ಪಂಡಿತ ಸುಧಾಕರ ಚತುರ್ವೇದಿ

ಸಾಧಾರಣವಾಗಿ ನಾವೆಲ್ಲರೂ ಪಂಡಿತ್, ದ್ವಿವೇದಿ, ತ್ರಿವೇದಿ ಮತ್ತು ಚತುರ್ವೇದಿ ಎನ್ನುವ ಉಪನಾಮಗಳನ್ನು ಕೇಳಿರುತ್ತೇವೆ.  ಅದೆಲ್ಲವೂ ಅವರ ಕುಟುಂಬದ  ಎಷ್ಟೋ ತಲೆಮಾರಿನವರೊಬ್ಬರು ಪಂಡಿತರಾಗಿದ್ದರಂತೆ  ಅಥವಾ ಅವರು ಎರಡು, ಮೂರು ಅಥವಾ ನಾಲ್ಕುವೇದಗಳನ್ನೂ ಕರಗತ ಮಾಡಿಕೊಂಡಿದ್ದರಿಂದ ಅವರಿಗೆ ಆ ರೀತಿಯ ಹೆಸರು ಬಂದಿರುತ್ತದೆ. ಸದ್ಯಕ್ಕೆ  ಆ ವೇದದ ಗಂಧಗಾಳಿಯೂ ಗೊತ್ತಿಲ್ಲದೇ ಇದ್ದರೂ ಅವರ ಹೆಸರಿನೊಂದಿಗೆ ಸೇರಿಕೊಂಡಿರುತ್ತರೆ. ಆದರೆ ಇಲ್ಲೊಬ್ಬರು ಈ ಎಲ್ಲವನ್ನೂ ಅಧಿಕಾರಯುತವಾಗಿ ಕರಗತ ಮಾಡಿಕೊಂಡು ಚತುರ್ವೇದಿ ಎಂಬ ಬಿರುದನ್ನು ಗಳಿಸಿದ್ದ ಶತಾಯುಷಿಗಳಾಗಿದ್ದರೂ ಕನ್ನಡಿಗರಿಗೆ ಎಲೆಮರೆಕಾಯಿಯಾಗಿಯೇ ಉಳಿದು ಹೋದ ಪಂಡಿತ ಸುಧಾಕರ ಚತುರ್ವೇದಿ ಆವರ ಬಗ್ಗೆ ನಮ್ಮ ಕನ್ನಡದ  ಕಲಿಗಳು ಮಾಲಿಕೆಯಲ್ಲಿ ತಿಳಿದುಕೊಳ್ಳೋಣ.

ಪಂಡಿತ ಸುಧಾಕರ ಅವರ ಹಿರಿಯರು ಮೂಲತಃ ತುಮಕೂರು ಬಳಿಯ ಕ್ಯಾತಸಂದ್ರದವರಾದರೂ, ಕೃಷ್ಣರಾಯರು ಮತ್ತು ಲಕ್ಷ್ಮಮ್ಮ ದಂಪತಿಗಳಿಗೆ 20 ಎಪ್ರಿಲ್ 1897 ರಂದು ರಾಮನವಮಿಯಂದು ಬೆಂಗಳೂರಿನಲ್ಲಿ ಸುಧಾಕರ ಅವರ  ಜನನವಾಗುತ್ತದೆ. ಬಾಲ್ಯದಿಂದಲೂ ಅತ್ಯಂತ ಚುರುಕಾಗಿ ಪ್ರತಿಭಾವಂತರಾಗಿದ್ದ ಸುಧಾಕರ್ ಅವರಿಗೆ ಮನೆಯ ಮೊದಲ ಪಾಠ ಶಾಲೆ ಎನ್ನುವಂತೆ, ಅವರ ಎಂಟನೇ ವಯಸ್ಸಿನಲ್ಲೇ  ಅವರ ಅಕ್ಕ ಪದ್ಮಾವತಿ ಬಾಯಿ ಅವರಿಂದ ವ್ಯಾಕರಣ, ಪ್ರಾಚೀನ ಕನ್ನಡ ಸೇರಿದಂತೆ ಕನ್ನಡ ಸಾಹಿತ್ಯದ ಪೂರ್ಣ ಪರಿಚಯ ಮಾಡಿಕೊಂಡರೆ, ತಾಯಿ  ಲಕ್ಷ್ಮಮ್ಮ(ಪುಟ್ಟಮ್ಮ)ನವರು ಶಿವಾಜಿಗೆ ಜೀಜಾಬಾಯಿಯವರು ಹೇಳಿಕೊಟ್ಟಂತೆ ಸುಧಾಕರ್ ಅವರಿಗೆ ಅನೇಕ ಧಾರ್ಮಿಕ ವಿಷಯಗಳನ್ನು ಮನನ ಮಾಡಿಸಿದ್ದರು. ಸುಧಾಕರ್ ಅವರಿಗೆ  ದಯಾನಂದ ಸರಸ್ವತಿಯವರ ಜೀವನ ಚರಿತ್ರೆ ಬಾಲ್ಯದಲ್ಲಿ ಮೆಚ್ಚಿನದ್ದಾಗಿದ್ದಲ್ಲದೇ, ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ತಾಯಿ ಬಹಳ ಪಾತ್ರವೂ ಪ್ರಮುಖವಾಗಿತ್ತು.

ಈ ಅಧ್ಭುತವಾದ ಪ್ರತಿಭೆಗೆ ಮತ್ತಷ್ಟು ಪ್ರಖರವಾಗಲೀ ಎಂಬ ಉದ್ದೇಶದಿಂದ ಹದಿಮೂರರ ಬಾಲಕರಾಗಿದ್ದ ಸುಧಾಕರ್ ಅವರನ್ನು ಹೆಚ್ಚಿನ  ವಿದ್ಯಾಭ್ಯಾಸಕ್ಕಾಗಿ ಹರಿದ್ವಾರದ  ಪ್ರಖ್ಯಾತ ಕಾಂಗಡಿ ಗುರುಕುಲಕ್ಕೆ ಕಳುಹಿಸಿಕೊಡುತ್ತಾರೆ. ಅಲ್ಲಿ ಸ್ವಾಮಿ ಶ್ರದ್ಧಾನಂದರ ಶ್ರದ್ಧೆಯ ಶಿಷ್ಯರಾಗಿ ಅಖಂಡ ಒಂದು ದಶಕಗಳ ಕಾಲ ಸಂತಸ್ವರೂಪೀ ಬದುಕು ನೆಡೆಸಿದ್ದಲ್ಲದೇ  ನಾಲ್ಕು ವೇದಗಳಲ್ಲಿ ಪಾರಮ್ಯ ಪಡೆದು ಅಧಿಕಾರಯುತವಾಗಿ ಚತುರ್ವೇದಿ  ಎಂಬ ಬಿರುದನ್ನು ಪಡೆದದ್ದು ಹೆಮ್ಮೆಯ ವಿಷಯವಾಗಿತ್ತು.

sc91915ರಲ್ಲಿ  ಹರಿದ್ವಾರದ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮೊಟ್ಟಮೊದಲ ಬಾರಿಗೆ ಗಾಂಧೀಜಿಯವರ ಭೇಟಿಯಾದದ್ದು ಅವರ ಬದುಕಿನಲ್ಲಿ ಬಹಳ ತಿರುವನ್ನು ಪಡೆಯಿತು ಎಂದರೂ ತಪ್ಪಾಗದು. ದಕ್ಷಿಣ ಭಾರತದವರಾದರೂ ಸುಲಲಿತವಾಗಿ ಹಿಂದಿ ಮಾತನಾಡುವುದನ್ನು ಕಂಡು ಆಶ್ಚರ್ಯ ಚಕಿತರಾದ ಗಾಂಧಿಯವರು ಸುಧಾಕರ್ ಚತುರ್ವೇದಿಯವರನ್ನು ತಮ್ಮ ಒಡನಾಡಿಯಾಗಿರಿಸಿಕೊಂಡರು. ಅವರಿಬ್ಬರ ಸ್ನೇಹ ಎಷ್ಟಿತ್ತೆಂದರೆ, ಗಾಂಧಿಯವರಿಗೆ  ಕನ್ನಡದಲ್ಲಿ ಸಹಿ ಮಾಡಲು ಮತ್ತು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಅರ್ಥವಾಗುವಷ್ಟು ಕನ್ನಡ ಭಾಷೆಯನ್ನು ಗಾಂಧಿಯವರಿಗೆ  ಸುಧಾಕರ್ ಅವರು ಕಲಿಸಿದ್ದರು ಎಂಬುದು ಗಮನಾರ್ಹವಾಗಿದೆ.

ಗಾಂಧಿಯವರ ಶರೀರಕ್ಕೆ ಸುಧಾಕರ್  ಅವರು ಶಾರೀರ ಎನ್ನುವಂತೆ ಮಹಾತ್ಮ ಗಾಂಧಿಯವರು ಬ್ರಿಟೀಷರೊಡನೆ ಪತ್ರ ಬರೆಯುವಾಗಲೆಲ್ಲಾ  ಸುಧಾಕರರನ್ನು ಜೊತೆಯಲ್ಲಿರಿಸಿಕೊಳ್ಳುತ್ತಿದ್ದಲ್ಲದೇ, ಬ್ರಿಟಿಷ್ ವೈಸ್ ರಾಯ್ ಅವರೊಡನೆ  ನಡೆಸುವ ಪತ್ರ ವ್ಯವಹಾರಗಳ ಜವಾಬ್ಧಾರಿಯೆಲ್ಲಾ ಸುಧಾಕರ್ ಅವರಿಗೆ ವಹಿಸಿಕೊಟ್ಟಿದ್ದರು.  ಗಾಂಧಿಯವರು ಹೊರತರುತ್ತಿದ್ದ ಹಿಂದಿ ಮತ್ತು ಸಂಸ್ಕೃತ ಲೇಖನಗಳನ್ನು ಆಂಗ್ಲ ಭಾಷೆಗೆ ತರ್ಜುಮೆ ಮಾಡುತ್ತಿದ್ದದ್ದೇ ಸುಧಾಕರ್ ಅವರು.  ಅದೇ ರೀತೀಯಲ್ಲಿ  ಗಾಂಧಿಯವರ ಹರಿಜನ  ಪತ್ರಿಕೆಯ ಕನ್ನಡ ಅವತರಣಿಕೆಯೂ  ಸುಧಾಕರ್ ಆವರ ಸಂಪಾದಕತ್ವ ವಹಿಸಿಕೊಂಡಿದ್ದ ಕಾರಣ,  ಸುಧಾಕರ ಚತುರ್ವೇದಿಯವರನ್ನು ಮಹಾತ್ಮ ಗಾಂಧಿ ಅವರ ಪೋಸ್ಟ್ ಮನ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು.  ಸುಧಾಕರ್ ಅವರ ಪಾಂಡಿತ್ಯಕ್ಕೆ ಮಾರು ಹೊಗಿದ್ದ ಗಾಂಧಿಯವರು ಪ್ರೀತಿಯಿಂದ ಕರ್ನಾಟಕೀ ಎಂದೇ ಸುಧಾಕರ್ ಅವರನ್ನು ಕರೆಯುತ್ತಿದ್ದರು. ಮತ್ತೊಂದು ಕುತೂಹಲಕಾರಿಯಾದ ವಿಷಯವೇನೆಂದರೆ  ಅವರು ಲಾಹೋರಿನಲ್ಲಿದ್ದಾಗ ಸುಧಾಕರ್ ಅವರು ಮತ್ತೊಬ್ಬ ವೀರ ಸೇನಾನಿ ಭಗತ್ ಸಿಂಗ್ ಅವರಿಗೆ ಗಣಿತವನ್ನು ಹೇಳಿಕೊಟ್ಟಿದ್ದ ಗುರುಗಳಾಗಿದ್ದರು.  

sc1ಸ್ವಾತಂತ್ರ್ಯ ಹೋರಾಟಗಳಲ್ಲಿ ನಡೆದ ಅನೇಕ ಮಾರಣ ಹೋಮಗಳಲ್ಲಿ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಅತ್ಯಂತ ಪ್ರಮುಖಪಾತ್ರವಹಿಸುತ್ತದೆ. ನಾವೆಲ್ಲರೂ ಅದನ್ನು ಇತಿಹಾಸದ ಭಾಗವಾಗಿ ಪುಸ್ತಕಗಳಲ್ಲಿ ಓದಿದರೆ, ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಸುಧಾಕರ್ ಚತುರ್ವೇದಿಯವರು ಪ್ರಮುಖ ಸಾಕ್ಷಿಯಾಗಿದ್ದರು ಎಂದರೆ ಅಚ್ಚರಿಯನ್ನು ಮೂಡಿಸುತ್ತದೆ. ನಾಲ್ಕು ಗೋಡೆಗಳ ಮಧ್ಯೆ ಸೇರಿದ್ದ ಸಾವಿರಾರು ಅಮಾಯಕರ ಮೇಲೆ ಏಕಾ ಏಕಿ ಗುಂಡಿನ ಧಾಳಿ ನಡೆಸಿ ನೂರಾರು ಜನರು ಗುಂಡಿನೇಟಿಗೆ ಬಲಿಯಾದರೆ,  ಇನ್ನೂ ಹಲವರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿದ್ದ ಭಾವಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡರೆ, ಇನ್ನೂ ಹಲವರು ಕಾಲ್ತುಳಿತಕ್ಕೆ ಬಲಿಯಾಗಿ ಒಟ್ಟಿನಲ್ಲಿ  ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದು ಈಗ  ಮರೆಯಲಾಗದ ಇತಿಹಾಸ. ಬ್ರಿಟಿಷ್ ಸರ್ಕಾರದ ದಾಖಲೆ ಪ್ರಕಾರ ಕೇವಲ 670 ಜನರು ಸತ್ತಿದ್ದಾರೆ ಎಂದರೂ,  ನದಿ ತಟದಲ್ಲಿ ಸಾವಿರಾರು ಜನರ ಅಂತ್ಯಸಂಸ್ಕಾರದ ಪೌರೋಹಿತ್ಯ ವಹಿಸಿದ್ದವರೇ ಸುಧಾಕರ್ ಚತುರ್ವೇದಿಯವರೇ ಎನ್ನುವುದು ಗಮನಾರ್ಹ.

ಹೀಗೆ ಗಾಂಧಿಯವರ ಜೊತೆ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ತೊಡಗಿಕೊಂಡಿದ್ದ ಸುಧಾಕರ್ ಅವರು ತಮ್ಮ ಪ್ರಖರ ಭಾಷಣಗಳಿಂದ ಜನರನ್ನು ಬ್ರಿಟೀಷರ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಿದ್ದಾರೆ ಎಂಂದು ಬ್ರಿಟೀಷರಿಂದ ಮೂವತ್ತಕ್ಕೂ ಹೆಚ್ಚಿನ ಬಾರಿ ಸೆರೆಮನೆಗೆ ಹೋಗಿ ಸುಮಾರು  13 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು. ಗಾಂಧಿಯವರ ಜೊತೆ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗಿಗಳಾಗಿದ್ದಲ್ಲದೇ ಗಾಂಧಿಯವರಂತೆಯೇ ವಿದೇಶಿ ಉತ್ಪನ್ನಗಳನ್ನು ಸುಟ್ಟು ಚರಕದಿಂದಲೇ ಖಾದಿ ತಯಾರಿಸಿ ಧರಿಸುತ್ತಿದ್ದರು.

sc2ಕನ್ನಡ, ಹಿಂದಿ, ಸಂಸ್ಕೃತ, ಇಂಗ್ಲೀಷ್ ಭಾಷೆಗಳನ್ನು ಸರಾಗವಾಗಿ ಮಾತನಾಡುತ್ತಿದ್ದುದರಿಂದ ಪಂಜಾಬ್, ಲಾಹೋರ್, ಪಾಟ್ನಾ, ಕೋಲ್ಕತ್ತಾಗಳಲ್ಲಿ ಇವರ ಪ್ರಖರ ಭಾಷಣಗಳಿಗೆ ಸೋತು ಸುಧಾಕರ್ ಅವರಿಗೆ ದೊಡ್ಡ ಶಿಷ್ಯ ವೃಂದವೇ ಸೃಷ್ಟಿಯಾಗಿತ್ತು. ಅಂತಹ ಶಿಷ್ಯೆಯೊಬ್ಬರು ಸುಧಾಕರ್ ಅವರನ್ನು ಪ್ರೀತಿಸಿ ತಮ್ಮ ಮಗಳನ್ನು ವರಿಸಬೇಕೆಂದು ಆಕೆಯ ತಂದೆಯು ಸುಧಾಕರ್ ಅವರಲ್ಲಿ ಕೇಳಿಕೊಂಡಾಗ ಸ್ವರಾಜ್ಯ ಬರುವವರೆಗೂ ತಾನು ಮದುವೆಯಾಗುವುದಿಲ್ಲ  ಎಂಬ ಪ್ರತಿಜ್ಞೆ ತೊಟ್ಟಿದ್ದನ್ನು ನೆನಪಿಸಿದರು.  1935ರಲ್ಲಿ ಬಲೋಚಿಸ್ತಾನದಲ್ಲಿ ಭೂಕಂಪ ಸಂಭವಿಸಿದಾಗ ಅಲ್ಲಿನ ಜನರ ಸೇವೆಗೆಂದು ತೆರಳಿದ್ದ ಅವರ ಪ್ರೀತಿಯ ಶಿಷ್ಯೆ ಮರಳಿ ಬರಲೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವಷ್ಟರಲ್ಲಿ ಸುಧಾಕರ್ ಅವರ ವಯಸ್ಸು 50 ವರ್ಷ ದಾಟಿದ್ದ ಕಾರಣ ಈ ವಯಸ್ಸಿನಲ್ಲಿ ಮದುವೆಯಾಗಿ ಸಾಧಿಸುವುದಾದರೂ ಏನು? ಎಂದು ತಿಳಿದು  ಅವರು ಆಜೀವ ಬ್ರಹ್ಮಚಾರಿಯಾಗಿಯೇ  ಉಳಿದುಬಿಟ್ಟರು.

sc7ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ  ಚತುರ್ವೇದಿಗಳ ಗುರಿ ಬದಲಾಯಿತು. ಬೆಂಗಳೂರಿನ ಜಯನಗರ 5ನೆಯ ಹಂತದಲ್ಲಿರುವ ಮನೆಯೊಂದರಲ್ಲಿ ಕುಳಿತು ವೇದ – ವೇದಾಂತಗಳ ಕುರಿತಾಗಿ ಲೇಖನಗಳನ್ನು ಬರೆಯಲಾರಂಭಿಸಿದರು. ತಮ್ಮ ನೆಚ್ಚಿನ ದಯಾನಂದ ಸರಸ್ವತಿಗಳು ವೇದಗಳಿಗೆ ಬರೆದಿದ್ದ ಉದ್ದಾಮ ಭಾಷ್ಯಗಳನ್ನೆಲ್ಲ ಕನ್ನಡಕ್ಕೆ ಸುಮಾರು 20 ಸಂಪುಟಗಳಲ್ಲಿ 30,000 ಪುಟಗಳಷ್ಟು ತರ್ಜುಮೆ ಮಾಡಿದರು.  ವೈದಿಕರಿಂದ ಜಾತೀಯತೆ ಹುಟ್ಟಿತೆಂಬ ವಿತಂಡ ವಾದ ಮಾಡುವವರಿಗೆ ಹಾಗೆ ಜಾತೀಯತೆಯನ್ನು ಪುರಸ್ಕರಿಸಿದ ವೇದಮಂತ್ರವನ್ನು ಎಲ್ಲಿವೇ? ಎಂಬ ಸವಾಲನ್ನು ಹಾಕಿದ್ದ ಸುಧಾಕರ್ ಚತುರ್ವೇದಿಗಳು ಅನೇಕ ಹರಿಜನರ ಮಕ್ಕಳನ್ನು ದತ್ತು ಪಡೆದು ಅವರಿಗೆ ಸೂಕ್ತ ವಿದ್ಯಾಭ್ಯಾಸವನ್ನು ಮಾಡಿಸಿದರು. ಅವರಲ್ಲಿ ಕೆಲವರು ಐಎಎಸ್ ಸಹಾ ಮುಗಿಸಿ  ಹಿರಿಯ  ಅಧಿಕಾರಿಗಳಗಿದ್ದಾರೆ  ಎಂಬುದು ಮೆಚ್ಚುಗೆಯ ವಿಷಯವಾಗಿದೆ. ನೂರಾರು ಅಂತರ್ಜಾತೀಯ ಮದುವೆಗಳನ್ನು ಮಾಡಿಸಿದ್ದಲ್ಲದೇ,  ಹರಿಜನರ ಸಾವಿರಾರು ಕೇರಿಗಳಲ್ಲಿ ಸಂಚರಿಸಿ, ಅವರುಗಳಿಗೆ ದೇವಾಲಯದ ಪ್ರವೇಶವನ್ನು ಕೊಡಿಸಿದ್ದಲ್ಲದೇ, ಅಸ್ಪೃಶ್ಯತೆಯ ನಿವಾರಣೆಗಾತಿ ತಮ್ಮ ಬದುಕನ್ನೇ ಮೀಸಲಾಗಿಟ್ಟರು. . ಯಾರೇ  ಆಗಲಿ ಅವರ ಬಳಿ ವೇದ ಕಲಿಯಬೇಕೆಂಬ  ಅಪೇಕ್ಷೆ ವ್ಯಕ್ತಪಡಿಸಿದರೆ ಸಾಕು,  ಆವರ ಜಾತಿ ಧರ್ಮ ವಯಸ್ಸು, ಅಂತಸ್ತು ಹೆಂಗಸು ಗಂಡಸು ಎಂಬ ಲಿಂಗ ತಾರತಮ್ಯವಿಲ್ಲದೇ ಎಲ್ಲರಿಗು ವೇದಾದ್ಯಯನ ಮಾಡಿಸಿದರು. ಹರಿಜರ ಉದ್ಧಾರ ಎಂದು  ವೇದಿಕೆಗಳ ಮೇಲೆ ದೊಡ್ಡ ಭಾಷಣ ಮಾಡುತ್ತಾ  ಪ್ರಚಾರ ಪಡೆಯುವ  ರಾಜಕೀಯ ನಾಯಕರಂತಲ್ಲದೇ  ತಾವು ನುಡಿದದ್ದನ್ನು ಅಕ್ಷರಶಃ ಕಾರ್ಯಸಾಧುವನ್ನಾಗಿ ಮಾಡಿದ ಕೀರ್ತಿ ಸುಧಾಕರ್ ಚತುರ್ವೇದಿಗಳಿಗೆ ಸಲ್ಲುತ್ತದೆ.

sc5ನಾಲ್ಕು ವೇದಗಳ ಕುರಿತು 20 ಸಂಪುಟಗಳನ್ನು ರಚಿಸಿದ್ದರಲ್ಲದೇ, ವೇದ ತರಂಗ ಹಾಗೂ ವೇದ ಪ್ರಕಾಶ ಎಂಬ ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು.

2009 ರ ಹೊತ್ತಿಗೆ, ನಾಲ್ಕು ವೇದಗಳಲ್ಲಿ ಮೂರು ಮತ್ತು ಋಗ್ವೇದದ ಆರು ಸಂಪುಟಗಳನ್ನು ಬಿಡುಗಡೆ ಮಾಡಲಾಯಿತು.

sc8ಅದೊಮ್ಮೆ ಅವರಿಗೆ 112 ವರ್ಷಗಳಾಗಿದ್ದಾಗ  ಇವರ ದೀರ್ಘಾಯುಷ್ಯದ ಕುರಿತಂತೆ ಸಂದರ್ಶಕಿಯೊಬ್ಬರು ಕೇಳಿದ ಪ್ರಶ್ನೆಗೆ ಬೆಳಿಗ್ಗೆ ಮತ್ತು ರಾತ್ರಿ ಒಂದು ಬಾಳೆ ಹಣ್ಣು ಸೇವನೆಯೇ. ನನ್ನ ಆಯುಷ್ಯದ ಗುಟ್ಟು ಎಂದು ನಕ್ಕಿದ್ದಂತೆ. ಹಾಗೇ ತಮ್ಮ ಮಾತನ್ನು ಮುಂದುವರಿಸಿ, ವೇದಗಳ ಪ್ರಕಾರ ಮನುಷ್ಯರ ಅಂದಾಜು ಆಯಸ್ಸು 120 ವರ್ಷಗಳು. ನಾನೇನಾದ್ರು 120 ವರ್ಷಗಳಿಗಿಂತ ಕಡಿಮೆ ವಯಸ್ಸಿಗೆ ಸತ್ತರೆ ನಾನು ವೇದಗಳು ಹೇಳುವಂತೆ ಬದುಕಿಲ್ಲ ಎಂಬರ್ಥ ಬರುತ್ತದೆ ಎಂದಿದ್ದರಂತೆ. ವೇದಗಳಲ್ಲಿ  ಹೇಳಿದಂತೆಯೇ ಬದುಕಿದ್ದರು ಸುಧಾಕರ್ ಚತುರ್ವೇದಿಗಳು. 1897ರಲ್ಲಿ ಜನಿಸಿದ ಅವರು 3 ಶತಕಗಳ ಎಲ್ಲಾ ಬದಲಾವಣೆಗಳಿಗೂ ಸಾಕ್ಷಿಯಾಗಿದ್ದಲ್ಲದೇ   27-02-2020  ತಮ್ಮ  122 ವರ್ಷ, 313 ದಿನಗಳ ತುಂಬು ಜೀವನ ನಡೆಸಿ ಬೆಂಗಳೂರಿನಲ್ಲಿ ದೇಹಾಂತ್ಯವನ್ನು ಮಾಡಿದರು.

sc4ವಯಸ್ಸು 120ಕ್ಕೂ ಹೆಚ್ಚು ವರ್ಷ ದಾಟಿದ್ದರೂ, ಇತರರ ವೃದ್ಧರಂತೆ ನಡುಗುವ ಕೈಗಳಲ್ಲಿ ಕೋಲು ಹಿಡಿಯದ ಸದಾ ಕ್ಷಾತ್ರ ತೇಜದ, ಆರೋಗ್ಯವಂತ, ವೇದಗಳ ಅಧ್ಯಯನ, ಸಂಶೋಧನೆ, ವೇದ ಪಾಠ, ಪ್ರತಿನಿತ್ಯವೂ ಮನೆಯಲ್ಲಿ ಅಗ್ನಿಹೋತ್ರವನ್ನು ತಪ್ಪಿಸದೇ ಮಾಡುತ್ತಿದ್ದರು. ಪ್ರತಿ ಶನಿವಾರ ಅವರ ಮನೆಯಲ್ಲಿ ಸತ್ಸಂಗವನ್ನು  ನಡೆಸುತ್ತಿದ್ದರಲ್ಲದೇ, ಆ ವಯಸ್ಸಿನಲ್ಲಿಯೂ ತಮ್ಮ  ಗುರುಗಳಾದ ಶ್ರೀ ಶ್ರದ್ಧಾನಂದರ ಆದೇಶದಂತೆ ವೇದಗಳ ಬಗ್ಗೆ ಪುಸ್ತಕ ಬರೆಯುವುದರಲ್ಲಿಯೇ ತಮ್ಮ  ಜೀವನವನ್ನು ಕಳೆದ ಹಿರಿಯ ಜೀವ  ಸುಧಾಕರ್ ಚರ್ತುವೇದಿಗಳದ್ದು.

ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರೂ ಅದೇಕೋ ಏನೋ? ಅವರ ವಿದ್ಯೆಗೆ ಸಲ್ಲಬೇಕಿದ್ದ ಸತ್ಕಾರ ಸನ್ಮಾನಗಳು ಅವರಿಗೆ ಬರಲೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರರಿಗೆ ಸಿಗುವ ಪಿಂಚಣಿಯನ್ನು ಸಹಾ ಅವರು ನಯವಾಗಿ ತಿರಸ್ಕರಿಸಿದ್ದರು.  ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದ ರಾಜ್ಯೋತ್ಸವದ ಪ್ರಶಸ್ತಿ ಹೊರತಾಗಿ ಕೇಂದ್ರ ಸರ್ಕಾರದಿಂದ ಅವರಿಗೆ ಯಾವುದೇ ಅಧಿಕೃತ ಗೌರವವಾಗಲೀ, ಸನ್ಮಾನವಾಗಲೀ ದೊರೆಯಲೇ ಇಲ್ಲ ಎನ್ನುವುದು ನಿಜಕ್ಕು ವಿಷಾಧನೀಯ.  ಮೂರು ಶತಮಾನಗಳ ಸಾರ್ಥಕ ಬದುಕನ್ನು ಕಳೆದರೂ  ಎಲೆಮರೆಕಾಯಿಯಂತೆ ಸ್ವಾತಂತ್ರ್ಯ ಹೊರಾಟಗಾರಾಗಿ, ಸಮಾಜ ಸುಧಾರಕರಾಗಿ, ಸಾರಸ್ವತ ಲೋಕದಲ್ಲಿ ಸರಸ್ವತಿ ಪುತ್ರರಂತೆ ಎಲೆಮರೆಕಾಯಿಯಂತೆಯೇ ಜೀವಿಸಿದ ಪಂಡಿತ ಸುಧಾಕರ್ ಚತುರ್ವೇದಿಗಳು ಖಂಡಿತವಾಗಿಯೂ ನಮ್ಮ ಕನ್ನಡದ ಕಲಿಗಳೇ ಸರಿ.

ಏನಂತೀರೀ?

ನಿಮ್ಮವನೇ ಉಮಾಸುತ

One thought on “ಪಂಡಿತ ಸುಧಾಕರ ಚತುರ್ವೇದಿ

  1. ಚೆನ್ನಾದ ಪರಿಚಯ ಲೇಖನ. ಇಷ್ಟವಾಯಿತು. ಚತುರ್ವೇದಿಯವರನ್ನು ಭೇಟಿಯಾಗಿ ಅವರೊಡನೆ ಮಾತನಾಡುವ ಸೌಭಾಗ್ಯ ನನ್ನದಾಗಿತ್ತು. ಅವರ ಮೊಮ್ಮಕ್ಕಳ ಕೋರಿಕೆಯಂತೆ ಪೂಜ್ಯರ ಚುಕ್ಕಿಚಿತ್ರವನ್ನು ರಚಿಸಿದ್ದೆ. ಅದು ಚತುತರ್ವೇದಿಯವರ ಕವನ ಸಂಕಲನದ ಮುಖಪುಟದಲ್ಲಿ ರಾರಾಜಿಸಿತು! ಬಿಡುಗಡೆ ಸಂದರ್ಭದಲ್ಲಿ ನನ್ನನ್ನು ವೇದಿಕೆಗೆ ಕರೆದು ಹಸ್ತಾಕ್ಷರದೊಡನೆ ಒಂದು ಪ್ರತಿಯನ್ನು ನೀಡಿದ್ದನ್ನು ಮರೆಯುವಂತಿಲ್ಲ. ಮತ್ತೊಮ್ಮೆ ಅವರನ್ನು ಕಂಡು ಮಾತನಾಡಿಸಬೇಕೆಂಬ ಬಯಕೆ ಮಾತ್ರ ಹಾಗೆಯೇ ಉಳಿದುಹೋಯಿತು. ಮಹಾನ್ ವ್ಯಕ್ತಿಯ ವ್ಯಕ್ತಿತ್ವವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದ ತಮಗೆ ಮತ್ತೊಮ್ಮೆ ಅಭಿನಂದನೆಗಳು.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s