ಶ್ರೀ ಗಳಗನಾಥರು

ಅದು ಹದಿನೆಂಟನೇಯ ಶತಮಾನದ ಅಂತ್ಯದ ಕಾಲ. ಎಲ್ಲೆಡೆಯಲ್ಲಿಯೂ ಸ್ವಾತಂತ್ರ್ಯೋತ್ಸವದ ಕಿಚ್ಚು ಹರಡಿತ್ತು. ಆಗ ಉತ್ತರ ಕರ್ನಾಟಕದಲ್ಲಿ ಲೋಕಮಾನ್ಯ ತಿಲಕರ ಕೇಸರಿ ಪತ್ರಿಕೆ ಮತ್ತು , ಮತ್ತು ಹರಿ ನಾರಾಯಣ ಆಪ್ಟೆಯವರ ಕರಮಣೂಕ ಪತ್ರಿಕೆಗಳದ್ದೇ ಭರಾಟೆ. ಕನ್ನಡಿಗರಿಗೆ ಕನ್ನಡ ಪತ್ರಿಕೆಗಳು ಸಿಗದ ಕಾರಣ ಕನ್ನಡಿಗರು ಸಹಾ ಮರಾಠಿ ಪತ್ರಿಕೆಗಳ ಮೂಲಕವೇ ಸುದ್ಧಿಗಳನ್ನು ತಿಳಿಯಬೇಕಾಗಿತ್ತು. ಆಗಷ್ಟೇ ಶಿಕ್ಷಕರ ತರಭೇತಿ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ತರುಣನಿಗೆ ಅರೇ ಈ ಎಲ್ಲಾ ಸಾಹಿತ್ಯಗಳೂ ಕನ್ನಡದಲ್ಲಿಯೇ ಓದುವಂತಿದ್ದರೆ ಎಷ್ಟು ಚೆನ್ನಾ ಎಂದು ಯೋಚಿಸಿ ಆ ಎಲ್ಲಾ ಸಾಹಿತ್ಯಗಳನ್ನೂ ಅನುವಾದ ಮಾಡಲು ಶುರು ಹಚ್ಚಿ, ಕನ್ನಡಿಗರಿಗೂ ಸ್ವಾಂತಂತ್ರ್ಯದ ಕಿಚ್ಚನ್ನು ಹತ್ತಿಸಿದ ತರುಣರೇ ಶ್ರೀ ಗಳಗನಾಥರು. ಕೇವಲ ಅನುವಾದಕ್ಕೆ ಮಾತ್ರವೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೇ ಅನೇಕ ಕೃತಿಗಳನ್ನು ಸ್ವತಃ ರಚಿಸಿ, ಕನ್ನಡ ಕಾದಂಬರಿಗಳ ಪಿತಾಮಹ ಎಂದೇ ಹೆಸರಾದವರು. ಕನ್ನಡದ ಹೊಸ ಹುಟ್ಟಿನ ಕಾಲದ ಆರಂಭದಲ್ಲಿ ತಮ್ಮ ಅನನ್ಯ ಮತ್ತು ಅನರ್ಘ್ಯ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ಎಂದರೆ ಅತಿಶಯೋಕ್ತಿಯೇನಲ್ಲ.

galaga3
ಗಳಗೇಶ್ವರ ದೇವಸ್ಥಾನ

ಗಳಗನಾಥ ಎಂಬ ಕಾವ್ಯನಾಮದ ಶ್ರೀ ವೆಂಕಟೇಶ ತಿರಕೊ ಕುಲಕರ್ಣಿಯವರು 1869ರ ಜನವರಿ 5ರಂದು ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿಯಲ್ಲಿ ಶ್ರೀಮತಿ ಏಣುಬಾಯಿ ಮತ್ತು ತ್ರಿವಿಕ್ರಮಭಟ್ಟ (ತಿರಕೋ) ಕುಲಕರ್ಣಿಯವರ ಹಿರಿಯ ಮಗನಾಗಿ ಜನಿಸಿದರು. ಮನೆಯಲ್ಲಿ ಎಲ್ಲರೂ ಅವರನ್ನು ಪ್ರೀತಿಯಿಂದ ವೆಂಕಣ್ಣಾ , ವೆಂಕಟೇಶಾ ಎಂದು ಕರೆಯುತ್ತಿದ್ದರು. ಕೇವಲ ತಮ್ಮ ಮನೆಗೆ ಮಾತ್ರವೇ ಮುದ್ದಿನ ಮಗನಾಗಿರದೇ ಇಡೀ ಊರಿನ ಮೆಚ್ಚಿನ ಮಗನಾಗಿದ್ದರೂ ಎಂದು ಹೇಳಿದರೂ ತಪ್ಪಾಗಲಾರದು. ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸ ತಮ್ಮ ಹುಟ್ಟೂರಾದ ವರದಾ ಮತ್ತು ತುಂಗಭದ್ರಾ ನದಿಗಳ ಸಂಗಮ ಸ್ಥಾನದ ಹತ್ತಿರ ರಮಣೀಯ ಸ್ಥಳದಲ್ಲಿರುವ ಗಳಗನಾಥದ ಗಳಗೇಶ್ವರ ದೇವಸ್ಥಾನವೇ ಅವರ ಪ್ರಥಮ ಪಾಠಶಾಲೆಯಾಯಿತು. ಅವರ ವಿದ್ಯಾಭ್ಯಾಸ, ಗುರುಕುಲ ಶಿಕ್ಷಣ ಪದ್ದತಿಯಲ್ಲಾದ ಕಾರಣ ಗಳಗನಾಥರಲ್ಲಿ ಸ್ವಾಭಿಮಾನ, ಸ್ವಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ವಿಶೇಷ ಪ್ರೇಮ ಬೆಳೆದವು. ನಂತರ ಮುಲ್ಕಿ ಪರೀಕ್ಷೆ ಹಾಗು ಶಿಕ್ಷಕರ ತರಭೇತಿಯನ್ನು ಮುಗಿಸಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಆವರು ಅಧ್ಯಾಪಕ ವೃತ್ತಿ ಮಾಡಿದ ಕಡೆಯಲ್ಲೆಲ್ಲಾ ಕೇವಲ ವಿದ್ಯಾರ್ಥಿಗಳ ಮೇಲೆ ಮಾತ್ರವೇ ಪ್ರಭಾವ ಬೀರದೇ ಆ ಗ್ರಾಮದ ಸುತ್ತಮುತ್ತಲಿನವರ ಎಲ್ಲರ ಮೇಲೂ ಕನ್ನಡದ ಛಾಪನ್ನು ಒತ್ತಿ ಬಿಡುತ್ತಿದ್ದರು.

ಶಿಕ್ಷಕರ ತರಭೇತಿ ಸಮಯದಲ್ಲೇ ರೂಢಿಸಿಕೊಂಡ ಬರವಣಿಗೆಯಿಂದಾಗಿ ಸುಮಾರು 1908ರ ಹೊತ್ತಿಗೆ ಸದ್ಬೋಧ ಚಂದ್ರಿಕೆ ಎನ್ನುವ ಮಾಸಪತ್ರಿಕೆಯನ್ನು ಆರಂಭಿಸಿ ಸ್ವತಃ ಅವರೇ ಲೇಖನ ಬರೆಯುತ್ತಿಲ್ಲದೇ ಇತರೇ ಉದಯೋನ್ಮುಖ ಲೇಖಕರಿಂದ ಲೇಖನಗಳನ್ನು ಬರೆಸಿ ಕನ್ನಡಿಗರಿಗೆ ಸಾಹಿತ್ಯದ ರಸದೌತಣವನ್ನು ಉಣಬಡಿಸ ತೊಡಗಿದರು. ಅಂದಿನ ಕಾಲದಲ್ಲಿಯೇ ಅವರ ಸದ್ಬೋಧ ಚಂದ್ರಿಕೆ ವಾರ ಪತ್ರಿಕೆಗೆ ಸುಮಾರು 7000 ಚಂದಾದಾರರು ಇದ್ದರೆಂದರೇ ಆ ಪತ್ರಿಕೆಯ ಹಿರಿಮೆಯನ್ನು ಎತ್ತಿ ತೋರಿಸುತ್ತದೆ ಮುಂದೆ 1919ರ ಹೊತ್ತಿಗೆ ಸದ್ಗುರು ಎಂಬ ಮತ್ತೊಂದು ಪತ್ರಿಕೆಯನ್ನು ಆರಂಭಿಸುವ ಮೂಲಕ ತಮ್ಮ ಬರೆವಣಿಗೆಯನ್ನು ಮುಂದುವರೆಸಿದರು. ಗಳಗನಾಥರು ತಮ್ಮ ಜೀವಿತಾವಧಿಯಲ್ಲಿ ತಮ್ಮ ಪತ್ರಿಕೆಯ ಬರವಣಿಗೆಯ ಹೊರತಾಗಿ ಸುಮಾರು 24 ಕಾದಂಬರಿಗಳು, 9 ಪೌರಾಣಿಕ ಕಥೆಗಳು, 3 ಸತ್ಪುರುಷರ ಚರಿತ್ರೆಗಳು ಮತ್ತು 8 ಪ್ರಬಂಧಗಳನ್ನು ಬರೆದಿದ್ದಾರೆ ಅವರ 24 ಕಾದಂಬರಿಗಳಲ್ಲಿ 18 ಕಾದಂಬರಿಗಳು ಅನುವಾದವಾದರೆ ಉಳಿದ 6 ಕಾದಂಬರಿಗಳು ಅವರ ಕಲ್ಪನೆಯ ಕೂಸಾಗಿದ್ದವು. ಅವರ ಅನುವಾದಿತ ಕೃತಿಗಳು ಮೂಲ ಕೃತಿಯ ಪದದಿಂದ ಪದದ ಅನುವಾದ ಮಾಡದೇ ಇಲ್ಲಿಯ ಸೊಗಡಿಗೆ ಒಪ್ಪುವಂತೆ ಅಗತ್ಯವಿದ್ದ ಕಡೆ ಸ್ಥಳೀಯ ಗಾದೇ ಮಾತುಗಳು ಸ್ಥಳೀಯ ವಿಚಾರಧಾರೆಗಳನ್ನು ಬಳೆಸಿಕೊಳ್ಳಿತ್ತಿದ್ದರಲ್ಲದೇ ಉತ್ತರ, ಮಧ್ಯ, ದಕ್ಷಿಣ ಕನ್ನಡಿಗರೆಲ್ಲರಿಗೂ ಅರ್ಥವಾಗಬಲ್ಲ ಕನ್ನಡ ಒಂದೇ ಎಂಬುದನ್ನೂ ತಮ್ಮ ಕೃತಿಗಳ ತೋರಿದ ಹೆಗ್ಗಳಿಗೆ ಅವರದ್ದು.

galaga2

ಸರ್ಕಾರಿ ಕೆಲಸದಲ್ಲಿ ಘರ್ಷಣೆ ಉಂಟಾಗಿ ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ತಮ್ಮ ಶಿಕ್ಷಕವೃತ್ತಿಯನ್ನು ಪೂರ್ಣಾವಧಿಯವರೆಗೂ ಕಾಯದೇ ಅವಧಿಗೆ ಮೊದಲೇ ಸ್ವಯಂ ನಿವೃತ್ತಿ ಪಡೆದು ಅಗಡಿಯ ಆನಂದವನದಲ್ಲಿ ತಮಗೆ ದೊರಕುತ್ತಿದ್ದ ಅಲ್ಪ ಪಿಂಚಣಿಯಲ್ಲಿಯೇ ತಮ್ಮ ಸಾಹಿತ್ಯ ಕೃಷಿಯನ್ನು ಜೀವಿತಾವಧಿಯವರೆಗೂ ಮುಂದುವರೆಸಿದರು. ಗಳಗನಾಥರ ಸಾಹಿತ್ಯ ಕೃಷಿಯ ಬಗ್ಗೆ ಬರೆಯುತ್ತ ಹೊರಟರೆ ಪುಟಗಳೇ ಸಾಲದಾದರೂ ಖ್ಯಾತ ಸಾಹಿತಿಗಳಾಗಿದ್ದ ಡಾ. ಹ ಮಾ ನಾಯಕರು ಹೇಳಿದಂತಹ ಪ್ರಸಂಗ ತಿಳಿಸದೇ ಹೋದಲ್ಲಿ ಮುಗಿಯುವುದೇ ಇಲ್ಲ.

ಎಲ್ಲರಿಗೂ ಗೊತ್ತಿರುವಂತೆ ನಮ್ಮ ಕನ್ನಡಿಗರಲ್ಲಿ ಸಾಹಿತ್ಯಾಸಕ್ತಿ ಸ್ವಲ್ಪ ಕಡಿಮೆಯೇ. ಅದರಲ್ಲೂ ಪತ್ರಿಕೆ ಮತ್ತು ಪುಸ್ತಕಗಳನ್ನು ಕೊಂಡು ಓದುವರ ಸಂಖ್ನೆ ಅಂದಿಗೂ ಇಂದಿಗೂ ಇನ್ನೂ ಕಡಿಮೆಯೇ. ಈ ಸಂಗತಿಯನ್ನು ಅಂದೇ ಅರಿತಿದ್ದ ಗಳಗನಾಥರು ತಮ್ಮ ಕೃತಿಗಳನ್ನು ತಮ್ಮ ತಲೆಯ ಮೇಲೆ ಹೊತ್ತೋ ಇಲ್ಲವೇ ಅವರ ಜೋಳಿಗೆಯಲ್ಲಿಟ್ಟು ಕೊಂಡು ಊರು ಊರುಗಳಿಗೆ ಸುತ್ತಿ ಪುಸ್ತಕ ವ್ಯಾಪಾರ ಮಾಡುತ್ತಿದ್ದರು. ಹ ಮಾ ನಾಯಕರೇ ಹೇಳಿದಂತೆ ಅವರು ಸಣ್ಣವರಿದ್ದಾಗ ಅದೊಂದು ದಿನ ಅವರ ಊರಿನ ಬಸ್ಸಿನಿಂದ ಅವರಿಚಿತ ವಯಸ್ಸಾದ ವ್ಯಕ್ತಿಗಳು ಇಳಿದು ತಮ್ಮ ತಲೆಯ ಮೇಲೆ ಮೂಟೆಯೊಂದನ್ನು ಹೊತ್ತಿಕೊಂಡು ಹ ಮಾ ನಾಯಕರ ಮನೆಯತ್ತ ಬಂದಾಗ, ಬಹಶಃ ಯಾರೋ ಸೀರೇ ವ್ಯಾಪಾರಿಗಳು ಬಂದರೇನೋ ಎಂದು ಭಾವಿಸಿ ಮನೆಯೊಳಗೆ ಓಡಿ ಹೋಗಿ ತಮ್ಮ ಮನೆಯ ಹೆಂಗಸರಿಗೆ ಯಾರೋ ಸೀರೇ ವ್ಯಾಪಾರಿಗಳು ಬಂದಿದ್ದಾರೆ ಎಂದು ತಿಳಿಸಿದರು. ಅವರು ಮನೆಗೆ ಬಂದು ತಮ್ಮ ಧೂಳಾದ ಹೊರೆಯನ್ನು ಇಳಿಸಿ ಗಂಟನ್ನು ಬಿಚ್ಚಿದಾಗ ಅದರಲ್ಲಿದ್ದ ಮಣ ಭಾರದ ಪುಸ್ತಕಗಳ ಭಂಡಾರವನ್ನು ನೋಡಿ ಎಲ್ಲರಿಗೂ ಆಶ್ವರ್ಯ. ಅದರಲ್ಲೂ ಆ ಎಲ್ಲಾ ಪುಸ್ತಕಗಳ ಲೇಖಕರೂ ಆ ವಯೋ ವೃಧ್ಧರೇ ಎಂದು ತಿಳಿದ ಮೇಲಂತೂ ಎಲ್ಲರಿಗೂ ಅವರ ಮೇಲೆ ಧನ್ಯತಾ ಭಾವ ಮೂಡಿದ್ದಂತೂ ಸುಳ್ಳಲ್ಲ. ಹೀಗೆ ತಮ್ಮ ತಲೆಯ ಮೇಲೆ ತಮ್ಮದೇ ಕೃತಿಗಳನ್ನು ಹೊತ್ತು ಎಲ್ಲರಿಗೂ ತಲುಪಿಸಬೇಕೆಂಬ ಅವರ ಉತ್ಕಟ ಬಯಕೆ ಮೆಚ್ಚುಗೆಯಾದರೂ ಒಬ್ಬ ಲೇಖಕನ ಬವಣೆಯನ್ನು ಎತ್ತಿ ತೋರಿದ್ದಂತೂ ಸುಳ್ಳಲ್ಲ.

ಆಷ್ಟೆಲ್ಲಾ ಕೃತಿಗಳನ್ನು ರಚಿಸಿ ಕನ್ನಡ ಕಾದಂಬರಿಗಳ ಪಿತಾಮಹ ಎಂದೇ ಹೆಸರಾದರೂ ಆರ್ಥಿಕವಾಗಿ ಅವರೆಂದೂ ಸಧೃಡರಾಗಲೇ ಇಲ್ಲ. 1942ರಲ್ಲಿ ಅನಾರೋಗ್ಯದ ನಿಮಿತ್ತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣ ಶ್ಯಯೆಯಲ್ಲಿದ್ದಾಗ ಅವರ ಅನಾರೋಗ್ಯದ ಬಗ್ಗೆ ಅವರ ಬಂಧು ಮಿತ್ರರು ಆತಂಕಕ್ಕೊಳಗಾಗಿದ್ದಾಗ, ಸ್ವಲ್ಪವೂ ವಿಚಲಿತರಾಗದ ಗಳಗನಾಧರು, ಎಲ್ಲಿಯ ವರೆಗೆ ನನ್ನ ಪುಸ್ತಕಗಳು ಇರುತ್ತವೆಯೋ ಅಲ್ಲಿಯವರೆಗೂ ನಾನು ಭೌತಿಕವಾಗಿ ಮರಣ ಹೊಂದಿದ್ದರೂ ಜನಮಾನಸದಲ್ಲಿ ಜೀವಂತವಾಗಿ ಇದ್ದೇ ಇರುತ್ತೇನೆ ಎಂದು ಹೇಳಿದ್ದು,ಅವರಿಗೆ ತಮ್ಮ ಕೃತಿಗಳ ಬಗ್ಗೆ ಇದ್ದ ಆತ್ಮ ವಿಶ್ವಾಸ ಎತ್ತಿ ತೋರುತ್ತಿತ್ತು . ಅವರ ಮರಣಾ ನಂತರ ಅವರ ಅಂತಿಮ ವಿಧಿವಿಧಾನಗಳ ಕಾರ್ಯಕ್ಕೆ ಆ ಹತ್ತು ದಿನಗಳಲ್ಲಿ ಅವರ ಪುಸ್ತಕಗಳ ಮಾರಾಟದಿಂದ ಸಂಗ್ರಹವಾದ ಹಣದಿಂದ ನಡೆಯಿತು ಎಂದರೆ, ಅಂತಹ ಮೇರು ಸಾಹಿತಿಗೆ ಈ ರೀತಿಯ ದುರ್ಗತಿ ಬಂದಿತಲ್ಲಾ ಎಂಬ ಕೊರಗು ಕಡೆಯ ವರೆಗೂ ನಮ್ಮನ್ನು ಕಾಡದೇ ಬಿಡದು.

ಈ ಲೇಖನ ಓದಿನ ನಂತರವಾದರೂ ನಮ್ಮ ಕನ್ನಡಿಗರಲ್ಲಿ ಕನ್ನಡ ಸಾಹಿತಿಗಳ ಬಗ್ಗೆ ಅಭಿಮಾನ ಮೂಡಿ ಕನ್ನಡ ಸಾಹಿತ್ಯವನ್ನು ಕೊಂಡು ಓದುವ ಪ್ರವೃತ್ತಿ ಬೆಳೆದಲ್ಲಿ ಅದು ಶ್ರೀ ಗಳಗನಾಥರಿಗೆ ಸಲ್ಲಿಸುವ ಅಂತಿಮ ನಮನಗಳು ಎಂದೆನಿಸುತ್ತದೆ.

ಏನಂತೀರೀ?

One thought on “ಶ್ರೀ ಗಳಗನಾಥರು

  1. ಇವತ್ತಿನ ದಿನದಲ್ಲಿ ಕನ್ನಡಾಭಿಮಾನವನ್ನು ಬೆಳೆಸುವ ದೃಷ್ಡಿಯಿಂದ ನವೆಂಬರ್ ಮಾಹೆಯ ಪ್ರತಿದಿನ ಕನ್ನಡ ಕವಿಗಳ ಲೇಖಕರ ಪರಿಚಯ ತಿಳಿಸಲು ಪ್ರಯತ್ನಿಸುತ್ತಿರುವ ತಮ್ಮ ಕಾರ್ಯ ಅಭಿನಂದನಾರ್ಹ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s