ಪರಿಶಿಂಚನೆ ಮತ್ತು ಚಿತ್ರಾವತಿ

ನಾವೆಲ್ಲಾ ಪ್ರತೀಬಾರಿ ಊಟ ಮಾಡುವುದಕ್ಕಿಂತ ಮುನ್ನ ನೀರಿನಿಂದ ಪರಿಶಿಂಚನೆ ಮಾಡಿ ನಾಲ್ಕು ಅಗುಳು ಅನ್ನವನ್ನು ತೆಗೆದು ಕೊಂಡು ಎಲೆಯ ಬಲೆಗಡೆಯಲ್ಲಿ ಇಟ್ಟು ನಂತರ ಮತ್ತೊಮ್ಮೆ ಅನ್ನವನ್ನು ತೆಗೆದುಕೊಂಡು ಆರು ಬಾರಿ ಹಲ್ಲಿಗೆ ತಾಕದಂತೆ ತಿಂದು ತಾಯಿ ಅನ್ನಪೂರ್ಣೆಗೆ ನಮಿಸಿ ಊಟವನ್ನು ಮುಂದುವರೆಸುತ್ತೇವೆ. ಆದರೆ ಬಹುತೇಕರಿಗೆ ಭೋಜನವಿಧಿ ಮತ್ತದರ ಅರ್ಥವೇ ಗೊತ್ತಿಲ್ಲದೇ ಸುಮ್ಮನೇ ಯಾಂತ್ರೀಕೃತವಾಗಿ ಮಾಡುತ್ತಿರುತ್ತಾರೆ. ಆದ ಕಾರಣ ಚಿತ್ರಾವತಿ ಎಂದರೆ ಏನು? ಅದರ ಹಿಂದಿರುವ ವೈಜ್ಞಾನಿಕ ಕಾರಣವೇನು? ಚಿತ್ರಾವತಿ ಹೇಗೆ ಇಡಬೇಕು? ಮತ್ತು ಚಿತ್ರಾವತಿ ಇಡುವಾಗ ಯಾವ ಮಂತ್ರಗಳನ್ನು ಜಪಿಸಬೇಕು ?ಎಷ್ಟು ಬಾರಿ ಬಲಿಯನ್ನು ಹಾಕಬೇಕು? ಎಂಬುದನ್ನು ತಿಳಿಸುವ ಪ್ರಯತ್ನವೇ ಈ ಲೇಖನ.

chitravati

ಪ್ರತೀ ಬಾರಿ ಊಟ ಮಾಡುವ ಮೊದಲು ಲೋಕದ ನಿಯಮವನ್ನು ಕಾಪಾಡುವ ಯಮನ ನೆಚ್ಚಿನ ಭಂಟನಾದ ಚಿತ್ರಗುಪ್ತರನ್ನು ನೆನೆಸಿಕೊಂಡು ಚಿತ್ರಾವತಿ ಇಡುವುದು ಧಾರ್ಮಿಕವಾಗಿ ನಡೆದು ಬಂದಿರುವ ಪದ್ದತಿಯಾಗಿದೆ. ಇನ್ನು ವೈಜ್ಞಾನಿಕವಾಗಿ ನೋಡಿದಲ್ಲಿ ಅಂದಿನ ಕಾಲದಲ್ಲಿ ಬಹುತೇಕ ಮನೆಗಳು ಸಗಣಿ ಸಾರಿಸಿದ ಮನೆಗಳಾಗಿದ್ದು ಎಲ್ಲರೂ ನೆಲದ ಮೇಲೆಯೇ ಕುಳಿತು‌ ಬಾಳೆ ಎಲೆಯೋ ಇಲ್ಲವೇ ಮುತ್ತುಗದ ಎಲೆಗಳನ್ನು ಊಟಕ್ಕೆ ಬಳೆಸುತ್ತಿದ್ದದ್ದು ಸಹಜ ಪ್ರಕ್ರಿಯೆಯಾಗಿರುತ್ತಿತ್ತು. ಹಾಗೆ ಸಗಣಿ ‌ಸಾರಿಸಿದ ನೆಲದ ಮೇಲೆ‌ ಎಲೆಯ ಮೇಲೆ ಊಟ ಮಾಡುವ ಸಂದರ್ಭದಲ್ಲಿ ಯಾವುದೇ ಕ್ರಿಮಿಕೀಟಗಳು ನಮ್ಮ ಎಲೆಗಳಿಗೆ ಬಾರದಿರಲೆಂದು ಎಲೆಯ ಸುತ್ತಲೂ ನೀರಿನ ಕಟ್ಟೆ ಕಟ್ಟಿ, ಆ ನೀರಿನ ಮೂಲೆಯಲ್ಲೇ ಹಾದು ಹೋಗುವ ಕ್ರಿಮಿ ಕೀಟಗಳು ಎಲೆಯ ಬಲಬಾಗದಲ್ಲಿ ಇಟ್ಟ ಚಿತ್ರಾವತಿಗೆ ಆಕರ್ಷಿತವಾಗಿ‌ ಅಲ್ಲಿಟ್ಟ ಅನ್ನದ ಅಗುಳನ್ನು ತಿನ್ನುತ್ತಾ ಎಲೆಗಳ ಮೇಲೆ ಬಾರದಿರಲಿ ಎನ್ನುವುದಾಗಿರುತ್ತಿತ್ತು. ಕ್ರಿಮಿಕೀಟಗಳು ಇಂದಿನ ಮನುಷ್ಯರಂತೆ ದುರಾಸೆ ಇಲ್ಲದೇ ಪಾಲಿಗೆ ಸಿಕ್ಕಿದ್ದು ಪಂಚಾಂಮೃತ ಎನ್ನುವಂತೆ ಸಿಕ್ಕ ಅನ್ನದ ಅಗುಳನ್ನು ತಿನ್ನುವುದರಲ್ಲೇ ಮಗ್ನವಾಗಿ ಎಲೆಯತ್ತ ಹರಿಸುತ್ತಿರಲಿಲ್ಲ ಅವುಗಳ ಚಿತ್ತ.

ಅದಕ್ಕಾಗಿಯೇ ಊಟದ ಟೇಬಲ್ ಮೇಲೆ ಕುಳಿತಾಗ ಚಿತ್ರಾವತಿ ಇಡುವ ಅವಶ್ಯಕತೆಯೇ ಇರುವುದಿಲ್ಲ. ಇದನ್ನೇ ನೆಪವಾಗಿಟ್ಟು ಕೊಂಡು ಅನೇಕ ಬುದ್ದಿವಂತರು ಯಾವ ಸಮಯದಲ್ಲೂ ಪರಿಶಂಚನೆಯನ್ನೇ ಮಾಡದೇ ನೇರವಾಗಿ ಊಟಕ್ಕೆ ಕೈಹಾಕುವ ಪದ್ದತಿ ಆರಂಭಿಸಿರುವುದು ತುಸು ಕಸಿವಿಸಿಯ ಸಂಗತಿಯಾಗಿದೆ.

ಎಲೆ ಅಥವಾ ತಟ್ಟೆಯನ್ನು ಬಡಿಸಿ ಅದಕ್ಕೆ ಅಂದು ಮಾಡಿದ ಅಡುಗೆಯನ್ನೆಲ್ಲಾ ಬಡಿಸಿ ತೊವ್ವೆ ಹಾಗಿ ತುಪ್ಪದ ಅಭಿಗಾರವಾದ ಮೇಲೆ

ಅನ್ನಪೂರ್ಣೆಯ ಸ್ವರೂಪವಾದ ಬಡಿಸಿರುವ ಬಾಳೆಎಲೆ/ ತಟ್ಟೆಗೆ ಎರಡೂ ಕೈಗಳಿಂದ ಮನಃಪೂರ್ವಕವಾಗಿ ನಮಸ್ಕಾರ ಮಾಡಿ….‌

ಉದ್ದರಣೆಯಿಂದ ನೀರನ್ನು ಬಲ ಅಂಗೈಯ್ಯಿಗೆ ಹಾಕಿ ಕೊಂಡು,
ಓಂ ಭೂರ್ಭುವಸ್ಸುವಃ || ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
ಇತಿ ಪ್ರೋಕ್ಷ್ಯ|| ಈ ಮಂತ್ರ ಹೇಳಿ ಅನ್ನಕ್ಕೆ ನೀರನ್ನು ಪ್ರೋಕ್ಷಣೆ ( ಚಿಮುಕಿಸುವುದು) ಮಾಡಬೇಕು.

ಮತ್ತೊಮ್ಮೆ ಉದ್ದರಣೆಯಿಂದ ನೀರನ್ನು ಬಲ ಅಂಗೈಯ್ಯಿಗೆ ಹಾಕಿ ಕೊಂಡು,
ಸತ್ಯಂತ ವರ್ತೇನ ಪರಿಷಿಂಚಾಮಿ || ( ) ಇತಿ ಜಲೇನ ಪ್ರದಕ್ಷಿಣಂ ಪರಿಷಿಚ್ಯ|| ಈ ಮಂತ್ರ ಹೇಳುತ್ತಾ

ಕೈಯಲ್ಲಿದ್ದ ನೀರನ್ನು ಬಾಳೆ ಎಲೆ/ತಟ್ಟೆಯನ್ನು ಬಲಡೆಯಿಂದ, ಎಡಗಡೆಗೆ ಪ್ರದಕ್ಷಿಣವಾಗಿ ನೀರನ್ನು ಒಡ್ಡಿನ ರೂಪದಲ್ಲಿ ಹಾಕಿ,

ಉಳಿದ ನೀರಿನಿಂದ ಬಾಳೆ ಎಲೆ/ತಟ್ಟೆಯ ಬಲ ಭಾಗದಲ್ಲಿ ಗೆರೆ ಎಳೆಯ ಬೇಕು.

ಆನಂತರ ತುಪ್ಪ ಹಾಕಿದ್ದ ನಾಲ್ಕು ಅಗುಳು ಅನ್ನದ ಭಾಗವನ್ನು ತೆಗೆದುಕೊಂಡು,

ಓಂ ಚಿತ್ರಾಯ ನಮಃ | ಓಂ ಚಿತ್ರ ಗುಪ್ತಾಯ ನಮಃ| ಓಂ ಯಮಾಯ ನಮಃ | ಓಂ ಯಮಧರ್ಮಾನಮಃ ಎಂದು ಹೇಳುತ್ತಾ ತಟ್ಟೆಯ ಬಲ ಭಾಗದಲ್ಲಿ ನೀರಿನ ಗೆರೆಯಮೇಲೆ ಒಂದೊಂದೇ ಅಗುಳನ್ನು ಸಾಲಾಗಿ ಮೇಲಿನಿಂದ ಕೆಳಗೆ ಬರುವಂತೆ ಇಡಬೇಕು . ಈ ಪ್ರಕ್ರಿಯೆಯನ್ನು ಅನ್ನದ ಅಗುಳಿನ ಬಲಿ ಇಡುವುದು ಎನ್ನುತ್ತಾರೆ.

ನಂತರ ಪುನಃ ಬಲಗೈಯಲ್ಲಿ ನೀರು ಹಾಕಿಕೊಂಡು
ಅಹಂವೈಶ್ವಾನರೋಭೂತ್ವಾ ಪ್ರಾಣೀನಾಂ ದೇಹಮಾಶ್ರಿತಃ | ಎಂದು ಹೇಳುತ್ತಾ ಆ ನೀರನ್ನು ಸೇವಿಸಬೇಕು.

ಪ್ರಾಣಾಪಾನ ಸಮಾಯುಕ್ತಂ ಪಚಾಮ್ಯನ್ನಮ್ ಚತುರ್ವಿದಂ … ಅಮೃತಮಸ್ತು ಅಮೃತೋಪಸ್ತರಣಮಸಿ ಸ್ವಾಹಾ ಎಂದು ಬಲಗೈಯಲ್ಲಿ ಹಿಡಿದ ನೀರನ್ನು ಪುನಃ ಆಪೋಷಣ ಮಾಡಿದ ನಂತರ ಆ ನೀರನ್ನು ಎಲೆಯ ಬಲಗಡೆಯಲ್ಲಿಟ್ಟ ಬಲಿಯ ಮೇಲೆ ಬಿಟ್ಟು ಎಲ್ಲಾ ನಾಲ್ಕೂ ಬಲಿಗಳನ್ನು ಒಟ್ಟಿಗೆ ಸೇರಿಸು ನಂತರ, ಕೈ ತೊಳೆದುಕೊಳ್ಳಬೇಕು

ಪುನಃ ತುಪ್ಪ ಹಾಕಿದ ಅನ್ನದ ಅಗುಳನ್ನು ಬಲಗೈ ಬೆರಳಿನಿಂದ ತೆಗೆದುಕೊಂಡು, ಎಡಗೈಯಿಯ ಅನಾಮಿಕ ಬೆರಳಿನಿಂದ ಬಾಳೆಎಲೆಯ ಎಡಗಡೆ ಒತ್ತಿ ಹಿಡಿದುಕೊಂಡು

ಓಂ ಪ್ರಾಣಾಯ ಸ್ವಾಹಾ | ಓಂ ಅಪಾನಯ ಸ್ವಾಹಾ| ಓಂ ವ್ಯಾನಾಯ ಸ್ವಾಹಾ| ಓಂ ಉದಾನಾಯ ಸ್ವಾಹಾ | ಓಂ ಸಮಾನಯ ಸ್ವಾಹಾ | ಓಂ ಬ್ರಹ್ಮಣೇ ಸ್ವಾಹಾ || ಇತಿ ಷಡ್ವಾರಂ ಪ್ರಾಣಾಹುತಿಂ ಮಖೇ ಜುಹುಯಾತ್ ||

ಎಂದು ಆರು ಬಾರಿ ಅನ್ನದ ಅಗುಳನ್ನು (ಜಠರಾಗ್ನಿಗೆ ಬಲಿಯಾಗಿ ) ಸ್ವೀಕರಿಸಬೇಕು.
ಹೀಗೆ ತುತ್ತನ್ನು ಸ್ವೀಕರಿಸಿದ ನಂತರ ಎಲೆಯನ್ನು ಒತ್ತಿ ಹಿಡಿದಿದ್ದ ಬೆರಳಿಗೆ ನೀರಿನಿಂದ ತೊಳೆದು ಕಣ್ಣಿಗೆ ಒತ್ತಿಕೊಂಡು ಮಾತನಾದದೇ ಮೌನವಾಗಿ ಊಟವನ್ನು ಮುಂದುವರಿಸಬೇಕು.

ಊಟವಾದ ನಂತರ ಪುನಃ ಬಲಗೈಯಲ್ಲಿ ಸ್ವಲ್ಪ ನೀರನ್ನು ತೆಗೆದು ಕೊಂಡು ಶೇಷವಾಗಿ ಉಳಿದಿದ್ದ ಉಪ್ಪಿನ ಮೇಲೆ ಹಾಕಿ ಉಪ್ಪು ಸಂಪೂರ್ಣವಾಗಿ ನೀರಿನಲ್ಲಿ ಕರಗುವಂತೆ ಮಾಡಬೇಕು. ಈ ರೀತಿ ಮಾಡುವುದನ್ನು ಉಪ್ಪಿನ ಋಣ ತೀರಿಸುವುದು ಎನ್ನುತ್ತಾರೆ.

ಆದಾದ ನಂತರ ಮತ್ತೊಮ್ಮೆ ಬಲಗೈಯ್ಯಿಗೆ ನೀರನ್ನು ಹಾಕಿಕೊಂಡು

ಅಮೃತಾ ಪಿ ಧಾನಮಸಿ ಸ್ವಾಹಾ|ಅಂತ ಹೇಳುತ್ತಾ ಆಪೋಶನ ಮಾಡಿ,

ಬಲಗೈಯ್ಯಿನ ನಾಲ್ಕು ಬೆರಳುಗಳನ್ನು ಎಲೆ/ತಟ್ಟೆಯ ಬಲಭಾಗದ ನೆಲಕ್ಕೆ ಊರಿಕೊಂಡು ಅನ್ನ ದಾತಾ ಸುಖಿ ಭವ ಎಂದು ಅನ್ನ ಹಾಕಿದವರು ಸುಖವಾಗಿರಲಿ ಎಂದು ಹಾರೈಸಬೇಕು. ಇಲ್ಲಿ ಅನ್ನಾ ಹಾಕಿದವರು ಎಂದರೆ ಊಟವನ್ನು ಬಡಿಸಿದವರು ಮತ್ತು ಅಡುಗೆಯನ್ನು ಮಾಡಿಸದ ಮನೆಯವರು ಎನ್ನುವುದಕ್ಕಿಂತಲೂ ನಮ್ಮ ಹಸಿದ ಹೊಟ್ಟೆಯನ್ನು ತುಂಬಲು ದವಸ ಧಾನ್ಯಗಳನ್ನು ಬೆಳೆದ ರೈತರು ಚೆನ್ನಾಗಿರಲಿ ಎಂದು ಹಾರೈಸುತ್ತಾ ನಿಧಾನವಾಗಿ ಎದ್ದು ನೀರಿನ ಮನೆಗೆ ಹೋಗಿ ಚೆನ್ನಾಗಿ ಎರಡೂ ಕೈಗಳನ್ನು ತೊಳೆದುಕೊಂಡು ಆನಂತರ ಕಾಲುಗಳನ್ನೂ ತೊಳೆದುಕೊಂಡು,

ಊಟ ಮಾಡಿದ ಹೊಟ್ಟೆಯನ್ನು ನಿಧಾನವಾಗಿ ಸಾವರಿಸುತ್ತಾ ,

ಅಗಸ್ತ್ಯಂ ಕುಂಭಕರ್ಣಂ ಚ ಶನಿಂ ಚ ವಡವಾನಲಂ | ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಂ || ಇತಿ ಜಪೇತ್|| ಎಂದು ಹೇಳುವ ಮುಖಾಂತರ ಊಟದ ಯಜ್ಞ ಮುಗಿಸಬೇಕು.

ಅಂದೆಲ್ಲಾ ಮನೆಗಳ ಮುಂದೆ ಇಡುತ್ತಿದ್ದ ರಂಗೋಲಿಗಳೂ ಕೂಡಾ ಅಕ್ಕಿ ಹಿಟ್ಟಿನದ್ದಾಗಿದ್ದು ಕ್ರಿಮಿಕೀಟಗಳಿಗೆ ಆಹಾರ ರೂಪದಲ್ಲಿರುತ್ತಿದ್ದವು ಇದರಿಂದ ಆ ಅಕ್ಕಿ ಹಿಟ್ಟನ್ನು ಮನೆಯ ಹೊರಗೇ ಕ್ರಿಮಿಕೀಟಗಳು ತಿನ್ನುವುದರಲ್ಲೇ ಮಗ್ನವಾಗಿ ಅವುಗಳು ಮನೆಯ ಒಳಗೆ ಪ್ರವೇಶಿಸುತ್ತಿರಲಿಲ್ಲ‌

ಹಾಗೆಯೇ ಎಲ್ಲರ ಮನೆಗಳ ಮುಂದೆ ಕಟ್ಟುವ ಮಾವಿನ ಎಲೆಗಳ ತೋರಣಗಳೂ ಕೂಡ ಕ್ರಿಮಿಕೀಟಗಳನ್ನು ತಡೆಗಟ್ಟಲು ಇರುವ ಸಾಧನವೇ ಆಗಿದೆ.

ಒಟ್ಟಿನಲ್ಲಿ ನಮ್ಮ ಪೂರ್ವಜರ ಪ್ರತಿಯೊಂದು ಪದ್ದತಿಗಳ ಹಿಂದೆಯೂ ಧಾರ್ಮಿಕ ಆಚರಣೆಯ ರೂಪದಲ್ಲಿ ಒಂದಲ್ಲಾ ಒಂದು ರೀತಿಯ ವೈಜ್ಞಾನಿಕ ಕಾರಣ ಇದ್ದೇ ಇರುತ್ತಿದ್ದವು. ಆದರೆ ನಾವಿಂದು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಆಗದೇ ಅದನ್ನು ಬಿಡಲಾಗದೇ ವಿಲ ವಿಲ ಪರದಾಡುತ್ತಿರುವುದಂತೂ ವಿಪರ್ಯಾಸವೇ ಸರಿ.

ಏನಂತೀರೀ?

ಮಂತ್ರಗಳು ಮತ್ತು ಚಿತ್ರ ವಾಟ್ಯಾಪ್ ಕೃಪೆ

10 thoughts on “ಪರಿಶಿಂಚನೆ ಮತ್ತು ಚಿತ್ರಾವತಿ

 1. ಧನ್ಯವಾದಗಳು ತಮಗೆ, ಈ ಲೇಖನವನ್ನು ಓದಿ ನಮ್ಮ ಸಂಪ್ರದಾಯವನ್ನು ಗೌರವಿಸಿ ಅದನ್ನು ಪಾಲಿಸಿದರೆ ಒಳಿತು.

  Like

 2. ಗೊತ್ತಿಲ್ಲದವರು ತಿಳಿದುಕೊಳ್ಳಲು ತುಂಬಾ ಉಪಯುಕ್ತ. ಧನ್ಯವಾದಗಳು ಶ್ರೀಕಂಠ💐👍

  Like

  1. ಹೌದು ಚಿತ್ರ+ಆಹುತಿ-> ಚಿತ್ರಾಹುತಿ ಚಿತ್ರಗುಪ್ತರಿಗೆ ಆಹುತಿ ಕೊಡುವುದು ಎನ್ನುವುದು ಸರಿಯಾದ ಪದವಾದರೂ ಆಡುಭಾಷೆಯಲ್ಲಿ ಅದನ್ನು ಚಿತ್ರಾವತಿ ಎಂದೇ ಕರೆಯಲಾಗುತ್ತದೆ

   Liked by 1 person

 3. TUMBAANE OLLEYA MAAHITI. DHANYAVADAGALU.
  HEEGE,, DINANITHYADA POOJE,, KANISHTAA ANDARE HEGE, YAAVA MANTRAGALU, AACHARANEGALINDAA MAADABEKENDU TILISIKODI,,
  ELLARIGOO UPAYUKTHAVAAGUTTE.
  AANANTARA,, NITHYA,, SANDHYAVANDANEN,, TILISI.

  Like

 4. ಅಮೂಲ್ಯವಾದ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ
  ಧನ್ಯವಾದಗಳು …

  Liked by 1 person

 5. ಮೇಲಿಂದ ಕೆಳಕ್ಕೆನೇ ಇಡುವ ಉದ್ದೇಶ ಏನು? ಕುಹಕ ಅಲ್ಲ ಇದು ನನ್ನ ಧರ್ಮ ಸಂದೇಹ. ದಯವಿಟ್ಟು ತಿಳಿಸಿಕೊಡಿ.

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s