ಅಂದು 1910 ಮಾರ್ಚ್ 13, ಭಾನುವಾರ. ಆ ವ್ಯಕ್ತಿ ಪ್ಯಾರಿಸ್ ನಿಂದ ಲಂಡನ್ನಿನ ಕಡೆಗೆ ಹೊರಡುವ ರೈಲು ಹತ್ತಿದ್ದರು. ಲಂಡನ್ನಿನ ವಿಕ್ಟೋರಿಯಾ ನಿಲ್ದಾಣ ಪ್ರವೇಶಿಸುವ ಹೊತ್ತಿಗೆ ರಾತ್ರಿ 2 ಗಂಟೆ. ನಾಲ್ಕಾರು ಗುಪ್ತಚರರು ಧಡಧಡನೆ ಬಂದು ಅವರನ್ನು ಬಂಧಿಸಿದರು.
ರಾಜದ್ರೋಹ, ಜಾಕ್ಸನ್ ಕೊಲೆಗೆ ನೆರವಾದ ಅಪರಾಧ, ಲಂಡನ್ನಿನಲ್ಲಿ ಶಸ್ತ್ರಾಸ್ತ್ರ ಶೇಖರಣೆ, ಭಾರತ ಹಾಗೂ ಲಂಡನ್ನಿನಲ್ಲಿ ಮಾಡಿದ ರಾಜದ್ರೋಹ ಭಾಷಣಗಳು, ಪರಾರಿ ಹೀಗೆ ಹತ್ತಾರು ಆರೋಪಗಳ ಅಡಿಯಲ್ಲಿ ಅವರನ್ನು ಬಂಧಿಸಿದರು. ಜೂನ್ ಪ್ರಾರಂಭದಲ್ಲಿ ಕೋರ್ಟ್ ಆಫ್ ಕ್ರಿಮಿನಲ್ ಅಪೀಲ್ ಇವರನ್ನು ಭಾರತ ಸರಕಾರಕ್ಕೆ ಒಪ್ಪಿಸಬೇಕಾಗಿ ತೀರ್ಪು ಹೊರಹಾಕಿತು. ಜುಲೈ ಮೊದಲ ದಿನ ಆ ವ್ಯಕ್ತಿಯನ್ನು ಹೊತ್ತ ಠಮೊರಿಯಾ ಹಡಗು ಭಾರತದ ಕಡೆ ಚಲಿಸಿತು. ಇವರ ಸಾಮಥ್ಯವನ್ನು ಅರಿತಿದ್ದ ಬ್ರಿಟಿಷರು, ಕೈ ಕಾಲುಗಳನ್ನು ಕಟ್ಟಿ ಆಚೀಚೆ ಅಲುಗಾಡಲೂ ಸಾಧ್ಯವಿಲ್ಲದಂತಹ ಸಣ್ಣ ಕೋಣೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಹಡಗಿನ ಯಂತ್ರದಲ್ಲಿ ಏನೋ ಅಡಚಣೆಯ ಕಾರಣ ಮಾರ್ಸೆಲ್ ನಲ್ಲಿ ನಿಲ್ಲಿಸಲಾಯಿತು. ಭಾರತವನ್ನು ಸೇರಿದ ಮೇಲೆ ತನ್ನ ಗತಿ ಏನಾಗಬಹುದೆಂದು ಮೊದಲೇ ಅರಿತಿದ್ದ ಆ ವ್ಯಕ್ತಿ ಶೌಚಾಲಯಕ್ಕೆ ಹೋಗಿ ಬರುವೆನೆಂದು ಕೇಳಿ ಕೈಕೊಳಗಳನ್ನು ಬಿಚ್ಚಿಸಿಕೊಂಡು ಹಡಗಿನ ಶೌಚಾಲಯವನ್ನು ಪ್ರವೇಶಿಸಿ, ಅಲ್ಲಿದ್ದ ಸಣ್ಣ ಕಿಟಕಿಯನ್ನು ಒಡೆದು ತಮ್ಮ ದೇಹವನ್ನು ಅದರಲ್ಲಿ ತೂರಿಸಿ ಸ್ವಾತಂತ್ರ್ಯ ಲಕ್ಷ್ಮೀ ಕೀ ಜೈ ಎಂದು ಹೇಳುತ್ತಾ ಸಮುದ್ರಕ್ಕೆ ಜಿಗಿದೇ ಬಿಟ್ಟರು. ಶೌಚಾಲಯದಿಂದ ಎಷ್ಟು ಹೊತ್ತಾದರೂ ಹೊರಕ್ಕೆ ಬಾರದಿದ್ದನ್ನು ಗಮನಿಸಿದ ಸೈನಿಕರು ಅನುಮಾನದಿಂದ ಬಾಗಿಲನ್ನು ಒಡೆದು ನೋಡಿದರೆ ಸಣ್ಣ ಕಿಟಕಿಯ ರಂಧ್ರದಲ್ಲಿ ಆರೋಪಿ ನುಸಳುತ್ತಿದ್ದಾನೆ. ಅವರನ್ನು ಹಿಡಿಯುವಷ್ಟರಲ್ಲಿಯೇ ಆತ ಸಮುದ್ರಕ್ಕೆ ಹಾರಿಯಾಗಿತ್ತು. ಮೈ ಕೈಯೆಲ್ಲಾ ತರಚಿದ ಗಾಯಗಳಾಗಿ ರಕ್ತ ಸೋರುತ್ತಲಿತ್ತು. ರಕ್ತ ಸಿಕ್ತ ದೇಹಕ್ಕೆ ಸಮುದ್ರ ಉಪ್ಪು ನೀರು ತಾಗಿದ ಕೂಡಲೇ ಯಮಯಾತನೆ, ಆದರೆ ಅವರನ್ನು ಹಿಡಿಯಲು ಹಿಂದೆ ಸೈನಿಕರು ಬರುತ್ತಿದ್ದ ಕಾರಣ, ದೇಹದ ಮೇಲಿನ ಗಾಯ ಮತ್ತು ನೋವನ್ನು ಲೆಕ್ಕಿಸದೆ ಒಂದೇ ಸಮನೇ ಈಜುತ್ತಾ ದಡ ಸೇರಿದರಾದರೂ, ವಿಧಿ ಅವರ ಪಾಲಿಗೆ ಕ್ರೂರವಾಗಿತ್ತು. ಸ್ಥಳೀಯ ಪೋಲೀಸರ ಅಲಕ್ಷದಿಂದಾಗಿ ಅವರನ್ನು ಪುನಃ ಹಡಗಿನಿಂದ ಹಿಡಿಯಲು ಬಂದಿದ್ದವರಿಗೇ ಒಪ್ಪಿಸಲಾಗಿ, ಅವರ ಕೈ ಕಾಲುಗಳಿಗೆ ಬೇಡಿ ಹಾಕಿ ಮತ್ತೆ ಹಡಗಿಗೆ ಎಳೆದೊಯ್ದರು. ಈ ರೀತಿ ದೇಶದ ಸ್ವಾತಂತ್ಯ್ರಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಡಿದವರೇ ವೀರ ಸಾವರ್ಕರ್.
ಜುಲೈ 22 ರಂದು ಮುಂಬೈಗೆ ಕರೆತಂದು ನಾಸಿಕದ ಜೈಲಿಗೆ ಸೇರಿಸಿದರು. ಕೆಲ ದಿನಗಳ ನಂತರ ಯರವಡಾ ಜೈಲಿಗೆ ವರ್ಗಾವಣೆ ಮಾಡಿ ಸೆಪ್ಟೆಂಬರ್ 15 ಮುಂಬೈನ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಯಿತು. ಸಮುದ್ರದ ಮಧ್ಯದಲ್ಲಿಯೇ ತಪ್ಪಿಸಿ ಕೊಂಡ ಈ ವ್ಯಕ್ತಿ ನೆಲದ ಸುಮ್ಮನಿರುವವನೇ ಎಂದು ವಿಶೇಷ ಪೊಲೀಸ್ ಪಹರೆ ಒದಗಿಸಲಾಗಿತ್ತು. 24.12.1910 ಶನಿವಾರ ತೀರ್ಪು ಹೊರಬಿತ್ತು: 25 ವರ್ಷಗಳ ಕಾಲಾಪಾನಿ ( ಕರಿನೀರಿನ) ಶಿಕ್ಷೆ ಹಾಗೂ ಆಸ್ತಿ ಪಾಸ್ತಿಗಳ ಜಪ್ತಿ. ಮತ್ತೆ 30.01.1911 ರಂದು ಜಾಕ್ಸನ್ ಕೊಲೆಗೆ ನೆರವಾದ ಆರೋಪಕ್ಕಾಗಿ ಮತ್ತೊಂದು ಆ ಜನ್ಮ ಕಾರಾವಾಸದ ತೀರ್ಪು ಹೊರಬಂದಿತು. ಒಟ್ಟಿನಲ್ಲಿ 50 ವರ್ಷಗಳ ಕಾಲ ಕರಿನೀರಿನ ಶಿಕ್ಷೆಗೆ ವೀರ ಸಾವರ್ಕರ್ ಅವರನ್ನು ಗುರಿ ಪಡಿಸಲಾಯಿತು.
ಆರಂಭದಲ್ಲಿ ಡೋಂಗ್ರಿ ಜೈಲು ಸೇರಿದ ಸಾವರ್ಕರ್ ಚೂರು ಚೂರು ಮಾಡಿದ, ಎಳೆಯಾಗಿ ಬಿಡಿಸಿದ ಹೊಸೆಯುವ ಕಠಿಣ ಕೆಲಸವನ್ನು ಪ್ರತಿ ನಿತ್ಯ ಮಾಡಬೇಕಾಯಿತು. ಬೆಳಗ್ಗೆ ಎದ್ದರೆ ಅದೇ ಹಗ್ಗದ ಚೂರುಗಳನ್ನು ಹೊಸೆಯುವ ಕೆಲಸ. ಅಂಗೈ ತುಂಬಾ ಬೊಬ್ಬೆಗಳು. ಬೆರಳುಗಳ ಸುತ್ತ ರಕ್ತ. ಮತ್ತೆ ಒಂದು ತಿಂಗಳ ನಂತರ ಭಾಯಖಳಾ ಜೈಲಿಗೆ ವರ್ಗಾಯಿಸಲಾಯಿತು. ಅದಾದ ನಂತರ ಅಂತಿಮವಾಗಿ 1911 ಜೂನ್ 27 ರಂದು ಮಹಾರಾಜ ಹಡಗಿನ ಮೂಲಕ ಜುಲೈ 4 ರಂದು ಅಂಡಮಾನಿನ ಸೆಲ್ಯುಲರ್ ಜೈಲು ಪಾಲಾದರು.
ಆಗಿನ ಕಾಲದಲ್ಲಿ ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ಬ್ರಿಟಿಷ್ ಸರ್ಕಾರ ಭಾರತೀಯರಿಗೆ ಕಾಲಾಪಾನೀ ಶಿಕ್ಷೆ ವಿಧಿಸುತ್ತಿತ್ತು. ಅಷ್ಟೇ ಅಲ್ಲದೇ, ಅಪರಾಧಿಗಳನ್ನು ಪ್ರಾಣಿಗಿಂತಲೂ ಕಡೆಯಾಗಿ ನೋಡುತ್ತಿದ್ದರು. ಹುಳುಗಳಿಂದ ಕೂಡಿದ ಆಹಾರ, ಕುಡಿಯಲು ಕೊಳಕು ನೀರು ಅದರಲ್ಲೂ ದಿನಕ್ಕೆ ಎರಡು ಲೋಟ ಮಾತ್ರ ನೀಡಲಾಗುತ್ತಿತ್ತಲ್ಲದೇ, ಅವರು ಕೊಟ್ಟ ಆಹಾರಗಳನ್ನು ತಿನ್ನಲೇಬೇಕು. ಒಂದು ವೇಳೆ ಅದನ್ನು ತಿರಸ್ಕರಿಸಿದರೆ ಕಠಿಣ ಶಿಕ್ಷೆ!!! ಅಲ್ಲಿ ಕ್ರಾಂತಿಕಾರಿಗಳನ್ನು ಎಣ್ಣೆಯ ಗಾಣಕ್ಕೆ ಹೂಡಲಾಗುತ್ತಿತ್ತು. ಅದು ಬಲಿಷ್ಠ ವ್ಯಕ್ತಿಯ ಜೀವವನ್ನೇ ಒಂದು ದಿನಕ್ಕೆ ಒಬ್ಬರು ಮೂವತ್ತು ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕಾಗಿತ್ತು. ತಪ್ಪಿದರೆ ಶಿಕ್ಷೆ, ದಣಿವಾಗಿ ನಿಂತರೆ ಚಾವಟಿಯ ಹೊಡೆತ, ಕೈಗಳಲ್ಲಿ ರಕ್ತ, ಎದೆಯಲ್ಲಿ ಉರಿ, ತಲೆ ಸುತ್ತು… ಹೀಗೆ ನರಕಯಾತನೆ. ಆಯಾಸಗೊಂಡು ನಿಲ್ಲಿಸಿದರೆ ಛಾಟಿ ಏಟು. ಕೈಕಾಲು ಮಡಚದ ಹಾಗೆ ಕಬ್ಬಿಣದ ಸರಳುಗಳನ್ನು ಹಾಕಿ ವಾರಗಟ್ಟಲೆ ನಿಲ್ಲಿಸುತ್ತಿದ್ದರು. ಮಲಮೂತ್ರ ವಿಸರ್ಜನೆಗೂ ಸಮಯ ನಿಶ್ಚಿತ! ಮಲ-ಮೂತ್ರ ವಿಸರ್ಜನೆಗೂ ಜೈಲರನ ಅನುಮತಿ ಕೇಳಬೇಕಾಗುತ್ತಿತ್ತು. ಅಲ್ಲಿಯ ವ್ಯವಸ್ಥೆಯನ್ನು ವಿರೋಧೀಸುವ ಖೈದಿಗಳಿಗಂತೂ ಊಹಿಸಲು ಸಾಧ್ಯವಾಗದ ಶಿಕ್ಷೆಗಳು. ಬೆಳಿಗ್ಗೆ 6 ರಿಂದ 10 ರವರೆಗೆ, ಮಧ್ಯಾಹ್ನ 12 ರಿಂದ 5 ರವರೆಗೆ ಗೋಡೆ ಕಡೆ ಮುಖ ಮಾಡಿ ಬೇಡಿ ಹಾಕಲಾಗುತ್ತಿತ್ತು. ವರ್ಷಕ್ಕೆ ಒಂದು ಸಲ ಕಾಗದ ಬರೆಯುವ ಅವಕಾಶ. ಅರೆ ಅನ್ನ, ಗಬ್ಬು ನೀರು, ಮಣ್ಣು ಕಲ್ಲು ಬೆವರು ಬೆರೆಸಿದ ಊಟ, ಇದು ಅಲ್ಲಿನ ಆಹಾರ ವ್ಯವಸ್ಥೆ. ಬೆಳಗ್ಗೆ ಎದ್ದರೆ ಅದೇ ಜೈಲು ಖಾನೆ, ಮರದ ಹಲಗೆ, ಕೊರೆಯುವ ಚಳಿ, ಹರಕು ಕಂಬಳಿ! ಅದೇ ತೆಂಗಿನ ನಾರು ಬಿಡಿಸುವ ಕೆಲಸ, ಅದೇ ಎಣ್ಣೆಯ ಗಾಣ, ನೀರು ಇಟ್ಟಿಗೆ ಹೊರುವುದು ಸಾವಕರ್ರರ ಪ್ರತಿನಿತ್ಯದ ಕರ್ತವ್ಯ. ಅದೇ ಜೈಲಿನಲ್ಲಿ ಮತ್ತೊಂದು ದೇಶದ್ರೋಹದ ಆರೋಪದ ಮೇಲೆ ಅವರ ಸ್ವಂತ ತಮ್ಮನನ್ನು ಕೂಡಿಹಾಕಿದ್ದರೂ ಅವರಿಬ್ಬರೂ ಒಮ್ಮೆಯೂ ಭೇಟಿ ಮಾಡಿಯೇ ಇರಲಿಲ್ಲ. ಆದರೆ ಬ್ಯಾರಿ ಮತ್ತು ಇತರ ಬ್ರಿಟಿಷ್ ಅಧಿಕಾರಿಗಳು ಮಾತ್ರ ಅಲ್ಲಿ ಐಷಾರಾಮಿ ಜೀವನವನ್ನು ನಡೆಸುತ್ತಿದ್ದರು. ಅಲ್ಲಿನ ಅಧಿಕಾರಿಗಳು ತಮ್ಮ ಮೋಜು ಮಸ್ತಿಗಾಗಿ ಟೆನ್ನಿಸ್ ಕೋರ್ಟ್, ಬೇಕರಿ, ಈಜುಕೊಳ ಮತ್ತು ಕ್ಲಬ್ ಹೌಸ್ ಗಳನ್ನು ಹೊಂದಿದ್ದರು.
ಸಾವರ್ಕರರು ತಮಗೆ ವಿಧಿಸಿದ್ದ 50 ವರುಷಗಳ ಶಿಕ್ಷೆಯ ಸಂಪೂರ್ಣ ಗೊಳಿಸಿದ್ದರೆ, 1960 ರ ಡಿಸೆಂಬರ್ 24 ರಂದು ಬಿಡುಗಡೆ ಆಗಬೇಕಿತ್ತು. ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆಯಿಂದಾಗಿ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರ್ ಅವರು ಕ್ಷಮಾ ಅರ್ಜಿಯನ್ನು ಸಲ್ಲಿಸುತ್ತಾರಾದರೂ, ಇಲ್ಲಿ ಸುಮ್ಮನೇ ಖೈದಿಯಂತೆ ಇರುವ ಬದಲು, ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸನ್ನದ್ಧರಾಗುವ ದೂರದೃಷ್ಟಿಯ ಮನಸ್ಸಿನಿಂದಲೂ ಅವರು ಕ್ಷಮಾಪಣಾ ಪತ್ರವನ್ನು ಬರೆದಿರುತ್ತಾರೆ. ಇತ್ತ 1920ರಲ್ಲಿ ವಿಠ್ಠಲಭಾಯಿ ಪಟೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಅವರ ಬಿಡುಗಡೆಗಾಗಿ ಒತ್ತಾಯ ಮಾಡುತ್ತಿರುತ್ತಾರೆ. ಇದೆಲ್ಲದರ ಪರಿಣಾಮವಾಗಿ, ಸಾವರ್ಕರ್ ಅವರನ್ನು ಅಂಡಮಾನ್ ನ ಸೆರೆ ವಾಸದದಿಂದ 1921 ರಲ್ಲಿ ಆಲಿಪುರ ಜೈಲಿಗೆ ವರ್ಗಾಯಿಸಲಾಯಿತು, ಆದಾದ ನಂತರ ಕೆಲ ಕಾಲ ರತ್ನಗಿರಿಯಲ್ಲಿ ಗೃಹ ಬಂಧನದಲ್ಲಿ ಇರಿಸಿ, ತದನಂತರ 1923 ರಲ್ಲಿ ಯರವಡಾ ಜೈಲಿಗೆ ಸ್ಥಳಾಂತರಿ ಸಲಾಯಿತು. ಜನವರಿ 6, 1924 ಭಾನುವಾರ, ಇನ್ನು 5 ವರುಷಗಳ ಕಾಲ ರಾಜಕಾರಣದಲ್ಲಿ ಭಾಗವಹಿಸಬಾರದು, ರತ್ನಗಿರಿ ಯಲ್ಲಿಯೇ ಸ್ಥಾನ ಬದ್ಧತೆಯಲ್ಲಿ ಇರಬೇಕು ಎಂದು ಬ್ರಿಟಿಷ್ ಸರಕಾರದ ಆಜ್ಞೆಯಾಯಿತು. ಹೀಗೆ, ಸಾವಾರ್ಕರ್ ಅವರು ತಮ್ಮ ಯೌವ್ವನದ 27 ವರ್ಷಗಳನ್ನು ಬ್ರಿಟಿಷರ ಸೆರೆಯಾಳಾಗಿಯೇ ಕಳೆದರು.
ಆದಾದ ನಂತರ ಹಿಂದೂ ಮಹಾಸಭೆಯ ಅಧ್ಯಕ್ಷರಾಗಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದ ಸಮಯದಲ್ಲಿಯೇ, ಹಿಂದೂ ಮಹಾ ಸಭಾದ ಸದಸ್ಯರಾಗಿದ್ದ ನಾಥೂರಾಂ ಘೋಡ್ಸೆ ಗಾಂಧಿಯವರನ್ನು ಗುಂಡಿಕ್ಕಿ ಕೊಂದಾಗ ಹತ್ಯೆಯ ಹಿಂದಿನ ರೂವಾರಿ ಎಂಬ ಆರೋಪವನ್ನು ಸಾವರ್ಕರ್ ಅವರ ಮೇಲೆ ಹೊರಿಸಿ ಅವರನ್ನು 1948 ರ ಮೇ 24 ರಂದು ಮತ್ತೆ ಬಂಧಿಸಿ, ವಿಚಾರಣೆ ಆರಂಭಿಸುತ್ತಾರೆ. ಅಣ್ಣಾ ರಾವ್ ಬೋಪಟ್ಕರ್ ಸಾವರ್ಕರರ ಪರ ಪ್ರಖರವಾಗಿ ವಾದಿಸಿದ ಪರಿಣಾಮವಾಗಿ 1946 ಫೆಬ್ರವರಿ 10 ರಂದು ಸಾವರ್ಕರ್ ಅವರು ನಿರ್ದೋಷಿ ಎಂದು ಸಾಭೀತಾಗಿ ಸತ್ಯಕ್ಕೆ ಸದಾ ಜಯ ಎಂಬುದನ್ನು ಎತ್ತಿ ತೋರಿಸಿತ್ತು.
1883, ಮೇ 28 ರಂದು ಜನಿಸಿದ ಸಾವರ್ಕರ್ ಅವರ ಹೆಸರೇ ಭಾರತ ದೇಶದಲ್ಲಿ ನ್ಯಾಯಯುತವಾದ ಉಗ್ರ ಹೋರಟಕ್ಕೆ ಪರ್ಯಾಯ ಎಂದರೂ ಅತಿಶಯೋಕ್ತಿಯೇನಲ್ಲ. ಅವರ ನಡೆ ನುಡಿಗಳು ಕ್ರಾಂತಿಕಾರಿಗಳಿಗೆ ಸದಾ ಸ್ಪೂರ್ತಿ, ಜಗತ್ತಿನ ಕ್ರಾಂತಿಕಾರಿಗಳ ಇತಿಹಾಸದಲ್ಲಿ ಸಾವರ್ಕರರಿಗೆ ಸರಿಸಾಟಿ ಬೇರೊಬ್ಬರಿಲ್ಲ. ಮೃತ್ಯುವನ್ನು ಚಕ್ರವ್ಯೂಹದಂತೆ ಭೇದಿಸಿದ ವೀರ. ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ಮೈ ರೋಮಾಂಚನವಾಗುವುದಂತೂ ದಿಟ. ಜಗತ್ತಿನಲ್ಲಿ ಅವರು ಅನುಭವಿಸಿದಷ್ಟು ನೋವುಗಳನ್ನು, ದೀರ್ಘಕಾಲದ ಕಠಿಣ ಕರಿನೀರಿನ ಕಾರ್ಯಾಗೃಹದ ವಾಸ ಅನುಭವಿಸಿದವರು ಜಗತ್ತಿನಲ್ಲೇ ವಿರಳ. ಮೃತ್ಯುಂಜಯ ಎಂಬ ಅಭಿದಾನಕ್ಕೆ ಅವರಷ್ಟು ಅರ್ಹರಾದವರು ಬೇರಾರೂ ಇಲ್ಲ. ಇಪ್ಪತ್ತನೆಯ ಶತಮಾನದ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿ ಅಂದು ಭಾರತದ ಸ್ವಾತಂತ್ರ್ಯ ಆಂದೋಲನಕ್ಕೆ ಭದ್ರ ಅಡಿಪಾಯವನ್ನು ಹಾಕಿದವರು ವಿನಾಯಕ ದಾಮೋದರ ಸಾವರರ್ಕರ್.
ಇಂತಹ ಪರಮ ದೇಶ ಭಕ್ತನನ್ನು ಸ್ವಾತಂತ್ರ್ಯಾನಂತರ ಬಂದ ಸರ್ಕಾರ ಸರಿಯಾಗಿ ನಡೆಸಿಕೊಳ್ಳದೇ ಹೋದದ್ದು ಭಾರತದ ಇತಿಹಾಸದಲ್ಲಿ ಕಪ್ಪು ಚುಕ್ಕೆಯೇ ಸರಿ. ದೇಶದ ಮೊದಲ ಗಣರಾಜ್ಯೋತ್ಸವಕ್ಕೆ ಸಾವರ್ಕರರಿಗೆ ಆಮಂತ್ರಣ ನೀಡಿರಲಿಲ್ಲ. 1950 ಲಿಯಾಖತ್ ಅಲಿಯ ಭಾರತ ಭೇಟಿಯ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಗೆ ಭಂಗವಾಗುತ್ತದೆಂಬ ನೆಪವೊಡ್ಡಿ ಅಂದಿನ ನೆಹರೂ ಸರಕಾರ ಅರವತ್ತೇಳು ವರ್ಷದ ವೃದ್ಧ ಸಾವರ್‌ಕರರನ್ನು ಮತ್ತೊಮ್ಮೆ ಬಂಧಿಸಿ ಬೆಳಗಾವಿ ಜೈಲಿಗೆ ಕಳುಹಿಸಿತು. ಇದನ್ನು ಪ್ರತಿಭಟಿಸಿ ದೇಶಾದ್ಯಂತ ಯುವಕರು ಮೃತ್ಯುಂಜಯ ದಿವಸ್ ಆಚರಿಸಿದಾಗ ಸಾವರ್ಕರರನ್ನು ಬಂಧಿಸಿಟ್ಟ ಜೈಲನ್ನು ನೆಲಸಮ ಮಾಡಬೇಕೆಂಬ ಪ್ರಸ್ತಾಪ ಬಂದಿತ್ತು. ಆದರೆ ಸಂಸದ ಕೆ.ಆರ್. ಗಣೇಶ್ ಅವರ ಪ್ರತಿಭಟನೆಯಿಂದ ಅದು ನಿಂತಿತು.
ಜಾತಸ್ಯ ಮರಣಂ ಧೃವಂ ಅಂದರೆ ಹುಟ್ಟಿದವರೆಲ್ಲರೂ ಒಂದಲ್ಲಾ ಒಂದು ದಿನ ಸಾಯಲೇ ಬೇಕು ಎಂಬ ನಿಯಮದಂತೆ 1966 ಫೆಬ್ರುವರಿ 26 ರಂದು ಸಾವರ್ಕರು ವಿಧಿವಶರಾದರು ಸಾವಿನ ಮನೆಯಲ್ಲಿ ಶತೃತ್ವ ತೋರಬಾರದು ಎಂಬ ನಿಯಮವಿದ್ದರೂ, ಅವರು ನಿಧನರಾದಾಗ ಅವರ ಶರೀರವನ್ನು ಕೊಂಡೊಯ್ಯಲು ಗನ್ ಕ್ಯಾರೇಜ್ ಕೂಡ ಸಿಗದೇ ಹೋದಾಗ, ಅವರ ಅಪ್ಪಟ ಅಭಿಮಾನಿ, ನಟ ವಿ. ಶಾಂತಾರಾಮ್ ಗನ್ ಕ್ಯಾರೇಜ್ ವ್ಯವಸ್ಥೆ ಮಾಡಿದರು. ಮಹಾರಾಷ್ಟ್ರದ ಅಂದಿನ ಸರ್ಕಾರದ ಯಾವೊಬ್ಬ ಸಚಿವರೂ ಕೂಡ ಸಾವರ್ಕರ್ ಅವರ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿಲ್ಲ. ಲೋಕಸಭೆಯಲ್ಲಿ ಅವರಿಗೆ ಗೌರವಾರ್ಪಣೆ ಮಾಡಬೇಕೆಂಬ ಪ್ರಸ್ತಾವನೆ ಬಂದಾಗ, ಸಾವರ್ಕರ್ ಅವರು ಈ ಸಂಸತ್ತಿನ ಸದಸ್ಯನಾಗಿರಲಿಲ್ಲ ಎಂಬ ಕುಂಟು ನೆಪವೊಡ್ಡಿ ಅಂದಿನ ಸಭಾಧ್ಯಕ್ಷರು ತಿರಸ್ಕರಿಸಿದ್ದು ನಿಜಕ್ಕೂ ಒಬ್ಬ ದೇಶಭಕ್ತನಿಗೆ ತೋರಿದ ಅಗೌರವವೇ ಸರಿ. ಒಂದೇ ಕುಟುಂಬದ ಸದಸ್ಯರು ಅದೂ ಅವರು ಬದುಕಿದ್ದಾಗಲೇ ಆತ್ಮಪ್ರಶಂಸೆಯಂತೆ ಭಾರತ ರತ್ನ ಪ್ರಶಸ್ತಿಯನ್ನು ಅವರಿಗೆ ಅವರೇ ಪಡೆದುಕೊಂಡು ಸಂಭ್ರಮಿಸಿದರೇ ವಿನಃ ವೀರಸಾವರ್ಕರ್ ಮತ್ತು ಅಂಬೇಡ್ಕರ್ ಅಂತಹ ಧೀಮಂತ ರಾಷ್ಟ್ರಭಕ್ತರಿಗೆ ಕೊಡುವ ಮನಸ್ಸು ಮಾಡದಿರುವುದು ನಿಜಕ್ಕೂ ದುಃಖಕರ ವಿಷಯವೇ ಸರಿ. ಒಂದಂತೂ ಸತ್ಯ. ಯಾರು ಏನೇ ಹೇಳಿದರೂ ಅವರ ಬದುಕು ಮತ್ತು ಹೋರಾಟ ಎಂಥಹವರಿಗೂ ರೋಮಾಂಚನವನ್ನುಂಟು ಮಾಡಿ ಅವರನ್ನು ದೇಶ ಕಾರ್ಯಕ್ಕೆ ಪ್ರೇರೇಪಿಸುತ್ತದೆ. ಅಂತಹ ಪುಣ್ಯಾತ್ಮರ ಹೋರಾಟ, ತ್ಯಾಗ ಮತ್ತು ಬಲಿದಾನಗಳ ಫಲವನ್ನೇ ದೇಶದ ಸ್ವಾತಂತ್ರ್ಯರೂಪದಲ್ಲಿ ನಾವಿಂದು ಅನುಭವಿಸುತ್ತಿರುವುದು ಎಂಬುದನ್ನು ಸಕಲ ಭಾರತೀಯರ ಮನಸ್ಸಿನಲ್ಲಿ ಸದಾಕಾಲವೂ ಹಸುರಾಗಿಯೇ ಇದೆ ಮತ್ತು ಇರಲೇ ಬೇಕು. ಅದನ್ನು ಯಾರೂ ಮರೆತಿಲ್ಲ ಮತ್ತು ಮರೆಯಲೂ ಬಾರದು. ಅವರು ಸದಾಕಾಲವೂ ನಮಗೆ ಪ್ರಾಥಸ್ಮರಣೀಯರೇ ಹೌದು.
ಏನಂತೀರೀ?
ನಿಮ್ಮವನೇ ಉಮಾಸುತ.