ಡಿಸೆಂಬರ್ 16, 1971 ನಿಜಕ್ಕೂ ನಮ್ಮ ಭಾರತದ ಮೂರೂ ಸೇನೆಗಳಿಗೆ ಅತ್ಯಂತ ಸ್ಮರಣಿಯ ದಿನ. ಇಡೀ ಪ್ರಪಂಚವೇ ನಮ್ಮ ವಿರುದ್ಧವಾಗಿದ್ದರೂ, ಸ್ವತಃ ಅಮೇರಿಕಾ ಹಿಂಬಾಗಿಲಿನಿಂದ ಪಾಕೀಸ್ಥಾನಕ್ಕೆ ಸಹಾಯ ಮಾಡುತ್ತಿದ್ದರೂ, ಯಾವುದೇ ರೀತಿಯ ಆಧುನಿಕ ಶಸ್ತ್ರಾಸ್ತ್ರಗಳು ನಮ್ಮ ಬಳಿ ಇಲ್ಲದಿದ್ದರೂ ನಮ್ಮ ಭೂ,ವಾಯು ಮತ್ತು ಜಲ ಸೇನೆಗಳು ಜಂಟಿಯಾಗಿ ಛಲದಿಂದ ಪಾಕೀಸ್ಥಾನದ ವಿರುದ್ಧ ಜನರಲ್ ಮಾಣಿಕ್ ಷಾ ಅವರ ನೇತೃತ್ವದಲ್ಲಿ ಹೋರಾಡಿ ಸುಮಾರು 93000ಕ್ಕೂಅಧಿಕ ಪಾಕೀ ಸೈನಿಕರನ್ನು ಸೆರೆಗೈದು ಇಂದಿನ ಬಾಂಗ್ಲಾದೇಶದ ಚಿತ್ತಗಾಂಗ್ನಲ್ಲಿ ಅಂದಿನ ಪೂರ್ವ ಪಾಕೀಸ್ಥಾನದ ಜೆನರಲ್ ಆಮೀರ್ ಅಬ್ದುಲ್ಲ ಖಾನ್ ನಮ್ಮ ಲೆ.ಜೆನರಲ್ ಜಗಜಿತ್ ಸಿಂಗ್ ಅರೋರಾ ಮುಂದೆ ಶರಣಾದ ಅಭೂತಪೂರ್ವದಿನ. ಅಂದು ಅವರಿಬ್ಬರೂ ಸಹಿ ಮಾಡಿದ್ದ ಲೇಖನಿ ಇಂದಿಗೂ ಸಹಾ ನಮ್ಮ ಮಿಲಿಟರಿ ಸಂಗ್ರಹಾಲಯದಲ್ಲಿ ನೋಡಬಹುದಾಗಿದೆ.
1947ರಲ್ಲಿ ಧರ್ಮಾಧಾರಿತವಾಗಿಯೇ ಅಖಂಡ ಭಾರತ ಮೂರು ಭಾಗಗಳಾಗಿ ತುಂಡಾಗಿ, ಪೂರ್ವ ಪಾಕೀಸ್ಥಾನ ಮತ್ತು ಪಶ್ಚಿಮ ಪಾಕೀಸ್ಥಾನಗಳ ಮಧ್ಯೆ ಹಿಂದೂಸ್ಥಾನ ಉದಯವಾಯಿತು. ಪಾಕೀಶ್ಥಾನದ ಅಂದಿನ ಪ್ರಧಾನಿ ಜಿನ್ನ ತಮ್ಮದು ಇಸ್ಲಾಂ ಆಧಾರಿತ ದೇಶ ಎಂದು ಹೆಮ್ಮೆಯಿಂದ ಫೋಷಿಸಿಕೊಂಡರೂ, ಆಗ ನಮ್ಮ ದೇಶದಲ್ಲಿ ಶೇ.85ಕ್ಕೂ ಅಧಿಕ ಜನರೂ ಹಿಂದೂಗಳೇ ಇದ್ದರೂ ಅಂದಿನ ಪ್ರಧಾನಿ ನೆಹರು ಅವರ ಕುಚೇಷ್ಟೆಯಿಂದಾಗಿ ಜಾತ್ಯಾತೀತ ದೇಶ ಎಂದು ಕರೆದುಕೊಂಡಿದ್ದು ವಿಷಾಧನೀಯ. ಭಾರತದಲ್ಲಿನ ಮುಸ್ಲಿಮರು ನನ್ನ ಹೆಣವನ್ನು ದಾಟಿ ಕೊಂಡು ಪಾಕೀಸ್ಥಾನಕ್ಕೆ ಹೋಗಬೇಕು ಎಂದು ಭಾವನಾತ್ಮಕವಾಗಿ ಗಾಂಧಿಯವರು ಇಲ್ಲಿನ ಮುಸ್ಲಿಂರನ್ನು ಇಲ್ಲಿಯೇ ಉಳಿಯುವಂತೆ ಮಾಡಿದರೂ ಪೂರ್ವ ಮತ್ತು ಪಶ್ಚಿಮ ಪಾಕೀಸ್ಥಾನದಲ್ಲಿದ್ದ ಹಿಂದೂಗಳ ಸ್ಥಿತಿ ಅತ್ಯಂತ ಶೋಚನೀಯವಾಗಿತ್ತು. ಹಿಂದೂಗಳ ಮನೆಗಳನ್ನು ಲೂಟಿ ಮಾದಿದ್ದಲ್ಲದೆ ನಮ್ಮ ಅಕ್ಕತಂಗಿಯರ ಮಾನಭಂಗ ಮಾಡಿದರು. ಸಾವಿರಾರು ಹಿಂದೂಗಳ ರಕ್ತ ಸಿಕ್ತ ಹೆಣಗಳನ್ನು ಲಾಹೋರ್ ನಿಂದ ಭಾರತಕ್ಕೆ ಬಂದ ರೈಲಿನಲ್ಲಿ ಕಳುಹಿಸಿದ್ದನ್ನು ನೋಡಿದರೂ ನಮ್ಮ ನಾಯಕರ ಮನಸ್ಸು ಕರಗಲಿಲ್ಲ.
ಅಂದಿನಿಂದಲೂ ಸದಾಕಾಲವೂ ಒಂದಲ್ಲಾ ಒಂದು ಕಿತಾಪಾತಿ ಮಾಡುತ್ತಲೇ ಬಂದ ಪಾಕಿಗಳು ಭಾರತಕ್ಕೆ ಸದಾಕಾಲವೂ ಮಗ್ಗಲ ಮುಳ್ಳಾಗಿಯೇ ಹೋದರು. 1962ರಲ್ಲಿ ಹಿಂದೀ-ಚೀನಿ ಭಾಯ್ ಭಾಯ್ ಎಂದು ನಮ್ಮ ಅಂದಿನ ಪ್ರಧಾನಿ ನೆಹರು ಜಪಿಸುತ್ತಿದ್ದರೆ ಸದ್ದಿಲ್ಲದೆ ನಮ್ಮ ಮೇಲೆ ಅಕ್ರಮಣ ಮಾಡಿದ ಚೀನಿಗಳು ಸಾವಿರಾರು ಚದುರ ಕಿ.ಮೀ ಪ್ರದೇಶಗಳನ್ನು ಅಕ್ರಮಿಸಿಯಿಯೇ ಬಿಟ್ಟರು. ಚೀನಾದ ವಿರುದ್ಧದ ಸೋಲಿನಿಂದ ಕಂಗೆಟ್ಟಿದ್ದ ಭಾರತವನ್ನು ಸೋಲಿಸಲು ಇದೇ ಸಕಾಲವೆಂದು 1965 ಭಾರತದ ವಿರುದ್ಧ ಮತ್ತೊಮ್ಮೆ ಅಪ್ರಚೋದಿತ ಯುದ್ಧವನ್ನು ಸಾರಿದ ಪಾಕೀಸ್ಥಾನ ನಮ್ಮ ಹೆಮ್ಮೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಗಳ ದಿಟ್ಟತನ ಮತ್ತು ಕುಶಾಗ್ರಮತಿಯ ಗುಣಗಳಿಂದ ಹೇಳಹೆಸರಿಲ್ಲದೇ ಸೋತು ಹೋಗಿ ತಾಷ್ಕಂಟ್ ಒಪ್ಪಂದಕ್ಕೆ ಸಹಿಹಾಕುವ ಮೂಲಕ ಮತ್ತೊಮ್ಮೆ ತನ್ನ ಸೋಲನ್ನು ಒಪ್ಪಿಕೊಂಡಿತು. ಪಾಕೀಗಳ ವಿರುದ್ಧ ಯುದ್ದವೇನೋ ಗೆದ್ದೆವು ಆದರೆ ನಮ್ಮ ನೆಚ್ಚಿನ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಗಳು ಅತ್ಯಂತ ಅನುಮಾನಾಸ್ಪದವಾಗಿ ರಷ್ಯಾದಲ್ಲಿಯೇ ಕಳೆದುಕೊಂಡೆವು.
ಶಾಸ್ತ್ರಿಗಳ ಅಕಾಲಿಕ ಮರಣಾನಂತರ ದೇಶದ ಚುಕ್ಕಾಣಿ ಶ್ರೀಮತಿ ಇಂದಿರಾಗಾಂಧಿಯವರ ವಶವಾಯಿತು. ಪೂರ್ವ ಪಾಕಿಸ್ತಾನದಲ್ಲಿ ಸದಾಕಾಲವೂ ನಡೆಯುತ್ತಿದ್ದ ಹಿಂಸಾಚಾರ, ಹತ್ಯಾಕಾಂಡ ಅನಾಹುತಗಳಿಂದಾಗಿ ಬೇಸತ್ತ ಜನ ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಪರಿಣಾಮ ನಿರಾಶ್ರಿತರ ಸಂಖ್ಯೆಯೂ ಹೆಚ್ಚುತ್ತಿತ್ತು. ಬಂದವರಿಗೆಲ್ಲ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ನೀಡುವುದುರ ಬದಲಾಗಿ ಆ ಸಮಸ್ಯೆಯನೇ ಬುಡಸಮೇತ ನಾಶಪಡಿಸುವುದೇ ಸೂಕ್ತ ಎಂದ ದಿಟ್ಟ ನಿರ್ಧಾರವನ್ನು ತಳೆದ ಅಂದಿನ ಪ್ರಧಾನಿ ಇಂದಿರಾ ಗಾಂಧಿ 1971ರ ಡಿಸಂಬರ್ 3ರಂದು ಪಾಕಿಸ್ತಾನದ ವಾಯು ಪಡೆಯು (ಪಿಎಎಫ್) ಭಾರತ-ಪಾಕ್ ಗಡಿಯಿಂದ 480 ಕಿ.ಮೀ. ದೂರದ ಆಗ್ರಾದಲ್ಲಿರುವ ಭಾರತದ ವಾಯುನೆಲೆ ಸೇರಿದಂತೆ ವಾಯವ್ಯ ಭಾಗದ 11 ವಾಯುನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದರೆ, ಅದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನವೂ ಸಂಜೆ 5.40ರ ವೇಳೆಗೆ ನಡೆಸಿದ ದಾಳಿಯು 1971ರ ಇಂಡೋ ಪಾಕಿಸ್ತಾನ್ ಯುದ್ಧಕ್ಕೆ ಅಧಿಕೃತ ನಾಂದಿ ಹಾಡಿತು.
ಭಾರತೀಯ ಸೇನೆಯನ್ನು ಜನರಲ್ ಮಾಣಿಕ್ ಷಾ ಮುನ್ನಡೆಸುತ್ತಿದ್ದರೆ, ಪಾಕೀಸ್ಥಾನದ ಸೈನ್ಯ ಯಧ್ಯಾ ಖಾನ್ ನೇತೃತ್ವದಲ್ಲಿ ಇಸ್ರೇಲ್ ಮಾದರಿಯಲ್ಲಿ ಭಾರತದ ವಾಯುಪಡೆಯನ್ನು ನಾಶಪಡಿಸಲು ಸನ್ನದ್ಧವಾಗಿತ್ತು. ಈ ದಾಳಿಯ ಮಾಹಿತಿ ದೊರಕುತ್ತಿದ್ದಂತೆಯೇ ಭಾರತೀಯ ಸೇನಾ ಪಡೆಗಳು ಸಕಲರೀತಿಯಲ್ಲಿ ಸನ್ನದ್ಧವಾದವು. ದೃರದೃಷೃವೆಂದರೆ ಈ ಯುದ್ದಕ್ಕೆ ಅಮೇರಿಕಾ ದೇಶವು ಪರೋಕ್ಷವಾಗಿ ನೆರವು ನೀಡಿದರೆ, ಶ್ರೀಲಂಕಾ ದೇಶವು ಪಾಕಿಸ್ತಾನದ ಯುದ್ಧವಿಮಾನಕ್ಕೆ ಕೊಲಂಬೋದ ಬಂಡಾರನಾಯಿಕೆ ವಿಮಾನ ನಿಲ್ದಾಣದಲ್ಲಿ ಇಂಧನ ತುಂಬಿಸಿಕೊಳ್ಳಲು ಅವಕಾಶ ನೀಡುವ ಮೂಲಕ ಪ್ರತ್ಯಕ್ಷವಾಗಿಯೇ ಪಾಕಿಸ್ತಾನದ ಪರವಾಗಿತ್ತು. ಅಮೇರಿಕಾದ ಅಂದಿನ ಅಧ್ಯಕ್ಷ ನಿಕ್ಸನ್ ಚೀನಾದ ಕುಮ್ಮಕ್ಕಿನಿಂದಾಗಿ ಡಿ. 9ರಂದು ಬಂಗಾಳ ಕೊಲ್ಲಿಯ ಪ್ರದೇಶಕ್ಕೆ ಪಾಕೀಸ್ಥಾನದ ಪರವಾಗಿ ತಮ್ಮ ಯುದ್ಧ ವಿಮಾನಗಳನ್ನೂ ಕಳುಹಿಸಲು ನಿರ್ಧರಿಸಿದ್ದರು. ಹೀಗೆ ಭಾರತವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತವರಿದು, ಪೂರ್ವ ಪಾಕಿಸ್ತಾನದಿಂದ ಭಾರತ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮಾಡಲು ಒತ್ತಡ ಹೇರಲಾರಂಭಿಸಿತು. ಶತೃವಿನ ಶತೃ ನಮ ಮಿತ್ರ ಎನ್ನುವಂತೆ ಅಮೇರಿಕವನ್ನು ತೀವ್ರತರವಾಗಿ ವಿರೋಧಿಸುತ್ತಿದ್ದ ಅಂದಿನ ಸೋವಿಯತ್ ರಷ್ಯಾ ಭಾರತದ ವಿರುದ್ಧ ಅಮೆರಿಕಾ ಅಥವಾ ಚೀನಾ ಹಸ್ತಕ್ಷೇಪ ಮಾಡಿದರೆ, ಭಾರತದ ಪರವಾಗಿ ತಾನು ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದ್ದದ್ದು ಭಾರತಕ್ಕೆ ತುಸು ನೆಮ್ಮದಿ ತಂದಿತ್ತು
ಭಾರತದ ಐಎನ್ಎಸ್ ವಿಕ್ರಾಂತ್ ಸಮುದ್ರ ಮಾರ್ಗದ ಮೂಲಕ ಸತತವಾಗಿ ಚಿತ್ತಗಾಂಗ್ ಮತ್ತು ಕಾಕ್ಸ್ ಬಜಾರ್ ಒಳಗೊಂಡಂತೆ ಪೂರ್ವ ಪಾಕಿಸ್ತಾನದ ಅನೇಕ ಕರಾವಳಿ ಪಟ್ಟಣಗಳ ಮೇಲೆ ದಾಳಿ ನಡೆಸಲಾರಂಭಿಸಿತು. ಇದಕ್ಕೆ ಪ್ರತಿ ದಾಳಿ ನಡೆಸಲು ಪಾಕಿಸ್ತಾನವು ತನ್ನ ಪಿಎನ್ಎಸ್ ಘಾಜಿ ಸಬ್ಮೇರಿನ್ ರವಾನಿಸಿತಾದರೂ, ವಿಶಾಖಪಟ್ಟಣಂ ಬಳಿ ಬರುವಷ್ಟರಲ್ಲಿ ಅವರೇ ಇರಿಸಿದ್ದ ಮತ್ತೊಂದು ಸ್ಪೋಟಕಕ್ಕೆ ಬಡಿದು ಪುಟ್ಪಾಲ್ ಆಟದಲ್ಲಿ ಇರುವಂತೆ Self-Goal ರೀತಿಯಾಗಿ ತನ್ನದೇ ತಪ್ಪಿನಿಂದ ಘಾಜಿ ಸಬ್ಮೇರಿನ್ ನೀರುಪಾಲಾಗಿದ್ದದ್ದು ಭಾರತಕ್ಕೆ ವರದಾನವಾಯಿತಾದರೂ, ಅದರ ವಿರೋಧವಾಗಿ ಡಿ. 9ರಂದು ಭಾರತದ ಐಎನ್ಎಸ್ ಖುಕ್ರಿಯನ್ನು ಪಾಕಿಸ್ತಾನದ ಪಿಎನ್ಎಸ್ ಹ್ಯಾಂಗೋರ್ ಅರೇಬಿಯನ್ ಸಮುದ್ರದಲ್ಲಿ ಮುಳುಗುವಂತೆ ಮಾಡುವ ಮೂಲಕ 18 ಅಧಿಕಾರಿಗಳು ಮತ್ತು 176 ನಾವಿಕರನ್ನು ಬಲಿ ತೆಗೆದುಕೊಳ್ಳುವ ಮೂಲಕ ಘಾಜಿ ಸೇಡನ್ನು ತೀರಿಸಿಕೊಂಡಿತು.
ಇಷ್ಟೆಲ್ಲಾ ಧಾಳಿ ಪ್ರತಿ ಧಾಳಿಗಳು ಸುಮಾರು 13 ದಿನಗಳವರೆಗೆ ಮುಂದುವರಿದರೂ ಭಾರತ ತನ್ನ ಭೂಸೇನೆ, ವಾಯು ಸೇನೆ ಮತ್ತು ನೌಕಾಸೇನೆಗಳ ಜಂಟೀ ಧಾಳಿಯ ಪರಿಣಾಮವಾಗಿ ಪಾಕಿಸ್ತಾನದ ಅಪಾರ ಪ್ರಮಾಣದ ನಾಗರಿಕರನ್ನು ಹಾಗೂ ಸೈನಿಕರನ್ನು ಸಂಹರಿಸಿದರ ಪರಿಣಾಮವಾಗಿ ಸೋತು ದಿಕ್ಕೆಟ್ಟ ಪಾಕೀಸ್ಥಾನ ಡಿ. 16ರಂದು ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನಿಯಾಜಿ ನೇತೃತ್ವದ 93,000 ಸೈನಿಕರ ಪಡೆಯು ಪೂರ್ವ ಪಾಕಿಸ್ತಾನದಲ್ಲಿ ಭಾರತೀಯ ಸೇನೆ-ಮುಕ್ತಿ ಬಾಹಿನಿ ಜಂಟಿ ಪಡೆಗೆ ಅಂತಿಮವಾಗಿ ಶರಣಾಗಿ ಢಾಕಾದ ರಾಮ್ನಾ ರೇಸ್ ಕೋರ್ಸ್ನಲ್ಲಿ ಶರಣಾಗತಿ ಪತ್ರಕ್ಕೆ ಸಹಿ ಹಾಕುವ ಮೂಲಕ ಮತ್ತೊಮ್ಮೆ ಭಾರತದ ವಿರುದ್ಧ ತನ್ನ ಸೋಲನ್ನು ಒಪ್ಪಿಕೊಂಡಿತು. ಭಾರತವು ಯುದ್ಧ ಕೈದಿಗಳಂತೆ ವಶಪಡಿಸಿಕೊಂಡಿದ್ದ ಪಾಕಿಸ್ತಾನದ ಸೈನಿಕರು ಮತ್ತು ಅವರ ಪರವಾಗಿದ್ದ ಪೂರ್ವ ಪಾಕಿಸ್ತಾನದ ನಾಗರಿಕರನ್ನು ಬಿಡುಗಡೆ ಮಾಡಿತಲ್ಲದೇ, ಪಾಕಿಸ್ತಾನದಿಂದ ವಶಪಡಿಸಿಕೊಂಡಿದ್ದ ಕೆಲವು ಪ್ರದೇಶಗಳನ್ನು ಬಿಟ್ಟುಕೊಟ್ಟಿತು. ಇಷ್ಟಕ್ಕೇ ಸಂಪೂರ್ಣ ಮಾಡದೇ, ಪೂರ್ವ ಪಾಕೀಸ್ಥಾನವನ್ನು ಪಶ್ಚಿಮ ಪಾಕೀಸ್ಥಾನದಿಂದ ಶಾಶ್ವತವಾಗಿ ಬೇರ್ಪಡಿಸಿದ ಭಾರತ, ಬಾಂಗ್ಲಾದೇಶ ಎಂಬ ಸ್ವತಂತ್ರ ದೇಶಕ್ಕೆ ನಾಂದಿ ಹಾಡಿತು. ಅಂತಹ ಮಾಗಿಯ ಚಳಿಯಲ್ಲೂ ತಮ್ಮ ಪ್ರಾಣದ ಹಂಗನ್ನು ತೊರೆದು ದೇಶಕ್ಕಾಗಿ ಹೋರಾಡಿ ವಿಜಯವನ್ನು ತಂದಿತ್ತ ನಮ್ಮ ವೀರ ಸೇನಾನಿಗಳ ನೆನಪನ್ನು ವಿಜಯ ದಿವಸ್ ಎಂದು ಪ್ರತೀ ವರ್ಷದ ಡಿಸೆಂಬರ್ 16 ರಂದು ದೇಶಾದ್ಯಂತ ಆಚರಿಸಲಾಗುತ್ತದೆ.
ದೇಶದ ಬಗ್ಗೆ ಸದಾಕಾಳಜಿ ವಹಿಸುವ ಮತ್ತು ದೇಶದ ಹಿತಕ್ಕಾಗಿ ಎಂತಹ ವಿಪತ್ತಿನ ಸಮಯದಲ್ಲೂ ತಮ್ಮ ಪ್ರಾಣದ ಹಂಗನ್ನೂ ತೊರೆದು ದೇಶದ ಪರವಾಗಿ ನಿಲ್ಲುವ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಇಂದಿನ ಪೀಳಿಗೆಯವರಿಗೂ 1971ರ ವಿಜಯವನ್ನು ನೆನಪಿಸುವಂತೆ ಮಾಡಲು 48 ವರ್ಷಗಳಿಂದಲೂ ತಮ್ಮ ಶಾಖೆಗಳಲ್ಲಿ ಎಲ್ಲಾ ಸ್ವಯಂಸೇವಕರೂ ದಂಡದ ಪ್ರಹಾರವನ್ನು ಮಾಡುತ್ತಾ ವಿಜಯ ದಿವಸವನ್ನು ಪ್ರಹಾರ ದಿವಸವನ್ನಾಗಿಯೂ ಆಚರಿಸುತ್ತಾ ಬಂದಿದ್ದಾರೆ. ಇಂದಿನ ದಿನ ದೇಶಾದ್ಯಂತ ಲಕ್ಷಾಂತರ ಸ್ವಯಂಸೇವಕರು ಚುಮು ಚುಮು ಚಳಿಯನ್ನೂ ಲೆಕ್ಕಿಸದೆ ತಮ್ಮ ದೈಹಿಕ ಶಕ್ತ್ಯಾನುಸಾರ ದಂಡ ಪ್ರಹಾರಗಳನ್ನು ಮಾಡಿ ಅಂದು ನಮಗಾಗಿ ಮಡಿದ ನಮ್ಮ ದೇಶದ ಸೈನಿಕರಿಗೆ ಅರ್ಪಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ.
ನಮ್ಮ ಸೈನಿಕರ ವಿಜಯೋತ್ಸವವನ್ನು ಬಾಂಗ್ಲಾ ದೇಶದ ಪ್ರಜೆಗಳು ಇಂದಿಗೂ ತಮ್ಮ ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತಿರುವುದು ನಮ್ಮ ಸೈನಿಕರ ಪರಾಕ್ರಮದ ದ್ಯೋತಕವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಅಂದಿಗೂ ಇಂದಿಗೂ ಮತ್ತು ಎಂದೆಂದಿಗೂ ಇಡೀ ಜಗತ್ತಿನಲ್ಲಿ ಅತ್ಯಂತ ಕ್ಷಮತೆಯ ಸೈನ್ಯ ನಮ್ಮದೇ ಎಂದು ಇಡೀ ವಿಶ್ವವೇ ಹೇಳುವಾಗ ನಮ್ಮ ಎದೆ ಉಬ್ಬುವುದಂತೂ ಸುಳ್ಳಲ್ಲ. ಬನ್ನಿ ಒಮ್ಮೆ ಒಕ್ಕೊರಿಲಿನಿಂದ ಹೇಳೋಣ
ಬೋಲೋ….. ಭಾರತ್ ಮಾತಾ ಕೀ,,,, ಜೈ…
ಜೈ ಜವಾನ್ !!. ಆಪ್ಕೆ ಸಾತ್ ಸದಾ ರಹೇಗಾ ಹಮರಾ ಅಭಿಮಾನ್ !!!
ಏನಂತೀರೀ