ಶ್ರೀ ಮದನ್ ಲಾಲ್ ಡಿಂಗ್ರಾ

dingraಆಗ 1900 ಆರಂಭದ ದಿನಗಳು. ಇಂಗ್ಲೇಂಡಿನ ನೈಟ್ ಕ್ಲಬ್ಬಿನಲ್ಲಿ ಚೆನ್ನಾಗಿ ಉಡುಪು ಧರಿಸಿಕೊಂಡು ಅಲ್ಲಿಯ ರಂಗು ರಂಗಿನ ಬೆಳೆಕಿನಲ್ಲಿ ರಂಗಾದ ಹುಡುಗಿಯರೊಂದಿಗೆ ಶೋಕಿ ಮಾಡುತ್ತಿದ್ದ ಭಾರತೀಯ ತರುಣನೊಬ್ಬ ಶ್ಯಾಮ್ ಜೀ ವರ್ಮ ಮತ್ತು ವೀರಸಾವರ್ಕರ್ ಅವರ ಪ್ರಖರ ಮಾತುಗಳಿಂದ ಪ್ರೇರಿತನಾಗಿ ಇದ್ದಕ್ಕಿದ್ದಂತೆಯೇ ತನ್ನ ಶೋಕಿಗಳನ್ನೆಲ್ಲಾ ಬದಿಗೊತ್ತಿ ತನ್ನ ತಾಯ್ನಾಡು ಭಾರತವನ್ನು ದಾಸ್ಯದಲ್ಲಿ ಇಟ್ಟುಕೊಂಡಿದ್ದ ಬ್ರಿಟೀಷರಿಗೆ ಅವರ ನೆಲದಲ್ಲಿಯೇ ಬುದ್ದಿ ಕಲೆಸಬೇಕೆಂದು ಫಣ ತೊಟ್ಟು ಇಂಗ್ಲೆಂಡಿನಲ್ಲಿಯೇ ಮರಣ ದಂಡನೆಗೆ ಒಳಗಾಗಿ ಬ್ರಿಟೀಷರನ್ನು ಭಾರತದಿಂದ ಹೊರಹಾಕಲು ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ದ ಮೊದಲ ವ್ಯಕ್ತಿ, 137 ವರ್ಷಗಳ ಹಿಂದೆ ಇದೇ ದಿನ ಸೆಪ್ಟಂಬರ್ 18, 1883ರಂದು ಜನಿಸಿದ ವೀರ ಮದನ್ ಲಾಲ್ ಡಿಂಗ್ರಾ ಅವರ ಕುರಿತು ಸ್ವಲ್ಪ ಮಾಹಿತಿ ತಿಳಿಯೋಣ.

ಅಮೃತಸರದ ಸರ್ಕಾರಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ದಿತ್ತಮಲ್ ಅವರ ಕುಟುಂಬ ಅಂದಿನ ಕಾಲಕ್ಕೇ ಅತ್ಯಂತ ಶ್ರೀಮಂತ ಮನೆತನ ಎಂದೇ ಹೆಸರುವಾಸಿಯಾಗಿತ್ತು. ಅಮೃತಸರದಲ್ಲಿ ಅವರದ್ದೇ ಆದ 21 ದೊಡ್ಡ ಮನೆಗಳು, 6 ಶ್ರೀಮಂತ ಬಂಗಲೆಗಳಲ್ಲದೇ, ಅವರ ಹಿರೀಕರ ಆಸ್ತಿಯಾಗಿ ಈಗಿನ ಪಾಕಿಸ್ತಾನದ ಸಹಿವಾಲ್ ಎಂಬ ಗ್ರಾಮದಲ್ಲಿಯೂ ಅಪಾರವಾದ ಜಮೀನುಗಳು ಮತ್ತು ಆಸ್ತಿ ಪಾಸ್ತಿಗಳಿದ್ದು ಅಂದಿನ ಕಾಲಕ್ಕೇ ರಾಜ ರಾಜರುಗಳ ಮತ್ತು ಬ್ರಿಟಿಷರ ಬಳಿಯೂ ಇಲ್ಲದಿದ್ದಂತಹ ಐಶಾರಾಮಿ ಕಾರುಗಳು ಮತ್ತು ಬಂಗಲೆಗಳು ಇವರ ಬಳಿ ಇತ್ತು. ಹಾಗಾಗಿಯೇ ಬ್ರಿಟಿಷ್ ಸರ್ಕಾರ ಅವರನ್ನು ರಾಜ್ ಸಾಹೇಬ ಎಂದೇ ಗೌರವಿಸುತ್ತಿತ್ತು. ಅಂತಹ ಶ್ರೀಮಂತ ಕುಂಟುಬದಲ್ಲಿ ಸೆಪ್ಟಂಬರ್ 18, 1883ರಂದು ಮದನ್ ಲಾಲಾ ಡಿಂಗ್ರಾ ಅವರು ಜನಿಸಿದ್ದರು. ಅವರ ಮನೆಯಲ್ಲಿ ಕೇವಲ ಲಕ್ಷ್ಮಿಯಲ್ಲದೇ ಸರಸ್ವತಿಯೂ ಒಲಿದಿದ್ದು ಅವರ ಒಡ ಹುಟ್ಟಿದ ಆರು ಅಣ್ಣಂದಿರಲ್ಲಿ ಮೂವರು ತಂದೆಯಂತೆಯೇ ವೈದ್ಯರಾದರೇ, ಉಳಿದ ಮೂವರು ಬ್ಯಾರಿಸ್ಟರ್ ಪದವಿ ಪಡೆದಿದ್ದರು. ತಮ್ಮ ಅಣ್ಣಂದಿರಂತೆಯೇ ಓದಿನಲ್ಲಿ ಚುರುಕಾಗಿದ್ದ ಮದನ್ ಲಾಲ್ ಅವರಿಗೂ ಓದಿನ ಜೊತೆಗೆ ಸ್ವಾತಂತ್ಯ್ರ ಚಳುವಳಿಯಲ್ಲಿಯೇ ಸ್ವಲ್ಪ ಹೆಚ್ಚಿನ ಆಸಕ್ತಿ ಇದ್ದ ಕಾರಣ ಲಜಪತ್ ರಾಯ್ ಮತ್ತು ಭಗತ್ ಸಿಂಗ್ ಅವರ ಚಿಕ್ಕಪ್ಪ ಅಜಿತ್ ಸಿಂಗ್ ಅವರುಗಳು ಸಂಘಟಿಸಿದ್ದ ಪಗ್ಡಿ ಸಂಬಾಲ್ ಜತ್ತ ಎಂಬ ಚಳವಳಿಯಲ್ಲಿ ಪಾಲ್ಗೊಂಡಿದ್ದರು ಸ್ವದೇಶಿ ಚಳುವಳಿಗೆ ಬದ್ಧನಾಗಿ ಲಾಹೋರಿನ ಕಾಲೇಜಿನ ದಿನಗಳಲ್ಲಿ ಬ್ರಿಟಿಷ್ ಸರ್ಕಾರ ವಿದೇಶಿ ಬಟ್ಟೆಯಲ್ಲಿ ತಯಾರಿಸಿದ ಕೋಟು ಧರಿಸಬೇಕೆಂದು ವಿಧಿಸಿದ್ದ ಶಿಸ್ತನ್ನು ವಿರೋಧಿಸಿ ಕಾಲೇಜಿನಿಂದಲೂ ಹೊರಹಾಕಲ್ಪಟ್ಟರು. ನಂತರ ಕೆಲಕಾಲ ಕುದುರೆಗಾಡಿ ವ್ಯವಸ್ಥೆಯ ಟಾಂಗಾ ಸರ್ವಿಸ್ ಎಂಬ ಸಂಸ್ಥೆಯಲ್ಲಿ ಗುಮಾಸ್ತನಾಗಿ ದುಡಿಯುತ್ತಾ, ಅಲ್ಲಿಯೂ ತಮ್ಮ ಸಹ ಕಾರ್ಮಿಕರ ದೌರ್ಜನ್ಯದ ವಿರುದ್ಧ ಹೋರಾಟ ಮಾಡಲು ಹೋಗಿ ಕೆಲಸ ಕಳೆದುಕೊಂಡು ಕೆಲಕಾಲ ಮುಂಬೈನಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಸಮಯದಲ್ಲಿ ಪರಿಚಯವಾದ ಹಿರಿಯ ಸಾಧಕರಾದ ಡಾಕ್ಟರ್ ಬಿಹಾರಿ ಲಾಲ್ ಅವರ ಸಲಹೆಯಂತೆ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ನಿರ್ಧರಿಸಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಲು ಲಂಡನ್ನಿಗೆ ಹೊರಟರು.

savarkarಹಾಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಬಂದ ಧಿಂಗ್ರ ಮದನ್ ಲಾಲ್ ಧಿಂಗ್ರಾ ಮತ್ತೆ ತನ್ನ ಮೂಲ ಶೋಕಿಲಾಲತನಕ್ಕೆ ಹಿಂದಿರುಗಿ ಇಂಗ್ಲೆಂಡ್ ನ ವಿಲಾಸೀ ಸಂಸ್ಕೃತಿಗೆ ತಕ್ಕಂತೆ ಬೆಲೆಬಾಳುವ ಸೂಟು ಬೂಟುಗಳನ್ನು ಹಾಕಿಕೊಂಡು ಕಣ್ಣಿಗೆ ಕಪ್ಪನೆಯ ಕನ್ನಡಕವನ್ನು ಹಾಕಿಕೊಂಡ ಶೋಕಿಲಾಲನಾಗಿ ಇಂಗ್ಲೆಂಡಿನ ಗಲ್ಲಿ ಗಲ್ಲಿಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತಾ ಪಬ್ ಮತ್ತು ಬಾರುಗಳಲ್ಲಿಯೇ ಮೋಜು ಮಾಡುತ್ತಿದ್ದರೂ, ಪರೀಕ್ಷೆಯ ಸಮಯಕ್ಕೆ ಸರಿಯಾಗಿ ಪಟ್ಟಾಗಿ ಕುಳಿತು ಓದಿ ಮೊದಲ ಸ್ಥಾನವನ್ನೇ ಗಳಿಸುತ್ತಿದ್ದ ಕಾರಣ ಮನೆಯಲ್ಲಿ ಯಾರಿಗೂ ಬೇಸರವಿರಲಿಲ್ಲ. ಇದೇ ಸಮಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಅವರು ಇಂಗ್ಲೆಂಡಿನಲ್ಲಿ ಈ ರೀತಿಯ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ಹುಡುಗರು ಕಾಲೇಜಿನ ಮುಂಭಾಗದಲ್ಲಿ ನಿಂತು ಅವರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದ್ದಾಗ ಅದೊಮ್ಮೆ ಮದನ್ ಲಾಲ್ ಡಿಂಗ್ರಾ ಸಾವರ್ಕರ್ ಅವರ ಮಾತುಗಳಿಂದ ಪ್ರೇರಿತನಾಗಿ ಅವರನ್ನು ಖುದ್ದಾಗಿ ಭೇಟಿಮಾಡಿದ. ಮೊದಲ ಭೇಟಿಯಲ್ಲಿಯೇ ಒಬ್ಬರಿಗೊಬ್ಬರು ಇಷ್ಟವಾಗುತ್ತಾರೆ. ಭಾರತವನ್ನು ಬ್ರಿಟಿಷರ ದಾಸ್ಯದಿಂದ ಕಿತ್ತೊಗೆಯಲು ನಿಮ್ಮಂತಹ ಯುವಕರ ಸಹಕಾರ ಅತ್ಯಗತ್ಯ ಹಾಗಾಗಿ ಇದರ ಬಗ್ಗೆ ಹೆಚ್ಚಿನ ವಿಷಯ ತಿಳಿಯಲು ವಾರಾಂತ್ಯದಲ್ಲಿ ಭಾರತ ಭವನಕ್ಕೆ ಹೆಚ್ಚಿನ ಹುಡುಗರನ್ನು ಕರೆತರಲು ತಿಳಿಸುತ್ತಾರೆ. ಅದರಂತೆಯೇ ಇಂಗ್ಲೆಂಡಿನಲ್ಲಿದ್ದ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಭಾರತ ಭವನಕ್ಕೆ ಕರೆತರುವುದರಲ್ಲಿ ಡಿಂಗ್ರಾ ಸಫಲರಾಗುತ್ತಾರೆ. ಸಾವರ್ಕರ್ ಅವರ ಧೀಮಂತ ವ್ಯಕ್ತಿತ್ವ, ದೇಶಾಭಿಮಾನದ ಮಾತುಗಳನ್ನು ವಾರ ವಾರಕ್ಕೆ ಕೇಳುತ್ತಲೇ ಮದನ್ ಲಾಲ್ ಧಿಂಗ್ರಾ ಗೆ ಸಾವರ್ಕರ್ ಮೇಲೆ ಅಭಿಮಾನ ಹೆಚ್ಚಾಗುತ್ತಾಲೇ ಹೋಗುತ್ತದೆ. ಅವನಲ್ಲಿ ದೇಶಭಕ್ತಿಯ ಹೊಸ ವಿದ್ಯುತ್ ಪ್ರವಹಿಸಿ ಶೋಕಿಲಾಲನಾಗಿದ್ದ ಮದನ್ ಮಹಾನ್ ದೇಶಪ್ರೇಮಿಯಾಗಿ ಬದಲಾಗಿ ಹೋಗುತ್ತಾನೆ.

karzanಇದೇ ಸಮಯದಲ್ಲಿ ಬಂಗಾಳದ ವಿಭಜನೆಗೆ ಹೊಂಚು ಹಾಕಿದ್ದ ಬ್ರಿಟಿಷ್ ಅಧಿಕಾರಿ ಕರ್ಜನ್ ವಾಲಿ ಆಗಷ್ಟೇ ಇಂಗ್ಲೆಂಡಿಗೆ ಹಿಂದಿರುಗಿ ಲಂಡನ್ನಿನ ನ್ಯಾಷನಲ್ ಇಂಡಿಯನ್ ಅಸೋಸಿಯೇಷನ್ ಎಂಬ ಸಂಸ್ಥೆಯ ಮೂಲಕ ಇಂಗ್ಲೆಂಡಿಗೆ ಬಂದ ಭಾರತೀಯ ತರುಣರನ್ನು ಹಾಳು ಮಾಡಿ ಬ್ರಿಟಿಷರಿಗೆ ನಿಷ್ಠೆಯಾಗಿ ಮಾಡುವಂತಹ ಸಂಸ್ಥೆಗೆ ಮುಖ್ಯಸ್ಥನಾಗುತ್ತಾನೆ. ಇದು ಸಾವರ್ಕರ್ ಮಾಡುತ್ತಿದ ಕೆಲಸಕ್ಕೆ ತದ್ವಿರುದ್ಧವಾಗಿದ್ದ ಕಾರಣ ಸಹಜವಾಗಿ ಅನೇಕ ಕ್ರಾಂತಿಕಾರಿಗಳ ಸಿಟ್ಟು ಕರ್ಜನ್ ವಾಲಿಯ ವಿರುಧ್ಧವಿರುತ್ತದೆ. ಹೇಗಾದರೂ ಮಾಡಿ ಅವನನ್ನು ಕೊಂದು ಹಾಕಲು ಸಂಚು ಮಾಡುತ್ತಿರುವಾಗ ಆ ಕೆಲಸವನ್ನು ತಾನು ಮಾಡುತ್ತೇನೆ ಎಂದು ಮದನ್ ಲಾಲ್ ಡಿಂಗ್ರಾ ಸ್ವಯಂ ಪ್ರೇರಿತನಾಗಿ ಕೇಳಿಕೊಳ್ಳುತ್ತಾನೆ. ಅದಕ್ಕೆ ಪೂರ್ವಭಾವಿ ಸಿದ್ದತೆಯಂತೆ ಬ್ರಿಟಿಷರ ಪರವಾಗಿಯೇ ಇದ್ದ ತನ್ನ ತಂದೆಯ ಮೂಲಕ ಆತನ ಸ್ನೇಹಿತನಾಗಿದ್ದ ಕರ್ಜನ್ ವಾಲಿಯ ಪರಿಚಯಮಾಡಿಕೊಳ್ಳುತ್ತಾನೆ. ಹೇಗೂ ತನ್ನ ಸ್ನೇಹಿತನ ಮಗ ಅದೂ ಅಲ್ಲದೇ ಬ್ರಿಟಿಷರ ಪರವಾಗಿಯೇ ಇರುವವರ ಮಗ ಅವನೂ ಸಹಾ ಬ್ರಿಟಿಷರ ಪರ ಒಲವಿದ್ದೇ ಇರುತ್ತದೆ ಎಂದು ಭಾವಿಸಿ ಕರ್ಜನ್ ವಾಲಿ ಬಲು ಬೇಗನೆ ಮದನ್ ಲಾಲ್ ಡಿಂಗ್ರಾನ ಜೊತೆ ಸಲುಗೆ ಬೆಳೆಸುತ್ತಾನೆ.

1909 ನೇ ಜುಲೈ 1ನೇ ತಾರೀಖು ನ್ಯಾಷನಲ್‌ ಇಂಡಿಯನ್‌ ಅಸೋಸಿಯೇಷನ್ನಿನ ವಾರ್ಷಿಕೋತ್ಸವಕ್ಕೆ ಕರ್ಜನ್‌ ಬರುತ್ತಾನೆ ಎಂಬ ವಿಷಯ ತಿಳಿದು ಢಿಂಗ್ರಾನ ಸಂತೋಷವಾಗುತ್ತದೆ. ಅದೇ ದಿನವನ್ನು ಭಾರತಕ್ಕಾಗಿ ಅಪಮಾನದ ಮಾಡಿದವನ ವಿರುದ್ಧ ಸೇಡನ್ನು ತೀರಿಸಿಕೊಳ್ಳಲು ನಿಶ್ಚಯಿಸಿ ಜೂನ್‌ ರಂದು 20 ಅವನು ಗುಪ್ತವಾಗಿ ಸಾವರ್ಕರ್ ರನ್ನು ಭೇಟಿ ಮಾಡಿ.ತನ್ನ ಮನದಾಸೆಯ ಯೋಜನೆಯನ್ನು ತಿಳಿಸಿ ಅವರ ಆಶೀರ್ವಾದವನ್ನು ಪಡೆದು ಕೊಳ್ಳುತ್ತಾನೆ.

ಜುಲೈ 1ನೇ ತಾರೀಖು ರಂದು ತನ್ನ ಪಿಸ್ತೂಲನ್ನು ತೆಗೆದುಕೊಂಡು ಸುಮಾರು ಸುತ್ತು ಗುಂಡುಗಳನ್ನು ಹಾರಿಸಿ, ಗುಂಡು ಹಾರಿಸಿ ಸರಿಯಾದ ಗುರಿ ಇಡುವುದನ್ನು ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳುತ್ತಾನೆ. ಸಂಜೆ ಆರು ಗಂಟೆಗೆಲ್ಲಾ ತನ್ನ ಕೊಠಡಿಗೆ ಮರಳಿ ಚೆನ್ನಾಗಿ ಮುಖ ತೊಳೆದುಕೊಂಡು ಪಕ್ಕಾ ಪಂಜಾಬಿ ಮಾದರಿಯಂತೆ ತಲೆಗೆ ಆಕಾಶ ನೀಲಿಯ ಪೇಟ ಬಿಗಿಯಾಗಿ ಸುತ್ತಿಕೊಂಡು ತನ್ನ ಮೆಚ್ಚಿನ ಕಪ್ಪು ಕನ್ನಡಕವನ್ನು ಧರಿಸಿ ಟೈ ಹಾಕಿಕೊಂಡು, ಕೋಟನ್ನು ಏರಿಸಿಕೊಂಡು ಒಂದು ರಿವಾಲ್ವರ್, ಎರಡು ಪಿಸ್ತೂಲು ಮತ್ತು ಎರಡು ಚೂರಿಗಳನ್ನು ಕೋಟಿನ ಒಳಜೇಬುಗಳಲ್ಲಿ ಗುಪ್ತವಾಗಿಟ್ಟುಕೊಂಡು ಕರ್ಜನ್ ನನ್ನು ಮುಗಿಸಲು ಹೊರಡುತ್ತಾನೆ.

ಅಲ್ಲಿಂದ ಸೀದಾ ಸಭೆ ನಡೆಯುತ್ತಿದ್ದ ಪ್ರದೇಶಕ್ಕೆ ಹೋಗಿ ಎಲ್ಲರೊಡನೆ ಚೆನ್ನಾಗಿಯೇ ಮಾತನಾಡುತ್ತಾ ತನ್ನ ಗೆಳತಿ ಏಮಾ ಬೆಕ್‌ ಳನ್ನೂ ಭೇಟಿಯಾಗುತ್ತಾನೆ. ಗಂಟೆ ಹತ್ತೂವರೆಯಾದರೂ ಕರ್ಜನ್ ವಾಲಿಯ ಸಭೆಗೆ ಬಾರದಿದ್ದಾಗ ಮದನ್ ಕೊಂಚ ಗಲಿ ಬಿಲಿಯಾದರೂ ಅದನ್ನು ತೋರಿಸಿಕೊಳ್ಳದೇ ಎಲ್ಲರೊಡನೆ ಸಹಜವಾಗಿಯೇ ಮಾತನಾಡಿಸುತ್ತಲೇ ಆಗ್ಗಿಂದ್ದಾಗೆ ಬಹಳ ತವಕದಿಂದ ಬಾಗಿಲ ಕಡೆ ನೋಡುತ್ತಿದ್ದಾಗಲೇ ಕರ್ಜನ್‌ವಾಲಿ ತನ್ನ ಪತ್ನಿಯ ಜೊತೆಗೆ ಆಗಮಿಸುವುದನ್ನು ನೋಡಿ ಮದನ್ ಲಾಲ್ ಡಿಂಗ್ರಾನಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ ಆಗುತ್ತದೆ, ಸುಮಾರು ಅರ್ಧಗಂಟೆಗಳ ಕಾಲ ಸಭೆ ನಡೆದು, ಹನ್ನೊಂದು ಗಂಟೆಗೆ ಸಭೆ ಮುಗಿದು ಕರ್ಜನ್‌ವೇದಿಕೆಯಿಂದ ಕೆಳಗೆ ಇಳಿಯುತ್ತಲೇ ಸಂಗೀತ ಶುರುವಾಗಿ ಊಟೋಪಚಾರಗಳು ಆರಂಭವಾಗುತ್ತದೆ, ಅವರ ಮಧ್ಯೆದಲ್ಲಿಯೇ ಕರ್ಜನ್ ವಾಲಿಯೂ ಸೇರಿಕೊಳ್ಳುತ್ತಾನೆ.

md1

ಇದೇ ಸಮಯಕ್ಕಾಗಿ ಕಾಯುತ್ತಿದ್ದ ಡಿಂಗ್ರಾ, ಕರ್ಜನ್ ಇದ್ದ ಕಡೆಗೆ ಬಂದು ಹಲೋ ಎನ್ನುತ್ತಾನೆ. ಹೇಗೂ ಪರಿಚಯವಿದ್ದ ಕಾರಣ ಕರ್ಜನ್‌ ಕೂಡಾ ಆವನಿಗೆ ಹಸನ್ಮುಖನಾಗಿ ಪ್ರತ್ಯುತ್ತರ ನೀಡೀ ಒಬ್ಬರಿಗೊಬ್ಬರು ಹತ್ತಿರಕ್ಕೆ ಬರುತ್ತಾರೆ. ಆ ಸಂಗೀತದ ಗದ್ದಲದ ನಡುವೆ ಡಿಂಗ್ರಾ ಮೆಲ್ಲನೆ ಕಿವಿಯಲ್ಲಿ ಏನೋ ಗುಟ್ಟು ಹೇಳುವಂತೆ ಬಂದಾಗ ಕರ್ಜನ್‌ ಅದನ್ನು ಕೇಳಲು ತಲೆ ಬಗ್ಗಿಸುತ್ತಾನೆ. ಅಂತಹ ಕ್ಷಣಕ್ಕಾಗಿಯೇ ಕಾಯುತ್ತಿದ ಡಿಂಗ್ರಾ, ಸರಕ್ಕನೆ ಜೇಬಿನಿಂದ ರಿವಾಲ್ವರ್ ಹೊರತೆಗೆದು ಕರ್ಜನ್ನಿನ ಕುತ್ತಿಗೆಗೆ ಗುರಿ ಇಟ್ಟು ಡಂ ಡಂ ಎಂದು ಎರಡು ಗುಂಡು ಹೊಡೆದ ತಕ್ಷಣವೇ ಕರ್ಜನ್‌ ಅಯ್ಯೋ ಎಂದು ಕಿರುಚುತ್ತಾ ನೆಲದ ಮೇಲೆ ಕುಸಿದು ಬೀಳುತ್ತಾನೆ. ಕರ್ಜನನ್ನು ಸಾಯಿಸಲೇ ಬಂದಿದ್ದ ಮದನ್ ಮತ್ತೆರಡು ಸಲಾ ಗುಂಡು ಹಾರಿಸಿ ಅವನಿಗೆ ಶಾಶ್ವತ ಲೋಕಕ್ಕೆ ಕಳುಹಿಸುತ್ತಾನೆ. ನೆಲದ ಮೇಲೆ ಬಿದ್ದಿದ್ದ ಕರ್ಜನ್ನನ್ನು ರಕ್ಷಿಸಲು ಕಾವಾಸಜೀಲಾಲ್‌ಎಂಬ ಪಾರ್ಸಿ ಓಡಿ ಬಂದಾಗ ಅವನ ವಿರುಧ್ದವೂ ಡಿಂಗ್ರಾ ಗುಂಡು ಹಾರಿಸಿ ಅವನನ್ನೂ ಕೆಳಗೆ ಬೀಳಿಸುತ್ತಾನೆ ಮುಂದೆ ಆತ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ನರಳಿ ನರಳೀ ಪ್ರಾಣ ಬಿಡುತ್ತಾನೆ.

ಆ ಕ್ಷಣದಲ್ಲಿ ಜಂಹಾಂಗೀರ್ ಸಭಾಂಗಣದಲ್ಲಿ ಅಲ್ಲೋಲ ಕಲ್ಲೋಲ. ಎಲ್ಲರೂ ಅವನನ್ನು ಹಿಡಿಯಿರಿ ಹಿಡಿಯಿರಿ ಎಂದು ಡಿಂಗ್ರಾನನ್ನು ಹಿಡಿಯಲು ಅವನತ್ತ ಧಾವಿಸುತ್ತಾರೆ. ಹಾಗೆ ಬಂದವರ ಮೇಲೆ ಡಿಂಗ್ರಾ ಪ್ರಹಾರ ಮಾಡುತ್ತಾನೆ. ಅವರಲ್ಲೊಬ್ಬನಿಗೆ ಡಿಂಗ್ರಾನ ಬಲವಾದ ಪೆಟ್ಟಿನಿಂದಾಗಿ ಕುತ್ತಿಗೆ ಊದಿಕೊಂಡಿತು ಮತ್ತು ಪಕ್ಕೆಲುಬುಗಳು ಮುರಿದುಹೋಗಿ ರಕ್ತ ಕಾರಿಕೊಂಡು ಕೆಳಗೆ ಬೀಳುತ್ತಾನೆ.

ಇವೆಲ್ಲವನ್ನೂ ನೋಡುತ್ತಾ ಡಿಂಗ್ರಾ ಮಾತ್ರ ಶಾಂತವಾಗಿ ಹಸನ್ಮುಖವಾಗಿ ಕೊಂಚವೂ ಕದಲದೇ ನಿಂತಲ್ಲಿಯೇ ನಿಂತಿರುತ್ತಾನೆ. ಅವನನ್ನು ಹಿಡಿಯಲು ಹತ್ತಿರ ಬಂದ ಪೋಲಿಸರಿಗೆ ನಿಲ್ಲಿ. ಒಂದು ಕ್ಷಣ ನನ್ನ ಕನ್ನಡಕ ಹಾಕಿಕೊಳ್ಳುತ್ತೇನೆ ಎಂದು ತನ್ನ ನೆಚ್ಚಿನ ಕಪ್ಪು ಕನ್ನಡಕವನ್ನು ಹಾಕಿಕೊಂಡು ಪೋಲೀಸರಿಗೆ ಶರಣಾಗುತ್ತಾನೆ. ಅಲ್ಲಿಯೇ ಇದ್ದ ವೈದ್ಯರೊಬ್ಬರು ಅವನನ್ನು ಪರೀಕ್ಷಿಸಿ ಅಷ್ಟೇಲ್ಲಾ ಅವಗಡಗಳು ಸಂಭವಿಸಿದ್ದರೂ, ಯಾವುದೇ ಉದ್ವೇಗವಿಲ್ಲದೇ ಅವನ ನಾಡಿಗಳು ಎಂದಿನಂತೆ ಶಾಂತವಾಗಿಯೇ ಇದ್ದದ್ದನ್ನು ಗಮನಿಸಿದ ವೈದ್ಯರಿಗೇ ನಡುಕ ಉಂಟಾಗುತ್ತದೆ. ಇಂಥ ಘೋರ ಕೊಲೆಯನ್ನು ಮಾಡಿದ್ದರೂ ಧಿಂಗ್ರ ಸ್ವಲ್ಪವೂ ಭಯಪಟ್ಟಿರಲಿಲ್ಲ. ತಾನು ಮಾಡುತ್ತಿರುವುದು ಸರಿಯಾದದ್ದು ಎಂದು ಅವನಿಗೆ ದೃಢನಂಬಿಕೆ ಇತ್ತು.

ಮಾರನೆಯ ದಿನ ಲಂಡನ್ನಿನ ಎಲ್ಲ ಪತ್ರಿಕೆಗಳಲ್ಲೂ ದಪ್ಪಕ್ಷರಗಳಲ್ಲಿ ಇದೇ ಸುದ್ದಿ ಪ್ರಕಟವಾಗಿ ಎಲ್ಲರನ್ನೂ ದಂಗು ಬಡಿಸಿದರೆ, ಈ ಘಟನೆ ತಿಳಿದ ಸಾವರ್ಕರ್ ಅವರೂ ಸಂತೃಪ್ತರಾದರೆ ಭಾರತದ ಕ್ರಾಂತಿಕಾರರು ಉತ್ಸಾಹದಿಂದ ಸಂಭ್ರಮದಿಂದ ಕುಣಿದು ಕುಪ್ಪಳಿಸುತ್ತಾರೆ ಅವನ ಕಣ್ಣಿನಲ್ಲಿ ದೇವರಂತೆ ಕಾಣುತ್ತಾಎ. . ಡಿಂಗ್ರಾನ ಹೆಸರು ದಿನ ಕಳೆಯುವಷ್ಟರಲ್ಲಿ ಭಾರತಾದ್ಯಂತ ಮನೆ ಮಾತಾಗುತ್ತಾರೆ.

ಆದರೆ ಈ ಕೆಲಸದಿಂದ ಕುಪೀತರಾದ ಮದನ್ ಲಾಲ್ ಡಿಂಗ್ರಾ ಆವರ ತಂದೆ ಕೂಡಲೇ ಸಂದೇಶವೊಂದನ್ನು ಕಳುಹಿಸಿ, ಇಂಥ ಕೃತ್ಯ ಮಾಡಿದವನು ನನ್ನ ಮಗನೇ ಅಲ್ಲ. ಅವನೊಬ್ಬ ಶತ ಮೂರ್ಖ! ನನ್ನ ಹೆಸರಿಗೇ ಮಸಿ ಬಳಿದಿದ್ದಾನೆ ಎಂದರೆ ಅವನ ಸೋದರರು ತನಗೂ ಡಿಂಗ್ರಾನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಒಬ್ಬ ಬ್ರಿಟಿಷ್ ಅಧಿಕಾರಿಯನ್ನು ಕೊಂದು ಘೋರ ಅಪರಾಧ ಮಾಡಿದ್ದಾನೆ ಎಂದು ಹೇಳುತ್ತಾನೆ. ಖುದ್ದಾಗಿ ಡಿಂಗ್ರಾನ ಮನೆಯವರೇ ಕೈಬಿಟ್ಟಿದ್ದರೂ, ದೇಶಭಕ್ತ ಭಾರತ ಜನ ಭಾರತಮಾತೆಗೆ ಗೌರವ ತಂದ ಸುಪುತ್ರನೆಂದು ಹೊಗಳಿ ಹಾಡಿದರು.

ಬ್ರಿಕ್ಸ್‌ಟನ್‌ಜೈಲಿನಲ್ಲಿ ಬಂಧಿತನಾಗಿದ್ದ ಡಿಂಗ್ರಾನನ್ನು ನೋಡಲು ಬಂದಿದ್ದ ಸಾವರ್ಕರ್ ಅವರಿಗೆ ತಮ್ಮ ಶಿಷ್ಯನ ಧೈರ್ಯ, ಸಾಹಸಗಳ ಬಗ್ಗೆ ಹೆಮ್ಮೆ, ಗೌರವಗಳು ಹೆಚ್ಚಾದವು. ಸಾವರ್ಕರ್ ಅವರನ್ನು ನೋಡಿದ ಡಿಂಗ್ರಾ ನಾನು ಸತ್ತಮೇಲೆ ನನ್ನ ಶವಸಂಸ್ಕಾರ ಹಿಂದು ಪದ್ಧತಿಯಲ್ಲೇ ನಡೆಯಬೇಕು. ನನ್ನ ಕುಟುಂಬದವರು ಯಾರೂ ನನ್ನ ಶವವನ್ನು ಮುಟ್ಟುಕೂಡದು, ಯಾವ ಅಹಿಂದುವೂ ನನ್ನನ್ನು ಸೋಂಕಕೂಡದು, ನನ್ನ ಸಾಮಾನುಗಳನ್ನೆಲ್ಲ ಹರಾಜು ಹಾಕಿ ಅದರಿಂದ ಬಂದ ಹಣವನ್ನು ರಾಷ್ಟ್ರೀಯ ನಿಧಿಗೆ ಕೊಡಿ ಎಂದು ಹೇಳುತ್ತಾನೆ.

md2

ಮುಂದೆ ನ್ಯಾಯಾಲಯದಲ್ಲಿ ತನ್ನ ಪರವಾಗಿ ತಾನೇ ವಾದ ಮಾಡಿ ತನ್ನ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾನೆ. ದೇಶಕ್ಕಾಗಿ ಈ ಹತ್ಯೆ ಮಾಡಿರುವುದಕ್ಕಾಗಿ ನನಗೆ ಹೆಮ್ಮೆ ಇದೆ ಹಾಗಾಗಿ ತನಗೆ ಮರಣದಂಡನೆಯೇ ಸೂಕ್ತ ಎಂದು ಧೀರ ಮದನ್ ಲಾಲ್ ಧಿಂಗ್ರಾ ಖುಷಿಯಿಂದ ಹೇಳುತ್ತಾನೆ. ನಾನು ಹಿಂದು, ನನ್ನ ದೇಶಕ್ಕೆ ಅಪಮಾನವಾದರೆ ಅದು ನಮ್ಮ ದೇವರಿಗೆ ಅಪಮಾನವಾದಂತೆ ಎಂದು ನನ್ನ ಭಾವನೆ. ನಾನು ಬುದ್ಧಿವಂತನಲ್ಲ, ನಾನು ಬಲಶಾಲಿಯಲ್ಲ. ನಾನು ನನ್ನ ತಾಯಿಗೆ ನನ್ನ ರಕ್ತವನ್ನಲ್ಲದೆ ಇನ್ನೇನು ತಾನೆ ಕೊಡಬಲ್ಲೆ? ಆದುದರಿಂದ ನನ್ನ ರಕ್ತವನ್ನೇ ನನ್ನ ಮಾತೃಭೂಮಿಗೆ ಅರ್ಪಿಸಿದ್ದೇನೆ. ಭಾರತಮಾತೆಯ ಕೆಲಸವೆಂದರೆ ಶ್ರೀರಾಮನ ಕೆಲಸ. ಆಕೆಯ ಸೇವೆ ಶ್ರೀಕೃಷ್ಣನ ಸೇವೆ. ಆದ್ದರಿಂದ ನಾನು ಪ್ರಾಣಾರ್ಪಣೆ ಮಾಡುತ್ತಿದ್ದೇನೆ, ಹೆಮ್ಮೆಯಿಂದ ಪ್ರಾಣ ಬಿಡುತ್ತಿದ್ದೇನೆ. ನನ್ನ ತಾಯಿನಾಡು ಸ್ವತಂತ್ರವಾಗುವವರೆಗೂ ಇದೇ ತಾಯಿಯ ಹೊಟ್ಟೆಯಲ್ಲಿ ಮತ್ತೆ ಮತ್ತೆ ಹುಟ್ಟಬೇಕು. ಇದೇ ಧ್ಯೇಯಕ್ಕಾಗಿ ಬಲಿದಾನ ನೀಡುವಂತೆ ಆಗಬೇಕು. ಇದೊಂದೇ ನಾನು ದೇವರಲ್ಲಿ ಮಾಡುವ ಪ್ರಾರ್ಥನೆ.

ವಂದೇ ಮಾತರಂ ಎಂದು ಜೋರಾಗಿ ಹೇಳುತ್ತಾನೆ.

dinra226ರ ಹರೆಯದ ಡಿಂಗ್ರಾರನ್ನು 1909 ಆಗಸ್ಟ್ 17 ರಂದು ಪೆಂಟೋನ್‌ವಿಲ್ಲ ಜೈಲಿನಲ್ಲಿ ಗಲ್ಲಿಗೆ ಏರಿಸುವ ಸಿದ್ಧತೆ ನಡೆಸುತ್ತಾರೆ. ಮದನಲಾಲ್‌ಧಿಂಗ್ರ ಕೂಡಾ ಸಂತೋಷದಿಂದಲೇ, ಪವಿತ್ರವಾದ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದು, ಶ್ರೀರಾಮ, ಶ್ರೀಕೃಷ್ಣ ಜಪ ಮಾಡುತ್ತಾ ದೇಶಕ್ಕಾಗಿ ಪ್ರಾಣ ಕೊಡುತ್ತಾನೆ. ಹೀಗೆ ವಿದೇಶಿ ನೆಲದಲ್ಲಿ ಭಾರತೀಯನೊಬ್ಬನ ಮೊದಲ ಬಲಿದಾನ ಎಂದು ಭಗತ್ ಸಿಂಗರು ಭಾರತದ ಕ್ರಾಂತಿಕಾರಿಗಳ ಕುರಿತಾದ ಬರಹದಲ್ಲಿ ಮದನ್ ಲಾಲ್ ಧಿಂಗ್ರರನ್ನು ಕುರಿತು ಗೌರವಪೂರ್ವಕವಾಗಿ ಸ್ಮರಿಸಿದ್ದಾರೆ.

ಭಾರತದ ಕೆಲ ದೇಶಭಕ್ತ ತರುಣರು 1909ರಲ್ಲಿ ಇಂಗ್ಲೇಂಡಿನಲ್ಲಿ ಸಂಸ್ಕಾರ ಮಾಡಿದ್ದ ಮದನ್ ಲಾಲ್ ಡಿಂಗ್ರಾಅವರ ಕಳೇಬರವನ್ನು 1976ರಲ್ಲಿ ಭಾರತಕ್ಕೆ ತಂದು ಮಹಾರಾಷ್ಟ್ರದ ಅಕೋಲದಲ್ಲಿ ಸ್ಮರಣಾರ್ಥವಾಗಿ ಇಡುವ ಮೂಲಕ ಮದನ್ ಲಾಲ್ ಡಿಂಗ್ರಾ ಅವರ ತ್ಯಾಗ ಮತ್ತು ಬಲಿದಾನಗಳನ್ನು ಇಂದಿಗೂ ಎಲ್ಲಾ ಭಾರತೀಯರ ಹೃದಯಗಳಲ್ಲಿ ಚಿರಂತನವಾಗಿರುವಂತೆ ಶ್ಲಾಘನೀಯವಾದ ಕೆಲಸ ಮಾಡಿದ್ದಾರೆ

md4

ಎಂಜಿನಿಯರ್ ಆಗಬೇಕೆಂಬ ಆಸೆಯಿಂದ ಇಂಗ್ಲೇಂಡಿಗೆ ಹೋದ ಆಗರ್ಭ ಶ್ರೀಮಂತ, ಶೋಕೀಲಾಲಾ ಮದನ್ ಲಾಲ್ ಡಿಂಗ್ರಾ ದೇಶಭಕ್ತಿಯನ್ನು ತಲೆಗೆ ಹಚ್ಚಿಕೊಳ್ಳದಿದ್ದರೆ ಬೇಕಾದಷ್ಟು ಹಣ, ಅಧಿಕಾರ, ಸುಖ ಎಲ್ಲ ಅವನಿಗೆ ಸಿಕ್ಕಿರುತ್ತಿತ್ತು ಮತ್ತು ಇನ್ನೂ ಹಲವಾರು ವರ್ಷಗಳು ಸುಖದ ಸುಪ್ಪತ್ತಿಗೆಯಲ್ಲಿ ಹಾಯಾಗಿ ಬದುಕ ಬಹುದಾಗಿತ್ತು. ತನ್ನ ದೇಶದವರು ಗುಲಾಮರಾಗಿ ಬದುಕಿದ್ದೂ ಸತ್ತಂತೆ, ಹಾಗಾಗಿ ಅವರ ಸ್ವಾತಂತ್ಯಕ್ಕೆ ಡಿಂಗ್ರಾ ತನ್ನನ್ನೇ ತಾನು ಅರ್ಪಿಸಿಕೊಂಡ. ಅವನಂತಹ ಲಕ್ಷಾಂತರ ವೀರತ್ಯಾಗಶೀಲರಿಂದ ನಾವು ಇಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಇಂತಹ ಬಲಿದಾನಗಳು ನಮ್ಮ ಯುವಜನತೆಗೆ ಸದಾಕಾಲವೂ ಸ್ಪೂರ್ತಿಯಾಗಲಿ ಮತ್ತು ದೇಶ ಸೇವೆಗೆ ಪ್ರೇರೇಪಿಸುವಂತಾಗಬೇಕು ಅಲ್ವೇ?

ಏನಂತೀರೀ?
ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s