ಗುರುದತ್

ನಮ್ಮ ಕರ್ನಾಟಕದ ಪಡುಕೋಣೆ ಎಂಬ ಊರಿನ ಹೆಸರು ಕ್ರೀಡಾಜಗತ್ತಿನಲ್ಲಿ ಮತ್ತು ಚಲನಚಿತ್ರರಂಗದಲ್ಲಿ ಸಾಕಷ್ಟು ಚಿರಪರಿತವಾಗಿದೆ. ತಂದೆ ಪ್ರಕಾಶ್ ಪಡುಕೋಣೆ 1980ರಲ್ಲಿ ಆಲ್ ಇಂಗ್ಲೇಂಡ್ ಬ್ಯಾಂಡ್ಮಿಂಟನ್ ಛಾಂಪಿಯನ್ ಆಗುವ ಮೂಲಕ ಚಿರಪರಿಚಿತರಾದರೆ ಅವರ ಮಗಳು ದೀಪಿಕ ಪಡುಕೋಣೆ ಕಳೆದ ಎಂಟು ಹತ್ತು ವರ್ಷಗಳಿಂದ ಜನಪ್ರಿಯ ನಾಯಕಿಯಾಗಿ ಮಿಂಚುತ್ತಿದ್ದಾಳೆ. ಅದರೆ 1940ರಲ್ಲೇ ಪಡುಕೋಣೆ ಹೆಸರನ್ನು ದೇಶಾದ್ಯಂತ ಪಸರಿಸಿದ ಹೆಸರಾಂತ ಚಿತ್ರಕಾರ, ನಟ, ನೃತ್ಯ ಸಂಯೋಜಕ,ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದ ಅಪ್ಪಟ ಕನ್ನಡಿಗ ಗುರುದತ್ ಶಿವಶಂಕರ್ ಪಡುಕೋಣೆ. ಎಲ್ಲರ ಪ್ರೀತಿಯ ಗುರುದತ್ ಅವರ ಬಗ್ಗೆ ನಾವಿಂದು ತಿಳಿಯೋಣ.

gurudat2

ದಕ್ಷಿಣ ಕನ್ನಡದ ಪಡುಕೋಣೆಯ ಮೂಲದ ಕೊಂಕಣಿ ಸಾರಸ್ವತ ಸಂಪ್ರದಾಯದ ಶ್ರಿ ಶಿವಶಂಕರ ರಾವ್ ಪಡುಕೋಣೆ ಹಾಗೂ ವಸಂತಿ ಪಡುಕೋಣೆ ದಂಪತಿಗಳ ಮಗನಾಗಿ ವಸಂತ ಕುಮಾರ್ ಅವರು ಜುಲೈ 9, 1925 ರಂದು ಬೆಂಗಳೂರಿನಲ್ಲಿ ಜನಿಸಿದರು. ಆರಂಭದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಆವರ ತಂದೆ ಸ್ವಲ್ಪ ಸಮಯದ ನಂತರ ಬ್ಯಾಂಕ್ ಉದ್ಯೋಗಿಯಾಗಿ, ದೂರದ ಪಶ್ವಿಮ ಬಂಗಾಳದ ಭವಾನಿಪುರ್ ಎಂಬಲ್ಲಿಗೆ ವರ್ಗಾಯಿಸಲ್ಪಟ್ಟ ಕಾರಣ, ವಸಂತ್ ಕುಮಾರರ ಶಿಕ್ಷಣವೆಲ್ಲಾ ಬೆಂಗಾಲಿಯಲ್ಲಿಯೇ ಆಗುತ್ತದೆ. ಅವರ ತಾಯಿ ವಸಂತಿಯವರೂ , ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿ ಅವರು ಕನ್ನಡದಲ್ಲಿ ಸಣ್ಣ ಕಥೆಗಳನ್ನು ಬರೆದಿದ್ದಾರೆ ಮತ್ತು ಹಲವಾರು ಬಂಗಾಳಿ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ವಸಂತಕುಮಾರ್ ತಮ್ಮ ಬಾಲ್ಯದಲ್ಲಾದ ಕೆಲವು ಅಹಿತಕರ ಘಟನೆಗಳಿಂದ ಮಾನಸಿಕವಾಗಿ ಜರ್ಜರಿತಗೊಂಡಿದ್ದಾಗ ಹಿರಿಯರ ಸಲಹೆಯ ಮೇರೆಗೆ ಶುಭ ಶಕುನವೆಂದು ಭಾವಿಸಿ, ಬಹುತೇಕ ಸಾರಸ್ವತರ ಆರಾಧ್ಯ ದೈವ ದತ್ತಾತ್ರೇಯರ ಕೃಪೆ ಇರಲಿ ಎಂದು ಅವರಿಗೆ ಗುರುದತ್ ಎಂದು ಮರುನಾಮಕರಣ ಮಾಡಲಾಗುತ್ತದೆ.

ಓದಿನಲ್ಲಿ ಚುರುಕಾಗಿದ್ದ ಗುರುದತ್, ಬಾಲ್ಯದಲ್ಲಿ ಚಲನಚಿತ್ರಗಳ ಪೋಸ್ಟರ್ಗಳನ್ನು ಚಿತ್ರಿಸುತ್ತಿದ್ದ ತಮ್ಮ ಮಾವ ( ತಾಯಿಯ ದೂರದ ಸಂಬಂಧಿ) ಮತ್ತು ಖ್ಯಾತ ಚಲನಚಿತ್ರ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ದೊಡ್ಡಪ್ಪನವರಾಗಿದ್ದ ಬಾಲಕೃಷ್ಣ.ಬಿ.ಬೆನೆಗಲ್ ರವರೊಂದಿಗೆ ಕಾಲಕಳೆಯುತ್ತಾ ಚಿತ್ರಕಲೆಯಲ್ಲಿ ಪ್ರಾವಿಣ್ಯತೆ ಪಡೆಯುತ್ತಾರೆ ತಮ್ಮ 14ನೇ ವಯಸ್ಸಿನಲ್ಲಿಯೇ ಗುರುದತ್ ಅವರು ತಮ್ಮ ಅಜ್ಜಿಯು ಸಾಯಂಕಾಲ ಉರಿಸುತ್ತಿದ್ದ ದೀಪದ ಮುಂದೆ ಕೈಯ್ಯೊಡ್ಡಿ ಕಪ್ಪಾದ ಬೆರಳಿನಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳನ್ನು ಬಿಡಿಸುತ್ತಿದ್ದರಂತೆ. ಚಿತ್ರ ಬಿಡಿಸುವುದರ ಜೊತೆಯಲ್ಲಿಯೇ ನೃತ್ಯ ಮಾಡುವುದೂ ಅವರಿಗೆ ಕರಗವಾಗಿ ತಮ್ಮಷ್ಟಕ್ಕೆ ತಾವೇ ನೃತ್ಯ ಮಾಡುತ್ತಿದ್ದರಂತೆ.

ತಮ್ಮ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಕಾಲೇಜು ವಿದ್ಯಾಭ್ಯಾಸ ಮುಂದು ವರಿಸಲಾಗದ ಕಾರಣ ಅಲ್ಮೋರಾದಲ್ಲಿದ್ದ ಉದಯ ಶಂಕರ್ ಇಂಡಿಯಾ ಕಲ್ಚರ್ ಸೆಂಟರ್ ಎಂಬ ನೃತ್ಯ , ನಾಟಕ ಮತ್ತು ಸಂಗೀತವನ್ನು ಕಲಿಸುವ ಕೇಂದ್ರಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಗುರುಕುಲ ಪದ್ಧತಿ ಹಾಗೂ ಆಧುನಿಕ ಶೈಲಿ ಇವೆರಡರನ್ನೂ ಹೇಳಿಕೊಡುತ್ತಿದ್ದರು. ಈ ಎಲ್ಲಾ ಕಲೆಗಳಲ್ಲೂ ಬಹಳ ಚುರುಕಾಗಿದ್ದ ಗುರುದತ್ ಸುಮಾರು ಐದು ವರ್ಷಗಳ ಅಂದಿನ ಕಾಲಕ್ಕೇ 25ರೂಗಳ ವಿದ್ಯಾರ್ಥಿ ವೇತನದೊಂದಿಗೆ ತಮ್ಮ ಕಲಾಭ್ಯಾಸವನ್ನು ಮಾಡುತ್ತಾರೆ. ಎರಡನೇ ಮಹಾಯದ್ಧದ ಪರಿಣಾಮವಾಗಿ ಈ ಕಲಾ ಕೇಂದ್ರವನ್ನು ಬಲವಂತವಾಗಿ ಮುಚ್ಚಲಾಗುತ್ತದೆ.

gurudat3

ಕಲಾ ಕೇಂದ್ರದಿಂದ ಹೊರಬಂದ ಮೇಲೆ ಜೀವನ ನಿರ್ವಹಣೆಗಾಗಿ ಅಲ್ಲಿಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ಕಡೆಗೆ ಚಿತ್ರ ನಗರಿ, ಮಹಾ ನಗರಿ , ಬಾಲಿವುಡ್ ಮುಂಬೈಗೆ ಬರುತ್ತಾರೆ. ಹಾಗೆ ಬಾಲಿವುಡ್ಡಿಗೆ ಬಂದ ಮೇಲೆ ತಮ್ಮ ಹೆಸರಿನಲ್ಲಿದ್ದ ಶಿವಶಂಕರ್ ಪಡುಕೋಣೆಯನ್ನು ತೆಗೆದು ಹಾಕಿ ಕೇವಲ ಗುರುದತ್ ಎಂದೇ ಗುರುತಿಸಿಕೊಳ್ಳುತ್ತಾರೆ ಇವರ ಹೆಸರು ದತ್ ಎಂದು ಕೊನೆಗೊಳ್ಳುವದರಿಂದ, ಸುಲಲಿತವಾಗಿ ಬಂಗಾಳಿ ಭಾಷೆಯನ್ನು ಮಾತನಾಡುತ್ತಿದ್ದರಿಂದ ಮತ್ತು ಕಲ್ಕತ್ತಾದಿಂದ ಬಂದಿದ್ದ ಕಾರಣ ಅಪ್ಪಟ ಕನ್ನಡಿಗರಾಗಿದ್ದರೂ ಅವರನ್ನು ಬಹುತೇಕರು ಬಂಗಾಳಿ ಬಾಬು ಎಂದೇ ಭಾವಿಸಿರುತ್ತಾರೆ. ಅನಂತರ ಅವರ ಮಾವನ ಸಹಾಯದಿಂದ ಪುಣೆಯ ಪ್ರಭಾತ್ ಫಿಲ್ಮ್ ಕಂಪೆನಿಯಲ್ಲಿ ಮೂರು ವರ್ಷದ ನೃತ್ಯ ನಿರ್ದೇಶಕನಾಗಿ ಗುತ್ತಿಗೆಯ ಆಧಾರಿತ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಆ ಕಾಲದಲ್ಲಿ ಶ್ರೇಷ್ಠ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿದ್ದ ಮತ್ತು ಘಟಾನುಘಟಿಗಳಾಗಿದ್ದ , ವಿ.ಶಾಂತಾರಾಂ ಅವರು ಕೆಲಸ ಮಾಡಿದ್ದಂತಹ ಸಂಸ್ಥೆಯಲ್ಲಿಯೇ ಗುರುದತ್ ಅವರಿಗೆ ರೆಹಮಾನ್ ಹಾಗೂ ದೇವಾನಂದ್ ಪರಿಚಯವಾಗುತ್ತಾರೆ. ಅಲ್ಲಿಯೇ ಚಲನ ಚಿತ್ರದ ಹಿನ್ನಲೆಯ ಕೆಲಸದ ಜೊತೆಗೆ 1944ಲ್ಲಿ ತೆರೆಕಂಡ ಚಾಂದ್ ಚಲನಚಿತ್ರದಲ್ಲಿ ಶ್ರೀಕೃಷ್ಣನ ಒಂದು ಸಣ್ಣ ಪಾತ್ರದಲ್ಲಿ ಪ್ರಪಥಮವಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡು ನಂತರ 1945ರಲ್ಲಿ ವಿಶ್ರಮ್ ಬೇಡೇಕರ್ ನಿರ್ದೇಶನದ ಲಖ್ರಾನಿ ಚಿತ್ರದಲ್ಲಿ ಸಹ ನಿರ್ದೇಶನ ಜೊತೆ ನಟನಾಗಿಯೂ ಕಾಣಿಸಿಕೊಳ್ಳುತ್ತಾರೆ. 1946ರಲ್ಲಿ ಪಿ.ಎಲ್.ಸಂತೋಷಿಯವರ ನಿರ್ದೇಶನದ ಹಮ್ ಏಕ್ ಹೈ ಸಹನಿರ್ದೇಶಕನಾಗಿಯೂ ಮತ್ತು ನೃತ್ಯ ನಿರ್ದೇಶನವನ್ನೂ ಮಾಡುತ್ತಾರೆ. ಅಲ್ಲಿನ ಮೂರು ವರ್ಷಗಳ ಗುತ್ತಿಗೆ ಮುಗಿದ ಮೇಲೆ ಸರಿಯಾದ ಅವಕಾಶಗಳು ದೊರಕದೆ ಕೆಲ ಕಾಲ ಚಿತ್ರರಂಗದಲ್ಲಿ ನಿರುದ್ಯೋಗಿಯಾಗಿದ್ದರೂ ತಮ್ಮನ್ನು ಬರವಣಿಗೆಯಲ್ಲಿ ತೊಡಗಿಸಿಕೊಂಡು ಆಂಗ್ಲ ವಾರಪತ್ರಿಕೆಯಾಗಿದ್ದ ದಿ ಇಲ್ಲಸ್ಟ್ರೇಟೆಡ್ ವೀಕ್ಲಿಯಲ್ಲಿ ಸಣ್ಣ ಕಥೆಗಳನ್ನು ಬರೆಯತೊಡಗಿದರು. ಇದೇ ಕಾಲದಲ್ಲಿಯೇ ಗುರುದತ್ ತಮ್ಮ ಆತ್ಮಚರಿತ್ರೆಯೋ ಅನ್ನುವ ಹಾಗೆ ಭಾಸವಾಗುವ ಪ್ಯಾಸಾ ಹಿಂದಿ ಚಲನಚಿತ್ರದ ಕಥೆಯನ್ನು ಬರೆದರೆಂದು ಬಲ್ಲವರು ಹೇಳುತ್ತಾರೆ.

gurudat1

ಪ್ರಭಾತ್ ಕಂಪೆನಿಯಲ್ಲಿದ್ದಾಗ ಗುರುದತ್ ಅವರಿಗೆ ಪರಿಚಯವಾಗಿದ್ದ ದೇವಾನಂದ್ ಮತ್ತು ರೆಹಮಾನ್ ಅವರು ಈ ಹೊತ್ತಿಗಾಗಲೇ ಜನಪ್ರಿಯ ನಟರಾಗಿರುತ್ತಾರೆ. ಅವರ ಸ್ನೇಹದಿಂದಲೇ ಗುರುದತ್ ಚಲನಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕುವಂತಾಯಿತು. ಆಗಿನ ಕಾಲದ ಯಶಸ್ವೀ ನಿರ್ದೇಶಕರುಗಳಾದ ಅಮಿಯ ಚಕ್ರವರ್ತಿಯವರೊಂದಿಗೆ ಗರ್ಲ್ಸ್ ಸ್ಕೂಲ್ ಚಿತ್ರದಲ್ಲಿ ಹಾಗೂ ಗ್ಯಾನ್ ಮುಖರ್ಜಿಯವರ ಬೋಂಬೇ ಟಾಕೀಸ್ ರವರ ಸಂಗ್ರಾಮ್ ಚಿತ್ರದಲ್ಲಿ ಗುರುದತ್ ಕೆಲಸ ಮಾಡಿದರು. ದೇವಾನಂದ್ ಅವರ ನವಕೇತನ್ ಕಂಪೆನಿಯ ಮೊದಲ ಚಿತ್ರ ವಿಫಲವಾದಾಗ, ಪ್ರಭಾತ್ ಕಂಪನಿಯಲ್ಲಿದ್ದಾಗ ಗುರುದತ್ ಅವರಿಗೆ ನೀಡಿದ್ದ ಒಂದು ವಾಗ್ದಾನ ನೆನಪಾಗುತ್ತದೆ ಒಂದು ವೇಳೆ ಗುರುದತ್ ಚಿತ್ರ ನಿರ್ಮಾಪಕನಾದರೆ, ದೇವಾನಂದ್ ಆ ಚಿತ್ರದ ನಾಯಕ ನಟನಾಗುವನೆಂದೂ ಹಾಗೂ ದೇವಾನಂದ್ ಚಿತ್ರವೊಂದನ್ನು ನಿರ್ಮಿಸುವುದಾದರೆ ಅದರ ನಿರ್ದೇಶಕ ಗುರುದತ್ ಆಗಿರುತ್ತಾರೆಂದು ಅವರು ಪರಸ್ಪರ ವಾಗ್ದಾನ ಮಾಡಿಕೊಂಡಿರುತ್ತಾರೆ. ಈ ವಾಗ್ದಾನದಂತೆಯೇ ಅವರು ತಮ್ಮ ಗೆಳೆಯ ಗುರುದತ್ ಅವರಿಗೆ ನಿರ್ದೇಶನದ ಅವಕಾಶ ನೀಡಿ ಗುರುದತ್ ನಿರ್ದೇಶನದ ಮೊದಲ ಚಿತ್ರ ಬಾಝಿ 1951ನೇ ಇಸವಿಯಲ್ಲಿ ತೆರೆ ಕಂಡಿತು. ದೇವಾನಂದ್ ತಮ್ಮ ಮಾತನ್ನು ಬಾಝಿ ಚಲನಚಿತ್ರದ ಮೂಲಕ ಉಳಿಸಿಕೊಂಡರಾದರೂ ಗುರುದತ್ ತನ್ನ ಮಾತನ್ನು ಉಳಿಸಿ ಕೊಳ್ಳಲಿಲ್ಲವೆಂದು ದೇವಾನಂದ್ ಅವರಿಗೆ ಕಡೆಯವರೆಗೂ ಬೇಸರವಿತ್ತು. ಗುರುದತ್ ಹಾಗೂ ದೇವಾನಂದ್ ಜೊತೆಯಾಗಿ ಎರಡು ಅತೀ ಯಶಸ್ವೀ ಚವಲಚಿತ್ರಗಳಾದ ಬಾಝೀ ಹಾಗೂ ಜಾಲ್ ಚಿತ್ರಗಳನ್ನು ನಿರ್ಮಿಸಿದರು. ಕಲಾತ್ಮಕತೆಯಲ್ಲಿ ಗುರುದತ್ ಹಾಗೂ ಚೇತನ್ ಆನಂದ್ (ದೇವಾನಂದ್ ರವರ ಅಣ್ಣ) ಅವರ ನಡುವಿನ ಭಿನ್ನಾಭಿಪ್ರಾಯಗಳಿಂದ ಮುಂದಿನ ದಿನಗಳಲ್ಲಿ ದೇವಾನಂದ್ ಮತ್ತು ಗುರುದತ್ ಜೋಡಿ, ಒಟ್ಟಿಗೆ ಚಿತ್ರ ನಿರ್ಮಿಸುವುದನ್ನು ನಿಲ್ಲಿಸುತ್ತಾರೆ.

ಬಾಝಿ ಚಿತ್ರದ ತಾಂತ್ರಿಕತೆಯ ಮೂಲಕ ಗುರುದತ್ ಭಾರತೀಯ ಚಲನಚಿತ್ರ ರಂಗದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸುತ್ತಾರೆ, ಆ ಚಿತ್ರದಲ್ಲಿನ 14000ಎಮ್.ಎಮ್. ಲೆಸ್ಸ್ ಸಹಾಯದಿಂದ ಬಹಳ ಹತ್ತಿರದಿಂದ ತೆಗೆದ ದೃಶ್ಯಗಳ ತಂತ್ರಜ್ಞಾನ ಮುಂದೆ ಗುರುದತ್ ಶಾಟ್ ಎಂದೇ ಜಗತ್ಪ್ರಸಿದ್ಧವಾಯಿತು. ಅದಲ್ಲದೇ ಈ ಚಿತ್ರದಲ್ಲಿ ಹಾಡುಗಳ ಮುಖಾಂತರ ಕಥೆಯನ್ನು ಮುಂದುವರಿಸಿ ಕಥೆಯ ಓಘವನ್ನು ಹೆಚ್ಚಿಸುವ ರೀತಿಯೂ ಹೊಸಾ ಪ್ರಯೋಗಕ್ಕೆ ನಾಂದಿ ಹಾಡಿತು. ಇದೇ ಚಿತ್ರದ ಮೂಲಕ ಝೋರಾ ಸೆಹಗಲ್ ಎಂಬುವರನ್ನು ನೃತ್ಯ ನಿರ್ದೇಶಕಿಯಾಗಿ ಪರಿಚಯಿಸಿದರು. ಇದೇ ಚಿತ್ರೀಕರಣದ ವೇಳೆಯಲ್ಲಿಯೇ ತಮ್ಮ ಮಡದಿಯಾದ ಗಾಯಕಿ ಗೀತಾ ರಾಯ್ ಅವರನ್ನು ಭೇಟಿಯಾಗುತ್ತಾರೆ. ಮುಂದೆ ತಮ್ಮ ಮನೆಯವರಿಂದ ಭಾರಿ ವಿರೋದಾಭಾಸಗಳಿದ್ದರೂ ಓಡಿ ಹೋಗಿ ಗೀತಾ ಅವರನ್ನು ಮದುವೆಯಾಗಿ ತರುಣ್, ಅರುಣ್ ಹಾಗೂ ನೀನಾ ಎಂಬ ಮುದ್ದಾದ ಮಕ್ಕಳ ಜನ್ಮದಾತರಾಗುತ್ತಾರೆ.

ಬಾಝೀ ಚಿತ್ರವು ಯಶಸ್ವಿಯಾಗುತ್ತಲೇ ಗುರುದತ್ ಜಾಲ್ ಹಾಗೂ ಬಾಝ್ ಚಲನಚಿತ್ರಗಳನ್ನು ನಿರ್ಮಿಸಿದರು. ಬಾಝ್ ಚಿತ್ರಕ್ಕೆ ಸೂಕ್ತವಾದ ನಾಯಕ ನಟ ಸಿಗದ ಕಾರಣ ಸ್ವತಃ ಗುರುದತ್ ಅವರೇ ನಾಯಕರಾಗಿ ನಟಿಸಿದ್ದಲ್ಲದೇ ನಿರ್ದೇಶನವನ್ನೂ ಮಾಡುತ್ತಾರಾದರೂ ಈ ಎರಡೂ ಚಿತ್ರಗಳು ಅಷ್ಟೇನೂ ಹೆಸರು ಗಳಿಸಲಿಲ್ಲ. ಈ ಚಿತ್ರಗಳ ಮೂಲಕವೇ ಹಾಸ್ಯ ನಟ ಜಾನಿ ವಾಕರ್ ಛಾಯಾಗ್ರಾಹಕ ವಿ.ಕೆ.ಮೂರ್ತಿ ಮತ್ತು ನಿರ್ದೇಶಕ ಅಬ್ರಾರ್ ಅಲ್ವಿ ಮೊದಲಾದ ಶ್ರೇಷ್ಠ ಕಲಾವಿದರ ತಂಡವನ್ನು ಕಟ್ಟಿ ಮುಂದೆ ಒಳ್ಳೆಯ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗುತ್ತದೆ.

ಗುರುದತ್ ಅವರ ಮುಂದಿನ ಚಿತ್ರವಾದ ಆರ್ ಪಾರ್ ಮೂಲಕ ಅದೃಷ್ಟ ಲಕ್ಷ್ಮಿ ಮತ್ತೆ ಗುರುದತ್ ಪಾಲಿಗೆ ಒಲಿಯುತ್ತಾಳೆ. ಇದಾದ ನಂತರ ತೆರೆಕಂಡ ಮಿಸ್ಟರ್ ಆಂಡ್ ಮಿಸ್ಸೆಸ್ 55, ಸಿ.ಐ.ಡಿ., ಸೈಲಾಬ್ , ಪ್ಯಾಸಾ ಚಿತ್ರಗಳು ಭಾರೀ ಯಶಸ್ಸನ್ನು ಕಂಡವು. ಅದರಲ್ಲೂ ನಿರಾಸಕ್ತ ಪ್ರಪಂಚದಿಂದ ತಿರಸ್ಕೃತನಾಗಿ ತನ್ನ ಮರಣಾ ನಂತರವೇ ಯಶಸ್ಸನ್ನು ಕಾಣುವ ಕವಿಯೊಬ್ಬನ ಕಥೆಯ ಪ್ಯಾಸ ಸೂಪರ್ ಡ್ಯೂಪರ್ ಯಶಸ್ವಿಯಾಗಿ ಗುರುದತ್ ಕೀರ್ತಿಪತಾಕೆಯ ತುತ್ತ ತುದಿಗೇರುತ್ತಾರೆ.

ನಂತರ ಬಂದ ಕಾಗಝ್ ಕೇ ಪೂಲ್ ಚಿತ್ರವನ್ನು ಗುರುದತ್ ಅತ್ಯಂತ ಶ್ರಮವಹಿಸಿ ತಮ್ಮ ತನು ಮನ ಧನ ವ್ಯಯಿಸಿ ನಿರ್ಮಿಸಿದರಾದರೂ, ಈ ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ತೀವ್ರತರವಾಗಿ ಸೋಲು ಕಾಣುವ ಮುಖಾಂತರ ಗುರುದತ್ ಆರ್ಥಿಕವಾಗಿ ಮತ್ತು ಮಾನಸಿಗವಾಗಿ ಕುಗ್ಗುತ್ತಾರೆ. ಪ್ರಸಿದ್ಧ ನಿರ್ದೇಶಕನೊಬ್ಬ ತನ್ನ ಸಹ ಕಲಾವಿದೆಯೊಬ್ಬಳನ್ನುಪ್ರೀತಿಸುವ ಕಥಾವಸ್ತುವುಳ್ಳ ಈ ಚಲನಚೆತ್ರದಲ್ಲಿ ನಾಯಕಿಯಾಗಿದ್ದ ವಹೀದಾರೆಹಮಾನಳನ್ನು ನಿಜವಾಗಿಯೂ ಚಿತ್ರದ ನಾಯಕ ಮತ್ತು ನಿರ್ದೇಶಕರಾಗಿದ್ದ ಗುರುದತ್ ಮನಸಾರೆ ಪ್ರೀತಿಸಿರುತ್ತಾರೆ. ಈ ಚಿತ್ರ ಸೋಲು ಕಂಡಿದ್ದರಿಂದ ಬೇಸರ ಗೊಂಡ ಗುರುದತ್ ನಿರ್ದೇಶನದಿಂದ ವಿಮುಖರಾಗಿ ತಮ್ಮ ಮುಂದಿನ ಚಿತ್ರಗಳಲ್ಲಿ ನಟನೆ ಮತ್ತು ನಿರ್ಮಾಕರಾಗಿ ಮಾತ್ರವೇ ಮುಂದುವರಿದು ಇತರೇ ನಿರ್ದೇಶಕರಿಂದ ನಿರ್ದೇಶನ ಮಾಡಿಸುತ್ತಾರೆ.

ಮುಂದೆ ಅವರು ನಟಿಸಿದ ಚೌದ್ವೀಕಾ ಚಾಂದ್ ಚಿತ್ರ ಬಹಳ ಯಶಸ್ಸನ್ನು ಕಾಣುವ ಮೂಲಕ ಆರ್ಥಿಕ ಸದೃಢತೆಯನ್ನು ತಂದು ತಮ್ಮ ಚಿತ್ರನಿರ್ಮಾಣ ಸಂಸ್ಥೆ ದೀವಾಳಿಯಾಗುವುದನ್ನು ತಪ್ಪಿಸುತ್ತದೆ ತಮ್ಮ ಸಹಾಯಕನಾದ ಅಬ್ರಾರ್ ಅಲ್ವಿಯವರ ನಿರ್ದೇಶನದ ಸಾಹೇಬ್ ಬೀವಿ ಔರ್ ಗುಲಾಮ್ ಚಲನಚಿತ್ರದಲ್ಲಿಯೂ ನಟಿಸಿ, ಈ ಚಿತ್ರ ಗುರುದತ್ ಅಭಿನಯದ ಅತ್ಯಂತ ಕಲಾತ್ಮಕ ಹಾಗೂ ದುರಂತ ಕಥೆಯುಳ್ಳ ಚಿತ್ರವೆಂದು ಇಂದಿಗೂ ಪರಿಗಣಿಸಲ್ಪಡುತ್ತದೆ. ಇದಾದ ನಂತರ ಇನ್ನೂ ಅನೇಕ ಚಿತ್ರಗಳಲ್ಲಿ ನಟಿಸಿದರಾದರೂ ಅವುಗಳು ಅಷ್ಟೇನೂ ಸುದ್ದಿ ಮಾಡಲಿಲ್ಲ.

ಗುರುದತ್ ಮತ್ತು ನಟಿ ವಹೀದಾ ರೆಹಮಾನ್ ಅವರ ಪ್ರೇಮದ ಕುರಿತಾದ ಸುದ್ದಿಗಳು ಮಾಧ್ಯಮಗಳ, ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವರಿಬ್ಬರ ನಡುವಿನ ಪ್ರೇಮ ಅತಿರೇಕಕ್ಕೆ ಹೋದಾಗ, ಗುರುದತ್ ಅತೀಯಾದ ಕುಡಿತ ಮತ್ತು ಸಿಗರೇಟಿನ ಮೊರೆ ಹೋಗುತ್ತಾರೆ. ಅವರಿಬ್ಬರ ಪ್ರೇಮಕ್ಕೆ ಸಾಕ್ಷಿಯಾಗಿ ಮತ್ತು ಸಂಧಾನಕಾರರಾಗಿ ಖ್ಯಾತ ಕ್ಯಾಮರಾಮನ್ ವಿ.ಕೆ.ಮೂರ್ತಿಯವರು ಪ್ರಯತ್ನಿಸುತ್ತಾರೆ. ಕೇವಲ ತೆರೆಯ ಮೇಲೆ ಮಾತ್ರವೇ ಗುರುದತ್ ಮತ್ತು ವಹೀದಾ ಜೋಡಿ ಅಂದಿನ ಕಾಲದ ಅದ್ಭುತ ಜೋಡಿಯಾಗಿ ಕಂಡರೂ, ನಿಜ ಜೀವನದಲ್ಲಿ ಗುರುದತ್ ಅವರ ಪ್ರೀತಿ ಏಕಮುಖವಾಗಿದ್ದು ಇದೇ ಕುರುಡು ಪ್ರೇಮವೇ ಅವರ ಜೀವನದ ಅತಿ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ.

ಗುರುದತ್ ಮತ್ತು ವಹೀದಾ ನಡುವಿನ ಪ್ರೇಮ ಉತ್ಕಟ ಹಂತ ತಲುಪುತ್ತಿರುವಾಗಲೇ, ಗುರುದತ್ ಮತ್ತು ಗೀತಾರವರ ವೈವಾಹಿಕ ಬದುಕಿನ ದೋಣಿ ದುರಂತದ ಹಾದಿ ತಲುಪುತ್ತದೆ. ಇದೇ ಕಾರಣದಿಂದಾಗಿಯೇ ಗೀತಾದತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಲ್ಲಿಂದ ಗುರುದತ್‌ರ ಬದುಕು ಅವನತಿಯತ್ತ ಸಾಗುತ್ತದೆ. ವಹೀದಾ ರೆಹಮಾನ್ ಗುರುದತ್ ಆವರಿಂದ ಸಂಪೂಣವಾಗಿ ದೂರವಾಗಿ ಅಂದಿನ ಕಾಲದ ಬಹು ಬೇಡಿಕೆಯ ನಟಿಯಾಗಿ ತಮ್ಮ ಭವಿಷ್ಯದತ್ತ ಗಮನ ಹರಿಸಿದರೆ, ಗುರುದತ್ ದೇವದಾಸನಂತೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿಯೇ ಒಬ್ಬಂಟಿಯಾಗಿಯೇ ಕುಡಿತದ ಮೊರೆ ಹೋಗುತ್ತಾರೆ. ಅತ್ಯುತ್ತಮವಾದ ಸ್ನೇಹಿತರು,ಮುದ್ದಿನಂತಹ ಮಕ್ಕಳು, ಅತ್ಯಂತ ಜನಪ್ರಿಯತೆ, ಖ್ಯಾತಿ, ಹಣ ಎಲ್ಲವೂ ಇದ್ದರೂ ಅವರು ಬಯಸಿದ್ದು ಸಿಗದ ಕಾರಣ ಅದೇ ಕೊರಗಿನಲ್ಲಿ ಅಕ್ಟೊಬರ್ 10, 1964ರಂದು ಕುಡಿತದ ಜೊತೆಗೆ ಅತಿಯಾದ ನಿದ್ದೆ ಮಾತ್ರೆಗಳನ್ನು ಸೇವಿಸಿ ತಮ್ಮ 39ನೆಯ ವಯಸ್ಸಿನಲ್ಲಿಯೇ ಶಾಶ್ವತವಾಗಿ ಹಿಂದಿರುಗದ ಲೋಕಕ್ಕೆ ತೆರಳುವ ಮೂಲಕ ಚಲನಚಿತ್ರರಂಗ ಕಂಡ ಒಬ್ಬ ಅಪ್ರತಿಮ ಕಲಾವಿದ, ತಂತ್ರಜ್ಞನ ಜೀವನ ದುರಂತಮಯವಾಗಿ ಕೊನೆಗೊಂಡಿದ್ದು ನಿಜಕ್ಕೂ ವಿಷಾಧನೀಯವೇ ಸರಿ.

ಗುರುದತ್ ಅವರ ತಮ್ಮ ಆತ್ಮಾರಾಮ್ ಅವರು ಹೇಳುವಂತೆ ಗುರುದತ್ ಕೆಲಸದ ವಿಷಯದಲ್ಲಿ ಎಷ್ಟು ಶಿಸ್ತಿನ ವ್ಯಕ್ತಿಯಾಗಿದ್ದರೋ, ವೈಯಕ್ತಿಕ ಜೀವನದಲ್ಲಿ ಅಷ್ಟೇ ಅಶಿಸ್ತಿನವರಾಗಿದ್ದರು. ಅವರು ಅತಿಯಾದ ಮದ್ಯಸೇವನೆ, ಧೂಮಪಾನ ಮತ್ತು ಪರಸ್ತ್ರೀ ವ್ಯಾಮೋಹದಿಂದಾಗಿ ತಮ್ಮ ಬದಕನ್ನು ಮೂರಾಬಟ್ಟೆಯನ್ನಾಗಿಸಿಕೊಂಡರು.

ಆರಂಭದಲ್ಲಿ ಜನ ಗುರುದತ್ತರನ್ನು ಕೇವಲ ಮೇರು ನಟನೆಂದೇ ಭಾವಿಸಿದರೂ , ಕಾಲಾನಂತರ ಅವರೊಬ್ಬ ಅತ್ಯುತ್ತಮ ನಿರ್ದೇಶಕ ಮತ್ತು ತಂತ್ರಜ್ಞರೆಂದೇ ಗುರುತಿಸಲ್ಪಡುತ್ತಾರೆ. ಅವರ ಪ್ಯಾಸಾ ಚಿತ್ರದಲ್ಲಿ ಆದಂತೆಯೇ ಅವರ ಮರಣಾನಂತರವೇ ಅವರು ಖ್ಯಾತಿಯನ್ನು ಪಡೆದು ಅವರ ಚಲನಚಿತ್ರಗಳು ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿತವಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಅವರ ಚಿತ್ರಗಳಲ್ಲಿನ ಹಾಡುಗಳ ಚಿತ್ರೀಕರಣ ಹಾಗೂ ಅವರ ಚಿತ್ರಗಳಲ್ಲಿ ಹೆಣೆಯುತ್ತಿದ್ದ ವಿಭಿನ್ನ ಪಾತ್ರಗಳ ಮೂಲಕ ಇಂದೂ ಕೂಡ ಭಾರತೀಯರ ಜನಮಾನಸದಲ್ಲಿ ಅಜರಾಮರವಾಗಿದ್ದಾರೆ.

ದಕ್ಷಿಣ ಕನ್ನಡದ ಮೂಲದ,ಬೆಂಗಳೂರಿನಲ್ಲಿ ಜನಿಸಿದ, ದೂರದ ಬಂಗಾಳದಲ್ಲಿ ಕಲಿತ, ಮುಂಬೈಯಲ್ಲಿ ಜೀವನವನ್ನರಸಿ ಭಾರತ ಚಲನಚಿತ್ರ ರಂಗ ಕಂಡ ಓರ್ವ ಅಮೋಘ ನಟ,ನಿರ್ದೇಶಕ, ನೃತ್ಯ ಸಂಯೋಜಕ ಮತ್ತು ನಿರ್ಮಾಪಕ, ಕಲಾತ್ಮಕ, ಸಾಹಿತ್ಯಪೂರ್ಣ ಚಲನಚಿತ್ರ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದ ಶ್ರೀ ಗುರುದತ್ ಶಿವಶಂಕರ್ ಪಡುಕೋಣೆ, ನಮ್ಮೆಲ್ಲರ ಪ್ರೀತಿಯ ಗುರುದತ್ ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s