ಮಧುಗಿರಿ ಏಕಶಿಲಾ ಬೆಟ್ಟ

ಕರ್ನಾಟಕ ರಾಜ್ಯವು ಪ್ರಕೃತಿ ಸೌಂದರ್ಯಗಳಿಗೆ ಮತ್ತು ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ತಾಣವಾಗಿದ್ದು ಇಲ್ಲಿನ ರಮಣೀಯ ಪ್ರಕೃತಿತಾಣಗಳು ದೇಶವಿದೇಶದ ಪ್ರವಾಸಿಗರನ್ನು ಚಾರಣಿಗರನ್ನು ಕೈಬೀಸಿ ಕರೆಯುತ್ತಲಿರುತ್ತದೆ. ತುಮಕೂರು ಜಿಲ್ಲೆಗೆ ಸೇರಿರುವ ಮಧುಗಿರಿಯ ಏಕಶಿಲಾ ಬೆಟ್ಟವೂ ಸಹಾ ಅಂತಹದದ್ದೇ ಒಂದು ಸುಂದರ ರಮಣೀಯವಾದ ಪ್ರದೇಶವಾಗಿದ್ದು, ವಾರಾಂತ್ಯದಲ್ಲಿ ಆ ಬೆಟ್ಟವನ್ನು ನೋಡಲು/ಏರಲು ಸಹಸ್ರಾರು ಚಾರಣಿಗರು ಬರುವಂತಹ ಪ್ರದೇಶವಾಗಿದೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ 102 ಕಿ.ಮೀ. ಮತ್ತು ಜಿಲ್ಲಾ ಕೇಂದ್ರ ತುಮಕೂರಿನಿಂದ 43 ಕಿ.ಮೀ. ಕೊರಟಗೆರೆಯಿಂದ 18, ಕಿ.ಮಿ. ಮತ್ತು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಿಗುವ ಸಿರಾದಿಂದ ಬಡವನಹಳ್ಳಿ ಮಾರ್ಗವಾಗಿ 39 ಕಿ ಮೀ ದೂರದಲ್ಲಿರುವ ಮಧುಗಿರಿಯ ಏಕಶಿಲಾ ಬೆಟ್ಟ ಏಷ್ಯಾದ ಎರಡನೇ ಅತಿದೊಡ್ಡ ಏಕಶಿಲಾಬೆಟ್ಟವಾಗಿದೆ. ಇದು ಪಾವಗಡದಿಂದ ಬಳ್ಳಾರಿಯವರೆಗೆ ಹರಡಿರುವ ಪರ್ವತ ಶ್ರೇಣಿಯ ಭಾಗವಾಗಿದೆ. ಈ ಏಕಶಿಲಾ ಬೆಟ್ಟವು ಸಮುದ್ರ ಮಟ್ಟದಿಂದ 3,930 ಅಡಿ (1,200 ಮೀ)ಗಳಷ್ಟು ಎತ್ತರವಿದ್ದು ಸುಮಾರು 121 ಎಕರೆಗಳಷ್ಟು ವಿಸ್ತಾರವಾಗಿದೆ. ಇಲ್ಲಿ 17ನೇ ಶತಮಾನದಲ್ಲಿ ನಿರ್ಮಾಣವಾದ ಕೋಟೆ ಇದ್ದು, ಚಾರಣಿಗರಿಗೆ ಅತ್ಯಂತ ಪ್ರೀತಿ ಪಾತ್ರ ಸ್ಥಳವಾಗಿದೆ. ಈ ಬೆಟ್ಟದ ಸುತ್ತಲಿನ ಪ್ರದೇಶವು ಪ್ರಸ್ತುತ ಗಣಿಗಾರಿಕೆಯ ತಾಣವಾಗಿರುವುದು ದುರಾದೃಷ್ಟದ ಸಂಗತಿಯಾಗಿದೆ.

mad9ಈ ಏಕಶಿಲಾ ಬೆಟ್ಟವನ್ನು ದಕ್ಷಿಣ ದಿಕ್ಕಿನಿಂದ ನೋಡಿದಾಗ ಮದಿಸಿದ ಕರಿಯಂತೆ ಕಾಣುವುದರಿಂದ ಈ ಬೆಟ್ಟಕ್ಕೆ ಮೂಲತಃ ಮದ್ದಗಿರಿ ಎಂದೇ ಕರೆಯಲಾಗುತ್ತಿತ್ತು. ಮತ್ತು 20ನೇ ಶತಮಾನದ ಆದಿಭಾಗದವರೆಗೂ ಅದೇ ಹೆಸರು ಬಳಕೆಯಲ್ಲಿತ್ತು. ಸಾಧಾರಣವಾಗಿ ಜೇನುಹುಳುಗಳು ಜನ ಸಾಮಾನ್ಯರಿಂದ ಮತ್ತು ಶತ್ರುಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಯಾರೂ ಸಹಾ ತಲುಪದಂತಹ ದುರ್ಗಮ ಪ್ರದೇಶದಲ್ಲಿ ಜೇನುಗೂಡುಗಳನ್ನು ಕಟ್ಟುವುದರಿಂದ ಈ ಬೆಟ್ಟದ ತುಂಬೆಲ್ಲಾ ಅಸಂಖ್ಯಾತವಾದ ಜೇನುಗೂಡುಗಳಿಂದ ಶೋಭಿಸುತ್ತಿದ್ದವು. 1926ರ ಆಸುಪಾಸಿನಲ್ಲಿ ಅಲ್ಲಿನ ಉಪವಿಭಾಗಾಧಿಕಾರಿಗಳಾಗಿದ್ದ ಕನ್ನಡದ ಹಿರಿಯ ಸಾಹಿತಿಗಳು ಮತ್ತು ಜ್ಞಾನಪೀಠ ಪುರಸ್ಕೃತರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರು ಜೇನುಗೂಡುಗಳಿಂದ ತುಂಬಿದ್ದ ಈ ಮದ್ದಗಿರಿಯ ಜೇನುಗೂಡಿಗೆ ಅನ್ವರ್ಥವಾಗುವಂತೆ ಮಧುಗಿರಿ ಆಗಬೇಕೆಂಬ ಅಭಿಲಾಷೆ ಹೊತ್ತು, ಸ್ಥಳೀಯರನ್ನು ಮಾತನಾಡಿಸಿ ಅವರ ಮನವೊಲಿಸಿ, ಊರಿನಲ್ಲಿದ್ದ ಗಿರಿಯ ನೆನಪೂ ಉಳಿಯಬೇಕು, ಹೆಸರು ಚೆನ್ನಾಗಿರಬೇಕು ಮತ್ತು ಬೆಟ್ಟದಲ್ಲಿ ದೊರೆಯುತ್ತಿದ್ದ ಜೇನಿನ ನೆನಪು ಸಾರ್ಥಕವಾಗುವಂತೆ (ಮಧು-ಜೇನು, ಗಿರಿ-ಬೆಟ್ಟ) ಎಂದು 1926ರಲ್ಲಿ ಮುದ್ದಗಿರಿಗೆ ಮಧುಗಿರಿ ಎಂದು ಮರುನಾಮಕರಣ ಮಾಡಿದರು. ಆದೇ ರೀತಿ ಈ ಪ್ರದೇಶವು ರುಚಿಯಾದ ಸೀತಾಫಲ ಮತ್ತು ದಾಳಿಂಬೆ ಬೆಳೆಗೂ ಖ್ಯಾತವಾಗಿದ್ದು ಅಲ್ಲಿನ ದಾಳಿಂಬೆಗಳು ಮಧುಗಿರಿಯ ಮಧು ಎಂದೇ ಪ್ರಖ್ಯಾತವಾಗಿರುವುದು ಗಮನಾರ್ಹವಾಗಿದೆ.

mad7ಮಧುಗಿರಿ ಏಕಶಿಲಾ ಬೆಟ್ಟ ಮತ್ತು ಅಂತಹ ಕಡಿದಾದ ಇಳಿಜಾರು ಬೆಟ್ಟದಲ್ಲಿರುವ ಕೋಟೆಯನ್ನು ಕ್ರಿ.ಶ 1670 ರ ಸುಮಾರಿಗೆ 17 ನೇ ಶತಮಾನದಲ್ಲಿ ರಾಜ ಹೀರಾಗೌಡರು ನಿರ್ಮಾಣಮಾಡಿದ ನಂತರ ಇಲ್ಲಿ ಅನೇಕ ಅತಿರಥ ಮಹಾರಾಜರು, ಪಾಳೆಗಾರರು, ಸಾಮಂತ ರಾಜರುಗಳು, ಪರ್ಶಿಯನ್ ನವಾಬರು, ಮರಾಠರು, ಬ್ರಿಟಿಷರು ಆಳ್ವಿಕೆ ಮಾಡಿ, ಸಾಕಷ್ಟು ರಾಜರುಗಳು ರಾಜಧಾನಿ ಮಾಡಿಕೊಂಡು, ಅಭಿವೃದ್ಧಿ ಪಡಿಸಿಸಿರುವುದಲ್ಲದೇ, ಈ ಕೋಟೆ ಕೊತ್ತಲಗಳನ್ನು ಕಟ್ಟಿ ಸರ್ಪಗಾವಲು ಸೃಷ್ಟಿಸಿ ಇತಿಹಾಸ ನಿರ್ಮಿಸಿ ಹೋಗಿದ್ದಾರೆ. ಮೂಲತಃ ಮಣ್ಣಿನಲ್ಲಿ ಕಟ್ಟಿರುವ ಕೋಟೆಯ ನಿರ್ಮಾಣದ ಹಿಂದಿರುವ ಕಥೆಯು ಅತ್ಯಂತ ಕುತೂಹಲಕಾರಿಯಾಗಿದೆ. ಈ ಬೆಟ್ಟದ ಸುತ್ತಮುತ್ತಲಿನ ಪ್ರದೇಶದ ದನಕರುಗಳು ಮತ್ತು ಕುರಿಗಳು ತಮ್ಮ ಮೇವಿಗಾಗಿ ಇದೇ ಬೆಟ್ಟವನ್ನು ಆಶ್ರಯಿಸಿ ಕೆಲವೊಮ್ಮೆ ದಾರಿತಪ್ಪಿ ಕಾಣೆಯಾಗಿ, ತಡರಾತ್ರಿಯಲ್ಲಿ ಸಮಯದಲ್ಲಿ ಬರುತ್ತಿದ್ದವು. ಹಾಗೆ ದಾರಿತಪ್ಪಿದ ಪ್ರಾಣಿಗಳಿಗೆ ಅಲ್ಲಿ ನೀರು ಸಹಾ ದೊರಕದಿದ್ದದ್ದನ್ನು ಗಮನಿಸಿದ ರಾಜರು ಅಲ್ಲೊಂದು ಕೋಟೆ ನಿರ್ಮಿಸುವ ನಿರ್ಧಾರಕ್ಕೆ ಬಂದು ಆ ಕಾರ್ಯವನ್ನು ಪೂರ್ಣಗೊಳಿಸಿ ಅಲ್ಲಿಯೇ ನೆಲೆಸಲು ಪ್ರಾರಂಭಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

mad23,930 ಅಡಿ ಎತ್ತರದ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಏಕಶಿಲಾ ಬೆಟ್ಟದ ತಪ್ಪಲಿನಲ್ಲಿ ನಾಲ್ಕು ಗುಹೆಗಳಿದ್ದರೆ, ಭೀಮನ ದೊಣೆ, ನವಿಲು ದೊಣೆ ಎಂಬ ಎರಡು ಕೆರೆಗಳೂ ಸಹಾ ಇವೆ. ಚಾರಣಪ್ರಿಯರಿಗಂತೂ ಹೇಳಿ ಮಾಡಿಸಿದ ಸ್ಥಳವಾಗಿರುವ ಈ ಬೆಟ್ಟದ ಮೇಲಿನ ಕೋಟೆ ಹತ್ತಲು ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಮೆಟ್ಟಿಲುಗಳು ಪ್ರಾರಂಭವಾಗಿ, ಅಲ್ಲಿಂದ ಅಂತರಾಳದ ಬಾಗಿಲು, ದಿಡ್ಡಿ ಬಾಗಿಲು, ಮೈಸೂರು ಬಾಗಿಲು, ಹಿಂದೆ ಇದ್ದವೆಂದು ಗೋಚರವಾಗುತ್ತದೆ, ಕೋಟೆಯ ಗೋಡೆಯುದ್ದಕ್ಕೂ ಬತ್ತದ ತೆನೆ ಆಕಾರದ ರಚನೆಗಳನ್ನು ಕಾಣ ಬಹುದಾಗಿದೆ. ಮಳೆಗಾಲದಲ್ಲಿ ಬಂಡೆಗಳು ಜಾರುವ ಸಂಭವ ಇರುವುದರಿಂದ ಚಾರಣ ತುಸು ಅಪಾಯಕಾರಿ ಎನಿಸಿದರೆ, ಕಡು ಬೇಸಿಗೆ ಹಾಗೂ ಚಳಿಗಾಲವು ಚಾರಣಕ್ಕೆ ಸೂಕ್ತವಾದ ಸಮಯವಾಗಿದೆ. ಅಷ್ಟೆಲ್ಲಾ ಕಷ್ಟ ಪಟ್ಟು ಬೆವರು ಸುರಿಸಿ ಮಧುಗಿರಿಯ ಬೆಟ್ಟವನ್ನು ಚಾರಣ ಮಾಡಿದ ತುತ್ತ ತುದಿಯನ್ನು ತಲುಪಿದ ನಂತರ ಅಲ್ಲಿನ ರಮಣೀಯ ನಿಸರ್ಗದೌತಣ ನಿಜ ಹೇಳ ಬೇಕೆಂದರೆ ಊಟಿಯಲ್ಲಿಯೂ ಸಿಗುವುದಿಲ್ಲವಾದ್ದರಿಂದ ಬಹುತೇಕ ಚಾರಣಣಿಗರಿಗೆ ಮಧುಗಿರಿ ಬೆಟ್ಟ ಅತ್ಯಂತ ಪ್ರಿಯವಾಗಿದೆ. ಅದೇ ರೀತಿ ಕೋಟೆಯ ಮೇಲಿರುವ ಸದ್ಯಕ್ಕೆ ಪಾಳುಬಿದ್ದ ಗೋಪಾಲಕೃಷ್ಣನ ದೇವಾಲಯವನ್ನು ನೋಡುತ್ತಿದ್ದಂತೆಯೇ ಹತ್ತಿದ ಆಯಾಸವೆಲ್ಲವೂ ಮಾಯವಾಗಿ, ಅಷ್ಟು ಸುಂದರವಾದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸದೇ ಪಾಳು ಬಿಟ್ಟಿರುವುದಕ್ಕಾಗಿ ನಮ್ಮ ಜನರು ಮತ್ತು ಪುರಾತತ್ವ ಇಲಾಖೆಯ ಮೇಲೆ ಆಕ್ರೋಶವೂ ಮೂಡುತ್ತದೆ ಎಂದರೂ ತಪ್ಪಾಗದು. ಮಧುಗಿರಿ ಕೋಟೆಯ ಆವರಣದಲ್ಲಿ ಜೈನ ದೇವಾಲಯವೂ ಸಹಾ ಇರುವುದು ಗಮನಾರ್ಹವಾಗಿದೆ.

mad6ಈ ಬೆಟ್ಟದ ತಪ್ಪಲಿನಲ್ಲಿ ವಿಜಯನಗರ ಕಾಲದ ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿರುವ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣಸ್ವಾಮಿ ದೇಗುಲಗಳೆರಡು ಮಧುಗಿರಿಗೆ ಒಂದು ಕಳಶ ಇಟ್ಟಂತೆ ಇದ್ದರೆ, ಇನ್ನು ಮಧುಗಿರಿಯ ಹೆಬ್ಬಾಗಿಲಲ್ಲಿರುವ ಗ್ರಾಮ ದೇವತೆ ದಂಡಿಮಾರಮ್ಮನ ದೇವಸ್ಥಾನವು ಮಧುಗಿರಿ ಪಟ್ಟಣವನ್ನು ಸುಭಿಕ್ಷವಾಗಿವಾಗಿರುವಂತೆ ಕಾವಲು ಕಾಯಲು ಆ ತಾಯಿ ಊರ ಹೆಬ್ಬಾಗಿಲಲ್ಲೇ ನೆಲೆಸಿದ್ದಾಳೆ ಎನ್ನುವುದು ಸ್ಥಳೀಯರ ನಂಬಿಕೆಯಾಗಿದೆ. ಪ್ರತೀ ವರ್ಷ ಆಗಸ್ಟ್ 15ರಂದು ಸ್ಥಳೀಯ ಶಾಲೆಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊದಗೂಡಿ ಮಧುಗಿರಿ ಬೆಟ್ಟದ ತುದಿಯವರೆಗೂ ಹತ್ತಿ ಅಲ್ಲಿ ಎಲ್ಲರೂ ಸೇರಿ ತ್ರಿವರ್ಣ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುವುದು ಅನನ್ಯ, ಅನುಕರಣೀಯ ಮತ್ತು ಅಭಿನಂದನಾರ್ಹವಾಗಿದೆ.

mad4ಮಧುಗಿರಿಯ ಕೋಟೆಯಿಂದ ಎಡಕ್ಕೆ ಹೊದಲ್ಲಿ ಸಿದ್ದರಕಟ್ಟೆ ಎಂಬ ಒಂದು ಸಣ್ಣ ಕೆರೆ ಇದ್ದು ಅದೂ ಸಹಾ ನೊಡಲು ನಯನಮನೋಹರವಾಗಿದೆ. ಅದೇ ರೀತಿ ಸಿರ ಗೇಟ್ ನ ಬಳಿ ಇರುವ ಕಲ್ಯಾಣಿಯೂ ಸಹಾ ಆಕರ್ಷಣಿಯವಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲೇ ಔಷಧೀಯ ಮೂಲಿಕೆಗಳಿಗೆ ಪ್ರಸಿದ್ಧವಾದ ಸಿದ್ಧರ ಬೆಟ್ಟವೂ ಇದ್ದರೆ, ಮಧುಗಿರಿಯಿಂದ ಸುಮಾರು 20 ಕಿಮೀ ದೂರದಲ್ಲಿ ಮೈದನಹಳ್ಳಿ ಎಂಬಲ್ಲಿ ಕೃಷ್ಣಮೃಗಗಳ ವನ್ಯಧಾಮವನ್ನು 1993ರಲ್ಲಿ ಪ್ರಾರಂಭಿಸಲಾಗಿದ್ದು ಅಲ್ಲಿನ ಜಿಂಕೆಗಳು ಮಕ್ಕಳಿಗೆ ಮುದ ನೀಡುತ್ತವೆ.

ಬೆಂಗಳೂರು ಮತ್ತು ತುಮಕೂರಿನಿಂದ ಅತ್ಯಂತ ಚಂದದ ರಸ್ತೆ ಇರುವ ಇರುವ ಕಾರಣ ಸ್ವಂತ ವಾಹನದಲ್ಲಿ ಕುಟುಂಬದ ಸಮೇತ ಒಂದು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋಗಿಬರಬಹುದಾಗಿದೆ. ಬೆಂಗಳೂರು ಮತ್ತು ತುಮಕೂರಿನಿಂದಲೂ ಪ್ರತೀ 20-30 ನಿಮಿಷಗಳಿಗೊಮ್ಮೆ ಕೆಎಸ್‌ಆರ್‌ಟಿಸಿ ಬಸ್‌ಗಳು ಲಭ್ಯವಿದೆ. ಏಷ್ಯಾ ಖಂಡದ ಏಕಾಗ್ರ ಶಿಲೆಯ (ಮನೋಲಿಥಿಕ್) ಬೆಟ್ಟವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿರುವ ಬೆಟ್ಟ ಮಧುಗಿರಿಯ ಕೆರೆ, ಕಾಲುವೆ ಮತ್ತು ದೇವಾಲಯಗಳಿಂದ ಕೂಡಿದ ಸದಾಕಾಲಾವೂ ರಮಣೀಯವಾದ ನಿಸರ್ಗದ ಚೆಲುವನ್ನು ಹೊತ್ತುಕೊಂಡಿರುವ ಪರಮಪಾವನವಾದ ಕ್ಷೇತ್ರವನ್ನು ಸಮಯ ಮಾಡಿಕೊಂಡು ಹೋಗಿ ನಿಮ್ಮ ಅನುಭವವನ್ನು ನಮ್ಮೊಂದಿಗೆ ಹಂಚಿಕೊಳ್ತೀರೀ ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

ಈ ಲೇಖನ ಸೆಪ್ಟೆಂಬರ್ 2022ರ ಸಂಪದ ಸಾಲು ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಈ ಮಾಸ ಪತ್ರಿಕೆಗೆ ಚಂದಾರಾರರಾಗುವ ಮೂಲಕ ಸ್ವಾಭಿಮಾನೀ ಕನ್ನಡ ಪತ್ರಿಕೆಗಳನ್ನು ಉಳಿಸಿ ಬೆಳಸೋಣ. sampa_Madhugiri

2 thoughts on “ಮಧುಗಿರಿ ಏಕಶಿಲಾ ಬೆಟ್ಟ

  1. ಮಧುಗಿರಿಯ ಏಕಶಿಲಾ ಬೆಟ್ಟದ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s