ಎಲ್ಲರೂ ಮಾಡುವುದು ಹೊಟ್ಟೆಗಾಗಿ

ಜೀವ ಇರುವ ಪ್ರತೀ ವ್ಯಕ್ತಿಗೂ ಆಹಾರ ಅತ್ಯಾವಶ್ಯಕ. ಹಾಗಾಗಿ ಅವನ ಪ್ರತಿಯೊಂದು ಕಾರ್ಯಗಳೂ ತನ್ನ ಎರಡು ಹೊತ್ತಿನ ಆಹಾರವನ್ನು ಗಳಿಸುವ ನಿಟ್ಟಿನಲ್ಲಿಯೇ ಇರುತ್ತದೆ. ಅದನ್ನೇ ಪುರಂದರ ದಾಸರು ಅತ್ಯಂತ ಸರಳವಾಗಿ ಎಲ್ಲರೂ ಮಾಡುವುದು ಹೊಟ್ಟೆಗಾಗಿ. ಗೇಣು ಬಟ್ಟೆಗಾಗಿ ಎಂದು ತಿಳಿಸಿದ್ದಾರೆ.

ಹಿಂದೆಲ್ಲಾ  ಮಳೆ ಬೆಳೆ ಇಂದಿಗಿಂತಲೂ ಚೆನ್ನಾಗಿ ಆಗುತ್ತಿದ್ದರೂ ಅದೇಕೋ  ಹೊತ್ತು ಹೊತ್ತಿನ ಊಟಕ್ಕೆ ಬರವೇ. ಈಗಿನಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ.  ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಹೊತ್ಟಿಗೆ ಹೊಟ್ಟೆ ತುಂಬುವ ಊಟ  ಸಿಕ್ಕರೇ ಅದುವೇ ಅವರಿಗೆ ಮಹದಾನಂದ. ಕೆಲವೊಮ್ಮೆ ಅದೂ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲಾ ಎನ್ನುವ ಪರಿಸ್ಥಿತಿ. ಮನೆಗಳಲ್ಲಿ ಅನ್ನಪೂರ್ಣೆಯರು ಇದ್ದರೂ ಅನ್ನಕ್ಕೇಕೋ ಬರ.  ಹೀಗೆ ಬಹುತೇಕರ ಮನೆಗಳಲ್ಲಿ ಮಕ್ಕಳಿಗೆ ಪೌಷ್ಥಿಕ ಆಹಾರವೂ ಸಿಗದೇ ಸೂಕ್ತ ಶಿಕ್ಷಣವೂ ಸಿಗದೇ ಇದ್ದದ್ದನ್ನು ಮನಗಂಡ ನಮ್ಮ ಫೂರ್ವಜರು ಮಂದಿರ ಮತ್ತು ಮಠಗಳಲ್ಲಿ ನಡೆಸುತ್ತಿದ್ದ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹವನ್ನೂ ಆರಂಭಿಸಿ, ಹಸಿದವರಿಗೆ ಉಚಿತವಾಗಿ ಆಹಾರವನ್ನು ಬಡಿಸುವ ಪವಿತ್ರ ವ್ಯವಸ್ಥೆಯನ್ನು ಸೇವೆಯ ರೂಪದಲ್ಲಿ ಜಾರಿಗೆ ತಂದರು. ಊರಿನ ಪ್ರತಿಯೊಬ್ಬರೂ ತಾವು ಬೆಳೆದ ಬೆಳೆಗಳಲ್ಲಿ ಇಂತಿಷ್ಟು ಪಾಲು ಬೆಳೆಯನ್ನು ದೇವರಿಗೆ ಅರ್ಪಣೆ ಮಾಡಬೇಕೆಂಬ ಪದ್ದತಿಯನ್ನು ಅಲಿಖಿತ ರೂಪದಲ್ಲಿ ಜಾರಿಗೆ ತಂದು ಭಕ್ತಾದಿಗಳು ಕೊಡುವ ಧನ ಧಾನ್ಯಗಳನ್ನು ಮತ್ತೆ ಭಕ್ತರಿಗೇ ಪ್ರಸಾದದ ರೂಪದಲ್ಲಿ ಹಂಚುವ ಸುಂದರವಾದ ಸಂಸ್ಜೃತಿಯು ನಮ್ಮ ಕರ್ನಾಟಕದ ಬಹುಭಾಗಗಳು ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಬಹುತೇಕ ಎಲ್ಲಾ ದೇವಾಲಯಗಳಲ್ಲಿ ಮತ್ತು ಉತ್ತರ ಕರ್ನಾಟಕದ ಮತ್ತು ಹಳೇ ಮೈಸೂರು ಪ್ರಾಂತ್ಯದ ವೀರಶೈವ ಮಠಗಳಲ್ಲಿ ಈ ಪರಂಪರೆ ಇಂದಿಗೂ ಅವ್ಯಾವಹತವಾಗಿ ನಡೆಯುತ್ತಿದ್ದು, ಕೋಟ್ಯಾಂತರ ಭಕ್ತರ ಹಸಿವನ್ನು ನೀವಾರಿಸುತ್ತಿದೆ.

ಹೀಗೆ ಮಂದಿರಗಳಲ್ಲಿ ಉಚಿತವಾಗಿ ಊಟೋಪಚಾರಗಳು ನಡೆಯುತ್ತದೆ ಎಂದು ಎಲ್ಲರೂ ಪ್ರತೀ ದಿನವೂ ಅಲ್ಲಿಗೆ ಹೋಗಿ ಉಚಿತವಾಗಿ ಊಟ ಮಾಡುತ್ತಿರಲಿಲ್ಲ. ಹಬ್ಬ ಹರಿದಿನಗಳು, ಯಜ್ಞ ಯಾಗಾದಿಗಳಂತಹ ವಿಶೇಷ ದಿನಗಳಲ್ಲಿ ಊರಿನವರೆಲ್ಲರೂ ಸೇರಿ ಆ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ತಮ್ಮ ತಮ್ಮ ಕೈಯ್ಯಲ್ಲಿ ಆದ ಸೇವೆಯನ್ನು ಸಲ್ಲಿಸಿ, ಪ್ರಸಾದ ರೂಪದಲ್ಲಿ ಊಟವನ್ನು ಮಾಡುತ್ತಿದ್ದು ಉಳಿದಂತೆ, ಯಾರಿಗೆ ಅವಶ್ಯಕವಿದೆಯೋ ಅಥವಾ ಹೊರ ಊರಿನಿಂದ ಬಂದ ಭಕ್ತಾದಿಗಳಿಗೆ ಅಥವಾ ಯಾತ್ರಾತ್ರಿಗಳು ಮಾತ್ರವೇ ಈ ಸೌಲಭ್ಯವನ್ನು ಮೀಸಲಾಗಿಸಿದ್ದಾರೆ. ಅಕಸ್ಮಾತ್ ಯಾರಾದರೂ ಪ್ರತಿ ದಿನವೂ ಮಂದಿರ ಮಠಗಳಲ್ಲಿ ಊಟಕ್ಕೆ ಬಂದರೆ ಥೂ! ಊಟಕ್ಕೆ ಗತಿಯಿಲ್ಲದೇ ದರಿದ್ರವೇ? ಎಂದು ಹಂಗಿಸುವುದೂ ರೂಢಿಯಲ್ಲಿದೆ.

ದಾಸೋಹ ಮೂಲಕ ತತ್ವವೇ ಬಸವಣ್ಣನವರು ಹೇಳಿರುವ ಕಾಯಕವೇ ಕೈಲಾಸ ಎನ್ನುವುದಾಗಿದ್ದು, ಈಗಾಗಲೇ ತಿಳಿಸಿರುವಂತೆ ಪ್ರತಿಯೊಬ್ಬ ನಾಗರೀಕರೂ, ತಾವು ಗಳಿಸಿದುದರಲ್ಲಿ ಒಂದು ಪಾಲನ್ನು ಸಮಾಜದ ಹಸಿದವರಿಗೆ ನೀಡುವುದೇ ದಾಸೋಹ. ಇದನ್ನು ಶರಣ ಸಾಹಿತ್ಯದಲ್ಲಿ ಬಹಳವಾಗಿ ಪ್ರೋತ್ಸಾಹಿಸಲಾಗಿದೆ. ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ತ್ರಿವಿಧ ದಾಸೋಹಿ ಪದ್ದತಿ ಅರ್ಥಾತ್ ಅನ್ನ, ಜ್ಞಾನ, ಅಕ್ಷರಗಳನ್ನು ಯಾವುದೇ ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವ ಮೂಲಕ ಸಮಾನತೆಯನ್ನು ತಂದಿದ್ದಕ್ಕಾಗಿ ತ್ರಿವಿಧ ದಾಸೋಹಿ ಎಂದೇ ಅವರನ್ನು ಕರೆಯಲಾಗುತ್ತಿತ್ತು.

ನಗರ ಪ್ರದೇಶಗಳಲ್ಲಿ ಇಂತಹ ಮಠ ಮಂದಿರಗಳು ಇಲ್ಲದ ಕಡೆ ಹಣವನ್ನು ನೀಡಿದಲ್ಲಿ ಜನರ ಹಸಿವನ್ನು ನೀವಾರಿಸುವ ಸಲುವಾಗಿ ಹುಟ್ಟಿಕೊಂಡದ್ದೇ ಖಾನಾವಳಿಗಳು ಇಲ್ಲವೇ ಊಟದ ಮನೆಗಳು.

khanavali2khanavali

ಖಾನಾವಳಿಗಳು ಮತ್ತು ಊಟದ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ರುಚಿರುಚಿಯಾದ ತಿಂಡಿ ಪದಾರ್ಥಗಳು, ಮಧ್ಯಾಹ್ನ ಮತ್ತು ರಾತ್ರಿ ಊಟಗಳು ಕೈಗೆಟುಕುವ ಬೆಲೆಯಲ್ಲಿ ಸಿಗತೊಡಗಿದವು. ಆರಂಭದಲ್ಲಿ  ಅವರು ಯಾರೂ ಲಾಭ ನಷ್ಟದ ಬಗ್ಗೆ ಚಿಂತಿಸದೆ, ನಾಲ್ಕು ಜನಗಿರ ಹಸಿವನ್ನು ನೀಗಿಸುವುದೇ ಒಂದು ಕಾಯಕ ಎಂದು ತಿಳಿದವರಾಗಿದ್ದರು. ಊಟ ಮಾಡಿ ಸಂತೃಪ್ತಗೊಂಡ ನಂತರ ಇಷ್ಟೇ ಕೊಡಬೇಕು ಮತ್ತು ಅಷ್ಟೇ ಕೊಡಬೇಕು ಎಂದು ಒತ್ತಾಯಿಸದೇ ಅವರು ಕೊಟ್ಟಷ್ಟನ್ನೇ ತೆಗೆದುಕೊಳ್ಳುತ್ತಿದ್ದರು.  ಅವರು ಕೇಳುವುದಿಲ್ಲ  ಎಂದು ನಮ್ಮ ಜನರೂ  ಸುಮ್ಮನೆ ಪುಗಸಟ್ಟೆ ತಿನ್ನುತ್ತಿರಲಿಲ್ಲ. ಅವರ ಹಂಗೇಕೆ ಎಂದು ಯಥಾ ಶಕ್ತಿ ದಾರಾಳಿಗಳಾಗಿಯೇ ದುಡ್ಡು ಕೊಡುತ್ತಿದ್ದರು. ಒಟ್ಟಿನಲ್ಲಿ ಎಲ್ಲವೂ ನಂಬಿಕೆ ಮತ್ತು ಸಮನ್ವಯ ರೀತಿಯಲ್ಲಿ ನೆಡೆದುಕೊಂಡು ಹೋಗುತ್ತಿತ್ತೇ ಹೊರತು ಅದೊಂದು  ವ್ಯಾಪಾರವಾಗಿರಲಿಲ್ಲ. ಎಷ್ಟೋ ಸಲಾ  ಹಸಿದು ಬಂದವರಿಗೆ ಉಚಿತವಾಗಿಯೇ  ಮೃಷ್ಟಾನ್ನ  ಭೋಜನ ಬಡಿಸಿ ಕಳುಹಿಸಿದ ಉದಾಹರಣೆಗಳು ಸಾಕಷ್ಟಿದ್ದವು.

ಇದೇ ಪರಿಕಲ್ಪನೆಯಲ್ಲೇ ದೂರದ ಸಿಂಗಾಪೂರದಲ್ಲಿ 1985 ರಲ್ಲಿ ಸ್ವಾಮಿ ಶಾಂತಾನಂದ ಸರಸ್ವತಿ ಅವರಿಂದ ಟೆಂಪಲ್ ಆಫ್ ಫೈನ್ ಆರ್ಟ್ಸ್ (TFA) ಆಶ್ರಯದಲ್ಲಿ ಅನ್ನಲಕ್ಷ್ಮೀ ಎಂಬ ಭಾರತೀಯ ಆಹಾರ ಪದ್ದತಿಯ ರೆಸ್ಟೋರೆಂಟ್ ಆರಂಭವಾಯಿತು, ಈ ಹೋಟಿಲ್ಲಿಗೆ ಯಾರೂ ಮಾಲಿಕರಿಲ್ಲ. ಇಲ್ಲಿ ಯಾವುದೇ ಊಟ ತಿಂಡಿಗೆ ಇಂತಿಷ್ಟು ಬೆಲೆ ಎಂದು ಬೆಲೆ ಕಟ್ಟುವುದಿಲ್ಲ ಬದಲಾಗಿ  ಜನರು ತಮಗೆ ಏನು ಬೇಕೋ? ಎಷ್ಟು ಬೇಕೋ ಅಷ್ಟು ತಿಂದ ನಂತರ ಅವರ ಮನಸ್ಸಿಗೆ ಇಷ್ಟವಾದಷ್ಟು ಅರ್ಥಾತ್ ಅವರು ತಿಂದ ಊಟಕ್ಕೆ ನ್ಯಾಯಯುತ ಎಂದು ಭಾವಿಸಿದ ಹಣವನ್ನು ಅಲ್ಲಿರುವ ಹುಂಡಿಯಲ್ಲಿ ಹಾಗಿದರೆ ಸಾಕು. ಎಂಬ ತತ್ವಶಾಸ್ತ್ರದ ಮೇಲೆ ಕಾರ್ಯನಿರ್ವಹಿಸುತ್ತದೆ. ತಾವು ಮಾಡಿದ ಊಟ ಚೆನ್ನಾಗಿರಲಿಲ್ಲಾ. ಅದಕ್ಕೆ ದುಡ್ಡು ನೀಡಲು ಮನಸ್ಸು ಬರಲಿಲ್ಲಾ ಎಂದು ಹಣ ಕೊಡದೆ ಸುಮ್ಮನೇ ಹೋದರೂ ಯಾರೂ ಸಹಾ ಊಟ ಮಾಡಿದ್ದಕ್ಕೆ ಹಣವನ್ನು ಏಕೆ ನೀಡಲಿಲ್ಲಾ ಎಂದು ಯಾರೂ ಸಹಾ ಅಲ್ಲಿ ಕೇಳುವುದಿಲ್ಲವಾದರೂ, ಇನ್ನೂ ಪ್ರೀತಿ ವಿಶ್ವಾಸ ನಂಬಿಕೆಗಳಿಗೆ ಈ ಸಮಾಜದಲ್ಲಿ ಬೆಲೆ ಇರುವ ಕಾರಣ, ಆ ರೆಸ್ಟೋರೆಂಟ್ ನಲ್ಲಿ ಊಟ ಮಾಡಿ ಹಣ ಕೊಡದೇ ಹೋಗುವವರು ವಿರಳ ಅಥವಾ ಇಲ್ಲವೇ ಇಲ್ಲ ಎಂದರೂ ತಪ್ಪಾಗದು. ಸ್ವಾಮಿ ಶಾಂತಾನಂದ ಸರಸ್ವತಿಯಿಂದ ಸ್ಫೂರ್ತಿ ಪಡೆದ ನೂರಾರು ಸ್ವಯಂಸೇವಕ ಸಿಬ್ಬಂದಿಯೊಂದಿಗೆ ಸಿಂಗಾಪುರದಲ್ಲಿ ಆರಂಭವಾಗಿ, ಆಸ್ಟ್ರೇಲಿಯಾ, ಮಲೇಷ್ಯಾ, ಮತ್ತು ಭಾರತದ (ಚೆನ್ನೈ) ನಲ್ಲಿ ಶಾಖೆಗಳನ್ನು ಹೊಂದಿದ್ದು, ಇಂದಿಗೂ ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದೆ.

annapoorna_singapore

ಈ ರೀತಿಯಾದ ಊಟದ ವ್ಯವಸ್ಥೆ ಇದೆ ಎಂದು ಜನರೂ ಸಹಾ ಹುಚ್ಚಾಪಟ್ಟೆ ಅಲ್ಲಿಗೆ ಹೋಗದೇ,  ಯಾರ ಮನೆಗಳಲ್ಲಿ ಆಹಾರವನ್ನು ತಯಾರಿಸಲು ಅನಾನುಕೂಲವೋ, ಇಲ್ಲವೇ  ಯಾರಿಗೆ ಪ್ರತಿನಿತ್ಯ ಮನೆಯೂಟ ತಿಂದು ಬೇಜಾರಾಗಿ ನಾಲಿಗೆ ಬೇರೆ ರುಚಿಯನ್ನು ಬಯಸುತ್ತದೆಯೋ ಅಂತಹವರು, ಇಲ್ಲವೇ ಪರ ಊರಿನಿಂದ ಉಪಾಧ್ಯಾಯರಾಗಿಯೋ ಇಲ್ಲವೇ ಇತರೇ ಸರ್ಕಾರಿ  ಕೆಲಸದ ನಿಮಿತ್ತವಾಗಿ ಬಂದವರು ಈ ರೀತಿಯ ಊಟದ ಮನೆ ಮತ್ತು ಖಾನಾವಳಿಗಳಲ್ಲಿ ತಮ್ಮ ನಾಲಿಗೆ ಬರವನ್ನು ಹೊಟ್ಟೆಯ ಹಸಿವನ್ನು ನಿವಾರಿಸಿ ಕೊಳ್ಳುತ್ತಿದ್ದರು. ಕ್ರಮೇಣ  ಈ ರೀತಿಯ ಪದ್ದತಿ ಎಲ್ಲೆಡೆಯಲ್ಲಿಯೂ ಪ್ರಖ್ಯಾತವಾಗುತ್ತಾ ಹೋಗುತ್ತಾ ಹೋಟೆಲ್ಎಂಬುದು ಒಂದು ದೊಡ್ದ  ಉದ್ಯಮವೇ ಆಗಿ ಸಾವಿರಾರು ಜನರಿಗೆ ಉದ್ಯೋಗವಕಾಶವನ್ನು ದೊರಕಿಸಿಕೊಟ್ಟಿತಲ್ಲದೆ ಲಕ್ಷಾಂತರ ಜನರ ಹಸಿವನ್ನು ನೀಗಿಸತೊಡಗಿದವು.

ಮನೆಗಳಲ್ಲಿ ನೆಲದ ಮೇಲೆ ಕುಳಿತು ಊಟಮಾಡುತ್ತಿದ್ದವರು ಕ್ರಮೇಣ ನೆಲದಿಂದ ಟೇಬಲ್ ಮತ್ತು ಖುರ್ಚಿಗಳಿಗೆ ಭಢ್ತಿ ಹೊಂದಿದರು. ಅಲ್ಲಿ ಮಾಡಿಟ್ಟಿದ್ದನ್ನು ತಿಂದು ಹೋಗುತ್ತಿದ್ದವರು, ಈಗ ತಮಗೆ ಏನು ಬೇಕೋ ಅದನ್ನು  ಕೇಳಿ ಮಾಡಿಸಿಕೊಂಡು ತಿನ್ನುವಷ್ಟರ ಮಟ್ಟಿಗೆ ಬೆಳೆದು ಬಂದಿದ್ದರು. ಹೊಟೇಲ್ಗಳು ಐಶಾರಾಮ್ಯವಾಗ ತೊಡಗಿದವು. ಪಂಚತಾರ ಹೋಟೆಲ್ಗಳಾಗಿ ಪರಿವರ್ತಿತವಾಗಿ ಊಟಕ್ಕಿಂತ ನೋಟಕ್ಕೇ ಪ್ರಧಾನ್ಯತೆ ಹೊಂದ ತೊಡಗಿದಾಗಿ ಮೂಲ ಉದ್ದೇಶವೇ ಬದಲಾಗಿ ದುಬಾರಿಯಾಗ ತೊಡಗಿದಾಗ ಜನರು ಈ ಹೋಟೆಲ್ಗಳಿಂದ ವಿಮುಖರಾಗ ತೊಡಗಿದಾಗಲೇ  ಹುಟ್ಟಿಕೊಂಡಿದ್ದೇ ದರ್ಶಿನಿ ಹೋಟೆಲ್ಗಳು.

upahara

ಬಸವನ ಗುಡಿಯಲ್ಲಿ ಉಪಹಾರ ದರ್ಶಿನಿ ಎಂಬ ಹೆಸರಿನಲ್ಲಿ ಶುಚಿ ರುಚಿಯಾದ ಊಟಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯಂತ ತ್ವರಿತವಾಗಿ ಎಲ್ಲರಿಗೂ ಸಿಗುವಂತೆ ಲಭ್ಯವಾಯಿತೂ ಅಲ್ಲಿಂದ ಈ ರೀತಿಯ ದರ್ಶಿನಿಗಳು ಗಲ್ಲಿ ಗಲ್ಲಿಗೊಂದಂತೆ ನಾಯಿಕೊಡೆಗಳಂತೆ ಹುಟ್ತುಕೊಂಡವು.  ಜನಾ ಇಲ್ಲಿ ಆರಾಮವಾಗಿ ಬಂದು ಕುಳಿತುಕೊಂಡು ನಿಧಾನವಾಗಿ ತಮಗೆ ಏನು ಬೇಕೋ ಅದನ್ನು  ಆರ್ಡರ್ ಮಾಡಿ ಊಟ ತಿಂಡಿ ಮಾಡಲು ಸಾಧ್ಯವಿರಲಿಲ್ಲ. ಇಲ್ಲಿ  ಬಂದವರೆಲ್ಲರೂ ಸ್ವಸಹಾಯ ಪದ್ದತಿಯಲ್ಲಿ  ಅಲ್ಲಿ ಏನು ಲಭ್ಯವಿರುತ್ತದೆಯೋ ಅದನ್ನು ಮುಂಗಡವಾಗಿ ಟೋಕನ್ ಪಡೆದು,  ನಿಂತು ಕೊಂಡೇ ಗಬಗಬನೆ ತಿಂದು,  ಸೊರ ಸೊರನೇ ಕಾಫೀ/ಟೀ ಹೀರಿ ಲಗುಬಗನೇ ಓಡತೊಡಗಿದರು.

ಕ್ರಮೇಣ ಈ ದರ್ಶಿನಿ ಹೋಟೆಲ್ಗಳು ಫಾಸ್ಟ್ ಫುಡ್ ಗಳಾಗಿ ಮಾರ್ಪಾಟಗತೊಡಗಿದವು.  ಬೆಳಗಿನ ಹೊತ್ತು ನಮ್ಮ ಸಂಪ್ರದಾಯಿಕ ತಿಂಡಿಗಳಾದ  ಉಪ್ಪಿಟ್ಟು, ದೋಸೆ, ಇಡ್ಲಿ, ಪೂರಿಗಳಾದರೆ ಸಂಜೆ ಹೊತ್ತು, ಪಾನಿಪೂರಿ, ಮಸಾಲೆ ಪೂರಿ, ಬೇಲ್ ಪೂರಿ, ನೂಡಲ್ಸ್, ಫ್ರೈಡ್ ರೈಸ್ ಮತ್ತು  ತರತರಹದ ಮಂಚೂರಿಯನ್ಗಳು  ಒಂದೆಡೆಯಾದರೇ ಪಿಡ್ಜಾ, ಬರ್ಗರ್ ಅವರ ಹಾವಳಿ ಮತ್ತೊಂದು, ಈ ದಿಢೀರ್ ಆಹಾರಗಳು  ಜನರ ನಾಲಿಗೆಯ ರುಚಿಯನ್ನು ತಣಿಸುತ್ತಿತ್ತಾದರೂ, ಆಹಾರ  ಸಂಪೂರ್ಣವಾಗಿ ಬೆಂದಿರದ ಕಾರಣ, ಮತ್ತು ಇಲ್ಲಿಯ ಪರಿಸರಕ್ಕೆ ಸರಿಯಾಗಿ ಹೊಂದದಿರುವ ಕಾರಣ  ಜೀರ್ಣವಾಗದೆ  ಆರೋಗ್ಯಕ್ಕೆ ಮಾರಕವಾಗುತ್ತಾ ,  ಜನಾ ನಿಧಾನವಾಗಿ  ಸ್ಥೂಲಕಾಯರಾಗ ತೊಡಗಿದರು.

ಯಾವಾಗ ಜನಾ ಮನೆಯಿಂದ ಹೊರಗೆ ನಡೆಯಲು ಸಾಧ್ಯವಾಗಲಿಲ್ಲವೋ, ಆಗ ಮನೆಗೇ ಆಹಾರವನ್ನು ಯಾರಾದರೂ ತಲುಪಿಸಿದರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿರುವಾಗಲೇ ಹುಟ್ಟುಕೊಂಡಿದ್ದೇ  ಈ Swiggy & Zomato ಮುಂತಾದ ಕಂಪನಿಗಳು. ಒಂದಷ್ಟು ಬುದ್ಧಿವಂತ ಜನಾ ಆಧುನಿಕ ತಂತ್ರಜ್ಞಾನವನ್ನು ಬಳೆಸಿಕೊಂಡು ಸಾಫ್ಟ್ವೇರ್ ಸಿದ್ಧ ಪಡಿಸಿ ಸುತ್ತಮುತ್ತಲಿನ ಹೋಟೆಲ್ಗಳನ್ನು ಅವರ ಜಾಲದಲ್ಲಿ ಅಳವಡಿಸಿಕೊಂಡು ಜನರು ತಮ್ಮ   ಮೊಬೈಲ್  ಆಪ್ಗಳ  ಮೂಲಕ ತಮಗೆ ಏನು ಬೇಕೋ  ಅದನ್ನು ತಮ್ಮ ಮೊಬೈಲ್ಗಳ ಮೂಲಕವೇ  ಅರ್ಡರ್ ಮಾಡಿದಲ್ಲಿ ,  ನಿಗಧಿತ ಸಮಯದಲ್ಲಿ ನಿಗಧಿತ ಸ್ಥಳಕ್ಕೆ ಬಂದು ತಲುಪತೊಡಗಿದವು. ಈ ರೀತಿಯ ವ್ಯವಸ್ಥೆ  ಹೋಟೆಲ್ ಉದ್ಯಮಿಗಳಿಗೆ ಒಂದು ರೀತಿಯ ವರದಾನವೇ ಆಯಿತು. ತಮ್ಮ ಆಹಾರಗಳು ಬಹುಜನರಿಗೆ ಸುಲಭವಾಗಿ ಯಾವುದೇ ಹೆಚ್ಚಿನ ಖರ್ಚಿಲ್ಲದೇ ತಲುಪತೊಡಗಿದವ. ಹೋಟೆಲ್ಗಳಿಂದ ಆಹಾರವನ್ನು ಪಡೆದುಕೊಂಡು ಎಲ್ಲರ ಮನೆಗಳಿಗೂ ತಲುಪಿಸುವ ವ್ಯವಸ್ಥೆಯಿಂದಾಗಿ ಸಾವಿರಾರು ಯುವಕರಿಗೆ ಕೆಲಸ ಸಿಕ್ಕಿತು.  ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ರೀತಿಯ ಪಾರ್ಟ್ ಟೈಮ್ ಕೆಲಸಗಳಿಂದ ಕೈತುಂಬಾ ಸಂಪಾದನೆ ಮಾಡುತ್ತಾ , ಕೆಲವೇ ಕೆಲವು ವಿದ್ಯಾಸಕ್ತ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ಉದ್ದಾರವಾದರೆ, ಬಹುತೇಕ ಯುವಕರು ಸುಲಭವಾಗಿ ಸಿಕ್ಕುವ  ಹಣದಿಂದ  ಹಾದಿ ತಪ್ಪಿದ್ದೇ ಅಧಿಕ.

swiggyzomato

ಆಹಾರ ಉದ್ಯಮದಲ್ಲಿ  ಈ ರೀತಿಯಾಗಿ ಕ್ರಾಂತಿಕಾರಿ ಬದಲಾವಣೆಯಾಗ ತೊಡಗಿದರೆ ಮನೆಗಳಲ್ಲಿಯೂ ಇದರ ಪರಿಣಾಮ ವ್ಯತಿರಿಕ್ತವಾಗತೊಡಗಿತು ಮನೆಗಳಲ್ಲಿ  ಕುಟ್ಟುವುದು, ರುಬ್ಬುವುದು, ಒಗ್ಗರಣೆ ಹಾಕುವುದು ಕ್ರಮೇಣ ಮಾಯವಾಗ ತೊಡಗಿತು.  ಒಂದು ಕಾಲದಲ್ಲಿ ಮನೆಯ ಹೆಂಗಳೆಯರು ಹುಳಿ ಪುಡಿ, ಸಾರಿನ ಪುಡಿ, ಚಟ್ನೀಪುಡಿ, ಮೆಂತ್ಯದ ಹಿಟ್ಟು, ಉಪ್ಪಿನಕಾಯಿ,  ಹಪ್ಪಳ, ಸಂಡಿಗೆ, ಬಾಳಕ,  ಪುಳಿಯೋಗರೆ ಗೊಜ್ಜನ್ನು ಮನೆಗಳಲ್ಲಿಯೇ  ಬಿಡುವಿನ ಸಮಯದಲ್ಲಿ ತಯಾರಿಸುತ್ತಿದ್ದವರು ನೋಡ ನೋಡುತ್ತಿದ್ದಂತೆಯೇ, MTR ಪುಳಿಯೋಗರೆ ತರಿಸಲು ಶುರುಮಾಡಿಬಿಟ್ಟರು. ಇನ್ನು ಒತ್ತು ಶ್ಯಾವಿಗೆ ಮಾಡುವುದನ್ನೇ ಮರೆತು ಎಲ್ಲರೂ Instant Noodles ಮೋರೆ ಹೋಗಿಬಿಟ್ತಿದ್ದು ನಿಜಕ್ಕೂ ದುಃಖಕರವೇ ಸರಿ.

Mtr

ಇನ್ನು ಹಬ್ಬಹರಿದಿನಗಳು ಬಂದರೆ ಶ್ರದ್ಧಾ ಭಕ್ರಿಯಿಂದ ಮಡಿಯಿಂದ ನಾನಾ ರೀತಿಯ ಭಕ್ಷ ಭೋಜನಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡುವುದು ನಮ್ಮ ಸಂಪ್ರದಾಯ. ಆದರೆ ಈಗ  ಬಹುತೇಕರ ಮನೆಗಳಲ್ಲಿ  ಆ  ರೀತಿಯ ಎಲ್ಲಾ ಸಂಪ್ರದಾಯಗಳಿಗೂ ತಿಲಾಂಜಲಿ ಕೊಟ್ಟು ಬಹುತೇಕ ಸಮಯಗಳಾಗಿಬಿಟ್ಟಿದೆ.  ದೇವರ ನೈವೇದ್ಯಕ್ಕೆ ಸಂಕ್ರಾಂತಿಗೆ ಎಳ್ಳು ಬೆಲ್ಲಾ, ಯುಗಾದಿಗೆ ಒಬ್ಬಟ್ಟು/ಹೋಳಿಗೆ, ಗಣೇಶನ ಹಬ್ಬಕ್ಕೆ ಮೋದಕ/ಕಡುಬು, ದೀಪಾವಳಿಗೆ ಕಜ್ಜಾಯ, ಒಬ್ಬಟ್ಟು ಎಲ್ಲವೂ ಸಿದ್ಧವಾಗಿಯೇ ಸಿಗುತ್ತದೆ.  ಆಯಾಯಾ ಹಬ್ಬಗಳ ಅನುಗುಣವಾಗಿ  ಹಬ್ಬದ ಅಡುಗೆಗಳನ್ನೇ ಮಾಡಿಕೊಡಲು ನೂರಾರು ಜನರು ಸಿದ್ಧರಿರುವಾಗ ಬಹುತೇಕ ಮನೆಗಳಲ್ಲಿ ಹಬ್ಬದ ದಿನ ಹಚ್ಚದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹಬ್ಬದ ದಿನವೂ ಒಲೆಯನ್ನೇ ಹಚ್ಚದೇ ಇರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಇನ್ನು ಹೋಟೆಲ್ಲುಗಳಲ್ಲಿಯೂ ಹಬ್ಬದ ವಿಶೇಷ ಎಂದು ಹತ್ತಾರು ಬಗೆಯ ಹಬ್ಬದ ಭಕ್ಷ ಭೋಜನಗಳ ಆಡುಗೆಗಳನ್ನು ಉಣಬಡಿಸುವುದನ್ನು ರೂಢಿ ಮಾಡಿಕೊಂಡ ನಂತರವಂತೂ ಅನೇಕರ ಮನೆಗಳಲ್ಲಿ ಹಬ್ಬ ಹರಿದಿನಗಳಲ್ಲಿ ಅಡುಗೆ ಮನೆ ಸಂಪೂರ್ಣ ಬಂದ್ ಆಗುತ್ತಿರುವುದೂ ಸಹಾ ಆಘಾತಕಾರಿ ವಿಷಯವಾಗಿದೆ.

ಈ ಹಿಂದೆ  ಮದುವೆಗೆ ಮುನ್ನ ಹೆಣ್ಣು  ನೋಡಲು ಬಂದಾಗ, ಹುಡುಗೀಗೆ ಅಡುಗೆ ಬರುತ್ತದೆಯೇ? ಎಂಬ ಪ್ರಶ್ನೆ ಸಹಜವಾಗುತ್ತಿತ್ತು.  ಓ ನಮ್ಮ ಹುಡುಗಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಾಳೆ. ನೀವೀಗ ತಿಂದ ಉಪ್ಪಿಟ್ಟು (ಆಕೆ ಮಾಡದಿದ್ದರೂ ಸಹಾ) ಕೇಸರಿ ಬಾತ್ ಆಕೆಯೇ ಮಾಡಿದ್ದು. ನಮ್ಮ ಹುಡುಗೀಗೆ  ಆಡುಗೆ, ಹಾಡು ಹಸೆ ಎಲ್ಲವನ್ನೂ ಕಲಿಸಿದ್ದೇವೆ ಎಂದು ಹೆಮ್ಮೆಯಿಂದ ಕನ್ಯಾಪಿತೃಗಳು ಹೇಳುತ್ತಿದ್ದರು. ಈಗ ಅ ರೀತಿಯ ಹೆಣ್ಣು ಗಂಡು ನೋಡುವ ಸಂಪ್ರದಾಯವೂ ಯಾವುದೋ ಒಂದು ಹೋಟಲಿನ್ನಲ್ಲಿಯೋ ಇಲ್ಲವೇ ಕಾಫೀ ಬಾರ್ ಗಳಲ್ಲಿ ಆಗುತ್ತಿರುವ ಕಾರಣ ಮತ್ತು ಬಹುತೇಕ ಹೆಣ್ಣು ಮಕ್ಕಳಿಗೆ ಅಡುಗೆ ಬಾರದಿರುವ ಕಾರಣ ಆ ರೀತಿಯ ಸಂಪ್ರದಾಯ ಮತ್ತು ಆ ಪ್ರಶ್ನೆಗಳು ಮಾಯವಾಗಿಯೇ ಹೋಗಿದೆ.

ತಮಿಳುನಾಡಿನಲ್ಲಿ ಜಯಲಲಿತಾ ಆಡಳಿತದಲ್ಲಿ ಜನಸಾಮಾನ್ಯರಿಗೂ ಸುಲಭ ದರದಲ್ಲಿ ಊಟ ತಿಂಡಿಗಳು ಲಭ್ಯವಾಗುವಂತೆ ಆರಂಭಿಸಿದ ಅಮ್ಮಾ ಕ್ಯಾಂಟೀನ್‌ಗಳು ಭರ್ಜರಿಯಾಗಿ ಯಶಸ್ವಿಯಾಗಿದ್ದನ್ನು ಕಂಡು ಅದರಿಂದ ಪ್ರೇರಿತವಾಗಿ, ಜನಸಾಮಾನ್ಯರ ಹಸಿವನ್ನು ನೀಗಿಸಲು, ನಗರ ಪ್ರದೇಶದ ಬಡವರು, ದಿನಗೂಲಿ ನೌಕರರು ಮತ್ತು ವಿದ್ಯಾರ್ಥಿಗಳಿಗೆ ಕನಿಷ್ಠ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಅಗ್ಗದ, ಆರೋಗ್ಯಕರ ಮತ್ತು ಪೌಷ್ಟಿಕ ಊಟವನ್ನು ಕೇವಲ ₹5ಕ್ಕೆ ಉಪಾಹಾರ ಮತ್ತು ₹10ಕ್ಕೆ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಒದಗಿಸುವ ಸಲುವಾಗಿ 2017 ರಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನಾದ್ಯಂತ ಸುಮಾರು 140-160 ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿ ನಗರದಲ್ಲಿರುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸಬ್ಸಿಡಿ ದರದಲ್ಲಿ ಇಂದಿರಾ ಕ್ಯಾಂಟೀನ್ ಗೆ ಬಂದು ಆಹಾರವನ್ನು ತಿನ್ನುವ ಆದರೆ ಮನೆಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿ ಹಸಿವು ಮುಕ್ತ ನಗರವನ್ನಾಗಿ ಮಾಡಲು ಪ್ರಯತ್ನಿಸಿತಾದರೂ, ನಂತರದ ದಿನಗಳಲ್ಲಿ ಆ ಯೋಜನೆ ಜನರಿಗೆ ಅನುಕೂಲ ಮಾಡುವುದಕ್ಕಿಂತಲೂ ಆಡಳಿತ ಪಕ್ಷದ ಹಿಂಬಾಲಕರಿಗೆ ಆಮದನಿಯನ್ನು ಒದಗಿಸುವ ಯೋಜನೆ ಎಂದು ಕಂಡ ಬಂದ ನಂತರ ಬಹಳಷ್ಟು ಇಂದಿರಾ ಕ್ಯಾಂಟೀನ್ ಗಳು ಮುಚ್ಚಿ ಹೋಗಿದ್ದು, ಇನ್ನೂ ಅಲ್ಲಿ ಇಲ್ಲಿ ತೋರ್ಪಡಿಕೆಗಾಗಿ ಇರುವುದನ್ನು ಕಾಣಬಹುದಾಗಿದೆ.

ಇನ್ನೂ ಈ ರೀತಿಯ ಅಮ್ಮಾ ಕ್ಯಾಂಟೀನ್, ಅಪ್ಪಾ ಕ್ಯಾಂಟೀನ್, ಇಂದಿರಾ ಕ್ಯಾಂಟಿನ್, ಬಗೆ ಬಗೆಯ ದರ್ಶಿನಿ ಗಳ ಹಾವಳಿಯಿಂದಾಗಿ ಅಮ್ಮಾ ಕವಳ ಇದ್ರೇ ಕೊಡ್ರಮ್ಮಾ ಎಂದು ರಾತ್ರಿಯ ತಂಗಳನ್ನು ಮಾರನೆಯ ದಿನ ಕೇಳಿಕೊಂಡು ಬರುತ್ತಿದ್ದ ಭಿಕ್ಷಕರು ಇಲ್ಲವೇ ಇಲ್ಲವಾಗಿದ್ದು. ಎಲ್ಲರೂ 10,20,50,100ರೂ ಕೊಡಿ ಬಿಸಿ ಬಿಸಿಯಾಗಿ ಬಿರ್ಯಾನಿ ತಿನ್ನುತ್ತೇವೆ ಎಂದು ಹೇಳುವ ಮಟ್ಟಿಗೆ ಬಂದಿದೆ. ಅದೇ ರೀತಿ ಬೆಳಿಗ್ಗೆ ಉದ್ದಿನಬೇಳೆ, ಅಕ್ಕಿ, ಮೆಂತ್ಯಗಳನ್ನು ನೆನಸಿ, ರಾತ್ರಿಯೇ ಒರಳುಕಲ್ಲಿನಲ್ಲಿ ರುಬ್ಬಿ, ಮಾರನೆಯ ದಿನ ಬಿಸಿ ಬಿಸಿಯಾಗಿ ಇಡ್ಲಿ, ದೋಸೆ,ವಡೆ, ಪಡ್ಡುಗಳನ್ನು ಮಾಡಿ ತಿನ್ನುತ್ತಿದ್ದವರಿಗೆ ಈ ಕಲಿಯುಗದಲ್ಲಿ ಇಡ್ಲಿ/ದೋಸೆ ಹಿಟ್ಟೂ ಸಹಾ ಸಿದ್ಧವಾಗಿ ಸಿಗುತ್ತಿದ್ದು, ಕೇವಲ ಇಡ್ಲಿ ಕುಕ್ಕರಿನಲ್ಲಿ ಹಾಕಿವುದೋ ಇಲ್ಲವೇ ಕಾವಲಿಯ ಮೇಲೆ ದೋಸೆ ಹಿಟ್ಟು ಹರಡಿ ಬೇಯಿಸುವುದಕ್ಕೇ ಸೀಮಿತವಾಗಿದ್ದು ಮುಂದಿನ ದಿನಗಳಲ್ಲಿ ಇಡ್ಲಿ/ದೋಸೆ ಹಿಟ್ಟು ಹೇಗೆ ತಯಾರಿಸಲು ಎಷ್ಟು ಪ್ರಮಾಣದಲ್ಲಿ ಉದ್ದು ಅಕ್ಕಿ ಬಳಸ ಬೇಕು ಇಲ್ಲವೇ ಹುದುಗು ಹೇಗೆ ಬರುತ್ತದೆ ಎಂಬ ಕಲ್ಪನೆಯೇ ನಮ್ಮ ಹೆಣ್ಣು ಮಕ್ಕಳಿಗೆ ಇಲ್ಲದೇ ಹೋಗುವುದೆಂಬ ಆತಂಕವೂ ಕಾಡುತ್ತದೆ.

ಹೌದು ನಿಜ. ಅನ್ನಂ ಪರಬ್ರಹ್ಮ ಸ್ವರೂಪ ಅರ್ಥಾತ್ ಅನ್ನ/ಆಹಾರ ಎನ್ನುವುದು ಭಗವಂತನ ಸ್ವರೂಪ. ಹಾಗಾಗಿಯೇ  ಅಡುಗೆ  ಎನ್ನುವುದು ಸುಲಭದ ಕೆಲಸವಲ್ಲ. ಅದಕ್ಕೆ ತಾಳ್ಮೆ ಬೇಕು ಮತ್ತು ಸಮಯಪ್ರಜ್ಞೆ ಬೇಕು. ಯಾವ ಯಾವ ಪದಾರ್ಧಗಳನ್ನು ಎಷ್ಟೆಷ್ಟು ಮತ್ತು ಹೇಗೆ ಬೇಯಿಸಿದಲ್ಲಿ ರಸಗವಳ ಸಿದ್ದಪಡಿಸಬಹುದೆಂಬ ಕಲೆಯನ್ನು ಕೈವಶ ಮಾಡಿಕೊಳ್ಳಬೇಕು. ಆದರೆ ನಿಜ ಹೇಳುತ್ತೇನೆ. ಒಮ್ಮೆ ಮನಸ್ಸಿಟ್ಟು  ಅಡುಗೆ ಮಾಡಲು ಹೊರಟಲ್ಲಿ ಆ ಕಲೆ ತಾನಾಗಿಯೇ ಒಲಿದುಬಿಡುತ್ತದೆ.   ಮನೆಯವರೆಲ್ಲರ ಮನಗಳನ್ನು ಗೆಲ್ಲಬಹುದಾದ ಏಕೈಕ ಅಸ್ತ್ರವೇ ತಿಂಡಿ ಮತ್ತು ಅಡುಗೆ. ಅಮ್ಮನ ಕೈ ರುಚಿಯ ಮುಂದೆ ಜಗತ್ತಿನ ಯಾವುದೇ ಅಡುಗೆಗಳನ್ನು ನೀವಾಳಿಸಿ ಹಾಕಬಹುದು.  ಕೇವಲ ಹಾಸ್ಟೆಲ್ಲಿನಲ್ಲಿ  ಓದುವ ಮಕ್ಕಳಿಗೆ ಮತ್ತು ಮನೆಯಿಂದ ದೂರವಿದ್ದು ಹೊರ ಊರಿನಲ್ಲಿ ಕೆಲಸಮಾಡುವವರಿಗೆ  ಮಾತ್ರವೇ  ಮನೆ ಊಟದ ಮಹತ್ವ ತಿಳಿದಿರುತ್ತದೆ, ಹಾಗಾಗಿ ಸಾಧ್ಯವಾದಷ್ಟು ಹೊರಗಿನ ಊಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಕೊಡದೆ, ಉಪ್ಪು ಗಂಜಿಯಾಗಲೀ, ಮೊಸರನ್ನವೇ ಆಗಲೀ ಮನೆಯಲ್ಲಿಯೇ ಮಾಡಿಕೊಂಡು ತಿನ್ನೋಣ. ಆರೋಗ್ಯವಾಗಿರೋಣ ಅಲ್ವೇ?.

ಏನಂತೀರೀ?
ನಿಮ್ಮವನೇ ಉಮಾಸುತ

4 thoughts on “ಎಲ್ಲರೂ ಮಾಡುವುದು ಹೊಟ್ಟೆಗಾಗಿ

Leave a reply to Siresh Cancel reply