ಕಾಲಿದ್ದವರು ಹಂಪೆ ಸುತ್ತಿ ನೋಡಬೇಕು ಮತ್ತು ಕಣ್ಣಿದ್ದವರು ಕನಕಗಿರಿ ನೋಡಬೇಕು ಎಂಬ ನಾನ್ನುಡಿ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಚಲಿತವಾಗಿದೆ. ಅಂದಿನ ಕಾಲದ ವಿಜಯನಗರದ ಗತವೈಭವ ಇಂದು ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಹಂಚಿಹೋಗಿವೆ. ಹಂಪೆಯಿಂದ ಸುಮಾರು 30 ಕಿ.ಮಿ ದೂರದಲ್ಲಿರುವ ಕೊಪ್ಪಳ ಜಿಲ್ಲೆಯ ಪ್ರಮುಖ ತಾಲ್ಲೂಕ್ ಕೇಂದ್ರವೇ ಕನಕಗಿರಿ. ಇಲ್ಲಿನ ಕನಕಾಚಲಪತಿ ದೇವಸ್ಥಾನದಿಂದಾಗಿ ಇದು ಐತಿಹಾಸಿಕ ಸ್ಥಳವಾಗಿದೆ. ಈ ಶ್ರೀಕ್ಷೇತ್ರವನ್ನು ಎರಡನೆ ತಿರುಪತಿ ಎಂಬ ನಂಬಿಕೆ ಇರುವ ಕಾರಣ ಹಂಪೆಗೆ ಬರುವ ಬಹುತೇಕ ಪ್ರವಾಸಿಗರು ಇಲ್ಲಿಯೂ ಬೇಟಿ ನೀಡಿ ಶ್ರೀ ಕನಕಾಚಲಪತಿ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ಈ ಸ್ಥಳ ಗಂಗಾವತಿಯಿಂದ 21 ಕಿ.ಮಿ, ಕೊಪ್ಪಳದಿಂದ 40 ಕಿಮಿ ದೂರಲ್ಲಿದೆ.
ಹಿಂದೆ ಈ ಪುಟ್ಟ ಊರಿನಲ್ಲಿ ಸುಮಾರು 701 ಬಾವಿಗಳು ಮತ್ತು 701 ದೇವಸ್ಥಾನಗಳು ಇದ್ದವಂತೆ. ಇಂದು ಬಹುತೇಕ ಭಾವಿಗಳು ಜನರ ಭೂಮಿಯಾಸೆಯಿಂದ ಸಮತಟ್ಟಾಗಿದ್ದರೂ ಈಗಲೂ ನಮಗೆ ಬಹುತೇಕ ದೇವಾಲಯಗಳನ್ನು ಅಷ್ಟೋ ಇಷ್ಟು ಕಾಣ ಬಹುದಾಗಿದೆ. ಕನಕಗಿರಿಯಲ್ಲಿ ಒಂದು ಸಣ್ಣ ಮಗುವು ಒಂದು ಕಲ್ಲನ್ನು ಎಸೆದರೆ ಅದು ಒಂದಲ್ಲಾ ಒಂದು ದೇವಾಲಯದ ಮೇಲೆಯೇ ಬೀಳುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕನಕಗಿರಿಯಲ್ಲಿ ಪ್ರತಿ ನಾಲ್ಕು ಹೆಜ್ಜೆಗಳಿಗೂ ಒಂದು ದೇವಸ್ಥಾನಗಳನ್ನು ನೋಡ ಬಹುದಾಗಿದೆ. ಇದೇ ಕಾರಣದಿಂದಾಗಿ ಈ ಕನಕಗಿರಿಯನ್ನು ದೇವಾಲಯಗಳ ತವರು ಎಂದರೂ ಅತಿಶಯವಲ್ಲ. ಕನಕಗಿರಿ ನರಸಿಂಹಸ್ವಾಮಿ ದೇವಾಲಯದ ಪ್ರಾಂಗಣದಲ್ಲಿಯೇ ಹತ್ತಾರು ಪುಟ್ಟ ಪುಟ್ಟ ಗುಡಿಗಳನ್ನು ನೋಡಬಹುದಾಗಿದೆ.
ಈ ಊರಿಗೆ ಕನಕಗಿರಿ ಎಂಬ ಹೆಸರು ಬರಲು ಒಂದು ಸುಂದರವಾದ ದಂತ ಕಥೆಯೇ ಇದೆ. ವಾರಾಣವಾತಿ ಎಂಬ ಹೆಸರಿನ ಈ ಪ್ರದೇಶವು ಪುಷ್ಪ ಮತ್ತು ಜಯಂತಿ ಎಂಬ ಎರಡು ನದಿಗಳ ಜೊತೆಗೆ ಗುಪ್ತಗಾಮಿನಿಯಾದ ಗೋಪಿಕಾ ನದಿಯ ಸಂಗಮ ಪ್ರದೇಶವಾಗಿ ದಟ್ಟವಾದ ಹರಿದ್ವರ್ಣ ಕಾಡಿನಿಂದ ಆವೃತ್ತಗೊಂಡಿತ್ತು. ಇಲ್ಲಿ ಜಯಂತ ನರಸಿಂಹ ಎಂಬ ದೇವರು ನೆಲೆಸಿದ್ದನು. ಈ ನದಿ ತಟದಲ್ಲಿ ಇಪ್ಪತ್ತ ನಾಲ್ಕು ಜನ ಬೌದ್ಧ ಮುನಿಗಳಲ್ಲಿ ಒಬ್ಬರಾಗಿದ್ದರೆನ್ನಲಾದ ಕನಕಮುನಿಗಳು ತಪಸ್ಸು ಮಾಡಿ ಕೆಲ ಕ್ಷಣ ಕನಕವೃಷ್ಟಿ ಅರ್ಥಾತ್ ಚಿನ್ನದ ಮಳೆ ಸುರಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶವನ್ನು ಕನಕಗಿರಿ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತಿದೆ. ಅದೇ ರೀತಿ ಸ್ಕಂದ ಪುರಾಣದ ತುಂಗ ಮಹಾತ್ಮೆಯಲ್ಲಿ ಈ ಸ್ಥಳವನ್ನು ಸುವರ್ಣಗಿರಿ ಎಂದು ವಿವರಿಸಿ ಈ ಸ್ಥಳವರ್ಣನೆ ಮತ್ತು ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥ ದಾಸರು ಈ ದೇವರ ಬಗ್ಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ.
ಇತಿಹಾಸ ತಜ್ಞರ ಪ್ರಕಾರ ಮೌರ್ಯ ದೊರೆ ಅಶೋಕ ಚಕ್ರವರ್ತಿ ಕನಕಗಿರಿಯನ್ನು ದಕ್ಷಿಣ ಭಾರತದ ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನೆಂದೂ ಅಭಿಪ್ರಾಯಪಡುತ್ತಾರೆ. 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಇರಬಹುದು ಎಂದು ಇತಿಹಾಸ ತಜ್ಞರು ಹೇಳುತ್ತಾರೆ.
ಮುಂದೆ ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಳಚೂರ್ಯರು, ವಿಜಯನಗರದ ಅರಸರು, ಮರಾಠರು ಹಾಗೂ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಆಳಿದ ಈ ನಾಡು ವಿಜಯನಗರದರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟಿದೆ. ಇತಿಹಾಸ ಪ್ರಸಿದ್ಧ ಕುಮಾರರಾಮನ ತಾಯಿ ಹರಿಯಾಲ ದೇವಿ ಈ ಗುಜ್ಜಲ ವಂಶಕ್ಕೆ ಸೇರಿದವಳೆಂದೂ ಇತಿಹಾಸಕಾರರು ಊಹಿಸುತ್ತಾರೆ. ಈ ಊರಿನ ಗ್ರಾಮದೇವತೆ ಉಡುಚುಲಮ್ಮ ಅಂದರೆ ರೋಗ ನಿರೋದಕ ದೇವತೆ ಎಂದು ಪ್ರಖ್ಯಾತಳಾಗಿದ್ದಾಳೆ.
ಇಲ್ಲಿನ ದೇವಾಲಯ ನಿರ್ಮಾಣವಾದ ಕಥೆ ನಿಜಕ್ಕೂ ರೋಚಕವಾಗಿದೆ. ಮೂರು ನದಿಗಳ ಸಂಗಮದಿಂದಾಗಿ ದಟ್ಟವಾದ ಕಾಡಿನಂತಿದ್ದ ಈ ಪ್ರದೇಶ ನಂತರ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಇಲ್ಲಿದ್ದ ಲಿಂಗಾಕಾರದ ಜಯಂತ ನರಸಿಂಹ ಸಾಲಿಗ್ರಾಮವು ಮಣ್ಣೊಳಗೆ ಹೂತು ಅದರ ಮೇಲೆ ಹುತ್ತವೊಂದು ಬೆಳೆದು ಕೊಂಡಿತ್ತು. ಅದೊಮ್ಮೆ ದನಗಾಹಿಗಳು ತಮ್ಮಲ್ಲಿದ್ದ ಹಸುವೊಂದು ಆ ಹುತ್ತಕ್ಕೆ ಹಾಲನ್ನು ಸುರಿಸುತ್ತಿರುವುದನ್ನು ಕಂಡು ಆಶ್ಚರ್ಯ ಚಕಿತರಾಗಿ ಅಲ್ಲಿನ ಗುಜ್ಜಲ ವಂಶದ ಮೊದಲ ದೊರೆ ಪರಸಪ್ಪನಿಗೆ ಈ ವಿಷಯವನ್ನು ತಿಳಿಸಿದರು. ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಎನ್ನುವಂತೆ ಪರಸಪ್ಪ ಉಡಚಿನಾಯಕನೂ ಹಸು ಹುತ್ತಕ್ಕೆ ಹಾಲೆರೆಯುವುದನ್ನು ಕಣ್ಣಾರೆ ಕಂಡು ಆ ಹುತ್ತದ ಮಹತ್ವವನ್ನು ತಿಳಿಯಲು ಹುತ್ತವನ್ನು ಕೀಳಿಸಲು ಮುಂದಾದಾಗ ಕೆಲ ಕ್ಷಣ ಮೂರ್ಛೆ ಹೋಗುತ್ತಾನೆ. ಇದರಿಂದ ಚಿಂತಿತನಾಗಿದ್ದ ಪರಸಪ್ಪನಿಗೆ ಕನಸಿನಲ್ಲಿ ಭಗವಂತನು ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ಈ ಹುತ್ತದಲ್ಲಿ ಇರುವುದಾಗಿ ತಿಳಿಸಿ ಭಕ್ತರ ಭವರೋಗ ಕಳೆಯುವುದಕ್ಕಾಗಿ ಇಲ್ಲಿ ದೇವಾಲಯ ನಿರ್ಮಾಣ ಮಾಡಲು ಸೂಚಿಸುತ್ತಾನೆ. ಆ ಕೂಡಲೇ ಪರಸಪ್ಪನು ವಿಜಯನಗರ ಅರಸ ಪ್ರೌಢ ದೇವರಾಯನಿಗೆ ತನ್ನ ಸ್ವಪ್ನದಲ್ಲಿ ವೆಂಕಟರಮಣನ ಆಗ್ರಹವನ್ನು ತಿಳಿಸುತ್ತಾನೆ. ಆಗ ವಿಜಯನಗರದ ಅರಸರು 12 ಗ್ರಾಮಗಳನ್ನು ಪರಸಪ್ಪನಿಗೆ ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ, ದೇವಾಲಯ ನಿರ್ಮಿಸಿ ಈ ದೇವರನ್ನು ಕನಕರಾಯ ಎನ್ನುವ ಹೆಸರಿನಿಂದ ಕರೆಯಲಾರಂಭಿಸಿ ಇದನ್ನು ಎರಡನೆ ತಿರುಪತಿ ಎಂದು ಕರೆಯಲಾಗುತ್ತದೆ.
208 ಅಡಿ ಉದ್ದ ಹಾಗೂ 90 ಅಡಿ ಅಗಲವಿರುವ ವಿಶಾಲವಾದ ದೇವಾಲಯದಲ್ಲಿ, ಶ್ರೀ ಕನಕಾಚಲ ದೇವರು ಸಾಲಿಗ್ರಾಮ ರೂಪದಲ್ಲಿದ್ದರೆ ಪ್ರಸ್ತುತ ಅದರ ಮೇಲೆ ಅಲಂಕಾರಿಕವಾಗಿ ನೋಡಲು ರಮಣೀಯವಾಗಿರುವಂತೆ ಉಗ್ರನರಸಿಂಹನ ಮುಖವಾಡವನ್ನು ಇಟ್ಟಿರುವುದು ಭಕ್ತರ ಗಮನ ಸೆಳೆಯುತ್ತದೆ, ಮೂಲ ದೇವಾಲಯದ ಪ್ರಾಂಗಣದಲ್ಲಿಯೇ ಲಕ್ಷ್ಮೀ ದೇವಾಲಯವಿದ್ದು ಸುಂದರ ಕೆತ್ತನೆಯಿಂದ ಕೂಡಿದೆ. ಇಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಮಧ್ಯರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರರ ವಿವಾಹದ ಹಾಗೂ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕದ ಹಾಗೂ ಮತ್ತಿತರ ಅಪರೂಪದ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ಒಳ ಪ್ರಾಕಾರದಲ್ಲಿ ಬ್ರಹ್ಮ, ಕೃಷ್ಣ, ಹನುಮಂತ, ಶಿವ, ಗರುಡ, ಸರಸ್ವತಿ ಮಂದಿರಗಳು, ಪಾಕಶಾಲೆ, ಯಜ್ಞಶಾಲೆ, ಕಲ್ಯಾಣ ಮಂಟಪಗಳು ಇವೆ. ಕನಕಾಚಲ ದೇವಾಲಯದ ಮುಂದೆ ಗರುಡ ಗುಡಿ ಇದ್ದು, ಹೊರ ಪ್ರಾಂಗಣದಲ್ಲಿ ಪ್ರದಕ್ಷಿಣಿಪಥವಿದೆ. ಬ್ರಹ್ಮ ,ವಿಷ್ಣು,ಮಹೇಶ್ವರ ಗುಡಿಗಳಿವೆ. ಆಳೆತ್ತರದ ಸುಂದರ ಮೂಲಪ್ರಾಣದೇವರಾದ ಆಂಜನೇಯನ ಸುಂದರ ವಿಗ್ರಹವಿದೆ. ಈ ದೇವಸ್ಥಾನಕ್ಕೆ ಭವ್ಯವಾದ ಮಹಾದ್ವಾರ ಮತ್ತು ಆಕರ್ಷಣೀಯ ಪಂಚ ಗೋಪುರಗಳಿದ್ದು, ಇಲ್ಲಿನ ಪಂಚ ಕಳಸ ದರ್ಶನದಿಂದ ಮಹಾ ಪಾಪ ವಿನಾಶವಾಗುತ್ತದೆ ಎಂಬ ನಂಬಿಕೆಯಿದೆ. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳ ಹಸಿವನ್ನು ನೀಗಿಸಲು ಪ್ರತಿದಿನ ಮಧ್ಯಾಹ್ನ ಉಚಿತ ದಾಸೋಹದ ವ್ಯವಸ್ಥೆಯೂ ಇಲ್ಲಿದೆ.
ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ (ಮಾರ್ಚ್ -ಏಪ್ರಿಲ್ ) ಈ ಕನಕಾಚಲಪತಿಗೆ ತಿರುಪತಿಯ ತಿಮ್ಮಪ್ಪನಿಗೆ ನಡೆಯುವಂತೆಯೇ ಅತ್ಯಂತ ವೈಭವೋಪೇತವಾಗಿ ಬ್ರಹ್ಮರಥೋತ್ಸವ ನಡೆಯುತ್ತದೆ. ಹೋಳಿ ಹುಣ್ಣಿಮೆಯ ಒಂದು ದಿನದ ಮುಂಚೆ ಪಟ ಕಟ್ಟುವ ಮೂಲಕ ಜಾತ್ರೆ ಆರಂಭವಾಗಿ ಮುಂದಿನ 9 ದಿನಗಳು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ. ಪ್ರತಿ ದಿನವು ಒಂದೊಂದು ಉತ್ಸವಗಳಾದ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ತಿರುಪತಿಯಲ್ಲಿ ನಡೆಯುವಂತೆ ನಿತ್ಯ ಬೆಳಗ್ಗೆ ಹಾಗೂ ಸಂಜೆ ಉತ್ಸವಗಳನ್ನು ರಾಜಬೀದಿಯಲ್ಲಿ ಮೆರವಣಿಗೆಯೊಂದಿಗೆ ನಡೆಸಲಾಗುತ್ತದೆ.
ಉಡಿಚ ನಾಯಕನ ಆಳ್ವಿಕೆ ಕಾಲದಲ್ಲಿ ನಿರ್ಮಾಣವಾಗಿದ್ದ ಕನಕಗಿರಿಯ ತೇರು ದಕ್ಷಿಣ ಭಾರತದಲ್ಲಿಯೇ ಅತಿ ಎತ್ತರದ ತೇರು ಎಂಬ ಖ್ಯಾತಿ ಪಡೆದಿದೆ. 1905ರಲ್ಲಿ ಪುನರ್ನಿಮಿಸಲಾದ ಬೃಹತ್ ರಥದಲ್ಲಿ ಮಹಾಭಾರತ, ರಾಮಾಯಣದ ಕಥಾನಕಗಳ ಕೆತ್ತನೆ ಇದೆ. ಜಾತ್ರೆಯ ಸಮಯದಲ್ಲಿ ರಾಜ್ಯದ ವಿವಿಧ ಕಡೆಯಿಂದ ಸರ್ವಧರ್ಮೀಯರೂ ಯಾವುದೇ ಜಾತಿ – ಧರ್ಮ ಭೇದವಿಲ್ಲದೆ ಈ ದೇವಸ್ಥಾನಕ್ಕೆ ಆಗಮಿಸಿ ಯಥಾಶಕ್ತಿ ನೈವೇದ್ಯ ಮಾಡಿ, ಹಲವರು ತಲೆಮಂಡೆ ನೀಡಿದರೆ ಇನ್ನು ಕೆಲವು ಕರ್ಮಠರು ದೀಡ ನಮಸ್ಕಾರ ಹಾಕಿ, ದೇವರಿಗೆ ಮುಡುಪು, ಬೆಳ್ಳಿ, ಬಂಗಾರ ಹಾಗೂ ವಸ್ತ್ರಾದಿಗಳನ್ನು ಮತ್ತು ಅನ್ನದಾಸೋಹಕ್ಕೆ ಮತ್ತು ಪ್ರತಿ ಅಮವಾಸ್ಯೆಗೆ ದವಸ, ಧಾನ್ಯ, ಪಾತ್ರೆಗಳನ್ನು ಕಾಣಿಕೆ ಸಲ್ಲಿಸಿಸುವ ಮುಖಾಂತರ ಆ ದೇವರ ಕೃಪಾರ್ಥಕ್ಕೆ ಪಾತ್ರರಾಗುತ್ತಾರೆ.
ಕೇವಲ ಈ ದೇವಸ್ಥಾನವಲ್ಲದೇ ಇನ್ನೂ ನೂರಾರು ದೇವಾಲಯಗಳು ವೆಂಕಟಾಪತಿ ಭಾವಿ, ತಿರುಪತಿಯಲ್ಲಿರುವಂತೆಯೇ ಇರುವ ಪುಷ್ಕರಣಿಯನ್ನು ಹೀಗೆ ಇಡೀ ಒಂದು ದಿನವಿಡೀ ನೋಡಬಹುದಾದ ಪುರಾಣ ಪ್ರಸಿದ್ಧ ಐತಿಹ್ಯವಾದ ಪುಣ್ಯಕ್ಷೇತ್ರವಾಗಿದೆ ಕನಕಗಿರಿ. ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವ ಗಾದೆಯಂತೆ ಸಮಯ ಮಾಡಿಕೊಂಡು ವಿಜಯನಗರ ಸಾಮ್ರಾಜ್ಯದ ಸುತ್ತ ಮುತ್ತಲು ಒಂದು ವಾರ ಸುತ್ತಿ ಹಾಕಿ ನಮ್ಮ ಕನ್ನಡಿಗರ ವಾಸ್ತು, ಶಿಲ್ಪಕಲೆ ಮತ್ತು ಪರಂಪರೆಯನ್ನು ನಮ್ಮ ಮಕ್ಕಳಿಗೂ ತಿಳಿಸುವ ಪ್ರಯತ್ನ ಮಾಡೋಣ.
ಏನಂತೀರೀ?
ನಿಮ್ಮವನೇ ಉಮಾಸುತ
Super
LikeLike
Very beautiful message given by Sri. Shrikanta Balaganchi Namaskaragalu
Nimmavane adda
Ramu, Ramanna, Ramachanda. GH
LikeLiked by 1 person