ಡಿಸೆಂಬರ್ 31 ಮತ್ತು ಜನವರಿ 1 ಅಂತ ನೆನಪಿಸಿಕೊಂಡರೆ ಬಹುತೇಕರಿಗೆ ರೋಮಾಂಚನವಾಗುತ್ತದೆ. ಅನೇಕರು ಒಂದು ವಾರಕ್ಕಿಂತಲೂ ಮುಂಚೆಯೇ, ಆ ದಿನಗಳು ಮತ್ತು ಆ ದಿನವನ್ನು ಹೇಗೆ ಸಂಭ್ರಮಿಸಬೇಕು ಅಂತ ನಾನಾ ರೀತಿಯ ತಯಾರಿಗಳನ್ನು ಮಾಡಿಕೊಳ್ತಾ ಇದ್ರೇ ನಮಗೆ ಮಾತ್ರ ಆ ಕರಾಳ ನೆನಪನ್ನು ಹೇಗೆ ಮರೆಯುವುದಪ್ಪಾ ಅಂತಾ ಇರ್ತೀವಿ. ಅದೇನಪ್ಪಾ ಅಂತಹ ಕರಾಳ ನೆನಪು ಅಂತೀರಾ? ತಡೀರೀ ನಾನೂ ಹೇಳ್ತಾ ಹೋಗೀನಿ. ನೀವು ಕೇಳ್ತಾ ಹೋಗಿ.
ಕೆಲ ವರ್ಷಗಳ ಹಿಂದೆ ಡಿಸೆಂಬರ್ 31 ಗುರುವಾರ, ಜನವರಿ 1 ಶುಕ್ರವಾರ ಬಂದಿತ್ತು ಮತ್ತು ಅವತ್ತು ನಮ್ಮ ಕಛೇರಿಗೆ ರಜವಿದ್ದ ಕಾರಣ. ಗುರುವಾರ ಒಂದು ದಿನ ರಜಾ ಹಾಕಿಕೊಂಡು ಬಿಟ್ರೇ, ವಾರಾಂತ್ಯ ಸೇರಿ ನಾಲ್ಕು ದಿನಗಳು ರಜ ಬರುತ್ತದೆ ಅಂತ ಯೋಚಿಸಿ, ಸರೀ ನಡೀರೀ ಹೋಗೇ ಬಿಡೋಣ, ಬೇಲೂರು, ಹಳೇಬೀಡು, ಹೊರನಾಡು, ಶೃಂಗೇರಿ, ಧರ್ಮಸ್ಥಳ, ಉಡುಪಿ ಕೊಲ್ಲೂರು ಹಾಗೆ ಹಿಂದಿರುಗಿ ಬರುವಾಗ ಒಣಗಿರೋ ಜೋಗ್ ಜಲಪಾತವನ್ನು ಮಕ್ಕಳಿಗೆ ತೋರಿಸ್ಕೊಂಡು ಶಿವಮೊಗ್ಗದ ಮುಖಾಂತರ ಬೆಂಗಳೂರಿಗ ಬರೋಣ ಎಂದು ತೀರ್ಮಾನಿಸಿದೆವು. ಇಷ್ಟೊಂದು ಜಾಗಕ್ಕೆ ನಮ್ಮ ಕಾರಿನಲ್ಲಿ ಹೋಗೋದು ಬೇಡ. ದೊಡ್ಡದಾದ ಬಾಡಿಗೆ ಗಾಡಿ ತೆಗೆದುಕೊಂಡು ಹೋದ್ರೇ ಎಲ್ಲರೂ ಆರಾಮವಾಗಿ ಸಂಭ್ರಮಿಸ ಬಹುದು ಎಂದು ನಿರ್ಧರಿಸಿ ಗುರುವಾರ ಬೆಳಿಗ್ಗೆ ಆರು ಗಂಟೆಗೆಲ್ಲಾ ಮನೆಮುಂದೆ ಬಾಡಿಗೆ ಗಾಡಿ ಹತ್ತಿ ಹಾಗೇ ನಮ್ಮ ಮಾವನವರ ಮನೆಗೂ ಹೋಗಿ ಅಲ್ಲಿ ಹೆಣ್ಣು ಕೊಟ್ಟ ಅತ್ತೆ -ಮಾವ ಕಣ್ಣು ಕೊಟ್ಟ ದೇವರು ಎನ್ನುವಂತೆ ಅತ್ತೆ ಮಾವನವರನ್ನೂ ಗಾಡಿಗೆ ಹತ್ತಿಸಿಕೊಂಡು ನೆಲಮಂಗಲ ದಾಟಿ, ಕುಣಿಗಲ್ ಮಾರ್ಗಕ್ಕೆ ಎಡಕ್ಕೆ ತಿರುಗಿದೆವು.
ಯಾವಾಗಲೂ ಕುಣಿಗಲ್ ರಸ್ತೆಗೆ ತಿರುಗುತ್ತಿದ್ದಂತೆಯೇ ನಮ್ಮ ತಂದೆಯವರಿಗೆ ಅದೇನೋ ಸಂಭ್ರಮ. ಅಷ್ಟು ವಯಸ್ಸಾದರೂ ಚಿಕ್ಕ ಮಗುವಿನಂತೆ ಆಡುತ್ತಿದ್ದರು. ಅಂದೂ ಕೂಡಾ ಮಗೂ ಹೇಗೋ ಪುಣ್ಯಕ್ಷೇತ್ರಗಳಿಗೆ ಹೋಗ್ತಾ ಇದ್ದೀವಿ, ದಾರಿ ಮಧ್ಯೆದಲ್ಲೇ ನಮ್ಮ ಊರಿಗೂ ಹೋಗಿ ಹೊನ್ನಮ್ಮನ ದರ್ಶನ ಮಾಡಿಕೊಂಡು ಕೊಂಡು ಹೋಗೋಣ ಎಂದು ರಾಗ ತೆಗೆದರೆ, ಅದಕ್ಕೆ ಪಕ್ಕದಲ್ಲಿದ್ದ ಅಮ್ಮನೂ ಕೂಡಾ ಹೌದೂ ಕಣೋ ಅಣ್ಣಯ್ಯ. ಈ ಸಾರಿ ನಾನು ಊರ ಹಬ್ಬಕ್ಕೆ ಬರೋದಿಕ್ಕೆ ಆಗಲಿಲ್ಲ ದೇವಿ ಕಣ್ಣಿಗೆ ಕಟ್ಟಿದ ಹಾಗಿದೆ ಕಣೋ ಎಂಬ ತಾಳ ಬೇರಿ. ರಾಗ-ತಾಳ ಸಮ್ಮೇಳನವಾಗಿ ಹೋದ್ಮೇಲೆ ಮೇಳವನ್ನು ಜಾಮಾಯ್ಸದೇ ಅಂತಾ ಸರಿ ಹೋಗೋಣ ಅಂದ ಕೂಡ್ಲೇ ನಮ್ಮ ಅಪ್ಪಾ ಅಮ್ಮನ ಮುಖದಲ್ಲಿ ಸಂತೃಪ್ತಿಯ ಕಳೆ. ಅದಕ್ಕೇ ನೋಡೂ, ನಾನಾಗ್ಲೇ ಹೊನ್ನಮ್ಮನಿಗೆ ಮುಡಿ ತುಂಬೋದಕ್ಕೆ ಸೊಬ್ಲಕ್ಕಿ ಎಲ್ಲಾ ಸಿದ್ಧ ಮಾಡಿಕೊಂಡು ಬಂದಿದ್ದೀನಿ ಅಂದ್ರೂ ಅಮ್ಮ. ಬೆಳ್ಳೂರು ಕ್ರಾಸ್ ದಾಟಿ ಸಿಗುವ ಕಿರಿಸಾವೆಯಲ್ಲಿ ಬಲಕ್ಕೆ ತಿರುಗಿ ಮೂರು ಕಿಮೀ ಹೋದ್ರೇ ನಮ್ಮೂರು ಬಾಳಗಂಚಿ. ಊರ ಹೊರಗೇ ಇರುವ ಬಾಳಗಂಚಿ ಹೊನ್ನಾದೇವಿ ದೇವಸ್ಥಾನದ ಮುಂದಿರುವ ಕಲ್ಯಾಣಿಯಲ್ಲಿ ಕೈಕಾಲು ತೊಳೆದುಕೊಂಡು ಆಗಿನ್ನೂ ಬಹಳ ಚಿಕ್ಕದಾಗಿದ್ದ ಗುಡಿ (ಈಗ ಬಹಳ ಭವ್ಯವಾದ ದೇವಾಲಯ ನಿರ್ಮಿಸಲಾಗಿದೆ)ಯೊಳಗೆ ಹೋಗ್ತಾ ಇದ್ದಂತೆಯೇ ನಮ್ಮ ಬಂಧುಗಳೇ ಆಗಿರುವ ಅರ್ಚಕರೂ ತುಂಬು ಹೃದಯದಿಂದ ಸ್ವಾಗತಿಸಿ ಸಾಂಗೋಪಾಂಗವಾಗಿ ಪೂಜೆ ಪುನಸ್ಕಾರಗಳೆಲ್ಲಾ ಮುಗಿದು ಅಲ್ಲೇ ಪಕ್ಕದ ಛಾವಡಿಯಲ್ಲಿ ಕುಳಿತು ತಂದಿದ್ದ ತಿಂಡಿ ತಿಂದು ನಮ್ಮ ಪ್ರಯಾಣ ಮುಂದುವರೆಸಿದೆವು.
ಹಾಂ! ನಿಮಗೆ ಹೇಳೋದಿಕ್ಕೆ ಮರೆತಿದ್ದೆ. ನಮ್ಮ ಗಾಡಿ ಚಾಲಕ, ಸ್ವಲ್ಪ ಸೀರಿಯಸ್ ಮನುಷ್ಯ. ಮುಖದಲ್ಲಿ ನಗುವೇ ಇಲ್ಲ. ನಮ್ಮ ಮನೆಗೆ ಬಂದಾಗ ಮತ್ತು ನಮ್ಮ ಮಾವನವರ ಮನೆಗೆ ಹೋದಾಗಲೂ ಗಾಡಿಯಿಂದ ಕೆಳಗಿಳಿದು ಸುಮ್ಮನೆ ಮನೆಯನ್ನು ದಿಟ್ಟಿಸಿ ನೋಡುತ್ತಿದ್ದನೇ ಹೊರತು ಉಭಾ-ಶುಭಾ ಅಂತಾ ನಮ್ಮೊಡನೆ ಒಂದು ಮಾತಿಲ್ಲ. ಬೆಂಗಳೂರಿನಿಂದ ನಮ್ಮ ಊರಿಗೆ ಸುಮಾರು 120 ಕಿಮೀ ದೂರದ ಪ್ರಯಾಣದಲ್ಲಿ ಅವನ ಮೊಬೈಲ್ಗೆ ಕರೆ ಬರೋದು ಅವನು ಗಾಡಿ ನಿಲ್ಲಿಸಿ ದೂರಕ್ಕೆ ಹೋಗಿ ಮಾತನಾಡಿಕೊಂದು ಬರುತ್ತಿದ್ದ. ಕಂಡೋರ ಉಸಾಬರಿ ನಮಗ್ಯಾಕೆ ಅಂತಾ ನಾವೂ ಕೂಡಾ ಅದಕ್ಕೆ ಏನೂ ಹೇಳಲಿಲ್ಲ. ಅಷ್ಟೆಲ್ಲಾ ಮಾತಾನಾಡುತ್ತಾ ಗಾಡಿ ನಿಲ್ಲಿಸುತ್ತನಿದ್ದನಾದರೂ ಕುಡಿದ ನೀರು ಅಲ್ಲಾಡದ ಹಾಗಿ ಗಾಡಿ ಓಡಿಸುತ್ತಿದ್ದ. ಮಟ ಮಟ ಮಧ್ಯಾಹ್ನ ಬೇಲೂರಿಗೆ ಬಂದು ದೇವಾಲಯವನ್ನು ನೋಡಿ ಅಲ್ಲೇ ಊಟ ಮುಗಿಸಿ ಮೂಡಿಗೆರೆ ಮಾರ್ಗವಾಗಿ ಹಳ್ಳ ಕೊಳ್ಳದ ರಸ್ತೆಯಲ್ಲಿ ಮೈ ಕುಲುಕಿಸಿಕೊಂಡು ಬೆಂಡಾಗಿ ಬಸವಳಿದು ಹೊರನಾಡು ತಲುಪುವ ವೇಳೆಗಾಗಲೇ ಸೂರ್ಯಾಸ್ತವಾಗುತ್ತಿತ್ತು. ಇಷ್ಟರ ಮಧ್ಯೆ ಮತ್ತೆ ಮೂರ್ನಾಲ್ಕು ಕಡೆ ನಮ್ಮ ಡ್ರೈವರ್ ಗಾಡಿ ನಿಲ್ಲಿಸಿ ಅದ್ಯಾರ ಬಳಿಯಲ್ಲೋ ಗುಟ್ಟು ಗುಟ್ಟಾಗಿ ಮಾತನಾಡಿದ್ದ. ಅಲ್ಲಿನ ವಸತಿಯ ಹತ್ತಿರ ಹೋಗಿ ಎರಡು ರೂಮ್ ಬೇಕಿತ್ತು ಎಂದರೆ, ರೂಮ್ಸ್ ಖಾಲಿ ಇಲ್ಲಾ ಅನ್ನೋದೇ. ವರ್ಷಾಂತ್ಯವಾಗಿದ್ದರಿಂದ ನಮ್ಮಂತೆಯೇ ನೂರಾರು ಜನರು ದೇವಿಯ ದರ್ಶನಕ್ಕೆ ಬಂದಿದ್ದರಿಂದ ದೇವಾಲಯ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಹೊಸಾ ವರ್ಷದ ಸ್ವಾಗತಕ್ಕಾಗಿ ದೇವಾಲಯವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗುತ್ತಿತ್ತು.
ನಮ್ಮ ಮಾವನವರು ಕೂಡಲೇ ದೇವಸ್ಥಾನದ ಕಾರ್ಯಾಲಯಕ್ಕೆ ಹೋಗಿ ತಮ್ಮ ಪ್ರಭಾವ ಬಳೆಸಿ ಎರಡು ಕೊಠಡಿಗಳ ಕೀಗಳನ್ನು ತಂದಿದ್ದಲ್ಲದೇ, ಸಂಜೆಯ ವಿಶೇಷ ಪೂಜೆಗೆ ವ್ಯವಸ್ಥೆಯನ್ನೂ ಮಾಡಿಕೊಂಡು ಬಂದರು. ಆ ಕೂಡಲೇ ಎಲ್ಲರೂ ನಮ್ಮ ನಮ್ಮ ಕೊಠಡಿಗಳಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡು ಸ್ವಲ್ಪ ಕಾಲ ವಿಶ್ರಮಿಸಿಕೊಂಡು, ದೇವಾಲಯಕ್ಕೆ ಕಾಲಿಡುತ್ತಿದ್ದರೆ ಜನಸಾಗರ ಕಂಡು ನಮ್ಮ ತಾಯಿಯವರು ಅಮ್ಮಾ ನನ್ನ ಕೈಯಲ್ಲಿ ಅಷ್ಟು ಹೊತ್ತು ಸರತಿಯ ಸಾಲಿನಲ್ಲಿ ನಿಲ್ಲಲು ಆಗುವುದಿಲ್ಲ. ನಾನು ಇಲ್ಲಿಂದಲೇ ತಾಯಿಗೆ ನಮಸ್ಕಾರ ಮಾಡಿಬಿಡುತ್ತೇನೆ. ನೀವೆಲ್ಲಾ ಹೋಗಿ ಬನ್ನಿ ಅಂದರು. ಆ ಕೂಡಲೇ ನಮ್ಮ ಮಾವನವರು ತಮ್ಮ ಪ್ರಭಾವದಿಂದ ನಮ್ಮನ್ನು ದೇವಾಲಯದ ಪಕ್ಕದ ದ್ವಾರದಿಂದ ಯಾವುದೇ ಸರದಿಯ ಸಾಲಿನಲ್ಲಿ ನಿಲ್ಲದೇ ಕೆಲವೇ ಕೆಲ ನಿಮಿಷಗಳಲ್ಲಿ ದೇವಿಯ ಮುಂದೆ ನಿಲ್ಲಿಸಿದ್ದರು. ಅನ್ನಪೂರ್ಣೇಶ್ವರಿಯ ಸಂಜೆ ಪೂಜೆಯ ಸಮಯದಲ್ಲಿ ದೇವಿಯನ್ನು ಕಣ್ತುಂಬ ತುಂಬಿಕೊಂಡು ಕೃತಾರ್ಥರಾಗಿ ಭಕ್ತಿಯಿಂದ ನಮಿಸಿ ಗರ್ಭಗುಡಿಯಿಂದ ಹೊರಬರುತ್ತಿದ್ದಂತೆಯೇ ದೇವಾಲಯದ ಆಡಳಿತಾಧಿಕಾರಿಗಳು ನಮ್ಮ ಬರುವಿಕೆಯನ್ನೇ ಕಾಯುತ್ತಿದ್ದು ನಮ್ಮನ್ನು ವಿಶೇಷ ಪ್ರಸಾದ ವಿತರಣಾ ಸ್ಥಳಕ್ಕೆ ಕರೆದುಕೊಂಡು ಹೋಗಿ ಪುಷ್ಕಳವಾಗಿ ಅಮೃತದಂಹ ಊಟ ಹಾಕಿಸಿ, ಬೆಳಿಗ್ಗೆ ಸ್ನಾನ ಮುಗಿಸಿಕೊಂಡು ತಿಂಡಿಗೆ ಇಲ್ಲಿಗೇ ನೇರವಾಗಿ ಬಂದು ಬಿಡಿ. ತಿಂಡಿ ಆದ ಮೇಲೆಯೇ ಮತ್ತೊಮ್ಮೆ ದೇವಿಯ ದರ್ಶನ ಮುಗಿಸಿ ಕೊಂಡು ಶೃಂಗೇರಿಯತ್ತ ನಿಮ್ಮ ಪ್ರಯಾಣ ಬೆಳೆಸಿ ಎಂದು ತಿಳಿಸಿದರು.
ಅಬ್ಬಾ ಇಂತಹ ಜನಜಂಗುಳಿಯ ಮಧ್ಯೆಯೂ ಅಚ್ಚುಕಟ್ಟಾಗಿ ದೇವರ ದರ್ಶನ ಮತ್ತು ಪ್ರಸಾದ ಭಾಗ್ಯ ಕೊಡಿಸಿದ್ದಕ್ಕಾಗಿ ನಮ್ಮ ಮಾವನವರನ್ನು ಮನಸಾರೆ ಅಭಿನಂದಿಸಿ ಸ್ವಲ್ಪ ಹೊತ್ತು ಎಲ್ಲರೂ ಲೋಕಾಭಿರಾಮವಾಗಿ ಮಾತಾಡಿ ಇನ್ನೇನು ಮಲಗಬೇಕು ಅಂದು ಕೊಳ್ಳುವಷ್ಟರಲ್ಲಿ ಗಂಟೆ ಹತ್ತೂವರೆಯಾಗಿತ್ತು. ನಾವು ಚಿಕ್ಕವರಿದ್ದಾಗ ಸಪ್ತಸಾಗರ ದಾಟಿ ಒಂದು ಮರದ ಪೊಟರೆಯಲ್ಲಿತ್ತು ಅವನ ಜೀವ ಎನ್ನುವ ಕಥೆಯಂತೆ, ನಮ್ಮ ಮಾವನವರಿಗೂ ಎಲ್ಲೇ ಹೋದರೂ, ಎಷ್ಟೇ ಹೊತ್ತಾದರೂ ತಮ್ಮ ಮನೆಯತ್ತಲೇ ತಮ್ಮ ಚಿತ್ತ. ಹಾಗಾಗಿ ತಮ್ಮ ಮನೆಯನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಅವರ ಅಣ್ಣನವರಿಗೆ ವಹಿಸಿ ಬಂದಿದ್ದರು. ಇಷ್ಟು ಹೊತ್ತಾದರೂ ಅವರಿಂದ ಯಾವುದೇ ಸುದ್ದಿಯೇ ಇಲ್ಲವಲ್ಲಾ. ಮನೆಗೆ ಬಂದಿದ್ದಾರೋ ಇಲ್ಲವೋ ಎಂದು ವಿಚಾರಿಸಲು ಕರೆ ಮಾಡೋಣ ಎಂದು ನೋಡಿದರೆ, ನಮ್ಮೆಲ್ಲಾ ಪೋನುಗಳೂ out of network covrage area ದಲ್ಲಿದೆ.
ಪುಣ್ಯಕ್ಕೆ ಎನ್ನುವಂತೆ ನಮ್ಮ ತಂದೆಯವರದ್ದು BSNL connection ಆಗಿದ್ದರಿಂದ ಅಲ್ಪ ಸ್ವಲ್ಪ ಸಿಗ್ನಲ್ ಇದ್ದ ಕಾರಣ ಅವರ ಪೋನ್ ನಿಂದ ನಮ್ಮ ದೊಡ್ಡ ಮಾವನವರಿಗೆ ಕರೆ ಮಾಡಿ, ಏನ್ರಪ್ಪಾ, ಹೇಗಿದ್ದೀರೀ, ಮನೆಗೆ ಬಂದ್ರಾ!! ಮನೆಕಡೇ ಜೋಪಾನಾ!! ಸರಿಯಾಗಿ ಎಲ್ಲಾ ಬಾಗಿಲು ಹಾಕಿಕೊಂಡು, ಭದ್ರವಾಗಿ ಚಿಲಕ ಹಾಕಿಕೊಂಡು ಮಲ್ಕೊಳ್ಳಿ. ಬೆಳಿಗ್ಗೆ ಪೇಪರ್ ಎಲ್ಲಾ ಒಳಗೆ ಇಟ್ಟು, ಕೆಲಸದವಳು ರಂಗೋಲಿ ಹಾಕಿ ಕೆಲ್ಸ ಮುಗ್ಸಿಕೊಂಡು ಹೋದ್ಮೇಲೆ ಬಾಗಿಲು ಭದ್ರ ಪಡಿಸಿಕೊಂಡು ಹೋಗಿ ಅಂತಾ ಒಂದೇ ಉಸಿರನಲ್ಲಿ ಹೇಳ್ತಾ ಹೋದ್ರೇ, ಆ ಕಡೆಯಿಂದ ಯಾವುದೇ ಪ್ರತಿಕ್ರಿಯೇ ಬರಲಿಲ್ಲ, ಇದೇನ್ರಪ್ಪಾ, ನಾನು ಮಾತಾಡ್ತಾ ಇರೋದು ಕೇಳಿಸ್ತಾ ಇದ್ಯಾ? ಒಂದೂ ಮಾತಾಡ್ತಾನೇ ಇಲ್ವೇ ಅಂದ್ರೇ! ಅದೂ ಅದೂ ಅದೂ ಅಂತಾ ಒಂದೇ ಸಮನೆ ತಡವರಿಕೆಯ ಮಾತು ನಮ್ಮ ದೊಡ್ಡ ಮಾವನವರ ಕಡೆಯಿಂದ ಬಂದದ್ದು ಕೇಳಿ ನಮಗೆಲ್ಲಾ ಗಾಬರಿ. ಅದೇನೂ ಅಂತಾ ಸರಿಯಾಗಿ ಹೇಳ್ಬಾರ್ದೇ ಅಂತಾ ಸ್ವಲ್ಪ ಏರು ಧನಿಯಲ್ಲಿ ನಮ್ಮ ಮಾವನವರು ಅವರ ಅಣ್ಣನವರಿಗೆ ಹೇಳಿದಾಗ, ಇಲ್ಲೊಂದು ಅಚಾತುರ್ಯ ನಡೆದು ಹೋಗಿದೆಯಪ್ಪಾ!! ಸುಮಾರು ಎಂಟು ಗಂಟೆಗೆ ನಾನು ಮನೆಗೆ ಬಂದು ಬಾಗಿಲು ತೆಗೆಯೋಣಾ ಅಂತಾ ಹೋದ್ರೇ ಬಾಗಿಲು ತೆಗೆದೇ ಇತ್ತು. ಅರೇ ಇದೇನಿದು ಬೀಗ ಹಾಕದೇ ಬಾಗಿಲು ತೆಗೆದೇ ಹೋಗಿಬಿಟ್ರಾ ಇವರು ಎಂದು ಒಳಗೆ ಹೋಗಿ ಸ್ವಿಚ್ ಹಾಕಿದ್ರೇ ಮನೆಯೆಲ್ಲಾ ಸಾಮಾನುಗಳೂ ಚೆಲ್ಲಾಪಿಲ್ಲಿಯಾಗಿದೆ. ಮತ್ತೂ ಒಳಗೆ ಹೋಗಿ ರೂಮ್ಗಳಿಗೆ ಹೋದ್ರೇ ಬೀರುಗಳೆಲ್ಲಾ ಒಡೆದು ಬಟ್ಟೆ ಬರೆಗಳನ್ನೆಲ್ಲ ಎಳೆದಾಡಿದ್ದಾರೆ ಅಂತಾ ಹೇಳ್ತಾ ಇದ್ರೇ ನಮ್ಮ ಮಾವನವರ ಎದೆ ಧಡ್ ಅಂದಹಾಗಾಯ್ತು. ಕೂಡಲೇ ಆವರನ್ನು ಸಮಾಧಾನ ಪಡಿಸಿ ಸ್ವಲ್ಪ ನೀರನ್ನು ಕುಡಿಸಿ ನಾನು ಫೋನ್ ತೆಗೆದುಕೊಂಡು ಅವರೊಂದಿಗೆ ಮಾತು ಮುಂದುವರಿಸಿದಾಗ ತಿಳಿದ ವಿಷಯವೇನೆಂದರೆ, ಅವತ್ತು ಸಂಜೆ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಯಾರೋ ಕಳ್ಳರು ಬಾಗಿಲು ಮೀಟಿ ನುಗ್ಗಿ ಕಳ್ಳತನ ಮಾಡಿದ್ದಾರೆ. ನಮಗೆ ವಿಷಯ ತಿಳಿಸೋಣ ಎಂದರೆ ನಮ್ಮ ಫೋನ್ಗಳು ಸಿಗುತ್ತಿಲ್ಲ. ಪಕ್ಕದವರ ಮನೆಯವರ ಸಹಾಯದಿಂದ ಪೋಲಿಸರಿಗೆ ದೂರು ನೀಡಿ ಪೋಲೀಸರು ಆ ಸಮಯದಲ್ಲಿ ಮಹಜರು ನಡೆಸುತ್ತಿದ್ದರು.
ಇಷ್ಟೆಲ್ಲಾ ಅದಮೇಲೆ ನಮ್ಮ ಪ್ರವಾಸ ಹೇಗೆ ಮುಂದುವರಿಸುವುದು? ಪ್ರವಾಸವನ್ನು ಅಲ್ಲಿಗೇ ತುಂಡರಿಸಿ ಆ ಕೂಡಲೇ ಊರಿಗೆ ಹಿಂದಿರುಗುವುದು ಎಂದು ನಿರ್ಧರಿಸಿ ಆದಾಗಲೇ ನಿದ್ರೆಗೆ ಜಾರಿಹೋಗಿದ್ದ ನಮ್ಮ ತಾಯಿಯವರು ಮತ್ತು ಮಕ್ಕಳನ್ನು ಎಬ್ಬಿಸಿ ಸೂಕ್ಷ್ಮವಾಗಿ ನಡೆದದ್ದನ್ನು ತಿಳಿಸಿ ಗಾಡಿ ತೆಗೆಯಲು ನಮ್ಮ ಡ್ರೈವರ್ಗೆ ಹೇಳೋಣ ಅಂತ ಬಂದ್ರೇ ಗಾಡಿಯಲ್ಲಿ ನಮ್ಮ ಡ್ರೈವರ್ರೇ ಇಲ್ಲಾ!! ಒಂದು ಕ್ಷಣ ನನ್ನ ಮರ್ಕಟ ಮನಸ್ಸು ಏನೇನೋ ಯೋಚಿಸ ತೊಡಗಿತು. ಕೂಡಲೇ ನಮ್ಮ ದೊಡ್ಡ ಮಾವನವರಿಗೆ ಕರೆ ಮಾಡಿ ಈ ಧಾವಂತದಲ್ಲೂ ಅಪ್ಪಿ ತಪ್ಪೀ ನಮ್ಮ ಮನೆಯ ಕಡೆ ಹೋಗಿದ್ರಾ? ನಮ್ಮ ಮನೆಯ ಸಂಗತಿ ಏನು ಎಂದು ಕೇಳಿದೆ. ಅದಕ್ಕವರು ಹೌದು ಪೋಲೀಸ್ ಸ್ಟೇಷನ್ಗೆ ಕಂಪ್ಲೇಂಟ್ ಕೊಡಲು ಹೋಗುವಾಗ ನಮ್ಮ ಮನೆಯ ಮುಂದೆಯೇ ಹೋಗ ಬೇಕಾದ ಕಾರಣ ನಮ್ಮ ಮನೆಗೂ ಹೋಗಿ ನೋಡಿಕೊಂಡು ಬಂದು ನಮ್ಮ ಮನೆ ಸುರಕ್ಷಿತವಾಗಿದೆ ಎಂದು ಖಾತ್ರಿ ಪಡಿಸಿಕೊಂಡಿದ್ದನ್ನು ಹೇಳಿದಾಗ ತುಸು ನೆಮ್ಮದಿಯಾದರೂ ನನಗೆ ನಮ್ಮ ಡ್ರೈವರ್ ಮೇಲೆ ಅನುಮಾನ ಬರಲು ಶುರುವಾಯಿತು. ಗಾಡಿ ಹತ್ತಿದಾರಿಂದ ಐದಾರು ಸಲಾ ಗಾಡಿ ನಿಲ್ಲಿಸಿ ಅದ್ಯಾರೋ ಹತ್ರಾ ಗುಟ್ಟು ಗುಟ್ಟಾಗಿ ಮಾತಾಡ್ತಾ ಇದ್ದದ್ದು ನಮಗೆ ಈಗ ಅನುಮಾನ ಬರತೊಡಗಿತು. ನಾವುಗಳು ಮನೆಯಲ್ಲಿ ಇಲ್ಲದಿರುವ ವಿಷಯವನ್ನು ಅವನೇ ಅವರ ಕಡೆಯವರಿಗೆ ತಿಳಿಸಿ ಕಳ್ಳತನ ಮಾಡಿಸಿರಬಹುದೇ ಎಂಬ ಅನುಮಾನ ತಲೆಯಲ್ಲಿ ಹೊಕ್ಕಿತು. ಅಲ್ಲೇ ಪಕ್ಕದಲ್ಲಿ ನಿಂತಿದ್ದ ಗಾಡಿಯವರನ್ನು ಸಾರ್ ನಮ್ಮ ಡ್ರೈವರ್ ಅವರನ್ನು ಎಲ್ಲಾದ್ರೂ ನೋಡಿದ್ರಾ ಎಂದು ಕೇಳಿದಾಗ, ಹೌದು ಸಾರ್. ಅವರ ಸ್ನೇಹಿತರೊಬ್ಬರು ಸಹಾ ಬಂದಿದ್ದಾರಂತೆ ಅವರ ಗಾಡಿಯಲ್ಲಿ ಮಲಗಿಕೊಳ್ತೀನೀ ಅಂತಾ ಹೇಳಿ ಹೋದ್ರು ಅಂದು. ಅಷ್ಟು ಹೊತ್ತಿನಲ್ಲಿ ಅಲ್ಲಿ ನಿಂತಿದ್ದ ಒಂದೊಂದೇ ಗಾಡಿಯನ್ನು ಹುಡುಕಿಕೊಂಡು ನಮ್ಮ ಡ್ರೈವರ್ ಅವರ ಹೆಸರು ಕೂಗ್ತಾ ಹೋಗಿ ಸ್ವಲ್ಪ ಹೊತ್ತಾದ ಮೇಲೆ ನಮ್ಮ ಡ್ರೈವರ್ ಪತ್ತೆ ಆದ್ರು. ಅವರೂ ಸಹಾ ಗಾಢ ನಿದ್ದೆಯಲ್ಲಿದ್ದು ಎನ್ ಸಾರ್! ಯಾಕೆ ಇಷ್ಟು ಹೊತ್ತಿನಲ್ಲಿ ಹುಡುಕಿಕೊಂಡು ಬಂದ್ರೀ ಎಂದ್ರು. ಸಾರ್!! ಸ್ವಲ್ಪ ಅರ್ಜೆಂಟ್ ಬೆಂಗಳೂರಿಗೆ ವಾಪಸ್ ಹೋಗ್ಬೇಕಿದೆ. ಬರ್ತೀರಾ ಎಂದೇ. ಇಷ್ಟು ಹೋತ್ನಾಲ್ಲಾ ಸಾರ್!! ರೋಡ್ ಕೂಡಾ ಸರಿ ಇಲ್ಲಾ! ಬೆಳಿಗ್ಗೆ ಹೊತ್ತಿಗೆ ಮುಂಚೆ ಹೋಗೋಣ್ವಾ ಸಾರ್! ಅಂತಾ ಹೇಳ್ತಾ ಇದ್ರೇ ನನ್ನ ಅನುಮಾನದ ರೆಕ್ಕೆ ಪುಕ್ಕ ಮತ್ತಷ್ಟು ಬಲಿಯ ತೊಡಗಿತು. ಇಲ್ಲಾ ಸ್ವಲ್ಪ emergency call ಬಂದಿದೆ. ಈಗ್ಲೇ ಹೋಗ್ಬೇಕು ಬನ್ನಿ ಅಂದೇ. ಸರೀ ಸಾರ್ ಮುಖ ತೊಳೆದುಕೊಂಡು ಬರ್ತೀನಿ ಅಂತ ಹೇಳಿ ಒಂದು ಕಾಲು ಹತ್ತು ನಿಮಿಷದಲ್ಲಿ ಗಾಡಿ ಶುರು ಮಾಡೋವಷ್ಟರಲ್ಲಿ ಗಂಟೆ 11:15- 11:20 ಆಗಿತ್ತು.
ಗಾಡಿ ಭದ್ರಾ ಸೇತುವೆ ದಾಟುತ್ತಿದ್ದಂತೆಯೇ ಸಾರ್ ಬಂದ ದಾರಿ ಚೆನ್ನಾಗಿಲ್ಲ. ಮತ್ತೊಂದು ರೋಡ್ ಇದೇ. ಸ್ವಲ್ಪ ದೂರ ಆಗುತ್ತೆ ಆದ್ರೇ ರಸ್ತೆ ಚೆನ್ನಾಗಿದೆ ಅದ್ರಲ್ಲೇ ಹೋಗ್ಲಾ? ಅಂದಾಗ ಯಾಕೇ ಈ ಮನುಷ್ಯ ಈ ರೀತಿ ತಡಾ ಮಾಡ್ತಾ ಇದ್ದಾನೆ ಅಂತಾ ನನಗೆ ಮತ್ತು ನಮ್ಮ ಮಾವನವರಿಗೆ ಅನ್ನಿಸಿದ್ರೆ ನಮ್ಮ ತಾಯಿಯವರು ಸರಿ ಆ ರಸ್ತೆಯಲ್ಲೇ ಹೋಗಪ್ಪಾ. ಬೆಳಿಗ್ಗೆ ಮೈ ಕೈ ಎಲ್ಲಾ ನುಜ್ಜು ನೂರಾಗಿದೆ ಅನ್ನೋದೇ? ಆಷ್ಟು ಹೊತ್ತಿನಲ್ಲಿ ಸುಮ್ಮನೆ ನಮ್ಮಲ್ಲೇ ಜಟಾಪಟಿ ಮಾತೇಕೇ ಎಂದು ಕೊಂಡು ಸರಿ ಅದೇ ದಾರಿಯಲ್ಲಿ ಬೇಗ ಬೇಗ ಹೋಗಿ ಎಂದೆ. ಅಲ್ಲಿಂದ ನೋಡಿ ಅಸಲಿ ಆಟ ಶುರುವಾಯ್ತು .
ಹೇಳಿ ಕೇಳಿ ಡಿಸೆಂಬರ್ 31ರ ರಾತ್ರಿ, ದಟ್ಟದಾದ ಕಾಡು ನಮ್ಮ ಗಾಡಿ ಬಿಟ್ರೆ ಮತ್ತಾವ ನರಪಿಳ್ಳೆಯೂ ಇಲ್ಲದಂತಹ ರಸ್ತೆಯನ್ನು ಸೀಳಿಕೊಂಡು ಹೋಗ್ತಾ ಇದ್ದ ನಮ್ಮ ಗಾಡಿ ಇದ್ದಕ್ಕಿದ್ದಂತೆಯೇ ಗಕ್ ಎಂದು ಬ್ರೇಕ್ ಹಾಕಿ ನಿಲ್ತು. ಯಾಕಪ್ಪಾ ಅಂತಾ ಕೇಳಿದ್ರೇ ಅಲ್ನೋಡಿ ಸಾರ್ ಎಷ್ಟು ದೊಡ್ಡ ಹಾವು ಹೋಗ್ತಾ ಇದೆ ಅಂತ high beem head light ಹಾಕಿ ದೊದ್ಡದಾದ ಹೆಬ್ಬಾವು ರಸ್ತೆ ದಾಟು ಹೋಗುತ್ತಿದ್ದದ್ದನ್ನು ತೋರಿಸಿದ ನಮ್ಮ ಡ್ರೈವರ್. ಇದೇನಪ್ಪಾ ಅಪಶಕುನ ಎಂದು ಮುಂದು ಹೋಗುತ್ತಿದ್ದಂತೆಯೇ ಜೋರಾದ ಗಂಟೆ ಶಭ್ಧ. ಸಮಯ ನೋಡಿದ್ರೇ ಹನ್ನೆರಡಾಗಿತ್ತು ಅರೇ ಇಷ್ಟು ಹೊತ್ತಿನಲ್ಲಿ ಈ ಕಾಡಿನ ಮಧ್ಯೆ ಇದೆಂತಹಾ ಗಂಟೆ ಶಬ್ಧಾ ಎಂದು ಯೋಚಿಸಿ ಗಾಡಿ ಒಂದು ತಿರುವು ತಿರುಗುತ್ತಿದ್ದಂತೆಯೇ ಆ ಕಾಡಿನ ಮಧ್ಯೆ ವಿದ್ಯುದ್ದೀಪದಿಂದ ಹೊಳೆಯುತ್ತಿದ್ದ ಚರ್ಚಿನ ಶಿಲುಬೆ ಕಾಣಿಸಿತು. ಅರೇ ಈ ಕಾಡಿನ ಮಧ್ಯೆಯೂ ಚರ್ಚೇ ಎಂಬ ಉದ್ಗಾರ ನಮ್ಮ ತಂದೆಯವರ ಬಾಯಿಂದ ಹೊರಬಿತ್ತು. ಅಲ್ಲಿಂದ ಸ್ವಲ್ಪ ದೂರ ಹೋದಂತೆಯೇ ಮತ್ತೊಮ್ಮೆ ಗಾಡಿ ನಿಂತಾಗಾ ಈಗೇನಪ್ಪಾ ಅಂತ ನೋಡಿದ್ರೇ ಸುಮಾರು ಹತ್ತಾರು ಯುವಕರ ಗುಂಪು ಕೈಯಲ್ಲಿ ಮಧ್ಯದ ಬಾಟೆಲ್ ಹಿಡಿದುಕೊಂಡು ನಮ್ಮ ಗಾಡಿಗೆ ಅಡ್ಡಲಾಗಿ ನಿಂತಿದ್ದರು ಮೊದಲೇ ಭಯಭೀತರಾಗಿದ್ದ ನಮಗೆ ಮತ್ತಷ್ಟೂ ಭಯ. ಇದೇನಪ್ಪಾ ಅಂತ ನೋಡ್ತಾ ಇದ್ರೇ ನಮ್ಮ ಕಿಟಕಿಯ ಹತ್ತಿರ ಬಂದು ಕೈ ಚಾಚಿದ ಆ ಹುಡುಗರ ಗುಂಪು Happy New Year brother ಎಂದಾಗ ವಿಧಿ ಇಲ್ಲದೇ, Thank you & same to you ಎಂದು ಒಲ್ಲದ ಮನಸ್ಸಿನಲ್ಲೇ ಹೇಳಿ ಮುಂದೆ ಸಾಗಿದೆವು. ಅಲ್ಲಿಂದ ಪ್ರತೀ ಐದಾರು ಕಿಮೀ ದೂರಕ್ಕೊಂದರಂತೆ ಚರ್ಚುಗಳು. ಇಲ್ಲವೇ ಮನೆಯ ಮುಂದೆ ನಕ್ಷತ್ರಗಳು ತೂಗು ಹಾಕಿದ್ದದ್ದನ್ನು ನೋಡಿ ಕ್ರೈಸ್ತ ಮಿಷನರಿಗಳ ಸದ್ದಿಲ್ಲದ ವಿಸ್ತಾರ ಹೇಗೆ ಆಗಿದೆ ಎಂಬುದು ನಮ್ಮ ಅರಿವಾಯಿತಾದರೂ ನಾವಿದ್ದ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಹೆಚ್ಚಿಗೆ ಯೋಚಿಸುವ ಹಾಗಿರಲಿಲ್ಲ. ಇದೇ ರೀತಿಯ ಅನುಭವ ಇನ್ನೂ ಮೂರ್ನಾಲ್ಕು ಕಡೆ ನಮಗಾಯಿತು.
ಇಷ್ಟರ ಮಧ್ಯೆ ಡ್ರೈವರ್ ನಿದ್ದೆ ಮಾಡದೆ ಎಚ್ಚರದಿಂದ ಗಾಡಿ ಓಡಿಸುವಂತೆ ಮಾಡಲು ಡ್ರೈವರ್ ನೊಂದಿಗೆ ನಿಧಾನವಾಗಿ ಮಾತನಾಡಲು ಶುರು ಮಾಡಿದೆ. ಈ ಗಾಡಿ ನಿಮ್ಮದೇನಾ? ಎಷ್ಟು ವರ್ಷದಿಂದ ಗಾಡಿ ಓಡಿಸ್ತಾ ಇದ್ದೀರಾ? ಈ ಟ್ರಾವೆಲ್ಸ್ನಲ್ಲಿ ಎಷ್ಟು ವರ್ಷದಿಂದ ಕೆಲಸ ಮಾಡ್ತಾ ಇದ್ದೀರಾ ಅಂತಾ ಪ್ರಶ್ನೆಗಳನ್ನು ಕೇಳ್ತಾ ಹೋಗ್ತಾ ಇದ್ದಂತೆ ,ಡ್ರೈವರ್ ನಮ್ಮ ಅತ್ತೆಯವರ ಊರಿನವನು. ಅವರ ಮನೆ ನಮ್ಮ ಅತ್ತೆಯವರ ಮನೆಯ ಹಿಂದೆಯೇ ಇದ್ದು ಅವರ ತಂದೆ ತಾಯಿಯವರೆಲ್ಲಾ ನಮ್ಮ ಅತ್ತೆಯವರಿಗೆ ಚಿರಪರಚಯಸ್ತರು ಎಂದು ತಿಳಿದಾಗ ಮನಸ್ಸು ಹಗುರವಾಯಿತು. ಅದೂ ಅಲ್ಲದೇ ಅವರ ಸ್ನೇಹಿತರ ಮನೆಯವರೊಬ್ಬರು ಅಸ್ಪತ್ರೆಯಲ್ಲಿ ಸೀರಿಯಸ್ಸಾಗಿದ್ದ ಕಾರಣ ಪದೇ ಪದೇ ಅವರಿಂದ ಕರೆ ಬರುತ್ತಿತ್ತು. ಗಾಡಿ ಓಡಿಸ್ತಾ ಮಾತಾಡಿದ್ರೇ ನಾವೆಲ್ಲರೂ ಬೇಜಾರು ಮಾಡಿಕೊಳ್ಳಬಹುದು ಎಂದು ತಿಳಿದು ಗಾಡಿ ನಿಲ್ಲಿಸಿ ದೂರ ಹೋಗಿ ಮಾತನಾಡುತ್ತಿದ್ದದ್ದಾಗಿ ತಿಳಿಸಿದರು. ಇದೆಲ್ಲಾ ಕೇಳುತ್ತಿದ್ದಂತೆಯೇ ಡ್ರೈವರ್ ಕುರಿತಾಗಿದ್ದ ನಮ್ಮ ಅನುಮಾನಗಳು ಒಂದೊಂದೇ ಪರಿಹಾರವಾಗುತ್ತಿದ್ದಂತೆಯೇ ಬೆಳ್ಳಂಬೆಳಿಗ್ಗೆ ನಾಲ್ಕಕ್ಕೆಲ್ಲಾ ಮನೆಗೆ ತಲುಪಿ ನಮ್ಮ ಆಗಮನವನ್ನೇ ಕಾಯುತ್ತಿದ್ದ ಪೋಲಿಸರು ಮತ್ತು ನಮ್ಮ ದೊಡ್ದ ಮಾವನವರನ್ನು ಭೇಟಿಯಾಗಿ ಅಗಿದ್ದ ಅವಗಡಗಳನ್ನೆಲ್ಲಾ ಕಣ್ಣಾರೆ ನೋಡಿ ಮನನೊಂದು ಕಳೆದು ಹೋದ ವಸ್ತುಗಳ ಅಂದಾಜು ಲೆಖ್ಖವನ್ನು ಪೋಲಿಸರಿಗೆ ತಿಳಿಸಿ ಬೆಳಿಗ್ಗೆ ಬಡಗಿಯನ್ನು ಕರೆಸಿ ಒಡೆದ ಬಾಗಿಲನ್ನು ಸರಿ ಪಡಿಸಿದೆವು.
ನಮ್ಮ ಮಾವನವರ ಪ್ರಭಾವ ಮತ್ತು ದೇವರ ದೆಯೆಯಿಂದಾಗಿ ಕಳ್ಳರು ಕೆ.ಆರ್.ಪುರಂ ಸ್ಟೇಷನ್ ವ್ಯಾಪ್ತಿಯಲ್ಲಿ ಏಳೆಂಟು ತಿಂಗಳಿನಲ್ಲಿಯೇ ಸಿಕ್ಕಿ ಕೊಂಡು ಕಳೆದು ಕೊಂಡ ಅಲ್ಪ ಸ್ವಲ್ಪ ಚಿನ್ನಾಭರಣವನ್ನು ಹಿಂದುರುಗಿ ಪಡೆದುಕೊಂಡರೂ ಇಂದಿಗೂ ಕೋರ್ಟು ಕಛೇರಿ ಅಲೆಯುವುದು ತಪ್ಪಿಲ್ಲ. ಹಾಗಾಗಿ ಇಂದಿಗೂ ಡಿಸೆಂಬರ್ 31 ಮತ್ತು ಜನವರಿ 1 ಬಂತೂ ಅಂದ್ರೇ ಸಂಭ್ರಮಿಸುವ ಬದಲು ಅ ಕರಾಳ ನೆನಪೇ ನಮ್ಮ ಕಣ್ಣಿಗೆ ರಾಚುತ್ತದೆ. ಅದೂ ಅಲ್ದೇ ಜನವರಿ 1 ನಮಗೇನೂ ಹೊಸಾ ವರ್ಷ ಅಲ್ಲಾ ಅಲ್ವೇ? ನಮ್ಮ ಹೊಸವರ್ಷದ ಆಚರಣೆ ಏನಿದ್ರೂ ಯುಗಾದಿಯೇ ಅಲ್ವೇ?
ಏನಂತೀರೀ?
ಡಿಸೆಂಬರ್ ಬಂದ್ರೆ ಸುನಾಮಿದೇ ನೆನಪು
LikeLike
ಸುನಾಮಿಯ ನೆನಪು ನಿಜವಾಗಿಯೂ ನಮ್ಮ ಕುಟುಂಬದಲ್ಲೂ ಕರಾಳವಾಗಿದೆ. ಡಿಸೆಂಬರ್ 25ರ ಬೆಳಿಗ್ಗೆ ಸುನಾಮಿಯಾದರೆ, ಡಿಸೆಂಬರ್ 24ರ ರಾತ್ರಿಯೇ ನಮ್ಮ ಪ್ರೀತಿಪಾತ್ರರಾದ ಚಿಕ್ಕಪ್ಪನವರನ್ನು ಕಳೆದು ಕೊಂಡಿದ್ದವು
LikeLike
ಜನವರಿ ೧ ನಮಗೆ ಹೊಸ ವರ್ಷ ಅಲ್ಲ, ಯುಗಾದಿಯೇ ಹೊಸ ವರ್ಷ ಎಂಬುದು ಸತ್ಯವಾದರೂ ನಮ್ಮವರು ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಿಸುವುದರಲ್ಲೇ ಸಂತೋಷವನ್ನು ಕಾಣುತ್ತಾರೆ. ಹುಟ್ಟಿದ ಹಬ್ಬದ ದಿವಸ ಕೇಕ್ ಕಟ್ ಮಾಡುವುದು, ಮೇಣದ ಬತ್ತಿ ಆರಿಸುವುದು Happy birth day to you ಎಂದು ಕೂಗುವುದು ನಮ್ಮ ಸಂಪ್ರದಾಯವಲ್ಲದಿದ್ದರೂ ಅದರಲ್ಲೇ ನಮ್ಮವರೂ ಸಂತೋಷಪಡುತ್ತಾರೆ. ನಾವು ಚಿಕ್ಕವರಾಗಿದ್ದಾಗ ಹುಟ್ಟಿದ ಹಬ್ಬವನ್ನು ಹುಟ್ಟಿದ ತಾರೀಖಿನ ದಿವಸ ಮಾಡದೆ ಹುಟ್ಟಿದ ನಕ್ಷತ್ರದ ದಿವಸ ಮಾಡುತ್ತಿದ್ದರು. ಅಲ್ಲದೆ ಆ ದಿನ ತಲೆಗೆ (ಎಣ್ಣೆ ನೀರು) ಅಭ್ಯಂಜನ ಮಾಡಿಸಿ ಹೊಸ ಬಟ್ಟೆ ಹಾಕಿ ಮನೆಯಲ್ಲಿ ಹಬ್ಬದೂಟ ಮಾಡಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಪೂಜೆ ಮಾಡಿಸುತ್ತಿದ್ದರು. ಈಗ ಯಾರೂ ಅದನ್ನು ಮಾಡುತ್ತಿಲ್ಲ ಅನ್ನಿಸುತ್ತದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಹೊಂದಿಕೊಳ್ಳಬೇಕಾದ್ದು ನಮಗೆ ರೂಢಿಯಾಗಿಬಿಟ್ಟಿದೆಯಲ್ಲವೆ,?
LikeLike
ಹಳೆ ಬೇರು ಹೊಸ ಚಿಗುರು ಪ್ರಕೃತಿಯ ನಿಯಮ. ಹಳೆಯದರ ಜೊತೆಗೆ ಹೊಸತನ್ನು ಸೇರಿಸಿಕೊಂಡು ಹೋದರೆ ಒಳಿತಾದರೂ, ಈಗಿನ ಜನಾ ಹಳೆಯದನ್ನು ಸಂಪೂರ್ಣವಾಗಿ ಮರೆಯುತ್ತಿರುವುದು ಬೇಸರದ ಸಂಗತಿಯಾಗಿದೆ
LikeLike
ನಿಜ. ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು.
LikeLike