ಕನ್ನಡ ಚಿತ್ರರಂಗದವರು ಒಳ್ಳೆಯ ಚಿತ್ರ ತೆಗೆಯಲು ಕಥೆಗಳೇ ಇಲ್ಲಾ ಅಂತಾ ಹೇಳುವ ಸಮಯದಲ್ಲಿ ಮಲೆಯಾಳಂ ಚಿತ್ರವೂ ಸೇರಿದಂತೆ ಸುಮಾರು ಎಂಟರಿಂದ ಹತ್ತು ಜನಪ್ರಿಯ ಕನ್ನಡ ಚಿತ್ರಗಳು ಆಕೆಯ ಕಾದಂಬರಿಗಳನ್ನು ಆಧರಿಸಿದ್ದವು ಎಂದರೆ ಆಕೆಯ ಸಾಮರ್ಥ್ಯದ ಅರಿವಾಗುತ್ತದೆ. ಬದುಕಿದ್ದು ಕೇವಲ ಮೂವತ್ತೈದು ವರ್ಷಗಳಾದರೂ ಅದಕ್ಕಿಂತಲೂ ಹೆಚ್ಚಿನ ಸಾಹಿತ್ಯಗಳನ್ನು ರಚಿಸಿದ್ದಾಕೆ. ನಿಧನರಾಗಿ 58 ವರ್ಷಗಳೇ ಆಗಿದ್ದರೂ ಇಂದಿಗೂ ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿರುವ ಶ್ರೀಮತಿ ಅನುಸೂಯ ಶಂಕರ್ ಅವರ ಬಗ್ಗೆ ನಾವಿಂದು ತಿಳಿದು ಕೊಳ್ಳೋಣ. ಬಹುಶಃ ಅನುಸೂಯ ಶಂಕರ್ ಎಂದರೆ ಯಾರೂ ಆಕೆಯನ್ನು ಗುರುತಿಸಲಾರರು. ಅದೇ ಕಾದಂಬರಿಗಾರ್ತಿ ತ್ರಿವೇಣಿ ಎಂದರೆ ಥಟ್ ಅಂತಾ ಎಲ್ಲರಿಗೂ ತಿಳಿಯುತ್ತದೆ.
ಸೆಪ್ಟೆಂಬರ್ 1, 1928 ರಂದು ಮೈಸೂರಿನ ಚಾಮರಾಜಪುರಂ ನಲ್ಲಿ ವಾಸವಿದ್ದ ಬೆಳ್ಳೂರಿನ ಮೂಲದವರಾದ ಶ್ರೀ ಬಿ. ಎಂ. ಕೃಷ್ಣಸ್ವಾಮಿ ಮತ್ತು ತಂಗಮ್ಮ ದಂಪತಿಗೆ ಹೆಣ್ಣುಮಗುವೊಂದು ಜನಿಸಿತು. ಪೋಷರು ಆಕೆಗೆ ಭಾಗೀರಥಿ ಎಂದು ನಾಮಕರಣ ಮಾಡಿದರಾದರೂ ಶಾಲೆಯಲ್ಲಿ ಅಧಿಕೃತವಾಗಿ ಅನುಸೂಯ ಎಂದು ದಾಖಲಿಸಿದರು. ಮನೆಯಲ್ಲಿ ಸಾಹಿತ್ಯದ ವಾತಾವರಣ. ಆಕೆಯ ದೊಡ್ಡಪ್ಪ ಹೆಸರಾಂತ ಸಾಹಿತಿಗಳು ಮತ್ತು ಕನ್ನಡದ ಕಣ್ವ ಎಂದೇ ಖ್ಯಾತರಾಗಿದ್ದ ಬಿ.ಎಂ.ಶ್ರೀಗಳು. ಅಂದಿನ ಕಾಲದ ಖ್ಯಾತ ಲೇಖಕಿ ಶ್ರಿಮತಿ ವಾಣಿ ಆಕೆಯ ಚಿಕ್ಕಮ್ಮ. ಆಕೆಯ ತಂಗಿ ಆರ್ಯಂಬಾ ಪಟ್ಟಾಬಿ ಕೂಡ ಮುಂದೆ ಒಳ್ಳೆಯ ಬರಹಗಾರ್ತಿ. ಹೀಗೆ ಮನೆಯ ತುಂಬಾ ಕವಿಗಳೇ ಇದ್ದ ಕಾರಣ ಬಾಲ್ಯದಿಂದಲೇ ಅನಸೂಯ ಅವರು ಬರೆಯಲಾರಂಭಿಸಿದರು. ತಾವು ಬರೆದದ್ದನ್ನು ಯಾರೂ ಓದಬಾರದೆಂದು ತಮ್ಮ ಎಲ್ಲಾ ಬರಹಗಳನ್ನು ತಮ್ಮ ಕಪಾಟಿನಲ್ಲಿ ಬಚ್ಚಿಟ್ಟಿದ್ದರಂತೆ. ಅದೊಂದು ದಿನ ಆಕೆಯ ಬರಹಗಳು ಅವರ ತಾಯಿಯ ಕಣ್ಣಿಗೆ ಬಿದ್ದು , ಅವುಗಳನ್ನು ಓದಿ ಮೆಚ್ಚಿ, ಅರೇ ಇಷ್ಟು ಚೆನ್ನಾಗಿ ಬರೆದದ್ದನ್ನು ಯಾರಾದರೂ ಪ್ರಕಾಶಕರ ಮೂಲಕ ಪ್ರಕಾಶಿಸಬಹುದು ಎಂದು ಅಕೆಯ ಬರಹಗಳಿಗೆ ತಾಯಿಯೇ ಪ್ಗ್ರೋತ್ಸಾಹಿಸುತ್ತಾರೆ.
ಓದಿನಲ್ಲಿ ಬಹಳ ಮುಂದಿದ್ದ ಅನುಸೂಯರವರ ಪ್ರೌಢ ಶಿಕ್ಷಣದ ವರೆಗೂ ಮಂಡ್ಯದಲ್ಲಿ ಆಗಿ ನಂತರ ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಮುಂದುವರಿದು. 1946ರಲ್ಲಿ ಮಹಾರಾಜಾ ಕಾಲೇಜಿನಿಂದ ಮನಃಶಾಸ್ತ್ರದಲ್ಲಿ ಸಿದ್ದೇಗೌಡ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು. ಮೈಸೂರಿನ ಮಹಾರಾಣಿಯ ಕಲಾ ಕಾಲೇಜಿನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯಲ್ಲಿ ಚಿನ್ನದ ಪದಕ ಪಡೆದರು. ರಾಜಕೀಯ ವಿಜ್ಞಾನದ ಶ್ರೇಷ್ಠತೆಗಾಗಿ 1947 ರಲ್ಲಿ ಅವರಿಗೆ ಸಿದ್ದೇಗೌಡ ಚಿನ್ನದ ಪದಕವನ್ನು ನೀಡಲಾಯಿತು. ಕೆಲಕಾಲ ಶಿಕ್ಷಕಿಯಾಗಿ ಕೆಲಸಮಾಡಿದರಾದರೂ ತಮ್ಮ ಅನಾರೋಗ್ಯದ ಪರಿಣಾಮ ಕೆಲವನ್ನು ಮುಂದುವರಿಸಲಾಗದೇ ಮನೆಯಲ್ಲಿಯೇ ಕುಳಿತು ತಮ್ಮ ಸಾಹಿತ್ಯ ಕೃಷಿಯನ್ನು ಮುಂದುವರಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ನಿಧನರಾದಾಗ ಅವರ ಚಿತಾಭಸ್ಮವನ್ನು ಸಕಲ ಸರ್ಕಾರಿ ಗೌರವಗಳಿಂದ ಅಲಹಾದಿನ ಗಂಗಾ, ಯಮುನಾ ಮತ್ತು ಸರಸ್ವತಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು. ಆ ತ್ರಿವೇಣಿ ಎಂಬ ಪದ ಅನುಸೂಯ ಅವರಿಗೆ ಪ್ರಿಯವಾಗಿ ಅದನ್ನೇ ತಮ್ಮ ಕಾವ್ಯನಾಮವನ್ನಾಗಿ ಮಾಡಿ ಕೊಂಡ ಅನುಸೂಯವರು ತ್ರಿವೇಣಿ ಎಂಬ ಹೆಸರಿನಿಂದಲೇ ಖ್ಯಾತರಾದರು.
1951ರಲ್ಲಿ ಮೈಸೂರಿನ ಶಾರದಾ ವಿಲಾಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಎಸ್. ಎನ್. ಶಂಕರ್ ಅವರನ್ನು ವಿವಾಹವಾದ ಅನುಸೂಯ. ಅಲ್ಲಿಂದ ಮುಂದೆ ಅನುಸೂಯ ಶಂಕರ್ ಆಗುತ್ತಾರೆ. ಅವರು ಮದುವೆಯಾಗಿದ್ದೇ ಒಂದು ಕರುಣಾಜನಕವಾದ ಪ್ರಸಂಗ. ಆ ಹೊತ್ತಿಗೆ ಅವರ ಅಕ್ಕ ಪ್ರಭಾವತಿಯವರಿಗೆ ಮದುವೆಯ ನಿಶ್ಚಿತಾರ್ಥವಾಗಿರುತ್ತದೆ. ಅದೊಮ್ಮೆ ತ್ರಿವೇಣಿ, ಅವರ ಅಕ್ಕ ಮತ್ತು ತಮ್ಮ ಶಂಕರ್ ಅವರು ಒಟ್ಟಿಗೆ ಮಾತಾನಾಡುತ್ತಿರುವಾಗ ಸುಮ್ಮನೆ ತ್ರಿವೇಣಿಯವರನ್ನು ಕಿಚಾಯಿಸಲು, ಶಂಕರ್ ಅವರು ನಿಮ್ಮ ಅಕ್ಕನ ಮದುವೆ ನಿಶ್ಚಯವಾಗಿದೆ ನಿಮ್ಮದು ಯಾವಾಗ ಎಂದು ಕೇಳಿದಾಗ, ದುಃಖ ಭರಿತರಾದ ತ್ರಿವೇಣಿಯವರು ನಾನು ಅಸ್ಥಮಾ ರೋಗಿ ಎಂದು ಈ ರೀತಿಯಾಗಿ ಹಂಗಿಸುತ್ತಿರುವೇಯಾ? ನನ್ನಂತಹ ರೋಗಿಷ್ಟೆಯನ್ನು ಯಾರೂ ತಾನೇ ಮದುವೆಯಾಗುತ್ತಾರೆ? ಎಂದು ಕೇಳಿದಾಗ, ತಮ್ಮ ಅರಿವಿಲ್ಲದಂತೆ ಆದ ಈ ತಪ್ಪಿಗೆ ಶಂಕರ್ ಅವರು ಕ್ಷಮೆಯಾಚಿಸಿ ತುಂಬು ಹೃದಯದಿಂದ ತ್ರಿವೇಣಿಯವರನ್ನು ಮದುವೆಯಾಗಿ ಆಕೆಯ ಎಲ್ಲಾ ಬರಹಗಳಿಗೆ ಪ್ರೇರಕರಾಗಿ, ಪ್ರೋತ್ಸಾಹಕರಾಗಿ ಬೆನ್ನಲುಬಾಗಿ ನಿಲ್ಲುತ್ತಾರೆ.
ಹಣ್ಣೆಲೆಚಿಗುರಿದಾಗ, ಬೆಳ್ಳಿಮೋಡ, ಶರಪಂಜರ , ಮುಕ್ತಿ , ಹೂವು ಹಣ್ಣು, ಕಾಶಿಯಾತ್ರೆ, ದೂರದ ಬೆಟ್ಟ, ಬೆಕ್ಕಿನ ಕಣ್ಣು , ಬಾನುಬೆಳಗಿತು, ಹೃದಯಗೀತೆ, ಸೋತು ಗೆದ್ದವಳು ಹೀಗೆ ಸುಮಾರು 25ಕ್ಕೂ ಅಧಿಕ ಕಾದಂಬರಿಗಳಲ್ಲದೆ ಸಮಸ್ಯೆಯ ಮಗು , ಎರಡು ಮನಸ್ಸು, ಹೆಂಡತಿಯ ಹೆಸರು ಮುಂತಾದ ಕಥಾಸಂಕಲನಗಳನ್ನು ಬರೆದಿದ್ದಾರೆ. ಅವರ ಬಹುತೇಕ ಕೃತಿಗಳು ಅನೇಕ ಭಾಷೆಗಳಿಗೆ ಭಾಷಾಂತರವಾಗಿದೆ.
ಮೇಲೆ ತಿಳಿಸಿರುವ ಮೊದಲ ಐದು ಕಾದಂಬರಿಗಳು ಕನ್ನಡ ಜನಪ್ರಿಯ ಚಲನಚಿತ್ರಗಳಾದರೆ, ಬೆಕ್ಕಿನ ಕಣ್ಣು ಕಾದಂಬರಿಯನ್ನು ಕನ್ನಡಲ್ಲಿ ಬೆಳ್ಳಿತೆರೆಗೆ ತರಲು ಶ್ರೀ ಪುಟ್ಟಣ್ಣ ಕಣಗಾಲ್ ಅವರು ಪ್ರಯತ್ನಿಸಿದರಾದರೂ ಕಾರಣಾಂತರದಿಂದ ಕೈಗೂಡದಿದ್ದಾಗ ಅದನ್ನು ಮಲಯಾಳಂನಲ್ಲಿ ಪೂಚಕಣ್ಣಿ ಎಂಬ ಹೆಸರಿನಲ್ಲಿ ನಿರ್ದೇಶಿದ್ದರು. ಪ್ರೇಮ್ ನಜೀರ್, ಅಡೂರ್ ಭಾಸಿ, ತಿಕ್ಕುರಿಸಿ ಸುಕುಮಾರನ್ ನಾಯರ್ ಮೊದಲಾದವರು ಅಭಿನಯಿಸಿದ್ದ ಆ ಚಿತ್ರ ಆ ಕಾಲದಲ್ಲಿಯೇ ಅತ್ಯಂತ ಜನಪ್ರಿಯತೆಯನ್ನು ಗಳಿಸಿತ್ತು.ಇದಲ್ಲದೆ ಅವರ ಅನೇಕ ಕಾದಂಬರಿಗಳು ದೂರದರ್ಶನದಲ್ಲಿ ನೂರಾರು ಕಂತುಗಳ ಧಾರಾವಾಹಿಗಳಾಗಿ ಅತ್ಯಂತ ಜನಪ್ರಿಯತೆಯನ್ನು ಪಡೆದಿದೆ.
ತ್ರಿವೇಣಿಯವರು ದೀರ್ಘಕಾಲದಿಂದಲೂ ಆಸ್ತಮಾ ರೋಗದಿಂದ ಬಳಲುತ್ತಿದ್ದರೂ ಮೀರಾ ಎಂಬ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾರೆ. ಹೆರಿಗೆಯ ಸಮಯದಲ್ಲಿ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯವಾಗಿ ಸಂಭವಿಸಬಹುದಾದ ಪಲ್ಮನರಿ ಎಂಬಾಲಿಸಮ್ ಎಂಬ ರಕ್ತ ಹೆಪ್ಪುಗಟ್ಟುವಿಕೆಯ ಕಾರಣದಿಂದಾಗಿ ಹೆರಿಗೆ ಆದ 10 ದಿನಗಳಲ್ಲಿಯೇ ಜುಲೈ 29, 1963 ರಂದು ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿಯೇ ಹಠಾತ್ ಆಗಿ ನಿಧನರಾಗುತ್ತಾರೆ. ಆಕೆ ನಿಧನರಾದಾಗ ಮೈಸೂರಿನ ಮಹಾರಾಣಿಯವರು ತ್ರಿವೇಣಿಯವರ ಹೆರಿಗೆ ಮಾಡಿಸಿದ್ದ ವೈದ್ಯರನ್ನು ಅರಮನೆಗೆ ಕರೆಸಿಕೊಂಡು ಆಕೆ ನಿಧನ ಹೊಂದಲು ಕಾರಣವೇನೂ ಎಂಬುದನ್ನು ವಿಚಾರಿಸಿ, ಕನ್ನಡದ ಸಾಹಿತ್ಯಕ್ಷೇತ್ರ ಆಕೆಯ ನಿಧನಿದಿಂದ ಅನಾಥವಾಯಿತು ಎಂದು ದುಃಖಿಸಿದ್ದು ತ್ರಿವೇಣಿಯವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಪ್ರಶಸ್ತಿ ಪುರಸ್ಕಾರಗಳು
- 1960ರಲ್ಲಿ ಅವಳ ಮನೆ ಕಾದಂಬರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ
- 1962ರಲ್ಲಿ ಸಣ್ಣಕತೆಗಳ ಸಂಕಲನವಾದ ಸಮಸ್ಯೆಯ ಮಗು ಪುಸ್ತಕಕ್ಕೆ ದೇವರಾಜ್ ಪ್ರಶಸ್ತಿ
ನಿಧನರಾಗಿ ಸುಮಾರು 58 ವರ್ಷಗಳೇ ಕಳೆದಿದ್ದರೂ ಈ ಡಿಜಿಟಲ್ ಯುಗದಲ್ಲೂ ಆಕೆಯ ಕಾದಂಬರಿಗಳೆಲ್ಲಾ ಮರುಮುದ್ರಣಗೊಂಡು ಇಂದಿಗೂ ಇಂದಿಗೂ ಜನಪ್ರಿಯ ಲೇಖಕಿಯಾಗಿಯೇ ಉಳಿದಿರುವ ಶ್ರೀಮತಿ ಅನುಸೂಯ ಶಂಕರ್ ಅರ್ಥಾತ್ ತ್ರಿವೇಣಿಯವರು ನಮ್ಮ ಹೆಮ್ಮೆಯ ಕನ್ನಡದ ಕಲಿಗಳೇ ಸರಿ.
ಏನಂತೀರೀ?
ಸತ್ಯವಾಗಿಯೂ ಅವರ ನಿಜನಾಮ ತಿಳಿದಿರಲಿಲ್ಲ ಶ್ರೀಜಿ. ಧನ್ಯವಾದಗಳು. ಎಂದಿನಂತೆ ಸೊಗಸಾದ ವಿವರಣಾಶೈಲಿ. ಮುಂದುವರೆಸಿ.
LikeLike
Very beautifully written,as always Srikanta sir !!
I have read Triveni’ji s novels ,as a passed on hobby from my mother, never had known about the facts of her life.
Thank you for the same.
LikeLiked by 1 person
ನಾನು ಅದ್ಭುತವಾಗಿ ಬರೆದೆ ಎನ್ನುವುದಕ್ಕಿಂತ
LikeLike
ನಾನು ಅದ್ಭುತವಾಗಿ ಬರೆದೆ ಎನ್ನುವುದಕ್ಕಿಂತ ಆಕೆಯ ಜೀವನವೇ ಹಾಗಿತ್ತು. ಅದನ್ನೇ ನನ್ನ ಕೈಯ್ಯಲ್ಲಿ ಆಕೆ ಬರೆಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ಆಕೆಯ ಮಗಳ ಲೇಖನದಿಂದ ಎರವಲು ಪಡೆದಿದ್ದೇನೆ
LikeLike
ನನ್ನ ಅತ್ಯಂತ ಮೆಚ್ಛಿನ ಕಾದಂಬರಿಗಾತಿ ಶ್ರೀಮತಿ ತ್ರಿವೇಣಿ. ನನ್ನ ಕಾಲೇಜು ದಿನಗಳಲ್ಲಿ ಕಾದಂಬರಿಗಳಲ್ಲಿ ಮೇಳೈಸುತ್ತಿದ್ದ ಪ್ರೇಮ ಪ್ರಸಂಗಗಳು ಬಹಳ ಆಪ್ಯಾಯಮಾನವಾಗಿರುತ್ತಿತ್ತು.
LikeLiked by 1 person