ಧಾರವಾಡದ ಸಾಧನ ಕೇರಿಯಲ್ಲಿ ನಿಂತು ಕಲ್ಲೆಸೆದರೆ ಅದು ಒಂದಲ್ಲಾ ಒಂದು ಸಾಹಿತಿಗಳ ಮನೆಯ ಮೇಲೆ ಬೀಳುವಂತೆ ಬೆಂಗಳೂರಿನ ವಿದ್ಯಾರಣ್ಯಪುರದ ಯಾವುದೇ ಭಾಗದಲ್ಲಿ ನಿಂತು ಕಲ್ಲೆಸೆದರೆ ಅದು ಬೀಳುವುದು ಒಂದೋ ಯಾವುದಾದರೂ ಐಟಿ ಬಿಟಿ ಕಂಪನಿಯಲ್ಲಿ ಕೆಲಸಮಾಡುತ್ತಿರುವ ಉದ್ಯೋಗಿಯ ಮನೆಗೋ ಇಲ್ಲವೇ ಯಾವುದಾದರೂ ಉಪಹಾರ ಗೃಹಗಳಿಗೋ ಎಂದರೆ ಅತಿಶಯೋಕ್ತಿಯೇನಲ್ಲ. ಮಧ್ಯಮ ವರ್ಗದವರು ಇಲ್ಲವೇ ತುಸು ಹೆಚ್ಚಿನ ಮಧ್ಯಮವವರ್ಗದವರೇ ಹೆಚ್ಚಾಗಿಯೇ ನೆಲಸಿರುವ ವಿದ್ಯಾರಣ್ಯಪುರ, ಪ್ರಖ್ಯಾತವಾಗಿರುವುದು ಇಲ್ಲಿರುವ ಜಗತ್ಪ್ರಸಿದ್ಧ ದೇವಾಲಯಗಳಿಗೆ ಮತ್ತು ಕೈಗೆಟುಕುವ ಬೆಲೆಯಲ್ಲಿ ರುಚಿ ರುಚಿಯಾಗಿ ಸಿಗುವ ಬಗೆ ಬಗೆ ರುಚಿಯಾದ ಉಪಹಾರ ಗೃಹಗಳಿಗೆ.
ಅದೇ ರೀತಿ ಸಂಜೆಯ ಹೊತ್ತು ವಿದ್ಯಾರಣ್ಯಪುರದ ಕಡೆಯ ಬಸ್ ನಿಲ್ದಾಣದಿಂದ ಕೆಲವೇ ಹೆಜ್ಜೆಗಳು ನಡೆದರೆ ಸಾಕು, ಘಕ್ಕೆಂದು ನಮ್ಮ ಕಣ್ಣ ಮುಂದೆ ಕಾಣಸಿಗುತ್ತದೆ ಕೆಂಪು ಬಣ್ಣದ Eatout ಗಾಡಿ. ಶುಚಿ ರುಚಿಯಾದ ಕೈಗೆಟುಕುವ ಬೆಲೆಯಲ್ಲಿ ತಟ್ಟನೆ ಏನನ್ನಾದರೂ ತಿನ್ನಬೇಕೆಂದು ಬಯಸಿದ್ದಲ್ಲಿ Eatout ಹೇಳಿ ಮಾಡಿಸಿದ ಜಾಗ. ಹಬೆ ಹಬೆಯ ಇಡ್ಲಿ, ಗರಿ ಗರಿ ಉದ್ದಿನ ವಡೆ, ಘಮ ಘಮ ಮಸಾಲೆ ದೋಸೆ, ಬಿಸಿ ಬಿಸಿ ರೊಟ್ಟಿ, ನೂಲಿನಂತೆ ನುಣುಪಾದ ಶ್ಯಾವಿಗೆ, ತರ ತರಹದ ಅನ್ನದ ಬಾತ್, ಸಿಹಿ ಸಿಹಿಯಾದ ಕೇಸರೀ ಬಾತ್, ತರಕಾರಿಹಾಕಿದ ಉಪ್ಪಿಟ್ಟನ್ನು ರುಚಿ ರುಚಿಯಾದ ಕೆಂಪು ಮತ್ತು ಹಸಿರು ಚೆಟ್ನಿಯೊಡನೆ ಚುಮು ಚುಮು ಚಳಿಯಲ್ಲಿ ತಿನ್ನುತ್ತಿದ್ದರೆ ಸ್ವರ್ಗಕ್ಕೆ ಕಿಚ್ಚು ಹತ್ತಿದಂತೆ ಎಂದರೆ ಉತ್ಪ್ರೇಕ್ಷೆಯೇನಲ್ಲ. ಒಮ್ಮೆ ತಿಂದರೆ ಮತ್ತೊಮ್ಮೆ ಮಗದೊಮ್ಮೆ ತಿನ್ನಬೇಕೆಂದು ಬಯಸುವ ಜಾಗವೂ ಹೌದು.
ಹಾಂ ಆಣ್ಣಾ ! ಆ ಆಕ್ಕಾ!! ಹೇಳು ಪುಟ್ಟ ಏನು ಕೊಡಲಿ ? ಒಂದು ನಿಮಿಷಾ, ಬಿಸಿ ಬಿಸಿ ಗರಿ ಗರಿ ದೋಸೆ ರೆಡಿಯಾಗ್ತಿದೆ. ಅಲ್ಲಿಯವರೆಗೆ ಈ ಚೌ ಚೌ ಬಾತ್ ತಿನ್ತಾಯಿರಿ ಅಂತ ಪಟ ಪಟನೆ ಸದಾ ಹಸನ್ಮುಖಿಯಾಗಿ ಮಾತನಾಡಿಸುತ್ತಾ ಕೈಗೆ ತಿಂಡಿಯ ತಟ್ಟೆಯನ್ನು ಕೊಡುತ್ತ ಎಲ್ಲರ ನಾಲಿಗೆಯ ಬರವನ್ನು ಕಳೆದು ಹೊಟ್ಟೆಯ ಹಸಿವನ್ನು ತಣಿಸುತ್ತಿರುವ ಬಾಣಸಿಗರೇ ಲೋಕೇಶ್. ಮೂಲತಃ ಗೌರೀಬಿದನೂರಿನವರಾದ ಲೋಕೇಶ್ ವೃತ್ತಿಯನ್ನಾರಂಬಿಸಿದ್ದು ಏರ್ ಟೆಲ್ ಆಫೀಸಿನಲ್ಲಿ ನೆಟ್ವರ್ಕ್ ಇಂಜಿನೀಯರ್ ಆಗಿ. ನಂತರ ಐಟಿ ಬಿಟಿ ಕಂಪನಿಗಳ ಏರಿಳಿತದಿಂದ ಬೇಸತ್ತು ಸ್ವಂತ ಕಾಲಿನಮೇಲೆ ತಾವೇ ನಿಂತು ಉದ್ಯೋಗವನ್ನು ಮಾಡಬೇಕೆಂದು ನಿರ್ಧರಿಸಿ ಕೆಲವು ಸ್ನೇಹಿತರ ಸಹಾಯದಿಂದ ಮೂರು ವರ್ಷಗಳ ಹಿಂದೆ ಆರಂಭಿಸಿದ ಈ ಕಾಯಕ ಇಂದು ನಾನಾ ಜನರ ಹೊಟ್ಟೆಯನ್ನು ತುಂಬಿಸುವುದರ ಜೊತೆಗೆ ಒಬ್ಬ ಕೆಲಸದಾಳು (ತಮ್ಮನಿಂಗಿಂತಲೂ ಹೆಚ್ಚಿಗಿನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ) ಪ್ರೀತಿಯ ಮಡದಿ ಮುದ್ದಾದ ಮಗ ಮತ್ತು ವೃಧ್ಧ ತಂದೆ ತಾಯಿರೊಡನೆ ನೆಮ್ಮದಿಯ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ ಲೋಕೇಶ್. ಪ್ರತಿದಿನ ಜೀವನಕ್ಕೆ ಸಾಕಾಗುವಷ್ಟು ವ್ಯವಹಾರ ನಡೆದರೂ ವಾರಂತ್ಯದಲ್ಲಿ ತುಸು ಹೆಚ್ಚಾಗಿಯೇ ವ್ಯಾಪಾರವಾಗಿ ಇದರ ಮಧ್ಯೆಯಲ್ಲಿ ಯಾವುದಾದರೂ ಸಭೆ ಸಮಾರಂಭಗಳ ಆರ್ಡರ್ ಇರುವುದರಿಂದ ಹೇಗೋ ಜೀವನ ಸಾಗುತ್ತಿದೆ. ತಿಂಗಳಾತ್ಯದಲ್ಲಿ ನೆಮ್ಮದಿಯಾಗಿ ಸಂಬಳ ತರುತ್ತಿದ್ದ ನೆಟ್ವರ್ಕ್ ಇಂಜಿನೀಯರ್ ಕೆಲಸ ಬಿಟ್ಟು ಈ ಕೆಲಸ ಹಿಡಿದದ್ದಕ್ಕೆ ಎಂದೂ ಪರಿತಪಿಸದ ಲೋಕೇಶ್ ಇಂದಿನ ಯುವಕರಿಗೆ ನಿಜಕ್ಕೂ ಮಾದರಿ ಮತ್ತು ಅನುಕರಣಿಯ. ನಾವು ಅದು ಓದಿದ್ದೇವೆ. ಇದು ಓದಿದ್ದೇವೆ. ನಮ್ಮ ಓದಿಗೆ ತಕ್ಕ ಕೆಲಸ ಸಿಕ್ಕಿಲ್ಲ ಎಂದು ಪರಿತಪಿಸುತ್ತಾ, ಸರ್ಕಾರವನ್ನು ಶಪಿಸುತ್ತಾ, ಮನೆಯಲ್ಲಿ ತಂದೆ ತಾಯಿಯರಿಗೆ ಹೊಣೆಯಾಗಿ ಕೂರುವ ಬದಲು ಇಲ್ಲವೇ ಆತ್ಮಹತ್ಯೆಗೆ ಶರಣಾಗುವ ಬದಲು ಇಂತಹ ನೂರಾರು ಸ್ವಉದ್ಯೋಗದಿಂದ ಜೀವನ ನಡೆಸಬಹುದಲ್ಲವೇ?
ಸರಿ ಸರಿ ಇನ್ನೇಕೆ, ತಡ, ಹೊರಡಿ ನನ್ನ ಸಂಗಡ, ಬೆಂಗಳೂರಿನ ವಿದ್ಯಾರಣ್ಯಪುರದ ಕಡೆಯ ಬಸ್ ನಿಲ್ಡಾಣದ Eatout ಗಾಡಿಯ ಬಳಿ ಹಾಕೋಣ ಝಾಂಡ, ಹೊಟ್ಟೆ ಬಿರಿಯುವಷ್ಟು ತಿನ್ನಲು ನಾನು ಸಿದ್ಧ. ನೀವೂ?
ಏನಂತೀರೀ?
ನಿಮ್ಮ ಲೇಖನಗಳನ್ನು ಓದುತ್ತಿದ್ದರೆ ಬೆಂಗಳೂರಿನ ವಿವಿಧ ಬಡಾವಣೆಗಳ ನಿವಾಸಿಗಳೆಲ್ಲ ಉತ್ತಮ ಸಾವಯವ ಹಣ್ಣು ತರಕಾರಿಗಳನ್ನು ತಿನ್ನಲು ಮತ್ತು ರುಚಿಯಾದ ತಿಂಡಿಗಳನ್ನು ತಿನ್ನಲು ವಿದ್ಯಾರಣ್ಯಪುರ ಮತ್ತು ಸಹಕಾರ ನಗರದಲ್ಲಿ ಮನೆ ಷಿಫ್ಟ್ ಮಾಡಬೇಕೆನಿಸುತ್ತಿದೆ.
LikeLike
ಖಂಡಿತವಾಗಿಯೂ ಬನ್ನಿ ಸಾರ್
LikeLike