ಸ್ಪಿನ್ ಗಾರುಡಿಗ ಬಿ ಎಸ್ ಚಂದ್ರಶೇಖರ್

2001ರಲ್ಲಿ ಕ್ರಿಕೆಟ್ ಆಟವನ್ನೇ ಕೇಂದ್ರವಾಗಿಟ್ಟುಕೊಂಡು ಅಮೀರ್ ಖಾನ್ ನಾಯಕತ್ವದಲ್ಲಿ ತೆರೆಗೆ ಬಂದ ಲಗಾನ್ ಚಿತ್ರದಲ್ಲಿ ಆಂಗ್ಲರ ವಿರುದ್ಧ ತೆರಿಗೆ ಕಟ್ಟುವುದನ್ನು ತಪ್ಪಿಸಿಕೊಳ್ಳಲು ಕ್ರಿಕೆಟ್ ಪಂದ್ಯಾವಳಿಯನ್ನು ಆಡಲು ಒಪ್ಪಿ ದೇಸೀ ತಂಡವನ್ನು ಕಟ್ಟುತ್ತಿರುತ್ತಾರೆ. ಅದೊಂದು ದಿನ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಚೆಂಡು ದೂರ ಹೋಗಿ ಅಲ್ಲೇ ಕೆಲಸ ಮಾಡುತ್ತಿದ್ದ ಕಚ್ರಾ ಎಂಬವನ ಬಳಿ ಹೋಗುತ್ತದೆ. ಆಗ ನಾಯಕ ಭುವನ್ ಕಚ್ರಾಗೆ ಚೆಂಡನ್ನು ಎಸೆಯಲು ಹೇಳುತ್ತಾನೆ. ಪೋಲಿಯೋ ಪೀಡಿತ ಕಚ್ರಾ ಮೊದಲು ಚೆಂಡನ್ನು ಎಸೆಯಲು ಹಿಂಜರಿಯುತ್ತಾನಾದರೂ ನಂತರ ಅವನು ಎಸೆದ ಚೆಂಡು ಪುಟ ಬಿದ್ದ ನಂತರ ನೇರವಾಗಿ ಬಾರದೆ, ಪಕ್ಕಕ್ಕೆ ತಿರುಗುತ್ತದೆ. ಅದನ್ನು ಗಮನಿಸಿದ ನಾಯಕ ಆಶ್ವರ್ಯ ಚಕಿತನಾಗಿ ಮತ್ತೊಮ್ಮೆ ಚೆಂಡನ್ನು ಎಸೆಯಲು ತಿಳಿಸುತ್ತಾನೆ. ಕಚ್ರಾ ಪುನಃ ಎಸೆದ ಚೆಂಡು ಮತ್ತೆ ತಿರುಗಿದ್ದನ್ನು ಗಮನಿಸಿದ ಎಲಿಜಿಬತ್ ಅರೇ ಚೆಂಡು ಸ್ಪಿನ್ ಆಗುತ್ತಿದೆ ಎಂದು ಉದ್ಗರಿಸಿ ಆತನನ್ನು ತಮ್ಮ ತಂಡ ಪ್ರಮುಖ ಬೋಲರ್ ಆಗಿ ನೇಮಿಸಿಕೊಳ್ಳುತ್ತಾರೆ.

chandra4

ಬಹುಶಃ ಆ ಚಿತ್ರದ ನಿರ್ದೇಶಕ ಈ ಕಚ್ರಾ ಪಾತ್ರವನ್ನು ನಮ್ಮ ಭಗವತ್ ಸುಬ್ರಮಣ್ಯ ಚಂದ್ರಶೇಖರ್ ಅರ್ಥಾತ್ ಬಿ. ಎಸ್. ಚಂದ್ರಶೇಖರ್ ಜನರ ಪ್ರೀತಿಯ ಚಂದ್ರ ಅವರ ಜೀವನವನ್ನೇ ನೋಡಿ ಈ ಪಾತ್ರ ಸೃಷ್ಟಿಸಿದಂತಿದೆ. ಕೇವಲ ಭಾರತ ಏಕೆ? ಇಡೀ ಕ್ರಿಕೆಟ್ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಟ ಬಲಗೈ ಗೂಗ್ಲಿ ಬೋಲರ್ ನಮ್ಮ ಹೆಮ್ಮೆಯ ಕನ್ನಡಿಗ ಬಿ. ಎಸ್. ಚಂದ್ರಶೇಖರ್.

1945, ಮೇ 17 ರಂದು ಮೈಸೂರಿನಲ್ಲಿ ಜನಿಸಿದ ಚಂದ್ರಶೇಖರ್ ಅವರು ತಮ್ಮ , 7 ವಯಸ್ಸಿನಲ್ಲಿ ಪೋಲಿಯೋಗೆ ತುತ್ತಾಗಿ ತಮ್ಮ ಬಲಗೈ ಸ್ವಾದೀನ ಕಳೆದುಕೊಳ್ಳುತ್ತಾರೆ. ಆದರೆ ಕ್ರಿಕೆಟ್ ಆಟವನ್ನು ಬಹಳವಾಗಿ ಪ್ರೀತಿಸುತ್ತಿದ್ದ ಚಂದ್ರು, ನಂತರ ಎಡಗೈನಲ್ಲಿ ಚಂಡನ್ನು ಎಸೆಯಲು ಅಭ್ಯಾಸ ನಡೆಸುತ್ತಾರಾದರೂ. ಬಹಳ ಪ್ರಯತ್ನದ ನಂತರ ತಮ್ಮ ಹತ್ತನೇಯ ವಯಸ್ಸಿಷ್ಟರಲ್ಲಿ ಮತ್ತೆ ಬಲಗೈಗೆ ಶಕ್ತಿ ಪಡೆದು ಕೊಂಡು ವಿಕೆಟ್ ಕೀಪಿಂಗ್ ಮಾಡಲು ಆರಂಭಿಸುತ್ತಾರೆ. ಅದೊಂದು ದಿನ ಸುಮ್ಮನೆ ಬೋಲಿಂಗ್ ಮಾಡಲು ಪ್ರಯತ್ನಿಸಿದಾಗ ಸಿನಿಮಾದಲ್ಲಿ ಆದಂತೆಯೇ ಸ್ಪಿನ್ ಅಗಿ ಐದಕ್ಕೂ ಹೆಚ್ಚು ವಿಕೆಟ್ ಪಡೆದಾಗ ಶಾಶ್ವತವಾಗಿ ವಿಕೆಟ್ ಕೀಪಿಂಗ್ ಗೆ ತಿಲಾಂಜಲಿ ಕೊಟ್ಟು ಬೌಲಿಂಗ್ ಕಡೆ ಹೆಚ್ಚು ಗಮನ ಹರಿಸತೊಡಗುತ್ತಾರೆ

ಸಾಧಾರಣವಾಗಿ ಬಹುತೇಕ ಸ್ಪಿನ್ ಬೋಲರ್ಗಳು ನಿಧಾನ ಗತಿಯಲ್ಲಿ ಚೆಂಡನ್ನು ಎಸೆದರೆ, ಚಂದ್ರ ಅವರ ಬಾಲ್ ಯಾವುದೇ ವೇಗದ ಬೋಲರ್ಗಿಂತಲೂ ಕಡಿಮೆ ಇಲ್ಲದಷ್ಟು ವೇಗವಾಗಿರುತ್ತಿತ್ತು ಮತ್ತು ತಮ್ಮ ಪೋಲಿಯೋ ಕೈ ಮೂಲಕ ಎಸೆಯುತ್ತಿದ್ದ ಕಾರಣ ಅತ್ಯಂತ ತೀವ್ರವಾಗಿ ತಿರುಗುತ್ತಿತ್ತು. ಕ್ರಿಕೆಟ್ಟಿನಲ್ಲಿಯೇ ತಮ್ಮ ಮುಂದಿನ ಬದುಕನ್ನು ಕಟ್ಟಿ ಕೊಳ್ಳಲು ನಿರ್ಧರಿಸಿ ಬೆಂಗಳೂರಿನ ಸಿಟಿ ಕ್ರಿಕಿಟರ್ಸ್ ತಂಡಕ್ಕೆ ಸೇರಿ ಅಲ್ಲಿ ವೇಗದ ಬೌಲಿಂಗ್, ಸ್ಪಿನ್ , ಗೂಗ್ಲಿ, ಲೆಗ್ ಬ್ರೇಕ್ ಬೋಲಿಂಗ್ಗಿನಲ್ಲಿ ಪರಿಣಿತಿ ಹೊಂದಿ ಅತೀ ಶೀಘ್ರದಲ್ಲಿಯೇ ಕರ್ನಾಟಕದ ರಣಜಿ ತಂಡಕ್ಕೂ ಆಯ್ಕೆಯಾಗುತ್ತಾರೆ. ರಣಜಿ ಪಂದ್ಯಾವಳಿಗಳಲ್ಲಿನ ಅವರ ಪ್ರದರ್ಶನದಿಂದಾಗಿ ಅತೀ ಶ್ರೀಘ್ರದಲ್ಲಿಯೇ ಭಾರತ ತಂಡಕ್ಕೂ ಆಯ್ಕೆಯಾಗಿ 1964 ರಲ್ಲಿ ಇಂಗ್ಲೇಂಡ್ ವಿರುದ್ಧ ಮುಂಬಯಿನಲ್ಲಿ ಟೆಸ್ಟ್ ಜಗತ್ತಿಗೆ ಪಾದಾರ್ಪಣೆ ಮಾಡಿ ಮೊದಲ ಪಂದ್ಯದಲ್ಲೇ, 4 ವಿಕೆಟ್ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರಲ್ಲದೇ ಮುಂದೆ ಆ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನೂ ಪಡೆಯುತ್ತಾರೆ. ಚಂದ್ರಶೇಖರ್ ಅವರ ಶ್ರೇಷ್ಠ ಪ್ರದರ್ಶನದ ಫಲವಾಗಿಯೇ ಮೊದಲ ಬಾರಿಗೆ ಕರ್ನಾಟಕಕ್ಕೆ ಪ್ರತಿಷ್ಠಿತ ರಣಜಿ ಟ್ರೋಫಿ ಪ್ರಶಸ್ತಿ ಪಡೆಯಲು ಸಾಧ್ಯವಾಗಿತ್ತು. 1972ರಲ್ಲಿ ಪ್ರತಿಷ್ಠಿತ ವಿಸ್ಡೆನ್ ಪ್ರಶಸ್ತಿ ಅವರ ಮುಡಿಗೇರುತ್ತದೆ.

chandra2

ಅಲ್ಲಿಂದ 1978ರ ವರೆಗೂ 58 ಟೆಸ್ಟ್ ಗಳಲ್ಲಿ 7199ರನ್ ಗಳನ್ನು ಕೊಟ್ಟು 242 ವಿಕೆಟ್ ಪಡೆಯುತ್ತಾರೆ. 79 ರನ್ನುಗಳಿಗೆ 8 ವಿಕೆಟ್ ಅವರ ಶ್ರೇಷ್ಠ ಬೋಲಿಂಗ್ ಪದರ್ಶನವಾಗಿತ್ತು,. ಚಂದ್ರಶೇಖರ್ ಅವರ ಶ್ರೇಷ್ಠ ಪ್ರದರ್ಶನದಿಂದಾಗಿಯೇ 1971 ರಲ್ಲಿ ಭಾರತ ಇಂಗ್ಲೇಂಡಿನಲ್ಲಿ ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಸರಣಿ ಜಯ ಸಾಧಿಸಿತು. ಚಂದ್ರ ಮತ್ತು ಪ್ರಸನ್ನ ಕರ್ನಾಟಕದ ಸ್ಪಿನ್ ಜೋಡಿ ರಣಜಿ ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಹಲವಾರು ಜಯಕ್ಕೆ ಕಾರಣೀಭೂತರಾಗಿದ್ದರು. 1977-78ರ ಆಸ್ಟ್ರೇಲಿಯಾದ ಪ್ರವಾಸದಲ್ಲೂ ಚಂದ್ರಾ ಅವರ ಬೌಲಿಂಗ್ ಕರಾಮತ್ತಿನಿಂದಲೇ ಭಾರತಕ್ಕೆ ಸರಣಿ ವಿಜಯ ಪ್ರಾಪ್ತವಾಗಿತ್ತು .

chandra3

ಇಷ್ಟೆಲ್ಲಾ ಅಸಾಧಾರಣ ಪ್ರದರ್ಶನ ನೀಡಿದರೂ ಅದಾಗಲೇ ತಂಡದಲ್ಲಿ ದಿಗ್ಗಜರೆನಿಸಿಕೊಂಡಿದ್ದ ಬೇಡಿ, ವೆಂಕಟರಾಘವನ್ ಮತ್ತು ಪ್ರಸನ್ನ ಅವರಿಗೆ ಲಭಿಸಿದಷ್ಟು ಅವಕಾಶಗಳು ಚಂದ್ರಶೇಖರ್ ಅವರಿಗೆ ಲಭಿಸಲೇ ಇಲ್ಲ. ಈಗಿನ ರೀತಿಯಂತೆ ಅಷ್ಟೋಂದು ಟೆಸ್ಟ್ ಪಂದ್ಯಾವಳಿ ಆಡದ ಕಾರಣವೋ, ಇಲ್ಲವೇ ಬಹುಶಃ ತಮ್ಮ ನಾಚಿಕೆ ಸ್ವಭಾವದಿಂದ ಯಾರಿಗೂ ಡೊಗ್ಗು ಸಲಾಮು ಹೊಡೆಯದ ಕಾರಣದಿಂದಲೋ ಏನೋ, ಅಂದಿನ ತಂಡದ ನಾಯಕ ಅಜಿತ್ ವಾಡೇಕರ್ ಅರೊಂದಿಗೆ ಉತ್ತಮ ಭಾಂಧವ್ಯ ಸಾಧಿಸಲಾಗಲಿಲ್ಲವಾದ ಕಾರಣದಿಂದಾಗಿಯೋ ಏನೋ ಚಂದ್ರಶೇಖರ್ ಅವರಿಗೆ ಹೆಚ್ಚಿನ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲವಾದರೂ ಅಂದಿನ ಕಾಲದ ಎಲ್ಲಾ ಶ್ರೇಷ್ಠ ದಾಂಡಿಗರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದಂತೂ ಸುಳ್ಳಲ್ಲ ಎಪ್ಪತ್ತು-ಎಂಭತ್ತರ ದಶಕದ ಅತ್ಯಂತ ಶ್ರೇಷ್ಠ ದಾಂಡಿಗ, ಕ್ರಿಕೆಟ್ ದಿಗ್ಗಜರಾದ ವೆಸ್ಟ್ ಇಂಡೀಸ್ಸಿನ ವಿವಿಯನ್ ರಿಚರ್ಡ್ಸ್ ಅವರಿಗೆ ಅತ್ಯಂತ ಸವಾಲು ಒಡ್ಡಿದ ಬೌಲರ್ ಯಾರು ಎಂದು ಕೇಳಿದಾಗ, ಅವರ ಬಾಯಿಯಿಂದ ಬಂದ ಉದ್ಗಾರವೇ ಬಿ.ಎಸ್. ಚಂದ್ರಶೇಖರ್ ಎಂದರೆ ಚಂದ್ರರವರ ಸಾಧನೆ ಎಷ್ಟಿತ್ತು ಎಂಬುದರ ಅರಿವಾಗುತ್ತದೆ. ಚಂದ್ರ, ಒಮ್ಮೆ ಕೈಯಲ್ಲಿ ಚೆಂಡನ್ನು ಹಿಡಿದು ಎಸೆದರೆ, ಆ ಚೆಂಡು ಯಾವ ದಿಕ್ಕಿಗೆ ತಿರುಗುತ್ತದೆ ಎಂದು ಬ್ಯಾಟ್ಸ್ ಮನ್ ಇರಲೀ ಸ್ವತಃ ಚಂದ್ರಾ ಅವರಿಗೇ ಗೊತ್ತಾಗುತ್ತಿರಲಿಲ್ಲ ಎಂದು ಹೇಳುತ್ತಿದ್ದದ್ದೂ ಉಂಟು.

ಬೋಲಿಂಗ್ ನಲ್ಲಿ ಇಷ್ಟೆಲ್ಲಾ ಸಾಧನೆಯಾದರೆ, ಬ್ಯಾಟಿಂಗ್ಗಿನಲ್ಲಿಯೇ ಅವರದ್ದೂ ಅಭೂತ ಪೂರ್ವ ಸಾಧನೆಯೇ. ಆದರೆ ಆ ಸಾಧನೆ ರನ್ ಗಳಿಸಿದ್ದಕ್ಕಲ್ಲ ಅದು ಅತ್ಯಂತ ಹೆಚ್ಚಿನ ಸೊನ್ನೆ ಗಳಿಸಿದ್ದಕ್ಕಾಗಿ. ಅವರು 23 ಬಾರಿ ಸೊನ್ನೆ ರನ್ನುಗಳಿಗೆ ಔಟ್ ಆಗಿದ್ದ ಸಾಧನೆ ಅನೇಕ ವರ್ಷಗಳ ಕಾಲ ದಾಖಲೆಯಾಗಿಯೇ ಉಳಿದಿತ್ತು. ಮತ್ತೊಂದು ಕುತೂಹಲದ ಅಂಶವೆಂದರೆ ಅವರು ಬ್ಯಾಟಿಂಗಿನಲ್ಲಿ 167ರನ್ನುಗಳನ್ನು ಗಳಿಸಿದ್ದರೆ ಬೋಲಿಂಗಿನಲ್ಲಿಯೇ ಅದಕ್ಕಿಂತ ಹೆಚ್ಚು 242 ವಿಕೆಟ್ ಗಳಿಸಿದ್ದಾರೆ. ಇಷ್ಟಾದರೂ 1976ರ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಅಮೋಘವಾಗಿ ದೀರ್ಘಕಾಲ ಬ್ಯಾಟಿಂಗ್ ಪ್ರದರ್ಶಿಸಿ ಮತ್ತೊಂದು ತುದಿಯಲ್ಲಿ ವಿಶ್ವನಾಥ್ ಅವರಿಗೆ ಜೊತೆಯಾಗಿ, ಕಡೆಗೆ ವಿಶ್ವನಾಥ್ ಔಟಾಗದೇ 93ರನ್ ಗಳಿಸುವುದರ ಮೂಲಕ ಆ ಟೆಸ್ಟ್ ಪಂದ್ಯ ಗೆಲ್ಲಲು ಸಹಾಯ ಮಾಡಿದ್ದಂತೂ ನಂಬಲೇ ಬೇಕಾದ ಸತ್ಯ,

ದೊರೆತ ಅಲ್ಪ ಸ್ವಲ್ಪ ಅವಕಾಶಗಳಲ್ಲಿಯೇ ತಮ್ಮ ಅಮೋಘ ಪ್ರದರ್ಶನದ ಮೂಲಕ ಸ್ಪಿನ್ ಬೋಲಿಂಗ್ ಮೂಲಕ ಇಡೀ ಕ್ರಿಕೆಟ್ ಜಗತ್ತನ್ನೇ ತಿರುಗಿಸಿದ್ದರು ಎಂದರೆ ತಪ್ಪಾಗಲಾರದು. ಅನಿಲ್ ಕುಂಬ್ಲೆ, ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಚಂದ್ರಶೇಖರ್ ಅವರಿಗಿಂತಲೂ ಹೆಚ್ಚಿನ ವಿಕೆಟ್ ಪಡೆದಿರುವರಾದರೂ ಗೂಗ್ಲೀ ಬೋಲಿಂಗ್ ಎಂದರೆ ಎಲ್ಲರ ಬಾಯಿಯಲ್ಲಿ ಬರುವ ಮೊತ್ತ ಮೊದಲ ಹೆಸರೇ ಬಿ.ಎಸ್.ಚಂದ್ರಶೇಖರ್ ತಮ್ಮ ದೈಹಿಕ ದೌರ್ಬಲ್ಯವನ್ನು ಮೆಟ್ಟಿ ನಿಂತು ಅಪಾರವಾದ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದ ಕಾರಣದಿಂದಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s