ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

ಮೊಬೈಲ್ ಹೆಸರೇ ಹೇಳುವಂತೆ ಜಂಗಮವಾಣಿ. ಎಲ್ಲೆಂದರೆಲ್ಲಿ , ಎಷ್ಟು ಹೊತ್ತಿನಲ್ಲಿಯೂ, ಯಾರನ್ನು ಬೇಕಾದರೂ ಸಂಪರ್ಕಿಸ ಬಹುದಾದ ಸುಲಭವಾದ ಸಾಧನ. ಭಾರತದಲ್ಲಿ ಎಂಭತ್ತರ ದಶಕದಲ್ಲಿ ದೂರವಾಣಿಯ ಸಂಪರ್ಕ ಕ್ರಾಂತಿಯಾಗಿ ಮನೆ ಮನೆಗಳಲ್ಲಿ ಟೆಲಿಫೋನ್ ರಿಂಗಣಿಸತೊಡಗಿದರೆ, ತೊಂಭತ್ತರ ದಶಕದಲ್ಲಿ ಸಿರಿವಂತರ ಕೈಗಳಲ್ಲಿ ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸಿಕೊಳ್ಳುವ ಸಾಧನವಾಗಿ ದೊಡ್ಡ ದೊಡ್ಡ ಮೊಬೈಲ್ ಫೋನ್ಗಳು ಬಂದರು. ಆದರೆ, ಯಾವಾಗ 2001-2002ರಲ್ಲಿ ರಿಲೆಯನ್ಸ್ ಕಮ್ಯೂನಿಕೇಷನ್ ಸಂಸ್ಥೆ ಮಾರುಕಟ್ಟೆಯಲ್ಲಿ ಕಾಸಿಗೊಂದು ಕೊಸರಿಗೊಂದು ಎನ್ನುವಂತೆ 500-2000 ರೂಪಾಯಿಗಳ ಮೊಬೈಲ್ ಬಿಡುಗಡೆ ಮಾಡಿತೋ ಅಂದಿನಿಂದ ಭಾರತದಲ್ಲಿ ಬಡವ ಬಲ್ಲಿದ ಎಂಬ ಬೇಧವಿಲ್ಲದೇ, ಎಲ್ಲರ ಕೈಗಳಲ್ಲಿಯೂ ಬೇಕೋ ಬೇಡವೋ ಮೊಬೈಲ್ ಫೋನ್ಗಳು ಕಾಣಲಾರಂಭಿಸಿ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಎನ್ನುವ ಗಾದೆ, ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಕೈಯ್ಯೊಳಗೆ ಮೊಬೈಲ್ ಫೋನು ಎನ್ನುವ ಗಾದೆಯಾಗಿ, ಮೊಬೈಲ್, ಕೇವಲ ಸಂಪರ್ಕ ಸಾಧನವಾಗಿದ್ದ ಸಾಧನ, ಜೀವನದ ಅತ್ಯಾವಶ್ಯಕ ಭಾಗವಾಗಿ ಹೋಗಿದ್ದದ್ದು ದೌರ್ಭಾಗ್ಯವೇ ಸರಿ. ಅಂತಹ ಜೀವನದ ಅವಿಭಾಜ್ಯ ಅಂಗ, ಅಚಾನಕ್ಕಾಗಿ ಕಳೆದು ಹೋಗಿದ್ದಲ್ಲಿ ಅಥವಾ ಎಲ್ಲೋ ಮರೆತು ಇಟ್ಟು ಅದಕ್ಕಾಗಿ ಪರಿತಪಿಸುವ ಕೆಲವು ಮೋಜಿನ ಪ್ರಸಂಗಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪ್ರಸಂಗ-1

philips-355

ಅದು ಬಹುಶಃ 2004-2005 ಇರಬಹುದು. ಅಂದೆಲ್ಲಾ ನೋಕಿಯಾ ಮೊಬೈಲ್ ಜಮಾನ. ಕ್ಯಾಮೆರಾ ಫೋನ್ ಆಗಿನ್ನೂ ಕಣ್ಣು ಬಿಡುತ್ತಿದ್ದ ಕಾಲ. ಅಂತಹ ಕಾಲದಲ್ಲಿ ಟೈಮ್ಸ್ ಆಫ್ ಇಂಡಿಯಾದ ಬಿಡ್ಡಿಂಗ್ ಸೈಟಿನಲ್ಲಿ ಬಿಡ್ ಮಾಡಿ ಚೆಂದದ ವಿಜಿಏ ಮೋಡ್ ಇರುವಂತಹ Philips mobile ಒಂದನ್ನು ಖರೀದಿಸಿ ನಮ್ಮ ಆಫೀಸಿನಲ್ಲಿ ತುಂಬಾನೇ ಮಿಂಚಿದ್ದೆ. ಅದೊಂದು ದಿನ ಸಂಜೆ, ಇನ್ನೇನು ಕೆಲಸ ಮುಗಿಸಿ ಮನೆಗೆ ಹೋಗಬೇಕು ಎಂದು ಹೊರಟಿದ್ದ ನನಗೆ ನಮ್ಮ ಎಂಡಿಯವರಿಂದ ಕರೆ ಬಂದು ಅವರ ಲ್ಯಾಪ್ಟಾಪ್ ನಲ್ಲಿ ಎನೋ ಸಮಸ್ಯೆ ಇದೆ ಎಂದು ತಿಳಿಸಿದರು. ಕೂಡಲೇ ಅವರ ಕೊಠಡಿಗೆ ಹೋಗಿ ಒಂದು ಹತ್ತು ಹದಿನೈದು ನಿಮಿಷಗಳಲ್ಲಿ ಅವರ ಸಮಸೆಯನ್ನು ಪರಿಹರಿಸಿ ಅವರಿಗೆ ಹಸ್ತಲಾಘವ ನೀಡಿ ಮನೆಯ ಕಡೆ ಹೊರಟೆ, ಆಫೀಸಿನಿಂದ ಒಂದು ಹತ್ತು ನಿಮಿಷಗಷ್ಟು ದೂರ ಬಂದಿರಬಹುದು ಮೋಬೈಲ್ ನೆನಪಾಗಿ ಜೋಬೆಲ್ಲಾ ತಡಕಾಡಿದರೂ ಸಿಗದ ಕಾರಣ, ಆಫೀಸಿನಲ್ಲೇ ಬಿಟ್ಟಿರಬಹುದೆಂದು ಮತ್ತೆ ಹಿಂದಿರುಗಿ ಬರುವಾಗ ನಿಧಾನವಾಗಿ ರಸ್ತೆಯಲ್ಲಿ ಎಲ್ಲಿಯಾದರೂ ಬೀಳಿಸಿಕೊಂಡಿರಬಹುದೇ ಎಂದು ನೋಡುತ್ತಲೇ ಬಂದು ಇಡೀ ಕಛೇರಿಯನ್ನೆಲ್ಲಾ ತಡಕಾಡಿದರೂ ನನ್ನ ಮೊಬೈಲ್ ಸಿಗಲೇ ಇಲ್ಲ. ನಾನು ನನ್ನ ಮೊಬೈಲ್ ನಂಬರ್ಗೆ ಕರೆ ಮಾಡಿದರೆ, ಸ್ವಿಜ್ಡ್ ಆಫ್ ಎಂಬ ಸಂದೇಶ ಬರುತ್ತಿತ್ತು. ನಾನು ಮತ್ತು ನನ್ನ ಸ್ನೇಹಿತ ಮೂರು ದಿನ ಸತತವಾಗಿ ಬಿಡ್ ಮಾಡಿ ಕೊಂಡ ಮೊಬೈಲ್ ಈ ರೀತಿಯಾಗಿ ಕಳೆದು ಹೋಯಿತಲ್ಲ ಎಂದು ಮರುಕಪಟ್ಟೆ, ಯಾರೋ ಚಾಲಾಕಿ ಕೈಯಲ್ಲಿ ನನ್ನ ಮೊಬೈಲ್ ಸಿಕ್ಕಿ ಬಿಟ್ಟಿದೆ. ಮೊಬೈಲ್ ಸಿಕ್ಕ ಕೂಡಲೇ ಸ್ವಿಚ್ ಆಫ್ ಮಾಡ್ಬಿಟ್ಟಿದ್ದಾನೆ ಅಂತ ಕೋಪಗೊಂಡೆ. ನನ್ನ ಸ್ನೇಹಿತ ಬಿಡು ಮಗಾ, ಕಷ್ಟ ಪಟ್ಟು ಸಂಪಾದನೆ ಮಾಡಿ ಕೊಂಡಿರೋ ವಸ್ತು ಸಿಕ್ಕೇ ಸಿಗುತ್ತದೆ ಎಂದು ಸಾಂತ್ವನ ಹೇಳಿ ಯಾವುದಕ್ಕೂ ಒಂದು ಪೋಲೀಸ್ ಕಂಪ್ಪೈಂಟ್ ಕೊಟ್ಟು ಬಿಡು ಎಂದು ತಿಳಿಸಿದ. ಅವನ ಸಲಹೆಯಂತೆ ಮನೆಗೆ ಬಂದು ಮನೆಯವರಿಗೆಲ್ಲಾ ಮೊಬೈಲ್ ಕಳುದುಕೊಂಡ ವಿಷಯ ತಿಳಿಸಿ ಪೋಲೀಸರಿಗೆ ದೂರು ಕೊಡಲು ಹೊರಟಾಗ, ನಮ್ಮ ತಂದೆಯವರು ಸುಮ್ಮನೆ ಆತುರ ಪಡಬೇಡ. ನಾಳೆ ಒಂದು ದಿನ ನೋಡಿ ಆಮೇಲೆ ದೂರು ನೀಡು ಎಂದು ಸಲಹೆ ಇತ್ತರು. ದೊಡ್ಡವರ ಮಾತು ಮೀರಬಾರದೆಂದು ಸುಮ್ಮನೆ ಗೊಣಗುತ್ತಲೇ ಸುಮ್ಮನಾದೆ. ಆದರೆ ಅರ್ಧ ಗಂಟೆಗಳಿಗೊಮ್ಮೆ ನಾನು, ನನ್ನ ಮಡದಿ ನನ್ನ ಸ್ನೇಹಿತ ಮತ್ತು ಆತನ ಪತ್ನಿ ಎಲ್ಲರೂ ತಡ ರಾತ್ರಿಯ ವರೆಗೂ ಪ್ರಯತ್ನಿಸುತ್ತಲೇ ಇದ್ದವು ಮತ್ತದೇ ಸ್ವಿಜ್ಡ್ ಆಫ್ ಮೆಸೇಜ್. ಛೇ!! ಅಷ್ಟೋಂದು ಚೆನ್ನಾಗಿದ್ದ ಮೊಬೈಲ್ಗೆ ಯಾರದ್ದೋ ಕಣ್ಣು ಬಿದ್ದು ಕಳೆದು ಹೋಯ್ತು. ಅಷ್ಟೋಂದು ಹಣ ಸುಮ್ಮನೆ ಯಾರದ್ದೋ ಪಾಲಾಯ್ತು ಎಂದು ಗೊಣಗಾಡುತ್ತಲೇ ಇಡೀ ರಾತ್ರಿ ನಿದ್ದೆ ಇಲ್ಲದೇ ಕಳೆದು ಬೆಳಿಗ್ಗೆ ಎದ್ದ ಕೂಡಲೇ ಮತ್ತೊಮ್ಮೆ ಕರೆ ಮಾಡಿದರೆ ಅದೇ ಸ್ವಿಜ್ಡ್ ಆಫ್. ಸರಿ ನನ್ನ ಗ್ರಹಚಾರ ಸರಿ ಇಲ್ಲ ಎಂದು ಗೊಣಗುತ್ತಲೇ ಆಫೀಸಿಗೆ ಹೋಗಿ ಸ್ವಲ್ಪ ಹೊತ್ತಾದ ನಂತರ ಮೊಬೈಲ್ ಕಂಪನಿಯವರಿಗೆ ಪೋನ್ ಮಾಡಿ ಡ್ಲುಪಿಕೇಟ್ ಸಿಮ್ ಪಡೆಯುವುದು ಹೇಗೆ ಎಂದು ತಿಳಿಯಬೇಕು ಎಂದು ಕರೆ ಮಾಡುವ ಮುನ್ನ ಕಡೆಯ ಬಾರಿಗೆ ನನ್ನ ಮೊಬೈಲ್ ಫೋನಿಗೆ ಫೋನ್ ಮಾಡಿದರೆ, ಆಶ್ವರ್ಯ. ಪರಮಾಶ್ವರ್ಯ. ಮೋಬೈಲ್ ರಿಂಗ್ ಆಗುತ್ತಿದೆ, ಮೊಬೈಲ್ ರಿಂಗ್ ಆಗುತ್ತಿದ್ದ ಶಬ್ಧ ಕೇಳುತ್ತಿದ್ದಂತೆಯೇ ಮನಸ್ಸಿನಲ್ಲಿ ಮರುಗಾಡಿನಲ್ಲಿ ನೀರು ಸಿಗುವ ಓಯಸಿಸ್ ಕಂಡಂತೆ ಆದ ಅನುಭವ. ಆಯ್ಯೋ ರಾಮಾ, ಫೋನ್ ತೆಗೆದು ಕೊಳ್ಳಲಿ. ಫೋನ್ ತೆಗೆದು ಕೊಳ್ಳಲಿ, ಎಂದು ಪರಪರನೆ ಮೈಯೆಲ್ಲಾ ಪರಚಿಕೊಂಡರೂ ಆಕಡೆಯಿಂದ ಉತ್ತರವಿಲ್ಲ. ಆದರೆ ರಾತ್ರಿ ಇಡೀ ಸ್ಚಿಚ್ ಆಫ್ ಆಗಿದ್ದ ಫೋನ್ ಈಗ ರಿಂಗ್ ಆಗುತ್ತಿರುವುದರಿಂದ ಮೊಬೈಲ್ ಎಲ್ಲೋ ಸಿಗಬಹುದೆಂಬ ಸಣ್ಣ ಆಸೆ. ಮತ್ತೊಮ್ಮೆ ಮಗದೊಮ್ಮೆ ಪ್ರಯತ್ನ ಪಟ್ಟಗ ಮೂರನೇ ಬಾರಿ ಹಲೋ.. ಎಂಬ ಪದ ಆ ಕಡೆಯಿಂದ ಕೇಳುತ್ತಿದ್ದಂತೆಯೇ, ಸಾರ್.. ಆ ಮೋಬೈಲ್ ನಂದು ಸಾರ್ .. ಕಷ್ಟ ಪಟ್ಟು ತೆಗೆದುಕೊಂಡಿದ್ದೇನೆ. ದಯವಿಟ್ಟು ಕೊಟ್ಟು ಬಿಡಿ ಸಾರ್… ನೆಮಗೆಲ್ಲಿ ಸಿತ್ಕು? ಮೊಬೈಲ್ ತೆಗೆದುಕೊಳ್ಳಲು ನಾನು ಎಲ್ಲಿ ಬರಬೇಕು? ಎಂದು ಒಂದೇ ಸಮನೇ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾಗ, ಆ ಕಡೆಯಿಂದ ಬಂದದ್ದು ಎರಡೇ ವಾಕ್ಯ? What happened to you? It’s me Murali here. Murali here ಎಂದು ಕೇಳಿದ್ದೇ ತಡ ಒಂದು ಕ್ಷಣ ಎದೆ ಧಸಕ್ಕೆಂದಿತು. ಅರೇ ನನ್ನ ಮೊಬೈಲ್ ಅವರ ಬಳಿ ಹೇಗೆ ಹೋಗಿರಬಹುದು ಎಂದು ನೆನಪಿಸಿಕೊಳ್ಳುತ್ತಾ ಒಂದೇ ಉಸಿರಿನಲ್ಲಿ ನಮ್ಮ ಎಂಡಿ ಅವರ ಕ್ಯಾಬಿನ್ನಿಗೆ ಹೋಗಿ, Can I come in? ಎಂದು ಕೇಳಿದಾಗ ಆ ಕಡೆಯಿಂದ Yes please ಎನ್ನವುದಕ್ಕೂ ಮುಂಚೆಯೇ ಅವರ ಕ್ಯಾಬಿನ್ನಿಗೆ ನುಗ್ಗಿದರೆ ಅವರ ಟೇಬಲ್ ಮೇಲೆ ನನ್ನ ಬಿಳಿ ಸುಂದರಿ ನಗುನಗುತ್ತಾ ಇದ್ದಾಳೆ. ಕೂಡಲೇ ಅದನ್ನು ತೆಗೆದು ಕೊಂಡು ಥ್ಯಾಂಕ್ಯು ವೆರಿ ಮಚ್ ಮುರಳಿ ಎಂದ ಹೇಳಿ ಸುಮ್ಮನೆ ಬಾರದೆ, ನಿಮ್ಮ ಬಳೆ ನನ್ನ ಫೋನ್ ಹೇಗೆ ಬಂದಿತು ಎಂದು ಕುತೂಹಲದಿಮ್ದ ಕೇಳಿದೆ. ಹಿಂದಿನ ದಿನ ಸಂಜೆ ಅವರ ಲಾಪ್ಟ್ಯಾಪ್ ಸರಿ ಮಾಡುವಾಗ ಮೊಬೈಲನ್ನು ಅವರ ಟೇಬಲ್ ಮೇಲಿಟ್ಟು ಕೆಲಸ ಮುಗಿದ ಮೇಲೆ ಅದನ್ನು ತೆಗೆದು ಜೊಂಡು ಹೋಗಲು ಮರೆತಿದ್ದೇನೆ. ನಾನು ಹೊರಗೆ ಬಂದ ಮೇಲೆ ನನ್ನ ಮೊಬೈಲನ್ನು ಗಮನಿಸಿದ ನಮ್ಮ ಎಂಡಿ ಅದನ್ನು ಹಿಡಿದುಕೊಂಡು ಹೊರಬಂದು ಸೆಕ್ಯುರಿಟಿ ಬಳಿ ನನ್ನ ಬಗ್ಗೆ ವಿಚಾರಿಸಿದಾಗ, ಆಗ ತಾನೆ ನಾನು ಮನೆಗೆ ಹೋದ ವಿಚಾರ ತಿಳಿಸಿದ್ದಾರೆ. ಹೇಗೂ ಮಾರನೆಯ ದಿನ ಕೊಡೋಣ ಎಂದು ಕೊಂಡು ಅವರು ಮೊಬೈಲನ್ನು ಸ್ವಿ‍ಚ್ ಆಫ್ ಮಾಡಿ ತಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡಿದ್ದಾರೆ. ಮಾರನೆಯ ದಿನ ಆಫೀಸಿಗೆ ಬಂದ ಮೇಲೆ ಆನ್ ಮಾಡಿರುವ ವಿಷಯ ತಿಳಿಸಿದರು. ನನ್ನ ಒಂದು ಸಣ್ಣ ಮರೆವು ಒಂದು ದಿನ ಪೂರ್ತಿ, ಎಲ್ಲರನ್ನೂ ಹೇಗೆ ಕಾಡಿತು ಎಂಬುದನ್ನು ನೆನಪಿಸಿಪಿ ಕೊಂಡರೆ ಈಗಲೂ ನಗೆ ಬರುತ್ತದೆ,

ಪ್ರಸಂಗ-2
ಅದೊಮ್ಮೆ ಮನೆಯವರೆಲ್ಲಾ ಸೇರಿ ಧರ್ಮಸ್ಥಳ, ಉಡುಪಿ, ಕೊಲ್ಲೂರು ಶೃಂಗೇರಿ ಹೊರನಾಡಿಗೆ ನಮ್ಮದೇ ಕಾರಿನಲ್ಲಿ ಹೋಗಿದ್ದೆವು, ಕಾರಿನ ಡ್ಯಾಷ್ ಬೋರ್ಡಿನ ಮೇಲೆ ನನ್ನ ಮೊಬೈಲ್ ಇಟ್ಟಿದ್ದೆ. ಅಲ್ಲೇ ಪಕ್ಕದ ಸೀಟಿನಲ್ಲಿ ಕುಳಿತಿದ್ದ ನನ್ನ ಸಣ್ಣ ವಯಸ್ಸಿನ ಮಗ ನನ್ನ ಮೊಬೈಲ್ ಹಿಡಿದು ಆಟವಾಡುತ್ತಿದ್ದ. ಮಾರ್ಗದ ಮಧ್ಯದಲ್ಲಿ ಕಾಫಿಗೆಂದು ಸಣ್ಣ ಹೋಟೆಲ್ ಬಳಿ ನಿಲ್ಲಿಸಿ ನಾನೇ ಕಾರ್ ಇಳಿದು ಹೋಗಿ ಎಲ್ಲರಿಗೂ ಕಾಫೀ ಟೀ ತಂದು ಕೊಟ್ಟು ಪ್ರಯಾಣ ಮುಂದುವರೆಸಿದೆವು. ಸ್ವಲ್ಪ ದೂರ ಹೋಗಿದ್ದೇವೆ. ನನ್ನ ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸೋಣ ಎಂದು ಮೊಬೈಲ್ಗೆ ಕೈ ಹಾಕುತ್ತೀನಿ, ಮೊಬೈಲ್ ಕಾಣ್ತಾ ಇಲ್ಲ. ಮಗೂ ಎಲ್ಲೋ ಮೊಬೈಲ್ ಎಂದರೆ ಅಲ್ಲೇ ಇಟ್ಟಿದ್ದಿನಪ್ಪಾ ಎಂದ ಮಗ. ಆದ್ರೇ ಮೊಬೈಲ್ ಮಾತ್ರಾ ಕಾಣ್ತಾ ಇಲ್ಲಾ. ಒಂದು ಕ್ಷಣ ಕಾರಿನಲ್ಲಿ ಇದ್ದವರೆಲ್ಲಾ ತಮ್ಮ ಸೀಟಿನ ಕೆಳಗೆ ಅಲ್ಲಿ ಇಲ್ಲಿ ಎಲ್ಲಾ ಕದೆ ಹುಡುಕುತ್ತೀವಾದರೂ ಮೊಬೈಲ್ ಮಾತ್ರಾ ಸಿಗುತ್ತಿಲ್ಲ. ಶಬ್ಧ ಮಾತ್ರ ಬರ್ತಾ ಇದೆ. ಸರಿ ಎಂದು ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಎಲ್ಲರೂ ಕಾರಿನಿಂದ ಇಳಿದು ಎಲ್ಲಾ ಕಡೆಯಲ್ಲೂ ಹುಡುಕಿದರೂ ಕಣ್ಣಿಗೆ ಕಾಣ್ತಾ ಇಲ್ಲ.. ಕರೆ ಮಾತ್ರ ಮೇಲಿಂದ ಮೇಲೆ ಬರ್ತಾ ಇದೆ. ಹಾಗೇ ಒಂದು ಕ್ಷಣ ಶಬ್ಧ ಎಲ್ಲಿಂದ ಬರ್ತಾ ಇದೆ ಅಂದ್ರೇ ಕಾರಿನ ಮುಂಭಾಗದಲಿಂದಲೇ ಬರ್ತಾ ಇದೆ. ನಿಧಾನವಾಗಿ ಒಂದೊಂದೇ ಪರೀಕ್ಷೇ ಮಾಡುತ್ತಿದ್ದಾಗ ಡ್ರೈವರ್ ಸೀಟಿನ ಮೇಲೆ ಕನ್ನಡಕ ಇಟ್ಟು ಕೊಳ್ಳಲು ಒಂದು ಸಣ್ಣದಾದ ಜಾಗವಿರುತ್ತದೆ.. ಆಟವಾಡುತ್ತಿದ್ದ ನನ್ನ ಸಣ್ಣ ವಯಸ್ಸಿನ ಮಗ ಅವನಿಗೇ ಅರಿವಿಲ್ಲದಂತೆ ಆದರಲ್ಲಿ ನನ್ನ ಮೊಬೈಲ್ ಇಟ್ಟು ಮುಚ್ಚಿಬಿಟ್ಟಿದ್ದ ಕಾರಣ. ಮೊಬೈಲ್ ನಮ್ಮ ಕಣ್ಣಿಗೆ ಕಾಣುತ್ತಿರಲಿಲ್ಲ ಆದ್ರೆ ಶಬ್ಧ ಮಾತ್ರ ಬರುತ್ತಿತ್ತು. ಒಂದೇ ಸಮನೆ ಮೊಬೈಲ್ ಹೊಡ್ಕೋತಾ ಇದೆ ಎಂದು ಕರೆ ಸ್ವೀಕರಿಸಿ ಹಲೋ,,, ಎಂದರೆ, ಸಾರ್ ನಾವು ICICI Bank ಕಡೆಯಿಂದ ಕರೆ ಮಾಡ್ತಾ ಇದ್ದೀವಿ, ನಿಮಗೆ ಲೋನ್ ಬೇಕಾ ಸಾರ್ ಎಂದಾಗ ಮೊಬೈಲ್ ಕಳೆದು ಸಿಕ್ಕದೇ ಪಜೀತಿ ಪಟ್ಟಿದ್ದು ನೆನಾಪಾಗಿ ಪಿತ್ತ ನೆತ್ತಿಗೇರಿ. ಸಾಲ ಬೇಡ. ಎನೂ ಬೇಡ ಎಂದು ದಬಾಯಿಸಿ ಸುಮ್ಮನೆ ಕಾಲ್ ಕತ್ತರಿಸಿ ಹಿಂದೆ ತಿರುಗಿದರೆ, ನನ್ನ ಮಗನೂ ಸೇರಿ ಎಲ್ಲರೂ ನನ್ನ ಪರಿಸ್ಥಿತಿ ನೋಡಿ ಮುಸಿ ಮುಸಿ ನಗುತ್ತಿದ್ದರು.

ಪ್ರಸಂಗ-3

chite.jpeg

ಒಂದು ಹದಿನೈದು ದಿನಗಳ ಹಿಂದೆ ನಮ್ಮ ಪ್ರಾಣ ಸ್ನೇಹಿತನ ತಾಯಿಯವರು ತೀರಿಕೊಂಡಿದ್ದರು. ಅಂತಿಮ ಕಾರ್ಯಕ್ಕೆಂದು ರುದ್ರಭೂಮಿಗೆ ಹೋಗಿದ್ದೆವು. ಪುರೋಹಿತರು ಶಾಸ್ತ್ರೋಕ್ತವಾಗಿ ಒಂದು ಕಡೆ ವಿಧಿ ವಿಧಾನಗಳನ್ನು ಮಾಡಿಸುತ್ತಿದ್ದರೆ, ನಾವುಗಳು ಎಲ್ಲಾ ಚೆತೆಗೆ ಬೇಕಾದ ಸೌದೆಗಳನ್ನು ಜೋಡಿಸುತ್ತಿದ್ದೆವು. ಬಹುತೇಕರು ಪಂಚೆಯನ್ನು ಉಟ್ಟುಕೊಂಡಿದ್ದರಿಂದ ತಮ್ಮ ತಮ್ಮ ಮೊಬೈಲ್ಗಳನ್ನು ತಮಗೆ ಅನುಕೂಲಕರವಾದ ಸ್ಥಳಗಳಲ್ಲಿ ಇಟ್ಟುಕೊಂಡು ದಪ್ಪ ದಪ್ಪ ದಿಮ್ಮಿಗಳನ್ನು ಕೆಳಗೆ ಜೋಡಿಸಿಡುವಷ್ಟರಲ್ಲಿ ಪುರೋಹಿತರು ತಮ್ಮ ಕಾರ್ಯಗಳನ್ನೆಲ್ಲಾ ಮುಗಿಸಿ ಬಂದವರೆಲ್ಲರ ಕೈಗಳಲ್ಲಿ ಅಂತಿಮವಾಗಿ ಅಕ್ಕಿ ಕಾಳನ್ನು ಹಾಕಿಸಿ ಶವವನ್ನು ಚಿತೆಯ ಮೇಲೆ ಇಟ್ಟು ಮತ್ತೆ ಸೌದೆಗಳನ್ನು ಜೋಡಿಸಿ ಮತ್ತೆ ಕೆಲವು ಶಾಸ್ತ್ರಮುಗಿಸಿ ನನ್ನ ಸ್ನೇಹಿತನ ಕೈಯಲ್ಲಿ ಅಗ್ನಿ ಸ್ಪರ್ಶ ಮಾಡಿಸುತ್ತಿದ್ದಂತೆಯೇ, ಬಂದವರೆಲ್ಲರೂ ಭಾರವಾದ ಹೃದಯದಿಂದ ಹಿಂದಿರುಗುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ನನ್ನ ಸ್ನೇಹಿತನ ದೊಡ್ಡಪ್ಪನ ಮಗ ಅಯ್ಯೋ ನನ್ನ ಮೊಬೈಲು, ಅಯ್ಯೋ ನನ್ನ ಮೊಬೈಲು ಎಂದು ಬೊಬ್ಬಿಡತೊಡಗಿದ. ಮಹೇಶ, ಮೊಬೈಲ್ ತಂದಿದ್ದಿಯೇನೋ ಎಂದರೆ ಊಂ ತಂದಿದ್ದೆ. ಇಲ್ಲಿಗೆ ಬಂದ ಮೇಲೂ ನನ್ನ ಹೆಂಡತಿ ಜೊತೆ ಮಾತಾನಾಡಿದ್ದೆ. ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಕರೆ ಮಾಡಿ ತಿಳಿಸಿ. ನಾವು ಇಲ್ಲಿ ದೀಪ ಬೆಳಗಿಸಿ ಇಡುತ್ತೇವೆ ಎಂದಿದ್ದಳು ಅದಕ್ಕೇ ಕರೆ ಮಾಡಲು ಹೋದರೆ ನನ್ನ ಮೊಬೈಲ್ ಸಿಗುತ್ತಿಲ್ಲ ಎಂದ. ಸರಿ ನಿನ್ನ ಮೊಬೈಲ್ ನಂಬರ್ ಹೇಳು ಒಂದು ಮಿಸ್ ಕಾಲ್ ಕೊಡ್ತೀನಿ ಆಗ ಶಬ್ಧ ಬಂದಾಗ ಸಿಗುತ್ತದೆ ಎಂದೆ. ಅಯ್ಯೋ ಅದು ಹೊಸಾ ಮೊಬೈಲ್ ಮತ್ತು ಹೊಸಾ ಸಿಮ್ ನನಗೆ ಅದರೆ ನಂಬರ್ ಗೊತ್ತಿಲ್ಲ ಎಂದ. ಸರಿ ಹೋಗಲಿ ನಿನ್ನ ಹೆಂಡತಿಯ ನಂಬರ್ ಹೇಳು ಅವರಿಗೆ ಕರೆ ಮಾಡಿ ನಂಬರ್ ತೆಗೆದುಕೊಳ್ಳೋಣ ಎಂದೆ. ಅಯ್ಯೋ ಅವಳ ನಂಬರ್ ಕೂಡಾ ನೆನಪಿಲ್ಲ ಎಂದ. ಸರಿ ಎಲ್ಲರೂ ಅಲ್ಲೇ ಎಲ್ಲಾ ಕಡೇ ಸಿಕ್ಕ ಸಿಕ್ಕ ಜಾಗಗಳಲ್ಲಿ ಹುಡುಕಾಡಿದರೂ ಮೊಬೈಲ್ ಪತ್ತೆ ಇಲ್ಲ. ಕಡೆಗೆ ಶಾಸ್ತ್ರಿಗಳೂ ತಮ್ಮ ಚೀಲವನ್ನೂ ಹುಡುಕಾಡಿ ಇಲ್ಲಪ್ಪಾ ನನ್ನ ಬಳಿಯೂ ಇಲ್ಲ ಎಂದರು. ಅಲ್ಲಿ ಹೆಣ ಸುಡುತ್ತಿದ್ದ ಚಾಂಡಾಲ ಸಾರ್, ನೀವೇನಾದರೂ ಸೌದೇ ಜೋಡಿಸುವಾಗ ಏನಾದರೂ ಸೌದೆ ಜೊತೆಯಲ್ಲಿ ಮೊಬೈಲ್ ಬಿಟ್ಟು ಬಿಟ್ರಾ? ಎಂಬ ಹುಳ ಬಿಟ್ಟ. ಒಂದು ಕ್ಷಣ ಎಲ್ಲರೂ ಹೌದು ಹೌದು ಹಾಗೇ ಆಗಿರಬೇಕು. ಎಕೆಂದರೆ ನಾವೆಲ್ಲರೂ ಕೆಳಗಿನಿಂದ ಸೌದೆಗಳನ್ನು ಕೊಡುತ್ತಿದ್ದರೆ, ಅವನು ಮತ್ತು ಹೆಣ ಸುಡುವವರು ಒಂದೊಂದೇ ಸೌದೆಯನ್ನು ಜೋಡಿಸಿ ಇಡುತ್ತಿದ್ದರು. ಬಹುಶಃ ಹಾಗೆ ಜೋಡಿಸುವಾಗಲೇ ಬಿದ್ದು ಹೋಗಿರಬಹುದು. ಹೋಗ್ಲಿ ಬಿಡು ನಿಮ್ಮ ಚಿಕ್ಕಮ್ಮನ ಜೊತೆ ಎನೋ ಋಣ ಇತ್ತೇನೋ? ಈ ರೀತಿಯಲ್ಲಿ ತೀರಿ ಹೋಗಿದೆ ಎಂದು ಹೇಳಿ ತಮ್ಮ ಬಾಯಿ ಚಪಲ ತೀರಿಸಿಕೊಂಡರು. ಅಯ್ಯೋ ಇನ್ನೂ ಒಂದು ವಾರ ಆಗಿಲ್ಲ ಹೊಸಾ ಮೋಬೈಲ್ ತೆಗೆದುಕೊಂಡು ಅದೂ Latest 48 Mega pixel camera costly mobile phone. ಒಂದೇ EMI ಕಟ್ಟಿದ್ದೆ, ಇನ್ನೂ ಐದು ಬಾಕಿಇತ್ತು EMI
ಕಟ್ಟೋ ಮೊದಲೇ ಮೊಬೈಲ್ ಕಳೆದು ಹೋಯ್ತಲ್ಲಾ ಎಂದು ಪೇಚಾಡ ತೊಡಗಿದ. ಚೆತೆಯ ಸುತ್ತಾ ಒಂದು ಸುತ್ತು ಹಾಕಿ ಎಲ್ಲಾದರೂ ಕಣ್ಣಿಗೆ ಕಾಣಿಸುತ್ತದೆಯೇ ಎಂದು ನೋಡಿದ. ಪಾರ್ಥೀವ ಶರೀರ ಚೆನ್ನಾಗಿ ಸುಡಲಿ ಎಂದು ಆತನೇ ಹಾಕಿದ್ದ ಕರ್ಪೂರ ಮತ್ತು ತುಪ್ಪದ ಪರಿಣಾಮವಾಗಿ ಚೆತೆ ಧಗಧಗನೆ ಉರಿಯುತ್ತಿತ್ತು. ಅದನ್ನು ನೋಡುತ್ತಿದ್ದ ಇವನ ಹೊಟ್ಟೆಯೂ ಧಗಧಗನೇ ಉರಿಯುತ್ತಿತ್ತು ಎಂದರೂ ತಪ್ಪಾಗಲಾರದು. ಸರಿ ಇಲ್ಲಿಗೆ ಬಂದವರೆಲ್ಲರೂ ಸ್ನಾನ ಮಾಡಿಯೇ ಹೋಗಬೇಕು. ಅಕಸ್ಮಾತ್ ಇಲ್ಲಿ ಸ್ನಾನ ಮಾಡಲು ಆಗದಿದ್ದರೂ ಕಡೇ ಪಕ್ಷ ಕೈಕಾಲು ತೊಳೆದು ಕೊಂಡು ಮನೆಗೆ ಹೋಗಿ ಸ್ನಾನ ಮಾಡಬೇಕು ಎಂದು ಪುರೋಹಿತರು ಹೇಳುತ್ತಿದ್ದರು. ಈ ವಿಷಯ ತಿಳಿದಿದ್ದ ಕೆಲವರು ಈಗಾಗಲೇ ನಲ್ಲಿಯ ಬಳಿ ಕೈಕಾಲು ತೊಳೆದು ಕೊಳ್ಳುತ್ತಿದ್ದರು. ಮಹೇಶ ಕೂಡಾ ನಮ್ಮ ಚಿಕ್ಕಮ್ಮನ ಜೊತೆ ನನ್ನ ಮೊಬೈಲ್ಲಿಗೂ ಎಳ್ಳು ನೀರು ಬಿಟ್ಟು ಋಣ ಕಳೆದು ಕೊಳ್ಳುವ ಹಾಗಾಯ್ತಲ್ಲಾ ಎಂದು ಒಲ್ಲದ ಮನಸ್ಸಿನಿಂದಲೇ ಕೈ ಕಾಲು ತೊಳೆದು ಕೊಳ್ಳಲು ಹೋದಾಗ, ಅವರ ಅತ್ತೆಯ ಮಗ, ಏ ನೋಡೋ ಮಹೇಶ ಯಾರೋ ನಿನಗೆ ಅಷ್ಟೋಂದು ಸಲಾ ಕಾಲ್ ಮಾಡ್ತಾ ಇದ್ದಾರೆ ಸೈಲೆಂಟ್ ಮೋಡಿನಲ್ಲಿ ಇಟ್ಟಿದ್ದೆ ಶಭ್ದನೇ ಕೇಳಿಸ್ತಾ ಇರಲಿಲ್ಲ, ಎಂದು ತನ್ನ ಪ್ಯಾಂಟಿನ ಜೋಬಿನಿಂದ ಮೊಬೈಲ್ ತೆಗೆದು ಮಹೇಶನ ಕೈಗಿಟ್ಟ. ಚಿಕ್ಕಮ್ಮನ ಕಳೆದು ಕೊಂಡ ದುಃಖವಲ್ಲಾ ಒಂದು ಕ್ಸಣ ಮಾಯವಾಗಿ, ಕಳೆದು ಹೋಗಿದ್ದ ಮೊಬೈಲ್ ಸಿಕ್ಕಿದಾಗ ಅವನಿಗಾದ ಆನಂದ ಅವರ್ಣನೀಯ. ಕಣ್ಣು ಇಷ್ಟು ಅಗಲ ಬಿಟ್ಟುಕೊಂಡು ಮುಖವನ್ನು ಅರಳಿಸಿ ಕೊಂಡು, ನಿನ್ನ ಕೈಯಲ್ಲಿ ನನ್ನ ಮೊಬೈಲ್ ಹೇಗೆ ಬಂತೋ? ಎಂದು ಕೇಳಿದ ಕುಮಾರ, ಏ, ಸೌದೆ ಜೋಡಿಸುವಾಗ ಸೊಂಟಕ್ಕೆ ಸಿಕ್ಕಿಸಿಕೊಂಡ ಮೊಬೈಲ್ ಜಾರುತ್ತಿತ್ತು ಎಂದು ನೀನೇ ನನ್ನ ಪ್ತ್ಯಾಂಟಿನ ಜೋಬಿನಲ್ಲಿ ಇಟ್ಟೆಯಲ್ಲೋ ಅಷ್ಟು ಬೇಗ ಮರೆತು ಹೋಯ್ತಾ? ಹೌದು ಬಿಡು ಚಿಕ್ಕಮ್ಮನ್ನ ಕಳೆದು ಕೊಂಡ ದುಃಖದಲ್ಲಿ ಎಲ್ಲವನ್ನೂ ಮರೆತು ಬಿಟ್ಟಿದ್ದೀಯಾ ನಾವಾದರೂ ನೆನಪಿನಲ್ಲಿದ್ದೀವಾ ಎಂದಾಗ, ನೆರೆದಿದ್ದವರೆಲ್ಲರೂ ಗೊಳ್ ಎಂದು ನಕ್ಕಾಗ, ಮಹೇಶನ ಮುಖ ಮತ್ತೆ ಪಿಚ್ಚೆನಿಸಿತು.

ಹೀಗೆ ಹೇಳ್ತಾನೇ ಹೋದ್ರೆ ಇಂತಹ ನೂರಾರು ಪ್ರಸಂಗಗಳು ನಮ್ಮೆಲ್ಲರ ಜೀವನದಲ್ಲಿ ಆಗಿಹೋಗಿರುತ್ತದೆ. ಮೊಬೈಲ್ ನಮ್ಮ ನಮ್ಮ ದೇಶಕ್ಕೆ ಬಂದು ಸುಮಾರು ಇಪ್ಪತ್ತೈದು ವರ್ಷಗಳಾಗಿರಬಹುದು. ಕಳೆದ ಐದು ಹತ್ತು ವರ್ಷಗಳಲ್ಲಿ ನನ್ನನ್ನೂ ಒಳಗೊಂಡಂತೆ ನಾವೆಲ್ಲರೂ ಅನಾವಶ್ಯಕವಾಗಿ ಅದಕ್ಕೆ ವಿಪರೀತವಾಗಿ ವ್ಯಸನಿಗಳಾಗಿದ್ದೇವೆ. ಬೆಳಿಗ್ಗೆ ಎದ್ದಾಗಲಿಂದಲೂ, ರಾತ್ರಿ ಮಲಗುವವರೆಗೂ, ಮಲಗುವಾಗಲೂ ಜೀವನ ಸಂಗಾತಿಯಂತೆ ತಲೆ ದಿಂಬಿನ ಅಡಿಯಲ್ಲೋ ಇಲ್ಲವೇ ಅದರ ಪಕ್ಕದಲ್ಲಿಯೇ ಇಟ್ಟು ಕೊಳ್ಳುವಷ್ಟರ ಮಟ್ಟಿಗೆ ಅದಕ್ಕೆ ದಾಸರಾಗಿದ್ದೇವೆ. ಜನರ ನಡುವಿನ ಅಂತರವನ್ನು ಕಡಿಮೆ ಮಾಡಲು ಫೋನ್ಗಳನ್ನು ಆವಿಷ್ಕರಿಸಲಾಯಿತು. ನಂತರ ಜನರನ್ನು ಎಲ್ಲೆಂದರಲ್ಲಿ, ಯಾವಗ ಬೇಕಾದರೂ, ಎಷ್ಟು ಹೊತ್ತಿಗಾದರೂ ಸಂಪರ್ಕಿಸಲು ಮೊಬೈಲ್ ಕಂಡು ಹಿಡಿಯಲಾಯಿತು. ಆದರೆ ಇಂದು ಅದರ ಮೂಲ ಉದ್ದೇಶವೇ ಮರೆತು ಹೋಗಿ ಜನರ ನಡುವಿನ ಅಂತರ ಕಡಿಮೆ ಮಾಡುವುದಕ್ಕಿಂತಲೂ ಜನರ ನಡುವಿನ ಅಂತರವನ್ನು ಹೆಚ್ಚು ಮಾಡುತ್ತಿರುವುದು ದೌರ್ಭಾಗ್ಯವೇ ಸರಿ. ಪುಸ್ತಕಗಳು ನೀನು ನನ್ನನ್ನು ತಲೆ ತಗ್ಗಿಸಿ ನೋಡು, ಮುಂದೆ ನೀನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ ಎಂದು ಹೇಳಿದರೆ, ನೀನು ನನ್ನನ್ನು ತಲೆ ತಗ್ಗಿಸಿ ನನ್ನ ನೋಡು, ನೀನು ಮುಂದೆಂದೂ ತಲೆ ಎತ್ತದಂತೆ ಮಾಡುತ್ತೇನೆ ಎನ್ನುತ್ತದಂತೆ ಮೊಬೈಲ್ಗಳು. ಈ ಮಾತು ಉತ್ಪ್ರೇಕ್ಷೇ ಎನಿಸಿದರೂ ಇದುವೇ ನಿಜವಾದ ವಾಸ್ತವ ಸತ್ಯ ಎನ್ನುವುದು ಒಪ್ಪಬೇಕಾದ ವಿಷಯ. ಅಗತ್ಯವಿದ್ದಾಗ ಮಾತ್ರವೇ ಮೊಬೈಲ್ ಬಳೆಸೋಣ. ಮೊಬೈಲ್ ಹೊರತಾಗಿಯೂ ಇರುವ ಸುಂದರ ಬದುಕನ್ನು ಸವಿಯೋಣ.

ಏನಂತೀರೀ?

3 thoughts on “ಮೊಬೈಲ್ ಮರೆತು ಹೋದಾಗಿನ ಕಳವಳ ಮತ್ತು ತಳಮಳ

Leave a comment