ಅನ್ನದಾತ ಸುಖೀಭವ

ನಾವೆಲ್ಲಾ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶ್ರೀ ಸತ್ಯಾರ್ಥಿ ಚನ್ನಬಸಪ್ಪ ಹೊಸಮನಿ ಅವರ ಅನ್ನದಾತ ಪದ್ಯವನ್ನು ಓದಿಯೇ ಇರುತ್ತೇವೆ. ನಮ್ಮೆಲ್ಲರ ಅನ್ನದಾತರಾದ ರೈತರನ್ನು ಇದಕ್ಕಿಂತಲೂ ಉತ್ತಮವಾಗಿ ವರ್ಣಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಮನಮುಟ್ಟುವಂತಿದೆ ಈ ಪದ್ಯ.

ಇವನೆ ನೋಡು ಅನ್ನದಾತ ಹೊಲದಿ ದುಡಿದೇ ದುಡಿವನು
ನಾಡ ಜನರು ಬದುಕಲೆಂದು ದವಸ ಧಾನ್ಯ ಬೆಳೆವನು

ಮಳೆಯ ಗುಡುಗು ಚಳಿಯ ನಡುಗು ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ ಒಂದೇ ಸವನೆ ದುಡಿಯುತ

ಗಟ್ಟಿ ದೇಹ ದೊಡ್ಡ ಮನಸು ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೇ ಇರಲಿ ಹೊಂದಿಕೊಂಡು ನಡೆವರು

far1ನಮ್ಮ ಭಾರತ ದೇಶದ ಅತಿ ಹೆಚ್ಚಿನ ಆದಾಯದ ಮೂಲವೆಂದರೆ ಕೃಷಿ ಮತ್ತು ಇಷ್ಟು ದೊಡ್ಡ ಆದಾಯದ ಕಾರಣರ್ತರೇ ರೈತರು. ಹಾಗಾಗಿ ಕೃಷಿ ಮತ್ತು ರೈತ ಈ ದೇಶದ ಅವಿಭಾಜ್ಯ ಅಂಗವಾಗಿದ್ದರೂ, ರೈತರು ಇನ್ನೂ ಈ ದೇಶದ ಅಸಂಘಟಿತ ಕಾರ್ಮಿಕರಾಗಿಯೇ ಇರುವುದು ನಿಜಕ್ಕೂ ಬೇಸರದ ಸಂಗತಿಯಗಿದೆ. ಅತ್ಯಂತ ಕಷ್ಟಪಟ್ಟು ದುಡಿದ ನಂತರವೂ ಅವರ ಶ್ರಮಕ್ಕೆ ಸಲ್ಲಬೇಕಾಗಿರುವ ಪ್ರತಿಫಲ ಸಿಗದ ಕಾರಣ, ಸ್ವಾತಂತ್ರ್ಯ ಬಂದು ಇಷ್ತು ವರ್ಷಗಳದರು ರೈತರ ಬಾಳು ಕರುಣಾಜನಕ ಸ್ಥಿತಿಯಲ್ಲಿರುವುದಲ್ಲದೇ, ಪ್ರತಿ ದಿನವೂ ದೇಶಾದ್ಯಂತ ನೂರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆಹಾರ ಮನುಷ್ಯರಿಗೆ ಜೀವನಾವಶ್ಯಕ ಎಂಬುದರ ಅರಿವಿದ್ದರೂ ಸಹಾ, ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರವೇ ರೈತರಿಂದ ಕೃಷಿ ಭೂಮಿಗಳನ್ನು ಕಿತ್ತು ಕೊಂಡು ಅಲ್ಲಿ ದೊಡ್ಡ ದೊಡ್ಡದಾದ ಕಾರ್ಖಾನೆಗಳನ್ನು ಸ್ಥಾಪಿಸಿ ಪರಿಸರದ ಹಾನಿಗೆ ಕಾರಣವಾಗುತ್ತಿರುವುದಲ್ಲದೇ, ಅದೇ ರೈತರನ್ನೇ ಆ ಕಾರ್ಖಾನೆಗಳಲ್ಲಿ ಸಂಬಳಕ್ಕೆ ಕೈ ಚಾಚುವಂತೆ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ಕೃಷಿ ಕಾರ್ಯವು ಮಾನವಕುಲದ ಅತ್ಯಂತ ಹಳೆಯ ಮತ್ತು ಅಗತ್ಯವಾದ ಉದ್ಯಮವಾಗಿದ್ದು ದೈನಂದಿನ ಚಟುವಟಿಕೆಗಳಿಗೆ ಅತ್ಯಾವಶ್ಯಕವಾಗಿದೆ. ಭಾರತವೂ ಶತಮಾನಗಳಿಂದ ಕೃಷಿ ಪ್ರಧಾನ ದೇಶವಾಗಿರುವ ಕಾರಣ, ಇಲ್ಲಿನ ರೈತರ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ನಮ್ಮ ರೈತರೇನೂ ಬೇಡುವ ಭಿಕ್ಷುಕರೇನಲ್ಲಾ ಬದಲಾಗಿ ಅವರು ಕೈ ಎತ್ತಿ ಕೊಡುವ ಕೊಡುಗೈ ದಾನಿಗಳು. ಅವರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆ ದೊರೆತು ಅವರ ಜೀವನ ಹಸನಾದಲ್ಲಿ ಖಂಡಿತವಾಗಿಯೂ ಯಾವುದೇ ರೈತ ಕೃಷಿಯಿಂದ ವಿಮುಖನಾಗುವ, ಆತ್ಮಹತ್ಯೆಗೆ ಶರಣಾಗುವ ಪ್ರಮೇಯವೇ ಬರುವುದಿಲ್ಲ. ದುರಾದೃಷ್ಟವಷಾತ್ ಇಂದು ಮೈ ಬಗ್ಗಿಸಿ ದುಡಿಯುವವರಿಗಿಂತಲೂ ಮಧ್ಯವರ್ತಿಗಳ ಸಂಖ್ಯೆಯೇ ಅಧಿಕವಾಗಿರುವ ಕಾರಣ, ರೈತರಿಂದೆ ಕನಿಷ್ಟ ಬೆಲೆಗೆ ಕೊಂಡು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರಿ ಅವರುಗಳು ಲಾಭಗಳಿಸುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.

ಸರ್ಕಾರವೂ ಇದನ್ನೇ ಮನಗಂಡು ಕೃಷಿ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುವುದಲ್ಲದೇ, 60 ರ ದಶಕದಲ್ಲಿ ಆರಂಭಿಸಿದ ಹಸಿರು ಕ್ರಾಂತಿಯು ಪಂಜಾಬ್ ಮತ್ತು ಹರಿಯಾಣದ ಜೊತೆಗೆ ಇಡೀ ದೇಶದ ಕೃಷಿಯ ಭೂದೃಶ್ಯವನ್ನು ಬದಲಾಯಿಸಿತು. ಇದು ದೇಶದ ಆರ್ಥಿಕ ಅಭಿವೃದ್ಧಿಗೆ ಕಾರಣವಾಯಿತು. ರೈತರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಲೆಂದೇ ಕಿಸಾನ್ ದಿವಾಸ್ ಅರ್ಥಾತ್ ರೈತರ ದಿನಾಚರಣೆಯನ್ನು ಸಹ ಪ್ರಾರಂಭಿಸಲಾಯಿತು.

farm3ದೇಶದ ಐದನೇ ಪ್ರಧಾನಿಯಾಗಿ ಜುಲೈ 28, 1979 ರಿಂದ 1980 ರ ಜನವರಿ 14 ರವರೆಗೆ ಅಧಿಕಾರವನ್ನು ನಡೆಸಿದ ಶ್ರೀ ಚೌದರಿ ಚರಣ್ ಸಿಂಗರು ತಮ್ಮ ಅಧಿಕಾರದ ಅವಧಿಯಲ್ಲಿ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅನೇಕ ನೀತಿಗಳನ್ನು ಜಾರಿಗೆ ತಂದರು. ಭೂಮಾಲೀಕರನ್ನು ಒಗ್ಗೂಡಿಸಲು ಮತ್ತು ಹೋರಾಡಲು ಪ್ರೇರೇಪಿಸಿದರು. ದೇಶದ ಎರಡನೇ ಪ್ರಧಾನಿಗಳಾಗಿದ್ದ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಗಳ ಜೈ ಜವಾನ್-ಜೈ ಕಿಸಾನ್ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು ಎಂದರೂ ಅತಿಶಯವಲ್ಲ. ಸ್ವತಃ ಉತ್ತಮ ಬರಹಗಾರರಾಗಿದ್ದ ಕಾರಣ, ಅವರು ರೈತರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಗಳ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದು ರೈತರ ಜೀವನ ಮಟ್ಟವನ್ನು ಸುಧಾರಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು. ರೈತ ಈ ದೇಶದ ಬೆನ್ನಲುಬು ಹಾಗಾಗಿ ಅವರ ಏಳಿಗೆಗೆ ಕೈಲಾದ ಮಟ್ಟಿಗೆ ಶ್ರಮಿಸಿದ ಮತ್ತು ರೈತ ಹಿನ್ನೆಲೆಯವರೇ ಆದ ಶ್ರೀ ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವಾದ ಡಿಸೆಂಬರ್ 23ರಂದು ರಾಷ್ಟ್ರೀಯ ರೈತ ದಿನಾಚರಣೆ ಅರ್ಥಾತ್ ಕಿಸಾನ್ ದಿವಸ್ ಎಂದು ದೇಶಾದ್ಯಂತ ಅಚರಿಸುವುದನ್ನು ಜಾರಿಗೆ ತರಲಾಯಿತು.


ಕೃಷಿತೋ ನಾಸ್ತಿ ದುರ್ಭಿಕ್ಷಂ ಜಪತೋ ನಾಸ್ತಿ ಪಾತಕಮ್ |
ಮೌನಿನಃ ಕಲಹೋ ನಾಸ್ತಿ ನ ಭಯಂ ಚಾಸ್ತಿ ಜಾಗ್ರತಃ ||

images (13)ಅಂದರೆ ವ್ಯವಸಾಯದಿಂದ ಬರಗಾಲವಿಲ್ಲ. ಜಪಮಾಡುವುದರಿಂದ ಪಾಪವಿಲ್ಲ. ಮೌನವಾಗಿರುವುದರಿಂದ ಜಗಳವಿಲ್ಲ. ಎಚ್ಚರವಾಗಿರುವವರಿಗೆ ಭಯವಿಲ್ಲ ಎಂಬ ಶುಭಾಷಿತವಿದೆ. ಅದೇ ರೀತಿ ಟ್ರಾಕ್ಟರ್ ಸಗಣಿ ಹಾಕೋದಿಲ್ಲ, ಗೋವುಗಳು ಹೊಗೆ ಉಗುಳೋದಿಲ್ಲ ಎಂಬ ಮತ್ತೊಂದು ಮಾತಿದೆ. ಇವೆರಡನ್ನು ಸಮೀಕರಿಸಿದಲ್ಲಿ, ಶ್ರಮವಹಿಸಿ ಪಾರಂಪರಿಕ ಸಾವಯವ ಕೃಷಿಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಪರಿಸರಕ್ಕೂ ಯಾವುದೇ ಹಾನಿಯಿಲ್ಲ ಮತ್ತು ರೈತರು ಸುಭಿಕ್ಷರಾಗುತ್ತಾರೆ.

ದುರಾದೃಷ್ಟವಷಾತ್ ಇಂದು ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬುವ ಹಪಾಹಪಿಗೆ ಬಿದ್ದು ಹೆಚ್ಚಿನ ಇಳುವರಿ ಪಡೆಯುವ ಸಲುವಾಗಿ ಸಾಂಪ್ರಾದಾಯಿಕ ಕೃಷಿ ಪದ್ದತಿಗೆ ತಿಲಾಂಜಲಿ ಕೊಟ್ತು, ಕೃಷಿಯನ್ನೂ ಯಾಂತ್ರೀಕೃತಗೊಳಿಸಿರುವುದಲ್ಲದೇ, ಯಥೇಚ್ಚವಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುವ ಮೂಲಕ ಭೂಮಿಯ ಸಹಜ ಫಲವತ್ತತೆ ಮತ್ತು ಸಾರವನ್ನು ಕಡಿಮೆ ಮಾಡುತ್ತಿರುವುದಲ್ಲದೇ, ಭೂಮಿಯನ್ನು ವಿಷಕಾರಿಯನ್ನಾಗಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ. ಬೆಳೆಯುವ ಭೂಮಿಯೇ ವಿಷಕಾರಿಯಾದಾಗ, ಅದರಲ್ಲಿ ಬೆಳೆದ ಬೆಳೆಗಳೂ ವಿಷಕಾರಿಗಳಾಗಿ ಪರಿಣಮಿಸಿ, ಪ್ರತ್ಯಕ್ಷವಾಗಿ ಈಗ ಕಾಣಿಸಿಕೊಳ್ಳುತ್ತಿರುವ ಬಹುತೇಕ ಖಾಯಿಲೆಗಳಿಗೆ ಮೂಲವಾಗಿದೆ ಎಂದರೂ ತಪ್ಪಾಗದು.

ಹಾಗಾಗಿ ರಾಜಕೀಯ ನಾಯಕರ ದಿನಾಚರಣೆಗೆ ರೈತರ ಹೆಸರನ್ನಿಟ್ಟು ಅ ದಿನಾಚರಣೆಗೆ ಸಾರ್ವತ್ರಿಕ ರಜೆಯನ್ನು ನೀಡಿ (ಕಿಸಾನ್ ದಿವಸ್ ಉತ್ತರ ಪ್ರದೇಶದಲ್ಲಿ ಸಾರ್ವತ್ರಿಕ ರಜೆಯ ದಿನವಾಗಿದೆ) ಜನರ ತೆರಿಗೆಯ ಹಣದಲ್ಲಿ ಮತ್ತಷ್ಟು ರಾಜಕೀಯ ನಾಯಕರುಗಳಿಗೆ ಹಾರ ತುರಾಯಿಗಳನ್ನು ಹಾಕಿ ಸನ್ಮಾನ ಮಾಡಿ ಹಣವನ್ನು ಪೋಲು ಮಾಡುವ ಬದಲು ನಿಜವಾಗಿಯೂ ರೈತರಿಗೆ ಸಹಾಯವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದು ಸದ್ಯಕ್ಕೆ ಅತ್ಯವಶ್ಯಕವಾಗಿದೆ.

ವಿಷಕಾರಕ ರಾಸಾಯನಿಕ ಗೊಬ್ಬರಗಳನ್ನು ಬಳಸಿ ಹತ್ತು ಪಟ್ಟು ಬೆಳೆ ಬೆಳೆದು ದೇಶಾದ್ಯಂತ ಅನಾರೋಗ್ಯವನ್ನು ಉಲ್ಪಣಗೊಳಿಸುವ ಬದಲು ಸಾಂಪ್ರದಾಯಕ ಕೃಷಿ ಪದ್ದತಿಯಲ್ಲೇ ಪರಿಸರಕ್ಕೂ ಜನ ಜೀವನಕ್ಕೂ ಹಾನಿಯಾಗದ ರೀತಿಯಲ್ಲಿ ಸ್ವಲ್ಪವೇ ಬೆಳೆದರೂ ಅದಕ್ಕೆ ಸೂಕ್ತವಾದ ಬೆಲೆಯನ್ನು ದೊರೆಯುವಂತೆ ಮಾಡುವಂತಾದಲ್ಲಿ ಮಾತ್ರವೇ ನಿಜವಾಗಿಯೂ ರೈತ ದಿನಾಚರಣೆ ಅರ್ಥಪೂರ್ಣ ಎನಿಸಿಕೊಳ್ಳುತ್ತದೆ.

far2ದೇಶದ ಬೆನ್ನೆಲುಬಾಗಿರುವ ಸಮಸ್ತ ಅನ್ನದಾತರಿಗೆ‌ ಡಿಸೆಂಬರ್ 23ರ, ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ ಮತ್ತೊಮ್ಮೆ ಶುಭಾಶಯಗಳು. ನಮ್ಮ ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗುವುದರ‌ ಮೂಲಕ ಅವರ ಜೀವನ ಹಸನಾಗಿ ಆತ್ಮಹತ್ಯೆ ನಿಲ್ಲಲಿ ಎಂದು ಆಶೀಸೋಣ.

far4ಗೋವಿನ ಪ್ರತಿಯೊಂದು ಉತ್ಪನ್ನಗಳು ಉಪಯೋಗಕಾರಿಯಾಗಿರುವ ಕಾರಣ, ದೇಸೀ ಗೋವುಗಳ‌ ತಳಿಯನ್ನು ಉಳಿಸೋಣ ಮತ್ತು ಬೆಳೆಸೋಣ. ಆರೋಗ್ಯವಂತರಾಗಿರೋಣ. ತನ್ಮೂಲಕ ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಲೋಕಾನಿ ಸನ್ಮಂಗಳಾನಿ ಭವಂತು ಎಂದು ಹಾರೈಸೋಣ.

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s