ಹೆಣ್ಣು, ಹೊನ್ನು ಮತ್ತು ಮಣ್ಣು ಎಲ್ಲವೂ ಲಭ್ಯ ಇದ್ದಲ್ಲಿ ಮಾತ್ರವೇ ಎಲ್ಲರಿಗೂ ಸಿಗುತ್ತದೆ ಎನ್ನುವುದು ದೊಡ್ಡವರು ಹೇಳುವ ಮಾತು. ಕಷ್ಟ ಪಟ್ಟು, ಬಿಸಿಲಿನಲ್ಲಿ ಬವಳಿ ಬೆಂದು, ಅಕ್ಕ ಪಕ್ಕದವರೊಡನೆ ಕಾದಾಡಿ, ಹೋರಾಡಿ ಸರದಿಯಲ್ಲಿ ನಿಂತು ಖರೀದಿಸಿದ ಕಲ್ಲೆಣ್ಣೆ (ಸೀಮೇಎಣ್ಣೆ ) ಅಂತಿಮವಾಗಿ ನಮಗೆ ಸಿಗದೇ, ಲಭ್ಯ ಇದ್ದವರಿಗೇ ಸಿಕ್ಕಾಗ ಆಗುವ ಸಿಟ್ಟು ಸೆಡವು ನಿಜಕ್ಕೂ ಹೇಳಲಾಗದು. ಅಂತಹ ರೋಚಕ ಪ್ರಸಂಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಆಗ ಎಂಭತ್ತರ ದಶಕ. ಆಗ ತಾನೇ ಹೈಸ್ಕೂಲ್ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದೆ. ಊರಿನಲ್ಲಿದ್ದ ನಮ್ಮ ತಂದೆಯ ಅಣ್ಣ, ನನ್ನ ದೊಡ್ಡಪ್ಪನವರು ಅನಾರೋಗ್ಯದಿಂದ ಬೆಂಗಳೂರಿನ ಕೆಲವು ಪ್ರಸಿದ್ಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೊಳಗಾಗಿ, ಚಿಕಿತ್ಸೆ ಫಲಕಾರಿಯಾಗದೇ ನಮ್ಮನ್ನಗಲಿ ಹೋಗಿದ್ದರು. ನಮ್ಮ ಹೆಚ್ಚಿನ ಬಂಧುಗಳು ಬೆಂಗಳೂರಿನಲ್ಲಿಯೇ ಇದ್ದ ಕಾರಣ ಅವರ ಅಂತಿಮ ವಿಧಿವಿಧಾನಗಳನ್ನು ಇಲ್ಲಿಯೇ ಮುಗಿಸಿ ಅವರ ಅಪರ ಕರ್ಮ ಕಾರ್ಯಗಳನ್ನು ನಮ್ಮ ಮನೆಯಲ್ಲಿಯೇ ಮಾಡಲು ಗುರು ಹಿರಿಯರು ನಿರ್ಧರಿಸಿದ್ದರು. ಹೇಳಿ ಕೇಳಿ ನಮ್ಮದು ದೊಡ್ಡ ಕುಟುಂಬ. ಹಾಗಾಗಿ ಬಹುತೇಕ ಸಂಬಂಧೀಕರು ನಮ್ಮ ಮನೆಯಲ್ಲಿಯೇ ಉಳಿದುಕೊಂಡಿದ್ದರು. ನಿಜ ಹೇಳ ಬೇಕೆಂದರೆ ಅಷ್ಟೂ ಜನಕ್ಕೆ ಸಾಕಾಗುವಷ್ಟು ದೊಡ್ಡ ಮನೆ ನಮ್ಮದಲ್ಲದಿದ್ದರೂ ಆಗ ನಮ್ಮವರೆಲ್ಲರ ಮನಸ್ಸು ದೊಡ್ಡದಾಗಿದ್ದ ಕಾರಣ ಎಲ್ಲರೂ ಅದೇ ಮನೆಯಲ್ಲಿಯೇ ಅನುಸರಿಸಿಕೊಂಡು ಹೋಗಿದ್ದರು.
ಒಂಭತ್ತನೇಯ ದಿನದಿಂದ ಅಪರಕ್ರಿಯೆಗಳನ್ನು ಮಾಡುವುದೆಂದು ತೀರ್ಮಾನಿಸಿ ಅದಕ್ಕಾಗಿ ಸಾಮಾನು ಸರಂಜಾಮುಗಳನ್ನು ಒಟ್ಟುಗೂಡಿಸುವ ಕಾರ್ಯದಲ್ಲಿ ನನ್ನನ್ನೂ ಒಳಗೊಂಡಂತೆ ಎಲ್ಲರೂ ಸಹಭಾಗಿತ್ವವನ್ನು ತೆಗೆದುಕೊಂಡಿದ್ದೆವು. ಆಷ್ಟೂ ದಿನಗಳ ಆಡುಗೆ ಮಾಡಲು ಸುಮಾರು 35-40 ಲೀಟರ್ ಸೀಮೇಎಣ್ಣೆ ಬೇಕಾಗುತ್ತದೆ ಎಂದು ಅಡಿಗೆಯವರು ಬರೆದು ಕೊಟ್ಟಿದ್ದರು. ತಿಂಗಳಿಗೆ ಪ್ರತೀ ಮನೆಯೊಂದಕ್ಕೆ 16ಲೀ ಸೀಮೇಎಣ್ಣೆಗಳನ್ನು ಕೊಡುತ್ತಿದ್ದರು. ಅದಾಗಲೇ ಮೊದಲ ಕಂತಾದ 8 ಲೀ ತೆಗೆದುಕೊಂಡಿದ್ದರಿಂದ ಉಳಿದ 8 ಲೀ ನಮ್ಮ ಪಡಿತರ ಚೀಟಿಯಲ್ಲಿ ದೊರೆಯುತ್ತಿದ್ದ ಕಾರಣ, ಅಕ್ಕ ಪಕ್ಕದವರ ಮನೆಗಳ ಚೀಟಿಯನ್ನೂ ಪಡೆಕೊಂಡು ಹೋಗಿದ್ದೆವು. ನಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ನಮ್ಮ ನೆರೆಹೊರೆಯವರು ಧಾರಾಳವಾಗಿಯೇ ಅವರ ಪಡಿತರ ಚೀಟಿಗಳನ್ನು ನಮಗೆ ಕೊಟ್ಟಿದ್ದರು. ಹಾಗಾಗಿ ನಾನು ಮತ್ತು ನಮ್ಮ ಅಣ್ಣಂದಿರಿಬ್ಬರೂ ಸೇರಿ ಒಟ್ಟು ಮೂರು ಜನ ಸೀಮೇ ಎಣ್ಣೆ ತರಲು ಮೂರು ಸೈಕಲ್ಲಿನಲ್ಲಿ ಡಬ್ಬಗಳನ್ನು ಹಿಡಿದುಕೊಂಡು ಪಡಿತರ ಅಂಗಡಿಗೆ ಹೋಗಿದ್ದೆವು.
ನಮ್ಮ ಮನೆಯ ಬಳಿ ಸಾಮಾನುಗಳನ್ನು ಕೊಂಡು ಕೊಳ್ಳಲು ಹತ್ತಾರು ಪಡಿತರ ಅಂಗಡಿಗಳಿದ್ದರೂ ಸೀಮೇಎಣ್ಣೆ ಮಾತ್ರಾ ಒಂದೇ ಕಡೆ ವಿತರಿಸುತ್ತಿದ್ದರಿಂದ ಸುತ್ತ ಮುತ್ತಲಿನ ಎಲ್ಲರೂ ಅಲ್ಲಿಗೇ ಬರಬೇಕಿದ್ದ ಕಾರಣ, ಸೀಮೇ ಎಣ್ಣೆಯ ಸರದಿಯ ಸಾಲು ಹನುಮಂತನ ಬಾಲಕ್ಕಿಂತಲೂ ಅತ್ಯಂತ ದೊಡ್ಡದಾಗಿತ್ತು. ಸಾಧಾರಣ ದಿನಗಳಲ್ಲಾದರೇ ಮತ್ತೊಂದು ದಿನ ತೆಗೆದುಕೊಳ್ಳೋಣ ಎಂದು ವಾಪಸ್ಸು ಬರುತ್ತಿದ್ದೆ. ಆದರೆ ಮನೆಯಲ್ಲಿ ಶ್ರಾಧ್ಧ ಕಾರ್ಯಗಳಿದ್ದರಿಂದ ಸೀಮೇ ಎಣ್ಣೆ ಅತ್ಯಗತ್ಯವಾಗಿದ್ದರಿಂದ ಮರು ಮಾತಿಲ್ಲದೆ ನಮ್ಮಗಳ ಡಬ್ಬವನ್ನು ಸರದಿಯ ಸಾಲಿನ ಕಡೆಯಲ್ಲಿ ಇಟ್ಟು ಒಂದೊಂದಾಗಿ ಡಬ್ಬಗಳನ್ನು ಜರುಗಿಸುತ್ತಾ ನಮ್ಮ ಪಾಳಿಯ ಬರುವಿಕೆಗಾಗಿ ಕಾಯುತ್ತಿದ್ದೆವು.
ಸರದಿಯಲ್ಲಿ ನಮ್ಮ ಹಿಂದೆ ಒಬ್ಬ ಸುಂದರ ತರುಣಿಯೊಬ್ಬಳೂ ಸಹಾ ಸೀಮೇ ಎಣ್ಣೆಗಾಗಿ ತನ್ನ ಡಬ್ಬವನ್ನಿಟ್ಟು ಸರದಿಯಲ್ಲಿ ಕಾಯುತ್ತಿದ್ದಳು. ನೋಡಲು ನಿಜಕ್ಕೂ ರೂಪವತಿಯಾಗಿದ್ದಳು. ಬಹುಶಃ ವಯಸ್ಸಿನಲ್ಲಿ ನನಗಿಂತ ಸ್ವಲ್ಪ ದೊಡ್ಡವಳಾಗಿದ್ದಳು. ನಾವು ಮೂರು ಜನರೂ ಹದಿಹರೆಯದ ವಯಸ್ಸು. ಕದ್ದು ಮುಚ್ಚಿ ಆಗ್ಗಿಂದ್ದಾಗ್ಗೆ ಆಕೆಯನ್ನು ನೋಡುತ್ತಿದ್ದದ್ದು ಆಕೆಯ ಗಮನಕ್ಕೂ ಬಂದು ಒಂದೆರಡು ಬಾರಿ ದುರು ದುರುಗುಟ್ಟಿ ನೋಡಿದ್ದೂ ಉಂಟು. ಆಕೆಯ ಕಣ್ಣೇಟಿಗೇ ಹೆದರಿ ಸುಮ್ಮನಾಗಿದ್ದೆವು. ಇದ್ದಕ್ಕಿದ್ದಂತೆಯೇ ಸರದಿಯ ಸಾಲು ಮುಂದುವರೆಯುವುದು ಸ್ವಲ್ಪ ತಡವಾಗತೊಡಗಿತು. ನೆತ್ತಿಯ ಮೇಲೆ ಸೂರ್ಯ ಜೋರಾಗಿಯೇ ಸುಡುತ್ತಿದ್ದ. ಬಿಸಿಲಿನಿಂದ ಬಸವಳಿದ ನಾವುಗಳು ಡಬ್ಬವನ್ನು ಸಾಲಿನಲ್ಲಿಯೇ ಇಟ್ಟು ಅಲ್ಲಿಯೇ ಇದ್ದ ಮರದ ನೆರಳಿಗೆ ಬಂದು ನಿಂತೆವು. ಸ್ವಲ್ಪ ಸಮಯದ ನಂತರ ಸಾಲು ಮುಂದುವರೆದಾಗ, ಆರಂಭದಲ್ಲಿ ಆ ತರುಣಿ ನಮ್ಮ ಡಬ್ಬಗಳನ್ನೂ ತಾನೇ ಖುದ್ದಾಗಿ ಜರುಗಿಸಿ ಅವುಗಳ ಹಿಂದೆ ತನ್ನ ಡಬ್ಬವನ್ನು ಜರುಗಿಸುತ್ತಿದ್ದಳು. ಹೇಗೂ ಆಕೆ ನಮ್ಮ ಡಬ್ಬಗಳನ್ನು ಜರುಗಿಸುತ್ತಿದ್ದಾಳಲ್ಲಾ ಎಂದು ನಾವೂ ಸಹಾ ನೆಮ್ಮದಿಯಾಗಿ ಮರದ ನೆರಳಿನಲ್ಲಿಯೇ ಕಾಲ ಕಳೆಯುತ್ತಿದ್ದೆವು. ಈಗ ಬರುಬಹುದು, ಆಗ ಬರಬಹುದು ಎಂದು ನಮ್ಮ ಬರುವಿಕೆಯನ್ನೇ ಎದುರು ನೋಡುತ್ತಿದ್ದಳು ಆಕೆ. ಎಷ್ಟು ಹೊತ್ತಾದರೂ ಭಂಡರು ನಾವು ಅತ್ತ ಕಡೆ ಸುಳಿಯಲಿಲ್ಲವಾದ್ದರಿಂದ ಬಿಸಿಲಿನ ಝಳವನ್ನು ತಡೆಯಲಾರದೆ ಆಕೆ ನಮ್ಮ ಡಬ್ಬಗಳನ್ನು ಅಲ್ಲಿಯೇ ಬಿಟ್ಟು ತನ್ನ ಡಬ್ಬವನ್ನು ನಮಗಿಂತ ಮುಂದಕ್ಕೆ ಇಟ್ಟುಕೊಂಡಿದ್ದನ್ನು ನೋಡಿದ ಕೂಡಲೇ ನಮಗೆ ಎಲ್ಲಿಲ್ಲದ ರೋಶ ಉಕ್ಕೇರಿತು
ಆ ಕೂಡಲೇ ನಾವೆಲ್ಲರೂ ಅಲ್ಲಿಗೆ ಧಾವಿಸಿ, ಆಕೆಯ ಡಬ್ಬವನ್ನು ಎತ್ತಿ ಹಿಡಿದು ನಮ್ಮ ಡಬ್ಬವನ್ನು ಮುಂದಕ್ಕೆ ಇಟ್ಟು ಆಕೆಯ ಡಬ್ಬವನ್ನು ಹಿಂದಕ್ಕೆ ಇಟ್ಟೆವು. ಹೇಳದೇ ಕೇಳದೆ ಗೂಳಿಗಳಂತೆ ನುಗ್ಗಿ ಆಕೆಯ ಅನುಮತಿ ಇಲ್ಲದೇ ಆಕೆಯ ಸೀಮೇ ಎಣ್ಣೆ ಡಬ್ಬವನ್ನು ನಾವುಗಳು ಮುಟ್ಟಿದ್ದು ಆಕೆಗೆ ಕೋಪವನ್ನು ತರಿಸಿತು. ಕೂಡಲೇ ರಣಚಂಡಿಯಂತೆ ನಮ್ಮ ಮೇಲೆ ಕೂಗಾಡ ತೊಡಗಿದಳು. ನಾವುಗಳು ಅಷ್ಟೇ ಜೋರಾಗಿ ಅವಳನ್ನು ಎದುರಿಸಲು ಹೋದೆವಾದರೂ ಅಕ್ಕ ಪಕ್ಕದವರೆಲ್ಲಾ ಹೆಣ್ಣೆಂಬ ಕಾರಣದಿಂದಾಗಿ ಅವಳ ನೆರವಿಗೇ ಬಂದ ಕಾರಣ ಅಂ… ಸುಟ್ಟ ಬೆಕ್ಕಿನಂತಾದೆವು ನಾವು. ಆಕೆಯ ಸರದಿ ಬಂದಾಗ ನಮಗಿಂತಲೂ ಮುಂದಾಗಿ 8 ಲೀ. ಸೀಮೇಎಣ್ಣೆ ತೆಗೆದುಕೊಂಡು ಪ್ರಪಂಚವನ್ನೇ ಗೆದ್ದೇ ಎನ್ನುವಂತೆ ಜಂಬದಿಂದ ವಯ್ಯಾರದಿಂದ ಜಡೆಯನ್ನು ಅತ್ತಿಂದಿತ್ತ ಅಲ್ಲಾಡಿಸಿಕೊಂಡು ನಮ್ಮ ಕಣ್ಣ ಮುಂದೆಯೇ ಹೋಗಿದ್ದು ನಮ್ಮ ಗಂಡಸು ತನಕ್ಕೆ ಆದ ಆವಮಾನ ಎಂದು ಭಾವಿಸಿದೆವಾದರೂ ಏನೂ ಮಾಡಲಾಗದೇ ಸುಮ್ಮನೆ ಒಟ್ಟಿಗೆ 24(8×3) ಲೀ. ಸೀಮೇ ಎಣ್ಣೆ ತೆಗೆದುಕೊಂಡು ನಮ್ಮ ಮನೆಗೆ ಬಂದೆವು.
ಆಡುಗೆಯವರು 35-40 ಲೀಟರ್ ಸೀಮೇಎಣ್ಣೆ ಬರೆದಿದ್ದಾರೆ ಈಗ 24ಲೀ. ಇದೆ ಉಳಿದದ್ದಕ್ಕೆ ಏನು ಮಾಡುವುದು ಎಂದು ನಮ್ಮ ಅಮ್ಮನಲ್ಲಿ ಕೇಳಿದಾಗ, ನೋಡೋಣ. ಇನ್ನೂ ಇಬ್ಬರು ಮೂವರಿಗೆ ಕಾರ್ಡ್ ಕೊಡಲು ಕೇಳಿದ್ದೇನೆ. ಸಿಗಬಹುದು ಎಂದರು. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ನಮ್ಮ ಮನೆಯ ಕಡೆ ದೂರದಲ್ಲಿ ಒಬ್ಬಳು ತಾಯಿ ಮತ್ತು ಮಗಳು ಕೈಯಲ್ಲಿ ಸೀಮೇಎಣ್ಣೆ ಹಿಡಿದುಕೊಂಡು ನಮ್ಮ ಮನೆಯ ಕಡೆಗೇ ಬರುತ್ತಿದ್ದದ್ದನ್ನು ನೋಡಿ. ಇದು ಯಾರಪ್ಪಾ ಎಂದು ಹಾಗೆಯೇ ಗಮನಿಸುತ್ತಿದ್ದಾಗ, ಸ್ವಲ್ಪ ಹತ್ತಿರ ಬಂದಾಗ ನೋಡಿದರೇ ನಮ್ಮೊಡನೆ ಕಾದಾಡಿ ಜಂಬದಿಂದ ಸೀಮೇ ಎಣ್ಣೆ ತೆಗೆದುಕೊಂಡು ಹೋಗಿದ್ದ ಹುಡುಗಿಯೇ ಅವಳಾಗಿರ ಬೇಕೇ? ಅಮ್ಮಾ ಮಗಳು ಅದೇನೋ ಜೋರು ಜೋರಾಗಿ ಮಾತಾನಾಡಿಕೊಂಡು ನಮ್ಮ ಮನೆಯತ್ತಲೇ ಬರುತ್ತಿರುವುದನ್ನು ನೋಡಿ ನಮ್ಮೆಲ್ಲರಿಗೂ ಗಾಭರಿಯಾಯಿತು. ಅವಳ ಜೊತೆ ಬರುತ್ತಿದ್ದವರು ನಮ್ಮ ತಾಯಿಯ ಸ್ನೇಹಿತೆಯಾಗಿದ್ದರು. ಅವರೇಕೆ ಇವಳ ಜೊತೆ ಬರುತ್ತಿದ್ದಾರೆ? ಏನೋ ಗ್ರಹಚಾರ ಕಾದಿದೆ ನಮಗೆ ಅನ್ನೋ ಭಯ ಶುರುವಾಯಿತು ನಮಗೆ.
ಈ ಹೆಂಗಸರು ಏನಪ್ಪಾ ಹೀಗೆ? ಅಷ್ಟು ಸಣ್ಣ ಜಗಳಕ್ಕೆಲ್ಲಾ ಮನೆಗೆ ಬಂದು ಬಿಡೋದಾ? ಎಂದು ಸುಮ್ಮನೆ ಅವರಿಗೆ ಕಾಣದಂತೆ ಗುಟ್ಟಾಗಿ ಮಹಡಿಯ ಮೇಲೆ ಓಡಿ ಹೋಗಿ ಅವರು ಏನು ಮಾತಾನಾಡುತ್ತಿದ್ದಾರೆ ಎಂದು ಗುಟ್ಟಾಗಿ ಕೇಳಿಸಿಕೊಳ್ಳಲು ಸಿದ್ಧವಾದೆವು. ಮಟ ಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅವರಿಬ್ಬರನ್ನು ನೋಡಿ ನಮ್ಮ ತಾಯಿಯವರು ಇದೇನ್ರೀ ಪಾರ್ವತಿ? ಇಷ್ಟು ಹೊತ್ತಿನಲ್ಲಿ ಅದೂ ಸೀಮೇಎಣ್ಣೆ ಡಬ್ಬಾ ಹಿಡಿದುಕೊಂಡು ಬಂದಿದ್ದೀರಾ? ಎಂದು ಕೇಳುತ್ತಾ, ಮನೆಯಲ್ಲಿ ಸೂತಕವಿದ್ದ ಕಾರಣ, ಮನೆಯ ಹೊರಗೆಯೇ ಛಾವಡಿಯ ನೆರಳಿನಲ್ಲಿಯೇ ಕೂರಿಸಿ ನೀರು ಕುಡಿಯೋದಕ್ಕೆ ಏನೂ ದೋಷ ಇಲ್ಲಾ ತಾನೇ ಎಂದು ವಿಚಾರಿಸಿದರು. ಅಯ್ಯೋ ಸಾವಿಲ್ಲದ ಮನೆಯಲ್ಲಿ ಸಾಸಿವೆ ಕಾಳು ತನ್ನಿ ಎನ್ನುವಂತೆ ಯಾರ ಮನೆಯಲ್ಲಿ ಸಾವಾಗುವುದಿಲ್ಲ. ಪರವಾಗಿಲ್ಲ. ನೀರು ಕೊಡಿ. ಹಾಗೆ ತಗೊಳ್ಳಿ ಈ 8 ಲೀ. ಸೀಮೇಎಣ್ಣೆ ಎಂದು ಡಬ್ಬವನ್ನು ನಮ್ಮ ಅಮ್ಮನವರ ಮುಂದೆ ಇಟ್ಟರು. ಇದೇನ್ರೀ ಕಾರ್ಡ್ ಕೇಳಿದ್ರೇ ಎಣ್ಣೇನೇ ಕೊಡ್ತಾ ಇದ್ದೀರಿ. ಕಾರ್ಡ್ ಕೊಟ್ಟಿದ್ರೇ ನಮ್ಮ ಮಗನನ್ನು ಕಳುಹಿಸಿ ನಾವೇ ತೆಗೆದುಕೊಳ್ತಾ ಇದ್ವಿ. ಸುಮ್ಮನೇ ನಿಮಗೆ ತೊಂದ್ರೇ ಕೊಟ್ಟ ಹಾಗಾಯ್ತು ಎಂದು ಮುಮ್ಮುಲ ಮರುಗಿದರು ನಮ್ಮಮ್ಮ. ಅಯ್ಯೋ ಅದ್ರಲ್ಲೇನೂ ತೊಂದ್ರೇ. ಹೇಗೋ ಮಗಳಿಗೆ ಇವತ್ತು ಕಾಲೇಜಿಗೆ ರಜೆ ಇತ್ತು ಹಾಗಾಗಿ ಅವಳೇ ಹೋಗಿ ಕ್ಯೂ ನಿಂತ್ಕೊಂಡ್ ಅದ್ಯಾರೋ ಹುಡುಗ್ರ ಜೊತೆ ಜಗಳ ಕಾಯ್ಕೊಂಡ್ ಸೀಮೇ ಎಣ್ಣೆ ತಂದಿದಾಳೆ ನೋಡಿ. ಅದೇನು ಹುಡುಗ್ರೋ? ಹೆಣ್ಣು ಮಕ್ಕಳು ಅಂತ ಸ್ವಲ್ಪನೂ ದಯೆ ದಾಕ್ಷಿಣ್ಯ ಇಲ್ಲದೇ ಕಾದಾಡ್ತಾರೆ ಅಂದ್ರು. ಅವರ ಮಾತುಗಳನ್ನು ಹೇಳಿ ನಮಗೆಲ್ಲರಿಗೂ ಮುಸಿ ಮುಸಿ ನಗು. ನಮ್ಮೊಂದಿಗೆ ಅಷ್ಟೆಲ್ಲಾ ರಂಪ ರಾಮಾಯಣ ಮಾಡಿ ನಮ್ಮುಂದೆ ಜಂಬದಿಂದ ತೆಗೆದುಕೊಂಡು ಹೋದ ಸೀಮೇಎಣ್ಣೆ ನಮ್ಮ ಮನೆಗೇ ಅದೂ ಅವಳೇ ತಂದು ಕೊಡ್ಬೇಕಾಯ್ತಲ್ಲಾ? ಅದಕ್ಕೇ ಹೇಳೋದು ಭಗವಂತ ಎಲ್ಲದರ ಮೇಲೂ ಹೆಸರು ಬರೆದು ಬಿಟ್ಟಿರ್ತಾನೆ. ಆ ವಸ್ತುಗಳ ಮೇಲೆ ಅವರ ಹೆಸರಿಲ್ಲದಿದ್ದರೇ ಎಷ್ಟೇ ಕಷ್ಟ ಪಟ್ರೂ ಅದನ್ನು ಅನುಭವಿಸುವುದಕ್ಕೆ ಆಗುವುದಿಲ್ಲ ಎಂದು, ಏನೋ ದೊಡ್ಡ ವೇದಾಂತಿಯಂತೆ ನಮ್ಮ ಅಣ್ಣಂದಿರ ಮುಂದೆ ಹೇಳಿದರೆ ಅವರೂ ಸಹಾ ಕೋಲೇ ಬಸವನಂತೆ ಹೂಂಗುಟ್ಟಿದರು.
ಅಷ್ಟರೊಳಗೆ ನಮ್ಮ ಅಕ್ಕ ಬಂದು ಇದೇನ್ರೋ? ಹೆಂಗಸರು ಮಾತಾಡ್ತಾ ಇರೋದನ್ನಾ ಕದ್ದು ಮುಚ್ಚಿ ಕೇಳ್ತಾ ಇದ್ದೀರಲ್ಲಾ ನಾಚ್ಕೆ ಆಗೋಲ್ವಾ ನಿಮ್ಗೆ ಎಂದು, ನಡೀರೀ ನಡೀರೀ ಎಂದು ಗದುರಿದಾಗ, ನಾವೆಲ್ಲರೂ ಸುಮ್ಮನೆ ತಲೆ ತಗ್ಗಿಸಿ ಹೊರಗೆ ಬಂದೆವು. ನಮ್ಮನ್ನು ನೋಡಿದ ಕೂಡಲೇ ಆಕೆಗೆ ಈವರ್ಯಾಕೆ ಇಲ್ಲಿದ್ದಾರೆ ಅಂತಾ ಆಶ್ವರ್ಯವಾಗಿ, ಅವರಮ್ಮನ ಕಡೆ ತಿರುಗಿ ಅದೇನೋ ಅವರ ಭಾಷೆಯಲ್ಲಿ ಅದೇನೋ ಹೇಳಿದಳು. ನಾನು ಇಂಗು ತಿಂದ ಮಂಗನಂತಾಗಿ, ಏನು ಮರಾಠಿ ಆಂಟಿ ಚೆನ್ನಾಗಿದ್ದಿರಾ ಎಂದೇ. ಅದಕ್ಕೇ ಅವರು ನಾನು ಚೆನ್ನಾಗಿದ್ದೀನಿ. ಯಾಕೆ ನೀನು ನಮ್ಮ ಮಗಳನ್ನು ನೋಡಿರ್ಲಿಲ್ವಾ ಎಂದು ಕೇಳಿದರು. ಇಲ್ಲಾ ಆಂಟಿ. ನಿಮ್ಮ ಮಗ ಗೊತ್ತು. ಆದ್ರೇ ಕಾಲೇಜಿಗೆ ಹೋಗಾ ಅಕ್ಕನ (ಅಕ್ಕ ಅಂತಾ ಹೇಳಿ ಅಪಾಯ ತಪ್ಪಿಸಿಕೊಳ್ಳುವ ಉಪಾಯ) ಪರಿಚಯ ಇರಲಿಲ್ಲಾ. ಅಕ್ಕಾ ಸಾರಿ. ಸೀಮೇಎಣ್ಣೆ ತೆಗೆದುಕೊಳ್ವಾಗ ನೀವೂ ಅಂತಾ ಗೊತ್ತಿಲ್ದೇ ಕಿತಾಡ್ಬಿಟ್ವೀ ಅಂದೇ. ಆಕೆಗೋ ಒಳಗೊಳಗೇ ಕೋಪ. ಅದ್ರೇ ನಾನು ಕಿಲಾಡಿ ತನದಿಂದ ಅಕ್ಕಾ ಎಂದು ಹೇಳಿ ತಪ್ಪಾಯ್ತು ಅಂತಾ ಬೇರೇ ಕೇಳಿದ್ದೀನಿ. ಸರಿ ಸರಿ ಅಂತಾ ಬಾಯಲ್ಲಿ ಹೇಳಿದ್ರೂ ಕಣ್ಣುಗಳು ಮಾತ್ರಾ ನಮ್ಮನ್ನು ಸುಟ್ಟು ಭಸ್ಮ ಮಾಡುವ ಹಾಗೇ ಇತ್ತು. ನಮ್ಮ ಅಣ್ಣಂದಿರಿಬ್ಬರೂ ಬದುಕಿದೆಯಾ ಬಡಜೀವ ಎಂಬಂತೆ ಸದ್ದಿಲ್ಲದೇ ಮನೆಯ ಹೊರಗೆ ಹೋಗಿಬಿಟ್ಟೆವು. ಅಂದಿನಿಂದ ಆಕೆಯ ನಿಜವಾದ ಹೆಸರಿಗಿಂತಲೂ ಸೀಮೇಎಣ್ಣೇ ಎಂದೇ ನಾವೆಲ್ಲರೂ ಹಾಸ್ಯ ಮಾಡುತ್ತಿದ್ದೇವು.
ಮೊನ್ನೆ ನಮ್ಮ ದೇವಾಸ್ಥಾನದ 25ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮತ್ತೆ ಮರಾಠಿ ಆಂಟಿಯನ್ನು ನೋಡಿದಾಗ, ಅಗಲಿದ ನಮ್ಮ ತಾಯಿಯವರ ನೆನಪಾಗಿ ಗಂಟಲು ಗದ್ಗತವಾಯಿತು ಮತ್ತು ಕಣ್ಣಿನಲ್ಲಿ ನೀರು ಫಳ ಫಳನೇ ಜಾರಿಬಂತು ಅದನ್ನೆಲ್ಲಾ ಸಾವರಿಸಿಕೊಳ್ಳುತ್ತಾ ಮೆಲ್ಲಗೇ ಹೇಗಿದ್ದೀರೀ ಆಂಟಿ. ಮನೆಯವರೆಲ್ಲಾ ಹೇಗಿದ್ದಾರೆ ಎಂದೇ? ಏ ನಾವೆಲ್ಲಾ ಚೆನ್ನಾಗಿದ್ದೇವೆ. ಇಲ್ನೋಡೋ ಸೀಮೇಎಣ್ಣೆ ಬಂದಿದ್ದಾಳೆ ಅಂತಾ ಅವರ ಮಗಳನ್ನು ಕರೆದು ತೋರಿಸಿದರು. ಸುಮಾರು ಹದಿನೈದು ಇಪ್ಪತ್ತು ವರ್ಷಗಳ ನಂತರ ಆಕೆಯನ್ನು ನೋಡಿ ಇಬ್ಬರೂ ಅಂದಿನ ನಮ್ಮ ಪೆದ್ದು ತನದ ಸೀಮೇಎಣ್ಣೆಯ ಪ್ರಸಂಗವನ್ನು ನೆನಪಿಸಿಕೊಂಡು ಗಟ್ಟಿಯಾಗಿ ನಕ್ಕು ಬಿಟ್ಟೆವು.
ನೆರೆ ಹೊರೆ ಅಂದಿನ ಕಾಲದಲ್ಲಿ ಎಷ್ಟು ಚೆನ್ನಾಗಿತ್ತಲ್ವಾ? ಸೀಮೇ ಎಣ್ಣೆ ಕಾರ್ಡ್ ಕೇಳಿದ್ರೇ ಸೀಮೇ ಎಣ್ಣೇನೇ ತಂದು ಕೊಡುವವರು. ಈಗ ನೋಡಿ, ಕುಡಿಯಲು ನೀರು ಕೇಳಿದ್ರೇ ಅಂಗಡಿಯಲ್ಲಿ ಕೊಂಡು ಕುಡೀರಿ ಅಂತಾ ಹೇಳುವವರೇ ಹೆಚ್ಚಾಗಿದ್ದಾರೆ. ಕಾಲಾ ಕೆಟ್ಟು ಹೋಗಿದೆ ಅಂತಾರೆ ಅದು ನಿಜಾನಾ?
ಏನಂತೀರೀ?
Superb
LikeLike
ಆಹ ಸುಂದರವಾದ ಪ್ರಸಂಗ
LikeLike