ವಿ. ಸೀತಾರಾಮಯ್ಯ

ನಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನು ನಿಮ್ಮ ಮಡಿಲೊಳಗಿಡಲು ತಂದಿರುವೆವು, ಕೊಳ್ಳೀರೀ ಮಗುವನ್ನು ಎಮ್ಮ ಮನೆ ಬೆಳಕನ್ನು ನಿಮ್ಮ ಮನೆಯನ್ನು ತುಂಬಲೊಪ್ಪಿಸುವೆವು ಈ ಹಾಡನ್ನು ಪ್ರತೀ ಮದುವೆಗಳ ವೀಡೀಯೋದಲ್ಲಿ ಹೆಣ್ಣು ಮಗಳನ್ನು ಗಂಡನ ಮನೆ ತುಂಬಿಸುವಾಗ ಹಾಕುತ್ತಾರೆ. ಅದೇ ರೀತಿ ನಾವು ಚಿಕ್ಕವರಿದ್ದಾಗ ನಮ್ಮ ಪ್ರಾಥಮಿಕ ಶಾಲೆಯಲ್ಲಿ ಓದಿದ್ದ ಕಾದಿರುವಳು ಶಬರಿ, ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು ಎಂಬ ಶಬರಿ ಪದ್ಯ. ಇಂತಹ ಸೊಗಸಾದ ಗೀತೆಯಲ್ಲದೇ, ಇಂತಹ ಅನೇಕ ನೂರಾರು ಅದ್ಭುತ ಮನ ಮಿಡಿಯುವ ಗೀತೆಗಳ ಕರ್ತೃ ನಮ್ಮ ಕನ್ನಡ ನಾಡಿನ ವರ ಪುತ್ರ ವಿ.ಸೀತಾರಾಮಯ್ಯ ಎಲ್ಲರ ಪ್ರೀತಿಯ ವಿಸೀ ಅವರ ಕುರಿತು ಅರಿಯೋಣ.

ಅಕ್ಟೋಬರ್ 2 ದೇಶದ ಇಬ್ಬರು ಮಹಾನ್ ನಾಯಕರಾದ ಮಹಾತ್ಮಾ ಗಾಂಧಿಯವರು ಮತ್ತು ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳು ಹುಟ್ಟಿದ ದಿನ. 1899 ಅಕ್ಟೋಬರ್ 2ರಂದೇ ಬೆಂಗಳೂರು ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯಲ್ಲಿ ಶ್ರೀ ವೆಂಕಟರಾಮಯ್ಯ ಮತ್ತು ದೊಡ್ಡವೆಂಕಟಮ್ಮ ಎಂಬ ಸಂಪ್ರದಾಯಸ್ಥ ದಂಪತಿಗಳಿಗೆ ಸೀತಾರಾಮಯ್ಯನವರು ಜನಿಸಿದರು. ಓದಿನಲ್ಲಿ ತುಂಬಾ ಚುರುಕಾಗಿಕಿದ್ದ ವಿಸೀ, ಮೈಸೂರು ಮಹಾರಾಜಾ ಕಾಲೇಜಿನಿಂದ 1920 ರಲ್ಲಿ ಬಿ.ಏ. ಪದವಿಯನ್ನೂ, 1922ರಲ್ಲಿ . ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದ ನಂತರ ಕಾನೂನು ಅಭ್ಯಸಿಸಲು ಬೊಂಬಾಯಿಗೆ ಪ್ರಯಾಣಿಸಿದರು. ಡೆಪ್ಯುಟಿ ಕಂಟ್ರೋಲರ್ ಆಫ್ ಕರೆನ್ಸಿ ಕಛೇರಿಯಲ್ಲಿ ಕೆಲಕಾಲ ಕೆಲಸ ಮಾಡಿದ ನಂತರ 1928ರಿಂದ ಮೈಸೂರಿನ ಶಾರದಾ ವಿಲಾಸ ಶಾಲೆಯಿಂದ ಪ್ರಾರಂಭಗೊಂಡು 1955 ರಲ್ಲಿ ನಿವೃತ್ತಿ ಆಗುವ ವರೆಗೆ ರಾಜ್ಯದ ಹಲವೆಡೆಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದರು. 1956-58ರ ವರೆಗೆ ಬೆಂಗಳೂರು ಆಕಾಶವಾಣಿ ನಿಲಯದ ಭಾಷಣ ವಿಭಾಗದ ಮುಖ್ಯಸ್ಥರಾಗಿದ್ದರು. ಆದಾದ ನಂತರ 1964-68 ರವರೆಗೆ ಹೊನ್ನಾವರದ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಅನಂತರ ಕೆಲ ಕಾಲ ಪ್ರಬುದ್ಧ ಕರ್ನಾಟಕ ಸಂಪಾದಕರಾಗಿ, ಸಾಹಿತ್ಯ ಪರಿಷತ್ತಿನ ಕನ್ನಡ ನುಡಿ ಮತ್ತು ಪರಿಷತ್ ಪತ್ರಿಕೆಗಳ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಷ್ಟು ದೊಡ್ಡ ಕವಿಗಳಾಗಿದ್ದರೂ ಅವರು ಹೂವಿನಂತ ಮನಸ್ಸು ಉಳ್ಳವರಾಗಿದ್ದು ಪರಮದಯಾಳುಗಳಾಗಿದ್ದರು. ಅದರಲ್ಲೂ ಪ್ರಾಣಿ ಪಕ್ಷಿಗಳೆಂದರೆ ಅವರಿಗೆ ಬಲು ಪ್ರೀತಿ. ಪ್ರತೀ ದಿನವೂ ಅವುಗಳಿಗೆ ಆಹಾರವನ್ನು ಹಾಕಿಯೇ ತಾವು ಸೇವಿಸುವ ಪರಿಪಾಠವನ್ನು ಬೆಳಸಿಕೊಂಡಿದ್ದರು. ಹಾಗಾಗಿಯೂ ಪ್ರತೀ ದಿನ ಬೆಳಿಗ್ಗೆ ತಮ್ಮ ಸಹಾಯಕರ ನೆರವಿನಿಂದ ಹೊಟೇಲಿನಿಂದ ಹತ್ತು ಇಡ್ಲಿ ತರಿಸಿ, ಅವುಗಳಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿನ್ನಲ್ಲು ಎತ್ತಿಟ್ಟು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು ಮತ್ತು ಇದೇ ಪದ್ಧತಿಯನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು ಎನ್ನುವುದು ಗಮನಾರ್ಹವಾಗಿದೆ

vc1

ಅಧ್ಯಾಪಕ ವೃತ್ತಿಯೊಂದಿಗೆ ಶಾಸ್ತ್ರೀಯ ಸಂಗೀತದಲ್ಲೂ ಅಪಾರವಾದ ಪರಿಣಿತಿ ಹೊಂದಿದ್ದ ವಿಸೀ ಅವರು ಶಾಸ್ತ್ರೀಯ ಸಂಗೀತವನ್ನು ಹೆಸರಾಂತ ಮೈಸೂರು ವಾಸುದೇವಾಚಾರ್ಯ ಅವರಲ್ಲಿ ಅಭ್ಯಸಿಸಿದ್ದರು. ತಾವು ರಚಿಸಿದ ಕನವನಗಳಿಗೆ ತಾವೇ ರಾಗ ಹಾಕಿ ಬಹಳ ಸುಶ್ರಾವ್ಯವಾಗಿ ಹಾಡುವಂತಹ ಪ್ರತಿಭೆ ಅವರಲ್ಲಿತ್ತು. ಸಹನ ಶೀಲ ವ್ಯಕ್ತಿ, ವಿನಯವಂತ, ಬುದ್ಧಿವಂತ, ಸ್ನೇಹಜೀವಿ ವಿದ್ವಾಂಸ, ಆತ್ಯುತ್ತಮ ವಾಗ್ಮಿ, ಉದಾರಿ, ಹೀಗೆ ವಿಸೀಯವರ ಬಗ್ಗೆ ಹೇಳುತ್ತಾ ಹೋದರೆ ಪುಟಗಟ್ಟಲೆ ಬರೆಯುತ್ತಲೇ ಹೋಗಬಹುದು.

ಸ್ವತಂತ್ರ ಪ್ರವೃತ್ತಿಯ ಕಾವೇ ಧೈರ್ಯವಾಗಿ ನುಡಿಯಬಹುದಾದ ಮಾತುಗಳನ್ನು 1931ರಲ್ಲಿಯೇ ಪ್ರಥಮ ಕವನಸಂಕಲನದಲ್ಲಿಯೇ ಹೃದಯಂಗಮವಾಗಿ ವಿವರಿಸಿ ನುಡಿದು ಅವರು ಯುವಕರ ಮನಸ್ಸನ್ನು ಗೆದ್ದರು. ಅವರ ಈ ಸಂಕಲನದಲ್ಲಿ ಪಡೆದ ಯಶಸ್ಸು ಶಾಶ್ವತವಾಗಿ ಅವರನ್ನು ನಮ್ಮ ಹಿರಿಯ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿತು. ‘ಪ್ರಶ್ನೆ’, ‘ಚಿತ್ತ’, ‘ಯಾನ’, ‘ಸಮಭೂಮಿ’, ‘ಮಧುಮಾಸ’, ’ವೀಣಾಗಾನ’, ‘ಸ್ನೇಹ’, ‘ಕೋಗಿಲೆ’ ಮುಂತಾದ ಬಲು ಸೊಗಸಾದ ಕವನಗಳು ಈಗಲೂ ಗಾನಮಾಧುರ್ಯವನ್ನು ಬಿಂಬಿಸುತ್ತಿವೆ. ಭಾವವಿಸ್ತಾರವನ್ನು ಚಿತ್ರಿಸುತ್ತಿವೆ. ಸ್ನೇಹದ ಪೂರ್ಣ ಪ್ರಭಾವವನ್ನು ಅರಿತಿದ್ದ, ಬಹು ಗಾಢವಾದ ಸ್ನೇಹವನ್ನು ಪಡೆದಿದ್ದ ಅವರ “ಸ್ವರ್ಗದೊಳಗೀ ಸ್ನೇಹ ದೊರೆವುದೇನೂ” ಎಂಬ ಸಾಲು ಇಂದಿಗೂ ಅನುರಣವಾಗುತ್ತಿದೆ. ಪ್ರಸಿದ್ಧ ವೈಣಿಕ ವಿದ್ವಾಂಸರಾದ ವೀಣೆ ವೆಂಕಟಗಿರಿಯಪ್ಪನವರ ವಾದನವನ್ನು ಕೇಳಿ ಬರೆದ ‘ವೀಣಾಗಾನ’ ಬಹು ಅಪರೂಪದ ಕವನ.

ಹೀಗೆ ಪ್ರಾರಂಭವಾದ ವಿ,ಸೀ ಅವರ ಕವನರಚನೆ ಕನ್ನಡದ ಕೆಲವು ಅತ್ಯಂತ ಶ್ರೇಷ್ಠವಾದ ಕವನಗಳನ್ನು ಸೃಷ್ಟಿಸಿವೆ. ‘ಮೃಗಶಾಲೆಯ ಸಿಂಹಗಳು’, ‘ಅಭೀಹಿ’, ‘ಮನೆ ತುಂಬಿಸುವುದು’, ‘ಗಡಿದಾಟು’, ‘ಶಿಲ್ಪಿ’, ‘ಕ್ರೋಧಕೇತನ’, ‘ಕಸ್ಮೈದೆವಾಯ’, ‘ಬಾಳಹೆದ್ದಾರಿ’, ‘ಪುರಂದರದಾಸರು’ ಮುಂತಾದ ಅತ್ಯುತ್ತಮ ಕವನಗಳು ವಿ.ಸೀ. ಯವರ ಇಂತರ ಕವನ ಸಂಕಲನಗಳಿಂದಲೂ ದೊರೆಯುವ ಮಣಿಗಳು. ’ಅರಲು-ಬದಲು’ ಕವನ ಸಂಕಲನದ ಮುನ್ನುಡಿಯಲ್ಲಿ ಅವರ ಮಾತುಗಳು ಹೃದಯ ಸ್ಪರ್ಶಿಯಾಗಿವೆ. “ಸಂಸ್ಕಾರದ ಪರಂಪರೆಯನ್ನು ಗುರುತಿಸಲಾರದ ಜನ ಏನೇನೋ ಹೇಳಿ ಹಾರಾಡಬಹುದು. ಕಾವ್ಯದ ಹೃದಯದ ಅನ್ವೇಷಣೆ, ಸೌಂದರ್ಯದ ಸಮೀಕ್ಷೆ ಅಷ್ಟೊಂದು ಸುಲಭವಾಗಿ ಕೈಗತವಾಗುವ ವಸ್ತುವಲ್ಲ” ಎಂದಿದ್ದಾರೆ. ಬಹು ನವಿರಾದ ಈ ಬರಹ ಅವರ ಮಾಗಿದ ಪರಿಣತಿಯ ಫಲ.

“ವಿಮರ್ಶೆ ಒಂದು ಟಾರ್ಚ್ ಲೈಟ್ ಆಗಬೇಕು. ಸಿಕ್ಕಿದ್ದನ್ನೆಲ್ಲ ಮಣ್ಣು ಮುಕ್ಕಿಸುವ ಜಡ್ಜಿಯ ತೀರ್ಪಾಗಬಾರದು” ಎಂಬುದು ಅವರು ಆಗಾಗ ಹೇಳುತ್ತಿದ್ದ ಮಾತು. ಇಂಥ ಉನ್ನತ ಚಿಂತನೆಯ ಮತಿಯಿಂದ ಅವರು ರಚಿಸಿರುವ ಎರಡು ಮೂರು ವಿಮರ್ಶಾ ಗ್ರಂಥಗಳು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿರುತ್ತದೆ. ‘ಕರ್ನಾಟಕ ಕಾದಂಬರಿ’, ‘ಅಭಿಜ್ಞಾನ ಶಾಕುಂತಲ ನಾಟಕ’, ‘ಅಶ್ವತ್ಥಾಮನ್’ – ಈ ಮೂರೂ ಆಯಾ ವಿಷಯವನ್ನೇ ಕುರಿತ ಕನ್ನಡ ಗ್ರಂಥಗಳಲ್ಲಿ ಶಿಖರಪ್ರಾಯವಾಗಿವೆ.

ವಿ.ಸೀ ನಾಲ್ಕು ಸ್ವಂತ ನಾಟಕಗಳನ್ನೂ, ಎರಡು ಇಂಗ್ಲೀಷ್ ನಾಟಕಗಳ ಅನುವಾದಗಳನ್ನೂ ರಚಿಸಿದ್ದಾರೆ. ‘ಸೊಹ್ರಾಬ್ –ರುಸ್ತುಂ’ ಮ್ಯಾಥ್ಯೂ ಅರ್ನಾಲ್ದನ ಕವಿತೆಯ ನಾಟಕ ರೂಪಕ. ‘ಆಗ್ರಹ’ ಭಾರತ ಸೌಪ್ತಿಕ ಪರ್ವದ ಕಥೆಯ ಅಶ್ವತ್ಥಾಮನನ್ನು ಚಿತ್ರಿಸುವ ರೂಪಕ. ‘ಚ್ಯವನ’ ಆಧುನಿಕ ಜೀವನದ ಸಮಸ್ಯೆಯನ್ನು ಆಧರಿಸಿ ರಚಿತವಾಗಿರುವ ನಾಟಕ. ‘ಶ್ರೀಶೈಲ ಶಿಖರ’ ಅವರ ಮಿತ್ರರು ಹೇಳಿದ ಕಥೆಯ ರೂಪಾಂತರ. ಒಂದು ಹೆಣ್ಣಿನ ಬಾಳು, ಭಾವನೆಗಳ ಅಂತರಂಗವನ್ನು ಚಿತ್ರಿಸುವ ಈ ನಾಟಕ ಬಹು ಬೆಲೆ ಬಾಳುವ ತತ್ವವನ್ನು ಸಾರುತ್ತದೆ.

vc3

1973 ರಲ್ಲಿ ತಮ್ಮ “ಅರಲು-ಬರಲು” ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿತು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಮತ್ತು ಭಾರತೀಯ ಜ್ಞಾನಪೀಠ ಪ್ರಶಸ್ತಿ ಸಲಹಾ ಮಂಡಲಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರು ಹಿಂದೂ ಪತ್ರಿಕೆಯಲ್ಲಿ ಕನ್ನಡ ಸಾಹಿತಿಗಳ ಮತ್ತು ಕನ್ನಡ ಸಾಹಿತ್ಯದ ಅರಿವನ್ನು ಅನ್ಯ ಭಾಷಿಕರಿಗೆ ತಿಳಿಸಲು ಸಂಪಾದಿಸಿರುವ ಲೇಖನಗಳೂ ಅಭೂತಪೂರ್ವ.

ವಿಸೀ ಯವರು 1983 ಸೆಪ್ಟಂಬರ್ 4 ರಂದು ನಿಧನ ಹೊಂದಿದರಾದರೂ ಅವರ ಬರೆದ ನೂರಾರು ಗೀತೆಗಳ ಮೂಲಕ ನಮ್ಮೆಲ್ಲರ ನಡುವೆಯೇ ಇದ್ದಾರೆ. . ವಿ.ಸೀ ಕೊನೆಯತನಕ ನಗು ಮುಖವನ್ನು ಜಗತ್ತಿಗೆ ತೋರಿಸಿದರು. ಕಹಿ, ನೋವು, ಕಟಕಿಗಳನ್ನು ನುಂಗಿಕೊಂಡು ಬದುಕಿದರು. ಅವರ ಶಿಷ್ಯವಾತ್ಸಲ್ಯ, ಗುರುಗೌರವ, ಅಧ್ಯಯನ, ಅಧ್ಯಾಪನ, ಕಲಾಸ್ವಾದನೆ, ಎಟುಕದದುರ ಕಡೆಗೆ ಕೈಚಾಚಿ ಗೆಲ್ಲಬೇಕೆಂಬ ಸಾಹಸ, ಗೆದ್ದಾಗ, ಅದನ್ನು ಡಂಗುರ ಹಾಕಿ ಸಾರದ ವಿನೀತಗುಣ ಇತ್ಯಾದಿಗಳಿಂದ ಅವರು, ಅವರು ಅವರ ಕಾರ್ಯಗಳನ್ನೆಲ್ಲ ಮೀರಿದ ದೊಡ್ಡ ಚೈತನ್ಯವಾಗಿದ್ದರು. ಹಾಗಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳು.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s