ಕನ್ನಡಾಭಿಮಾನಿ ಬಾಲಕೃಷ್ಣ

ಅಭಿನಯ ಎಲ್ಲರೂ ಮಾಡುವುದಕ್ಕಾಗುವುದಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಅಭಿನಯಿಸಬೇಕಾದರೆ, ಆ ನಟನಿಗೆ ಆ ಪಾತ್ರದ ಸಂಫೂರ್ಣ ಪರಿಚಯವಿರಬೇಕು. ಆತ ತನ್ನ ಸಹನಟನ ಸರಿ ಸಮಾನಾಗಿ ಸೇರಿಗೆ ಸವ್ವಾ ಸೇರು ಎನ್ನುವಂತೆ ಕೇವಲ ಸಂಭಾಷಣೆಯಲ್ಲದೇ ಆಂಗೀಕವಾಗಿಯೂ ಅಭಿನಯಿಸ ಬೇಕಾಗುತ್ತದೆ. ಹಾಗೆ ಆಭಿನಯಿಸಲು ಪಾತ್ರದಲ್ಲಿ ತನ್ಮಯತೆ ಮತ್ತು ನಿರ್ದೇಶಕರು ಹೇಳಿಕೊಟ್ಟದ್ದನ್ನು ಅರ್ಥೈಸಿಕೊಂಡು ಅವರು ಹೇಳಿದ ರೀತಿಯಲ್ಲಿಯೇ ನಟಿಸಿ ತೋರಿಸ ಬೇಕಾಗುತ್ತದೆ. ಈ ರೀತಿಯಾಗಿ ಮಾಡಲು ಕಣ್ಣು ಕಿವಿ ಮತ್ತು ನಾಲಿಗೆ ಚುರುಕಾಗಿರ ಬೇಕು. ಆದರೆ ಕನ್ನಡ ಚಲನ ಚಿತ್ರ ಕಂಡ ಒಬ್ಬ ಮಹಾನ್ ನಟ ಸರಿ ಸುಮಾರು 500ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದವರೊಬ್ಬರಿಗೆ ಹುಟ್ಟಿನಿಂದಲೂ ಕಿವಿ ಕೇಳಿಸುತ್ತಿರಲಿಲ್ಲ ಎಂದರೆ ಆಶ್ಚರ್ಯವಾಗಿರ ಬೇಕಲ್ಲವೇ? ಹೌದು. ನಾವಿಂದು ಹೇಳಹೊರಟಿರುವುದು ಕನ್ನಡ ಚಿತ್ರ ರಂಗ ಕಂಡ ಶ್ರೇಷ್ಠ ನಟ ಬಾಲಕೃಷ್ಣರ ಬಗ್ಗೆಯೇ.

balanna2

ಕನ್ನಡ ರಾಜ್ಯೋತ್ಸವದ ಸಂಭ್ರಮದ ತಿಂಗಳಿನಲ್ಲಿಯೇ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನವೆಂಬರ್ 2, 1911ರಂದು ಬಾಲಣ್ಣನವರ ಜನನವಾಗುತ್ತದೆ. ದುರಾದೃಷ್ಟವೆಂದರೆ ಬಹಳ ಚಿಕ್ಕವಯಸ್ಸಿನಲ್ಲಿಯೇ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥ ಮಗುವಾಗಿ ನೆಂಟರಿಷ್ಟರು ಮತ್ತು ಅಕ್ಕ ಪಕ್ಕದವರ ಮನೆಗಳಲ್ಲಿಯೇ ಬೆಳೆದು ದೊಡ್ದವರಾಗುತ್ತಾರೆ. ಇಡೀ ಊರಿನ ಮಗನಾಗಿ ಬೆಳೆದದ್ದರಿಂದ ಅವರಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಾಗಲಿಲ್ಲ. ಆದರೆ ತಮ್ಮ ಊರಿನಲ್ಲಿ ಬಂದ ನಾಟಕ ಕಂಪೆನಿ ಆಕರ್ಷಣೆಗೊಳಗಾಗಿ, ಆ ಕಂಪನಿಯಲ್ಲಿ ಗೇಟು ಕಾಯುವುದರ ಮೂಲಕ ನಾಟಕ ಲೋಕಕ್ಕೆ ಕಾಲಿಟ್ಟು,, ಬೋರ್ಡು ಬರೆಯುವುದು, ಪೋಸ್ಟರ್ ಅಂಟಿಸುವುದು, ರಂಗಸಜ್ಜಿಕೆ ಹೀಗೆ ಎಲ್ಲಾ ಕೆಲಸಗಳಲ್ಲಿ ತೊಡಗಿಸಿಕೊಂಡರು. ಅದೊಂದು ದಿನ ಕೃಷ್ಣಲೀಲಾ ನಾಟಕದಲ್ಲಿ ಆಭಿನಯಿಸಬೇಕಿದ್ದ ನಟ ಕಾರಣಾಂತರಗಳಿಂದ ಲಭ್ಯವಿಲ್ಲದಿದ್ದಾಗ, ನಾಟಕದ ತಾಲೀಮಿನ ಸಮಯದಲ್ಲಿಯೂ ಮತ್ತು ಪ್ರತೀ ದಿನ ರಂಗದ ಮೇಲೇ ಆ ಪಾತ್ರವನ್ನು ನೋಡಿದ್ದ ಅದರ ಪ್ರತಿಯೊಂದು ಸಂಭಾಷಣೆಯೂ ತಮಗರಿವಿಲ್ಲದೇ ಮಮನವಾಗಿದ್ದರಿಂದ ಬಾಲಣ್ಣನವರೇ ಬಣ್ಣ ಹಚ್ಚಲೇ ಬೇಕಾಯಿತು. ಹೀಗೆ ಅವರ ನಟನಾ ವೃತ್ತಿ ಜೀವನ ಆರಂಭವಾಗಿ ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅದು ಹಾಸ್ಯ ಪಾತ್ರವೇ ಇರಲಿ, ಪೋಷಕಪಾತ್ರವೇ ಇರಲಿ ಅಥವಾ ಖಳ ನಟನೆಯೇ ಇರಲಿ, ಕಿವಿ ಕೇಳಿಸಿದಿದ್ದರೂ ಸಹ ನಟರ ತುಟಿ ಚಲನೆ ಮತ್ತು ಆಂಗಿಕ ಅಭಿನಯವನ್ನೇ ಗಮನಿಸುತ್ತಾ ಅದಕ್ಕೆ ತಮ್ಮ ತಕ್ಕಂತೆ ತಮ್ಮದೇ ಮ್ಯಾನರಿಸಂ ನಲ್ಲಿ ತೇಲುವ ಧ್ವನಿಯಲ್ಲಿ ಸಂಭಾಷಣೆ ಹೇಳುತ್ತಾ ಆಭಿನಯಿಸುತ್ತಿದ್ದ ಬಾಲಣ್ಣನವರಿಗೆ ಬಾಲಣ್ಣನವರೇ ಸಾಟಿ.

balanna3

ಹಲವಾರು ನಾಟಕ ಕಂಪನಿಗಳಲ್ಲಿ ನಾನಾರೀತಿಯ ಕೆಲಸಗಳನ್ನು ಮಾಡಿ ವೃತ್ತಿ ರಂಗಭೂಮಿಯ ಕಾಶಿ ಎನಿಸಿಕೊಂಡಿದ್ದ ಗುಬ್ಬಿ ಕಂಪನಿಯಲ್ಲಿ ಅವರಿಗೆ ರಾಜ್ ಕುಮಾರ್, ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಅವರ ಪರಿಚಯವಾಗುವ ಮೂಲಕ ಬಾಲಣ್ಣನವರನ್ನು ಚಿತ್ರರಂಗಕ್ಕೂ ಪ್ರವೇಶ ಮಾಡಲು ಸಹಕಾರಿಯಾಯಿತು. 1943ರಲ್ಲಿ ರಾಧಾರಮಣ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಬಾಲಣ್ಣ, ಅಲ್ಲಿಂದ ಮುಂದೆ ಸುಮಾರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಸ್ಯ ನಟ, ಖಳ ನಟ, ಪೋಷಕ ನಟ ಹೀಗೆ ವಿವಿಧ ರೀತಿಯ ಪಾತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಬಹುತೇಕ ಕನ್ನಡ ನಟರಿಗೆ ಆಗಿನ ಕಾಲದಲ್ಲಿ ಅವಕಾಶಗಳು ಕಡಿಮೆಯಾದಾಗ ರಾಜ್ ಕುಮಾರ್, ಜಿ.ವಿ. ಅಯ್ಯರ್ ಮತ್ತು ನರಸಿಂಹರಾಜು ಅವರೊಂದಿಗೆ ಬಾಲಣ್ಣನವರೂ ಸೇರಿಕೊಂಡು ರಣಧೀರ ಕಂಠೀರವ ಚಿತ್ರವನ್ನು ನಿರ್ಮಿಸಿ, ನಿರ್ಮಾಪಕರೂ ಆಗಿದ್ದಲ್ಲದೇ ಅದರ ಮೂಲಕ ನೂರಾರು ಕಲಾವಿದರಿಗೆ ಅನ್ನದಾತರೂ ಆದರು ಎಂದರೆ ತಪ್ಪಾಗಲಾರದು.

ನಟನೆ ಮತ್ತು ನಿರ್ಮಾಣ ಇವೆರಡಕ್ಕಿಂತಲೂ ಮಿಗಿಲಾಗಿ ಅವರು ಮಾಡಿದ ಮತ್ತೊಂದು ಸಾಹಸ ಕಾರ್ಯವೆಂದರೆ ಆಭಿಮಾನ್ ಸ್ಟುಡಿಯೋ ನಿರ್ಮಾಣ ಮಾಡಿದ್ದು. ಅಂದೆಲ್ಲ ಬಹುತೇಕ ಚಿತ್ರಗಳು ಮದರಾಸಿನಲ್ಲಿಯೇ ನಿರ್ಮಾಣವಾಗುತ್ತಿದ್ದು ಅಲ್ಲಿ ತಮಿಳು ಮತ್ತು ತೆಲುಗು ಚಿತ್ರಗಳಿಗೇ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕು ಕನ್ನಡ ಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರನ್ನು ಎರಡನೇ ದರ್ಜೆಯವರಂತೆ ಕಾಣುತ್ತಿದ್ದರು. ಅದೂ ಅಲ್ಲದೇ ನಮ್ಮ ಕನ್ನಡ ನಟರು ಕರ್ನಾಟಕದಲ್ಲಿದ್ದ ತಮ್ಮ ಸಂಸಾರವನ್ನು ಮೆರೆತು ಹೆಚ್ಚಿನ ಕಾಲ ಪಾತ್ರಗಳ ಬರುವಿಕೆಗಾಗಿ ಮದರಾಸಿನಲ್ಲಿಯೇ ಇರಬೇಕಾಗಿದ್ದ ಪರಿಸ್ಥಿತಿಯನ್ನು ಗಮನಿಸಿದ ಚಿತ್ರರಂಗದ ಜನ ಅಂದಿನ ಕರ್ನಾಟಕ ಸರ್ಕಾರಕ್ಕೆ ಕರ್ನಾಟಕದಲ್ಲೇ ಸ್ಟುಡಿಯೋ ಒಂದನ್ನು ನಿರ್ಮಾಣ ಮಾಡಿಕೊಡಲು ಮನವಿ ಮಾಡಿಕೊಂಡರು. ಆಗ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರು ಸರ್ಕಾರ ಸ್ಟುಡಿಯೋ ನಿರ್ಮಾಣ ಮಾಡುವ ಬದಲು ಚಿತ್ರರಂಗದವರೇ ಸ್ಟುಡಿಯೋ ಮಾಡಿದರೆ, ಅದಕ್ಕೆ ಸರ್ಕಾರದ ಕಡೆಯಿಂದ ಎಲ್ಲಾ ರೀತಿಯ ಸಹಾಯ ಮಾಡುತ್ತೇವೆ ಎಂದಾಗ, ಎಷ್ಟೋ ಘಟಾನು ಘಟಿ ನಿರ್ಮಾಪಕರೇ ಮುಂದೆ ಬಾರದಿದ್ದಾಗ ನಮ್ಮ ಬಾಲಣ್ಣ ಧೈರ್ಯದಿಂದ ಸ್ಟುಡಿಯೋ ಮಾಡಲು ಮುಂದಾಗಿ ತಮ್ಮ ಬಳಿ ಇದ್ದ ಬದ್ದ ಹಣದ ಜೊತೆಗೆ ಸಾಲ ಸೋಲ ಮಾಡಿಯೂ ಮತ್ತು ವಿಶಾಲ ಹೃದಯವಂತರಾದ ಹಲವಾರು ಕನ್ನಡಿಗರಿಂದ ಅಷ್ಟೋ ಇಷ್ತು ಹಣ ಪಡೆದು ಉತ್ತರಹಳ್ಳಿಯ ಬಳಿ ಬಹಳ ಆಬಿಮಾನದಿಂದ ತಮ್ಮ ನೆಚ್ಚಿನ ಅಭಿಮಾನ್ ಸ್ಟುಡಿಯೋ ಪ್ರಾರಂಭಿಸಿಯೇ ಬಿಟ್ಟರು.

ತಾನೊಂದು ಬಗೆದರೆ ದೈವವೊಂದು ಬಗೆದೀತು ಎನ್ನುವಂತೆ ಅದೇಕೋ ಏನೋ ನಮ್ಮ ಕನ್ಣಡ ಚಿತ್ರದ ನಿರ್ಮಾಪಕರು ಬಾಲಣ್ಣನವರ ಕೈ ಹಿಡಿಯಲೇ ಇಲ್ಲ. ಬಹುಶಃ ನೇರ ನುಡಿಯ ಬಾಲಣ್ಣನವರಿಗೆ ನಿರ್ಮಾಪಕರನ್ನು ಓಲೈಸಿಕೊಳ್ಳುವ ವ್ಯವಹಾರದ ಚಾಕಚಕ್ಯತೆಯ ಕೊರತೆ ಇದ್ದ ಕಾರಣ ಅವರು ನಿರೀಕ್ಷಿಸಿದ್ದ ಆದಾಯ ಅವರ ಅಭಿಮಾನ್ ಸ್ಟುಡಿಯೋಸ್ ನಿಂದ ಬಾರದೇ ಅದೇ ದುಃಖದಲ್ಲಿಯೇ ತಮ್ಮ ಅಂತಿಮ ದಿನಗಳವರೆಗೂ ಕಣ್ಣೀರಿನ ಕೈ ತೊಳಿಯು ಬೇಕಾದದ್ದೂ ನಿಜಕ್ಕೂ ದೌರ್ಭ್ಯಾಗ್ಯವೇ ಸರಿ. ಬಾಲಕೃಷ್ಣರವರು ಜುಲೈ 19, 1995ರಂದು ನಿಧನರಾದಾಗ ಅದೇ ಅಭಿಮಾನ್ ಸ್ಟುಡಿಯೋ ದಲ್ಲೇ ಸಮಾಧಿ ಮಾಡಲಾಯಿತು.

ಬಾಲಣ್ಣನವರು ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಚಿತ್ರಗಳ ಮೂಲಕ ಮತ್ತು ಅವರ ಅಭಿಮಾನ್ ಸ್ಟುಡಿಯೋ ಮೂಲಕ ಇಡೀ ಕನ್ನಡಿಗರ ಹೃದಯಗಳಲ್ಲಿ ವಿರಾಜಮಾನರಾಗಿದ್ದಾರೆ. ಕನ್ನಡ ಚಿತ್ರರಂಗ ಮದರಾಸಿನಿಂದ ಕರ್ನಾಟಕದಲ್ಲಿಯೇ ಶಾಶ್ವತವಾಗಿ ನೆಲೆಸುವಂತೆ ಮಾಡಲು‌, ಆ ಮೂಲಕ ಸಾವಿರಾರು ಕನ್ನಡಿಗರಿಗೆ‌‌ ಇಲ್ಲಿಯೇ ಉದ್ಯೋಗ ದೊರೆಯುವಂತಾಗಲು ಸಹಕರಿಸಿದ‌ ಬಾಲಣ್ಣನವರು ನಿಜಕ್ಕೂ ಕನ್ನಡದ ಕಲಿಯೇ ಸರಿ.

ಏನಂತೀರೀ?

4 thoughts on “ಕನ್ನಡಾಭಿಮಾನಿ ಬಾಲಕೃಷ್ಣ

  1. ತಮ್ಮ ಲೇಖನವನ್ನು ಓದುವ ರಸಸ್ವಾಧನೆ ಮಾಡುವದನ್ನು ಬಿಟ್ಟರೆ ಬರೆಯುವ ಕೌಶಲ್ಯವನ್ನು ತಮಗೇ ಬಿಟ್ಟಿದ್ದೇನೆ ಆದರೂ ನಾನೊಬ್ಬ ಕನ್ನಡ ಪಾಠಮಾಡುವ ಶಿಕ್ಷಕ ಎಂಬುದನ್ನು ಮಾತ್ರ ಮರೆತಿಲ್ಲ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s