ವಿಶ್ವ ಕುಟುಂಬ ದಿನ

family

ಇಡೀ ವಿಶ್ವದಲ್ಲಿ ಮೇ 15 ರಂದು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸುತ್ತಾರೆ. ಆದರೆ ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ನಮ್ಮ ಕುಟುಂಬ ಎಂಬ ತತ್ವಾಧಾರಿತವಾದ ನಮ್ಮ ಸನಾತನ ಧರ್ಮದಲ್ಲಿ ನಮಗೆ ಪ್ರತೀ ದಿನವೂ ಕುಟುಂಬ ದಿನವೇ. ಈ ಕುಟುಂಬ ಎಂಬ ಪರಿಕಲ್ಪನೆ ತುಂಬಾ ಪವಿತ್ರ ಮತ್ತು ಮಹತ್ವವಾದದ್ದು. ಇಲ್ಲಿ ಅಜ್ಜಾ-ಅಜ್ಜಿ, ಅಪ್ಪಾ-ಅಮ್ಮಾ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಅತ್ತೆ-ಮಾವ, ಅಕ್ಕ-ತಂಗಿ, ಅಣ್ಣ-ತಮ್ಮಾ ಹೀಗೆ ಪ್ರತಿಯೋರ್ವ ವ್ಯಕ್ತಿಯೂ ಒಂದೇ ಸೂರಿನಡಿಯಲ್ಲಿ ಒಗ್ಗಟ್ಟಾಗಿ ಬಾಳುವ ಒಂದು ಸುಮಧುರ ಸಂಬಂಧ. ಈ ರೀತಿಯ ಒಟ್ಟು ಕುಂಟುಬಗಳು ಒಂದೆಡೆ ಇರುವುದರಿಂದ ಸಮಾಜವನ್ನು ಕೇಂದ್ರೀಕರಿಸುವ ಈ ವ್ಯವಸ್ಥೆ ಹಿಂದಿನಿಂದಲೂ ನಮ್ಮಲ್ಲಿ ಅನೂಚಾನಾಗಿ ನಡೆದುಕೊಂಡು ಬಂದಿದೆ.

ಆದರೆ ಇಂದು ಅಂಧ ಪಾಶ್ವಾತ್ಯೀಕರಣದ ಫಲವಾಗಿ ಅವಿಭಕ್ತ ಕುಟುಂಬಗಳೆಲ್ಲವೂ ಒಡೆದು ಛಿದ್ರ ಛಿದ್ರವಾಗಿ ವಿಭಕ್ತ ಕುಟುಂಬಗಳಾಗಿ ಮಾರ್ಪಟ್ಟಿರುವ ಕಾರಣವೇ, ಇಂತಹ ಕುಟುಂಬ ದಿನವನ್ನು ಆಚರಿಸುವಂತಹ ದುಸ್ಥಿತಿ ಬಂದಿರುವುದು ನಿಜಕ್ಕೂ ದುಖಃಕರವೇ ಸರಿ. ಮಕ್ಕಳಿರಲವ್ವಾ ಮನೆತುಂಬ ಎಂಬ ಮಾತು ಬದಲಾಗಿ ನಾವಿಬ್ಬರು ನಮಗಿಬ್ಬರು ಎಂಬ ಮಾತಾಗಿ, ಅದು ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಎಂಬ ಮಾತು ಹಳೆಯದಾಗಿ, ಹೆಣ್ಣಾಗಲೀ, ಗಂಡಾಗಲೀ ಮಗುವೊಂದೇ ಇರಲಿ ಎಂಬುದೂ ಬದಲಾಗಿ, ಗಂಡ ಹೆಂಡತಿ ಇದ್ದರೆ ಸಾಕು ಮಕ್ಕಳೇಕೆ ಬೇಕು ಎನ್ನುವುದೂ ಮರೆಯಾಗಿ, ತಮ್ಮ ವಯಕ್ತಿಕ ತೆವಲನ್ನು ತೀರುವಷ್ಟು ಸಮಯ living together ಎಂಬ ಕೆಟ್ಟ ಪದ್ದತಿಯಲ್ಲಿ ನಾವಿದ್ದೇವೆ . ಆದರೆ, ಕುಟುಂಬ ಎಂಬ ಪರಿಕಲ್ಪನೆಯೇ ಅತೀಸುಂದರ. ಮಗುವಿಗೆ ಮನೆಯೇ ಮೊದಲ ಪಾಠ ಶಾಲೆ. ಪ್ರತೀದಿನ ಮನೆಯ ಆಗು ಹೋಗುಗಳನ್ನೇ ನೋಡಿ ಕೊಂಡೇ ಬೆಳೆಯುವ ಮಗು ಅದೇ ಸಂಸ್ಕಾರವನ್ನು ರೂಢಿಸಿಕೊಳ್ಳುತ್ತದೆ. ಹಾಗಾಗಿ ಮನೆಯಲ್ಲಿ ಹೆಚ್ಚು ಹೆಚ್ಚು ಜನರಿದ್ದಷ್ಟೂ ಮಗು ಹೆಚ್ಚು ಕಲಿಯುತ್ತದೆ ಎನ್ನುವುದನ್ನೂ ಮರೆತು, ಗಂಡ ಹೆಂಡತಿ ಇಬ್ಬರೂ ಕೆಲಸಮಾಡುವ ಸಲುವಾಗಿ ಮಗುವನ್ನು ಯಾರೋ ಸಂಸ್ಕಾರದ ಪರಿಚಯವೇ ಇಲ್ಲದ, ವ್ಯಾಪಾರೀಕರಣದ ಅಪರಿಚಿತರ Play Homeಗಳಲ್ಲಿ ಆಯಾಗಳ ಬಳಿ ನಮ್ಮ ಮಗುವನ್ನು ಬೆಳೆಸುತ್ತಿರುವುದು ಮಕ್ಕಳ ಭವಿಷ್ಯ ಮತ್ತು ಸಮಾಜದ ಸ್ವಾಸ್ಧ್ಯಕ್ಕೆ ಮಾರಕವಾಗಿದೆ ಎಂದರೂ ತಪ್ಪಾಗಲಾರದು.

ಸದ್ಯದ ಜನಸಂಖ್ಯಾ ಸ್ಪೋಟ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಣ್ಣ ಕುಟುಂಬಗಳು ಒಳ್ಳೆಯದು ಎನಿಸಬಹುದಾದರೂ ಅಲ್ಲಿ ಒಟ್ಟು ಕುಟುಂಬದಲ್ಲಿ ಸಿಗುವ ಖುಷಿ ಹಾಗೂ ಅನುಭವದ ಪಾಠಗಳು ಖಂಡಿತವಾಗಿಯೂ ಸಿಗಲು ಸಾಧ್ಯವೇ ಇಲ್ಲ. ಹಾಗಾಗಿ ಇಲ್ಲಿ ಒಟ್ಟು ಕುಟುಂಬದ ಸಾಧಕ ಬಾಧಕಗಳ ಕುರಿತು ಸ್ವಲ್ಪ ತಿಳಿಯೋಣ.

  • ಒಟ್ಟು ಕುಟುಂಬದಲ್ಲಿ ಎಲ್ಲರೂ ಒಂದೊಂದು ಕೆಲಸದಲ್ಲಿ ಮಗ್ನರಾಗಿರುವುದರಿಂದ ಮಕ್ಕಳು ತಮ್ಮ ಎಲ್ಲಾ ಅವಶ್ಯಕತೆಗಳಿಗೆ ಕೇವಲ ತಮ್ಮ ತಂದೆಯರ ಲಭ್ಯತೆಗೇ ಅವಲಂಭಿಸದೇ ಆ ಸಮಯದಲ್ಲಿ ಮನೆಯಲ್ಲಿ ಸುಲಭವಾಗಿ ಸಿಗುವ ಅಜ್ಜ-ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಅತ್ತೆ ಮಾವ ಹೀಗೆ ಎಲ್ಲರ ಸಹಾಯವನ್ನೂ ಪಡೆಯಬಹುದು. ಹೀಗಾಗಿ ಮಕ್ಕಳಿಗೆ ಎಂದೂ ಒಂಟಿ ತನವೇ ಕಾಡದು ಮತ್ತು ಮನೆಯಲ್ಲಿರುವ ಇತರೇ ಮಕ್ಕಳ ಜೊತೆ ಹಂಚಿಕೊಂಡು ನಾನು ನನ್ನದು ಎಂಬ ಸ್ವಾರ್ಥ ಇಲ್ಲವಾಗಿ, ಎಲ್ಲವನೂ ಹಂಚಿಕೊಂಡು ಸಹಬಾಳ್ವೆ ನಡೆಸುವುದನ್ನು ಬಾಲ್ಯದಿಂದಲೇ ಮನೆಯಲ್ಲಿಯೇ ಕಲಿತುಕೊಂಡು ದೊಡ್ಡವರಾಗಿ ಬೆಳೆಯುವುದೇ ಗೊತ್ತಾಗುವುದಿಲ್ಲ .
  • ಇನ್ನು ಹಬ್ಬ ಹರಿದಿನ, ಮದುವೆ ಮುಂಜಿ ನಾಮಕರಣ ಮುಂತಾದ ಶುಭ ಸಮಾರಂಭಗಳಲ್ಲಿ ಜನರಿದ್ದಲ್ಲಿಯೇ ಸಂಭ್ರಮ. ಮೂರೂ ಇಲ್ಲವೇ ನಾಲ್ಕೇ ಜನರು ಇರುವಂತಹ ವಿಭಕ್ತ ಕುಟುಂಬಲ್ಲಿ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಸಂಭ್ರಮಿಸಲು ಸಾಧ್ಯವೇ ಇಲ್ಲ. ಇನ್ನು ಹಿರಿಯರು ಮನೆಯಲ್ಲಿ ಇರುವುದರಿಂದ ಆಚಾರ, ವಿಚಾರ ಕಟ್ಟು ಪಾಡುಗಳು ಮತ್ತು ಸಂಪ್ರದಾಯದ ಆಚರಣೆಗಳಿಗೆ ಕಳೆ ಕಟ್ಟುತ್ತದೆ ಮತ್ತು ಮಕ್ಕಳೂ ಅದನ್ನು ನೋಡಿ ಕಲಿತುಕೊಳ್ಳುತ್ತಾರೆ.
  • ವಿದ್ಯೆ ಎಷ್ಟೇ ಕಲಿತರೂ ವಿನಯವಿಲ್ಲದಿದ್ದರೇ ಕಲಿತ ವಿದ್ಯೆಗೆ ಯಾವ ಗೌರವವೂ ಇರುವುದಿಲ್ಲ. ಒಟ್ಟು ಕುಟುಂಬದಲ್ಲಿ ಯಾರೇ ತಪ್ಪು ಮಾಡಿದರೂ ಅದನ್ನು ತಿದ್ದಿ ಹೇಳಲು ಹಿರಿಯರು ಇರುತ್ತಾರೆ. ತಮ್ಮ ಜೀವನದ ಅನುಭವದ ಪಾಠಗಳ ಮೂಲಕ ಯಾವುದು ತಪ್ಪು, ಯಾವುದು ಸರಿ ಎಂಬುದನ್ನು ತಿಳಿ ಹೇಳುವ ಮೂಲಕ ಗುರು ಹಿರಿಯರಿಗೆ ಗೌರವ ಕೊಡುವುದನ್ನು ಸಹಜವಾಗಿಯೇ ಮಕ್ಕಳು ಕಲಿಯುತ್ತಾರೆ.
  • ಪುಸ್ತಕವನ್ನು ಓದುವುದರಿಂದಲೇ ಎಲ್ಲರೂ ಬುದ್ಧಿವಂತರಾಗುವುದಿಲ್ಲ. ಜೀವನದ ಅನುಭವದ ಪಾಠ ಲೋಕ ಜ್ಞಾನವನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಮಕ್ಕಳು ಕುಟುಂಬದ ಸಹ ಸದಸ್ಯರ ಅನುಭವಗಳ ಮುಖಾಂತರ ಜೀವನದಲ್ಲಿ ಬದುಕಿನ ಪಾಠವನ್ನು ಕಲಿಯುತ್ತಾರೆ. ಹಾಗಾಗಿ ಮುಂದೆ ಬರುವ ಎಂತಹ ಸವಾಲುಗಳನ್ನೂ ಎದುರಿಸಲು ಮಕ್ಕಳು ಸಿದ್ಧರಾಗಿರುತ್ತಾರೆ.
  • ಇನ್ನು ವಯಕ್ತಿಕವಾಗಿ ಹೇಳಬೇಕೆಂದರೆ ನಮ್ಮ ಮಕ್ಕಳೇ ನಿಜವಾಗಿಯೂ ಪುಣ್ಯವಂತರೆಂದೇ ಹೇಳಬೇಕು ಅವರು ತಮ್ಮ ಬಹುಪಾಲು ಸಮಯವನ್ನು ತಮ್ಮ ತಾತ-ಅಜ್ಜಿ, ಅಜ್ಜಾ-ಅಜ್ಜಿಯರ ಜೊತೆ ಕಳೆಯುವಂತ ಸುಯೋಗವನ್ನು ಪಡೆದಂಹವರು. ಇಂದು ನಮ್ಮ ತಂದೆ ತಾಯಿಯರು ನಮ್ಮನ್ನು ಅಗಲಿರಬಹುದು ಆದರೆ ಅವರು ತಮ್ಮ ಮೊಮ್ಮಕ್ಕಳಲ್ಲಿ ಬಿತ್ತಿ ಹೋದ ಸಂಪ್ರದಾಯದ ಬೀಜ ಇಂದು ಮೊಳಕೆಯೊಡೆದು ಸಣ್ಣ ಸಸಿಯಾಗಿ ಟಿಸಿಲು ಹೊಡೆಯುತ್ತಿದ್ದರೆ ಅದಕ್ಕೆ ಇಂದು ನಮ್ಮ ಅತ್ತೆ ಮತ್ತು ಮಾವನವರು ಸರಿಯಾದ ಸಮಯಕ್ಕೆ ಸಂಪ್ರದಾಯದ ನೀರೇರದು ಪೋಷಿಸಿ ಹೆಮ್ಮರ ಮಾಡುವ ಕನಸು ಹೊತ್ತಿದ್ದಾರೆ ಮತ್ತು ಅದರಲ್ಲಿ ಬಹಳಷ್ಟು ಸಾಕಾರವನ್ನೂ ಪಡೆದಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸದು.

ಕೂರೋನಾ ಲಾಕ್ ಡೌನ್ ಸಮಯ ನಿಜಕ್ಕೂ. ಕುಟುಂಬಸ್ಥರಿಗೆ ಒಂದು ರೀತಿಯ ವರದಾನವಾಯಿತು ಎಂದರೂ ತಪ್ಪಾಗಲಾರದು. ತಂದೆ ತಾಯಂದಿರು ಕಛೇರಿಗೆ ಹೋಗುವಾಗ ಮಕ್ಕಳು ಎದ್ದಿರುವುದಿಲ್ಲ. ಮಕ್ಕಳು ಎದ್ದಿರುವಾಗ ಅಪ್ಪಾ ಅಮ್ಮಂದಿರು ಮನೆಯಲ್ಲಿ ಇಲ್ಲದಿರುವ ಸಂದರ್ಭಗಳೇ ಹೆಚ್ಚಾಗಿದ್ದ ಸಮಯದಲ್ಲಿ ಈ ಲಾಕ್ ಡೌನ್ ಎಲ್ಲರನ್ನೂ ಒಟ್ಟುಗೂಡಿಸಿತು. ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಅಚ್ಚು ಕಟ್ಟಿನಿಂದ ನಿಭಾಯಿಸುವುದನ್ನು ನೋಡಿ ಮನಕ್ಕೆ ಆದ ಸಂತೋಷಕ್ಕೆ ಪಾರವೇ ಇಲ್ಲ. ನಿಜ ಹೇಳಬೇಕೆಂದರೇ ಇಡೀ ಎರಡು ತಿಂಗಳು ಕೇವಲ ಹಣವನ್ನು ಕೊಡುವುದಷ್ಟೇ ನನ್ನ ಕೆಲಸವಾಗಿದ್ದು ಮನೆಯ ಅಗತ್ಯವಿರುವ ಎಲ್ಲಾ ತರಕಾರಿ, ಹಾಲು, ಸಾಮಾನು ಸರಂಜಾಮುಗಳನ್ನು ತರುತ್ತಾ , ಮನೆಯ ಮುಂದಿನ ಕೈತೋಟಕ್ಕೆ ಕಾಲ ಕಾಲಕ್ಕೆ ಸರಿಯಾಗಿ ನೀರುಣಿಸುತ್ತಾ ಗಿಡಗಳನ್ನು ಜತನವಾಗಿ ಕಾಪಾಡುತ್ತಿರುವ ವಯಸ್ಸಿಗೆ ಬಂದ ಮಗನನ್ನು ನೋಡಿದಾಗ ಖಂಡಿತವಾಗಿಯೂ ನಾನು ನನ್ನ ಮಗನಲ್ಲಿ ನನ್ನ ತಂದೆಯನ್ನು ಕಂಡಿದ್ದಂತೂ ಸುಳ್ಳಲ್ಲ. ಇನ್ನು ತಾನಾಯಿತು ತನ್ನ ಓದಾಯಿತು ಎನ್ನುತ್ತಾ ಎಂದೂ ಅಡುಗೆಯ ಮನೆಗೇ ಕಾಲಿಡದ ಮಗಳೂ ಸಹಾ, ಈ ಲಾಕ್ ಡೌನ್ ಸಮಯದಲ್ಲಿ ಅಮ್ಮನಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುತ್ತಿದ್ದಾಳೆ. ಇನ್ನು ತುಳಸೀ ಪೂಜೆ ಮತ್ತು ದೇವರ ಪೂಜೆ ಮಾಡುವಾಗಲಂತೂ ಥೇಟ್ ನಮ್ಮ ಅಮ್ಮನನ್ನೇ ನೆನಪಿಸುತ್ತಿರುತ್ತಾಳೆ.

familyday

ಇಷ್ಟೊಂದು ಮೌಲ್ಯಗಳಿರುವ ಕುಟುಂಬ ಎಂಬ ಪರಿಕಲ್ಪನೆಯೇ ಪಾಶ್ವಾತ್ಯರಿಗೆ ಅಷ್ಟೊಂದು ಇಲ್ಲದಿದ್ದ ಕಾರಣ ಅದನ್ನು ಅನುಭವಿಸುವ ಸಲುವಾಗಿಯೇ ಮೇ 15 ರಂದು ವಿಶ್ವದೆಲ್ಲೆಡೆ ಗ್ಲೋಬಲ್‌ ಫ್ಯಾಮಿಲಿ ಡೇ ಎಂದು ಆಚರಿಸುವ ಪದ್ದತಿ ಜಾರಿಗೆ ತರಲಾಯಿತಾದರೂ ದಶಕದ ಹಿಂದೆ ಈ ದಿನವನ್ನು ವಿಶ್ವಸಂಸ್ಥೆಯು ಡೇ ಆಫ್‌ ಪೀಸ್‌ ಎಂದು ಆಚರಿಸುತ್ತಿತ್ತು. ಈಗ ಇದನ್ನು ವಿಶ್ವ ಕುಟುಂಬ ದಿನವನ್ನಾಗಿ ಆಚರಿಸುವ ಪರಿಪಾಠ ಬೆಳೆದು ಬಂದಿದೆ. ಪ್ರತಿಯೊಬ್ಬರು ತಮ್ಮ ಕುಟುಂಬವನ್ನು ಪ್ರೀತಿಸಬೇಕು, ಈ ಮೂಲಕವೇ ಇಡೀ ವಿಶ್ವವನ್ನೇ ಪ್ರೀತಿಸಬೇಕೆಂಬ ಸದಾಶಯವನ್ನು ಬೆಳೆಸಲಿ ಎನ್ನುವುದು ಅವರ ಸದುದ್ದೇಶವಾಗಿದೆ.

ಹಿಂದಿನ ಕಾಲದಲ್ಲಿ ಆಶೀರ್ವಾದ ಮಾಡುವಾಗ ಮಕ್ಕಳಿರಲವ್ವಾ ಮನೆ ತುಂಬಾ ಎಂದು ಹೇಳುತ್ತಿದ್ದರು. ಇಂದು ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಂಡು, ಹೆಣ್ಣಾಗಲೀ, ಗಂಡಾಗಲೀ ಮಕ್ಕಳೆರಡೇ ಇರಲಿ ಮತ್ತು ಅವರನ್ನು ಜವಾಬ್ಧಾರಿಯಿಂದ ಬೆಳೆಸಲು ಅವರ ಜೊತೆಗೆ ಅವರ ಅಜ್ಚಿ ಯಂದಿರು, ತಾತ ಮತ್ತು ಅಜ್ಜನವರು ಇರಲಿ ಎಂದರೆ ಸುಂದರವಲ್ಲವೇ?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ನೂಲಿನಂತೆ ಸೀರೆ ತಾಯಿಯಂತೆ ಮಗಳು ಎನ್ನುವಂತೆ, ನಾವು ಇಂದು ಕಲಿಸಿ ಕೊಡುವ ಸಂಸ್ಕೃತಿ ಮತ್ತು ಸಂಪ್ರದಾಯಗಳೇ ಮುಂದೆ ತಲಾತಲಾಂತರದವರೆಗೂ ನಮ್ಮ ವಂಶವನ್ನು ಕಾಪಾಡುತ್ತದೆ. ಹಾಗಾಗಿ ವಿಭಕ್ತ ಕುಟುಂಬಳು ಒಂದಾಗಿ ಹಿಂದಿನಂತೆಯೇ, ಅವಿಭಕ್ತ ಕುಟುಂಬಗಳಾಗಿ ಮಾರ್ಪಾಡಾದಲ್ಲಿ ಸಮಾಜಕ್ಕೂ ಮತ್ತು ದೇಶಕ್ಕೂ ಒಳ್ಳೆಯದು. ಅನಿವಾರ್ಯ ಪರಿಸ್ಥಿತಿಯಲ್ಲಿ, ಎಲ್ಲೇ ಇರಲೀ, ಹೇಗೇ ಇರಲೀ, ಹೆತ್ತ ತಂದೆ ತಾಯಿ, ಕಟ್ಟಿ ಕೊಂಡ ಮಡದಿ ಮತ್ತು ಜನ್ಮ ಕೊಟ್ಟ ಮಕ್ಕಳೊಂದಿಗೆ ವಿಭಕ್ತ ಕುಟುಂಬಗಳಾಗಿಯಾದರೂ ಮೂಲ ವಂಶವೃಕ್ಷವನ್ನು ಮರೆಯದೇ ಸುಖಃ ಸಂಸಾರ ನಡೆಸೋಣ.

ಎಲ್ಲರಿಗೂ ವಿಶ್ವ ಕುಟುಂಬ ದಿನಾಚರಣೆಯ ಶುಭಾಶಯಗಳು

ಏನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s