಲಿ ಗೆಲುವು ಪಡೆದವರಿಗೆ ಮಹಾರಾಜರು ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ನೀಡಿ ಗೌರವಿಸಲಾಗುತ್ತದೆ.
ಬೆಂಗಳೂರಿನ ಗುರುಪ್ರಸಾದ್ ಜೆಟ್ಟಿ, ಚೆನ್ನಪಟ್ಟಣದ ಅನೀಲ್ ಜೆಟ್ಟಿ ಜೋಡಿ, ಚಾಮರಾಜನಗರದ ತಿರುಮಲ್ಲೇಶ್‌ಜೆಟ್ಟಿ, ಮೈಸೂರಿನ ಅಶೋಕ ಜೆಟ್ಟಿ ಜೋಡಿಗಳು, ಮೈಸೂರಿನ ಮಂಜುನಾಥ ಜೆಟ್ಟಿ, ಚೆನ್ನಪಟ್ಟಣದ ವಿದ್ಯಾಧರ ಜೆಟ್ಟಿ, ರಾಘವೇಂದ್ರ ಜೆಟ್ಟಿ ಮುಂತಾದ ಕುಸ್ತಿ ಪಟುಗಳು ಶ್ರೀನಿವಾಸ ಜೆಟ್ಟಿ, ಟೈಗರ್ ಬಾಲಾಜಿ ಜೆಟ್ಟಿ ಮುಂತಾದ ಹಿರಿಯ ಮಾರ್ಗದರ್ಶಕರ ಅಡಿಯಲ್ಲಿ ಸಿ.ಎನ್. ಬಾಲಾಜಿ, ಚಾಮರಾಜ ನಗರದ ಬಂಗಾರಜೆಟ್ಟಿ, ಬೆಂಗಳೂರಿನ ಕೃಷ್ಣ ಜೆಟ್ಟಿ, ಮೈಸೂರಿನ ಮಾದು ಜೆಟ್ಟಿ ಮಂತಾದ ಉಸ್ತಾದ್‌ಗಳ ಸಾರಥ್ಯದಲ್ಲಿ ಈ ಮಲ್ಲಯುದ್ದ ನಡೆಯುತ್ತದೆ. ಮೈಸೂರು ಸಂಸ್ಥಾನದ ಹಿರಿಯ ಉಸ್ತಾದ್ ಕೃಷ್ಣಾಜೆಟ್ಟಪ್ಪನವರು (94) ತಮ್ಮ ದೇಹದಲ್ಲಿ ಕಸುವು ಇರುವವರೆಗೂ ಹಿರಿಯ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈ ರೀತಿಯಾಗಿ ಮೈಸೂರಿನ ದಸರೆಗೆ ಹೆಮ್ಮೆಯನ್ನು ತಂದು ಕೊಡುವ ಜೆಟ್ಟಿಗಳು ಮೈಸೂರು ಮಹಾರಾಜರುಗಳಂತೆಯೇ ಮೂಲತಃ ಗುಜರಾತಿನ ಕಡೆಯವರು. ಗುಜರಾತಿನ ಮೊಡೇರಾ ಪ್ರಾಂತ್ಯದವರು ಎಂದು ಹೇಳಲಾಗುತ್ತದೆ. ಅವರನ್ನು ಜೆಟ್ಟಿ, ಜೇಷ್ಠ ಮಲ್ಲ, ಮೋಡ ಬ್ರಾಹ್ಮಣರು ಎಂದೂ ಕರೆಯಲಾಗುತ್ತದೆ. ಗುಜರಾತಿನ ಮೊಡೇರಾ ಪ್ರಾಂತ್ಯದ ದೇಲ್ಮಲ್ ಎಂಬ ಗ್ರಾಮದ ಸೂರ್ಯ ದೇವಾಲಯವೊಂದರಲ್ಲಿ ವಿಶೇಷ ವಜ್ರವಿದ್ದು, ಪ್ರತೀ ಸೋಮವಾರ ಸೂರ್ಯ ಕಿರಣ ವಜ್ರದ ಮೇಲೆ ಬಿದ್ದಾಗ ಆ ಬೆಳಕು ಪ್ರತಿಫಲನಗೊಂಡು ಇಡೀ ದೇವಾಲಯವೇ ಕಂಗೊಳಿಸುತಿತ್ತು. ಇದರಿಂದ ಆಕರ್ಷಿತನಾದ ಅಲ್ಲಾ ಉದ್ದೀನ್ ಖಿಲ್ಜಿ 14 ಬಾರಿ ದಂಡೆತ್ತಿ ಬಂದಿದ್ದರೂ ಈ ಜೇಷ್ಠ ಮಲ್ಲರು ಈ ವಜ್ರವನ್ನು ರಕ್ಷಣೆ ಮಾಡುತ್ತಿದ್ದ ಕಾರಣ ಸಫಲನಾಗಿರಲಿಲ್ಲ. ಆದರೆ 1025ರಲ್ಲಿ ಆಡಳಿತ ನಡೆಸುತಿದ್ದ ರಾಜ ರಣಜಿತ್‌ಸಿಂಗ್ ಮತ್ತು ಈ ಜೇಷ್ಹ ಮಲ್ಲರ ನಡುವೆ ಅದ ವಿರೋಧಾಭಾಸದ ಪ್ರಯೋಜನ ಪಡೆದು ಅಲ್ಲಾವುದ್ದೀನ್ ವಿರುಧ್ದದ ಯುದ್ಧದಲ್ಲಿ ಸೋಲನ್ನು ಅನುಭವಿಸ ಬೇಕಾಯಿತು. ರಾಜ ತಮ್ಮ ಮಾತು ಕೇಳಲಿಲ್ಲ ಎಂಬ ಕಾರಣಕ್ಕೆ ಬೇಸರ ಗೊಂಡ ಒಂದು ಗುಂಪು ರಾಜಸ್ತಾನದತ್ತ ಪ್ರಯಾಣ ಬೆಳೆಸಿದರೆ ಉಳಿದವರು ದಕ್ಷಿಣ ಭಾರತದ ಕಡೆಗೆ ವಲಸೆ ಬಂದು, ಮೊದಲು ಮುನ್ನೂರಕ್ಕೂ ಹೆಚ್ಚು ವರ್ಷ ಆಂಧ್ರ ಪ್ರದೇಶದಲ್ಲಿ ಇದ್ದು, ಬಳಿಕ ತಮಿಳುನಾಡು, ಕರ್ನಾಟಕಕ್ಕೆ ಬಂದು ನೆಲೆ ನಿಂತರು. ಹಾಗಾಗಿ ಇವರುಗಳು ಕನ್ನಡ, ತಮಿಳು, ತೆಲುಗು ಸಮ್ಮಿಶ್ರಿತ ಭಾಷೆಯನ್ನಾಡುತ್ತಾರೆ. ಮೈಸೂರು ಸಂಸ್ಥಾನದಲ್ಲಿ ಜಯಚಾಮರಾಜ ಒಡೆಯರ್ ರಾಜಾಧಿಕಾರದವರೆಗೂ ಈ ಜಟ್ಟಿಗಳೇ ಮಹಾರಾಜರ ಮುಖ್ಯ ಅಂಗರಕ್ಷಕರಾಗಿದ್ದರು. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಇಂಡಿಗನಾಳಿನಲ್ಲಿ ಚೌಡೇಶ್ವರಿ ದೇವಾಲಯವೊಂದನ್ನು ಕಟ್ಟಿ ಅಲ್ಲಿನವರೆಗೆ ಸಮರ ಕಲೆಯನ್ನು ಪರಿಚಯಿಸಿದರು. ಆಚಾರ, ವಿಚಾರ, ಮದುವೆಗಳಲ್ಲಿ ಬಹುತೇಕ ಬ್ರಾಹ್ಮಣರ ಸಂಪ್ರದಾಯದಂತೆಯೇ ಆಚರಿಸುತ್ತಾರೆ. ಮನೆಯ ಗಂಡು ಮಕ್ಕಳಿಗೆ ಉಪನಯನ ಮಾಡಿ, ಜನಿವಾರವನ್ನೂ ಹಾಕುತ್ತಾರೆ. ತಿಪುರವಂದಲು, ಐರಾವತವಂದಲು, ನಾಕವಂದಲು ಮುಂತಾದ ಗೋತ್ರಧಾರಿಗಳಾಗಿರುತ್ತಾರೆ. ಶ್ರೀಕೃಷ್ಣ ಮತ್ತು ಆಂಜನೇಯ ಬಹುತೇಕರ ಮನೆ ದೇವರಾಗಿದ್ದರೂ ಶಕ್ತಿ ದೇವತೆಗಳು ಎಂಬ ಕಾರಣಕ್ಕಾಗಿ ಚಾಮುಂಡೇಶ್ವರಿ ಮತ್ತು ಚೌಡೇಶ್ವರಿಯನ್ನೂ ಪೂಜಿಸುತ್ತಾರೆ. ಇವರಲ್ಲಿ ಬಹುತೇಕರು ಸಸ್ಯಾಹಾರಿಗಳೇ ಆಗಿರುತ್ತಾರಾದರೂ ಕುಸ್ತಿಯನ್ನು ಅಭ್ಯಾಸಿರುವವರು ದೇಹವನ್ನು ಗಟ್ಟಿಯಾಗಿಸಲು ಮತ್ತು ಹುರಿಗೊಳಿಸಲು ಸಹಕಾರಿಯಾಗಲೆಂದು ಮಾಂಸಾಹಾರವನ್ನು ಸೇವಿಸುವವರೂ ಹಲವರಿದ್ದಾರೆ.
ರಾಜಾಶ್ರಯ ಎಲ್ಲರಿಗೂ ಸಿಗದಿದ್ದ ಕಾರಣ ಕ್ರಮೇಣ ವ್ಯಾಪಾರ ವಹಿವಾಟು ಮತ್ತು ಕೃಷಿ ಚಟುವಟಿಕೆಗಳತ್ತ ಗಮನ ಹರಿಸಿ ಹಳೆಯ ಮೈಸೂರು ಪ್ರಾಂತದಲ್ಲಿ ಚೆದುರಿ ಹೋದರು. ಹಾಗೆ ಹೋದಲೆಲ್ಲಾ ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಗರಡಿ ಮನೆಯನ್ನು ತೆರೆದು ತಮ್ಮ ಮೂಲ ಕಸುಬಾದ ಕುಸ್ತಿಯನ್ನು ಕಲಿಸಲು ಮಾತ್ರ ಮರೆಯಲಿಲ್ಲ. ಇಂದಿಗೂ ‘ಮೈಸೂರು, ಚಾಮರಾಜನಗರ, ಚನ್ನಪಟ್ಟಣ, ಬೆಂಗಳೂರು, ಶ್ರೀರಂಗಪಟ್ಟಣ, ಹಾಸನ ಎಲ್ಲೆಡೆ ಸೇರಿ ರಾಜ್ಯಾದ್ಯಂತ ಸುಮಾರು ಒಂದು ಲಕ್ಷ ಜನಸಂಖ್ಯೆಯಷ್ಟು ಜನ ಇರಬಹುದು ಎಂದು ಅಂದಾಜಿಸಲಾಗಿದೆ. ವರ್ಷಕ್ಕೊಮ್ಮೆ ಆಶಾಡ ಮಾಸದ ಹುಣ್ಣಿಮೆಯಂದು (ನೂಲು ಹುಣ್ಣಿಮೆ/ ಯುಗ್ ಉಪಾಕರ್ಮ) ಬೆಂಗಳೂರಿನ ವಿ.ವಿ.ಪುರಂನ ಅರಸೋಜೀರಾವ್ ಕಲ್ಯಾಣ ಮಂಟಪದಲ್ಲಿ ಬಹುತೇಕರು ಒಂದೆಡೆ ಸೇರಿ ಉಪಾಕರ್ಮವನ್ನು ಆಚರಿಸುವುದಲ್ಲದೇ, ಮಟ್ಟಿ ಪೂಜೆಯೊಂದಿಗೆ ಅನೇಕ ಹೋಮ ಹವನಾದಿಗಳನ್ನು ಮಾಡಿಸುವ ಸತ್ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.
ಕನ್ನಡ ಚಲನಚಿತ್ರರಂಗವೇನೂ? ಇಡೀ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮ ಸಂಗೀತ ಮಾಂತ್ರಿಕತೆಯೊಂದಿಗೆ ಎಲ್ಲರನ್ನೂ ಮಂತ್ರ ಮುಗ್ಧರನ್ನಾಗಿಸಿದ್ದ ಸಂಗೀತ ನಿರ್ದೇಶಕ ಜೋಡಿಯಾಗಿದ್ದ ಶ್ರೀ ರಾಜನ್ ಮತ್ತು ನಾಗೇಂದ್ರ ಅವರೂ ಸಹಾ ಇದೇ ಜಟ್ಟಿಗಳ ವಂಶದವರು ಎನ್ನುವುದು ಗಮನಾರ್ಹವಾಗಿದೆ.
ಈ ರೀತಿಯ ವಜ್ರಮುಷ್ಠಿ ಮಲ್ಲಯುದ್ಧದ ಜೊತೆ ಜೊತೆಯಲ್ಲಿಯೇ ದಸರಾ ಕ್ರೀಡಾಕೂಟಗಳು ನಡೆಯಲಿದ್ದು ಅದರಲ್ಲಿಯೂ ಸಹಾ ರಾಜ್ಯ,ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ಕುಸ್ತೀ ಪಂದ್ಯಾವಳಿಗಳು ಮೈಸೂರಿನ ದೊಡ್ಡಕೆರೆ ಮೈದಾನದ ನಡೆಯುತ್ತವೆ. ಪಂದ್ಯಾವಳಿಯಲ್ಲಿ ಗೆದ್ದವರಿಗೆ ಪ್ರಶಸ್ತಿ ಪತ್ರಗಳೊಂದಿಗೆ ಆಕರ್ಷಕವಾದ ಬಹುಮಾನಗಳನ್ನು ನೀಡುವುದರ ಮೂಲಕ ದೇಸೀ ಕುಸ್ತಿ ಆಟಕ್ಕೆ ಹೆಚ್ಚಿನ ರೀತಿಯ ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಕ್ರಿಕೆಟ್, ಫುಟ್ಬಾಲ್ ಹಾಕಿ ಮುಂತಾದ ಜಗತ್ಪ್ರಸಿದ್ದ ಕ್ರೀಡೆಗಳೇ ಮೊಬೈಲ್ ಬಂದ ಮೇಲೆ ಮಕಾಡೆ ಮಲಗುತ್ತಿರುವಾಗ ಇನ್ನು ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ನಮ್ಮ ಪುರಾಣಗಳಲ್ಲಿ ಉಲ್ಲೇಖವಾಗಿರುವ ಕುಸ್ತಿಯನ್ನು ಇಂದಿನ ಯುವ ಪೀಳಿಗೆ ಅಪ್ಪಿಕೊಳ್ಳುತ್ತಾರೆ ಎನ್ನುವುದನ್ನು ನಂಬಲು ಸಾಧ್ಯವಿಲ್ಲದಿದ್ದರೂ, ಇಂತಹ ಜಟ್ಟಿಗಳ ಮನೆತನದ ಸಾಂಪ್ರದಾಯಿಕ ಆಚರಣೆಯಿಂದಾಗಿಯಾದರೂ ಈ ಮಲ್ಲ ಯುದ್ಧ ಕಲೆ, ವಜ್ರಮುಷ್ಠಿ ಸಮರ ಕಲೆ ಇನ್ನೂ ಸಾವಿರಾರು ವರ್ಷಗಳು ಆಚರಣೆಯಲ್ಲಿರ ಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.
ಏನಂತೀರೀ?
Super sir namma janangada jana gala bagge. Tumbane adyayana madi namage tiliyadiruva tumbane vicharagalannu tilisidiri nimage namma janangadavarinda tumbu hrudayada dhanyavadagalu
LikeLike
ಈ ಲೇಖನಕ್ಕೇ ನೀವೇ ಸ್ಪೂರ್ತಿ. ಹಾಗಾಗಿ ಲೇಖನ ನಿಮಗೆ ಮತ್ತು ನಿಮ್ಮ ಜಟ್ಟಿ ಮನೆತನದವರಿಗೇ ಸಮರ್ಪಿಸುತ್ತಿದ್ದೇನೆ.
LikeLike
So interesting thank you so much for given wonderful memories Mob no 9448612388
LikeLike
ಧನ್ಯೋಸ್ಮಿ
LikeLike
Namaskara sir IAM chandrashekar jettappa EX ARMY Mysore I personally and behalf of the entire community thanks for your great work 9483731201.
LikeLiked by 1 person
ಧನ್ಯೋಸ್ಮಿ.
LikeLike
ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುವ, ನಿಮ್ಮದೇ ಸಮುದಾಯದ ನಮ್ಮ ಸ್ನೇಹಿತರ ಶ್ರೀ ಸಂತೋಷ್ ಅವರು ಕಳುಹಿಸಿದ ಸಣ್ಣ ಎಳೆ ಈ ಲೇಖನಕ್ಕೆ ಪ್ರೇರಣೆಯಾಯಿತು. ಇಂದಿಗೂ ಅಷ್ಟೆಲ್ಲಾ ಸಂಪ್ರದಾಯಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ನಿಮ್ಮ ಸಮುದಾಯದವರಿಗೆ ನಮೋ ನಮಃ
LikeLike
ಉತ್ತಮ ಲೇಖನ. ಮೌಂಟ್ ಕಾರ್ಮೆಲ್ ಕಾಲೇಜ್ ಗೆ ಹೋಗುವ ದಾರಿಯಲ್ಲಿ ವಸಂತನಗರದ ಆಂಜನೇಯನಗುಡಿ ಬಳಿ ಉತ್ತರಭಾರತದವರೊಬ್ಬರು ಗರಡಿಮನೆಯಲ್ಲಿ ಒಂದಷ್ಟು ಯುವಕರಿಗೆ ಮಲ್ಲಯುದ್ಧ ಕಲಿಸುತ್ತಿದ್ದುದ್ದನ್ನು ಬಹಳ ವರ್ಷಗಳ ಹಿಂದೆ ಬಹುಷಃ 1991-93 ಆಸುಪಾಸಿನಲ್ಲಿ ಕಂಡಿದ್ದೆ.
LikeLiked by 1 person
Good and informative writing.
LikeLiked by 1 person
ಜಟ್ಟಿಗಳ ಬಗ್ಗೆ ಕೂಲಂಕುಶವಾಗಿ ಹಾಗೂ ರಣಧೀರ ಕಂಠೀರವ ರಿಂದ ಆರಂಭವಾದ ಈ ದೇಸಿ ಸಮರ ಕಲೆ ಬಗ್ಗೆ ತಿಳಿಸಿದ್ದಕ್ಕೆ ಅನಂತ ಧನ್ಯವಾದಗಳು🙏👍👏
LikeLiked by 1 person
ಧನ್ಯೋಸ್ಮಿ
LikeLike