ಇಪ್ಪತ್ತೊಂದು ವರ್ಷಗಳ ಹಿಂದೆ ಭಾರತಕ್ಕೆ ಸಾಂಪ್ರದಾಯಿಕ ಎದುರಾಳಿ ಪಾಕೀಸ್ಥಾನದ ಕ್ರಿಕೆಟ್ ತಂಡ ಟೆಸ್ಟ್ ಪಂದ್ಯಾವಳಿಯನ್ನು ಆಡಲು ಬಂದಿತ್ತು ಚೆನ್ನೈನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಚೆನ್ನೈನಲ್ಲಿ ಸಚಿನ್ ತೆಂಡೂಲ್ಕರ್ ಅವರ ಕೆಚ್ಚೆದೆಯ ಹೋರಾಟದ ಹೊರತಾಗಿಯೂ 12 ರನ್‌ಗಳಿಂದ ಪಂದ್ಯವನ್ನು ಸೋತು ಸರಣಿಯಲ್ಲಿ 1-0 ಯ ಹಿನ್ನಡೆಯಲ್ಲಿದ ಕಾರಣ ದೆಹಲಿಯ ಎರಡನೆಯ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮ ಸಮ ಮಾಡಿಕೊಳ್ಳಲೇ ಬೇಕು ಎಂಬ ಧೃಢ ನಿರ್ಧಾರದಿಂದ ಕಣಕ್ಕೆ ಇಳಿದಿತ್ತು. ಗೆಲ್ಲಲೇ ಬೆಂ. ಹಾಗಾಗಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಈ ಪಂದ್ಯವನ್ನು ಗೆಲ್ಲಲೆಬೇಕಾಗಿತ್ತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿ ಕೇವಲ 252 ರನ್ಗಳನ್ನು ಮಾತ್ರವೇ ಗಳಿಸಿತ್ತು. ಆರಂಭಿಕ ಆಟಗಾರ ಸಡಗೋಪನ್ ಮತ್ತು ನಾಯಕ ಅಜರುದ್ದೀನ್60+ ರನ್ಗಳಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಅನಿಲ್ ಕಂಬ್ಲೆ (75/4) ಹರ್ಬಜನ್ (30/3) ಅವರ ಸ್ಪಿನ್ ಧಾಳಿಗೆ ತುತ್ತಾಗಿ ಪಾಕೀಸ್ಥಾನ ಕೇವಲ 172 ರನ್ಗಳಿಗೆ ಆಲ್ ಔಟಾಗಿತ್ತು.
ಭಾರತ ಎರಡನೆಯ ಇನ್ನಿಂಗ್ಸಿನಲ್ಲಿ ಮತೊಮ್ಮೆ ಅಮೋಘವಾಗಿ ಆಡಿದ ಸಡಗೋಪನ್ ರಮೇಶ್ 96 ರನ್ ಗಳಿಸಿ ಕೇವಲ 4 ರನ್ಗಳಿಂದ ಶತಕವಂಚಿತರಾಗಿದ್ದರೆ ಗಂಗೂಲಿ 62 ಮತ್ತು ಶ್ರೀನಾಥ್ ಉಪಯುಕ್ತ 49 ರನ್ ಗಳಿಸಿದ ಪರಿಣಾಮ ಸಾಧಾರಣ ಮೊತ್ತವಾದ 339 ರನ್ಗಳಿಗೆ ಔಟಾಗಿತ್ತು. ಪಂದ್ಯದಲ್ಲಿ ಇನ್ನೂ ಎರಡು ದಿನಗಳಷ್ಟು ಬಾಕಿ ಇದ್ದು ಪಾಕೀಸ್ಥಾನ ಗೆಲ್ಲಲು 420 ರನ್ ಗಳನ್ನು ಗಳಿಸಬೇಕಿತ್ತು. ಆರಂಭಿಕ ಆಟಗಾರರಾದ ಸಯೀದ್ ಅನ್ವರ್ ಮತ್ತು ಶಾಹಿದ್ ಅಫ್ರೀದಿ ಅತ್ಯುತ್ತಮವಾಗಿ ಆಡುತ್ತಾ ಕೇವಲ 24 ಓವರ್ ಗಳಲ್ಲಿಯೇ ವಿಕೆಟ್ ನಷ್ಟವಿಲ್ಲದೇ 101 ರನ್ ಗಳಿಸಿದಾಗ ಪಾಕೀಸ್ಥಾನ ಮತ್ತೊಮ್ಮೆ ಸುಲಭವಾಗಿ ಗೆಲ್ಲುತ್ತದೆ ಎಂದೇ ಎಲ್ಲರು ಭಾವಿಸಿದ್ದರು.
ನಾವು ಅಂದು ಕೊಳ್ಳುವುದೇ ಒಂದು ಆಗುವುದೇ ಮತ್ತೊಂದು ಎನ್ನುವಂತೆ 41 ರನ್ ಗಳಿಸಿ ಅತ್ಯುತ್ತಮವಾಗಿ ಆಡುತ್ತಿದ್ದ ಅಫ್ರೀದಿ ಕುಂಬ್ಲೆ ಬೋಲಿಂಗಿನಲ್ಲಿ ಮೊಂಗಿಯಾ ಹಿಡಿದ ಉತ್ತಮ ಕ್ಯಾಚಿಗಿ ಬಲಿಯಾಗಿ ಪಾಕೀಸ್ಥಾನದ ಮೊದಲ ವಿಕೆಟ್ ಪತನವಾದರೆ ಮುಂದಿನ ಚೆಂಡಿನಲ್ಲಿಯೇ ಇಜಾಜ್ ಅಹ್ಮಮದ್ ಎಲ್ಬಿ ಯಾಗಿ ಶೂನ್ಯಕ್ಕೆ ಬಲಿಯಾದರು. ನಂತರ ಬಂದ ಇನ್ಜಮಾಮ್ ಮತ್ತು ಮೊಹಮ್ಮದ್ ಯೂಸುಘ್ ಬಂದ ಪುಟ್ಟ ಎನ್ನುವಂತೆ ಮತ್ತೆ ಕುಂಬ್ಲೆಗೆ ಬಲಿಯಾಗಿ ಲಂಚ್ ಹೊತ್ತಿಗೆ 4 ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿತ್ತು.
ಲಂಚ್ ನಂತರ ಪಟಪಟನೆ ಮತ್ತೆರಡು ವಿಕೆಟ್ಗಳು ಉರುಳಿ 6 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದಾಗ ಭಾರತಕ್ಕೆ ಗೆಲುವಿನ ಆಸೆ ಚಿಗುರಿತಾದರೂ ಹಿರಿಯ ಆಟಗಾರ ಸಲೀಂ ಮಲ್ಲಿಕ್ ತಾಳ್ಮೆಯ ಆಟಕ್ಕೆ ಒತ್ತು ಕೊಟ್ಟರೆ ನಾಯಕ ವಾಸಿಂ ಅಕ್ರಂ ಪಟಪಟನೆ ರನ್ ಗಳಿಸಿ ಪಾಕೀಸ್ಥಾನದ ಗೆಲುವಿನ ಆಸೆಯನ್ನು ಇನ್ನೂ ಜೀವಂತವಿರಿಸಿಕೊಂಡು ಚಹಾ ವಿರಾಮಕ್ಕೆ ಹೋದರು.
ಚಹಾದ ನಂತರ ಅನಿಲ್ ಕುಂಬ್ಲೆಯವರ ಅತ್ಯುತ್ತಮ ಚೆಂಡನ್ನು ಆಡಲು ವಿಫಲರಾದ ಮಲ್ಲಿಕ್ ಬೋಲ್ಡ್ ಔಟಾಗಿ ನಿರಾಸೆಯಿಂದ ಪೆವಿಲಿಯನ್ನಿಗೆ ವಾಪಸ್ಸಾಗುವಾಗ ಪಾಕೀಸ್ಥಾನದ ಮೊತ್ತ 7 ವಿಕೆಟ್ ನಷ್ಟಕ್ಕೆ 186 ರನ್. ಮತ್ತೆ ಹನ್ನೆರಡು ರನ್ ಸೇರಿಸುವಷ್ಟರಲ್ಲಿ 58ನೇ ಓವರಿನ 5ನೇ ಚೆಂಡಿನಲ್ಲಿ ಮುಷ್ತಾಕ್ ಔಟಾದರೇ, ಕಡೆಯ ಚೆಂಡಿನಲ್ಲಿ ಸಕ್ಲೇನ್ ಮುಷ್ತಾಕ್ ಔಟಾಗುವ ಮೂಲಕ 9 ವಿಕೆಟ್ ನಷ್ಟಕ್ಕೆ 198ರನ್ ಗಳನ್ನು ಗಳಿಸಿತ್ತು ಪಾಕೀಸ್ಥಾನ ಇಲ್ಲಿ ಗಮನಿಸಿಸ ಬೇಕಾದ ಒಂದು ಕುತೂಹಲ ಅಂಶವೆಂದರೆ ಅದುವರೆಗೂ ಪಾಕೀಸ್ಥಾನದ ಪರ ಔಟಾಗಿದ್ದ 9 ವಿಕೆಟ್ ಗಳನ್ನು ಅನಿಲ್ ಕುಂಬ್ಲೆ ಪಡೆದು ಇನ್ನಿಂಗ್ಸಿನ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸಿದ್ದ ಜಿಮ್ ಲೇಕರ್ ಅವರ ದಾಖಲೆಯನು ಸರಿಗಟ್ಟಲು ಕೇವಲ್ನ 10 ವಿಕೆಟ್ ಅವಶ್ಯಕತೆ ಇತ್ತು.
ಮಂದೆ ನಡೆದದ್ದೇ ಬೃಹನ್ನಾಟಕ. ಭಾರತದ ತಂಡಕ್ಕೆ ಅನಿಲ್ ಕುಂಬ್ಲೆ ಎಲ್ಲಾ 10 ವಿಕೆಟ್‌ಗಳನ್ನು ಪಡೆದು ದಾಖಲೆ ನಿರ್ಮಿಸಲಿ ಎಂಬ ಆಸೆಯಾದರೆ ಪಾಕೀಸ್ಥಾನದ ತಂಡಕ್ಕೆ ಅದನ್ನು ತಪ್ಪಿಸ ಬೇಕೆಂಬ ಹಪಾಹಪಿ. ಮತ್ತೊಂದು ತುದಿಯಲ್ಲಿ 59ನೇ ಓವರ್ ಬೋಲಿಂಗ್ ಮಾಡಲು ಬಂದ ಶ್ರೀನಾಥ್ ಅವರಿಗೆ ಪ್ರಾಣ ಸಂಕಟ. ಅಕಸ್ಮಾತ್ ಈ ಓವರಿನಲ್ಲಿ ಏನಾದರೂ ವಿಕೆಟ್ ಉರಳಿಬಿಟ್ಟರೆ ಅವರಿಂದಾಗಿ ಅನಿಲ್ ಕುಂಬ್ಲೆಯವರ ದಾಖಲೆ ಹಾಳಾಗಿ ಅಪಕೀರ್ತಿ ಬರಬಹುದು ಎಂಬ ಆತಂಕ ಹಾಗಾಗಿ ಓವರಿನ ಆರೂ ಚೆಂಡುಗಳನ್ನೂ ದಾಂಡಿಗನ ಬ್ಯಾಟಿಗೆ ತಾಗಿ ಕ್ಯಾಚ್ ಆಗದಂತೆ, ಕಾಲಿನ ಮೇಲೆ ಬಿದ್ದು ಎಲ್ಬಿ ಆಗದಂತೆ. ಮಿಸ್ ಆಗಿ ಬೋಲ್ಡ್ ಆಗದಂತೆ ವಿಕೆಟ್ ನಿಂದ ಆದಷ್ಟೂ ದೂರಕ್ಕೆ ಎಸೆದು ತನ್ನ ಓವರ್ ಮುಗಿಸಿದಾಗ ಏನನ್ನೋ ಸಾಧಿಸಿದ ವಿಶಿಷ್ಟಾನುಭವ. ಬಹುಶಃ ಕ್ರಿಕೆಟ್ ಇತಿಹಾಸದಲ್ಲಿ ಬೊಲರ್ ಒಬ್ಬ ತನಗೆ ವಿಕೆಟ್ ಸಿಗದಿರಲಿ ಎಂಬ ಕಾರಣದಿಂದ ಅದಷ್ಟೂ ವೈಡ್ ಗಳನ್ನು ಎಸೆದ ಮೊತ್ತ ಮೊದಲ ಬೌಲರ್ ಜಾವಗಲ್ ಶ್ರೀನಾಥ್ ಒಬ್ಬರೇ ಇರಬಹುದು.
60ನೇ ಓವರಿನ ಮೊದಲ ಎರಡು ಚೆಂಡುಗಳನ್ನು ಹಾಗೂ ಹೀಗೂ ಆಡಿದ 37 ರನ್ ಗಳಿಸಿದ್ದ ವಾಸೀಂ ಅಕ್ರಂ ಮೂರನೇ ಚೆಂಡನ್ನು ಭರ್ಜರಿಯಾಗಿ ಹೊಡೆಯಲು ವಿಫಲವಾಗಿ ಚೆಂಡು ಆಗಸತ್ತ ಹಾರಿ ಸುರಕ್ಷಿತವಾಗಿ ಲಕ್ಷ್ಮಣ್ ಕೈ ಸೇರುತ್ತಿದ್ದಂತೆಯೇ ಇತಿಹಾಸವೊಂದು ಮರುಕಳಿಸಿತ್ತು. 26.3 ಓವರಿನಲ್ಲಿ, 9 ಮೇಡನ್ ಸಹಿತ 74 ರನ್ಗಳನ್ನು ಕೊಟ್ಟು 10 ವಿಕೆಟ್ ಕಬಳಿಸಿ ಭಾರತಕ್ಕೆ 212 ರನ್ ಗಳ ಬೃಹತ್ ವಿಜಯವನ್ನು ತಂದು ಕೊಟ್ಟಿದ್ದರು ಅನಿಲ್ ಕುಂಬ್ಲೆ. ಟೆಸ್ಟ್ ಕ್ರಿಕೆಟ್ಟಿನಲ್ಲಿ ಇನ್ನಿಂಗ್ಸಿನ ಎಲ್ಲಾ 10 ವಿಕೆಟ್ ಗಳನ್ನೂ ಪಡೆದ ಜಿಮ್ ಲೇಕರ್ ನಂತರ ಎರಡನೇಯ ಬೋಲರ್ ಆಗಿ ಅನಿಲ್ ಕುಂಬ್ಲೆ ಇತಿಹಾಸ ನಿರ್ಮಿಸಿ ಬಿಟ್ಟಿದ್ದರು. ಈ ಅಭೂತ ಪೂರ್ವ ದಾಖಲೆಯಲ್ಲಿ ಗಮನಿಸ ಬೇಕಾದ ಮತ್ತೊಂದು ಅಂಶವೆಂದರೇ ಆ ಎಲ್ಲಾ 10 ವಿಕೆಟ್ಗಳೂ ಪೆವಿಲಿಯನ್ ದಿಕ್ಕಿನಿಂದಲೇ ಗಳಿಸಿದ್ದರು ಮತ್ತು ಆ ದಿಕ್ಕಿನಲ್ಲಿ ಕರ್ನಾಟಕದವರೇ ಆದ ಎ.ವಿ ಜಯಪ್ರಕಾಶ್ ಅವರೇ ಆ ಎಲ್ಲಾ ಹತ್ತು ತೀರ್ಪುಗಳನ್ನು ನೀಡಿ ಒಂದು ರೀತಿಯ ಅನಾವಶ್ಯಕ ಅಪಕೀರ್ತಿಗೆ ಒಳಗಾದರು ಎಂಬುದೇ ದುಖಃಕರ ವಿಷಯ. ಈ ಪಂದ್ಯದ ನಂತರ ಭಾಗಶಃ ಅವರ ಅಂತರಾಷ್ಟ್ರೀಯ ಅಂಪೈರಿಂಗ್ ಕೊನೆಯಾಗಿಯೇ ಹೋಯಿತು.
ಈ ರೀತಿಯಾಗಿ ದೆಹಲಿಯ ಫಿರೋಜ್ ಷಾ ಕೊಟ್ಲಾ ಮೈದಾನದಲ್ಲಿ ಫೆಬ್ರವರಿ 7, 1999ರಲ್ಲಿ ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸಿನ ಎಲ್ಲಾ ಹತ್ತು ವಿಕೆಟ್ಗಳನ್ನೂ ಪಡೆದು ದಾಖಲೆ ನಿರ್ಮಿಸಿ ಇಂದಿಗೆ ಸರಿಯಾಗಿ 21 ವರ್ಷಗಳಾಯಿತು ಅದಾದ ನಂತರ ಆಟ ಮುಂದುವರೆಸಿದ ಕುಂಬ್ಳೆ, 2008 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದಾಗ 619 ವಿಕೆಟ್‌ಗಳನ್ನು ಗಳಿಸಿ ಭಾರತದ ಪರ ಅತ್ಯಂತ ಹೆಚ್ಚಿನ ವಿಕೆಟ್ ಪಡೆದ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಆಟಗಾರರಾಗಿದ್ದಾರೆ .ಆಸ್ಟ್ರೇಲಿಯಾದ ಶೇನ್ ವಾರ್ನ್ (708) ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800) ಗಳಿಸಿ ಮುಂಚೂಣಿಯಲ್ಲಿದ್ದಾರೆ.
ಎಂತಹ ಪರಿಸ್ಥಿತಿಯಲ್ಲಿಯೂ ಸ್ವಾರ್ಥವನ್ನು ಬದಿಗೊತ್ತಿ, ಸದಾ ಕಾಲವೂ ತಂಡ ಹಿತಕ್ಕಾಗಿಯೇ ಆಡುತ್ತಾ, ಯಾವುದೇ ರೀತಿಯ ದಾಖಲೆಗಾಗಿ ಆಡದೇ,ತಮ್ಮ ಸಹಜ ಆಟದಿಂದಲೇ ದಾಖಲೆ ಮೇಲೆ ದಾಖಲೆ ಬರೆದ ಅತ್ಯಂತ ಸರಳ ಸಜ್ಜನ ಆಟರಾಗಿದ್ದ ಕನ್ನಡಿಗ ಅನಿಲ್ ಕುಂಬ್ಲೆಗೆ ಅವರಿಗೆ ಕರ್ನಾಟಕ ಸರ್ಕಾರ ಅನಿಲ್ ಕುಂಬ್ಲೆಯವರ ಈ ಸಾಧನೆಯನ್ನು ಮೆಚ್ಚಿ ಮಹಾತ್ಮಾ ಗಾಂಧಿ ರಸ್ತೆಯ, ಜೀವ ವಿಮಾ ನಿಗಮದ ಬಳಿಯ ವೃತ್ತಕ್ಕೆ ಅನಿಲ್ ಕುಂಬ್ಲೆ ವೃತ್ತ ಎಂದು ನಾಮಕರಣ ಮಾಡಿ ಅವರ ಹೆಸರನ್ನು ಚಿರಸ್ಥಾಯಿಯಾಗುವಂತೆ ಮಾಡಿದ್ದು ಬಿಟ್ಟರೆ , ನ್ಯಾಯಯುತವಾಗಿ ಸಲ್ಲಬೇಕಿದ್ದ ಸ್ಥಾನ ಮಾನಗಳು ಸರಿಯಾಗಿ ಸಿಗದೇ ಹೋದದ್ದು ನಿಜಕ್ಕೂ ಬೇಸರದ ಸಂಗತಿಯೇ ಸರಿ.
ಏನಂತೀರೀ?