ಏಪ್ರಿಲ್ 13, 1919 ಭಾನುವಾರ ಅಂದರೆ ಇಂದಿಗೆ ಸರಿಯಾಗಿ 103 ವರ್ಷಗಳ ಹಿಂದೆ ಬೈಶಾಖೀ ಹಬ್ಬದ ದಿನ. ಸೌರಮಾನ ಪಂಚಾಂಗದ ಪ್ರಕಾರ ಹೊಸ ವರುಷದ ದಿನ ಅದರಲ್ಲೂ ಪಂಜಾಬಿನ ಸಿಖ್ಖರಿಗೆ ತುಂಬಾ ವಿಶೇಷವಾದ ಹಬ್ಬ. ಎಲ್ಲರೂ ಒಟ್ಟಿಗೆ ಸಂಭ್ರಮಿಸಿಸುವ ಹಬ್ಬ ಅದೇ ಸಮಯದಲ್ಲಿ ದೇಶಾದ್ಯಂತ ಸ್ವಾತತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿತ್ತು. ದೇಶಾದ್ಯಂತ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಸ್ಥಳೀಯ ಮುಖಂಡರುಗಳ ನೇತೃತ್ವದಲ್ಲಿ ತಮಗೆ ತೋಚಿದಂತೆ ಬ್ರಿಟಿಷರ ವಿರುದ್ಧ ಹೋರಾಟಗಳನ್ನು ನಡೆಸುತ್ತಿದ್ದರು. ಬ್ರಿಟೀಷರೂ ಸಹಾ ಅಂತಹ ಹೋರಾಟಗಾರರನ್ನು ಹತ್ತಿಕ್ಕುವುದಲ್ಲಿ ಬಹಳ ಕ್ರೂರಿಗಳಾಗಿದ್ದರು. ಅದೇ ರೀತಿ ಇಬ್ಬರು ರಾಷ್ಟ್ರೀಯ ನಾಯಕರಾದ ಸತ್ಯಪಾಲ್ ಮತ್ತು ಸೈಫುದ್ದೀನ್ ಕಿಚ್‌ಲೆವ್ ಅವರನ್ನು ಅಂದಿನ ಬ್ರಿಟಿಷ್ ಸರ್ಕಾರ ಬಂಧಿಸಿ ಗಡೀಪಾರು ಮಾಡಿದ್ದರು. ಇದು ಸಹಜವಾಗಿ ಪಂಜಾಬಿಗಳನ್ನು ಕೆರಳಿಸಿತ್ತಾದರೂ, ಅದಕ್ಕಾಗಿ ಹಬ್ಬದ ದಿನ ಸುತ್ತ ಮುತ್ತಲಿನ ಗ್ರಾಮಸ್ಥರು ಜಲಿಯನ್ ವಾಲಾ ಭಾಗ್ ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು.
ಇಂತಹ ಪ್ರತಿಭಟನೆಗಳು ನಡೆಯಬಹುದೆಂದು ಅದಾಗಲೇ ಅನುಮಾನಿಸಿದಿದ್ದ ಬ್ರಿಟಿಷ್ ಸರ್ಕಾರ ಆ ದಿನದಂದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಭೆ ಸಮಾರಂಭ ನಡೆಸಬಾರದು ಎಂಬ ಸುತ್ತೋಲೆಯನ್ನು ಹೊರಡಿಸಿತ್ತಾದರೂ, ಒಂದು ಕಡೆ ರಾಷ್ಟ್ರೀಯ ನಾಯಕರ ಗಡಿಪಾರು ದುಖಃ ಮತ್ತೊಂದು ಕಡೆ ಬೈಸಾಖೀ ಹಬ್ಬದ ಸಂಭ್ರಮದಲ್ಲಿದ್ದ ಬಹುತೇಕ ಸ್ಥಳೀಯರಿಗೆ ಈ ಸುತ್ತೋಲೆ ಜಾರಿಯಾದದ್ದು ಗೊತ್ತೇ ಇರಲಿಲ್ಲ.
ಪೂರ್ವ ನಿರ್ಧಾರದಂತೆ ಸುಮಾರು ಆರೇಳು ಎಕರೆ ವಿಶಾಲವಾದ ಸುತ್ತಲೂ ಎತ್ತರವಾದ ಗೋಡೆಗಳಿಂದ ಆವೃತವಾಗಿದ್ದ ಕೇವಲ ಒಂದೇ ಒಂದು ಮುಖ್ಯ ದ್ವಾರದ ಮೂಲಕ ಪ್ರವೇಶ ಮಾಡಬಹುತಾಗಿತ್ತಾ ಜಲಿಯನ್ ವಾಲಾ ಉದ್ಯಾನವನದಲ್ಲಿ ಆ ದಿನ ಹೊಸಾವರ್ಷದ ಸಂಭ್ರಮ ಮತ್ತು ಶಾಂತಿಯುತ ಪ್ರತಿಭಟನೆಯನ್ನಾಚರಿಸಲು ಗಂಡಸರು, ಹೆಂಗಸರು, ಮಕ್ಕಳಾದಿಯಾಗಿ ಸರಿ ಸುಮಾರು ಹತ್ತು ಹದಿನೈದು ಸಾವಿರ ಜನ ಸೇರಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಅಲ್ಲೊಂದು ಕಂಡೂ ಕೇಳರಿಯದ ಘನ ಘೋರ ಇತಿಹಾಸಕ್ಕೆ ತಾವೇ ಸಾಕ್ಷಿಗಳಾಗುತ್ತೇವೆ ಇಲ್ಲವೇ ಇತಿಹಾಸದ ಭಾಗ ವಾಗುತ್ತೇವೆ ಎಂಬ ಸಣ್ಣ ಕುರುಹೂ ಯಾರಿಗೂ ಇರಲಿಲ್ಲ .
ತಮ್ಮ ಆದೇಶವನ್ನೂ ಧಿಕ್ಕರಿ ಸುಮಾರು ಹತ್ತು ಹದಿನೈದು ಸಾವಿರ ಜನರು ಪ್ರತಿಭಟನೆಗೆ ಜಲಿಯನ್ ವಾಲಾ ಭಾಗ್ ನಲ್ಲಿ ಸೇರಿರುವ ವಿಷಯ ಬ್ರಿಟಿಷ್ ಸೈನ್ಯಾಧಿಕಾರಿ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಕಿವಿಗೆ ಬಿದ್ದ ತಕ್ಷಣವೇ, ಆತ ಕೆಂಡಾಮಂಡಲನಾಗಿ ಹೋದ. ಭಾರತೀಯರಿಗೆ ತಕ್ಕ ಪಾಠ ಕಲಿಸಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದ ಜನರಲ್ ಡೈಯರ್ ಸುಮಾರು ಐವತ್ತು ಮಂದಿ ಬಂಧೂಕುಧಾರೀ ಸೈನಿಕರನ್ನು ಕರೆದುಕೊಂಡು ಹೋಗಿ ಜಲಿಯನ್ ವಾಲಾ ಭಾಗ್ ಪ್ರವೇಶ ದ್ವಾರದ ಬಳಿ ನಿಲ್ಲಿಸಿ ಏಕಾ ಏಕಿ ಫೈಯರ್ ಎಂಬ ಆಜ್ಞೆಯನ್ನು ನೀಡಿಯೇ ಬಿಟ್ಟ. ಜನರಲ್ ಡೈಯರ್ ಆಜ್ಞೆಗೇ ಕಾಯುತ್ತಿದ್ದ ಆ ಸೈನಿಕರು ಆ ಮುಗ್ಧ ಜನರ ಮೇಲೆ ಯದ್ವಾ ತದ್ವಾ ಗುಂಡು ಹಾರಿಸಿಯೇ ಬಿಟ್ಟರು. ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಒಂದು ಕಡೆ ಗುಂಡಿನ ಭೋರ್ಗರೆಯುವ ಸದ್ದಾದರೇ, ಮತ್ತೊಂದು ಕಡೆ ಗುಂಡು ತಗುಲಿ ಪ್ರಾಣ ಬಿಡುತ್ತಿದ್ದವರ ನರಳಾಟ ಚೀರಾಟ. ಇನ್ನು ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಾಡುವವರ ಕಾಲ್ತುಳಿಕ್ಕೆ ಸಿಕ್ಕ ಮಕ್ಕಳ ಆಕ್ರಂದನ ಕೇಳಲಾಗುತ್ತಿಲ್ಲವಾದರೇ, ಇನ್ನೊಂದು ಆ ಉದ್ಯಾನವನಾಲ್ಲಿದ್ದ ದೊಡ್ಡದಾದ ಭಾವಿಗೆ ಧುಮುಕುತ್ತಿದ್ದವರ ಸದ್ದು ಒಟ್ಟಿನಲ್ಲಿ ಜನರಲ್ ಡೈಯರ್ ಎಂಬ ಕ್ರೂರಿ, ರಕ್ತಪಿಪಾಸು, ಮನುಷ್ಯತ್ವವೇ ಇಲ್ಲದ ಒಬ್ಬ ಬ್ರಿಟಿಷ್ ಅಧಿಕಾರಿಯ ಅಮಾನವೀಯ ಕ್ರೌರ್ಯಕ್ಕೆ ಕೆಲವೇ ಕೆಲವು ನಿಮಿಷಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 400 ಜನರು ಬಲಿಯಾದರೆ, 1,000 ಕ್ಕೂ ಹೆಚ್ಚು ಜನರು ಗಾಯಗೊಂಡು ಇಡೀ ಭಾರತವೇಕೆ ವಿಶ್ವವನ್ನೇ ಆ ಸಮಯದಲ್ಲಿ ತಲ್ಲಣಗೊಳಿಸಿತ್ತು.
ಪಂಜಾಬಿನಲ್ಲಿ ನಡೆದ ಈ ಅಮಾನವೀಯ ಕೃತ್ಯ ಇಡೀ ದೇಶಾದ್ಯಂತ ಕಿಚ್ಚನ್ನು ಹತ್ತಿಸಿದರೆ, ಆ ಸಮಯದಲ್ಲಿ ಕೇವಲ 12 ವಯಸ್ಸಿನ ಬಾಲಕನಾಗಿದ್ದ ಭಗತ್ ಸಿಂಗ್ ಮೇಲೇ ಭಾರಿ ಪ್ರಭಾವನ್ನೇ ಬೀರಿತು. ಆ ಘಟನೆ ಆದ ಎರಡು ಮೂರು ದಿನಗಳ ನಂತರ ಶಾಲೆಗೆ ಚಕ್ಕರ್ ಹಾಕಿ ದುರಂತ ನಡೆದ ಸ್ಥಳಕ್ಕೆ ಹೋದ ಬಾಲಕ ಭಗತ್ ಸಿಂಗ್, ಒಂದು ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದು ಅದನ್ನು ತನ್ನ ಮನೆಯ ದೇವರ ಕೋಣೆಯಲ್ಲಿಟ್ಟು ಇತರೇ ದೇವರುಗಳ ಜೊತೆ ಆ ಮಣ್ಣಿಗೂ ಪ್ರತಿದಿನವೂ ಪೂಜಿಸುತ್ತಿದ್ದನೆಂದರೆ ಆ ಒಂದು ದುರಂತ ಇನ್ನೆಷ್ಟು ಜನರ ದೇಶಪ್ರೇಮಕ್ಕೆ ಕಿಚ್ಚನ್ನು ಹತ್ತಿಸಿತು ಎಂಬುದನ್ನು ಅರಿಯ ಬಹುದಾಗಿದೆ. ಅಂದು ಜಲಿಯನ್ ವಾಲಾ ಭಾಗ್ ನಲ್ಲಿ ಹರಿದ ಅಮಾಯಕರ ರಕ್ತದೋಕುಳಿ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕು ದೆಸೆಯನ್ನೇ ಬದಲಿಸಿತು ಎಂದರೂ ಅತಿಶಯೋಕ್ತಿಯೇನಲ್ಲ.
ಈ ಘಟನೆ ನಡೆದು ನೂರು ವರ್ಷಗಳು ಕಳೆದ ನಂತರವೂ ಇದರ ಕುರಿತು ಕೇಳಿದ ತಕ್ಷಣ ಇಲ್ಲವೇ ಓದಿದ ಕೂಡಲೇ ನಮ್ಮೆಲ್ಲರ ರಕ್ತವೂ ಕುದಿಯುತ್ತದೆ. ಜನರಲ್ ಡೈಯರ್ ಎಂಬ ಕ್ರೂರಿಯ ವಿರುದ್ಧ ಆಕ್ರೋಶ ಏಳುವುದು ಸಹಜ. ಹಾದರೆ ಸುಮ್ಮನೆ ಒಂದು ಕ್ಷಣ ಶಾಂತ ಚಿತ್ತದಲ್ಲಿ ಯೋಚಿಸಿದಲ್ಲಿ ಈ ಘಟನೆಗೆ ಆತನೊಬ್ಬ ನಿಮಿತ್ತ ಮಾತ್ರ. ಫಯರ್ ಎಂದು ಆಜ್ಞೆ ನೀಡಿದ್ದ ಬ್ರಿಟಿಷ್ ಅಧಿಕಾರಿ ಆತನೊಬ್ಬನೇ ಆಗಿದ್ದರೂ ಆತ ತನ್ನ ಜೊತೆಗೆ ಕರೆದುಕೊಂಡು ಹೋಗಿದ್ದ ಸೈನಿಕರೆಲ್ಲರೂ ಭಾರತೀಯರೇ ಆಗಿದ್ದರು. ಅವರೆಲ್ಲಾ ಗೂರ್ಖಾ ರೆಜಿಮೆಂಟ್, ಸಿಂಧ್ ರೆಜಿಮೆಂಟ್ ಮತ್ತು ಆಶ್ವರ್ಯಕರವಾಗಿ ಸಿಖ್ ರೆಜಿಮೆಂಟಿಗೂ ಸೇರಿದ್ದವರು ಸಿಖ್ಖರೂ ಇದ್ದರು. ಡೈಯರ್ ಫೈರ್ ಎಂದು ಕೂಗಿಕೊಂಡಾಗ ಅವರೆಲ್ಲರೂ ಒಂದು ಕ್ಷಣ ಮನಸ್ಸಿನ ಮಾತು ಕೇಳಿ ನಿಶ್ಯಬ್ಧವಾಗಿ ನಾವು ನಮ್ಮ ಅಮಾಯಕ ಸಹೋದರ ಮೇಲೆ ಗುಂಡನ್ನು ಹಾರಿಸುವುದಿಲ್ಲ ಎಂದು ಪ್ರತಿಭಟಿಸಿದ್ದರೇ ಈ ವಿಛಿದ್ರಕಾರಿ ಘಟನೆಯೇ ನಡೆಯುತ್ತಿರಲಿಲ್ಲ. ಆದರೆ ಅವರಲ್ಲಿದ್ದ ಗುಲಾಮೀ ತನದ ಮಂದೆ ಅವರ ಭಾರತೀಯತೆ ಸತ್ತು ಹೋಗಿದ್ದ ಪರಿಣಾಮ ಆ ಭಾರತೀಯ ಸೈನಿಕರೆಲ್ಲರೂ ಆ ದುರ್ಘಟನೆಯ ಭಾಗವಾಗಿ ಹೋಗಿದ್ದು ಈಗ ಇತಿಹಾಸ.
ಇಂತಹ ಘನ ಘೋರ ನರಮೇದಕ್ಕೆ ಕಾರಣನಾದ ಜನರಲ್ ಡಯರ್ ಮುಂದೆ ಅನೇಕ ತನಿಖೆಗಳಿಗೆ ಓಳಗಾದ. ಕೆಲವರು ಆತನನ್ನು ರಕ್ತ ಪಿಪಾಸು ದುಷ್ಟ, ಮಹಾ ಕ್ರೂರಿ ಎಂದು ತೀವ್ರವಾಗಿ ಆತನ ಕುಕೃತ್ಯವನ್ನು ಕಠಿಣ ಶಬ್ಧಗಳಿಂದ ನಿಂದಿಸಿದರೂ, ಒಬ್ಬ ಸೈನ್ಯಾಧಿಕಾರಿಯಾಗಿ ಆತ ತನ್ನ ಕೆಲಸ ನಿರ್ವಹಿಸಿದ್ದಾನೆ ಎಂದು ಆತನನ್ನು ಸಮರ್ಥಿಸಿಕೊಳ್ಳುವವರಿಗೇನೋ ಕಡಿಮೆ ಇರಲಿಲ್ಲ. ತಾನೆಸಗಿದ ಭೀಕರ ನರಮೇದಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಹಲವಾರು ತನಿಖೆಗಳಲ್ಲಿ ಪರ ವಿರೋಧ ನಿಲುವಿನಿಂದಾಗಿ ಜನರಲ್ ಡಯರ್ ಆಂತರಿಕವಾಗಿ ಹುಚ್ಚನಂತಾಗಿ ಹೋಗಿದ್ದ ಮತ್ತು ಮನಸ್ಸಿನ ಸ್ಥಿಮಿತ ಕಳೆದು ಕೊಂಡು ಹಲವಾರು ಸರಣಿ ಆಘಾತಗಳಿಗೆ ಒಳಗಾಗಿ, ಕೈ ಕಾಲುಗಳಿಗೆ ಲಕ್ವ ಹೊಡೆದು, ಮಾತನಾಡಲೂ ಆಗದೆ ಅಸಹಾಯಕನಾಗಿ ನರಳಿ ಕಡೆಗೆ 1927ರಲ್ಲಿ ಮೆದುಳಿನ ರಕ್ತಸ್ರಾವದಿಂದ ಪ್ರಾಣ ಬಿಟ್ಟ.
ಈ ಘಟನೆ ನಡೆದು 100 ವರ್ಷಗಳಾದರೂ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಇನ್ನೂ ನಮ್ಮಲ್ಲನೇಕರು ಈ ಘಟನೆಯಿಂದ ಬುದ್ದಿ ಕಲಿಯದೇ ಇರುವುದು ಎದ್ದು ಕಾಣುತ್ತದೆ. ಅಂಧ ಪಾಶ್ವಾತ್ಯಾಭಿಮಾನ, ಆತ್ಮಾಭಿಮಾನವಿಲ್ಲದೆ ಮತ್ತೊಬ್ಬರಿಗೆ ಅಡವಿಡುವ ಗುಲಾಮೀ ಮನಸ್ಥಿತಿ. ಸ್ವಂತಿಕೆಯಿಲ್ಲದೆ ಆತ್ಮಾಭಿಮಾನ ಶೂನ್ಯ ಮನಸ್ಥಿತಿ, ಯಾರೋ ಎಲ್ಲೋ ಕುಳಿತು ಏನೋ ಹೇಳಿದ್ದನ್ನು ಕೇಳಿ ಆದನ್ನು ತೆಪ್ಪಗೆ ಬಾಯಿಮುಚ್ಚಿಕೊಂಡು ಅನುಸರಿಸುವ ಅಸಹ್ಯಕರ ದಾಸ್ಯ ಪ್ರವೃತ್ತಿ. ದೇಶ ಮತ್ತು ಧರ್ಮದ ನಡುವಿನ ಅಂತರವನ್ನು ಅಳೆಯದಷ್ಟು ವಿವೇಚನೆಯನ್ನೇ ಕಳೆದುಕೊಂಡು ದೇಶದ ಮಾನ ಕಳೆಯುವ ಜೀತದಾಳುಗಳ ಪ್ರವೃತ್ತಿ.
ಜಲಿಯನ್ ವಾಲಾ ಭಾಗ್ ಹತ್ಯಾ ಕಾಂಡದಲ್ಲಿ ಮಡಿದ ಎಲ್ಲ ಮಕ್ಕಳು, ಶ್ರದ್ಧೇಯ ತಾಯಂದಿರು, ಸಹೋದರ ಮತ್ತು ಸಹೋದರಿಯರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ, ಆತ್ಮಾಭಿಮಾನದಿಂದ ಎದೆತಟ್ಟಿ ನಾವೆಲ್ಲಾ ಭಾರತೀಯರು. ನಾವೆಲ್ಲರೂ ಒಂದು. ದೇಶದ ಮುಂದೆ ಜಾತೀ ಕುಲ, ಧರ್ಮ ಎಲ್ಲಾ ನಗಣ್ಯ ಎಂದು ಹೇಳುವ ಗಟ್ಟಿತನ ನಮ್ಮಲ್ಲಿ ಬಾರದಿದ್ದರೆ, ಮುಂದೊಂದು ದಿನ ಯಾವುದೋ ಬಹುರಾಷ್ಟ್ರೀಯ ಕಂಪನಿಯೋ ಇಲ್ಲವೇ, ಯಾವುದೋ ಹಣವಂತ ಭಾರತೀಯ ಉದ್ಯಮಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡಾಗ, ಮತ್ತದೇ ದಾಸ್ಯಕ್ಕೆ ಮರಳುವಂತಾಗಿ, ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ನಮ್ಮನ್ನು ಆ ಜಲಿಯನ್ ವಾಲಾ ಭಾಗ್ ಭೀಕರ ಹತ್ಯಾಕಾಂಡದಲ್ಲಿ ನಮ್ಮವರನ್ನೇ ಕೊಂದ ಮತಿಹೀನ ಸೈನಿಕರ ಜೊತೆ ಹೋಲಿಕೆ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ.
ಇನ್ನೂ ಕಾಲ ಮಿಂಚಿಲ್ಲ. ಪರಿಸ್ಥಿತಿ ಕೈ ಮೀರಿ ಹೋಗಿಲ್ಲ. ಸೆಟೆದೇಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕಷ್ಟೇ
ಏನಂತೀರೀ?
ನಿಮ್ಮವನೇ ಉಮಾಸುತ