ಪೇಜಾವರ  ಶ್ರೀ ವಿಶ್ವೇಶ ತೀರ್ಥರು

ಉಡುಪಿ ಅಂದ ತಕ್ಷಣ ನಮಗೆ ನೆನಪಾಗೋದು ಶ್ರೀಕೃಷ್ಣ ಪರಮಾತ್ಮ ಕನಕನ ಕಿಂಡಿ, ಆಷ್ಟ ಮಠಗಳು ಮತ್ತು ಅಲ್ಲಿನ ದಾಸೋಹ. ಇವೆಲ್ಲವ್ವಕ್ಕೂ ಕಳಸ ಪ್ರಾಯವಾಗಿ, ಇಡೀ ದೇಶಕ್ಕೆ ಉಡುಪಿಯನ್ನು ಹೆಚ್ಚಾಗಿ ಪರಿಚಯಿಸಿದ ಮತ್ತು ದೇಶಾದ್ಯಂತ ಎಲ್ಲೇ ಧಾರ್ಮಿಕ ಚಟುವಟಿಕೆಗಳು ನಡೆಯಲಿ ಆಥವಾ ಧರ್ಮಾಧಾರಿತ ಯಾವುದೇ ಸಮಸ್ಯೆಗಳಾದಲ್ಲಿ ಅದಕ್ಕೆ ಪರಿಹಾರವಾಗಿ ಉಡುಪಿಯತ್ತಲೇ ಮುಖಮಾಡುವ ಹಾಗೆ ಮಾಡಿದ ಕೀರ್ತಿ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವೇಶ ತೀರ್ಥರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿಯೇನಲ್ಲ. ಕೇವಲ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಮುಖ್ಯಸ್ಥರಾಗಿದ್ದಲ್ಲದೆ, ನಾಡಿನ ಹಿರಿಯ ವಿದ್ವಾಂಸರಾಗಿ, ಸಾಮಾಜಿಕ ಸೇವಾ ಕಳಕಳಿಯ ಮನೋಭಾವವುಳ್ಳವರಾಗಿ, ಎಲ್ಲದ್ದಕ್ಕೂ ಹೆಚ್ಚಾಗಿ ದೇಶಪ್ರೇಮಿಯಾಗಿ ಪ್ರಸಿದ್ಧರಾಗಿದ್ದರು.

ಉಡುಪಿಯಿಂದ 120 ಕಿ.ಮೀ ದೂರದ ಸುಬ್ರಮಣ್ಯದ ಸಮೀಪದ ಅಚಾರ್ಯ ಮಧ್ವರು ನಡೆದಾಡಿದ ಪವಿತ್ರ ಸ್ಥಳವಾದ ರಾಮಕುಂಜದ ನಾರಾಯಣಾಚಾರ್ಯ ಮತ್ತು ಕಮಲಮ್ಮ ದಂಪತಿಗಳಿಗೆ ಎರಡನೆಯ ಮಗನಾಗಿ ಪ್ರಜಾಪತಿ ಸಂವತ್ಸರದ ವೈಶಾಖ ಶುದ್ಧ ದಶಮಿ ಸೋಮವಾರದಂದು ಅಂದರೆ, 1931 ಎಪ್ರಿಲ್ 27 ರಂದು ಜನಿಸಿದ ವೆಂಕಟರಮಣರಿಗೆ ಏಳನೆಯ ವರ್ಷಕ್ಕೇ ಉಪನಯನವಾಗಿ ಸಂಸ್ಕಾರ ಮತ್ತು ಸಂಸ್ಕೃತ ಎರಡೂ ಅಭ್ಯಾಸವಾದವು.

ಆರು ವರ್ಷದ ಬಾಲಕ ವೆಂಕಟರಮಣ ಪೇಜಾವರ ಮಠದ ಪರ್ಯಾಯ ನಡೆಯುತ್ತಿದ್ದ ಸಂದರ್ಭದಲ್ಲಿ ಪೋಷಕರೊಡನೆ ಉಡುಪಿಗೆ ಬಂದಿದ್ದಾಗ ವೆಂಕಟರಮಣ ಮಠದ ಸ್ವಾಮೀಜಿಗಳು ಕೃಷ್ಣನ ಪೂಜೆ ಮಾಡುವುದನ್ನು ಆಸಕ್ತಿಯಿಂದ ನೋಡುತ್ತಿದ್ದದ್ದನ್ನು ಗಮನಿಸಿದ ಸ್ವಾಮಿಗಳು, ತಮ್ಮನ್ನು ಭೇಟಿಯಾಗಲು ಬಂದಾಗ ಪುಟ್ಟ ಹುಡುಗನ ಮುಗ್ಧ ಮುಖ, ಅವನಲ್ಲಿ ತುಂಬಿದ್ದ ಭಕ್ತಿ ಭಾವ, ನಡೆಯ ಚುರುಕುತನ ಎಲ್ಲ ಗಮನಿಸಿ ನೀನು ನನ್ನಂತೆ ಸ್ವಾಮಿಯಾಗುತ್ತೀಯಾ? ಎಂದು ಪ್ರಶ್ನಿಸಿದರಂತೆ. ಅದಕ್ಕೆ ಒಂದು ಕ್ಷಣವೂ ಯೋಚಿಸದೇ, ಹ್ಞೂ, ಆಗುತ್ತೇನೆ ನಿಮ್ಮಂತೆ ಶ್ರೀ ಕೃಷ್ಣನನ್ನು ಪೂಜಿಸುವುದು ನನಗೂ ಇಷ್ಟ ಎಂದಿದ್ದನಂತೆ ಬಾಲಕ ವೆಂಕಟರಮಣ.

pj3.jpg

ಪರ್ಯಾಯದ ಅವಧಿ ಮುಗಿದ ನಂತರ ಆಗಿನ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಮಾನ್ಯ ತೀರ್ಥರು ಸಂಚಾರದ ನಿಮಿತ್ತ ಹಂಪೆಯಲ್ಲಿದ್ದಾಗ ಬಾಲಕ ವೆಂಕಟರಮಣನನ್ನು ಕರೆಸಿಕೊಂಡು ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು 3.12.1938 ಹಂಪೆಯ ಯಂತ್ರೋದ್ಧಾರ ಪ್ರಾಣದೇವರು ಆಂಜನೇಯನ ಸನ್ನಿಧಿಯಲ್ಲಿ ಸನ್ಯಾಸತ್ವದ ದೀಕ್ಷೆ ಕೊಟ್ಟು ಅಧೋಕ್ಷಜ ತೀರ್ಥರ ಸಂಸ್ಥಾನದ ಉತ್ತರಾಧಿಕಾರಿಯಾಗಿ, ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ, ವಿಶ್ವೇಶ ತೀರ್ಥರಾದರು ಅ ಪುಟ್ಟ ಬಾಲಕ ವೆಂಕಟರಮಣ.

ಮುಂದೆ ಭಂಡಾರಕೇರಿ ಮಠಾಧೀಶರಾದ ಮುಂದೆ ಫಲಿಮಾರು ಮಠಾಧೀಶರೂ ಆದ ಶ್ರೀ ವಿದ್ಯಾಮಾನ್ಯ ತೀರ್ಥರ ಕಣ್ಣಿಗೆ ಈ ಪುಟ್ಟ ಚುರುಕು ಬುದ್ಧಿಯ ಚಾಕಚಕ್ಯತೆಯ ಯತಿಗಳಾದ ವಿಶ್ವೇಶ ತೀರ್ಥರು ಬಿದ್ದು ಅವರನ್ನು ಶಿಷ್ಯರಾಗಿ ಸ್ವೀಕರಿಸಿ ತಮ್ಮೆಲ್ಲಾ ಅರಿವನ್ನು ಇವರಿಗೆ ಧಾರೆಯೆರೆದು ಶಾಸ್ತ್ರಪಾಂಡಿತ್ಯದಲ್ಲಿ ವಿಶ್ವೇಶ ತೀರ್ಥರ ಸಮಕ್ಕೆ ನಿಲ್ಲಬಲ್ಲ ಪೀಠಾಧಿಪತಿ ಇಡೀ ದೇಶದಲ್ಲಿ ಮತ್ತೊಬ್ಬರಿಲ್ಲದಂತೆ ತಯಾರು ಮಾಡಿದ ಹೆಗ್ಗಳಿಕೆ ಆವರದ್ದು. ಮುಂದೆ ತಮ್ಮ ಪ್ರಖಾಂಡ ಪಾಂಡಿತ್ಯದಿಂದ ಶ್ರೀಗಳು ಅನೇಕ ಕಡೆಗಳಲ್ಲಿ ವಿದ್ವಜ್ಜನರ ಸಭೆ ಸಮಾರಂಭಗಳಲ್ಲಿ ತಮ್ಮ ಪಾಂಡಿತ್ಯವನ್ನು ಎತ್ತಿ ತೋರಿಸಿದರು

1952 ಜನವರಿ 18 ರಂದು, ತಮ್ಮ 21ರ ಹರೆಯದಲ್ಲಿ ಮೊದಲ ಪರ್ಯಾಯ ಪೀಠಾರೋಹಣ ಮಾಡಿ , ಅನ್ನದಾನ – ಜ್ಞಾನದಾನಗಳಲ್ಲಿ ಸಾಟಿಯಿಲ್ಲದ ಆತ್ಯಂತ ಯಶಸ್ವಿಯಾಗಿ ನಡೆದ ಪರ್ಯಾಯವಾಗಿದ್ದಲ್ಲದೇ, ಈ ಅವಧಿಯಲ್ಲೇ ಮಾಧ್ವರೆಲ್ಲರ ಸಂಘಟನೆಗೆ ನಾಂದಿ ಹಾಡಿದ ಮಾಧ್ವ ತತ್ವಜ್ಞಾನ ಸಮ್ಮೇಳನವಾಗಿ ಹೊರಹೊಮ್ಮಿತು.

1968 ಜನವರಿ 18ರಿಂದ, 1970 ಜನವರಿ 17ರ ವರೆಗೆ ನಡೆದ ಎರಡನೆಯ ಶ್ರೀಕೃಷ್ಣ ಪೂಜಾ ಪರ್ಯಾಯವು ಒಂದು ಐತಿಹಾಸಿಕ ಪರ್ಯಾಯವಾಯಿತು ಎಂದರೆ ತಪ್ಪಾಗಲಾದರು. ಇದು ಅವರ ಮೊದಲ ಪರ್ಯಾಯವನ್ನೂ ಮೀರಿ ಅದ್ದೂರಿಯಾಗಿ ನದೆಯಿತು. ಈ ಬಾರಿ ಕಲಾವಿದರ ಮತ್ತು ವಿದ್ವಾಂಸರ ಮನಸೂರೆಗೊಂಡ ಪರ್ಯಾಯವಾಗಿತ್ತು. ಈ ಅವಧಿಯಲ್ಲೇ, ಪರ್ಯಾಯೋತ್ಸವದ ಸಂಭ್ರಮದಲ್ಲೇ, ಶ್ರೀಪಾದರು ಗೀತೆಯ ಕುರಿತು ನೀಡಿದ ಉಪನ್ಯಾಸ ಮಾಲಿಕೆ ಪುಸ್ತಕ ರೂಪದಲ್ಲಿ ಗೀತಾ ಸಾರೋದ್ಧಾರವಾಗಿ ಮೂಡಿ ಬಂದಿತು.

ಈ ಪರ್ಯಾಯದ ಅವಧಿಯಲ್ಲೇ 1968 ಆಗಸ್ಟ್ 18ರಂದು ಉಡುಪಿಯಲ್ಲಿ, ಕೃಷ್ಣನ ಸನ್ನಿಧಿಯಲ್ಲಿ, ಶ್ರೀಕೃಷ್ಣ ಉಚಿತ ಚಿಕಿತ್ಸಾಲಯದ ಉದ್ಘಾಟನೆಯಾಗಿ ಬಡ ರೋಗಿಗಳಿಗೆ ವರದಾನವಾಗಿ ಶ್ರೀಪಾದರ ಸಾಮಾಜಿಕ ಕಳಕಳಿಗೊಂದು ಅನನ್ಯ ನಿದರ್ಶನವಾಯಿತು. ಇದೇ ಸಮಯದಲ್ಲಿಯೇ ಉಡುಪಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಮಹಾಸಮ್ಮೇಳನ ನಡೆದು ದೇಶದ ಜನಸಾಗರವೇ ಉಡುಪಿಯತ್ತ ಹರಿದು ಬರುವಂತೆ ಮಾಡಿತು. ಈ ಸಂದರ್ಭದಲ್ಲಿಯೇ ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷವಾಕ್ಯ ಪ್ರಚಲಿತಕ್ಕೆ ಬಂದು ಸಮಸ್ತ ಹಿಂದೂಗಳೆಲ್ಲ ಒಂದಾಗಿ ಬಂಧುಭಾವದಿಂದ ಬದುಕಬೇಕು ಎಂಬ ಸಂದೇಶವನ್ನು ಶ್ರೀಪಾದರು ಈ ವೇದಿಕೆಯಲ್ಲಿ ನೀಡಿದರು.

pj

ಸಮಾಜದಲ್ಲಿ ಸ್ಪೃಶ್ಯ ಮತ್ತು ಅಸ್ಪೃಷ್ಯತೆಯ ಭಾವ ತಾಂಡವಾಡುತ್ತಿದ್ದದ್ದು ಶ್ರೀಪಾದರನ್ನು ಬಹಳವಾಗಿ ಕಾಡಿತ್ತು. ಹಾಗಾಗಿ ಸಮಾಜದಲ್ಲಿ ಒಂದು ವರ್ಗವನ್ನು ಅಸ್ಪೃಶ್ಯರೆಂದು ಪರಿಗಣಿಸಿ ದೂರವಿಡುವುದನ್ನು ಧಿಕ್ಕರಿಸಿ ಅವರನ್ನೂ ಮುಖ್ಯವಾಹಿನಿಯಲ್ಲಿ ತರಲು ಬಹಳವಾಗಿ ಪ್ರಯತ್ನಿಸಿದರು. ಅದರ ಫಲವಾಗಿಯೇ ಹರಿಜನ ಕೇರಿಗಳಿಗೆ ಭೇಟಿ ನೀಡಿ ಅವರ ಮನೆಗಳಲ್ಲಿಯೂ ಪಾದಪೂಜೆ ಫಲಮಂತ್ರಾಕ್ಷತೆ, ಸಹಪಂಕ್ತಿ ಭೋಜನಗಳು ನಡೆಯುವಂತೆ ಮುಂದಾಳತ್ವವನ್ನು ವಹಿಸಿದ್ದರು ಶ್ರೀಗಳು. ಎಲ್ಲರೊಡಗೆ ಸಹಜವಾಗಿ ಅವರಂತೆಯೇ ಇರಲು ನಿರ್ಧರಿಸಿದ ಶ್ರೀಗಳು ಸಾಮಾನ್ಯವಾಗಿ ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟರು ಮತ್ತು ಅದನ್ನು ಬದುಕಿನುದ್ದಕ್ಕೂ ಚಾಚೂ ತಪ್ಪದೆ ಪಾಲಿಸಿಕೊಂಡ ಬಂದರು. ಎಲ್ಲರೊಳಗಾಗೋ ಮಂಕುತಿಮ್ಮ ಎನ್ನುವಂತೆ ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿ, ಎಲ್ಲರಿಗೂ ಬಡಿಸುವ ಅಡುಗೆಯನ್ನೇ ತಾವೂ ಸೇವಿಸಿದ ಸರಳತೆಯ ಸಾಕಾರ ಮೂರ್ತಿಯಾಗಿ ನಿಂತರು. ತಮ್ಮ ಕಡೆಯ ಪರ್ಯಾಯ ಸಮಯದಲ್ಲಿಯೇ ಮುಸ್ಲಿಂ ಬಾಂಧವರಿಗೂ ಶ್ರೀ ಕೃಷ್ಣ ಮಠದಲ್ಲಿಯೇ ಇಫ್ತಾರ್ ಕೂಟವನ್ನು ಏರ್ಪಡಿಸಿ ಕೋಮು ಸೌಹಾರ್ಧತೆಯನ್ನು ಎತ್ತಿ ಹಿಡಿದವರು.

ಪೇಜಾವರರು 1970ರ ದಶಕದಲ್ಲಿ ದಲಿತರ ಕೇರಿಗಳಿಗೆ ಹೋಗುವ ಕಾರ್ಯಯೋಜನೆ ಹಾಕಿಕೊಂಡಾಗ ಪೇಜಾವರರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಆಡಿಕೊಳ್ಳುವವರಿಗೆ ಕಡಿಮೆ ಇರಲಿಲ್ಲ. ಇದಾವುದನ್ನೂ ತಲೆಗೆ ಹಚ್ಚಿಕೊಳ್ಳದ ಶ್ರೀಗಳು ಕರಾವಳಿಯಾದ್ಯಂತ ಹಳ್ಳಿ ಹಳ್ಳಿಗಳಿಗೂ ಭೇಟಿ ಕೊಟ್ಟು ಅಲ್ಲಿನ ದಲಿತರಿಗೂ ತಾವೂ ಹಿಂದೂ ಧರ್ಮೀಯರೆಂಬ ಭಾವನೆ ಹುಟ್ಟುವಂತೆ, ಗಟ್ಟಿಗೊಳ್ಳುವಂತೆ ಮಾಡುವುದರಲ್ಲಿ ಸಫಲರಾದರು. ತಮ್ಮ ಮಠದ ಖರ್ಚಿನಿಂದಲೇ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ ಮಾಡಿಕೊದುವುದರ ಮೂಲಕ ಕ್ಷಣಿಕ ಆಶೆಗಳಿಗಾಗಿ ತಮ್ಮನ್ನು ತಾವು ಅನ್ಯಮತಕ್ಕೆ ಪರಿವರ್ತನೆಯಾಗುವುದಕ್ಕೆ ಕಡಿವಾಣ ಹಾಕುವುದರಲ್ಲಿ ಯಶಸ್ವಿಯಾದರು. ಅವರ ಜೀವಿತಾವಧಿಯವರೆಗೂ ದಲಿತರ ಕೇರಿಗೆ ಭೇಟಿ ಕೊಡುವ ಕಾರ್ಯಕ್ರಮಗಳು ಮುಂದುವರಿಯುತ್ತಲೇ ಸರಕಾರದ ಸವಲತ್ತುಗಳು ಸಿಗದ ಕುಗ್ರಾಮಗಳಿಗೆ ಇವರು ಬೆಳಕು, ನೀರು, ಸ್ವಚ್ಛತೆ, ಉದ್ಯೋಗ, ಶಿಕ್ಷಣ ಸಿಗುವಂತೆ ಅಹಿಂದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುವಾಗುವಂತೆ ಉಚಿತ ವಿದ್ಯಾರ್ಥಿನಿಲಯಗಳನ್ನು ತಮ್ಮ ಮಠದ ಮೂಲಕ ನಡೆಯುವಂತಹ ಶಾಶ್ವತ ವ್ಯವಸ್ಥೆಯನ್ನು ಮಾಡಿದರು. ಇಷ್ಟೆಲ್ಲ ಸಮಾಜೋದ್ಧಾರದ ಕೆಲಸಗಳನ್ನು ಕೈಗೊಂಡರೂ ಜಾತಿವಾದಿ, ಕೋಮುವಾದಿ, ದಲಿತವಿರೋಧಿ ಎಂದು ಹಲವಾರು ಬುದ್ಧಿ ಜೀವಿಗಳು ನಿಂದಿಸತೊಡಗಿದಾಗ, ಶ್ರಿಕೃಷ್ಣನೇ ನಿಂದನೆಯಿಂದ ಹೊರತಾಗದಿದ್ದಾಗ ಇನ್ನು ನನ್ನದೇನೂ ಎನ್ನುವಂತೆ ಅದನ್ನು ತಲೆಗೆ ಹಚ್ಚಿಕೊಳ್ಳದೆ ತಮ್ಮ ಪಾಡಿಗೆ ತಮ್ಮ ಸಮಾಜಮುಖೀ ಕೆಲಸಗಳನ್ನು ಮುಂದುವರಿಸಿಕೊಂಡು ಹೋದರು.

pj2

ಶ್ರೀಪಾದರು ಹೀಗೆ ಸಮಾಜದ ಹರಿಕಾರರಾಗಿ ಗುರುತಿಸಿಕೊಂಡರೂ ತಮ್ಮ ಯತಿ ಧರ್ಮದ ಯಾವ ನಿಯಮವನ್ನೂ ಕೈ ಬಿಡಲಿಲ್ಲ. ತಮ್ಮ ಅಖಂಡವಾದ ಬ್ರಹ್ಮಚರ್ಯೆ, ನಿತ್ಯವೂ ಜಪ ತಪ, ಸಂಸ್ಥಾನದ ಮೂರ್ತಿಗಳ ಪೂಜೆ, ವಿದಾರ್ಥಿಗಳಿಗೆ ವೇದಾಂತ ಗ್ರಂಥಗಳ ಪಾಠ ಪ್ರವಚನ ಉಳಿದ ಮಠಗಳ ಯತಿಯರಿಗೆ ಹಿರಿಯರಾಗಿ ಮಾರ್ಗದರ್ಶಿಗಳಾಗಿ ನಿಂತರು. ಎಂದಿನಂತೆ ಬೆಳಿಗ್ಗೆ ನಾಲ್ಕುವರೆಯಿಂದ ಆರಂಭವಾಗುತ್ತಿದ್ದ ಅವರ ದಿನಚರಿ ದಿನವಿಡೀ ನಾನಾ ರೀತಿಯ ಪೂಜಾಕೈಂಕರ್ಯಗಳು ಮತ್ತು ಹತ್ತಾರು ಕಾರ್ಯಕ್ರಮಗಳೊಂದಿಗೆ ರಾತ್ರಿ ಹನ್ನೊಂದರವರೆಗೆ ನಡೆಯುತ್ತಿದ್ದರೂ ಒಂದು ಚೂರೂ ಯಾರಮೇಲೂ ಬೇಸರಿಸಿಕೊಳ್ಳದೇ, ಆಯಾಸಗೊಳ್ಳದೇ ಸದಾಕಾಲವೂ ನಸುನಗುತ್ತಲೇ ಇದ್ದ ಧೀರ ಸನ್ಯಾಸಿಗಳಾಗಿದ್ದರು ಶ್ರೀ ಪೇಜಾವರರು.

ಶ್ರೀಪಾದರು ವಿಶ್ವಹಿಂದೂ ಪರಿಷತ್ ಜೊತೆ ನಿಕಟವಾಗಿ ಗುರುತಿಸಿಕೊಂಡಿದ್ದರು ಮತ್ತು ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣ ಆಗಲೇಬೇಕೆಂದು ಫಣ ತೊಟ್ಟ ಸಾಧುಗಳ ವೃಂದದಲ್ಲಿ ಪೇಜಾವರರೇ ಆಗ್ರೇಸರರಾಗಿದ್ದರು. ಅಶೋಕ್ ಸಿಂಘಾಲ್ ಪ್ರೇರಣೆಯಂತೆ ರಾಮ ಮಂದಿರದ ಹೋರಾಟಕ್ಕೆ ರಥಯಾತ್ರೆ ಹೊರಟ ಲಾಲಕೃಷ್ಣ ಅಡ್ವಾನಿಯವರ ಜೊತೆ ಶ್ರೀಗಳ ಗೆಳೆತನ ಬಹಳ ಅಪರೂಪವಾದದ್ದು. ಇನ್ನು ಬೆಂಕಿಯ ಚೆಂಡು ಎಂದೇ ಖ್ಯಾತವಾಗಿದ್ದ ಉಮಾಭಾರತಿಯವರೂ ಪೇಜಾವರ ಸ್ವಾಮಿಗಳಿಂದಲೇ ದೀಕ್ಷೆ ಪಡೆದ ಸನ್ಯಾಸಿನಿಯಾಗಿದ್ದರು. 1992 ಡಿಸೆಂಬರ್ 6ರಂದು ಬಾಬರೀ ಮಸೀದಿ ಕರಸೇವಕರಿಂದ ಪುಡಿಪುಡಿಯಾಗಿ ತಾತ್ಕಾಲಿಕವಾಗಿ ಪ್ರತಿಷ್ಠಾಪನೆಯಾದ ಶ್ರೀರಾಮ ಲಲ್ಲನ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು ನಮ್ಮ ಶ್ರೀಗಳೇ. ಹೀಗೆ ನಮ್ಮ ಪೇಜಾವರರು ರಾಜಗುರುವಾಗಿದ್ದರು.

ತಮ್ಮ ಜೀವಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ಶ್ರೀಗಳ ಆಸೆಯಾಗಿತ್ತು. ಅದಕ್ಕಾಗಿಯೇ ಕೆಲವೇ ತಿಂಗಳ ಹಿಂದೆ ಉಡುಪಿಯಲ್ಲಿ ನಡೆದ ಧರ್ಮ ಸಭೆ ಆಯೋಜಿಸಿದ್ದಾಗಲೂ ರಾಮ ಮಂದಿರದ ಬಗ್ಗೆಯೇ ಶ್ರೀಗಳು ಮಾತನಾಡಿದ್ದರು. ರಾಮ ಮಂದಿರದ ಕುರಿತಾಗಿದ್ದ ಎಲ್ಲಾ ಅಡ್ಡಿ ಆತಂಕಗಳೂ ನಿವಾರಣೆಯಾಗಿ ಇನ್ನೇನೂ ರಾಮ ಮಂದಿರದ ಕೆಲಸಕಾರ್ಯಗಳು ಆರಂಭವಾಗ ಬೇಕು ಎನ್ನುವ ಹೊತ್ತಿನಲ್ಲಿ ಶ್ರೀಗಳು 29 ಡಿಸೆಂಬರ್ 2019ರಂದು ನಮ್ಮನ್ನಗಲಿರುವುದು ನಿಜಕ್ಕೂ ದುಃಖಕರವಾದ ಸಂಗತಿ. ಆ ಭಗವಂತ ಅವರ ಆತ್ಮಕ್ಕೆ ಸದ್ಗತಿಯನ್ನು ಕೊಡಲಿ ಮತ್ತು ಅವರ ಅಪಾರ ಭಕ್ತಾದಿಗಳಿಗೆ ಆವರ ಅಗಲಿಕೆಯ ದುಖಃ ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ.

ಇನ್ನು ವಯಕ್ತಿಕವಾಗಿ ಶ್ರೀಗಳನ್ನು ಹಲವು ಬಾರಿ ಬಹಳ ಹತ್ತಿರದಿಂದ ಭೇಟಿಯಾಗಿ ಅವರ ಆಶೀರ್ವಾದವನ್ನು ಪಡೆಯುವಂತಹ ಸೌಭಾಗ್ಯ ನನ್ನದಾಗಿತ್ತು ಎನ್ನುವುದೇ ನನಗೊಂದು ಹೆಮ್ಮೆಯ ವಿಷಯ. 1976ರಲ್ಲಿ ನನ್ನ ಚೌಲದ ದಿನ ನಮ್ಮೂರಿನ ದೇವಸ್ಥಾನದ ಕಾರ್ಯಕ್ರಮಕ್ಕೆ ಶ್ರೀಗಳು ಬಂದಿದ್ದ ಸಂದರ್ಭದಲ್ಲಿ ಅವರ ಆಶೀರ್ವಾದ ನನಗೆ ಲಭ್ಯವಾಗಿತ್ತು. ಅದಾದ ನಂತರ 90ರ ದಶಕದಲ್ಲಿ ನಮ್ಮ ನೆರೆಯವರ ಮನೆ ಕಾರ್ಯಕ್ರಮಕ್ಕೆ ಶ್ರೀಗಳು ಬರುವರಿದ್ದರು. ಆದ ಕಾರಣ ಆ ಮನೆಯವರು ನಮ್ಮನ್ನು ಪೂರ್ಣಕುಂಭ ಸ್ವಾಗತಕ್ಕಾಗಿ ಬರಬೇಕೆಂದು ಕೇಳಿಕೊಂಡಾಗ, ನಮ್ಮ ತಂದೆಯವರು ಅದಾವ ಮನಸ್ಥಿತಿಯಲ್ಲಿದ್ದರೋ ಕಾಣೆ, ಬಿಡಿ ಬಿಡಿ ಪೇಜಾವರರು ಕೇವಲ ಸ್ಥಿತಿವಂತರ ಮನೆಗಷ್ಟೇ ಬರುವುದು ನಮ್ಮ ಮನೆಗೆಲ್ಲಾ ಏಕೆ ಬರುವುದಿಲ್ಲಾ ಎಂಬ ಅಳಲನ್ನು ತೋಡಿಕೊಂಡಿದ್ದರು. ಈ ವಿಷಯ ಪೇಜಾವರರಿಗೆ ಅದು ಹೇಗೆ ತಲುಪಿತೋ ಕಾಣೆ. ಅವರ ಮನೆಗೆ ಹೋಗುವುದಕ್ಕಿಂತಲೂ ಮುಂಚೆಯೇ ಸಿಗುವ ನಮ್ಮ ಮನೆಗೆ ಸೀದಾ ಹೇಳಿ ಕೇಳದೇ ಬಂದೇ ಬಿಟ್ಟಾಗ ನಮ್ಮ ಜಂಘಾಬಲವೇ ಉಡುಗಿಹೋಗಿತ್ತು. ಅದನ್ನು ಸಾವರಿಸಿಕೊಂಡು ಯಥಾಶಕ್ತಿ ಅವರ ಪಾದಪೂಜೆ ಮಾಡಿದ್ದು ಇನ್ನೂ ಹಚ್ಚ ಹಸಿರಾಗಿದೆ. ಅದೇ ರೀತಿ ನಮ್ಮ ಸ್ನೇಹಿತನ ಮನೆಯಲ್ಲಿ ನಡೆದ ಕಲ್ಯಾಣೋತ್ಸವದಲ್ಲೂ ಅವರ ಆಶೀರ್ವಾದ ಪಡೆದಿದ್ದೆವು. ಇನ್ನು ಎರಡು ಬಾರಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಯಾಂಪಿನಲ್ಲಿ ಅವರ ಸೇವೆ ಮಾಡುವ ಮತ್ತು ಆವರ ಮಾರ್ಗದರ್ಶನ ಲಭಿಸಿತ್ತು. ಸರ್ವೇಜನಾಃ ಸುಖಿನೋಭವಂತು ಎಂದು ಸದಾ ಕೇಳಿಕೊಳ್ಳಬೇಕು ಎಂದು ಅವರು ಹೇಳಿದ ಗಂಡುಬೇರುಂಡ ಕಥೆ ( ಓದಿ Nation First Everything Next ಗಂಡುಬೇರುಂಡ ಕಥೆ) ಇಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆ.

WhatsApp Image 2019-12-29 at 4.24.49 PM

2019ನೇ ವರ್ಷ ನಿಜಕ್ಕೂ ನಮಗೆ ಅತ್ಯಂತ ಬೇಸರ ತರಿಸುವ ವರ್ಷ. ವರ್ಷಾರಂಭದ ಜನವರಿ ತಿಂಗಳಿನಲ್ಲಿ ನಡೆದಾಡುವ ದೇವರು ಶತಾಯುಷಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳನ್ನು ಕಳೆದುಕೊಂಡರೆ ವರ್ಷಾಂತ್ಯದ ಡಿಸೆಂಬರ್ ತಿಂಗಳಿನಲ್ಲಿ ಮತ್ತೊಬ್ಬ ಯತಿವರ್ಯ ಶ್ರೀ ಶ್ರೀ ಶ್ರೀ ಪೇಜಾವರ ಪೇಜಾವರ ಶ್ರೀ ವಿಶ್ವೇಶ ತೀರ್ಥರನ್ನು ಕಳೆದುಕೊಂಡಿದ್ದೇವೆ. ಕಲ್ಲಿನ ದೇವರುಗಳನ್ನು ನೋಡಿದ್ದ ನಮಗೆ ವಿಶ್ವೇಶ ತೀರ್ಥರು ಮತ್ತು ಶಿವಕುಮಾರಸ್ವಾಮಿಗಳು ಹರಿ ಮತ್ತು ಹರರಂತೆ ನಿಜವಾದ ದೇವರಾಗಿ ಕಂಡರು ಎಂದರೆ ಅತಿಶಯೋಕ್ತಿಯೇನಲ್ಲ. ಇವರಿಬ್ಬರ ನಡುವೆಯೂ ಬಹಳ ಸಾಮ್ಯತೆ ಇದೆ. ಇಬ್ಬರೂ ಪರಿವರ್ತನಾಕಾರರು, ಇಬ್ಬರೂ ಸೇವಾ ಮಾನೋಭಾವದಿಂದ ರಾಜ್ಯಾದ್ಯಂತ ನೂರಾರು ವಿದ್ಯಾಸಂಸ್ಥೆಗಳನ್ನು ತೆರೆದವರು.ವಿದ್ಯಾರ್ಥಿಗಳಿಗೆ ಮತ್ತು ಭಕ್ತಾದಿಗಳಿಗೆ ನಿರಂತರ ದಾಸೋಹವನ್ನು ನಡೆಸಿಕೊಂಡು ಬಂದವರು. ತಾವು ನಂಬಿದ ಸಿದ್ದಾಂತಗಳಿಗೆ ಕಟಿಬದ್ಧರಾಗಿ ಜೀವನ ಪೂರ್ತಿ ಅದನ್ನು ಪ್ರತಿಪಾದಿಸಿದ್ದವರು.

ತಮ್ಮರಾಜಕೀಯ ತೆವಲುಗಳಿಗೆ, ಓಟಿನ ರಾಜಕೀಯಕ್ಕಾಗಿ ಮತ್ತು ಕುಟುಂಬ ರಾಜಕೀಯಕ್ಕಾಗಿ ತಮಗೆ ತಾವೇ ಭಾರತರತ್ನ ಪ್ರಶಸ್ತಿಗಳನ್ನು ಕೊಟ್ಟು ಆ ಪ್ರಶಸ್ತಿಯ ಮೌಲ್ಯವನ್ನು ಅಪಮೌಲ್ಯವನ್ನಾಗಿ ಮಾಡಿರುವಾಗ, ಈ ಇಬ್ಬರೂ ಮಹಾಸಾಧಕರಿಗೆ ಭಾರತರತ್ನ ಪ್ರಶಸ್ತಿಗಳನ್ನು ನಮ್ಮ ಘನ ಸರ್ಕಾರ ನೀಡುವ ಮೂಲಕ ಆ ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸ ಬೇಕು ಎಂದು ಸಮಸ್ತ ಕನ್ನಡಿಗರ ಪರವಾಗಿ ಕೋರಿಕೊಳ್ಳುತ್ತೇನೆ.

ಏನಂತೀರೀ?
ನಿಮ್ಮವನೇ ಉಮಾಸುತ

ಶ್ರೀಗಳ ಜೀವನದ ಸಂಪೂರ್ಣ ಮಧುರ ಕ್ಷಣಗಳು ಫೋಟೋ ರೂಪದಲ್ಲಿ

Screenshot 2020-01-02 at 9.30.35 AM

Screenshot 2020-01-02 at 9.33.26 AM

Screenshot 2020-01-02 at 9.36.07 AM

2 thoughts on “ಪೇಜಾವರ  ಶ್ರೀ ವಿಶ್ವೇಶ ತೀರ್ಥರು

  1. ೇಖನ ಚೆನ್ತನಾಗಿದೆ. ತಮ್ಮ ಆಶಯದಂತೆ “ಭಾರತರತ್ನ” ಲಭಿಸಲಿ, ತಮ್ಮ ಮಾತಿಗೆ ನಾನೂ ದನಿಗೂಡಿಸುತ್ತೇನೆ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s