ಬೇಡುವ ಕೈಗಳ ಹಿಂದಿನ ಕಹಿ ಸತ್ಯ

ಶಂಕರ ಮೊನ್ನೆ ವಾರಾಂತ್ಯದಲ್ಲಿ ಮಡದಿಯೊಂದಿಗೆ ಮಲ್ಲೇಶ್ವರಂಗೆ ಹೋಗಿದ್ದ. ಸಂಜೆಗತ್ತಲು ವಾಹನ ನಿಲ್ಲಿಸಲು ಸ್ಥಳ ಸಿಗದೇ ಪರದಾಡುತ್ತಿದ್ದಾಗ ಯಾರೋ ಒಬ್ಬರು ವಾಹನ ತೆಗೆಯುತ್ತಿದ್ದದ್ದನ್ನು ನೋಡಿ ಮರುಭೂಮಿಯಲ್ಲಿ ನೀರುವ ಸಿಗುವ ಓಯಸಿಸ್ ನಂತೆ ಕಂಡು ಕೂಡಲೇ ಆಲ್ಲಿಗೆ ಹೋಗಿ ವಾಹನ ನಿಲ್ಲಿಸುತ್ತಿದ್ದಾಗ ಹಿಂದುಗಡೆಯಿಂದ ಯಾರೋ ಕೈ ಚಾಚಿದಂತಾಯಿತು. ಬೆನ್ನ ಹಿಂದ್ದಿದ್ದರಿಂದ ಆ ವ್ಯಕ್ತಿ ಯಾರು ಎಂದು ಸ್ಪಷ್ಟವಾಗಿ ತಿಳಿಯದಿದ್ದರೂ ಕೈಗಳಲ್ಲಿದ್ದ ಚಿಲ್ಲರೇ ಕಾಸು ಮತ್ತು ನಡುಗುತ್ತಿದ್ದ ಕೈಗಳಿಂದಾಗಿ ಯಾರೋ ವಯೋವೃದ್ಧರು ಹೊಟ್ಟೆಯ ಪಾಡಿಗೆ ಭಿಕ್ಷೇ ಬೇಡುತ್ತಿದ್ದಾರೆ ಎಂದು ತಿಳಿದ ಶಂಕರ, ಗಾಡಿಯ ಸ್ಟಾಂಡ್ ಹಾಕಿ, ಲಾಕ್ ಮಾಡಿ ಜೇಬಿನಿಂದ ಪರ್ಸ್ ತೆಗೆದು ನೋಟೊಂದನ್ನು ತೆಗೆದು ಅವರಿಗೆ ಕೊಡಲು ಹಿಂದಿರುಗಿ ನೋಡಿದೊಡನೆಯೇ ಒಂದು ಕ್ಷಣ ಅವನ ಕಣ್ಣುಗಳನ್ನು ಅವನೇ ನಂಬಲಾರದೇ ಸ್ಥಬ್ಧನಾಗಿ ಹೋದ. ಆ ಕಡೆಯ ವ್ಯಕ್ತಿಯೂ ಹಿಂದಿನಿಂದ ಶಂಕರನನ್ನು ಗುರುತಿಸಲಾಗದೇ ಅವತ್ತ ಕೈಯೊಡ್ಡಿದ್ದಕ್ಕಾಗಿ ಪೆಚ್ಚಾಗಿ ಒಂದು ಕ್ಷಣ ತಬ್ಬಿಬ್ಬಾಗಿ ಹೋಗಿದ್ದರು. ಸುಮಾರು ಹತ್ತು ಹದಿನೈದು ಸೆಕೆಂಡಿನವರೆಗಿಗೂ ಇಬ್ಬರ ಬಾಯಿಯಲ್ಲಿ ಮಾತೇ ಹೊರಡಲಿಲ್ಲ. ಆದಾದ ನಂತರ ಶಂಕರನೇ ಸಾವರಿಸಿಕೊಂಡು ಏನೂ ಆಗಿಯೇ ಇಲ್ಲದಂತೆ, ಏನನ್ನೂ ನೋಡಿಯೇ ಇಲ್ಲದಂತೆ ಏನು ಶಾಸ್ತ್ರಿಗಳೇ ನೀವಿಲ್ಲಿ ? ಎಂದು ಹಸ್ತಲಾಘವಕ್ಕಾಗಿ ಕೈ ಚಾಚಿದ. ಅವರೂ ಕೂಡ ಒಂದೇ ಕ್ಷಣದಲ್ಲಿ ಬಲಗೈಯಲ್ಲಿದ್ದ ಚಿಲ್ಲರೆ ಕಾಸನ್ನು ಎಡಗೈಯ್ಯಿಗೆ ವರ್ಗಾಯಿಸಿ ಅಲ್ಲಿಂದ ಪಂಚೆ ಕಟ್ಟಿದ್ದ ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ, ಶಂಕ್ರೂ.. ಇದೇನು ನೀನು ಇಲ್ಲಿ? ನಿಮ್ಮಪ್ಪ ಇದ್ದಾಗ, ನೀನು ತಂದು ಕೊಡುತ್ತಿದ್ದ ನಶ್ಯದಲ್ಲೇ ನನ್ನ ಡಬ್ಬಿಗೂ ತುಂಬಿಕೊಡುತ್ತಿದ್ದ. ಅವನು ಹೋದ್ಮೇಲೆ ನನಗೆ ನಶ್ಯ ತಂದು ಕೊಡುವವರು ಯಾರೂ ಇಲ್ಲ ನೋಡು. ಅದಕ್ಕೆ ನಶ್ಯ ತೆಗೆದು ಕೊಳ್ಳಲು ನಾನೇ ಇಲ್ಲಿ ಬಂದಿದ್ದೆ. ಹಾಗೆ ನೀನು ಗಾಡಿ ನಿಲ್ಲಿಸಿದ್ದನ್ನು ನೋಡಿ, ನಿನ್ನನ್ನು ನೋಡಿ ತುಂಬಾ ದಿನಾ ಆಗಿತ್ತಲ್ವಾ ಅದಕ್ಕೇ ಮಾತಾನಾಡಿಸೋಣ ಅಂತ ನಿಂತ್ಕೊಂಡೇ ಅಂತಾ ಸೇರಿಗೆ ಸವ್ವಾಸೇರು ಎಂಬಂತೆ ಮಾತನ್ನು ಹಾಗೆಯೇ ತೇಲಿಸಿಬಿಟ್ಟರು ಆ ಹಿರಿಯರು.

beg1

ಶಂಕರನ ತಂದೆಯವರು ಬದುಕಿದ್ದಾಗ ಪ್ರತೀ ದಿನದ ಮಧ್ಯಾಹ್ನ ತಪ್ಪದೇ ಅವನ ಮನೆಗೆ ಬರುತ್ತಿದ್ದ ಶಾಸ್ತ್ರಿಗಳು ಶಂಕರನ ತಂದೆಯವರ ಕೋಣೆಯಲ್ಲಿಯೇ ಅವರ ಜೊತೆಗೇ ಮಧ್ಯಾಹ್ನದ ಎಲ್ಲಾ ಧಾರವಾಹಿಗಳನ್ನು ನೋಡಿ ಸಂಜೆ ಮನೆಯ ಎದುರಿಗಿದ್ದ ಪಾರ್ಕಿನಲ್ಲಿ ವಾಕಿಂಗ್/ಟಾಕಿಂಗ್ ಮುಗಿಸಿ ಮತ್ತೆ ಸಂಜೆಯ ಧಾರಾವಾಹಿಗಳನ್ನೆಲ್ಲಾ ನೋಡಿಕೊಂಡು ರಾತ್ರಿ ಒಂಬತ್ತರ ಹೊತ್ತಿಗೆ ಮನೆಗೆ ಹೋಗುತ್ತಿದ್ದರು. ಶಂಕರನ ತಂದೆಯವರ ಕೋಣೆಯಲ್ಲಿ ಒಂದು ಮಂಚ ಅವನ ತಂದೆಯವರಿಗಾದರೆ ಮತ್ತೊಂದು ಶಾಸ್ತ್ರಿಗಳಿಗೆಂದೇ ಮೀಸಲಾಗಿತ್ತು. ಪ್ರತೀ ದಿನ ಶಾಸ್ತ್ರಿಗಳು ಶಂಕರ ಮನೆಗೆ ಬರುತ್ತಿದ್ದರೂ ಒಮ್ಮೆಯೂ ಸಹಾ ಯಾವುದಕ್ಕೂ ಹಾತೊರೆಯಿತ್ತಿರಲಿಲ್ಲ. ತಿನ್ನಲು ಏನೇ ಕೊಟ್ಟರೂ, ಇಲ್ಲ ಹೊಟ್ಟೆ ತುಂಬಿದೆ ಅಂತಲೋ ಇಲ್ಲವೇ ಈಗ ತಾನೇ ಊಟ ಮಾಡಿ ಬಂದೇ ಎಂದು ಹೇಳಿ ಯಾವುದಕ್ಕೂ ದಾಕರ ಪಡದೇ ಮಹಾನ್ ಸ್ವಾಭಿಮಾನಿಗಳಾಗಿ ಕಂಡಿದ್ದ ಶಾಸ್ತ್ರಿಗಳನ್ನು ಆ ರೀತಿಯಾಗಿ ನೋಡಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ . ಮಾರನೆಯ ದಿನ ತನ್ನ ತಂದೆಯವರ ಮತ್ತೊಬ್ಬ ಸ್ನೇಹಿತರ ಬಳಿ ಬಹಳ ಅಳುಕಿನಿಂದ ಈ ವಿಷಯವನ್ನು ಪ್ರಸ್ತಾಪಿಸಿದಾಗ ಅಯ್ಯೋ ಇಷ್ಟೇನಾ ವಿಷ್ಯಾ, ಇದು ನಮಗೆಲ್ಲಾ ಏನೂ, ಅವರ ಮಕ್ಕಳಿಗೂ ಗೊತ್ತಿದೆ. ಅವರೂ ಸಹಾ ಅದೆಷ್ಟೋ ಬಾರಿ ಹೇಳಿ ಹೇಳಿ ಸಾಕಾಗಿ, ಸುಸ್ತಾಗಿ ಹೋಗಿದ್ದಾರೆ. ಕೆಲ ವರ್ಷಗಳ ಹಿಂದಿನವರೆಗೂ ಪೌರೋಹಿತ್ಯ ಮಾಡುತ್ತಾ ನಾಲ್ಕಾರು ಕಾಸನ್ನು ಸಂಪಾದಿಸುತ್ತಿದ್ದರು. ಈಗ ವಯೋಸಹಜ ಮರೆವಿನಿಂದಾಗಿ ಶುಭ/ಅಶುಭ ಮಂತ್ರಗಳು ಬೆರೆತು ಹೋಗಿ ಅಭಾಸವಾಗುತ್ತಿದ್ದ ಕಾರಣ ಪೌರೋಹಿತ್ಯಕ್ಕೆ ಹೋಗುತ್ತಿಲ್ಲ. ಬ್ರಾಹ್ಮಣಾರ್ಥಕ್ಕೆ ಹೋಗಲು ದೇಹ ಸಹಕರಿಸುತ್ತಿಲ್ಲ ಹಾಗಾಗಿ ಈ ರೀತಿ ಬೇಡಲು ಶುರು ಮಾಡಿಕೊಂಡಿದ್ದಾರೆ ಎಂದಾಗ ಶಂಕರನ ಮನಸ್ಸಿಗೆ ಬಹಳ ನೋವಾಯಿತು.

ಮಕ್ಕಳು, ಮೊಮ್ಮಕ್ಕಳು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರೂ, ಅವರಿಗೆ ಭಾರವಾಗ ಬಾರದೆಂದೋ ? ಅವರ ಹಂಗಿನಲ್ಲಿ ನಾವೇಕೆ ಇರಬೇಕೆಂದೋ? ಅನಾವಶ್ಯಕ ಅಹಂ ನಿಂದಾಗಿ ಮತ್ತಾರ ಬಳಿಯಲ್ಲೋ ಕೈ ಚಾಚಿ ಈ ಇಳಿ ವಯಸ್ಸಿನಲ್ಲಿ ಚಿಕ್ಕವರಾಗುತ್ತಿದ್ದಾರಲ್ಲಾ ಎಂದೆನಿಸಿತು. ನನ್ನ ಮನಸ್ಸಿಗೇ ಇಷ್ಟೋಂದು ನೋವಾಗಿರ ಬೇಕಾದರೇ ಆವರ ಕುಟುಂಬದವರಿಗೆ ಇನ್ನೆಷ್ಟು ನೋವಾಗಿರಬಹುದು ಎಂದು ಯೋಚಿಸಿ ಮನಸ್ಸು ಮಮ್ಮಲ ಮರುಗಿತು. ಮಾಡಿದವರ ಪಾಪ ಆಡಿದವರ ಬಾಯಿಯಲ್ಲಿ ಎಂಬಂತೆ, ಜನಾ ನಾನಾ ರೀತಿಯ ಅರ್ಥ ಕಲ್ಪಿಸಿಕೊಂಡು ಬಾಯಿಗೆ ಬಂದಂತೆ ಮಾತಾಡಲು ಅಹಾರವಾಗಿ ಹೋದರಲ್ಲಾ ಶಾಸ್ತ್ರಿಗಳು ಎಂದೆನಿಸಿತು ಶಂಕರನಿಗೆ.

ವಯಸ್ಸದವರು ಹೀಗೇಕೆ ಮಾಡುತ್ತಾರೆ? ಮಕ್ಕಳ ಮಾತನ್ನೇಕೆ ಕೇಳುವುದಿಲ್ಲಾ ಎಂದು ಶಂಕರ ಮತ್ತೊಬ್ಬ ಹಿರಿಯರ ಬಳಿ ವಿಚಾರಿಸಿದಾಗ ತಿಳಿದ ವಿಷಯ ಮತ್ತಷ್ಟು ಗಂಭೀರ ಸ್ವರೂಪವನ್ನು ಪಡೆದುಕೊಂಡಿತು. ದುಡಿಯುವ ವಯಸ್ಸಿನಲ್ಲಿ ತಾವು ದುಡಿದಿದ್ದೆಲ್ಲವನ್ನೂ ಕುಟುಂಬದ ಹಿತಕ್ಕೆಂದೇ ಬಳಸಿ ಒಂದು ಚೂರೂ ಹಣವನ್ನು ತಮ್ಮ ಕೈಯಲ್ಲಿ ಉಳಿಸಿಕೊಳ್ಳದಿರುವ ಕಾರಣದಿಂದಾಗಿಯೇ ಇಂತಹ ದೈನೇಸಿ ಸ್ಥಿತಿಗೆ ತಲುಪಲು ಮುಖ್ಯಕಾರಣವಾಗುತ್ತದೆ. ಮನೆಯಲ್ಲಿ ಹೊಟ್ಟೆ ಬಟ್ಟೆಗೆ ಯಾವುದೇ ತೊಂದರೆ ಇಲ್ಲಾ ಅವರು ಕೇಳಿದ್ದನ್ನೆಲ್ಲಾ ಕೊಡಿಸುತ್ತಿದ್ದೇವೆ. ಎಲ್ಲಾ ಸಭೆ ಸಮಾರಂಭಗಳಿಗೆ ಕರೆದುಕೊಂಡು ಹೋಗುವ ಮೂಲಕ ತಮ್ಮ ಕರ್ತವ್ಯವನ್ನು ಸರಿಯಾಗಿ ಪಾಲಿಸುತ್ತಿದ್ದೇವೆ ಎಂದ ಮಕ್ಕಳು ಭಾವಿಸುತ್ತಾರಾದರೂ ಅವೆಲ್ಲವನ್ನೂ ಹೊರತು ಪಡಿಸಿ ತಮ್ಮ ವಯೋವೃದ್ಧ ಪೋಷಕರಿಗೆ ಅವರದ್ದೇ ಆದ ರೀತಿಯ ಆಸೆಗಳು, ಭಾವನೆಗಳು ಕರ್ತವ್ಯಗಳು ಇರುತ್ತದೆ. ಅವೆಲ್ಲವನ್ನೂ ಪೋರೈಸಲು ಅವರಿಗೆ ಹಣದ ಅವಶ್ಯಕತೆ ಇರುತ್ತದೆ. ಹಣಕ್ಕಿಂತಲೂ ಹೆಚ್ಚಾಗಿ ಅವರು ಸರ್ವಸ್ವಾತಂತ್ರವನ್ನು ಬಯಸುತ್ತಿರುತ್ತಾರೆ. ಹೀಗೇಕೆ ಮಾಡಿದಿರಿ? ಅವರಿಗೇಕೆ ಕೊಟ್ಟಿರೀ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದಂತೆಲ್ಲಾ ಅವರಿಗೆ ಕಸಿವಿಸಿಯಾಗಿ ನಾವು ಸಾಕಿ ಸಲಹಿದ ಮಕ್ಕಳೇ ನಮ್ಮನ್ನು ಪ್ರಶ್ನಿಸುವಂತಾದರಲ್ಲಾ? ಅವರ ಬಳಿ ನಾವೇಕೆ ಕೈ ಒಡ್ಡಬೇಕು? ನಮ್ಮ ಬಳಿಯೂ ಅಲ್ಪ ಸ್ವಲ್ಪ ಹಣವಿದ್ದಿದ್ದರೆ ನಾವೇ ಸ್ವತಂತ್ರವಾಗಿ ಯಾರದ್ದೇ ಹಂಗಿಲ್ಲದೇ ಬದುಕ ಬಹುದಿತ್ತಲ್ಲಾ ಎಂಬ ಆಲೋಚನೆಗಳು ಮೂಡುವ ಪರಿಣಾಮವೇ ಈ ಇಳಿವಯಸ್ಸಿನಲ್ಲಿ ಹಣವನ್ನು ಸಂಪಾದಿಸಲು ನಾನಾ ರೀತಿಯ ಪರಿಪಾಟಲು ಪಟ್ಟು ಆದಾಯಕ್ಕೆ ಯಾವುದೇ ಮೂಲಗಳು ದೊರಕದಿದ್ದಾಗ, ಅಪರಿಚಿತ ಸ್ಥಳಗಳಲ್ಲಿ ತಮಗೆ ಗೊತ್ತಿಲ್ಲದವರ ಬಳಿ ಕೈ ಚಾಚಿ ನಾಲ್ಕಾರು ಕಾಸುಗಳನ್ನು ಸಂಗ್ರಹಿಸಲು ಮುಂದಾಗುತ್ತಾರೆ ಎಂದು ತಿಳಿದು ಬಂತು. ಇನ್ನೂ ಕೆಲವರು ಪರಿಚಯಸ್ಥರ ಮನೆಗಳಲ್ಲಿಯೇ ಸಣ್ಣ ಪುಟ್ಟ ಕಳ್ಳತನ ಮಾಡುವುದು ಇಲ್ಲವೇ ತಮ್ಮದೇ ಮನೆಯ ವಸ್ತುಗಳನ್ನು ಅಡ ಇಡುವುದು ಇಲ್ಲವೇ ಮಾರುವ ದುರಭ್ಯಾಸವನ್ನೂ ಮಾಡಿಕೊಂಡಿರುತ್ತಾರೆ ಎಂಬ ಆತಂಕಕಾರಿ ವಿಷಯವೂ ತಿಳಿದು ಬಂದಿತು.

ವಯಸ್ಸಾದ ಪೋಷಕರು ತಮ್ಮ ಅಹಂಗಳನ್ನು ಬದಿಗಿಟ್ಟು ತಮ್ಮ ಮಕ್ಕಳ ಬಳಿ ತಮ್ಮ ಆಸೆಗಳನ್ನು ಹೇಳಿಕೊಂಡು ಅದನ್ನು ಪೋರೈಸಿಕೊಳ್ಳುವುದು ಅವರ ಹಕ್ಕು. ಅದನ್ನು ಬಿಟ್ಟು ಸುಖಾಸುಮ್ಮನೆ ಅಪಾಮಾರ್ಗಗಳನ್ನು ಹಿಡಿಯುವುದು ಕುಟುಂಬದ ಸಾಮರಸ್ಯತೆಯನ್ನು ಹಾಳು ಮಾಡುತ್ತದೆ. ಅದೇ ರೀತಿ ತಮ್ಮ ಪೋಷಕರೊಂದಿಗೆ ಇಡೀ ಕುಟುಂಬವೇ ಕುಳಿತು ಕೊಂಡು ಲೋಕಾಭಿರಾಮವಾಗಿ ಹರಟುತ್ತಾ ಅವರ ಇಚ್ಚೆಗಳನ್ನು ಕೇಳಿ ತಮ್ಮ ಕೈಲಾದ ಮಟ್ಟಿಗೆ ಪೂರೈಸುವುದು ಅವರ ಮಕ್ಕಳ ಕರ್ತವ್ಯವೂ ಹೌದು. ಪೋಷಕರ ಇಚ್ಚೆಗಳನ್ನು ಆ ಕ್ಷಣದಲ್ಲಿ ಈಡೇರಿಸುವುದು ಕಷ್ಟ ಸಾಧ್ಯವಾದಲ್ಲಿ ಅವರ ಮೇಲೆ ಕೂಗಾಡದೇ, ಶಾಂತ ರೀತಿಯಲ್ಲಿ ಪರಿಸ್ಥಿತಿಯನ್ನು ತಿಳಿಸಿ ಒಂದು ನಿರ್ಧಿಷ್ಟ ಸಮಯದಲ್ಲಿ ಅದನ್ನು ಪೋರೈಸುತ್ತೇವೆ ಎಂದು ಹೇಳಿದರೆ ಈ ರೀತಿಯ ಮುಜುಗರದ ಪ್ರಸಂಗವನ್ನು ಎದುರಿಸುವ ಪ್ರಮೇಯವೇ ಬಾರದು.

ಏನಂತೀರಿ?

2 thoughts on “ಬೇಡುವ ಕೈಗಳ ಹಿಂದಿನ ಕಹಿ ಸತ್ಯ

  1. ನಿಜ ವೃದ್ಧರಬಗ್ಗೆ, ವೃದ್ಧಾಪ್ಯದ ಬಗ್ಗೆ ನಮಗಾರಿಗೂ ಅರಿವಿಲ್ಲ. ಆ ವೃದ್ಧರು ಎಷ್ಟು ನೊಂದಿದ್ದಾರೋ….

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s