ಟಿಪಿಕಲ್ ಟಿ. ಪಿ. ಕೈಲಾಸಂ

ನಾನು ಬಾಲ್ಯದಲ್ಲಿದ್ದಾಗ ಶಾಲೆಯಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ನನಗೆ ಬಹುಮಾನವಾಗಿ ಪೋಲೀ ಕಿಟ್ಟಿ ಪುಸ್ತಕ ದೊರೆಯಿತು. ಆನಂತರ ಪೋಲಿಕಿಟ್ಟಿ ನಾಟಕವನ್ನೂ ನೋಡುವ ಸೌಭಾಗ್ಯ ನನ್ನದಾಗಿ ಆ ಪೋಲೀ ಕಿಟ್ಟಿಯ ವ್ಯಕ್ತಿತ್ವ ನನ್ನ ಮೇಲೆ ಅತ್ಯಂತ ಪ್ರಭಾವ ಬೀರಿದ ಪರಿಣಾಮ ಅಪಾರ ಮತ್ತು ಅನನ್ಯವೂ ಹೌದು. ಪೋಲಿ ಕಿಟ್ಟಿ ಎನ್ನುವವನು, ನಾಟಕದ ಒಂದು ಕಥಾ ನಾಯಕನಾದರೂ ನನಗೇ ಅರಿವಿಲ್ಲದಂತೆ ಆತನನ್ನು ಅನುಸರಿಸ ತೊಡಗಿದೆ. ಆತನ ಪರೋಪಕಾರ, ಧೈರ್ಯ, ಸಾಹಸ, ಅನ್ಯಾಯದ ವಿರುದ್ಧ ಸಿಡೆದೇಳುವ ಪರಿ ಇದೆಲ್ಲವೂ ನನ್ನ ಮನಸ್ಸಿನ ಮೇಲೆ ಅಗಾಧವಾಗಿ ಪರಿಣಾಮ ಬೀರಿ ನಮ್ಮ ಊರಿನ ಗ್ರಂಥಾಲಯದಲ್ಲಿದ್ದ ಪೋಲೀ ಕಿಟ್ಟಿಯ ಎಲ್ಲಾ ಪುಸ್ತಕಗಳನ್ನೂ ಓದಿ ಮುಗಿಸಿದ ಮೇಲೆಯೇ ಆ ಕಥೆಗಳ ಲೇಖಕನ ಪರಿಚಯವಾಗಿ ಆ ಲೇಖಕನ ಮೇಲೆ ನನಗೆ ಎಲ್ಲಿಲ್ಲದ ಗೌರವ ಉಕ್ಕಿ ಹರಿದಿತ್ತು . ಆ ರೀತಿಯಾಗಿ ನನ್ನ ಮನಸ್ಸಿಗೆ ಹಿಡಿಸಿದ ಲೇಖಕ ಮತ್ತಾರು ಆಗಿರದೆ, ಅವರೇ ನಮ್ಮೆಲ್ಲರ ಅಚ್ಚು ಮೆಚ್ಚಿನ ಟಿ. ಪಿ. ಕೈಲಾಸಂ ಅವರಾಗಿದ್ದರು.

29 ಜುಲೈ, 1884ರಲ್ಲಿ ಬೆಂಗಳೂರಿನ ತಮಿಳು ಸಂಪ್ರದಾಯಸ್ಥ ಕುಟುಂಬದ ಜಸ್ಟಿಸ್ ಪರಮಶಿವ ಅಯ್ಯರ್ ಮತ್ತು ಕಮಲಮ್ಮ ದಂಪತಿಗಳಿಗೆ ಜನಿಸಿದವರೇ ನಮ್ಮ ಕೈಲಾಸಂ. ಬಾಲ್ಯದಿಂದಲೂ ಅತ್ಯಂತ ಚುರುಕಾಗಿದ್ದ ಕೈಲಾಸಂ ಅವರ ವಿದ್ಯಾಭ್ಯಾಸ ಬೆಂಗಳೂರು, ಮೈಸೂರು, ಹಾಸನಗಳಲ್ಲಿ ನಡೆದು ಕೊನೆಗೆ ಮೆಟ್ರಿಕ್ಯುಲೇಷನ್ ಪರೀಕ್ಷೆ ಮದರಾಸಿನ ಹಿಂದು ಹೈಸ್ಕೂಲಿನಲ್ಲಿ ಮುಗಿಯುತ್ತದೆ. ಬಾಲ್ಯದಲ್ಲಿ ಅವರ ಮನೆಯಲ್ಲಿ ಅತ್ಯಂತ ಶಿಸ್ತಿನ ವಾತಾವರಣದಲ್ಲಿ ಬೆಳೆಯುತ್ತಾರಾದರೂ ಆವರಲ್ಲಿದ್ದ ತುಂಟಾಟಗಳಿಗೆ ಕೊನೆಯೇ ಇರಲಿಲ್ಲ. ಆದಕ್ಕೊಂದು ಉದಾಹರಣೆಯೆಂದರೆ, ಗಣಿತದಲ್ಲಿ ವಿಪರೀತ ಬುದ್ಧಿವಂತ ಆಗಿದ್ದ ಕೈಲಾಸಂ ಅವರು ಹಾಸನದ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ, ಪರೀಕ್ಷೆಯಲ್ಲಿ ಹದಿನೈದು ಪ್ರಶ್ನೆಗಳನ್ನು ನೀಡಿ, ಯಾವುದಾದರೂ ಹತ್ತಕ್ಕೆ ಮಾತ್ರ ಉತ್ತರಿಸಿ ಎಂದು ಸೂಚನೆ ನೀಡಲಾಗಿತ್ತಂತೆ. ಆದರೆ ನಮ್ಮ ತುಂಟ ಕೈಲಾಸಂ ಅವರು ಆ ಎಲ್ಲ ಹದಿನೈದು ಲೆಕ್ಕಗಳನ್ನೂ ಸರಿಯಾಗಿ ಉತ್ತರಿಸಿ, ಉತ್ತರ ಪತ್ರಿಕೆಯ ಕೆಳಗೆ, ವಿನಮ್ರವಾಗಿ, ಮಾನ್ಯ ಪರೀಕ್ಷಕರೇ, ಯಾವುದಾದರೂ ಹತ್ತು ಉತ್ತರಗಳಿಗೆ ಅಂಕಗಳನ್ನು ನೀಡಿ ಎಂದು ಬರೆದಿದ್ದಂತಹ ಭೂಪ ನಮ್ಮ ಕೈಲಾಸಂ ಅವರು.

ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೂವಿಜ್ಞಾನ ಓದಿ ಬಿ.ಎ. ಪದವಿ. ಎಂ.ಎ.ಪದವಿಗಳನ್ನು ಪಡೆದು ಸರಕಾರದ ವಿದ್ಯಾರ್ಥಿವೇತನದೊಂದಿಗೆ ಲಂಡನ್ನಿಗೆ ತೆರಳಿ ರಾಯಲ್ ಕಾಲೇಜ್ ಆಫ್ ಸೈನ್ಸ್ ಸೇರಿ ಏಳು ವಿಷಯಗಳಲ್ಲಿ ಮೊದಲ ದರ್ಜೆಯಲ್ಲದೆ ಪ್ರಶಸ್ತಿಗೂ ಭಾಜನರಾದರು. ರಾಯಲ್ ಜಿಯಾಲಜಿಕಲ್ ಸೊಸೈಟಿಗೆ ಪ್ರಬಂಧ ಸಲ್ಲಿಸಿ ಫೆಲೋಷಿಪ್ ಕೂಡಾ ಪಡೆದಿದ್ದರು. ಕೇವಲ ಓದಿನಲ್ಲಷ್ಟೇ ತಮ್ಮನ್ನು ತೊಡಗಿಸಿಕೊಳ್ಳದೇ, . ಕ್ರೀಡೆಗಳಲ್ಲಿಯೂ ಅಪಾರವಾದ ಆಸಕ್ತಿ ವಹಿಸಿದ್ದ ಕೈಲಾಸಂ ಅಲ್ಲಿಯ ಫುಟ್ಬಾಲ್ ತಂಡದಲ್ಲಿ ಅತ್ಯುತ್ತಮ ಗೋಲ್ ಕೀಪರ್ ಆಗಿದ್ದಲ್ಲದೇ, ದೇಹದಾಡ್ಯ ಮಾಡುವ ಮೂಲಕ ತಮ್ಮ ದೇಹವನ್ನು ಕಂಚಿನಂತೆ ಹುರಿಗೊಳಿಸಿರುತ್ತಾರೆ.

ಇಂಗ್ಲೆಂಡಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಕಾಲ ಕಳೆಯಲು ಅಲ್ಲಿನ ರಂಗಭೂಮಿಗಳ ನಾಟಕಗಳನ್ನು ನೋಡಲು ಹೋಗುತ್ತಿದ್ದ ಕೈಲಾಸಂ ಅವರಿಗೆ ಅಲ್ಲಿನ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳು ಆವರ ಮೇಲೆ ಅಪಾರ ಪ್ರಭಾವ ಬೀರಿದ ಪರಿಣಾಮ , ಅದೇ ಶೈಲಿಯಲ್ಲಿ ಕನ್ನಡದಲ್ಲಿ ಹಲವು ನಾಟಕಗಳನ್ನು ರಚಿಸಿದರು. ಒಮ್ಮೆ ರವೀಂದ್ರನಾಥ ಟಾಗೋರ್ ಅವರು ಬೆಂಗಳೂರಿಗೆ ಬಂದಿದ್ದಾಗ ಅವರ ಸಮ್ಮುಖದಲ್ಲಿ ಪ್ರದರ್ಶಿಸಿದ ಕೈಲಾಸಂ ಅವರ ಟೊಳ್ಳುಗಟ್ಟಿ ನಾಟಕ ಪ್ರಥಮ ಬಹುಮಾನ ಗಳಿಸಿತಲ್ಲದೆ ಆ ಮೂಲಕ ಕನ್ನಡ ರಂಗಭೂಮಿಯಲ್ಲಿ ಕ್ರಾಂತಿ ಎಬ್ಬಿಸಿತು ಎಂದರೆ ತಪ್ಪಾಗಲಾರದು.

ವಿಪರೀತವಾದ ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಂಡಿದ್ದ ಕೈಲಾಸಂ, ಅದೊಮ್ಮೆ ಬೆಂಗಳೂರಿನಿಮ್ದ ಮೈಸೂರಿನೆಡೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ರೈಲು ವಿಪರೀತವಾಗಿ ನಿಧಾನವಾಗಿ, ಹೊಗೆಯನ್ನು ಧಾರಾಕಾರವಾಗಿ ಬಿಡುತ್ತಾ ಹೋಗುತ್ತಿತ್ತಂತೆ. ಇದರಿಂದ ಬೇಸತ್ತ ಕೈಲಾಸಂ, ಒಂದು ಸರ್ತಿ ಮೈಸೂರನ್ನು ತಲುಪಿದ ಮೇಲೆ,ಟಿಕೆಟ್ ಕಲೆಕ್ಟರ್ ಟಿಕೆಟ್ ಕೇಳಿದಾಗ, ಹಾಫ್ ಟಿಕೆಟ್ ಒಂದನ್ನು ಅವರಿಗೆ ಕೊಟ್ಟರಂತೆ. ಇದನ್ನು ಗಮನಿಸಿದ ಟಿ.ಸಿ., ಏನ್ರೀ ನಿಮಗೆ ನಾಚಿಕೆ ಆಗಲ್ವಾ? ಇಷ್ಟು ದೊಡ್ಡವರಾಗಿ, ಹಾಫ್ ಟಿಕೆಟ್ ಕೊಡ್ತಿರಲ್ಲಾ!’ ಎಂದು ದಬಾಯಿಸಿದಾಗ, ಸಮಚಿತ್ತದಿಂದ ಸಾರ್! ನಾನು ಹೊರಟಾಗ ಚಿಕ್ಕವನಾಗಿದ್ದೆ ಸಾರ್ ಅದಕ್ಕೆ ಹಾಫ್ ಟಿಕೆಟ್ ತೊಗೊಂಡೆ. ಈ ಮದ್ಯೆ ನಾನು ಬೆಳದಿದ್ದರೆ ನನ್ನ ತಪ್ಪೇನು ಸಾರ್!’ ಅಂತ ಪ್ರಶ್ನಿಸಿ ಟಿಸಿ ಅವರನ್ನೇ ತಬ್ಬಿಬ್ಬು ಮಾಡಿದ್ದರಂತೆ.

ಕೈಲಾಸಂ ರವರು ತಮ್ಮ ಕನ್ನಡಾಂಗ್ಲಾ ಭಾಷೆಯಲ್ಲಿ ಬರೆಯುತ್ತಿದ್ದ ನಾಟಕಗಳು ಅಂದಿನ ಸಮಾಜದ ಓರೆ ಕೋರೆಗಳನ್ನು ಎತ್ತಿ ತೋರಿಸುತ್ತಿದ್ದಲ್ಲದೆ, ತಪ್ಪು ಮಾಡಿದವರಿಗೆ ಮುಟ್ಟಿ ನೋಡುಕೊಳ್ಳುವಂತೆ ಮಾಡುತ್ತಿದ್ದವು ಎಂದರೆ ಅತಿಶಯೋಕ್ತಿಯೇನಲ್ಲ . ಆವರ ಕನ್ನಡಾಂಗ್ಲ ಸಂಭಾಷಣೆಗಳು ಇಲ್ಲವೇ ಎರಡ್ಮೂರು ಪದ್ಗಳನ್ ಈ ರೀತಿಯಾಗಿ ಒಟ್ಟೊಟ್ಗೆ ಅಪಾರವಾದ ಒತ್ತಕ್ಷರಗಳನ್ನು ಜೋಡಿಸಿ ಬರೆಯುತ್ತಿದ್ದ ಸಂಭಾಷಣೆ ಆ ನಾಟಕವನ್ನು ನಟನೆ ಮಾಡುವವರ ನಾಲಿಗೆ ತಿರುಗದೆ ಅಪಭ್ರಂಷವಾಗಿ ಎಷ್ಟೋ ಸಲಾ ಅಪಾರ್ಥವಾಗಿ ಜನರ ಮುಂದೆ ಅಪಹಾಸ್ಯಕೊಳ್ಳಗಾಗಿ ಮುಜುಗರ ಪಟ್ಟಿದ್ದೂ ಉಂಟು. ನಾಟಕಗಳಲ್ಲಿ ವ್ಯವಹಾರಿಕ ಭಾಷೆಯನ್ನು ಅತ್ಯಂತ ಚೆನ್ನಾಗಿ ಉಪಯೋಗಿಸಿಕೊಂಡು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದೂ ಉಂಟು. ನಕ್ಕು ನಗಿಸುವಾತ ಸಾವಿರ್ಜನಕ್ತ್ರಾತ. ಕರ್ನಾಟಕ ಪ್ರಹಸನ ಪಿತಾಮಹ, ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದ್ದು ಎಂದರೆ ತಪ್ಪಾಗಲಾರದು.

ಹೋಂರೂಲ್, ಬಹಿಷ್ಕಾರ,ಗಂಡಸ್ಕತ್ರಿ, ನಮ್ ಬ್ರಾಹ್ಮಣ್ಕೆ,, ಬಂಡ್ವಾಳಿಲ್ಲದಬಡಾಯಿ ನಮ್ ಕ್ಲಬ್, ಅಮ್ಮಾವ್ರಗಂಡ, ಸತ್ತವನ ಸಂತಾಪ, ಅನುಕೂಲಕ್ಕೊಬ್ಬಣ್ಣ, ಸೀಕರ್ಣೆ ಸಾವಿತ್ರಿ, ಶೂರ್ಪನಖಾ ಕುಲವೈಭವ ಅಥವಾ ನಂಕಂಪ್ನಿ,ತಾಳಿಕಟ್ಟೋಕ್ಕೂಲೀನೇ, ಪೋಲಿಕಿಟ್ಟಿ, ವೈದ್ಯನವ್ಯಾಧಿ, ಸೂಳೆ, ಟೊಳ್ಳುಗಟ್ಟಿ ಅಥವಾ ಮಕ್ಕಳಿಸ್ಕೂಲ್ ಮನೇಲಲ್ವೇ! ಮೊದಲಾದ ಕನ್ನಡ ನಾಟಕಗಳ ಜೊತೆಯಲ್ಲಿಯೇ ನಾಲ್ಕು ಇಂಗ್ಲಿಷ್ ನಾಟಕಗಳನ್ನೂ ರಚನೆ ಮಾಡಿದ್ದರು.

ತಾವರೆಕೆರೆ, ಸಮಶ್ಪೋಯಿನ ದಂಬ್ಡಿ, ಮುದ್ದೋ ಇಲ್ಲಾ ಕದ್ದೋ , ಸುಂಕದ ಕಟ್ಟೆ, ಶಾಮಿಯ ಸೇಡು ಮುಂತಾದ ಕಥೆಗಳನ್ನು ರಚಿಸಿದ್ದರೆ, ತಿಪ್ಪಾರಳ್ಳಿಕೋಳಿಕೆ ರಂಗ, ನಂಜಿ ನನ್ ಅಪರಂಜಿ, ಕಾಶಿಗ್ ಹೋದ ನಂ ಬಾವ, ಬೋರನ ಭಾರ, ಅಲ್ಪಜ್ಞನ ಪದ, ಅರಿವು ಮಂತಾದ ಕನ್ನಡದ ಕವನಗಳಲ್ಲಿ ಅನೇಕ ಇಂಗ್ಲೀಷ್ ಪದ್ಯಗಳನ್ನೂ ಬರೆದಿದ್ದಾರೆ.

ಕೋಳಿಕೆ ರಂಗಾ ಕವನದ ರಚನೆಯ ಕುರಿತಾದ ವಿಷಯವನ್ನು ಹೇಳಲೇ ಬೇಕಾಗುತ್ತದೆ. ಅವರು ಇಂಗ್ಲೇಡಿನಲ್ಲಿ ಓದುತ್ತಿದ್ದಾಗ, ಅಲ್ಲೋಂದು ನೈಟ್ ಕ್ಲಬ್ಬಿನ ಪಾಶ್ಚಾತ್ಯ ಹಾಡುಗಾರ Constantinople
C-O-N-S-T-A-N-T-I-N-O-P-L-E
C-O-N-S-T-A-N-T-I-N-O-P-L-E ಎಂಬ ಹಾಡನ್ನು ಹಾಡಿ ಬೇರೆಯಾರಾದರೂ ಹೀಗೆ ಹಾಡಲು ಧೈರ್ಯವಿದೇಯೇ ಎಂದು ಸವಾಲ್ ಹಾಕಿದನಂತೆ. ಕೈಲಾಸಂ ರವರು ಆಕ್ಷಣದಲ್ಲಿಯೇ ಆತನ ಸವಾಲು ಸ್ವೀಕರಿಸಿ, ಆಶುಕವಿಗಳಾಗಿ
ನಾನು ಕೋಳಿಕೆ ರಂಗ
‘ಕೋ’ನು ‘ಳಿ’ನು ‘ಕೆ’ನು ‘ರ’ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ ಎಂಬ ಹಾಡನ್ನು ಅಲ್ಲಿಯೇ ರಚಿಸಿ ಅದನ್ನು ಮೂಲ ರಾಗದಲ್ಲಿಯೇ ಅತ್ಯಂತ ಸುಶ್ರಾವ್ಯವಾಗಿ ಹಾಡಿ ಹೋರಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಲ್ಲದೇ ಎಲ್ಲಾ ಟೀಕಾಕಾರರ ಬಾಯಿಯನ್ನೂ ಮುಚ್ಚಿಸಿ, ಮೆಚ್ಚಿಗೆಯ ಹೊತೆ ಬಹುಮಾನವನ್ನೂ ಗೆದ್ದಿದ್ದರಂತೆ. ಕೈಲಾಸಂ ಅವರಿಗೆ ಸಂಗೀತದಲ್ಲಿ ಬಹಳವಾದ ಪಾಂಡಿತ್ಯವಿದ್ದು ಅವರು ಬಹುತೇಕ ಎಲ್ಲಾ ತರಹದ ವಾದ್ಯವನ್ನು ಲೀಲಾಜಾಲವಾಗಿ ನುಡಿಸಬಲ್ಲವರಾಗಿದ್ದರು.

ಕೈಲಾಸಂ ಅವರು 1945ರಲ್ಲಿ ಇಂದಿನ ಚೆನ್ನೈ ಅಂದಿನ ಮದರಾಸಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ. ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಭಿಕರಿಗೆ ಮತ್ತು ಆ ದಿನದ ಸನ್ನಿವೇಶಕ್ಕೆ ಬೇಕಾದ್ದನ್ನು ಮಾತ್ರ ಹೇಳಿದ್ದರಿಂದ ಇದು ಎಲ್ಲರಿಗೂ ಅತ್ಯಂತ ಪ್ರಿಯವಾಯಿತು. ಅವರು ಮಾಡಿದ ಭಾಷಣ ಅಲ್ಲಿಯವರೆಗೂ ಇಡೀ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣಗಳಲ್ಲೆಲ್ಲಾ ಅತ್ಯಂತ ಚಿಕ್ಕದು ಮತ್ತು ಜೊಕ್ಕವಾಗಿತ್ತೆಂದೂ ಎಲ್ಲರೂ ಕೊಂಡಾಡಿದ್ದರು. ಅತಿ ಕ್ಲುಪ್ತ, ಮತ್ತು ಪ್ರಭಾವಿ ಭಾಷಣಕ್ಕೆ , ಮಾತುಕತೆಗೆ ಅವರು ಪ್ರಸಿದ್ಧರಾಗಿದ್ದರು. ಅವರೆಂದೂ ತಮ್ಮ ಭಾಷಣದಲ್ಲಿ ಹೇಳಿದ್ದನ್ನೇ ಪದೇ ಪದೇ ಹೇಳುವ ಪರಿಪಾಠವಿರಲಿಲ್ಲ.ಪ್ರತಿಪದ, ಪ್ರತಿವಾಕ್ಯಗಳೂ ಪೂರ್ವ ನಿರ್ಧಾರಿತವಾಗಿದ್ದು, .ಪೂರ್ಣವಾಗಿ ಪೂರ್ವ ತಯಾರಿ ಇಲ್ಲದೇ ಯಾವುದೇ ಸಭೆ ಸಮಾರಂಭಗಳಿಗೂ ಅವರು ಹೋಗುತ್ತಿರಲಿಲ್ಲ.

kaiasam2.jpg

ಸಿಗರೇಟಿಗೂ ಕೈಲಾಸಂ ಅವರಿಗೂ ಅದೊಂದು ರೀತಿಯ ಅವಿನಾಭಾವ ಸಂಬಂಧ. ಸಿಗರೇಟ್ ಇದ್ದರೆ ಅವರಿಗೆ ತಿಂಡಿ ಮತ್ತು ಊಟದ ಚಿಂತೆಯೇ ಇರುತ್ತಿರಲಿಲ್ಲ. ಕೈಲಾಸಂ ಅವರ ಸಿಗರೇಟ್ ಬಗ್ಗೆ ಪ್ರಚಲಿತವಿರುವ ಒಂದು ಕುತೂಹಲ ವಿಷಯವೆಂದರೆ, ಅವರು ಸಿಗರೇಟ್ ಸೇದಿದ ಹೊಗೆಯಿಂದ ಗಾಳಿಯಲ್ಲಿ ಕೈಲಾಸಂ ಎಂದು ಬರೆಯುತ್ತಿದ್ದರಂತೆ. ಅದೇ ರೀತಿ ಜನರೇ ಮತ್ತೊಂದು ರೀತಿಯಾಗಿ ಹೇಳುವುದೇನೆಂದರೆ ಕೈಲಾಸಂ ಆವರಿಗೆ ತಮ್ಮ ನಾಟಕಗಳು ಮತ್ತು ಸಾಹಿತ್ಯವನ್ನು ತಾವೇ ಬರೆಯುವಷ್ಟು ತಾಳ್ಮೆ ಇರಲಿಲ್ಲ. ಹಾಗಾಗಿ, ಕೈಲಾಸಂ ಒಂದು ಕೈಯ್ಯಲ್ಲಿ ಸಿಗರೇಟ್ ಹಿಡಿದು ಬುಸಬುಸನೆ ಸೇದುತ್ತಾ, ಆಕಾಶಕ್ಕೆ ಹೊಗೆ ಬಿಡುತ್ತಾ, ತಮ್ಮ ನಾಟಕದ ಪಾತ್ರಗಳ ಸಂಭಾಷಣೆಯನ್ನು ಹೇಳ್ತಾ ಹೋಗ್ತಿದ್ರೇ, ಅವರ ಸ್ನೇಹಿತರೋ ಇಲ್ಲವೇ ಶಿಷ್ಯಂದಿರೋ ಅದನ್ನು ಬರೆದುಕೊಳ್ತಿದ್ರಂತೆ. ಅವರೆಲ್ಲರೂ, ಕೈಲಾಸಂ ಅವರಿಂದ ಡಿಕ್ಟೇಷನ್ ಪಡೆಯುವುದೇ ತಮ್ಮ ಪರಮ ಸೌಭಾಗ್ಯ ಎಂದು ಭಾವಿಸಿದ್ದವರೇ ಆಗಿದ್ದರು.

ನೇರ ನುಡಿಗಳಿಗೆ ಮತ್ತು ಪಂಚಿಂಗ್ ಉತ್ತರಗಳಿಗೆ ಕೈಲಾಸಂ ಅವರು ಹೇಗೆ ಪ್ರಸಿದ್ಧರಾಗಿದ್ದರು ಎನ್ನುವುದು ಈ ಪ್ರಸಂಗದಲ್ಲಿ ತಿಳಿಯುತ್ತದೆ.

ಒಮ್ಮೆ ಅವರ ಸ್ನೇಹಿತರೊಬ್ಬರು ಕೈಲಾಸಂ ಇರುತ್ತಿದ್ದ ಕೊಠಡಿ ಶುದ್ಧವಾಗಿ ಇರುತ್ತಿರಲಿಲ್ಲವಾದ್ದರಿಂದ ನೀವೇಕೆ ಕಸದ ಮಧ್ಯೆ ಇರುತ್ತೀರಿ ಎಂದು ಕೇಳಿದ್ದಕ್ಕೆ,

Do you know what is meant by ಕಸ…
Thing which was not supposed to be there, but if it is there, it is called ಕಸ …for ex You.. ಎಂದು ಅವರ ಸ್ನೇಹಿತರು ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರಿಸಿದ್ದರಂತೆ.

ಅದೊಮ್ಮೆ ಯಾರೋ ಅವರನ್ನು ಸಂಬೋಧಿಸಿ, ಟಿ.ಪಿ.ಕೈಲಾಸ್,ಎಂದಾಗ ತಮ್ಮನ್ನು ತಾವೇ , ಟಿಪಿಕಲ್ ಆಸ್, ಎಂದು ಕರೆದುಕೊಂಡು, ನಾನು ಟಿಪಿಕಲ್ ಕೈಲಾಸಂ ಎಂದು ನಗೆ ಯಾಡಿದ್ದರಂತೆ. ಕೂತಲ್ಲಿ ಕಂಪನಿ…ನಿಂತಲ್ಲಿ ನಾಟ್ಕ ಎಂದು ಹೋದೆಡೆಯಲ್ಲೆಲ್ಲಾ ಜನರನ್ನು ನಕ್ಕು ನಗಿಸಿದ ಕೈಲಾಸಂ ಅವರ ನಿಜಜೀವನದ ಪರದೆ 23.11.1946ರಲ್ಲಿ ಶಾಶ್ವತವಾಗಿ ಮುಚ್ಚಿಕೊಂಡಿತು.

ಕೈಲಾಸಂ ಒಂದು‌ ರೀತಿಯಲ್ಲಿ ಆಶು ಕವಿ ಎಂದರೂ ತಪ್ಪಾಗಲಾರದು. ಅವರು ನಿಂತಲ್ಲೇ, ಕೂತಲ್ಲೇ ಬಡ ಬಡಿಸುತ್ತಿದ್ದರು. ಅವರು ಹೊತ್ತಲ್ಲದ ಹೊತ್ತಿನಲ್ಲಿ ಹೇಳಿದ್ದನ್ನೂ ಬರೆದುಕೊಂಡು ನಮಗೆ ಇಂದಿಗೂ ಕೈಲಾಸಂ ಅವರ ಸಾಹಿತ್ಯವನ್ನು ಉಳಿಸಿ ಹೋದ ಕೀರ್ತಿ ‌ಅವರ ಸ್ನೇಹಿತರಾಗಿದ್ದ ಶ್ರೀ ರಾಮರಾವ್ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರನ್ನು ಕೈಲಾಸಂ ಅವರ ಕೈ ಎಂದೇ ಹಲವರು‌ ಸಂಭೋದಿಸುತ್ತಿದ್ದರಂತೆ

ಕೈಲಾಸಂ ಆವರು ನಮ್ಮೊಂದಿಗೆ ಇಲ್ಲದಿದ್ದರೇನಂತೆ, ಅವರ ಗೆಳೆಯ, ಶ್ರೀ ಕೇಶವ ರಾವ್ ಕೈಲಾಸಂ ಕುರಿತಾದ ಸ್ವಾರಸ್ಯಕರವಾದ ಮತ್ತು ಸಮಗ್ರವಾದ ಕನ್ನಡಕ್ಕೊಬ್ಬನೇ ಕೈಲಾಸಂ ಎಂಬ ಪುಸ್ತಕದ ಮೂಲಕ ಕೈಲಾಸಂ ಅವರನ್ನು ಚಿರಸ್ಥಾಯಿಯನ್ನಾಗಿ ಮಾಡಿದ್ದಾರೆ. ಈ ಪುಸ್ತಕದಲ್ಲಿ ಕೈಲಾಸಂರವರ ಬಾಲ್ಯ, ವಿದ್ಯಾಭ್ಯಾಸ ಮತ್ತು ಅವರ ಕೆಲಸದ ಬಗ್ಗೆ ಸಾಕಷ್ಟು ವಿವರವಾಗಿ ಬರೆದಿರುತ್ತಾರೆ. ಅದೇ ರೀತಿ ಕೈಲಾಸಂ ಜೋಕ್ಸೂ ಸಾಂಗ್ಸೂ ಅನ್ನೋ ಪುಸ್ತಕದ ಮೂಲಕ ಕೈಲಾಸಂರವರ ಹಾಸ್ಯ ಪ್ರಜ್ಣೆಯ ಸಮಗ್ರ ಪರಿಚಯವನ್ನು ಮಾಡಿಸಿದ್ದಾರೆ.

ಕೈಲಾಸಂ ಅವರ ಬಗ್ಗೆ ಶ್ರೀ ಬಿ.ಎಸ್.ಕೇಶವರಾವ್ ಅವರೇ ಹೇಳಿರುವಂತೆ ಕೈಲಾಸಂ ಅವರದು ವಿಶಿಷ್ಟ ವ್ಯಕ್ತಿತ್ವ. ಅವರ ನಾಟಕಗಳಲ್ಲಿ ಕನ್ನಡ ಮಾತ್ರವಲ್ಲದೆ ಸಂದರ್ಭಕ್ಕೆ ತಕ್ಕಂತೆ ಇಂಗ್ಲೀಷ್, ತಮಿಳು, ತೆಲುಗು, ಹಿಂದಿ ಭಾಷೆಗಳನ್ನೂ ಬಳಸುತ್ತಿದ್ದುದು ವಿಶೇಷ. ಅದೊಮ್ಮೆ ಕೈಲಾಸಂ ಅವರ ಉತ್ತಮ ನಾಟಕಗಳನ್ನು ಇಂಗ್ಲೀಷಿಗೆ ಭಾಷಾಂತರಿಸಬೇಕು ಎಂದು ಯಾರೋ ಹೇಳಿದಾಗ, ಮೊದಲು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಎಂದು ಇನ್ನೊಬ್ಬರು ಹೇಳಿದರಂತೆ. ಅವರ ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿ ಎದ್ದು ಕಾಣುತ್ತಿತ್ತು. ಜೀವನದಲ್ಲಿ ನಡೆಯುವ ಸಂಗತಿಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನಾನೇ ವಕ್ರದೃಷ್ಟಿಯಿಂದ ನೋಡಿದರೆ ಫಿಲಾಸಫಿ ಹುಟ್ಟುತ್ತೆ ಎಂದು ಅವರು ಸದಾಕಾಲವೂ ಹೇಳುತ್ತಿದ್ದರು. ವಕ್ರ ದೃಷ್ಟಿ ಅಂದರೆ ಕೆಟ್ಟ ದೃಷ್ಟಿ ಅಂತ ಅಲ್ಲ. ಬೇರೆ ದೃಷ್ಟಿ different angle ನಲ್ಲಿ ನೋಡಬೇಕು ಅಂತ. ಇದಕ್ಕೆ ಒಂದು ಉದಾಹರಣೆ: ಹಿರಿಯ ಸಾಹಿತಿ ಶ್ರೀ ಅ.ರಾ.ಮಿತ್ರ ಅವರು ಒಮ್ಮೆ ಹೊಟ್ಟೆ ನೋವು ಅಂತ ಡಾಕ್ಟರ್ ಹತ್ತಿರ ಸಂಜೆ ಹೋಗಿದ್ದರು. ಡಾಕ್ಟರ್ ಯಾವಾಗ ಯಾವಾಗ ಹೊಟ್ಟೆ ನೋವು ಬರುತ್ತೆ ಅಂತ ವಿಚಾರಿಸಿ ಈಗೆಲ್ಲ ನೀವು ಊಟ ತಿಂಡಿ ತಿಂದಿದ್ದೀರಿ. ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಬರೀ ಹೊಟ್ಟೇಲಿ ಬನ್ನಿ. ನಾನು ಟೆಸ್ಟ್ ಮಾಡಿ ಔಷಧ ಕೊಡ್ತೀನಿ ಅಂದರು. ಮಿತ್ರ ಅವರು ಮನೆಗೆ ಬಂದು ನಾನು ಹೊಟ್ಟೆ ನೋವಿಗೆ ಔಷಧಿ ತೊಗೊಳಕ್ಕೆ ಡಾಕ್ಟರ್ ಹತ್ತಿರ ಹೋಗಿದ್ದೆ. ಅವರು ನಾಳೆ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಬನ್ನಿ ಅಂತ ಹೇಳಿದ್ದಾರೆ, ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಹೋಗಿ ತೋರಿಸ್ಕೊಂಡು ಬರ್ತೀನಿ ಅಂದರು. ತಕ್ಷಣ ಮಿತ್ರ ಅವರ ಮಗಳು, ಅಣ್ಣಾ, ಅವರು ಹೇಳ್ತಾರೆ ಅಂತ ಬರೀ ಹೊಟ್ಟೆಯಲ್ಲಿ ಹೋಗಬೇಡಿ, ಕಡೇಪಕ್ಷ ಬನಿಯನ್ನಾದರೂ ಹಾಕ್ಕೊಂಡ್ ಹೋಗಿ ಅಂದಳಂತೆ. ಹೀಗೆ ಬರೀ ಹೊಟ್ಟೆಯಲ್ಲಿ ಅಂದರೆ ಖಾಲಿ ಹೊಟ್ಟೆ ಅಂತಲ್ಲದೆ ಬೇರೆ ಅರ್ಥಾನೂ ಇದ್ಯಲ್ಲ ಇದನ್ನೇ ವಕ್ರ ದೃಷ್ಟಿ ಅನ್ನೋದು. ಇಂಥ ಎಷ್ಟೋ ಉದಾಹರಣೆ ಕೊಡಬಹುದು. ಕೈಲಾಸಂ ಅವರ ಬಗ್ಗೆ ಬರೆಯುತ್ತಾ ಹೋದರೆ ಮುಗಿಯದ ಕಥೆ.

ಅದೇ ರೀತಿ ಕೈಲಾಸಂ ಅವರು ಗತಿಸಿದ ಮೇಲೂ ಅವರನ್ನು ಜೀವಂತವಾಗಿರಿಸಿದ ಮತ್ತೊಬ್ಬ ವ್ಯಕ್ತಿಯೆಂದರೆ, ಶ್ರೀಯುತ ದಿವಂಗತ ಸಿ.ಆರ್.ಸಿಂಹ ಅವರು, ಕನ್ನಡಕ್ಕೊಬ್ಬರೇ ಕೈಲಾಸಂ ಹೇಗೋ, ಕನ್ನಡಕ್ಕೊಬ್ಬರೇ ಸಿಆರ್ ಸಿಂಹ ಕೂಡ. ಸುಮಾರು ವರ್ಷಗಳ ಕಾಲ ಟಿಪಿಕಲ್ ಟಿಪಿ ಕೈಲಾಸಂ ಎಂಬ ಏಕಪಾತ್ರಾಭಿನಯದ ಮುಖಾಂತರ ಸಿಂಹ ಅವರು ಕೈಲಾಸಂ ಅವರ ವ್ಯಕ್ತಿತ್ವವನ್ನು ಜನಮಾನಸದಲ್ಲಿ ಹಚ್ಚ ಹಸಿರಾಗಿ ಉಳಿಯುವಂತೆ ಮಾಡುವುದರಲ್ಲಿ ಅತ್ಯಂತ ಯಶಸ್ವಿಯಗಿದ್ದರು ಎಂದರೆ ತಪ್ಪಾಗಲಾರದು. ಅವರ ಅಭಿನಯ ನೋಡುತ್ತಿದ್ದಾಗ, ಅವರು ಸಿ.ಆರ್. ಸಿಂಹರಲ್ಲ ಬದಲಾಗಿ ಅವರೇ ಕೈಲಾಸಂ ಏನೋ ಅನ್ನುವಷ್ಟರ ಮಟ್ಟಿಗೆ, ಕೈಲಾಸಂ ಅವರ ಪಾತ್ರಗಳೊಳಗೆ ಟಿಪಿಕಲ್ ಆಗಿ ಪರಕಾಯ ಪ್ರವೇಶ ಮಾಡುವ ಮೂಲಕ ಸಿಂಹರವರು ಕೈಲಾಸಂ ಅವರ ಪರಿಚಯವನ್ನು ಜನರಿಗೆ ಮಾಡಿಸಿಕೊಟ್ಟಿದ್ದರು.

ಎಲ್ಲರ ಕೈಲೂ, ಭೇಷ್ ಎನ್ನಿಸಿಕೊಂಡ ಕೈಲಾಸಂ, ಕನ್ನಡ ಸಾರಸ್ವತ ಲೋಕಕ್ಕೆ ಮತ್ತು ನಾಟಕ ರಂಗಕ್ಕೆ ಕೊಟ್ಟ ಕೊಡುಗೆ ಅನನ್ಯವೇ ಸರಿ. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳು.

ಏನಂತೀರೀ?

ಆರಾಮಿತ್ರ ಅವರ ಪ್ರಸಂಗವನ್ನು ತಿಳಿಸಿದ ಶ್ರೀ ದ್ವಾರಕಾನಾಥ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು .

ಕೈಲಾಸಂ ಅವರ ಕೆಲವು ಪ್ರಸಂಗಗಳನ್ನು ತಿಳಿಸಿದ ಶ್ರೀ ಜಗದೀಶ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು .

5 thoughts on “ಟಿಪಿಕಲ್ ಟಿ. ಪಿ. ಕೈಲಾಸಂ

  1. ತುಂಬಾ ಚೆನ್ನಾಗಿದೆ, ಕೈಲಾಸಂ ಅವರ ವ್ಯಕ್ತಿತ್ವ ಪರಿಚಯಿಸಿದ್ದಕ್ಕೆ ಧನ್ಯವಾದಗಳು. ಶ್ರೀಯುತ ಕೇಶವ ರಾಯರು ನಮ್ಮ ಮಲ್ಲೇಶ್ವರಂ ಸುಶೀಲಮ್ಮ ಆಂಟಿ ತಂಗಿ ಉಮಾರವರ ಪತಿ. ನನ್ನ ತಾತ ಮತ್ತು ಅಜ್ಜಿ ಮದುವೆಯಾದ ನಂತರ ಕೆಲ ದಿನಗಳು ಮುಂಬೈನಲ್ಲಿ ನೆಲೆಸಿದ್ದರು. ಅವರ ಪಕ್ಕದ ಮನೆಯಲ್ಲಿದ್ದ ಕೈಲಾಸಂ ಅವರ ಜೊತೆ ನಡೆಸಿದ ಸಂಭಾಷಣೆ, ಅವರ ಹಾಸ್ಯಪ್ರಜ್ಞೆ ಎಲ್ಲದರ ಪರಿಚಯ ನನ್ನಜ್ಜಿ ಮಾಡಿಸಿದ್ದರು.

    Like

  2. ಕೈಲಾಸಂ ಬಗ್ಗೆ ಎಷ್ಟು ಹೇಳಿದರೂ ಮುಗ್ಯೊದಿಲ್ಲ. ಸದಾ ಒನ್ದಿಲ್ಲೊನ್ದು ಬಾರಿ ನೆನ್ಪಾಗ್ತಾನೇ ಇರ್ತಾರೆ ಅವರ ಬರವಣಿಗೆ ನನ್ಮೇಲೆ ತುಮ್ಬಾ ಪರಿಣಾಮ ಬೀರಿದೆ. ಧನ್ಯವಾದಗಳು, ಶುಭವಾಗಲಿ.

    Like

  3. ಕೈಲಾಸಂ ಅವರ ಬಗ್ಗೆ ತಾವು ಬರೆದಿರುವ ಲೇಖನ ಚೆನ್ನಾಗಿದೆ. ಕೈಲಾಸಂ ಅವರ ಬಗ್ಗೆ ಶ್ರೀ ಬಿ.ಎಸ್.ಕೇಶವರಾವ್ ಅವರು ತುಂಬಾ ಚೆನ್ನಾಗಿ ಭಾಷಣ ಮಾಡುತ್ತಿದ್ದು ಅದನ್ನು ನಾನು ಹಲವಾರು ಬಾರಿ ಕೇಳಿದ್ದೇನೆ. ಕೈಲಾಸಂ ಅವರದು ವಿಶಿಷ್ಟ ವ್ಯಕ್ತಿತ್ವ. ಅವರ ನಾಟಕಗಳಲ್ಲಿ ಕನ್ನಡ ಮಾತ್ರವಲ್ಲದೆ ಸಂದರ್ಭಕ್ಕೆ ತಕ್ಕಂತೆ ಇಂಗ್ಲೀಷ್, ತಮಿಳು, ತೆಲುಗು, ಹಿಂದಿ ಭಾಷೆಗಳನ್ನೂ ಬಳಸುತ್ತಿದ್ದುದು ವಿಶೇಷ. ಕೈಲಾಸಂ ಅವರು ಉತ್ತಮ ನಾಟಕಗಳನ್ನು ಬರೆದಿದ್ದಾರೆ, ಅದನ್ನು ಇಂಗ್ಲೀಷಿಗೆ ಭಾಷಾಂತರಿಸಬೇಕು ಎಂದು ಯಾರೋ ಹೇಳಿದಾಗ ಮೊದಲು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಎಂದು ಇನ್ನೊಬ್ಬರು ಹೇಳಿದರಂತೆ. ಅವರ ನಾಟಕಗಳಲ್ಲಿ ಹಾಸ್ಯ ಪ್ರಧಾನವಾಗಿ ಕಾಣುತ್ತಿತ್ತು. ಜೀವನದಲ್ಲಿ ನಡೆಯುವ ಸಂಗತಿಗಳನ್ನು ವಕ್ರದೃಷ್ಟಿಯಿಂದ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನಾನೇ ವಕ್ರದೃಷ್ಟಿಯಿಂದ ನೋಡಿದರೆ ಫಿಲಾಸಫಿ ಹುಟ್ಟುತ್ತೆ ಎಂದು ಅವರು ಹೇಳುತ್ತಿದ್ದರು. ವಕ್ರ ದೃಷ್ಟಿ ಅಂದರೆ ಕೆಟ್ಟ ದೃಷ್ಟಿ ಅಂತ ಅಲ್ಲ. ಬೇರೆ ದೃಷ್ಟಿ different angle ನಲ್ಲಿ ನೋಡಬೇಕು ಅಂತ. ಇದಕ್ಕೆ ಒಂದು ಉದಾಹರಣೆ: ಹಿರಿಯ ಸಾಹಿತಿ ಶ್ರೀ ಅ.ರಾ.ಮಿತ್ರ ಅವರು ಒಮ್ಮೆ ಹೊಟ್ಟೆ ನೋವು ಅಂತ ಡಾಕ್ಟರ್ ಹತ್ತಿರ ಸಂಜೆ ಹೋಗಿದ್ದರು. ಡಾಕ್ಟರ್ ಯಾವಾಗ ಯಾವಾಗ ಹೊಟ್ಟೆ ನೋವು ಬರುತ್ತೆ ಅಂತ ವಿಚಾರಿಸಿ ಈಗೆಲ್ಲ ನೀವು ಊಟ ತಿಂಡಿ ತಿಂದಿದ್ದೀರಿ. ನಾಳೆ ಬೆಳಿಗ್ಗೆ ಒಂಭತ್ತು ಗಂಟೆಗೆ ಬರೀ ಹೊಟ್ಟೇಲಿ ಬನ್ನಿ. ನಾನು ಟೆಸ್ಟ್ ಮಾಡಿ ಔಷಧ ಕೊಡ್ತೀನಿ ಅಂದರು. ಮಿತ್ರ ಅವರು ಮನೆಗೆ ಬಂದು ನಾನು ಹೊಟ್ಟೆ ನೋವಿಗೆ ಔಷಧಿ ತೊಗೊಳಕ್ಕೆ ಡಾಕ್ಟರ್ ಹತ್ತಿರ ಹೋಗಿದ್ದೆ. ಅವರು ನಾಳೆ ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಬನ್ನಿ ಅಂತ ಹೇಳಿದ್ದಾರೆ, ಬೆಳಿಗ್ಗೆ ಬರೀ ಹೊಟ್ಟೆಯಲ್ಲಿ ಹೋಗಿ ತೋರಿಸ್ಕೊಂಡು ಬರ್ತೀನಿ ಅಂದರು. ತಕ್ಷಣ ಮಿತ್ರ ಅವರ ಮಗಳು “ಅಣ್ಣ, ಅವರು ಹೇಳ್ತಾರೆ ಅಂತ ಬರೀ ಹೊಟ್ಟೆಯಲ್ಲಿ ಹೋಗಬೇಡಿ, ಕಡೇಪಕ್ಷ ಬನಿಯನ್ನಾದರೂ ಹಾಕ್ಕೊಂಡ್ ಹೋಗಿ ಅಂದಳಂತೆ. ಹೀಗೆ ಬರೀ ಹೊಟ್ಟೆಯಲ್ಲಿ ಅಂದರೆ ಖಾಲಿ ಹೊಟ್ಟೆ ಅಂತಲ್ಲದೆ ಬೇರೆ ಅರ್ಥಾನೂ ಇದ್ಯಲ್ಲ ಇದನ್ನೇ ವಕ್ರ ದೃಷ್ಟಿ ಅನ್ನೋದು. ಇಂಥ ಎಷ್ಟೋ ಉದಾಹರಣೆ ಕೊಡಬಹುದು. ಕೈಲಾಸಂ ಅವರ ಬಗ್ಗೆ ಬರೆಯುತ್ತಾ ಹೋದರೆ ಮುಗಿಯುವುದೇ ಇಲ್ಲ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s