ನಾನಿಂದು ದೇಶದ ಕಾಫೀ ಕಣಜ ಕೊಡಗಿಗೆ ಕಛೇರಿಯಿಂದ ವಿಹಾರ್ಥವಾಗಿ ಬಂದಿದ್ದೆ. ಎಲ್ಲರಂತೆ ಸುಮ್ಮನೇ ಜಾಗಗಳನ್ನು ನೋಡುತ್ತ ಹೋಗದೇ, ಅಲ್ಲಿಯ ಸಂಸ್ಕೃತಿ, ಇತಿಹಾಸ, ಭಾಷೆ ಜನರ ಬಗ್ಗೆ ತಿಳಿಯುವುದು ನನ್ನ ವಾಡಿಕೆ. ಒಂದು ಪಕ್ಷ ಅದು ಕುತೂಹಲವಾಗಿದ್ದಲ್ಲಿ ಅದನ್ನು ಎಲ್ಲರೊಡನೆ ಹಂಚಿಕೊಳ್ಳುವ ಸ್ವಭಾವ ನನ್ನದು ಇಂದು ಕೊಡಗಿಗೆನ ಕುರಿತು ವಿಚಾರಿಸುತ್ತಿದ್ದಾಗ, ಸ್ವಾತಂತ್ರ್ಯಪೂರ್ವ ಕೊಡಗೇ ಒಂದು ಸಣ್ಣ ರಾಜ್ಯವಾಗಿದ್ದು ಕೊಡಗನ್ನು ಆಳುತ್ತಿದ್ದ ಚಿಕವೀರ ರಾಜೇಂದ್ರನನ್ನು ಟಿಪ್ಪು ಸುಲ್ತಾನ್ ಮೋಸದಿಂದ ಸೋಲಿಸಿ ಸಾವಿರಾರು ಕೊಡವರನ್ನು ಹತ್ಯೆಗೈದು ಕೊಡಗನ್ನು ಮೈಸೂರು ಸಂಸ್ಥಾನಕ್ಕೆ ಸೇರಿಸಿಕೊಂಡು ಕೊಡಗಿನ ರಾಜಧಾನಿಯನ್ನು ಝಫರಾಬಾದ್ ಎಂದು ನಾಮಕರಣ ಮಾಡಿದ್ದ ಎಂದು ಕೇಳುತ್ತಿದ್ದಹಾಗೆಯೇ, ಕೊಡಗಿನ ಕೊನೆಯ ರಾಜ ಚಿಕವೀರ ರಾಜೇಂದ್ರ ಕಾದಂಬರಿಯನ್ನು ಬರೆದ ಮಾಸ್ತಿಯವರ ನೆನಪಾಯಿತು. ಮಾಸ್ತಿ , ಕನ್ನಡಿಗರ ಆಸ್ತಿ ಎಂದೇ ಖ್ಯಾತಿ ಪಡೆದಿದ್ದ ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ನೂರಾರು ಕಥೆ, ಕವನಗಳನ್ನು ಬರೆದು ಸಣ್ಣ ಕಥೆಗಳ ಜನಕ ಎಂದೇ ಪ್ರಸಿದ್ಧರಾಗಿದ್ದ ಮಾಸ್ತಿ ವಂಕಟೇಶ ಐಯ್ಯಂಗಾರ್ ಅವರ ಕುರಿತು ತಿಳಿಯೋಣ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಎಂಬ ಗ್ರಾಮದಲ್ಲಿ ವಾಸವಾಗಿದ್ದ ಬಲು ಸಂಪ್ರದಾಯಸ್ಥರಾದ ಶ್ರೀ ರಾಮಸ್ವಾಮಿ ಅಯ್ಯಂಗಾರ್ ಮತ್ತು ಶ್ರೀಮತಿ ತಿರುಮಲ್ಲಮ್ಮ ದಂಪತಿಗಳಿಗೆ ಜೂನ್ 6, 1891 ಜನಿಸಿದರು. ಮಾಸ್ತಿಯವರ ಮನೆಯ ಆಡು ಭಾಷೆ ತಮಿಳಾದರೂ ಮಾಸ್ತಿಯವರು ಮಾತ್ರ ಪರಿಶುದ್ಧ ಕನ್ನಡಿಗರು. ಮಾಸ್ತಿ ವೆಂಕಟೇಶ ಅಯ್ಯಂಗಾರರ ಕುಟುಂಬವನ್ನು ಪೆರಿಯಾತ್ ಮನೆತನದವರು ಎಂದು ಕರೆಯುತ್ತಿದ್ದರು. ಅಂದರೆ ದೊಡ್ಡ ಮನೆಯವರು ಎಂದರ್ಥ. ಅದರೆ ಮಾಸ್ತಿಯವರು ಹುಟ್ಟುವ ಕಾಲಕ್ಕಾಗಲೇ ಆ ಸಿರಿತನವೆಲ್ಲಾ ಕರಗಿ ಹೋಗಿ ಮನೆಯಲ್ಲಿ ಕಡು ಬಡತನವಿತ್ತು. ಅವರ ವಿದ್ಯಾಭ್ಯಾಸ ಮಾಡಿಸುವುದಕ್ಕೂ ಬಹಳ ಕಷ್ಟದ ಪರಿಸ್ಥಿತಿ ಇತ್ತು. ಅವರ ಹಿರಿಯರು ನೂರಾರು ಜನರಿಗೆ ಊಟ ಹಾಕಿದ್ದರಾದರೂ, ಮಾಸ್ತಿಯವರು, ಇತರರ ಮನೆಗಳಲ್ಲಿ ವಾರಾನ್ನದ ಮೂಲಕ ತಮ್ಮ ವಿದ್ಯಾಭ್ಯಾಸವನ್ನು ತಮ್ಮ ಸಂಬಂಧಿಗಳ ಊರುಗಳಾದ ಹೊಂಗೇನಳ್ಳಿ, ಯಲಂದೂರು, ಶಿವಾರಪಟ್ಟಣ, ಮಳವಳ್ಳಿ, ಮೈಸೂರು, ಕಡೆಗೆ ಮದರಾಸು ಹೀಗೆ ನಾನಾ ಕಡೆಗಳಲ್ಲಿ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು ಇಷ್ಟೆಲ್ಲಾ ಕಷ್ಟಗಳಿದ್ದರೂ ಓದಿನ ವಿಷಯದಲ್ಲಿ ಅದು ಅಡ್ಡಿ ಬಾರದೇ, ಎಲ್ಲಾ ಪರೀಕ್ಷೆಗಳಲ್ಲಿಯೂ ಪ್ರಥಮ ಸ್ಥಾನ ಅವರ ಕಟ್ಟಿಟ್ಟ ಬುತ್ತಿಯಾಗಿತ್ತು. ಪ್ರೌಢ ವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಎಫ್.ಎ. ಅನ್ನು ಮಹಾರಾಜ ಕಾಲೇಜಿನಲ್ಲೂ ಮುಗಿಸಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ಮುಗಿಸಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಇಂಗ್ಲೀಷ್ ಎಂ.ಎ ಮಾಡಿಕೊಂಡ ಮಾಸ್ತಿಯವರು ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸುಮಾರು ಒಂದೂವರೆ ತಿಂಗಳು ಉಪಾಧ್ಯಾಯರಾಗಿದ್ದು ನಂತರ ಬೆಂಗಳೂರಿಗೆ ಹಿಂತಿರುಗಿ, ಸಿವಿಲ್ ಪರೀಕ್ಷೆಗೆ ಕುಳಿತು ಅಲ್ಲಿಯೂ ಪ್ರಥಮರಾಗಿ ತೇರ್ಗಡೆಯಾಗಿ, ಅಂದಿನ ಮೈಸೂರು ಸರ್ಕಾರದಲ್ಲಿ ಅಸಿಸ್ಟೆಂಟ್ ಕಮೀಶನರಾಗಿ ಕೆಲಸಕ್ಕೆ ಸೇರಿಕೊಂಡರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್, ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ಡೆ, ಪ್ಯುಟಿ ಕಮೀಷನರ್ , ಎಕ್ಸೈಜ್ ಕಮೀಷನರ್ ಹೀಗೆ ನಾನಾ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ1943ರಲ್ಲಿ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತಿ ಪಡೆದು ತಮ್ಮ ವಿಶ್ರಾಂತ ಜೀವನವನ್ನು ಸಂಪೂರ್ಣವಾಗಿ ಕನ್ನಡ ನಾಡು ನುಡಿಯ ಸೇವೆಗೆಂದೇ ಮೀಸಲಾಗಿಟ್ಟರು.
ಮಾಸ್ತಿಯವರು ಡಿಸಿಯಾಗಿ ಮಾಡಿದ್ದ ಜನಪರ ಕೆಲಸಕ್ಕೆ ಕುರಿತಾದ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳಲೇ ಬೇಕು.
ಅದೊಮ್ಮೆ, ಧರ್ಮಸ್ಥಳದ ಲಕ್ಷ ದೀಪೋತ್ಸವದ ಸಮಯದಲ್ಲಿ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲು ಮಾಸ್ತಿಯವರನ್ನು ಕೇಳಿಕೊಳ್ಳಲಾಗಿತ್ತು. ಅವರ ಆಹ್ವಾನವನ್ನು ಮನ್ನಿಸಿ ಮತ್ತೊಬ್ಬ ದಿಗ್ಗಜ ಶ್ರೀಯುತ ಜಿ. ಪಿ. ರಾಜರತ್ನಂ ಅವರೊಂದಿಗೆ ಒಂದು ಕಾರಿನಲ್ಲಿ ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಹಾಗೆ ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಇಬ್ಬರಿಗೂ ಬಾಯಾರಿಕೆಯಾಗಿ ಹಾಂದಿ ಎನ್ನುವ ಊರಿನ ಬಳಿ ಬಾವಿಯಲ್ಲಿ ನೀರನ್ನು ಸೇದುತ್ತಿದ್ದವರೊಬ್ಬರನ್ನು ನೋಡಿ, ಚಾಲಕನಿಗೆ ಗಾಡಿ ನಿಲ್ಲಿಸಲು ತಿಳಿಸಿ ನೀರು ಕುಡಿಯಲು ಬಾವಿಯ ಬಳಿ ಮಾಸ್ತಿಯವರು ಹೋದರು. ಅಲ್ಲಿ ಒಂದು ಹರಿದಿರುವ ಪಂಚೆ, ಒಂದು ಹೊಲೆಸಿರುವ ಬನಿಯನ್ ದರಿಸಿಕೊಂಡು ಒಬ್ಬ ವಯಸ್ಸಾದವರು ನೀರು ಸೇದುತ್ತಿದ್ದರು, ಮಾಸ್ತಿಯವರು ಆವರ ಬಳಿ ಹೋಗಿ, ಅಯ್ಯಾ ಕುಡಿಯಲು ಸ್ವಲ್ಪ ನೀರು ಸಿಗಬಹುದೇ ಎಂದು ದೈನ್ಯದಿಂದ ಕೇಳಿದರು. ಮಾಸ್ತಿಯವರತ್ತ ನೋಡಿದ ಆ ಮನುಷ್ಯ, ಬಾವಿಯಿಂದ ಒಂದು ಕೊಡ ನೀರು ಸೇದಿ, ಅದನ್ನು ಮಾಸ್ತಿಯವರಿಗೆ ನೀಡದೆ, ಆ ನೀರನ್ನು ಅಲ್ಲಿಯೇ ಪಕ್ಕದಲ್ಲಿಟ್ಟಿದ ನೀರಿನ ತೊಟ್ಟಿ ಸುರಿದ, ಅದನ್ನು ಕಂಡ ಮಾಸ್ತಿಯವರು ಒಂದು ಕ್ಷಣ ವಿಚಲಿತರಾದರೂ ಅದನ್ನು ತೋರಿಸಿ ಕೊಳ್ಳದೇ ಮತ್ತೊಮ್ಮೆ ನೀರನ್ನು ಕೇಳಿದರು. ಆಷ್ಟರಲ್ಲಾಗಲೇ ಮತ್ತೊಂದು ಕೊಡ ನೀರನ್ನು ಸೇದಿದ ಆ ಮನುಷ್ಯ, ಸಾಮಿ ಬನ್ರೀ, ನೀರು ನೀರು ಅಂದ್ರಲ್ಲ, ಬನ್ನಿ ಎಷ್ಟು ಬೇಕೋ ಅಷ್ಟು ಕುಡ್ಕಳಿ ಎಂದ.
ನೀರಡಿಕೆಯಲ್ಲಿದ್ದ ಮಾಸ್ತಿಯವರು ಕೂಡಲೇ ಬೊಗಸೆ ಒಡ್ಡಿ ಗಟ ಗಟನೆ ನೀರು ಕುಡಿದರು. ನೀರು ಕುಡಿದ ಮೇಲೆ ಉಳಿದ ನೀರನ್ನು ಆ ಮನುಷ್ಯ ಮತ್ತೆ ಪಕ್ಕದ ನೀರಿನ ತೊಟ್ಟಿಗೆ ಹಾಕಿದ್ದನ್ನು ಗಮನಿಸಿದ ಮಾಸ್ತಿಯವರು ತಮ್ಮ ಬಾಯಾರಿಕೆಯನ್ನು ನಿವಾರಿಸಿದವರಿಗೆ ಹಣ ಕೊಡಲು ಹೋದಾಗ, ಆ ಮನುಷ್ಯ ಹಣ ಪಡೆಯಲು ನಿರಾಕರಿಸಿ, ಅಲ್ಲ ಸಾಮಿ ನಾವು ಕುಡಿಯೋ ನೀರ್ಗೆ ದುಡ್ಡಿಸ್ಕಂಡ್ರೆ ಆ ದೇವ್ರಂತ ವ್ಯಕ್ತಿಗೆ ಅನ್ಯಾಯ ಮಾಡ್ದಂಗೆ, ಶಿವ ಮೆಚ್ಚತಾನ ಬುದ್ದಿ ಎಂದ.
ಅದಕ್ಕೆ ಮಾಸ್ತಿ ಅವರು ಯಾರಪ್ಪ ಆ ಪುಣ್ಯಾತ್ಮ ಎಂದು ಕೇಳಿದರು, ಅದಕ್ಕೆ ಆ ರೈತ,
ನೋಡಿ ಸಾಮಿ, ನಮ್ಮೂರ್ನಾಗೆ ಹಿಂದೆ ಬರ್ಗಾಲ ಬಂದಿತ್ತು, ಆಗ ಕುಡಿಯಾಕೆ ನೀರಿರಲಿಲ್ಲ, ಆಗ ನಮ್ಮ ಚಿಕ್ಕ್ಮಗಳೂರ್ನಾಗೆ ಒಬ್ರು ಡಿಸಿ ಇದ್ದರು ಸಾಮಿ, 3 ನಾಮ ಹಾಕ್ಕಳರು, ವಯ್ಯಸ್ಸೂ ಆಗಿತ್ತು ಸಾಮಿ, ಆ ಪುಣ್ಯಾತ್ಮಂತಕೆ ಹೋಗಿ, ಹಿಂಗಿಂಗೆ, ಊರ್ಗೆ ಬರ್ಗಾಲ ಬಂದೈತೆ, ಒಂದು ಬಾವಿ ತೋಡ್ಸಿ ಕೊಡಿ ಸಾಮಿ ಅಂತ ಕೇಳ್ದ್ವು, ಅದಕ್ಕೆ ನೋಡ್ರೀ ನೀವು ಮನುಷ್ಯರು, ಬಾಯೈತೆ, ನೀವು ಮಾತಾಡ್ತೀರ, ಈಗ ಬಾವಿ ಬೇಕಂತ ಕೇಳ್ತೀರಾ, ಬಾವಿ ತಗೆಸಿ ಕೊಡ್ತೇನೆ, ಆದ್ರೆ ಪಕ್ಕದಲ್ಲಿ ತೊಟ್ಟಿಯೊಂದನ್ನು ನಿರ್ಮಿಸಿ, ನೀವು ಒಂದು ಬಿಂದಿಗೆ ನೀರು ಸೇದಿಕೊಂಡರೆ, ಖಡ್ಡಾಯವಾಗಿ ಮತ್ತೊಂದು ಕೊಡ ನೀರನ್ನು ಆ ತೊಟ್ಟಿಗೆ ನೀರನ್ನು ಸೇದಿ ಹಾಕಬೇಕು. ಯಾಕೆಂದ್ರೆ,ಮೂಕ ಪ್ರಾಣಿಗಳಾದ ದನ ಕರು, ಪ್ರಾಣಿ ಪಕ್ಷಿಗಳಿಗೂ ಬರ್ಗಾಲವೇ ಅಲ್ವಾ ? ಅವಕ್ಕೂ ನೀರು ಬೇಕಲ್ವಾ ? ಹಂಗಾಗಿ ನೀವು ಒಂದು ಕೊಡ ನೀರು ಸೇದಾಕ್ತೀವಿ ಅಂತಾ ಭಾಷೆ ಕೊಟ್ಟಾದ್ಮೇಲೇನೇ ಈ ಬಾವಿ ತಗೆಸಿ ಕೊಟ್ಟವ್ರೇ ಬುದ್ದಿ ಎಂದು ಹೇಳುತ್ತಲೇ ಹೋದ, ಮಾಸ್ತಿಯವರಿಗೆ ಹೃದಯ ತುಂಬಿ ಬಂದು ಬಾಯಿಯಿಂದ ಮಾತೇ ಹೊರಡಾದಾಗಿತ್ತು
ಏಕೆಂದರೆ ಅದೆಂದೋ ಚಿಕ್ಕಮಗಳೂರಿನ ಡಿಸಿ ಆಗಿದ್ದ ಸಮಯದಲ್ಲಿ ಸರ್ಕಾರದ ಖರ್ಚಿನಲ್ಲಿ ಜನರಿಂದ ಭಾಷೆ ತೆಗೆದುಕೊಂಡು ತೋಡಿಸಿದ್ದ ಭಾವಿ ಅದಾಗಿತ್ತು. ಎಷ್ಟೋ ವರ್ಷಗಳು ಕಳೆದರೂ ಅಲ್ಲಿಯ ಜನ ಅವರು ಕೊಟ್ಟಿದ ಭಾಷೆಯನ್ನು ಮರೆಯದೆ ಅದನ್ನು ಪಾಲಿಸುತ್ತಿದ್ದ ಆ ಜನರ ಪ್ರಾಮಾಣಿಕತೆ ಮತ್ತು ಮುಗ್ದತೆ ಅವರನ್ನು ಮೂಕವಿಸ್ಮಿತರಾಗಿಸಿತ್ತು. ಅಲ್ಲಿಂದ ಸುಮ್ಮನೇ ಬಂದು ಕಾರಿನಲ್ಲಿ ಕುಳಿತು ನಡೆದದ್ದೆಲ್ಲವನ್ನೂ ಜಿಪಿ ರಾಜರತ್ನಂ ಅವರಲ್ಲಿ ಹೇಳಿದರು, ಅದಕ್ಕೆ ರಾಜರತ್ನಂ ಅವರು ನೀವೇ ಆ ಡಿಸಿ ಎಂದು ಆ ವ್ಯಕ್ತಿಗೆ ಹೇಳಬೇಕಿತ್ತು,ಆತ ಬಹಳವಾಗಿ ಖುಷಿ ಪಡುತ್ತಿದ್ದ ಎಂದಾಗ,
ನಾನೇನು ಧರ್ಮಾರ್ಥ ಮಾಡಲಿಲ್ಲ, ಸರ್ಕಾರದ ಹಣದಿಂದ ಮಾಡಿಸಿದೆ ಹೊರತು ನನ್ನ ಕಿಸೆಯ ಹಣದಿಂದಲ್ಲ, ನನ್ನ ಕೆಲಸಕ್ಕೆ ನಾನು ತಕ್ಕ ಸಂಬಳ ಪಡೆದಿದ್ದೇನೆ, ಆ ರೈತನ ಮುಗ್ದತೆ, ಪ್ರಾಮಾಣಿಕತೆಯ ಮುಂದೆ ನನ್ನ ಕೆಲಸ ಏನೇನೂ ಅಲ್ಲ, ಜೊತೆಗೆ ನಾನೇ ಆ ಡಿಸಿ ಎಂದು ಹೇಳಿದರೆ ಆ ರೈತನಿಗೆ ತಳಮಳವೂ ಶುರುವಾಗುವುದು ಎಂದು ಮಾಸ್ತಿಯವರು ಹೇಳಿದರು.
ಕವಿತೆ, ಪ್ರಬಂಧ ಇವುಗಳನ್ನೂ ಬರೆದರು, ನಾಟಕಗಳನ್ನೂ ರಚಿಸಿದರು. ಅವರ ಎಲ್ಲ ಕೃತಿಗಳಲ್ಲೂ ಕುಶಲತೆ, ಸೌಮ್ಯತೆ, ಜೀತಮ್ಮ ಕೆಲಸಗಳ ಮಧ್ಯೆಯೇ ಮಾಸ್ತಿಯವರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದರು. ಎಂಥ ಕಷ್ಟ ಕಾಲದಲ್ಲೂ ಎದೆಗುಂದದೇ, ಜೀವನವನ್ನು ಎದುರಿಸಿದರು ಕೇವಲ ಸಾಹಿತ್ಯ ರಚನಕಾರರಲ್ಲದೇ, ಸಾಹಿತ್ಯ ಪೋಷಕರಕರೂ ಆಗಿದ್ದರು. ಜಿ ಪಿ ರಾಜರತ್ನಂ ಮತ್ತು ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. ಬಹುತೇಕ ಸಾಹಿತಿಗಳಿಗೆ ಮಾಸ್ತಿಯವರು ಅಣ್ಣ ಮಾಸ್ತಿಯಾಗಿದ್ದರೆ, ವರಕವಿ ದ ರಾ ಬೇಂದ್ರೆಯವರು ಮಾಸ್ತಿಯವರನ್ನು ಹಿರಿಯಣ್ಣನೆಂದೇ ಸಂಬೋಧಿಸುತ್ತಿದ್ದ್ರರು ಮತ್ತೆ ಅಷ್ಟೇ ಗೌರವಿಸುತ್ತಿದ್ದರು. 1910ರಲ್ಲಿ ಬರೆದ ರಂಗನ ಮದುವೆ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ 123. ಅವುಗಳಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. ಸಣ್ಣ ಕತೆಗಳ ರಚನೆ ಅವರು ಪ್ರಧಾನವಾಗಿ ಆರಿಸಿಕೊಂಡ ಸಾಹಿತ್ಯ ಪ್ರಕಾರ. ಶ್ರೀನಿವಾಸ ಎಂಬ ಕಾವ್ಯನಾಮದಲ್ಲಿ ಮಾಸ್ತಿ ನೂರಾರು ಸಣ್ಣ ಕತೆಗಳನ್ನು ಬರೆದರು. ಹಲವಾರು ಕಥಾ ಸಂಕಲನಗಳನ್ನು ಪ್ರಕಟಿಸಿದರು. ಕಥೆ ಹೇಳುವುದರಲ್ಲಿ ಮಾಸ್ತಿ ಎತ್ತಿದ ಕೈ. ಅವರ ಕಥೆಗಳನ್ನು ಓದುತ್ತಿದ್ದರೆ ಅವು ಕಣ್ಣಿಗೆ ಕಟ್ಟಿದಂತಿರುತ್ತವೆ. ಸುಬ್ಬಣ್ಣ ಅವರ ಒಂದು ಖ್ಯಾತ ನೀಳ್ಗತೆ. ಅಪಾರ ಮಾನವೀಯ ಅಂತಃಕರಣವನ್ನು ಕತೆಯಲ್ಲಿ ತುಳುಕಿಸಿದ ಅವರು ಕಥೆಗಳ ರಚನೆಗೆ ಬಳಸಿದ ತಂತ್ರ ಅಪರೂಪದ್ದಾಗಿದೆ. ಸಣ್ಣ ಕಥೆಗಳ ಜನಕರೆಂದೇ ಅವರನ್ನು ಕರೆಯುತ್ತಿದ್ದ ರು. ಕಥೆ ಹೇಳುವುದು ಒಂದು ಪುಣ್ಯದ ಕೆಲಸವೆಂದು ಅವರು ಭಾವಿಸಿದ್ದರು. ಮಾಸ್ತಿ ಕಥೆಗಳನ್ನು ಬರೆದಂತೆಯೇ ಕಾದಂಬರಿ,ವನ ದರ್ಶನಗಳನ್ನು ಸ್ಪಷ್ಟವಾಗಿ ಕಾಣಬಹುದು. “ಭಾರತತೀರ್ಥ”, “ಆದಿಕವಿ ವಾಲ್ಮೀಕಿ” ಇವು ಭಾರತ ರಾಮಾಯಣಗಳನ್ನು ಕುರಿತು ಬರೆದಿರುವ ಗ್ರಂಥಗಳಾದರೆ “ಶ್ರೀರಾಮ ಪಟ್ಟಾಭಿಷೇಕ” ಅವರ ಒಂದು ಕಾವ್ಯ. ರವೀಂದ್ರನಾಥ ಠಾಕೂರ್, ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆಗಳನ್ನೂ, ಪುರಂದರದಾಸ, ಕನಕದಾಸ, ಅನಾರ್ಕಳಿ, ತಿರುಪಾಣಿ, ಶಿವಾಜಿ ಮೊದಲಾದ ನಾಟಕಗಳನ್ನೂ, ಷೇಕ್ಸ್‌ಪಿಯರನ ನಾಟಕಗಳ ಅನುವಾದಗಳನ್ನೂ ಮಾಸ್ತಿ ಪ್ರಕಟಿಸಿದ್ದಾರೆ.ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ಚಿಕವೀರ ರಾಜೇಂದ್ರ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”. “ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥಮುಖ್ಯ ಕೃತಿಗಳು. ಅವರ ಕಾಕನಕೋಟೆ ಚಲನಚಿತ್ರವಾಗಿ ಅತ್ಯಂತ ಜನಪ್ರಿಯವೂ ಆಗಿ ಅನೇಕ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತು.
ಮಾಸ್ತಿಯವರಿಗೆ ಹಲವು ಬಗೆಯ ಪ್ರಶಸ್ತಿಗಳು ಹುಡುಕಿ ಕೊಂಡು ಬಂದಿದ್ದವು,
- ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್
- ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್
- 1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
- ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು.
- 1946ರಲ್ಲಿ ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ
- 1953ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ
- 1968ರಲ್ಲಿ ಅವರ ಕಥೆಗಳ ಸಂಕಲನಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- 1983ರಲ್ಲಿ ಚಿಕವೀರ ರಾಜೇಂದ್ರ ಕಾದಂಬರಿಗಾಗಿ ಕನ್ನಡಕ್ಕೆ ನಾಲ್ಕನೇಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಜೀವನ ಪರ್ಯಂತ ಕನ್ನಡ ಸೇವೆಯನ್ನು ಮಾಡಿದ ಮಾಸ್ತಿಯವರು ಮಾಸ್ತಿ ಎಂದರೆ ಕನ್ನಡದ ಆಸ್ತಿ ಎಂಬ ಬಿರುದಾವಳಿಯೂ ಇತ್ತು, ಅಂತಹ ಮೇರು ಉತ್ತುಂಗದ ಲಯದಲ್ಲಿದ್ದ ಜೂನ್ 6-1983 ರಂದು ನಿಧನ ಹೊಂದಿದರು. ಮತ್ತೊಂದು ಗಮನಿಸಬೇಕಾದ ಅಂಶವೆಂದರೆ. ಅವರು ಹುಟ್ಟಿದ್ದು ಮತ್ತು ನಿಧನರಾದದ್ದು ಜೂನ್ 6ರಂದೇ. ಹೀಗೆ ಹುಟ್ಟು-ಸಾವಿನಲ್ಲೂ ಒಂದು ರೀತಿಯ ದಾಖಲೆಯನ್ನೇ ಸೃಷ್ಟಿಸಿ ಹೋದಂತಹವರು ನಮ್ಮ ಮಾಸ್ತಿ. ಎಷ್ಟೇ ಅಧಿಕಾರವಿದ್ದರೂ ತಮ್ಮ ಬಾಲ್ಯದ ಬಡತನವನ್ನು ಮರೆಯದೆ ಅಧಿಕಾರದ ಮದವನ್ನು ತಲೆಗೆ ಏರಿಸಿಕೊಳ್ಳದೆ, ಜನರಿಗಾಗಿ ಮತ್ತು ಕನ್ನಡ ಸಾಹಿತ್ಯಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಿಟ್ಟ ಧೀಮಂತ ವ್ಯಕ್ತಿ ನಮ್ಮ ಮಾಸ್ತಿ. ಹಾಗಾಗಿಯೇ ಅವರು ನಮ್ಮ ಕನ್ನಡದ ಆಸ್ತಿ. ಅದಕ್ಕಾಗಿಯೇ ಅವರು ನಮ್ಮ ಹೆಮ್ಮೆಯ ಕನ್ನಡ ಕಲಿಗಳು.
ಏನಂತೀರೀ?
ಚೆನ್ನಾಗಿ ವಿವಿಸಿದ್ದೀರಿ
LikeLike
ನಿಜ, ಅವರ ಕಾಲದಲ್ಲಿ ಕಾಣುತ್ತಿದ್ದ ಜೀವನದ ಮೌಲ್ಯಗಳನ್ನು ಈಗ ಕಾಣುವುದು ಕಷ್ಟ. ಅವರು ಯೋಚನೆ ಮಾಡುತ್ತಿದ್ದ ರೀತಿಯೇ ಬೇರೆಯಾಗಿತ್ತು. ಜೀವನದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅದಕ್ಕೆ ಒಂದು ಉದಾಹರಣೆ. ಮಾಸ್ತಿಯವರು ಶಿಸ್ತು ಮತ್ತು ಅಚ್ಚುಕಟ್ಟುತನದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಒಮ್ಮೆ ಪತ್ರಕರ್ತರಾಗಿದ್ದ ಗರುಡನಗಿರಿ ನಾಗರಾಜ್ ಅವರು ಗವೀಪುರದಲ್ಲಿದ್ದ ಮಾಸ್ತಿಯವರ ಮನೆಗೆ ಹೋಗಿದ್ದರು. ಮಾಸ್ತಿಯವರ ಜೊತೆ ಮಾತುಕತೆ ಆದಮೇಲೆ ಗರುಡನಗಿರಿ ನಾಗರಾಜ್ ಮನೆಯಿಂದ ಹೊರಟರು. ಮಾಸ್ತಿಯವರೂ ಬಾಗಿಲವರೆಗೆ ಬಂದು ಬೀಳ್ಕೊಟ್ಟರು. ಆದರೆ ಗರುಡನಗಿರಿ ನಾಗರಾಜರು ಕಾಂಪೌಂಡಿನ ಗೇಟ್ ಹಾಕದೆ ಹಾಗೇ ಹೋಗುತ್ತಿದ್ದರು. ಆಗ ಮಾಸ್ತಿಯವರು ನಾಗರಾಜ್ ಅವರನ್ನು ಕರೆದು ನೀವು ಬರುವಾಗ ಗೇಟ್ ಹಾಕಿತ್ತಲ್ವ ಅಂತ ಕೇಳಿದರು. ಹೌದು ಸಾರ್ ಯಾಕೆ ಅಂದರು ನಾಗರಾಜ್. ನೀವು ಹೋಗುವಾಗ ಗೇಟ್ ಹಾಕದೆ ಹಾಗೇ ಹೋಗುತ್ತಿದ್ದೀರಿ. ಕಾಂಪೌಂಡ್ ಒಳಗೆ ನಾವು ಗಿಡಗಳನ್ನು ಹಾಕಿದ್ದೀವಿ. ಗೇಟ್ ತೆಗೆದಿರುವುದರಿಂದ ಹಸುಗಳು ಬಂದು ಗಿಡಗಳನ್ನೆಲ್ಲ ಹಾಳು ಮಾಡುತ್ತೆ. ಆದ್ದರಿಂದ ನೀವು ಹೋಗುವಾಗ ಗೇಟ್ ಹಾಕಿಕೊಂಡು ಹೋಗಬೇಕಾಗಿತ್ತಲ್ವ. ಅದನ್ನು ನಿಮಗೆ ತಿಳಿಸುವುದಕ್ಕೋಸ್ಕರ ಮತ್ತೆ ನಿಮ್ಮನ್ನು ವಾಪಸ್ ಕರೆದೆ. ಗೇಟ್ ನಾನೇ ಹಾಕಿಕೊಳ್ಳಬಹುದಾಗಿತ್ತು. ಅದು ದೊಡ್ಡ ವಿಷಯವಲ್ಲ. ಆದರೆ ನೀವು ಇನ್ನೊಂದ್ ಸಲ ಇಂಥ ತಪ್ಪು ಮಾಡಬಾರದಲ್ವ ಅದಕ್ಕೋಸ್ಕರ ನಿಮ್ಮನ್ನೇ ಕರೆದು ಹೇಳಿದೆ ಅಂದರಂತೆ ಮಾಸ್ತಿ. ಈ ವಿಚಾರ ನಿಮಗೂ ಗೊತ್ತಿರಬಹುದು. ಆದರೂ ಅವರ ಶಿಸ್ತಿನ ಬಗ್ಗೆ ಮತ್ತು ತಪ್ಪನ್ನು ತಿದ್ದಿ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದ ಬಗ್ಗೆ ತಿಳಿಸಿದೆ ಅಷ್ಟೆ.
LikeLiked by 1 person
ವಾವ್!! ಇಂತಹ ಅದ್ಭುತವಾದ ಪ್ರಸಂಗವನ್ನು ತಿಳಿಸಿದ್ದಕ್ಕಾಗಿ ವಂದನೆಗಳು
LikeLike