ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

ಸಾಧಾರಣವಾಗಿ ಬ್ರಿಟಿಷರು ಭಾರತಕ್ಕೆ ಬರುವ ಮುಂಚೆ ಭಾರತ ಸುವರ್ಣ ಯುಗವಾಗಿತ್ತು ಎಂದು ಹೇಳುತ್ತಾ ಅಲ್ಲಿ ಮುತ್ತು ರತ್ನ ಹವಳ ಪಚ್ಚೆ ಮುಂತಾದ ಅಮೂಲ್ಯವಾದ ಅನರ್ಘ್ಯ ಬೆಲೆಬಾಳುವ ವಸ್ತುಗಳನ್ನೂ ರಸ್ತೆಯ ಬದಿಯಲ್ಲಿ ಸೇರಿನಲ್ಲಿ ಮಾರಲಾಗುತ್ತಿತ್ತು ಎಂದು ಅನೇಕ ಪಾಹಿಯಾನ್, ಹುಯ್ಯನ್ ಸಾಂಗ್ ಅಂತಹ ವಿದೇಶೀ ಇತಿಹಾಸಕಾರರೇ ಬಣ್ಣಿಸಿದ್ದಾರೆ. ಇನ್ನು ಸಂಗೀತ ಮತ್ತು ಶಿಲ್ಪಕಲೆ ಎಂದೊನೆಯೇ ಥಟ್ಟನೆ ಎಲ್ಲರಿಗೂ ನೆನಪಾಗುವುದು ಕರ್ನಾಟಕವೇ. ಕರ್ನಾಟಕ ಎಂದೊಡನೇ ನೆನಪಾಗುವುದೇ ವೈಭವೋಪೇತ ದಸರಾ ಹಬ್ಬ. ಕನ್ನಡ ಎಂದೊಡನೆ ಎಲ್ಲರೂ ನಮಸ್ಕರಿಸುವುದೇ ತಾಯಿ ಭುವನೇಶ್ವರಿಗೇ. ಇಷ್ಟೆಲ್ಲಾ ಇತಿಹಾಸಗಳಿಗೆ ಪ್ರಸಿದ್ಧವಾಗಿದ್ದದ್ದೇ, ವಿಜಯನಗರ ಸಾಮ್ರಾಜ್ಯ. ದಕ್ಷಿಣ ಭಾರತದಲ್ಲಿ ಪ್ರಪಥಮ ಬಾರಿಗೆ ಅಷ್ಟು ದೊಡ್ಡ ಹಿಂದೂ ಸಾಮಾಜ್ಯದ ಪರಿಕಲ್ಪನೆ ಮಾಡಿಕೊಂಡು ಅದನ್ನು ಕಟ್ಟಲು ಮೂಲ ರೂವಾರಿಗಳಾದವರು, ಶ್ರೀ ಶಂಕರಾಚಾರ್ಯರಿಂದ ಪ್ರತಿಷ್ಟಾಪಿಸಲ್ಪಟ್ಟ ನಾಲ್ಕು ಶಕ್ತಿಪೀಠಗಳಲ್ಲಿ ಅತ್ಯಂತ ಪ್ರಭಾವಶಾಲಿಯಾದ ದಕ್ಷಿಣಾಮ್ನೇಯ ಶೃಂಗೇರೀ ಪೀಠದ 12ನೇಯ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ವಿದ್ಯಾರಣ್ಯರು.    ಅವರ ಜನ್ಮ ದಿನದಂದು ಅವರ ಸಾಧನೆಗಳನ್ನು ಸಣ್ಣದಾಗಿ ಮೆಲುಕು ಹಾಕುವ ಸಣ್ಣ ಪ್ರಯತ್ನ

vid2ಅದು 14ನೆಯ ಶತಮಾನ, ಸಕಲ ವೇದ ಶಾಸ್ತ್ರ ಪಾರಂಗತರಾದ ಶ್ರೀ ವಿದ್ಯಾರಣ್ಯರು, ಅದ್ವೈತ ಪಂಥದ ಶೃಂಗೇರಿ ಶಾರದಾ ಪೀಠದ 12ನೇಯ ಜಗದ್ಗುರುಗಳಾಗಿರುತ್ತಾರೆ. ಸನ್ಯಾಸಿಗಳು ಎಂದರೆ, ಕಾಮ ಕ್ರೋಧ, ಮೋಹ, ಲೋಭ ಮಧ ಮತ್ತು ಮಾತ್ಸರ್ಯಗಳೆಂಬ ಅರಿಷಡ್ವರ್ಗಗಳಿಂದ ಹೊರಬಂದು ಸಾತ್ವಿಕ ಬದುಕನ್ನು ನಡೆಸುತ್ತಾ ಧರ್ಮ ರಕ್ಷಣೆಗಾಗಿ ಜನ ಸಾಮಾನ್ಯರಿಗೆ ಧಾರ್ಮಿಕವಾಗಿ ಮತ್ತು ರಾಜರಿಗೆ ಆಡಳಿತಾತ್ಮಕವಾಗಿ ಕಾಲ ಕಾಲಕ್ಕೆ ಸೂಕ್ತವಾದ ಸಲಹೆಗಳನ್ನು ನೀಡುತ್ತಾ ಇಡೀ ದೇಶವನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಗುರುತರ ಜವಾಬ್ಧಾರಿ ಇಂತಹ ಆಚಾರ್ಯರ ಮೇಲಿರುತ್ತದೆ. ಆದರೆ ಇವೆಲ್ಲವನ್ನೂ ಮೀರಿ ಕ್ಷಾತ್ರಗುಣವನ್ನು ಪ್ರಚೋದಿಸಿದ ಯತಿಗಳು ಯಾರಾದರೂ ಇದ್ದಲ್ಲಿ ಅದು ಗುರು ವಿದ್ಯಾರಣ್ಯರು ಮಾತ್ರವೇ.

ಅಂದಿನ ಪರಿಸ್ಥಿತಿಯ ಅನುಗುಣವಾಗಿ ವಿದ್ಯಾರಣ್ಯರು ಕ್ಷಾತ್ರ ತೇಜದ ಗುರುಗಳಾಗ ಬೇಕಾದಂತಹ ಸಂಧರ್ಭ ಬರುತ್ತದೆ. ದಕ್ಷಿಣದಲ್ಲಿ ಆಡಳಿತ ನಡೆಸಿದ ಅನೇಕ ರಾಜ ಮನೆತನಗಳು ಸಂಪೂರ್ಣವಾಗಿ ನಿಸ್ತೇಜವಾಗಿದ್ದವು, ಅವರ ಮುಂದಿನ ತಲೆಮಾರಿನ ರಾಜರುಗಳಲ್ಲಿ ಕ್ಷಾತ್ರಗುಣ ಸಂಪೂರ್ಣವಾಗಿ ಕುಗ್ಗಿತ್ತು. ಪದೇ ಪದೇ ಉತ್ತರದ ಕಡೆಯಿಂದ ಮುಸಲ್ಮಾನರ ಆಕ್ರಮಣ. ಬಿಜಾಪುರದ ಬಹುಮನಿ ಸುಲ್ತಾನ ಮತ್ತು ಗೊಲ್ಕೊಂಡಾದ ರಾಜರುಗಳು ದಕ್ಷ್ಣಿಣ ಭಾರತದ ಮೇಲೆ ಸಾಲು ಸಾಲು ದಂಡ ಯಾತ್ರೆ ಮಾಡಿ ಲೂಟಿ ಮಾಡಿದ್ದಲ್ಲದೇ ಅನೇಕ ದೇವಾಲಯಗಳನ್ನು ನಾಶ ಪಡಿಸಿ ನಮ್ಮ ಮಾತಾ ಭಗಿನಿಯರ ಮಾನಹಾನಿ ಮಾಡಿದ್ದಲ್ಲದೇ ಬಲವಂತದಿಂದ ಮತಾಂತರ ಮಾಡುವ ದುಸ್ಸಾಹಸಕ್ಕೆ ಇಳಿದಿರುತ್ತಾರೆ. ಮತಾಂತರಕ್ಕೆ ಒಪ್ಪದವರನ್ನು ನಿರ್ದಾಕ್ಷಿಣ್ಯವಾಗಿ ಕೊಂದು ಹಾಕುವುದಕ್ಕೂ ಹಿಂದು ಮುಂದೂ ನೋಡದಂತಹ ರಾಕ್ಷಸ ಪ್ರವೃತ್ತಿಯಲ್ಲಿ ಆಟ್ಟ ಹಾಸದಲ್ಲಿ ಮೆರೆಯುತ್ತಾ, ಸಿಕ್ಕ ಸಿಕ್ಕ ಸಾರ್ವಜನಿಕ ಆಸಿಪಾಸ್ತಿಗಳನ್ನು ದೋಚುತ್ತಾ , ಸಾಮ್ರಾಜ್ಯವನ್ನು ಅಕ್ಷರಶಃ ಹಾಳು ಮಾಡುತ್ತಿರುತ್ತಾರೆ. ಇಂತಹ ಮತಾಂಧರ ವಿರುದ್ದ ಹೋರಾಡುವ ಬದಲು ಅವರಿಗೆ ಕಪ್ಪ ಕೊಟ್ಟು ಅವರ ಸಾಮಂತರಾಗಿ ಪ್ರಾಣ ಉಳಿಸಿಕೊಂಡರೆ ಸಾಕು ಎನ್ನುವಂತ ಮನಸ್ಥಿತಿಗೆ ಅನೇಕ ರಾಜಮನೆತನಗಳು ಬಂದು ಬಿಟ್ಟಿರುತ್ತವೆ. ಇಂತಹವರ ವಿರುದ್ಧ ಸಿಡಿದೆದ್ದು ಸಾಮ್ರಾಜ್ಯವನ್ನು ಮತ್ತೆ ಸ್ಥಾಪಿಸಿ, ಸಿಂಹಾಸನವನ್ನೇರಿ ಸಮರ್ಥವಾಗಿ ಮುನ್ನಡೆಸುವ ಛಾತಿ ಇರುವ ರಾಜರುಗಳೇ ಇರಲಿಲ್ಲ. ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುತ್ತದೆ ನಮ್ಮ ನಾಣ್ಣುಡಿ. ಅದರೆ ಗೊತ್ತೂ ಗುರಿ ಇಲ್ಲದೇ, ಸಮರ್ಥ ಗುರುವಿನ ಮಾರ್ಗದರ್ಶನವಿಲ್ಲದೆ ಸೊರಗಿ ಹೋಗಿದ್ದ ಸಮಯದಲ್ಲಿಯೇ ಒಬ್ಬ ಸಮರ್ಥ ಶಕ್ತಿಶಾಲಿಯಾದ ನಾಯಕನನ್ನು ಹುಡುಕಿ ಅವನ ಶಕ್ತಿ ಸಾಮರ್ಥ್ಯಗಳ ಅರಿವು ಮೂಡಿಸಿ, ಧೈರ್ಯ ತುಂಬಿ ಸೂಕ್ತ ಮಾರ್ಗದರ್ಶನವನ್ನು ನೀಡಿ, ಅವನೊಂದಿಗೆ ಒಂದು ಬಲಶಾಲಿಯಾದ ಸೈನ್ಯವನ್ನು ಕಟ್ಟಿ ಮತ್ತೆ ಮುಸಲ್ಮಾನ ಧಾಳಿಕೋರರನ್ನು ಮಟ್ಟ ಹಾಕಿ ಹೊಸ ಸಾಮ್ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹಾಕಿಕೊಂಡಿದ್ದ ಶ್ರೀ ವಿದ್ಯಾರಣ್ಯರ ಕಣ್ಣಿಗೆ ಹಕ್ಕ ಬುಕ್ಕರೆಂಬ ಇಬ್ಬರು ಉತ್ಸಾಹೀ ತರುಣರು ಕಣ್ಣಿಗೆ ಬೀಳುತ್ತಾರೆ.

hakka_bukkaಹರಿಹರ ಮತ್ತು ಬುಕ್ಕರು ಮುಸಲ್ಮಾನರ ವಿರುದ್ಧದ್ದ ಯುದ್ದದಲ್ಲಿ ಸೋತು ರಾಜ್ಯವನ್ನು ಕಳೆದು ಕೊಂಡ ಪರಿಣಾಮವಾಗಿ, ದೆಹಲಿಯ ಸುಲ್ತಾನ ಅವರ ಬಂಧುಗಳನ್ನು ಕೊಲ್ಲಿ ಇವರಿಬ್ಬರನ್ನೂ ದೆಹಲಿಯಲ್ಲಿ ಯುದ್ದ ಖೈದಿಗಳಾಗಿ ಸೆರೆಮನೆಯಲ್ಲಿಟ್ಟಿರುತ್ತಾನೆ. ಅದೇ ಸಮಯದಲ್ಲಿ ದಕ್ಷಿಣದಲ್ಲಿ ಆರಾಜಕತೆ ಉಂಟಾದಾಗ ಅದನ್ನು ಹತ್ತಿಕ್ಕಲು ಸ್ಥಳೀಯರೇ ಸೂಕ್ತ ಎಂದು ನಿರ್ಧರಿಸಿದ ದೆಹಲಿ ಸುಲ್ತಾನ, ಇದೇ ಹಕ್ಕಬುಗ್ಗರನ್ನು ಅಲ್ಲಿಯ ಅರಾಜಕತೆಯನ್ನು ಅಡಗಿಸಲು ದಕ್ಷಿಣಕ್ಕೆ ಕಳುಹಿಸುತ್ತಾನೆ. ದೆಹಲಿಯ ಸುಲ್ತಾನನ ವಿರುದ್ಧ ಹಗೆತನವನ್ನು ತೀರಿಸಿಕೊಳ್ಳಲು ಖಾತರಿಸುತ್ತಿದ್ದ ಈ ಯುವಕರಿಗೆ ವಿದ್ಯಾರಣ್ಯರ ಆಶ್ರಯ ಸಿಕ್ಕಿ , ಇಂತಹ ಮತಾಂಧರ ಸಾಮಂತರಾಗಿರುವ ಬದಲು ತಮ್ಮದೇ ಸ್ವತಂತ್ರ್ಯವಾದ ನೂತನವಾದ ರಾಜ್ಯವನ್ನು ಕಟ್ಟುವಂತೆ ಪ್ರೇರೇಪಿಸಿ ಅದಕ್ಕೆ ಸೂಕ್ತವಾದ ಸಂಕಲ್ಪವನ್ನು ಅವರಲ್ಲಿ ಮೂಡಿಸುತ್ತಾರೆ.

ಇದೇ ಸಮಯದಲ್ಲಿ ದೆಹಲಿಯ ಸುಲ್ತಾನನಾಗಿದ್ದ ಮಹಮದ್ ಬಿನ್ ತುಘಲಕ್ ಆನೆಗೊಂದಿಯ ರಾಜನನ್ನು ಸೋಲಿಸಿ, ಆ ಪ್ರದೇಶದ ಉಸ್ತುವಾರಿಗೆ ತನ್ನ ಪ್ರತಿನಿಧಿಯನ್ನು ನೇಮಿಸಿರುತ್ತಾನೆ. ವಿದ್ಯಾರಣ್ಯರು, ಶಕ್ತಿ ಶಾಲಿ, ಧರ್ಮ ಮತ್ತು ದೇಶಾಭಿಮಾನವಿರುವ ಯುವಕರ ತಂಡವೊಂದನ್ನು ಸಂಘಟಿಸ, ಹಕ್ಕ ಬುಕ್ಕರು ನಾಯಕತ್ವದಲ್ಲಿ ಆನೆಗೊಂದಿ ಕೋಟೆಯನ್ನು ಪ್ರವೇಶಿಸಿ ತುಘಲಕನ ಪ್ರತಿನಿಧಿಯನ್ನು ನಿರಾಯಾಸವಾಗಿ ಕೊಂದು ಹಾಕಿ ಯಾವುದೇ ರಕ್ತಪಾತವಿಲ್ಲದೆ ಅನೆಗೊಂದಿಯನ್ನು ತಮ್ಮ ಕೈವಶಮಾಡಿಕೊಳ್ಳುವ ಮೂಲಕ ಮೊತ್ತ ಮೊದಲ ಹಿಂದೂ ಸಾಮ್ರಾಜ್ಯದ ಉದಯಕ್ಕೆ ನಾಂದಿ ಹಾಡುತ್ತಾರೆ.

ಹಕ್ಕ-ಬುಕ್ಕರು ತುಂಗಾ ಭದ್ರ ನದಿಯ ತಟದಲ್ಲಿರುವ ಆನೆಗೊಂದಿಯ ಮತ್ತೊಂದು ಬದಿಯಲ್ಲಿ ವಿದ್ಯಾನಗರವೆಂಬ ನೂತನ ನಗರಕ್ಕೆ ಶಂಕು ಸ್ಥಾಪನೆ ಮಾಡಿ, ವಿರೂಪಾಕ್ಷ ಮತ್ತು ಭುವನೇಶ್ವರಿಯರ ಸುಂದರವಾದ ಮತ್ತು ಬೃಹತ್ತಾದ ದೇವಾಲಯವನ್ನು ಕಟ್ಟುತ್ತಾರೆ.ಮೊಘಲರ ವಿರುದ್ಧದ ಪ್ರಪ್ರಥಮ ವಿಜಯದ ಸಂಕೇತವಾಗಿ ನಿರ್ಮಿಸಿದ ಈ ನಗರವನ್ನು ವಿದ್ಯಾನಗರದ ಬದಲಾಗಿ ವಿಜಯನಗರ ಎಂದು ಕರೆಯುವುದೇ ಸೂಕ್ತ ಎಂದು ನಿರ್ಧರಿಸಿದ ವಿದ್ಯಾರಣ್ಯರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆಗೆ ಕಾರಣೀಭೂತರಾಗುತ್ತಾರೆ. ಅಂದು ವಿದ್ಯಾರಣ್ಯರ ಕೃಪಾಶೀರ್ವಾದದಿಂದ ಸ್ಥಾಪಿಸಲ್ಪಟ್ಟ ವಿಜಯನಗರ ಸಾಮ್ರಾಜ್ಯ, ಪರಕೀಯರ ಆಕ್ರಮಣವನ್ನು ಮೆಟ್ಟಿ, ಮುಂದೆ ಸುಮಾರು 310ವರ್ಷಗಳ ಕಾಲದಲ್ಲಿ ದಕ್ಷಿಣಾದ್ಯಂತ ತಮ್ಮ ರಾಜ್ಯವನ್ನು ವಿಸ್ತರಿಸಿಕೊಂಡು ಮುಂದೆ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾಗಿ ಸುವರ್ಣಯುಗವಾಗಿ ವಿಜೃಂಭಿಸಿತು ಎಂಬುದನ್ನು ಇತಿಹಾಸಕಾರು ಬಣ್ಣಿಸುತ್ತಾರೆ.

ನಂದರ ದುರಾಕ್ರಮಣದಿಂದ ಬೇಸಿತ್ತಿದ್ದ ಜನರಿಗೆ ಚಾಣಕ್ಯರೆಂಬ ಗುರುಗಳು ಚಂದ್ರಗುಪ್ತ ಎಂಬ ಯುವಕನ ಹಿಂದೆ ಮಾರ್ಗದರ್ಶನ ಮಾಡಿ ನಂದರನ್ನು ಮಟ್ಟಹಾಕಿ ಚಂದ್ರಗುಪ್ತನ ನಾಯಕತ್ವದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದಂತೆಯೇ, ವಿದ್ಯಾರಣ್ಯರು, ಹಕ್ಕ-ಬುಕ್ಕರ ಹಿಂದೆ ಬಲವಾದ ಶಕ್ತಿಯಾಗಿ ನಿಂತು ಅವರ ನೇತೃತ್ವದಲ್ಲಿಯೇ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಹಿಂದೂ ಸಾಮ್ರಾಜ್ಯದ ಸ್ಥಾಪನೆಗೆ ಕಾರಣೀಭೂತರಾಗಿದ್ದಲ್ಲದೇ, ಮುಂದೆ ಅವರೆಂದೂ ಆಡಳಿತದಲ್ಲಿ ಹಸ್ತಕ್ಷೇಪ ಮಾಡದೇ ಶೃಂಗೇರಿ ಶಾರದಾ ಪೀಠದ ಮಠಾಧೀಶರಾಗಿ, ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅದ್ವೈತ ವೇದಾಂತ ಸಾರವನ್ನು ನಿರೂಪಿಸುವ ಪಂಚದಶೀ, ಜೀವನ್ಮುಕ್ತಿ ವಿವೇಕ, ಅನುಭೂತಿ ಪ್ರಕಾಶ ಎಂಬ ಗ್ರಂಥಗಳನ್ನೂ ರಚಿಸಿದ್ದಲ್ಲದೇ, ಭಾರತೀಯ ತತ್ತ್ವಶಾಸ್ತ್ರ ಪ್ರಕಾರಗಳನ್ನು ಸುಲಭವಾಗಿ ಪರಿಚಯ ಮಾಡಿಕೊಡುವ ಸರ್ವದರ್ಶನ ಸಂಗ್ರಹ ಜ್ಯೋತಿಷಕ ಕೃತಿ ಕಾಲನಿರ್ಣಯ, ಶಂಕರವಿಜಯ ಮುಂತಾದ ಗ್ರಂಥಕರ್ತರು ವಿದ್ಯಾರಣ್ಯರೇ ಎಂದು ನಂಬಲಾಗಿದೆ.

ಸಾಹಿತ್ಯದ ಜೊತೆಗೆ ಸಂಗೀತದಲ್ಲೂ ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದ ವಿದ್ಯಾರಣ್ಯರು ಸಂಗೀತಸಾರವೆಂಬ ಸಂಗೀತ ಗ್ರಂಥವನ್ನು ರಚಿಸಿ ಇದರಲ್ಲಿ ರಾಗಗಳ ಜನ್ಯ ಜನಕ ರೀತಿಗಳ ಮೊದಲನೇ ನಿರೂಪಣೆ ಕಂಡು ಬರುತ್ತದೆ. ಅವರು ನಿರೂಪಿಸಿದ ದಕ್ಷಿಣಾದಿ ಸಂಗೀತ ರೀತಿಯು ಮುಂದೆ ಕರ್ನಾಟಕ ಸಂಗೀತವೆಂದೇ ಜಗತ್ಪ್ರಸಿದ್ಧವಾಗಿದೆ. ವಿದ್ಯಾರಣ್ಯರೇ ರಚಿಸಿದ ವಿವರಣಾ ಪ್ರಮೇಯ ಸಂಗ್ರಹ ಕೃತಿಯೂ ಕೂಡಾ ಅತ್ಯಂತ ಮಹತ್ವದ್ದಾಗಿದೆ.

ವಿದ್ಯಾರಣ್ಯರು ಶೃಂಗೇರಿಯ ಪೀಠಾಧಿಪತಿಗಳಾಗಿದ್ದದ್ದು ಕೇವಲ 6 ವರ್ಷಗಳು ಮಾತ್ರ ಉಳಿದಂತೆ ಅವರ ಜೀವಿತವಧಿ ಹಿಂದೂಧರ್ಮ ಸಾಮ್ರಾಜ್ಯ ಸ್ಥಾಪನೆಗಾಗಿಯೇ ಮೀಸಲಾಗಿದ್ದಿತ್ತು. ಆದರೆ, ಪೀಠಾಧಿಪತಿಗಳಾಗಿದ್ದ ಅಲ್ಪಾವಧಿಯಲ್ಲಿ ಶೃಂಗೇರಿ ಮಠವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ದರು. ಕಾಶ್ಮೀರದ ಮೂಲ ಶಾರದಾ ಪೀಠದಿಂದ ಆದಿ ಶಂಕರರು ತಂದ ಮೂಲ ಶ್ರೀಗಂಧದ ವಿಗ್ರಹದ ಬದಲಿಗೆ ಶ್ರೀ ಶಾರದಾ ದೇವಿಯ ಚಿನ್ನದ ವಿಗ್ರಹವನ್ನು ಸ್ಥಾಪಿಸಿದವರೂ ವಿದ್ಯಾರಣ್ಯರೇ. ಮುಂದೇ 1386ರಲ್ಲಿ ಹಂಪೆಯಲ್ಲಿ ವಿದ್ಯಾರಣ್ಯರು ಮೃತರಾಗುತ್ತಾರೆ. ಇಂದಿಗೂ ಸಹಾ ಹಂಪೆಯ ವಿರೂಪಾಕ್ಷ ದೇವಾಲಯದ ಹಿಂಭಾಗದಲ್ಲಿ ಅವರ ಸಮಾಧಿಯನ್ನು ಕಾಣ ಬಹುದಾಗಿದೆ.

ತಮ್ಮ ಅಪಾರವಾದ ಪಾಂಡಿತ್ಯದಿಂದ ಕೇವಲ ಮಠಾಧಿಪತಿಗಳಾಗಿಯೇ ಕೂರದೇ, ಮುಸನ್ಮಾನರ ಧಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿ ಹಿಂದು ರಾಜ್ಯ ಸ್ಥಾಪನೆಗೆ ಕಾರಣರಗಿದ್ದಲ್ಲದೇ, ಅನೇಕ ಧಾರ್ಮಿಕ ಗ್ರಂಥಗಳು, ಸಂಗೀತದ ಕುರಿತಾದ ಮೂಲ ಗ್ರಂಥಗಳನ್ನು ರವಿಸುವ ಮೂಲಕ ಬಹುಮುಖ ಪ್ರತಿಭೆಯ ಗುರುಗಳು ಎನಿಸಿಕೊಳ್ಳುತ್ತಾರೆ ವಿದ್ಯಾರಣ್ಯರು. ಸಾಮ್ರಾಜ್ಯ, ಸಂಗೀತ ಸಾಹಿತ್ಯ ಮತ್ತು ಕಲೆಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಇತಿಹಾಸದ ಪುಟಗಳಲ್ಲಿ ಆಜರಾಮರವಾಗಿಸಿದ ವಿದ್ಯಾರಣ್ಯರ ಕಾರ್ಯಕ್ಕೆ ಮಾರುಹೋದ ಕನ್ನಡಿಗರು ಹೆಮ್ಮೆಯಿಂದ ಅವರನ್ನು ಕರ್ನಾಟಕ ರಾಜ್ಯ ಸಂಸ್ಥಾಪನಾಚಾರ್ಯ ಎಂದು ಕರೆದದ್ದರಲ್ಲಿ ಅತಿಶಯೋಕ್ತಿಯೇನಿಲ್ಲ.

ಇಂದು ವೈಶಾಖ ಶುದ್ಧ ಸಪ್ತಮಿ. ಗುರು ವಿದ್ಯಾರಣ್ಯರ ಜಯಂತಿ. ಹಿಂದೂ ಸಾಮ್ರಾಜ್ಯ ಮತ್ತು ಕರ್ನಾಟಕ ರಾಜ್ಯ ಸ್ಥಾಪನೆಗೆ ಕಾರಣಿಭೂತರಾದ ವಿದ್ಯಾರಣ್ಯರ ಸಾಧನೆಯ ಕುರಿತಂತೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲವಾಗಿದೆ. ಎಲ್ಲೋ ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಹೆಸರಿನಲ್ಲಿ ಬಡಾವಣೆ ಇದ್ದು ಅವರ ಜಯಂತಿಯನ್ನು ಶಂಕರ ಮಠಗಳಲ್ಲಿ ಕೇವಲ ಮಂಗಳಾರತಿ, ಕೋಸಂಬರಿ ಮತ್ತು ಪಾನಕಗಳಿಗಷ್ಟೇ ಸೀಮಿತ ಮಾಡಿರುವುದು ನಿಜಕ್ಕೂ ದುಃಖಕರವೇ ಸರಿ.

ವಯಕ್ತಿಕವಾಗಿ ಹೇಳಬೇಕೆಂದರೆ, ವಿದ್ಯಾರಣ್ಯರ ಬಗ್ಗೆ ನನಗೆ ಅಪಾರವಾದ ಗೌರವ ಮತ್ತು ಹೆಮ್ಮೆ. ಏಕೆಂದರೆ ಒಂದು ಮೂಲದ ಪ್ರಕಾರ ಮತ್ತು ದೊರೆತಿರುವ ಕೆಲ ಶಾಸನಗಳು ಮತ್ತು ದಾಖಲೆಗಳ ಪ್ರಕಾರ ವಿದ್ಯಾರಣ್ಯರ ಜನ್ಮಸ್ಥಳ ಹಾಸನ ಜಿಲ್ಲೆಯ ಚೆನ್ನರಾಯ ಪಟ್ಟಣದ ಬಾಳಗಂಚಿ ಎಂಬ ಪುಟ್ಟ ಗ್ರಾಮ. ಬಾಲಕಂಚಿ, ಅಂದರೆ ಚಿಕ್ಕ ಕಂಚಿ ಎಂಬ ಹೆಸರಾಗಿದ್ದ ಊರು ನಂತರ ಜನರ ಆಡುಭಾಷೆಯಲ್ಲಿ ಅಪಭ್ರಂಶವಾಗಿ ಸದ್ಯಕ್ಕೆ ಬಾಳಗಂಚಿಯಾಗಿದೆ. ಹಕ್ಕ ಬುಕ್ಕರೂ ಇಲ್ಲಿಯ ಅಕ್ಕ ಪಕ್ಕದವರು ಎಂಬುವುದನ್ನು ಪುಷ್ಟೀಕರಿಸುವಂತೆ ಹತ್ತಿರದಲ್ಲಿ ಹಕ್ಕನ ಹಳ್ಳ ಮತ್ತು ಬುಕ್ಕನ ಬೆಟ್ಟ ಎಂಬದನ್ನು ಇಂದಿಗೂ ಕಾಣಬಹುದಾಗಿದೆ. 80ರ ದಶಕದಲ್ಲಿ ಇದೇ ವಿಷಯವಾಗಿ ಕಂಚಿ‌ಮಠದ ಜಯೇಂದ್ರ ಸರಸ್ವತಿಗಳು (ಈಗ ಅವರಿಲ್ಲ) ತಮ್ಮ ಶಿಷ್ಯ ವೃಂದದೊಂದಿಗೆ ನಮ್ಮ ಊರಿಗೆ ಭೇಟಿಯಿತ್ತು ನಮ್ಮ ಮನೆಯಲ್ಲಿ ಎರಡು ದಿನ ತಂಗಿದ್ದು ವಿದ್ಯಾರಣ್ಯರ ಬಗ್ಗೆ ಅನೇಕ ಮಾಹಿತಿಗಳನ್ನು ಸಂಗ್ರಹಿಸಿ ಇಂತಹ ಇತಿಹಾಸವುಳ್ಳ ಊರನ್ನು ಉದ್ದಾರ ಮಾಡಲು ಕಂಚಿ ಮಠದ ಕಡೆಯಿಂದ ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು. ದುರದೃಷ್ಟವಶಾತ್ ಅವರ ಆಶ್ವಾಸನೆ ಕಾರಣಾಂತರಗಳಿಂದ ‌ಅದು ಹಾಗೆಯೇ ಉಳಿದು‌ ಹೋಯಿತು. ನಾವೂ ಕೂಡಾ ಅದೇ ಊರಿನವರಾಗಿರುವ ಕಾರಣ ಬಹುಶಃ ನಾವೂ ಕೂಡಾ ವಿದ್ಯಾರಣ್ಯರ ವಂಶದವರು ಎನ್ನುವ ಹೆಮ್ಮೆಇದೆ. ಇನ್ನೂ ಕಾಕತಾಳೀಯವೆಂದರೇ, ಹಲವಾರು ವರ್ಷಗಳಿಂದ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿಯೇ ಆಶ್ರಯ ಪಡೆದಿದ್ದೇವೆ. ಇದು ನಮ್ಮ ಪೂರ್ವಜನ್ಮದ ಸುಕೃತದ ಫಲವೋ ಅಥವಾ ವಿದ್ಯಾರಣ್ಯರ ಜೊತೆಯ ಋಣಾನು ಸಂಬಂಧ ಮತ್ತು ಅನುಬಂಧ ಇರಲೇಕು.

ಏನಂತೀರೀ?

ಈ ಲೇಖನವನ್ನು ಬರೆಯಲು ಪ್ರೇರೇಪಿಸಿದ ಗೆಳೆಯ ಮಂಜುನಾಥ್ದ್ (ಪಣವ ಮಂಜು) ಅವರಿಗೆ ಹೃತ್ಪೂರ್ವಕ ಧನ್ಯವಾದಗಳು

10 thoughts on “ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಶ್ರೀ ವಿದ್ಯಾರಣ್ಯರು

  1. ತಮ್ಮಾ ಈ ಬರವಣಿಗೆಯು ಚೈತನ್ಯಾ ಪೂರಕವಾಗಿದೆ ಈಗಲೂ ಗುರುಗಳೂ ತಪೋಗೈಯುತಿದ್ದಾರೆ ಎಂದೂ ಹೇಳಿರುವಾ ಪ್ರತೀತಿ ಇದೆ ಶೃಂಗೇರಿಯಲ್ಲಿ ಅವರಾ ಅಧಿಷ್ಠಾನದ ಮುಂದೆ ನಿಂತರೆ ಒಂದೂ ರೀತಿಯಾದ ವಿಶೇಷ ಅನುಭವ ಗೋಚರವಾಗುತ್ತದೆ ಒಬ್ಬ ಅತೀ ಶ್ರೇಷ್ಠ ಗುರುಗಳನ್ನು ಕಂಡ ಅನುಭವ ನಮ್ಮಾ ಇಂದಿನ ಜೀವನಕ್ಕೆ ಅವರಾ ಕೊಡುಗೆ ಅಪಾರ, ಅವರೂ ಇಂಥ ಯೋಚನೆ ಮಾಡಡಿದಿದ್ದರೆ ಏನಾಗಿತಿತ್ತು??

    Liked by 2 people

  2. ಮಾಹಿತಿಗೆ ಧನ್ಯವಾದಗಳು. ನನ್ನದೊಂದು ಕೋರಿಕೆ/ಸಲಹೆ. ಈ ವರ್ಷದ ಕನ್ನಡ ರಾಜ್ಯೋತ್ಸವದಿಂದ ಕರ್ನಾಟಕ ಸಂಸ್ಥಾಪನಾಚಾರ್ಯರನ್ನು ಸರ್ಕಾರದ ವತಿಯಿಂದ ರಾಜ್ಯದ ಜನತೆಗೆ ಪರಿಚಯಿಸಿ ಪೂಜಿಸಬೇಕೆಂದು ಬಿನ್ನವಿಸೋಣ

    Liked by 2 people

    1. ಶ್ರೀ ವಿದ್ಯಾರಣ್ಯರ ಪೂರ್ವಾಶ್ರಮದ ವಂಶದವರೇ ತಂಜಾವೂರು/ಕುಂಭಕೋಣಂನ ಗೋವಿಂದ ದೀಕ್ಷಿತರು ಹಾಗೂ ಕಾಂಚೀ ಕಾಮಕೋಟಿ ಪೀಠಾಧಿಪತಿ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಪರಮಾಚಾರ್ಯರು. ಆ ವಂಶದವರೇ ಆದ ಶ್ರೀ ರಾಮಕೃಷ್ಣ ನಟರಾಜ ಶಾಸ್ತ್ರೀಗಳು ನಮ್ಮ ಮನೆಯ ಹತ್ತಿರವೇ ಮಲ್ಲೇಶ್ವರಂನಲ್ಲಿ ಇದ್ದಾರೆ. ಅವರು ಹೆಚ್ಚಾಗಿ ಕಾಂಚಿಯ ಮಠದಲ್ಲೇ ಇರುತ್ತಾರೆ.

      ಇನ್ನೂ ವಿದ್ಯಾರಣ್ಯರ ಜಯಂತಿ ಆರಾಧನೆ ಇತ್ಯಾದಿ ಬಗ್ಗೆ. ಶೃಂಗೇರಿ ಶಂಕರ ಮಠದವರ ಅನುಸಾರ ಶ್ರೀ ವಿದ್ಯಾರಣ್ಯರು ಆಂಧ್ರ ವೆಲ್ನಡು ತೆಲುಗು ಜನಾಂಗದವರು ಎಂದು ದಾಖಲಿಸಿದ್ದಾರೆ. ಯಾವ ಕಾರಣಕ್ಕೋ ಗೊತ್ತಿಲ್ಲಾ.

      ಅವರ ಜಯಂತಿ ಆರಾಧನೆಯನ್ನು ಶೃಂಗೇರಿ ಮಠದವರು ಸಮಗ್ರ ಹಿಂದೂ ಸಮಾಜವನ್ನು ಒಳಗೊಂಡಂತೆ ಆಚರಿಸಬೇಕು. ಆದರೆ ಕನ್ನಡ ಮಾತನಾಡುವ ಕೆಲವು ಗುಲಾಮಿ ಬುದ್ದಿಯ ಬ್ರಾಹ್ಮಣರು ತೆಲುಗರ ಪ್ರಾಬಲ್ಯವಿರುವ ಮಠಕ್ಕೆ ಡೊಗ್ಗುಸಲಾಮು ಹಾಕುತ್ತ ಎಲ್ಲವನ್ನೂ ಹಾಳುಗೆಡವಿದ್ದಾರೆ.

      ಕೊಂಡಜ್ಜಿ ವೆಂಕಟೇಶ್ ರವರು ದಾಖಲೆಗಳ ಸಮೇತ ವಿದ್ಯಾರಣ್ಯರು ಹೊಯ್ಸಳ ಕರ್ನಾಟಕ ಪಂಗಡವರೆಂದು ಸಾಬೀತು ಪಡಿಸಿದ್ದಾರೆ.

      Liked by 1 person

      1. 80ರ ದಶಕದಲ್ಲಿ ಕಾಂಚೀ ಕಾಮಕೋಟಿ ಪೀಠಾಧಿಪತಿಗಳಾಗಿದ್ದ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಪರಮಾಚಾರ್ಯರು ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ಬಳಿಯವರಂತೆ. ಅದೊಮ್ಮೆ ಕಂಚಿಗೆ ಬಂದಿದ್ದ ಭಕ್ತರೊಬ್ಬರು ಮಾತಿಗೆ ಮಾತು ಬೆಳೆಸುತ್ತಾ ಶ್ರೀ ವಿದ್ಯಾರಣ್ಯರ ಜನ್ಮಸ್ಥಳ ಹಾಸನ ಜಿಲ್ಲೆಯ ಬಾಳಗಂಚಿ ಎಂದು ಹೇಳಿದರಂತೆ. ಅದರ ಸತ್ಯಾಸತ್ಯೆತೆಗಳನ್ನು ತಿಳಿಯಲು ಅವರ ಶಿಷ್ಯರೊಬ್ಬರನ್ನು ನಮ್ಮ ಊರಿಗೆ ಕಳುಹಿಸಿದ್ದರು. ಊರಿನ ಶಾನುಭೋಗ ವಂಶದವರಾದ ನಮ್ಮ ಮನೆಗೆ ಬಂದಾಗ ಆಗಷ್ಟೇ ನಮ್ಮ ತಾತನವರು ವಿಧಿವಶರಾಗಿದ್ದ ಕಾರಣ ನಮ್ಮ ಅಜ್ಜಿಯವರ ಸಲಹೆಯ ಮೇರೆ ನಮ್ಮ ಬೆಂಗಳೂರಿನ ವಿಳಾಸ ಪಡೆದುಕೊಂಡು ನಮ್ಮ ಮನೆಗೆ ಬಂದು ನಮ್ಮ ತಂದೆಯವರನ್ನು ಕಂಚಿಗೆ ಕಾರಿನಲ್ಲಿ ಕರೆದುಕೊಂಡು ಹೋಗಿ ಶ್ರೀ ಶ್ರೀ ಚಂದ್ರಶೇಖರೇಂದ್ರ ಸರಸ್ವತಿಯವರನ್ನು ಭೇಟಿ ಮಾಡಿಸಿ ಊರಿನ ಇತಿಹಾಸವನ್ನೆಲ್ಲಾ ತಿಳಿದು ಹರ್ಷಿತರಾಗಿ ತಮ್ಮ ಶಿಷ್ಯರಾಗಿದ್ದ ಶ್ರೀ ಶ್ರೀ ಜಯೇಂದ್ರ ಸರಸ್ವತಿಯವರನ್ನು ನಮ್ಮ ಊರಿಗೆ ಆವರ ಶಿಷ್ಯಕೋಟಿಯ ಸಮೇತವಾಗಿ ಕಳುಹಿಸಿ ಕೊಟ್ಟಿದ್ದರು.. ಸುಮಾರು ಎರಡು ದಿನಗಳ ಕಾಲ ನಮ್ಮ ಊರಿನ ಮನೆಯಲ್ಲಿದ್ದು ಕೊಂಡು ಊರಿನ್ನೆಲ್ಲಾ ಸುತ್ತಿ ನೋಡಿ ಅಲ್ಲಿದ್ದ ಶಿಲಾಶಾಸನಗಳು ಮತ್ತು ಊರ ಹಿರಿಯರನ್ನೆಲ್ಲಾ ಮಾತನಾಡಿಸಿ ವಿಷಯ ಸಂಗ್ರಹಿಸಿ ವಿದ್ಯಾರಣ್ಯರು ಹುಟ್ಟಿದ ಈ ಸ್ಥಳವನ್ನು ನಮ್ಮ ಮಠದ ಕಡೆಯಿಂದ ಉದ್ಧಾರ ಮಾಡಲು ಪ್ರಯತ್ನಿಸುವುದಾಗಿ ಆಶ್ವಾಸನೆ ನೀಡಿ ಹೋಗಿದ್ದದ್ದು ಆಗ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ನನಗೆ ಇನ್ನೂ ಚೆನ್ನಾಗಿಯೇ ನೆನಪಿದೆ

        ಕೆಲವರು ಹೇಳುವ ಪ್ರಕಾರ ವಿದ್ಯಾರಣ್ಯರು ಬಬ್ಬೂರು ಕಮ್ಮೆ ವಸಿಷ್ಠಗೋತ್ರದವರು. ಶತಾವಧಾನಿ ಗಣೇಶ್ ಅವರು ಹೇಳಿರುವಂತೆ ಅವರು ಹೊಯ್ಸಳ ಕರ್ನಾಟಿಕರು. ಇನ್ನೂ ಕೆಲವರು ಹೇಳುವ ಪ್ರಕಾರ ವಿದ್ಯಾರಣ್ಯರ ಜನ್ಮಸ್ಥಳ ಈಗಿನ ಹಂಪೆಯ ಆಚೀಚೆಯ ಊರು. ಹೀಗೆ ಒಟ್ಟಿನಲ್ಲಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ವಿದ್ಯಾರಣ್ಯರು ಎಲ್ಲರಿಗೂ ಸಲ್ಲುವ ಗುರುಗಳಾಗಿದ್ದಾರೆ ಎನ್ನುವಂತೂ ನಿಜ

        ಏನಂತೀರೀ?

        Like

  3. ಗುರು ವಿದ್ಯಾರಣ್ಯರ ಬಗ್ಗೆ ಬರೆದ ಈ ಲೇಖನಕ್ಕಾಗಿ ನಿಮಗೆ ಧನ್ಯವಾದಗಳು.

    Like

  4. ಆದರೆ ವಿದ್ಯಾರಣ್ಯರ ಊರನ್ನು ಕೆಲವರು ಏಕಶಿಲಾ ನಗರ (ಇಂದಿನ ವಾರಂಗಲ್) ಎಂಬ ಬಗ್ಗೆ ದಾಖಲೆಗಳಿವೆ

    Like

    1. ವಿದ್ಯಾರಣ್ಯರ ಹುಟ್ಟು ಮತ್ತು ಹುಟ್ಟೂರಿನ ಕುರಿತಂತೆ ಅನೇಕ ಜಿಜ್ಞಾಸೆಗಳು ಇವೆ. ವಿಜಯನಗರ ಸ್ಥಾಪಿಸಿದವರು ಮತ್ತು ಶೃಂಗೇರಿ ಪೀಠಾಧೀಶರು ಬೇರೆ ಬೇರೆ ಎನ್ನುವವರೂ ಇದ್ದಾರೆ. ಹಾಗಾಗಿ ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ ಎಲ್ಲವನ್ನೂ ಅರಾಧಿಸಿದರೆ ತೊಂದರೆ ಇಲ್ಲ‌ ಅನ್ನೋದು ವಯಕ್ತಿಕ ಅಭಿಪ್ರಾಯ.

      ಏನಂತೀರೀ?

      Like

  5. ಶ್ರೀ ವಿದ್ಯಾರಣ್ಯರು ದುರ್ವಾಸನಾ ಪ್ರತೀಕಾರ ದಶಕಂ ಎಂಬ ಕೃತಿಯನ್ನು ರಚಿಸಿದ್ದಾರೆಯೇ ?

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s