ಸಾಹಸಸಿಂಹ ವಿಷ್ಣುವರ್ಧನ್

vishnu3.jpeg

ಆತ ಕನ್ನಡ ಚಿತ್ರರಂಗ ಕಂಡ ಆತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ಆದರೆ ಅಷ್ಟೇ ದುರದೃಷ್ಟವಂತ ನಟ. ಸಾಮಾಜಿಕವಾಗಿರಲೀ, ಪೌರಾಣಿಕವಾಗಿರಲೀ, ಕಮರ್ಷಿಯಲ್ ಆಗಿರಲೀ, ಕಲಾತ್ಮಕವಾಗಿರಲೀ ಯಾವುದೇ ಸಿನಿಮಾ ಅದರೂ ಅದಕ್ಕೊಪ್ಪುವ ನಟ. ನಟನೆ, ನೃತ್ಯ, ಸಾಹಸ ಯಾವುದೇ ಇರಲಿ ಎಲ್ಲದ್ದಕ್ಕೂ ಸೈ. ಸ್ಪಷ್ಟವಾದ ಉಚ್ಚಾರ, ನೇರವಾದ ಸಂಭಾಷಣೆ, ಹಾಡುಗಾರಿಕೆಯಲೂ ತನ್ನ ಛಾಪನ್ನು ಮೂಡಿಸಿದ್ದ ನಟ ಅವರೇ ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಸಾಹಸಸಿಂಹ ಡಾ. ವಿಷ್ಣುವರ್ಧನ್.

ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಗ್ರಾಮದ ಮೂಲದ ಆದರೆ ಮೈಸೂರಿನಲ್ಲಿ ನೆಲೆಸಿದ್ದ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳಿಗೆ ಸೆಪ್ಟೆಂಬರ್ 18, 1950ರಂದು ಜನಿಸಿದ ನೋಡಲು ಕೆಂಪಗೆ ದುಂಡದುಂಡಗಿದ್ದ ಗಂಡು ಮಗುವಿಗೆ ಸಂಪತ್ ಕುಮಾರ್ ಎಂದು ಹೆಸರಿಟ್ಟರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ನಡೆಯಿತು. ಅವರ ತಂದೆಯವರು ಕನ್ನಡ ಚಲನಚಿತ್ರರಂಗದಲ್ಲಿ ಅದಾಗಲೇ ಖ್ಯಾತ ಸಂಗೀತ ನಿರ್ದೇಶಕರಾಗಿ ಮತ್ತು ಸಂಭಾಷಣೆಕಾರಾಗಿ ಗುರುತಿಸಿಕೊಂಡಿದ್ದರು. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೇ ತಮ್ಮ ಕುಟುಂಬದದ ವಾಸ್ತವ್ಯವನ್ನು ಮೈಸೂರಿನ ಚಾಮುಂಡಿಪುರಂನಿಂದ ಬೆಂಗಳೂರಿನ ಜಯನಗರಕ್ಕೆ ಬದಲಾಯಿಸಿದ ಕಾರಣ, ಸಂಪತ್ ಕುಮಾರ್ ತಮ್ಮ ಮಿಡ್ಲ್ ಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರಿಸಿ, ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಹೆಚ್ ನರಸಿಂಹಯ್ಯನವರ ಅಡಿಯಲ್ಲಿ ಪಡೆದುಕೊಂಡರು.

ಹೆಸರು ಸಂಪತ್ ಕುಮಾರ್ ಎಂದಿದ್ದರೂ ಶಾಲಾ ಕಾಲೇಜಿನಲ್ಲಿ ಕುಮಾರ್ ಎಂದೇ ಖ್ಯಾತಿ ಪಡೆದಿದ್ದವರು ಓದಿಗಿಂತ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೇ ಹೆಚ್ಚಿನ ಆಸಕ್ತಿ. ಶಾಲಾ ಕಾಲೇಜು ದಿನಗಳಿಂದಲೇ ನಾಟಕ ಮತ್ತು ಹಾಡಿನಲ್ಲಿ ಎತ್ತಿದ ಕೈ. ಯಾವುದೇ ಸ್ಪರ್ಧೆಯಲ್ಲಿ ಕುಮಾರ್ ಭಾಗವಹಿಸುತ್ತಿದ್ದಾರೆಂದರೆ ಅಲ್ಲೊಂದು ಬಹುಮಾನ ಕಟ್ಟಿಟ್ಟ ಬುತ್ತಿ ಎಂಬುದು ಅವರ ಗೆಳೆಯರ ಬಳಗದಲ್ಲಿ ಮಾತಾಗಿತ್ತು.

ತಂದೆಯವರು ಚಿತ್ರರಂಗದಲ್ಲಿಯೇ ಇದ್ದ ಕಾರಣ, 1955ರಲ್ಲಿಯೇ ಬಾಲ ನಟನಾಗಿ ಶಂಕರ್ ಸಿಂಗ್ ನಿರ್ಮಾಣದ ಶಿವಶರಣ ನಂಬಿಯಕ್ಕ ಎಂಬ ಸಿನೆಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು ನಂತರ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿಯೂ ಕೂಡ ಬಾಲ ನಟನಾಗಿ ಕುಮಾರ್ ಅಭಿನಯಿಸಿದ್ದರು. ಮುಂದೆ ತಮ್ಮ 21ನೆಯ ವಯಸ್ಸಿನಲ್ಲಿ ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ, ಖ್ಯಾತ ನಿರ್ದೇಶಕ ಗಿರೀಶ್ ಕಾರ್ನಾಡ್ ಅವರ ವಂಶವೃಕ್ಷ ಚಿತ್ರದಲ್ಲಿ ಸಣ್ಣದೊಂದು ಪಾತ್ರದಲ್ಲಿಯೂ ನಟಿಸಿದ್ದರು.

chamaiah.jpeg

ಇದೇ ಸಮಯದಲ್ಲಿ ಪುಟ್ಟಣ್ಣ ಕಣಗಾಲರು ತರಾಸು ಅವರ ನಾಗರಹಾವು ಕಾದಂಬರಿಯನ್ನು ತೆರೆಗೆ ತರಲು ನಿರ್ಧರಿಸಿ ಆ ಚಿತ್ರದ ರಾಮಾಚಾರೀ ಪಾತ್ರಕ್ಕೆ ನವ ಯುವಕನನ್ನು ಹುಡುಕುತ್ತಿದ್ದಾಗ ಅವರ ಕಣ್ಣಿಗೆ ಕುಮಾರ್ ಬೀಳುತ್ತಾರೆ. ಮೊದಲ ನೋಟದಲ್ಲಿಯೇ ಅತನ ಹಾವ, ಭಾವ, ನೋಟ ಎಲ್ಲವೂ ಮೆಚ್ಚುಗೆಯಾಗಿ ಸಂಪತ್ ಕುಮಾರ್ ಎಂಬ ತರುಣನಿಗೆ ವಿಷ್ಣುವರ್ಧನ್ ಎಂದು ಮರುನಾಮಕರಣ ಮಾಡಿ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಸುರದ್ರೂಪಿ ಮತ್ತು ಪ್ರತಿಭಾವಂತ ನಟನನ್ನು ಕೊಡುಗೆಯಾಗಿ ನೀಡಿದರು. ಅದೇ ಸಿನಿಮಾದ ಮೂಲಕ ಖ್ಯಾತ ನಟ ಅಮರನಾಥ್ (ಅಂಬರೀಷ್) ಮತ್ತು ಧೀರೇಂದ್ರ ಗೋಪಾಲ್ ಕೂಡಾ ನಟರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. 1972ರಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರ ವಿಷ್ಣುವರ್ಧನ್, ಅಶ್ವಥ್, ಆರತಿ, ಅಂಬರೀಷ್, ಧೀರೇಂದ್ರ ಗೋಪಾಲ್ ಮತ್ತು ಜಯಂತಿ ಅವರ ಚಿತ್ರರಂಗದ ಬದುಕನ್ನೇ ಬದಲಾಯಿಸಿತು ಎಂದರೂ ತಪ್ಪಾಗಲಾರದು. ನಾಯಕಿ ಅಲಮೇಲು(ಅರತಿ)ಅನ್ನು ಚುಡಾಯಿಸುವ ಜಲೀಲನ ಪಾತ್ರದಲ್ಲಿ ಬರುವ ಅಂಬರೀಷ್ ಮತ್ತು ಚಿತ್ರದುರ್ಗದ ಒನಕೆ ಓಬ್ಬವ್ವನ ಪಾತ್ರದ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳುವ ಜಯಂತಿಯವರ ಅಭಿನಯ ಇಂದಿಗೂ ಯಾವುದೇ ಶಾಲಾಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿರುವುದನ್ನು ಕಾಣ ಬಹುದಾಗಿದೆ. ಗುರು ಶಿಷ್ಯರ ಸಂಬಂಧ ದ್ವಾಪರ ಯುಗದಲ್ಲಿ ದ್ರೋಣಾಚಾರ್ಯ ಮತ್ತು ಏಕಲವ್ಯನಂತಿದ್ದರೆ, ಕಲಿಯುಗದಲ್ಲಿ ಚಾಮಯ್ಯ ಮೇಷ್ಟ್ರು ಮತ್ತು ರಾಮಚಾರಿಯಂತಿರಬೇಕು ಎನ್ನುವಷ್ಟರ ಮಟ್ಟಿಗೆ ಪ್ರಖ್ಯಾತಿ ಹೊಂದಿದೆ.
ರಾಜ್ಯಾದ್ಯಂತ ಬಿಡುಗಡೆಯಾದ ಚಿತ್ರ ನಾನಾ ಕಡೆ ಶತದಿನೋತ್ಸವ ಆಚರಿಸಿದರೆ ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ರಾತ್ರೋರಾತ್ರಿ ವಿಷ್ಣುವರ್ಧನ್ ಕನ್ನಡ ಚಿತ್ರರಸಿಕರ ಹೃದಯಕ್ಕೆ ಲಗ್ಗೆ ಹಾಕುವುದರಲ್ಲಿ ಯಶಸ್ವಿಯಾಗಿದ್ದಲ್ಲದೇ, ಆ ಚಿತ್ರ ರಾಷ್ಟ್ರಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತದೆ.

ಈ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ ಹತ್ತಾರು ಚಿತ್ರಗಳು ವಿಷ್ಣುವರ್ಧನ್ ಅವರನ್ನು ಅರಸಿ ಬಂದು ಅದರಲ್ಲಿ ಬಹುತೇಕ ಚಿತ್ರಗಳು ಯಶಸ್ವಿಯಾಗಿ ಬೇಕೋ ಬೇಡವೋ ಜನ, ರಾಜಕುಮಾರರ ನಂತರದ ಸ್ಥಾನವನ್ನು ವಿಷ್ಣುವರ್ಧನರಿಗೆ ಕೊಡಲಾರಂಭಿಸಿದರು. ಈ ದಿಗ್ಗಜರಿಬ್ಬರೂ ಸೇರಿ ಗಂಧದಗುಡಿ ಚಿತ್ರದಲ್ಲಿ ನಟಿಸುತ್ತಿರುವಾಗ ಹೋರಾಟದ ದೃಶ್ಯವೊಂದರಲ್ಲಿ, ವಿಷ್ಣುವರ್ಧನ್ ಮತ್ತು ರಾಜ್ ಕುಮಾರ್ ಪರಸ್ಪರ ಬಂದೂಕಿನಿಂದ ಹೋರಾಟ ಮಾಡುವ ಸನ್ನಿವೇಶ ಇರುತ್ತದೆ. ದುರಾದೃಷ್ಟವಶಾತ್ ವಿಷ್ಣುವರ್ಧನ್, ರಾಜಕುಮಾರರತ್ತ ಗುಂಡೊಂದನ್ನು ಹಾರಿಸುವಾಗ ಸಹಾಯಕನ ತಪ್ಪಿನಿಂದಾಗಿ ನಕಲಿ ಬಂದೂಕಿನ ಬದಲಾಗಿ ಅಸಲೀ ಬಂದೂಕಿನಿಂದ ಹಾರಿದ ಗುಂಡಿನಿಂದ ಅದೃಷ್ಟವಷಾತ್ ರಾಜಕುಮಾರರು ತಪ್ಪಿಸಿಕೊಂಡರು. ಈ ವಿಷಯದ ಕುರಿತು ಆ ಕ್ಷಣದಲ್ಲೇ ವಿಷ್ಣುವರ್ಧನ್ ರಾಜಕುಮಾರರ ಕ್ಷಮೆಯನ್ನು ಕೇಳಿದರೂ ಕೆಲವರು ಇದು ರಾಜಕುಮಾರರ ಹತ್ಯೆಯ ಯತ್ನ ಎಂಬಂತೆ ಬಿಂಬಿಸಿ ಆ ದಿಗ್ಗಜರಿಬ್ಬರ ನಡುವೆ ಕಂದಕ ಮಾಡುವುದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಾರೆ. ಅದೇ ಸಮಯದಲ್ಲಿ ವಿಷ್ಣುವರ್ಧನ್ ಅವರ ತಂದೆಯವರ ನಿಧನರಾದಾಗ ಯಾರೋ ಕಿಡಿಗೇಡಿಗಳು ಆವರ ಮನೆಯತ್ತ ಕಲ್ಲು ತೂರಿದ್ದಲ್ಲದೇ ಶವಯಾತ್ರೆಯಲ್ಲೂ ದಾಂಧಲೆ ಎಬ್ಬಿಸಿದರು. ಇವೆಲ್ಲವುಗಳಿಂದ ಬೇಸೆತ್ತ ವಿಷ್ಣುವರ್ಧನ್ ಬೆಂಗಳೂರಿನ ಸಹವಾಸವೇ ಬೇಡ ಎಂದು ದೂರದ ಮದ್ರಾಸಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿಬಿಟ್ಟರು.

vishnu_bharati2.jpg

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಿಷ್ಣುವರ್ಧನ್ ಅವರ ಕೈಹಿಡಿದವರೆಂದರೆ ಖ್ಯಾತ ನಿರ್ಮಾಪಕ ಎನ್ ವೀರಾಸ್ವಾಮಿ (ವಿ ರವಿಚಂದ್ರನ್ ಅವರ ತಂದೆ)ಯವರು, ಪ್ರಚಂಡ ಕುಳ್ಳ ದ್ವಾರಕೀಶ್ ಮತ್ತು ಜೀವದ ಗೆಳೆಯ ಅಂಬರೀಷ್. ವೀರಾಸ್ವಾಮಿಯವರು ತಮ್ಮ ಬಹುತೇಕ ಸಿನಿಮಾಗಳಲ್ಲಿ ವಿಷ್ಣುವರ್ಧನರಿಗೆ ಅವಕಾಶ ನೀಡಿದರೆ, ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಜೋಡಿಯ ಹತ್ತಾರು ಸಿನಿಮಾಗಳು ಒಂದಾದ ಮೇಲೊಂದು ಯಶಸ್ವಿಯಾಗಿ ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನರಿಗೊಂದು ಶಾಶ್ವತ ಸ್ಥಾನ ಮಾನ ದೊರೆಯುವಂತಾಯಿತು. ಇದೇ ಸಮಯದಲ್ಲಿಯೇ ಅಂದಿನ ಕಾಲದಲ್ಲೇ ಪಂಚ ಭಾಷಾ ತಾರೆಯಾಗಿದ್ದ ಖ್ಯಾತ ನಟಿ ಭಾರತಿಯವರೊಂದಿಗೆ ವಿಷ್ಣುವರ್ಧನ್ ಅವರ ವಿವಾಹವೂ ಜರುಗುತ್ತದೆ..

vishnu_Bharathi

ಮುಂದೆ ಎಂಭತ್ತರ ದಶಕದಲ್ಲಿ ಕರ್ನಾಟಕದಲ್ಲಿ ವಾತಾವರಣ ತಿಳಿಯಾದ ಮೇಲೆ ಪುನಃ ಬೆಂಗಳೂರಿನ ತಮ್ಮ ಜಯನಗರಕ್ಕೇ ಹಿಂದಿರುಗಿದ ವಿಷ್ಣು ಅಲ್ಲಿಂದ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ.ಕನ್ನಡ ಸೇರಿದಂತೆ ತಮಿಳು(6) , ತೆಲುಗು(4) ಮಲಯಾಳಂ(3) ಮತ್ತು ಹಿಂದಿ ( 4) ಭಾಷೆಗಳೂ ಸೇರಿದಂತೆ ಸುಮಾರು 220ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದರು. ಸಿನಿಮಾ ಅಲ್ಲದೇ ಎಂಬತ್ತರ ದಶಕದಲ್ಲಿ ಶಂಕರ್ ನಾಗ್ ನಿರ್ದೇಶನದ ಜನಪ್ರಿಯ ಮಾಲ್ಗುಡಿ ಡೇಸ್ ಧಾರಾವಾಹಿಯ ರುಪೀಸ್ ಫಾರ್ಟಿ-ಫೈವ್ ಎ ಮಂತ್ ಎಂಬ ಸಂಚಿಕೆಯಲ್ಲಿಯೂ ವಿಷ್ಣುವರ್ಧನ್ ಅಭಿನಯಿಸಿದ್ದರು.

ತಮ್ಮ ಚಲನಚಿತ್ರಗಳ ಸಾಧನೆಗಾಗಿ ಅಭಿಮಾನಿಗಳಿಂದ ಹಲವಾರು ಪ್ರಶಸ್ತಿ ಮತ್ತು ಬಿರುದುಗಳು ಸಂದಿವೆ

 • ಸಾಹಸ ಸಿಂಹ
 • ಅಭಿನಯ ಭಾರ್ಗವ
 • ಮೈಸೂರು ರತ್ನ
 • ಗೌರವ ಡಾಕ್ಟರೇಟ್
 • ವಿಷ್ಣುದಾದ
 • ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ.
 • ಅತ್ಯುತ್ತಮ ನಟನೆಗಾಗಿ ಏಳು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
 • ಅತ್ಯುತ್ತಮ ನಟನೆಗಾಗಿ ಎಂಟು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ
 • ಜೀವಮಾನ ಸಾಧನೆ ಪ್ರಶಸ್ತಿ ಡಾ. ರಾಜ್‌ಕುಮಾರ್ ರಾಜ್ಯ ಪ್ರಶಸ್ತಿ – 2008
 • ಇವರ ನೆನಪಿನಲ್ಲಿಯೇ ಬೆಂಗಳೂರು ಮಹಾನಗರ ಪಾಲಿಕೆ ಉತ್ತರಹಳ್ಳಿಯ ಮುಖ್ಯರಸ್ತೆಗೆ ಡಾ.ವಿಷ್ಣುವರ್ಧನ್ ರಸ್ತೆ ಎಂದು ಹೆಸರಿಸಿದ್ದಾರೆ
 • ಕನ್ನಡ ಚಿತ್ರರಂಗದಲ್ಲಿ 14ಬಾರಿ ದ್ವಿಪಾತ್ರಗಳಲ್ಲಿ ಅಭಿನಯಿಸಿ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಹೆಗ್ಗಳಿಗೆ
 • ವಿಷ್ಣು ಅವರ ಜೊತೆ ಅತಿ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರದ್ದಾದರೆ, ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಗಳೆಂದು ಹೆಸರಾಗಿದೆ.

ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರ ಗೆಳೆತನ ನಾಗರಹಾವು ಚಿತ್ರದಿಂದ ಆರಂಭವಾಗಿ ಅದು ಕಡೆಯ ತನಕ ಒಡಹುಟ್ಟಿದವರ ಹಾಗೆಯೇ ಮುಂದುವರೆಯಿತು. ಗೆಳೆತನ ಎಂದರೆ ವಿಷ್ಣು-ಅಂಬಿಯ ತರಹ ಕುಚುಕು ರೀತಿಯಲ್ಲಿ ಇರಬೇಕು ಎಂದು ಜನರು ಹೇಳುವ ಮಟ್ಟಿಗೆ ಇತ್ತು. ಸಾಧಾರಣವಾಗಿ ಯಾರ ಮಾತನ್ನೂ ಕೇಳದಿದ್ದ ಅಂಬರೀಷ್, ವಿಷ್ಣುವರ್ಧನ್ ಹೇಳಿದರೆಂದರೆ ಮರು ಮಾತಿಲ್ಲದೇ ಒಪ್ಪಿಕೊಳ್ಳುತ್ತಿದ್ದರು ಎಂದರೆ ಅವರಿಬ್ಬರ ನಡುವಿನ ಅವಿನಾಭಾವ ಸಂಬಂಧ ಹೇಗಿತ್ತು ಎಂಬ ಅರಿವಾಗುತ್ತದೆ.

vishnu5

ಬಾಲ್ಯದಿಂದಲೂ ಕ್ರಿಕೆಟ್ ಆಟದತ್ತ ಒಲವಿದ್ದ ವಿಷ್ಣುವರ್ಧನ್ ಅತ್ಯುತ್ತಮ ಎಡಗೈ ಆಲ್ರೌಂಡರ್ ಆಗಿದ್ದರು. ತಮ್ಮದೇ ಒಡನಾಡಿಗಳೊಂದಿಗೆ ವಿಷ್ಣುವರ್ಧನ್ ಸ್ನೇಹಲೋಕ ಎಂಬ ತಂಡವನ್ನು ಕಟ್ಟಿಕೊಂಡು ಬಸವನ ಗುಡಿಯ ನ್ಯಾಷನಲ್ ಕಾಲೇಜ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದರು. ಇಂದಿಗೂ ಸಹಾ ಅವರ ನೆನಪಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತದೆ.

vishnu7

ವಿಷ್ಣುವರ್ಧನ್ ತಮ್ಮ ಕಡೆಯ ದಿನಗಳಲ್ಲಿ ಅಧ್ಯಾತ್ಮದತ್ತ ಹೆಚ್ಚಿನ ಒಲವನ್ನು ತೋರಲಾರಂಭಿಸಿದರು. ಬನ್ನಂಜೆ ಗೋವಿಂದಾಚಾರ್ಯರನ್ನು ತಮ್ಮ ಆಧ್ಯಾತ್ಮಿಕ ಗುರುವಾಗಿ ಸ್ವೀಕರಿಸಿ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದದ್ದಲ್ಲದೇ ಚಿತ್ರೀಕರಣ ಹೊರತಂತೆ ಅವರ ವೇಷ ಭೂಷಣ ಮತ್ತು ಹಾವ ಭಾವ ಮಾತು ಕತೆ ಎಲ್ಲವೂ ಆಧ್ಯಾತ್ಮಿಕವಾಗಿಯೇ ಇರುತ್ತಿತ್ತು. ಈ ವಿಷಯದಲ್ಲಿ ಮತ್ತೊಬ್ಬ ಹಿರಿಯ ನಟ ಇತ್ತೀಚೆಗಷ್ಟೇ ನಿಧನರಾದ ಶ್ರೀ ಶಿವರಾಂ ಅವರು ಅವರ ಜೊತೆಗಾರರಾಗಿದ್ದರು.

cashwath

ತಮ್ಮ ಸಾವು ಅವರಿಗೆ ತಿಳಿದಿತ್ತೇನೋ ಎನ್ನುವಂತೆ ಆಪ್ತರಕ್ಷಕ ಚಿತ್ರದಲ್ಲಿ ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೇ! ಇನ್ನೆಲ್ಲಾ ಜನ್ಮದಲ್ಲೂ ಹುಟ್ಟೋದು ಇಲ್ಲೇನೆ! ಪ್ರೀತ್ಸೋದು ಎಂದು ನಿಮ್ಮನ್ನೇ!! ಹೇ ಹೇ ಹೇ ಸಿಂಹ ಸಿಂಹ ಸಿಂಹ. ಎಂಬ ಸಾಲಿನ ಮೂಲಕ ಮೊತ್ತ ಮೊದಲ ಬಾರಿಗೆ ಸಾವಿನ ಮಾತುಗಳನ್ನು ತಮ್ಮ ಹಾಡಿನ ಮೂಲಕ ಹೇಳಿಕೊಂಡಿದ್ದರು. ಕಾಕತಾಳೀಯವೆಂಬಂತೇ ಆ ಚಿತ್ರವೇ ಅವರ ಕಟ್ಟ ಕಡೆಯ ಚಿತ್ರವಾಗಿ ದಿನಾಂಕ 30.12.2009ರಂದು ತಮ್ಮ ಹುಟ್ಟೂರಾದ ಮೈಸೂರಿನಲ್ಲಿ ಅಕಾಲಿಕವಾಗಿ ನಿಧನರಾದರು. ಕೇವಲ ಒಂದು ದಿನ ಹಿಂದೆ 29.12.2009ರಂದು ಕನ್ನಡ ಚಿತ್ರರಂಗದ ಖ್ಯಾತ ಸಂಗೀತಗಾರ ಸಿ. ಅಶ್ವಥ್ ಅವರ ನಿಧನ ವಿಷ್ಣುವರ್ಧನ್ ಅವರ ಮೇಲೆ ಬಹಳವಾಗಿ ಪರಿಣಾಮ ಬೀರಿತ್ತು ಅದನ್ನು ಆ ದುಖಃವನ್ನು ಅಂದೇ ರಾತ್ರಿ ತಮ್ಮ ಕುಚಿಕು ಗೆಳೆಯ ಅಂಬಿಯೊಡನೆ ಹಂಚಿಕೊಂಡು ಬೇಸರ ಪಟ್ಟಿದ್ದರಂತೆ.

vishnu9.jpeg

ವಿಷ್ಣುವರ್ಧನ್ ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರು ನಟಿಸಿರುವ ನಾಗರಹಾವು, ಗಂಧದ ಗುಡಿ, ಭೂತಯ್ಯನಮಗ ಅಯ್ಯು, ಕಳ್ಳ ಕುಳ್ಳ, ನಾಗರಹೊಳೆ, ಕಿಟ್ಟು ಪುಟ್ಟು, ಗುರು ಶಿಷ್ಯರು, ಸಾಹಸಸಿಂಹ, ಜಿಮ್ಮಿಗಲ್ಲು, ಸುಪ್ರಭಾತ, ಬಂಧನ, ನೀ ಬರೆದ ಕಾದಂಬರಿ, ಜೀವನ ಚಕ್ರ, ಕರ್ಣ, ಜಯಸಿಂಹ, ಮುತ್ತಿನಹಾರ, ಸಾಮ್ರಾಟ್, ಮಹಾ ಕ್ಷತ್ರಿಯ, ಜೀವನದಿ, ವೀರಪ್ಪನಾಯಕ, ಸೂರ್ಯವಂಶ, ಯಜಮಾನ, ಕೋಟಿಗೊಬ್ಬ, ಆಪ್ತಮಿತ್ರ, ಈ ಬಂಧನ, ಆಪ್ತರಕ್ಷಕ ಹೀಗೆ ನೂರಾರು ಚಿತ್ರಗಳ ಮೂಲಕ
ನಮ್ಮೊಂದಿಗೆ ಸದಾಕಾಲವೂ ಇದ್ದೇ ಇರುತ್ತಾರೆ

vishnu_maraka

ಅವರ ಕುಟುಂಬದ ಇಚ್ಚೆಯಂತೆಯೇ ಅವರ ನೆಚ್ಚಿನ ತಾಣವಾದ ಬಾಲಣ್ಣನವರ ಅಭಿಮಾನ್ ಸ್ಟುಡಿಯೋವಿನ ಗಣೇಶ ದೇವಸ್ಥಾನದ ಬಳಿಯೇ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳನ್ನು ನಡೆಸಿತಾದರೂ ಇಂದಿಗೆ ದಶಕವೇ ಕಳೆದರೂ ಅವರ ಸ್ಮಾರಕ ನಿರ್ಮಾಣವಾಗದಿರುವುದು ನಿಜಕ್ಕೂ ಬೇಸರದ ಸಂಗತಿ.

ಬದುಕಿದ್ದಾಗಲೂ ಸುಖಾಸುಮ್ಮನೆ ಹತ್ತಾರು ಆರೋಪಗಳು, ನಾನಾರೀತಿಯ ತೊಂದರೆಗಳನ್ನು ನೀಡಿದ ಕಾಣದ ಕೈಗಳು ಅಥವಾ ವಿಧಿಯ ಆಟ, ಸಾವಿನ ನಂತರವಾದರೂ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡದೇ ಹೋಗಿರುವುದು ನಿಜಕ್ಕೂ ದುಖಃಕರವಾದ ವಿಷಯವೇ ಸರಿ. ಇತ್ತೀಚಿಗೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಸಾಹಸ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಂಗರಾಜನ್ ಎಂಬ ನಟ ವಿಷ್ಣುವರ್ಧನ್ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಜನಾಕ್ರೋಶದ ನಂತರ ಕ್ಷಮೆ ಕೇಳಿದ್ದು ಹಚ್ಚಹಸಿರಾಗಿದ್ದಾಗಲೇ, ಬೆಂಗಳೂರಿನ ವಿಜಯನಗರ ಬಳಿ ಅವರ ಅಭಿಮಾನಿಗಳು ಪ್ರೀತಿಯಿಂದ ಸ್ಥಾಪಿಸಿದ್ದ ಪುತ್ಥಳಿಯನ್ನು ಯಾರೋ‌ ಕಿಡಿಗೇಡಿಗಳು ಅವರ ಅಪಾರ ಅಭಿಮಾನಿಗಳ ಹೃದಯಕ್ಕೆ ನೋವನ್ನು ಉಂಟುಮಾಡಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಸಾಕಷ್ಟು ನ್ಯಾಯಾಲಯದ ಹೋರಾಟದ ನಂತರ ಮೈಸೂರಿನ ಹೆಗ್ಗಡದೇವನ ಕೋಟೆಯ ಉದ್ದೂರು ಕ್ರಾಸ್ ಬಳಿ ವಿಷ್ಣುವರ್ಧನ್ ಅವರ ಭವ್ಯವಾದ ಸ್ಮಾರಕಕ್ಕೆ ಗುದ್ದಲಿ ಪೂಜೆ ನಡೆದಿದೆ. ವಿಷ್ಣು ಅವರ ಕುಟುಂಬ ಮತ್ತು ರಾಜ್ಯ ಸರ್ಕಾರದ ನೆರವಿನಿಂದ, ವಿಷ್ಣು ಅಭಿಮಾನಿಗಳ ಅಪೇಕ್ಷೆಯಂತೆ ಅತೀ ಶೀಘ್ರದಲ್ಲಿಯೇ ಅಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಗೊಂಡು ನಮ್ಮ ಮುಂದಿನ ಪೀಳಿಗೆಯವರಿಗೂ ವಿಷ್ಣುವರ್ಧನ್ ಅವರ ಪರಿಚಯವಾಗಲೀ ಎಂಬುದೇ ಎಲ್ಲಾ ಅಭಿಮಾನಿಗಳ ಆಸೆಯಾಗಿದೆ.

ಏನಂತೀರೀ?

ನಿಮ್ಮವನೇ ಉಮಾಸುತ

5 thoughts on “ಸಾಹಸಸಿಂಹ ವಿಷ್ಣುವರ್ಧನ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s